ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಶಾಲೆ ಮುಚ್ಚಿದ ಮತ್ತು ಶಾಲೆ ಹೊರತಾದ ಅವಧಿಯಲ್ಲಿ ಮಕ್ಕಳ ಮನೆ-ಆಧರಿತ ಕಲಿಕೆಯಲ್ಲಿ ಪೋಷಕರ ಪಾಲ್ಗೊಳ್ಳುವಿಕೆಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಶಿಕ್ಷಣ ಸಚಿವಾಲಯ


ಸುರಕ್ಷಿತ, ಸಕ್ರಿಯಾತ್ಮಕ ಮತ್ತು ಸಕಾರಾತ್ಮಕ ಕಲಿಕೆಯ ವಾತಾವರಣವನ್ನು ಸೃಷ್ಟಿಸುವ ಅಗತ್ಯದ ಬಗ್ಗೆ ಮಾರ್ಗಸೂಚಿ ಒತ್ತು ನೀಡುತ್ತದೆ

Posted On: 19 JUN 2021 2:10PM by PIB Bengaluru

ಶಾಲೆ ಮುಚ್ಚಿದ ಮತ್ತು ಶಾಲೆ ಹೊರತಾದ ಅವಧಿಯಲ್ಲಿ ಮಕ್ಕಳ ಮನೆ-ಆಧಾರಿತ ಕಲಿಕೆಯಲ್ಲಿ ಪೋಷಕರ ಪಾಲ್ಗೊಳ್ಳುವಿಕೆಗಾಗಿ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

 


ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಅವರು ಬದಲಾದ ಸಮಯದಲ್ಲಿ ಮಕ್ಕಳ ಕಲಿಕೆಯಲ್ಲಿ ಪೋಷಕದ ಪಾತ್ರದ ಪ್ರಾಮುಖ್ಯದ ಬಗ್ಗೆ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ. ಈಗಿನ ಸಾಂಕ್ರಾಮಿಕದ 'ಹೊಸ ಸಾಮಾನ್ಯ' ಸಮಯದಲ್ಲಿ  ಮಕ್ಕಳ ಬೆಳವಣಿಗೆ ಮತ್ತು ಕಲಿಕೆಯಲ್ಲಿ ಪೋಷಕರು ವಹಿಸುವ ಪ್ರಧಾನ ಪಾತ್ರವನ್ನು ಹೊಸ ಮಾರ್ಗಸೂಚಿಗಳು ಪರಿಗಣಿಸಿವೆ. ಶಾಲೆ ಮುಚ್ಚಿದ ಸಮಯದಲ್ಲಿ ಮಕ್ಕಳನ್ನು ಬೆಂಬಲಿಸುವ ಸಲುವಾಗಿ ಪೋಷಕರು ಅವರ ಸಾಕ್ಷರತಾ ಮಟ್ಟದ ಹೊರತಾಗಿ ʼಹೇಗೆʼ, ʼಏಕೆʼ ಮತ್ತು ʼಹೇಗೆʼ ಪಾಲ್ಗೊಳ್ಳಬೇಕು ಹಾಗೂ ತೊಡಗಿಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಒದಗಿಸುವ ಗುರಿಯನ್ನು ಈ ಮಾರ್ಗಸೂಚಿಗಳು ಹೊಂದಿವೆ ಎಂದಿದ್ದಾರೆ. ಮನೆಯೇ ಮಕ್ಕಳ ಮೊದಲ ಪಾಠಶಾಲೆ, ಪೋಷಕರೇ ಮೊದಲ ಗುರುಗಳು ಎಂದು ಸಚಿವರು ಹೇಳಿದ್ದಾರೆ.

ಪೋಷಕರು ಮಕ್ಕಳಿಗಾಗಿ ಸುರಕ್ಷಿತ ಮತ್ತು ಸಕ್ರಿಯಾತ್ಮಕ ಪರಿಸರ ಹಾಗೂ ಸಕಾರಾತ್ಮಕ ಕಲಿಕೆಯ ವಾತಾವರಣವನ್ನು ಸೃಷ್ಟಿಸುವ ಅಗತ್ಯವನ್ನು ಮನೆ ಆಧಾರಿತ ಕಲಿಕೆಯ ಮಾರ್ಗಸೂಚಿಗಳು ಒತ್ತಿಹೇಳುತ್ತವೆ. ಜೊತೆಗೆ ಮಗುವಿನಿಂದ ವಾಸ್ತವಿಕ ನಿರೀಕ್ಷೆಗಳನ್ನು ಹೊಂದುವಂತೆ, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ, ಆರೋಗ್ಯಯುತ ಆಹಾರ ಸೇವನೆ ಕಾಯ್ದುಕೊಳ್ಳುವಂತೆ ಹಾಗೂ ಇದೇ ವೇಳೆ, ಮಕ್ಕಳೊಂದಿಗೆ ವಿನೋದದಲ್ಲಿ ತೊಡಗುವಂತೆ ಪೋಷಕರಿಗೆ ಈ ಮಾರ್ಗಸೂಚಿಗಳು ಹೇಳುತ್ತವೆ. ಕೇವಲ ಪೋಷಕರಿಗೆ ಮಾತ್ರವಲ್ಲದೆ ಆರೈಕೆದಾರರು, ಇತರ ಕುಟುಂಬ ಸದಸ್ಯರು, ಅಜ್ಜಿಯರು, ಸಮುದಾಯದ ಸದಸ್ಯರು, ಮಕ್ಕಳ ಕಲ್ಯಾಣವನ್ನು ಉತ್ತೇಜಿಸುವಲ್ಲಿ ತೊಡಗಿರುವ ಹಿರಿಯ ಸಹೋದರ-ಸಹೋದರಿಯರನ್ನೂ ಗುರಿಯಾಗಿಸಿಕೊಂಡು ಮಾರ್ಗಸೂಚಿಗಳನ್ನು ರಚಿಸಲಾಗಿದೆ.

ಮಕ್ಕಳ ಮನೆ ಆಧಾರಿತ ಕಲಿಕೆಗೆ ಅನುಕೂಲ ಮಾಡಿಕೊಡುವ ಅನೇಕ ಸರಳ ಸಲಹೆಗಳನ್ನು ಈ ಮಾರ್ಗಸೂಚಿಗಳು ಪೋಷಕರು ಮತ್ತು ಇತರರಿಗೆ ಒದಗಿಸುತ್ತವೆ. ʻನೂತನ ಶಿಕ್ಷಣ ನೀತಿ-2020’(ಎನ್‌ಇಪಿ 2020) ಪ್ರಕಾರ ಶಾಲಾ ಶಿಕ್ಷಣದ ವಿವಿಧ ಹಂತಗಳಿಗೆ ಅನುಗುಣವಾಗಿ ಈ ಸಲಹೆಗಳನ್ನು ನೀಡಲಾಗಿದೆ. ವಯಸ್ಸಿಗೆ ಸೂಕ್ತವಾದ ಕಲಾ ಚಟುವಟಿಕೆಗಳನ್ನು 5+3+3+4 ವ್ಯವಸ್ಥೆಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ, ಉದಾಹರಣೆಗೆ: ತಳಹದಿ ಹಂತ (3-8 ವರ್ಷ ವಯಸ್ಸು); ಪೂರ್ವಸಿದ್ಧತಾ ಹಂತ (8-11 ವರ್ಷ ವಯಸ್ಸು); ಮಧ್ಯಮ ಹಂತ (11-14 ವರ್ಷ ವಯಸ್ಸು); ಮತ್ತು ದ್ವಿತೀಯ ಹಂತ: ಹದಿಹರೆಯದವರಿಂದ ವಯಸ್ಕರ ವಯಸ್ಸಿನವರೆಗೆ (14-18 ವರ್ಷ ವಯಸ್ಸು).  ಚಟುವಟಿಕೆಗಳು ಬಹಳ ಸರಳ ಮತ್ತು ಸೂಚಕವಾಗಿವೆ, ಇವುಗಳನ್ನು ಸ್ಥಳೀಯ ಅಗತ್ಯಗಳು ಮತ್ತು ಸಂದರ್ಭಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಬಹುದು ಮತ್ತು ಹೊಂದಿಸಿಕೊಳ್ಳಬಹುದು. ಒತ್ತಡ ಅಥವಾ ಆಘಾತದಲ್ಲಿರುವ ಮಕ್ಕಳಿಗೆ ಕಲೆ ಒಂದು ಚಿಕಿತ್ಸಾ ಸ್ವರೂಪ ಆಗಬೇಕೆಂದು ಮಾರ್ಗಸೂಚಿಗಳು ಒತ್ತಿ ಹೇಳುತ್ತವೆ. 

ಮಕ್ಕಳ ಕಲಿಕೆಯ ಅಂತರಗಳ ಮೇಲೆ ನಿಗಾ ಇಡುವ ಮೂಲಕ ಮತ್ತು ಕಲಿಕಾ ಅಂತರವನ್ನು ಕಡಿಮೆ ಮಾಡುವ ಮೂಲಕ ಅವರ ಒಟ್ಟಾರೆ ಕಲಿಕೆಯನ್ನು ಸುಧಾರಿಸುವ ಬಗ್ಗೆ ಮಾರ್ಗಸೂಚಿಗಳು ಮಹತ್ವ ನೀಡುತ್ತವೆ. ಮಕ್ಕಳು ತಮ್ಮ ಕಲಿಕೆಯಲ್ಲಿ ಸಾಧಿಸುತ್ತಿರುವ ಪ್ರಗತಿಯನ್ನು ದಾಖಲಿಸುವಲ್ಲಿ ಮತ್ತು ಪ್ರತಿಬಿಂಬಿಸುವಲ್ಲಿ ಶಿಕ್ಷಕರೊಂದಿಗೆ ಪೋಷಕರ ಸಹಯೋಗವು ಶಿಕ್ಷಕರು ಹಾಗೂ ಪೋಷಕರಿಬ್ಬರಿಗೂ ಮುಖ್ಯವಾಗಿದೆ.

ಹೋಂವರ್ಕ್ ಮತ್ತು ಇತರ ಪಠ್ಯಕ್ರಮ ಸಂಬಂಧಿತ ಚಟುವಟಿಕೆಗಳು, ನಿರ್ಧಾರಗಳು ಮತ್ತು ಯೋಜನೆಗಳಿಗೆ ಸಂಬಂಧಿಸಿದಂತೆ ಮನೆಯಲ್ಲಿ ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡಬಹುದೆಂದು ಶಾಲೆಗಳು ಪೋಷಕರಿಗೆ ಮಾಹಿತಿ ಮತ್ತು ಉಪಾಯಗಳನ್ನು ಒದಗಿಸಬೇಕು. ಆ ಮೂಲಕ ಶಾಲಾ ನಿರ್ಧಾರಗಳಲ್ಲಿ ಪೋಷಕರನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಮಾರ್ಗಸೂಚಿಗಳಲ್ಲಿ ಶಾಲೆಗಳಿಗೆ ಸಲಹೆ ನೀಡಲಾಗಿದೆ. ಇದಕ್ಕಾಗಿ ಸುದ್ದಿಪತ್ರಗಳು (ನ್ಯೂಸ್‌ಲೆಟರ್‌), ಇ-ಮೇಲ್‌ಗಳು, ಮೆಮೊಗಳು ಮುಂತಾದ ಸಂಪನ್ಮೂಲಗಳನ್ನು ಪೋಷಕರಿಗೆ ಒದಗಿಸಬಹುದು.

ವಿಶೇಷ ಅಗತ್ಯಗಳನ್ನು ಹೊಂದಿರುವ ಮಕ್ಕಳಿಗೆ ಸಂಪನ್ಮೂಲಗಳು ಲಭ್ಯವಾಗುವಂತೆ ಮಾಡಲಾಗಿದೆ. ಪೋಷಕರು ಇವುಗಳನ್ನು ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಮಾರ್ಗದರ್ಶನಕ್ಕಾಗಿ ಅವರು ಶಿಕ್ಷಕರನ್ನು ಸಂಪರ್ಕಿಸಬಹುದು. ಈ ಬಗ್ಗೆ ಮಾಹಿತಿ ಒದಗಿಸುವಂತಹ ಇತರ ಸಂಘ ಸಂಸ್ಥೆಗಳೂ ಇವೆ. ಎಸ್.ಎಂ.ಸಿ.ಗಳು/ಗ್ರಾಮ ಪಂಚಾಯತ್ ಅಥವಾ ಶಾಲಾ ಆಡಳಿತಗಾರರು ಮುಂತಾದವರಿಂದ ಅಂತಹ ಮಾರ್ಗಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಕಡಿಮೆ ಸಾಕ್ಷರತೆ ಹೊಂದಿರುವ/ಸಾಕ್ಷರತೆಯೇ ಇಲ್ಲದ ಪೋಷಕರಿಗೆ ನೆರವಾಗಲು ಮಾರ್ಗಸೂಚಿಗಳಲ್ಲಿ ಪ್ರತ್ಯೇಕ ಅಧ್ಯಾಯವನ್ನು ಸೇರಿಸಲಾಗಿದೆ. ಶಾಲೆಗಳು, ಶಿಕ್ಷಕರು ಮತ್ತು ಸ್ವಯಂಸೇವಕರು ಕಡಿಮೆ ಸಾಕ್ಷರತೆಯ ಪೋಷಕರಿಗೆ ನೆರವು ನೀಡಲು ಅಲ್ಲಿ ಸೂಚಿಸಲಾದ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಮಾರ್ಗಸೂಚಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

****(Release ID: 1728579) Visitor Counter : 478