ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಸಿಎಸ್ಐಆರ್ ಸೊಸೈಟಿಯ ಸಭೆ


ಈ ದಶಕವಷ್ಟೇ ಅಲ್ಲ, ಮುಂಬರುವ ದಶಕಗಳ ಅಗತ್ಯಗಳಿಗೂ ನಾವು ಸಿದ್ಧರಾಗಿರಬೇಕು: ಪ್ರಧಾನಿ

Posted On: 04 JUN 2021 1:56PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಸೊಸೈಟಿಯ ಸಭೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಕೊರೊನಾ ಸಾಂಕ್ರಾಮಿಕ ಶತಮಾನದ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಿಂದೆ ದೊಡ್ಡ ಮಾನವೀಯ ಬಿಕ್ಕಟ್ಟು ಉಂಟಾದಾಗಲೆಲ್ಲಾ ವಿಜ್ಞಾನವು ಉತ್ತಮ ಭವಿಷ್ಯದ ಹಾದಿಯನ್ನು ತೋರಿಸಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಪರಿಹಾರಗಳು ಮತ್ತು ಸಾಧ್ಯತೆಗಳನ್ನು ಕಂಡುಕೊಳ್ಳುವ ಮೂಲಕ ಹೊಸ ಬಲವನ್ನು ಸೃಷ್ಟಿಸುವುದು ವಿಜ್ಞಾನದ ಮೂಲ ಸ್ವರೂಪವಾಗಿದೆ ಎಂದು ಹೇಳಿದರು.

ಸಾಂಕ್ರಾಮಿಕ ರೋಗದಿಂದ ಮನುಕುಲವನ್ನು ಉಳಿಸಲು ಒಂದು ವರ್ಷದೊಳಗೆ ಲಸಿಕೆಗಳನ್ನು ತಯಾರಿಸಿದ ಪ್ರಮಾಣ ಮತ್ತು ವೇಗದ ಬಗ್ಗೆ ಪ್ರಧಾನಿಯವರು ವಿಜ್ಞಾನಿಗಳನ್ನು ಶ್ಲಾಘಿಸಿದರು. ಇತಿಹಾಸದಲ್ಲಿ ಇಷ್ಟು ದೊಡ್ಡ ಸಂಗತಿ ನಡೆದಿರುವುದು ಇದೇ ಮೊದಲು ಎಂದರು. ಹಿಂದಿನ ಶತಮಾನದಲ್ಲಿ, ಇತರ ದೇಶಗಳಲ್ಲಿ ಆವಿಷ್ಕಾರಗಳು ನಡೆಯುತ್ತಿದ್ದವು ಮತ್ತು ಭಾರತವು ಹಲವು ವರ್ಷಗಳವರೆಗೆ ಕಾಯಬೇಕಾಗಿತ್ತು. ಆದರೆ ಇಂದು ನಮ್ಮ ದೇಶದ ವಿಜ್ಞಾನಿಗಳು ಇತರ ದೇಶಗಳಿಗೆ ಸಮನಾಗಿ ಅದೇ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತವನ್ನು ಕೋವಿಡ್-19 ಲಸಿಕೆಗಳು, ಪರೀಕ್ಷಾ ಕಿಟ್ಗಳು, ಅಗತ್ಯ ಉಪಕರಣಗಳು ಮತ್ತು ಹೊಸ ಪರಿಣಾಮಕಾರಿ ಔಷಧಿಗಳ ಮೇಲೆ ಸ್ವಾವಲಂಬಿಯನ್ನಾಗಿ ಮಾಡಿದ್ದಕ್ಕಾಗಿ ಅವರು ವಿಜ್ಞಾನಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸಮನಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮುನ್ನಡೆಸುವುದು ಉದ್ಯಮ ಮತ್ತು ಮಾರುಕಟ್ಟೆಗೆ ಒಳ್ಳೆಯದು ಎಂದು ಅವರು ಹೇಳಿದರು.

ನಮ್ಮ ದೇಶದಲ್ಲಿ ವಿಜ್ಞಾನ, ಸಮಾಜ ಮತ್ತು ಕೈಗಾರಿಕೆಗಳನ್ನು ಸಮಾನವಾಗಿ ಇರಿಸಲು ಸಾಂಸ್ಥಿಕ ವ್ಯವಸ್ಥೆಯಾಗಿ ಸಿಎಸ್ಐಆರ್ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು. ನಮ್ಮ ಸಂಸ್ಥೆಯು, ಸಂಸ್ಥೆಯನ್ನು ಮುನ್ನಡೆಸಿದ ಶಾಂತಿ ಸ್ವರೂಪ್ ಭಟ್ನಾಗರ್ ಅವರಂತಹ ಅನೇಕ ಪ್ರತಿಭೆಗಳನ್ನು ಮತ್ತು ವಿಜ್ಞಾನಿಗಳನ್ನು ದೇಶಕ್ಕೆ ನೀಡಿದೆ. ಸಿಎಸ್ಐಆರ್ ಪ್ರಬಲವಾದ ಸಂಶೋಧನೆ ಮತ್ತು ಪೇಟೆಂಟ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಎಂದು ಅವರು ಹೇಳಿದರು. ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹಾರ ಕಂಡುಹಿಡಿಯಲು ಸಿಎಸ್ಐಆರ್ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ದೇಶದ ಇಂದಿನ ಗುರಿಗಳು ಮತ್ತು 21 ನೇ ಶತಮಾನದ ನಾಗರಿಕರ ಕನಸುಗಳು ಒಂದು ಅಡಿಪಾಯವನ್ನು ಆಧರಿಸಿವೆ ಎಂದು ಪ್ರಧಾನಿ ಹೇಳಿದರು. ಆದ್ದರಿಂದ ಸಿಎಸ್ಐಆರ್ನಂತಹ ಸಂಸ್ಥೆಗಳ ಗುರಿಗಳೂ ಅಸಾಧಾರಣವಾಗಿವೆ. ಇಂದಿನ ಭಾರತವು ಜೈವಿಕ ತಂತ್ರಜ್ಞಾನದಿಂದ ಬ್ಯಾಟರಿ ತಂತ್ರಜ್ಞಾನಗಳವರೆಗೆ, ಕೃಷಿಯಿಂದ ಖಗೋಳವಿಜ್ಞಾನದವರೆಗೆ, ವಿಪತ್ತು ನಿರ್ವಹಣೆಯಿಂದ ರಕ್ಷಣಾ ತಂತ್ರಜ್ಞಾನದವರೆಗೆ, ಲಸಿಕೆಗಳಿಂದ ವರ್ಚುವಲ್ ರಿಯಾಲಿಟಿಯವರೆಗೆ ಪ್ರತಿಯೊಂದು ವಲಯದಲ್ಲೂ ಸ್ವಾವಲಂಬಿಯಾಗಲು ಬಯಸಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಶುದ್ಧ ಇಂಧನ ಕ್ಷೇತ್ರದಲ್ಲಿ ಇಂದು ಭಾರತವು ಜಗತ್ತಿಗೆ ಮಾರ್ಗದರ್ಶಿಯಾಗಿದೆ ಎಂದು ಅವರು ಹೇಳಿದರು. ಇಂದು, ಸಾಫ್ಟ್ವೇರ್ನಿಂದ ಉಪಗ್ರಹಗಳವರೆಗೆ, ಭಾರತವು ಇತರ ದೇಶಗಳ ಅಭಿವೃದ್ಧಿಯನ್ನು ವೇಗಗೊಳಿಸುತ್ತಿದೆ. ವಿಶ್ವದ ಅಭಿವೃದ್ಧಿಯಲ್ಲಿ ಪ್ರಮುಖ ಎಂಜಿನ್ನ ಪಾತ್ರವನ್ನು ವಹಿಸುತ್ತಿದೆ. ಆದ್ದರಿಂದ, ಭಾರತದ ಗುರಿಗಳು ದಶಕ ಮತ್ತು ಮುಂದಿನ ದಶಕದ ಅಗತ್ಯಗಳಿಗೆ ಅನುಗುಣವಾಗಿರಬೇಕು ಎಂದು ಅವರು ಹೇಳಿದರು.

ವಿಶ್ವದಾದ್ಯಂತ ತಜ್ಞರು ಹವಾಮಾನ ವೈಪರೀತ್ಯದ ಬಗ್ಗೆ ಭಾರಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಎಲ್ಲಾ ವಿಜ್ಞಾನಿಗಳು ಮತ್ತು ಸಂಸ್ಥೆಗಳು ವೈಜ್ಞಾನಿಕ ವಿಧಾನದೊಂದಿಗೆ ಸಿದ್ಧತೆಗಳನ್ನು ಮಾಡಬೇಕು ಎಂದು ಅವರು ಕರೆ ನೀಡಿದರು. ಇಂಗಾಲದ ಸೆರೆಹಿಡಿಯುವಿಕೆಯಿಂದ ಇಂಧನ ಸಂಗ್ರಹಣೆ ಮತ್ತು ಹಸಿರು ಹೈಡ್ರೋಜನ್ ತಂತ್ರಜ್ಞಾನಗಳವರೆಗೆ ಪ್ರತಿಯೊಂದು ವಲಯದಲ್ಲೂ ಮುನ್ನಡೆ ಸಾಧಿಸುವಂತೆ ಅವರು ಕರೆಕೊಟ್ಟರು. ಸಮಾಜ ಮತ್ತು ಉದ್ಯಮವನ್ನು ತನ್ನೊಂದಿಗೆ ಕರೆದೊಯ್ಯಬೇಕೆಂದು ಅವರು ಸಿಎಸ್ಐಆರ್ ಗೆ ಒತ್ತಾಯಿಸಿದರು. ತಮ್ಮ ಸಲಹೆಯಯನ್ನು ಅನುಸರಿಸಿ ಸಿಎಸ್ಐಆರ್ ಜನರಿಂದ ಸಲಹೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಕ್ಕಾಗಿ ಪ್ರಧಾನಿಯವರು ಶ್ಲಾಘಿಸಿದರು. 2016 ರಲ್ಲಿ ಪ್ರಾರಂಭಿಸಲಾದ ಅರೋಮಾ ಮಿಷನ್ನಲ್ಲಿ ಸಿಎಸ್ಐಆರ್ ಪಾತ್ರದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದು ದೇಶದ ಸಾವಿರಾರು ರೈತರು ಪುಷ್ಪೋದ್ಯಮದ ಮೂಲಕ ತಮ್ಮ ಭವಿಷ್ಯವನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಭಾರತವು ಆಮದಿನ ಮೇಲೆ ಅವಲಂಬಿತವಾಗಿರುವ ಇಂಗು ಕೃಷಿಯನ್ನು ದೇಶದಲ್ಲಿ ಮಾಡಲು ಸಹಾಯ ಮಾಡಿದ್ದಕ್ಕಾಗಿ ಅವರು ಸಿಎಸ್ಐಆರ್ ಅನ್ನು ಶ್ಲಾಘಿಸಿದರು.

ನಿರ್ದಿಷ್ಟ ಮಾರ್ಗಸೂಚಿಯೊಂದಿಗೆ ಮುಂದುವರಿಯಬೇಕೆಂದು ಸಿಎಸ್ಐಆರ್ ಗೆ ಪ್ರಧಾನಿ ಕರೆ ಕೊಟ್ಟರು. ಕೊರೊನಾದ ಬಿಕ್ಕಟ್ಟು ಅಭಿವೃದ್ಧಿಯ ವೇಗದ ಮೇಲೆ ಪರಿಣಾಮ ಬೀರಿರಬಹುದು. ಆದರೆ ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡುವ ಬದ್ಧತೆ ಹಾಗೆಯೇ ಇದೆ. ನಮ್ಮ ದೇಶದಲ್ಲಿ ಅವಕಾಶಗಳನ್ನು ಗರಿಷ್ಠವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದ ಅವರು, ನಮ್ಮ ಎಂಎಸ್ಎಂಇ ಮತ್ತು ಸ್ಟಾರ್ಟ್ಅಪ್ಗಳಿಗೆ ಕೃಷಿಯಿಂದ ಶಿಕ್ಷಣ ಕ್ಷೇತ್ರದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅಪಾರ ಸಾಮರ್ಥ್ಯವಿದೆ ಎಂದು ಹೇಳಿದರು. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಧಿಸಿದ ಯಶಸ್ಸನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಪುನರಾವರ್ತಿಸುವಂತೆ ಎಲ್ಲಾ ವಿಜ್ಞಾನಿಗಳು ಮತ್ತು ಉದ್ಯಮಕ್ಕೆ ಅವರು ಕರೆಕೊಟ್ಟರು.

***



(Release ID: 1724439) Visitor Counter : 254