ಗೃಹ ವ್ಯವಹಾರಗಳ ಸಚಿವಾಲಯ

ದೇಶದಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಂಡ ಕ್ರಮಗಳು ಮತ್ತು ಸಿದ್ಧತಾ ಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ಉನ್ನತ ಮಟ್ಟದ ಸಭೆ.  ಐ.ಎಂ.ಡಿ, ಜಲಶಕ್ತಿ ಸಚಿವಾಲಯ, ಸಿ.ಡಬ್ಲ್ಯು.ಸಿ. ಮತ್ತು ಎನ್.ಡಿ.ಆರ್.ಎಫ್. ನಡುವೆ ಸಮನ್ವಯದ ಹೊಸ ವ್ಯವಸ್ಥೆ ರೂಪಿಸುವ ಕುರಿತಂತೆ ಸಭೆಯಲ್ಲಿ ಹಲವಾರು ನಿರ್ಧಾರಗಳನ್ನು ಕೈಗೊಳ್ಳಲಾಯಿತು

ದೇಶದಲ್ಲಿ ವರ್ಷಂಪ್ರತಿ ಸಂಭವಿಸುವ ಪ್ರವಾಹಗಳ ಸಮಸ್ಯೆ ನಿಭಾಯಿಸಲು ಧೀರ್ಘಾವಧಿಯ ಸಮಗ್ರ ನೀತಿ ರಚನೆಯ ಬಗ್ಗೆ ಶ್ರೀ ಅಮಿತ್ ಶಾ ಅವರಿಂದ ಪರಾಮರ್ಶೆ

ಪ್ರವಾಹಗಳು ಮತ್ತು ಪ್ರಮುಖ ಜಲಾನಯನ ಪ್ರದೇಶಗಳಲ್ಲಿ ಹಾಗು ದೇಶದ ಪ್ರಾದೇಶಿಕ ವಲಯಗಳಲ್ಲಿ ನೀರಿನ ಮಟ್ಟ ಏರಿಕೆ ಬಗ್ಗೆ ಮುನ್ಸೂಚನೆಗಾಗಿ ಖಾಯಂ ವ್ಯವಸ್ಥೆ ನಿರ್ಮಾಣ ಮಾಡಲು ಉತ್ತಮ ಸಂಯೋಜಿತ ರೀತಿಯಲ್ಲಿ ಕೆಲಸ ಮಾಡುವಂತೆ ಕೇಂದ್ರೀಯ ಮತ್ತು ರಾಜ್ಯ ಏಜೆನ್ಸಿಗಳಿಗೆ ಕೇಂದ್ರ ಗೃಹ ಸಚಿವರ ನಿರ್ದೇಶನ

ಅಣೆಕಟ್ಟುಗಳ ಸಾಮರ್ಥ್ಯ ಹೆಚ್ಚಳಕ್ಕಾಗಿ ಮತ್ತು ಪ್ರವಾಹ ನಿಯಂತ್ರಣಕ್ಕಾಗಿ ಸಹಾಯ ಮಾಡಲು ಬೃಹತ್ ಅಣೆಕಟ್ಟೆಗಳಿಂದ ಹೂಳೆತ್ತಲು ವ್ಯವಸ್ಥೆ ರೂಪಿಸುವಂತೆ ಜಲ ಶಕ್ತಿ ಸಚಿವಾಲಯಕ್ಕೆ ಶ್ರೀ ಅಮಿತ್ ಶಾ ಸಲಹೆ

ಹೆಚ್ಚು ನಿಖರ ಹವಾಮಾನ ಮತ್ತು ಪ್ರವಾಹ ಮುನ್ಸೂಚನೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಗ್ರಹ ದತ್ತಾಂಶ ಬಳಸಲು ವಿಶೇಷ ಸಂಸ್ಥೆಗಳಾದ ಭಾರತೀಯ ಹವಾಮಾನ ಇಲಾಖೆ ಮತ್ತು ಕೇಂದ್ರೀಯ ಜಲ ಆಯೋಗಗಳಿಗೆ ಗೃಹ ಸಚಿವರ ಸಲಹೆ

ಮಿಂಚು ಹೊಡೆಯುವ ಬಗ್ಗೆ ಐ.ಎಂ.ಡಿ. ಮುನ್ನೆಚ್ಚರಿಕೆಗಳನ್ನು ಸಾರ್ವಜನಿಕರಿಗೆ ತ್ವರಿತವಾಗಿ ವಿವಿಧ ಮಾಧ್ಯಮಗಳಲ್ಲಿ ಪ್ರಸಾರ ಮಾಡಲು ತಕ್ಷಣವೇ ಎಸ್.ಒ.ಪಿ.ಗಳನ್ನು ರೂಪಿಸಲು ಕೇಂದ್ರ ಗೃಹ ಸಚಿವರಿಂದ  ನಿರ್ದೇಶನ

“ಉಮಾಂಗ್’ ’ರೈನ್ ಅಲಾರಾಂ” ಮತ್ತು “ದಾಮಿನಿ” ಆಪ್ ಗಳಂತಹ ಹವಾಮಾನ ಮುನ್ಸೂಚನೆ ನೀಡುವ ವಿವಿಧ ಮೊಬೈಲ್ ಆಪ್ ಗಳಿಗೆ ಗರಿಷ್ಟ ಪ್ರಚಾರ ನೀಡಬೇಕು, ಇ

Posted On: 15 JUN 2021 8:14PM by PIB Bengaluru

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರಿಂದು ದೇಶದಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಸಿದ್ಧತಾ ಸ್ಥಿತಿಯ ಬಗ್ಗೆ ಉನ್ನತ ಮಟ್ಟದ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಐ.ಎಂ.ಡಿ, ಜಲಶಕ್ತಿ ಸಚಿವಾಲಯ, ಸಿ.ಡಬ್ಲ್ಯು.ಸಿ. ಮತ್ತು ಎನ್.ಡಿ.ಆರ್.ಎಫ್. ನಡುವೆ ಸಮನ್ವಯದ ಹೊಸ ವ್ಯವಸ್ಥೆ ರೂಪಿಸುವ ಕುರಿತಂತೆ ಹಲವಾರು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಅವರು ದೇಶದ ವಾರ್ಷಿಕ ಪ್ರವಾಹ ಸಮಸ್ಯೆಗಳನ್ನು ತಗ್ಗಿಸಲು ಸಮಗ್ರ ಮತ್ತು ವ್ಯಾಪಕವಾದ ನೀತಿಯನ್ನು ರೂಪಿಸುವ ಧೀರ್ಘಾವಧಿಯ ಕ್ರಮಗಳ ಕುರಿತು ಪರಾಮರ್ಶೆ ನಡೆಸಿದರು.

ಕೇಂದ್ರ ಗೃಹ ಸಚಿವರು ಪ್ರವಾಹಗಳು ಮತ್ತು ದೇಶದ ಪ್ರಮುಖ ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ಏರುವ ಬಗ್ಗೆ ಮುನ್ಸೂಚನೆ ನೀಡುವುದಕ್ಕಾಗಿ ಕೇಂದ್ರೀಯ ಮತ್ತು ರಾಜ್ಯ ಏಜೆನ್ಸಿಗಳ ನಡುವೆ ಖಾಯಂ ವ್ಯವಸ್ಥೆಯನ್ನು ರೂಪಿಸುವಂತೆ ಮತ್ತು ಸಮನ್ವಯಕ್ಕಾಗಿರುವ ವ್ಯವಸ್ಥೆಯನ್ನು ಬಲಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ಮತ್ತು ಪ್ರವಾಹ ನಿಯಂತ್ರಣಕ್ಕೆ ನೆರವಾಗುವುದಕ್ಕಾಗಿ ಬೃಹತ್ ಅಣೆಕಟ್ಟುಗಳಲ್ಲಿಯ ಹೂಳನ್ನು ತೆಗೆಯಲು ವ್ಯವಸ್ಥೆಯೊಂದನ್ನು ರೂಪಿಸುವಂತೆಯೂ ಶ್ರೀ ಅಮಿತ್ ಶಾ ಅವರು  ಜಲ ಶಕ್ತಿ ಸಚಿವಾಲಯಕ್ಕೆ ಸಲಹೆ ಮಾಡಿದರು.

ಭಾರತೀಯ ಹವಾಮಾನ ಇಲಾಖೆ (ಐ.ಎಂ.ಡಿ.) ಮತ್ತು ಕೇಂದ್ರೀಯ ಜಲ ಆಯೋಗಗಳಂತಹ ವಿಶೇಷ ಸಂಸ್ಥೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವಂತೆ ಸಲಹೆ ಮಾಡಿದ ಕೇಂದ್ರ ಗೃಹ ಸಚಿವರು ಹೆಚ್ಚು ನಿಖರ ಹವಾಮಾನ ಮತ್ತು ಪ್ರವಾಹ ಮುನ್ಸೂಚನೆಗಾಗಿ ಉಪಗ್ರಹ ದತ್ತಾಂಶಗಳನ್ನು ಬಳಸುವಂತೆ ತಿಳಿಸಿದರು. ಮಿಂಚು ಹೊಡೆಯುವ ಬಗ್ಗೆ ಸಾರ್ವಜನಿಕರಿಗೆ ಐ.ಎಂ.ಡಿ.ಎಚ್ಚರಿಕೆಗಳನ್ನು ತಕ್ಷಣವೇ ಟಿ.ವಿ., ಎಫ್.ಎಂ. ರೇಡಿಯೋ, ಎಸ್.ಎಂ.ಎಸ್., ಮತ್ತು ಇತರ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲು ಎಸ್.ಒ.ಪಿ.ಗಳನ್ನು ರೂಪಿಸುವಂತೆ ಕೇಂದ್ರ ಗೃಹ ಸಚಿವರು ನಿರ್ದೆಶನಗಳನ್ನು ನೀಡಿದರು. ಹವಾಮಾನ ಮುನ್ಸೂಚನೆ ನೀಡುವ ಐ.ಎಂ.ಡಿ. ಅಭಿವೃದ್ಧಿ ಮಾಡಿದ ಮೊಬೈಲ್ ಆಪ್ ಗಳಾದ “ಉಮಂಗ್’ ’ರೈನ್ ಅಲಾರಾಂ” ಮತ್ತು “ದಾಮಿನಿ” ಗಳಂತಹ ವಿವಿಧ ಆಪ್ ಗಳಿಗೆ ಗರಿಷ್ಠ ಪ್ರಚಾರ ನೀಡಿ, ಅವುಗಳ ಪ್ರಯೋಜನ ಜನರಿಗೆ ದೊರೆಯುವಂತೆ ಮಾಡಬೇಕು ಎಂದೂ  ಅವರು ನಿರ್ದೇಶನ ನೀಡಿದರು.  ದಾಮಿನಿ ಆಪ್ಮಿಂಚು ಸಂಭವಿಸುವ  ಮೂರು ಗಂಟೆಗಳ ಮೊದಲು ಮುನ್ಸೂಚನೆ ನೀಡುತ್ತದೆ, ಇದರಿಂದ ಜೀವ ಹಾನಿ ಮತ್ತು ಆಸ್ತಿ ಹಾನಿಯನ್ನು ಕಡಿಮೆ ಮಾಡಲು ಸಾಧ್ಯವಾಗುತದೆ.

ನಮ್ಮ ನದಿ ವ್ಯವಸ್ಥೆಗಳ ಮೇಲೆ ಹೆಚ್ಚುತ್ತಿರುವ ಒತ್ತಡದ ಬಗ್ಗೆ ಉಪಗ್ರಹದ ಮೂಲಕ ಅಧ್ಯಯನಗಳನ್ನು ನಡೆಸುವಂತೆ ಶ್ರೀ ಅಮಿತ್ ಶಾ ಸಲಹೆ ಮಾಡಿದರು. ನದಿಗಳ ಬಗ್ಗೆ ಸೂಕ್ಷ್ಮಗ್ರಾಹಿಯಾಗಬೇಕಾಗಿರುವ ಬಗ್ಗೆ ಒತ್ತಿ ಹೇಳಿದ ಅವರು ನಾವು ನದಿಗಳ ನೀರಿನ ಹರಿವಿನ ಬಗ್ಗೆಯೂ ಕಾಳಜಿ ವಹಿಸಬೇಕು ಎಂದರು. ಕೇಂದ್ರೀಯ ಜಲ ಆಯೋಗ ಮತ್ತು ಭಾರತೀಯ ಹವಾಮಾನ ಇಲಾಖೆ ಹಾಗು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆಗಳಿಗೆ  ನಿರಂತರವಾಗಿ ನದಿಗಳಲ್ಲಿಯ ಪ್ರವಾಹ ಪರಿಸ್ಥಿತಿ ಮತ್ತು ನೀರಿನ ಮಟ್ಟದ ಮೇಲೆ ನಿಗಾ ಇರಿಸಬೇಕು ಎಂದು ನಿರ್ದೇಶನ ನೀಡಿದರಲ್ಲದೆ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನಿಯಮಿತವಾಗಿ ವರದಿ ಕಳುಹಿಸುವಂತೆಯೂ ಸೂಚಿಸಿದರು. ಅವರು ಪ್ರವಾಹ ಪೀಡಿತ ರಾಜ್ಯಗಳ ಎಸ್.ಡಿ.ಆರ್.ಎಫ್. ಮುಖ್ಯಸ್ಥರ ಜೊತೆ ತಕ್ಷಣವೇ ಸಭೆಗಳನ್ನು ನಡೆಸುವಂತೆ ಎನ್.ಡಿ.ಆರ್.ಎಫ್. ಡಿ.ಜಿ. ಅವರಿಗೆ ಸೂಚಿಸಿದರು.

ಕಳೆದ ವರ್ಷ 2020ರ ಜುಲೈ 3 ರಂದು ನಡೆದ ಪ್ರವಾಹ ಪರಾಮರ್ಶಾ ಸಭೆಯಲ್ಲಿ ಶ್ರೀ ಅಮಿತ್ ಶಾ ಅವರು ನೀಡಿದ ನಿರ್ದೇಶನಗಳ ಅನುಸರಣೆಯ ಅಂಗವಾಗಿ ಕೇಂದ್ರೀಯ ಜಲ ಆಯೋಗ (ಸಿ.ಡಬ್ಕ್ಯು.ಸಿ.)ವು ಐದು ದಿನಗಳ ಮುಂಚಿತವಾಗಿ ದೇಶದಲ್ಲಿರುವ ಎಲ್ಲಾ ಅಣೆಕಟ್ಟೆಗಳ/ಜಲಾಶಯಗಳ  ಒಳಹರಿವಿನ ಮುನ್ಸೂಚನೆಯನ್ನು ನೀಡಲು ಆರಂಭಿಸಿದೆ. ನೀರನ್ನು ಹೊರ ಬಿಡುವುದಕ್ಕೆ ಸಂಬಂಧಿಸಿ   ಸಕಾಲಿಕ ಮತ್ತು ಮುಂಚಿತ ಕ್ರಮಗಳ ಬಗ್ಗೆ ಅಣೆಕಟ್ಟೆ ಅಧಿಕಾರಿಗಳಿಗೆ ಪ್ರಾಯೋಗಿಕ ಮಾರ್ಗದರ್ಶನ ನೀಡಲು ತಜ್ಞರ ಉನ್ನತಾಧಿಕಾರದ ಗುಂಪನ್ನು ರಚಿಸುವಂತೆ ಜಲಶಕ್ತಿ ಸಚಿವಾಲಯ ಮತ್ತು ಸಿ.ಡಬ್ಲ್ಯು.ಸಿ. ಗೆ ಶ್ರೀ ಅಮಿತ್ ಶಾ ನಿರ್ದೇಶನ ನೀಡಿದರು. ಪ್ರವಾಹ ಪರಿಸ್ಥಿತಿಯನ್ನು ಕಡಿಮೆ ಮಾಡಲು ಮತ್ತು ಆಸ್ತಿ ಹಾಗು ಜೀವಹಾನಿಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. 

ಭಾರತೀಯ ಹವಾಮಾನ ಇಲಾಖೆ (ಐ.ಎಂ.ಡಿ.) ಮಹಾ ನಿರ್ದೇಶಕ ಮತ್ತು ಕೇಂದ್ರೀಯ ಜಲ ಆಯೋಗದ (ಸಿ.ಡಬ್ಲ್ಯು.ಸಿ.) ಅಧ್ಯಕ್ಷರು ಪ್ರದರ್ಶಿಕೆಗಳೊಂದಿಗೆ ಕಳೆದ ವರ್ಷ ಪ್ರವಾಹ ಪರಾಮರ್ಶಾ ಸಭೆಯಲ್ಲಿ ಕೇಂದ್ರ ಗೃಹ ಸಚಿವರು ನೀಡಿದ ನಿರ್ದೇಶನಗಳ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು. ಹವಾಮಾನ ಮತ್ತು ಪ್ರವಾಹ ಮುನ್ಸೂಚನಾ ತಂತ್ರಜ್ಞಾನಗಳಲ್ಲಾಗಿರುವ ಸುಧಾರಣೆಗಳ ಬಗ್ಗೆ ಮತ್ತು  ಭಾರತದಲ್ಲಿ ಅಣೆಕಟ್ಟುಗಳ ಏರಿಗಳ ವಕ್ರಾಕೃತಿಗಳನ್ನು ಸಕಾಲಿಕಗೊಳಿಸಲು ಕೈಗೊಂಡ ಉಪಕ್ರಮಗಳ  ಬಗ್ಗೆ ಅವರು ವಿವರಿಸಿದರು.

ಭಾರತದಲ್ಲಿ ವಿಸ್ತಾರವಾದ ಪ್ರದೇಶ ಪ್ರವಾಹ ಪೀಡಿತವಾಗುತ್ತದೆ, ಅದರಲ್ಲಿ ಗಂಗಾ ಮತ್ತು ಬ್ರಹ್ಮಪುತ್ರಾಗಳು ಪ್ರಮುಖ ಪ್ರವಾಹ ಪೀಡಿತ ಜಲಾನಯನ ಪ್ರದೇಶಗಳು ಮತ್ತು ಅಸ್ಸಾಂ, ಬಿಹಾರ, ಉತ್ತರ ಪ್ರದೇಶ ಹಾಗು ಪಶ್ಚಿಮ ಬಂಗಾಳಗಳು ಅತ್ಯಂತ ಹೆಚ್ಚು ಪ್ರವಾಹ ಪೀಡಿತ ರಾಜ್ಯಗಳಾಗಿವೆ.

ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಪ್ರವಾಹದ ವಿಕೋಪವನ್ನು ಎದುರಿಸುವ ಲಕ್ಷಾಂತರ ಜನತೆಯ ನೋವು, ತೊಂದರೆಗಳನ್ನು  ತಗ್ಗಿಸುವಲ್ಲಿ ಬಹಳ ದೂರ ವ್ಯಾಪ್ತಿಯ ಪರಿಣಾಮಗಳನ್ನು ಬೀರಲಿವೆ. ಬೆಳೆ ಹಾನಿ, ಆಸ್ತಿ ಹಾನಿ, ಜೀವನೋಪಾಯ ಮತ್ತು ಅಮೂಲ್ಯ ಜೀವಹಾನಿಗಳನ್ನು ಇದು ತಗ್ಗಿಸಲಿದೆ.

ಸಭೆಯಲ್ಲಿ ಕೇಂದ್ರ ಜಲ ಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೆಖಾವತ್, ಗೃಹ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ನಿತ್ಯಾನಂದ ರೈ, ಗೃಹ ವ್ಯವಹಾರಗಳು, ಜಲ ಸಂಪನ್ಮೂಲ , ಭೂ ವಿಜ್ಞಾನ ಸಚಿವಾಲಯಗಳ/ ಇಲಾಖೆಗಳ ಕಾರ್ಯದರ್ಶಿಗಳು, ಎನ್.ಡಿ.ಎಂ.ಎ. ಸದಸ್ಯ ಕಾರ್ಯದರ್ಶಿ, ಐ.ಎಂ.ಡಿ. ಮತ್ತು ಎನ್.ಡಿ.ಆರ್.ಎಫ್. ಮಹಾನಿರ್ದೇಶಕರು, ಸಿ.ಡಬ್ಲ್ಯು.ಸಿ. ಅಧ್ಯಕ್ಷರು ಮತ್ತು ಸಂಬಂಧಿತ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

***(Release ID: 1727435) Visitor Counter : 75