ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ: ಮಿಥ್ಯೆಗಳು ಮತ್ತು ವಾಸ್ತವಾಂಶಗಳು


ಕೋವಿಡ್-19 ಲಸಿಕೆ ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನ ಉಂಟುಮಾಡುತ್ತದೆ ಎಮಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಕಂಡುಬಂದಿಲ್ಲ

ಎಲ್ಲಾ ಹಾಲುಣಿಸುವ ಮಹಿಳೆಯರಿಗೆ ಲಸಿಕೆಯನ್ನು ಶಿಫಾರಸು ಮಾಡಲಾಗಿದೆ

Posted On: 30 JUN 2021 3:27PM by PIB Bengaluru

ಸಂತಾನೋತ್ಪತ್ತಿ ವಯಸ್ಸಿನ ಜನರಲ್ಲಿ ಕೋವಿಡ್-19 ಲಸಿಕೆಯು ಬಂಜೆತನಕ್ಕೆ ಕಾರಣವಾಗುವ ಹಾಗೂ ಹಾಲುಣಿಸುವ ಮಹಿಳೆಯರಿಗೆ ಕೋವಿಡ್-19 ಲಸಿಕೆ ಸುರಕ್ಷಿತವೇ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸುವ ಹಲವು ಮಾಧ್ಯಮ ವರದಿಗಳು ಹರಿದಾಡುತ್ತಿವೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (ಎಂ.ಒ.ಎಚ್‌.ಎಫ್‌.ಡಬ್ಲ್ಯೂ) ತನ್ನ ವೆಬ್‌ ತಾಣದಲ್ಲಿ ಪ್ರಕಟಿಸಲಾದ ʻಎಫ್‌ಎಕ್ಯೂʼನಲ್ಲಿ (https://www.mohfw.gov.in/pdf/FAQsforHCWs&FLWs.pdf) ಈ ಬಗ್ಗೆ ಸ್ಪಷ್ಟನೆ ನೀಡಿದೆ. ದೇಶದಲ್ಲಿ ಲಭ್ಯವಿರುವ ಯಾವುದೇ ಲಸಿಕೆಗಳು ಪುರುಷರು ಅಥವಾ ಮಹಿಳೆಯರ ಸಂತಾನೋತ್ಪತ್ತಿ ಶಕ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಎಲ್ಲಾ ಲಸಿಕೆಗಳು ಮತ್ತು ಅವುಗಳ ತಯಾರಿಕೆಗೆ ಬಳಸಲಾದ ಪದಾರ್ಥಗಳನ್ನು ಅಂತಹ ಯಾವುದೇ ಅಡ್ಡ ಪರಿಣಾಮಗಳಿವೆಯೇ ಎಂದು ನಿರ್ಣಯಿಸಲು ಮೊದಲು ಪ್ರಾಣಿಗಳ ಮೇಲೆ ಮತ್ತು ನಂತರ ಮಾನವರ ಮೇಲೆ ಪ್ರಯೋಗಿಸಿ ಪರೀಕ್ಷಿಸಲಾಗುತ್ತದೆ. ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಖಚಿತವಾದ ನಂತರವೇ ಅವುಗಳನ್ನು ಬಳಸಲು ಅನುಮತಿ ನೀಡಲಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಇದಲ್ಲದೆ, ಕೋವಿಡ್-19 ಲಸಿಕೆಯಿಂದ ಬಂಜೆತನ ಉಂಟಾಗುತ್ತದೆ ಎಂಬ ವದಂತಿಯನ್ನು ನಿಯಂತ್ರಿಸುವ ಸಲುವಾಗಿ, ಕೋವಿಡ್-19 ಲಸಿಕೆಯು ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು ಎಂದು ಸೂಚಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಭಾರತ ಸರಕಾರ ಸ್ಪಷ್ಟಪಡಿಸಿದೆ. (https://twitter.com/PIBFactCheck/status/1396805590442119175) ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಕಂಡುಬಂದಿವೆ.

ʻರೋಗನಿರೋಧಕತೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡʼದ (ಎನ್‌ಟಿಎಜಿಐ) ಕೋವಿಡ್-19 ಕಾರ್ಯಪಡೆಯ ಅಧ್ಯಕ್ಷ ಡಾ. ಎನ್.ಕೆ. ಅರೋರಾ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ, ಈ ಕುರಿತ ಆತಂಕ ಮತ್ತು ಆರೋಪಗಳಿಗೆ ಉತ್ತರ ನೀಡಿದರು. ಪೋಲಿಯೋ ಲಸಿಕೆಯನ್ನು ನೀಡುವಾಗಲೂ ಭಾರತ ಮತ್ತು ವಿದೇಶದಲ್ಲಿ ಇಂತಹ ತಪ್ಪು ಮಾಹಿತಿಯನ್ನು ಸೃಷ್ಟಿಸಲಾಗಿತ್ತು. ಲಸಿಕೆಯನ್ನು ಪಡೆಯುವ ಮಕ್ಕಳು ಭವಿಷ್ಯದಲ್ಲಿ ಬಂಜೆತನವನ್ನು ಎದುರಿಸಬಹುದು ಎಂದು ಅಪಪ್ರಚಾರ ಮಾಡಲಾಗಿತ್ತು ಎಂದು ಅವರು ಹೇಳಿದರು. ಎಲ್ಲಾ ಲಸಿಕೆಗಳು ತೀವ್ರ ವೈಜ್ಞಾನಿಕ ಸಂಶೋಧನೆಗಳ ಮೂಲಕ ಅಭಿವೃದ್ಧಿಪಡಿಸಿ ದಂಥವಾಗಿವೆ. ಯಾವುದೇ ಲಸಿಕೆಗಳು ಈ ರೀತಿಯ ಅಡ್ಡ ಪರಿಣಾಮವನ್ನು ಹೊಂದಿಲ್ಲ ಎಂದು ಅವರು ಭರವಸೆ ನೀಡಿದರು.

(https://pib.gov.in/PressReleseDetailm.aspx?PRID=1730219 )

ಕೋವಿಡ್-19 ರ ಲಸಿಕೆ ನೀಡಿಕೆಯ ರಾಷ್ಟ್ರೀಯ ತಜ್ಞರ ತಂಡ (ಎನ್‌ಇಜಿವಿಎಸಿ) ಸಹ ಕೋವಿಡ್-19 ಲಸಿಕೆಯನ್ನು ಎಲ್ಲಾ ಹಾಲುಣಿಸುವ ಮಹಿಳೆಯರಿಗೆ ಶಿಫಾರಸು ಮಾಡಿದೆ. ಲಸಿಕೆಯ ಮೊದಲು ಅಥವಾ ನಂತರ ಸ್ತನ್ಯಪಾನವನ್ನು ನಿಲ್ಲಿಸುವ ಅಗತ್ಯವಿಲ್ಲ ಎಂದು ಅದು ಸುರಕ್ಷಿತವಾಗಿದೆ ಎಂದು ತಂಡ ಹೇಳಿದೆ.

(https://pib.gov.in/PressReleasePage.aspx?PRID=1719925)

***(Release ID: 1731654) Visitor Counter : 152