ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ `ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕ’ (ಪಿಜಿಐ) 2019-20 ಬಿಡುಗಡೆಗೆ ಕೇಂದ್ರ ಶಿಕ್ಷಣ ಸಚಿವರ ಅನುಮೋದನೆ

Posted On: 06 JUN 2021 12:20PM by PIB Bengaluru

ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಅವರು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕ (ಪಿಜಿಐ) 2019-20 ಬಿಡುಗಡೆಗೆ ಇಂದು ಅನುಮೋದನೆ ನೀಡಿದರು. ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಉತ್ತೇಜಿಸಲು ಸರಕಾರವು 70 ಮಾನದಂಡಗಳೊಂದಿಗೆ ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕವನ್ನು ಪರಿಚಯಿಸಿದೆ.
2017-18ರ ಅವಧಿಯನ್ನು ಉಲ್ಲೇಖ ವರ್ಷವಾಗಿ ಪರಿಗಣಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ʻಪಿಜಿಐʼ ಅನ್ನು ಮೊದಲ ಬಾರಿಗೆ 2019ರಲ್ಲಿ ಪ್ರಕಟಿಸಲಾಯಿತು.. 2019-20ನೇ ಸಾಲಿನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪಿಜಿಐ ಈ ಸರಣಿಯಲ್ಲಿ ಮೂರನೇ ಪ್ರಕಟಣೆಯಾಗಿದೆ. ಶಿಕ್ಷಣದಲ್ಲಿ ಅಪೇಕ್ಷಿತ ಫಲಿತಾಂಶಕ್ಕಾಗಿ ಸೂಕ್ತ ಬಹುಹಂತದ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪಿಜಿಐ ಉತ್ತೇಜಿಸುತ್ತದೆ. ಶಾಲಾ ಶಿಕ್ಷಣ ವ್ಯವಸ್ಥೆಯು ಪ್ರತಿ ಹಂತದಲ್ಲೂ ಸದೃಢವಾಗಿರುವಂತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕುಂದುಕೊರತೆಗಳನ್ನು ಗುರುತಿಸಲು ಮತ್ತು ಅದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪಿಜಿಐ ನೆರವಾಗುತ್ತದೆ. 

 


 

ಪಂಜಾಬ್, ಚಂಡೀಗಢ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಕೇರಳ 2019-20ರ ಅತ್ಯುನ್ನತ ಶ್ರೇಣಿಯನ್ನು (ಗ್ರೇಡ್ ಎ++) ಪಡೆದುಕೊಂಡಿವೆ.
ಬಹುತೇಕ ರಾಜ್ಯಗಳು/ಕೇಂದ್ರಾಡಳಿತ ರಾಜ್ಯಗಳು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪಿಜಿಐ 2019-20ರಲ್ಲಿ ತಮ್ಮ ಶ್ರೇಣಿಯ ಸುಧಾರಣೆಗೆ ಸಾಕ್ಷಿಯಾಗಿವೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಮಣಿಪುರ, ಪುದುಚೇರಿ, ಪಂಜಾಬ್ ಮತ್ತು ತಮಿಳುನಾಡು ಒಟ್ಟಾರೆ ಪಿಜಿಐ ಶ್ರೇಣಿಯನ್ನು 10% ಅಂದರೆ 100 ಅಥವಾ ಅದಕ್ಕಿಂತ ಹೆಚ್ಚು ಅಂಶಗಳಷ್ಟು ಸುಧಾರಿಸಿಕೊಂಡಿವೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತು ಪಂಜಾಬ್ ರಾಜ್ಯವು ʻಪಿಜಿಐʼನ ʻಪ್ರವೇಶʼ ವಿಭಾಗದಲ್ಲಿ 10% (8 ಅಂಶಗಳು) ಅಥವಾ ಅದಕ್ಕಿಂತ ಹೆಚ್ಚಿನ ಸುಧಾರಣೆಯನ್ನು ತೋರಿವೆ.
ಹದಿಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ʻಪಿಜಿಐʼನ ʻಮೂಲಸೌಕರ್ಯ ಮತ್ತು ಸೌಲಭ್ಯಗಳುʼ ವಿಭಾಗದಲ್ಲಿ 10% (15 ಅಂಶಗಳು) ಅಥವಾ ಅದಕ್ಕಿಂತ ಹೆಚ್ಚಿನ ಸುಧಾರಣೆಯನ್ನು ತೋರಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಒಡಿಶಾ ಶೇ.20 ಅಥವಾ ಅದಕ್ಕಿಂತ ಹೆಚ್ಚಿನ ಸುಧಾರಣೆಯನ್ನು ಪ್ರದರ್ಶಿಸಿವೆ.
ಅರುಣಾಚಲ ಪ್ರದೇಶ, ಮಣಿಪುರ ಮತ್ತು ಒಡಿಶಾ ರಾಜ್ಯಗಳು ಪಿಜಿಐನ ʻಸಮಾನತೆʼ ವಿಭಾಗದಲ್ಲಿ ಶೇ.10ಕ್ಕಿಂತ ಹೆಚ್ಚಿನ ಸುಧಾರಣೆಯನ್ನು ತೋರಿವೆ.
ಹತ್ತೊಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ರಾಜ್ಯಗಳು ʻಪಿಜಿಐʼನ ʻಆಡಳಿತ ಪ್ರಕ್ರಿಯೆʼ ವಿಭಾಗದಲ್ಲಿ 10% (36 ಅಂಶಗಳು) ಅಥವಾ ಅದಕ್ಕಿಂತ ಹೆಚ್ಚಿನ ಸುಧಾರಣೆಯನ್ನು ತೋರಿಸಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಮಣಿಪುರ, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಗಳು ಕನಿಷ್ಠ 20% (72 ಅಂಶಗಳು ಅಥವಾ ಅದಕ್ಕಿಂತ ಹೆಚ್ಚು) ಸುಧಾರಣೆಯನ್ನು ಪ್ರದರ್ಶಿಸಿವೆ.

ವಿವರಗಳಿಗಾಗಿ, ಕೆಳಗಿನ ಲಿಂಕ್ ನೋಡಿ.

https://www.education.gov.in/hi/statistics-new?shs_term_node_tid_depth=391


***



(Release ID: 1724913) Visitor Counter : 455