ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಟೋಕಿಯೋ ಒಲಿಂಪಿಕ್ಸ್ ಗೆ ತೆರಳಲಿರುವ ಭಾರತೀಯ ಅಥ್ಲೀಟ್ ಗಳ ಮೊದಲ ತಂಡಕ್ಕೆ ದೆಹಲಿಯಲ್ಲಿ ಬೀಳ್ಕೊಡುಗೆ ನೀಡಲಿರುವ ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಶಿತ್ ಪ್ರಾಮಾಣಿಕ್
Posted On:
17 JUL 2021 3:15PM by PIB Bengaluru
ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೆ ಒಂದು ವಾರವಷ್ಟೇ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಭಾರತದಿಂದ ಟೋಕಿಯೋಗೆ ತೆರಳಲಿರುವ ಅಥ್ಲೀಟ್ ಗಳ ಮೊದಲ ತಂಡಕ್ಕೆ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಂದು ಅಧಿಕೃತ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ.
54 ಅಥ್ಲೀಟ್ ಗಳು, ಪೂರಕ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಪ್ರತಿನಿಧಿಗಳನ್ನೊಳಗೊಂಡ 88 ಮಂದಿಯ ತಂಡಕ್ಕೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಶಿತ್ ಪ್ರಾಮಾಣಿಕ್ ಅವರು ಅಧಿಕೃತ ಬೀಳ್ಕೊಡುಗೆ ನೀಡಲಿದ್ದಾರೆ. ಅವರ ಜೊತೆ ಐಒಎ ಅಧ್ಯಕ್ಷರಾದ ಶ್ರೀ ನರಿಂದರ್ ಧೃವ್ ಬಾತ್ರಾ, ಐಒಎ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೀವ್ ಮೆಹ್ತಾ, ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕರಾದ ಶ್ರೀ ಸಂದೀಪ್ ಪ್ರಧಾನ್ ಅವರುಗಳು ಸಮಾರಂಭದಲ್ಲಿ ಭಾಗವಹಿಸುವರು.
ಆರ್ಚರಿ, ಹಾಕಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಜೂಡೊ, ಜಿಮ್ನಾಸ್ಟಿಕ್, ವೇಟ್ ಲಿಫ್ಟಿಂಗ್ ಸೇರಿ ಎಂಟು ಬಗೆಯ ಕ್ರೀಡೆಗಳ ಅಥ್ಲೀಟ್ ಗಳು ಹಾಗೂ ಅವರ ಪೂರಕ ಸಿಬ್ಬಂದಿ ಮತ್ತು ಹಾಕಿ ಆಟಗಾರರ ದೊಡ್ಡ ತಂಡ ನವದೆಹಲಿಯಿಂದ ಇಂದು ಟೋಕಿಯೋಗೆ ಪ್ರಯಾಣ ಬೆಳೆಸಲಿದೆ.
ಅಥ್ಲೀಟ್ ಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ಸಮಾರಂಭದಲ್ಲಿ ಭಾಗವಹಿಸುವ ಎಲ್ಲ ಗಣ್ಯರು, ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡಿರುತ್ತಾರೆ. ಯಾರಿಗೆ ನೆಗೆಟಿವ್ ವರದಿ ಬಂದಿದೆಯೋ ಅವರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಸಮಾರಂಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲಾಗುವುದು.
ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಗೆ 127 ಭಾರತೀಯ ಅಥ್ಲೀಟ್ ಗಳು ಆಯ್ಕೆಯಾಗಿದ್ದು, ಇದು ದಾಖಲೆಯಾಗಿದೆ. ಕಳೆದ ರಿಯೊ ಒಲಿಂಪಿಕ್ಸ್ ಗೆ ಒಟ್ಟಾರೆ 117 ಮಂದಿ ಅರ್ಹತೆ ಪಡೆದಿದ್ದರು.
***
(Release ID: 1736429)
Visitor Counter : 264