ಪ್ರಧಾನ ಮಂತ್ರಿಯವರ ಕಛೇರಿ
ಚಂಡಮಾರುತ ಯಾಸ್ ನಿಂದಾದ ಹಾನಿಯನ್ನು ಅವಲೋಕಿಸಿದ ಪ್ರಧಾನ ಮಂತ್ರಿ
ಒಡಿಶಾ ಮತ್ತು ಪಶ್ಚಿಮ ಬಂಗಾಳದ ಯಾಸ್ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನ ಮಂತ್ರಿ
ಯಾಸ್ ಚಂಡಮಾರುತದಿಂದ ಬಾಧಿತರಾದವರ ಜೊತೆ ಒಗ್ಗಟ್ಟು ವ್ಯಕ್ತಪಡಿಸಿದ ಪ್ರಧಾನ ಮಂತ್ರಿ ಮೋದಿ
ತಕ್ಷಣದ ಪರಿಹಾರ ಕಾರ್ಯಗಳಿಗೆ 1000 ಕೋ.ರೂ. ಹಣಕಾಸು ನೆರವು ಘೋಷಿಸಿದ ಪ್ರಧಾನ ಮಂತ್ರಿ
ಹಾನಿಯ ಪೂರ್ಣ ಪ್ರಮಾಣದ ಅಂದಾಜು ಮಾಡಲು ಕೇಂದ್ರ ಸರಕಾರದಿಂದ ರಾಜ್ಯಗಳಿಗೆ ಅಂತರ ಸಚಿವಾಲಯ ತಂಡ ನಿಯೋಜನೆ
ಬಾಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಮರು ನಿರ್ಮಾಣಕ್ಕೆ ಮತ್ತು ಮರು ಸ್ಥಾಪನೆಗೆ ಕೇಂದ್ರದಿಂದ ಎಲ್ಲಾ ರೀತಿಯ ನೆರವಿನ ಭರವಸೆ
ದೇಶದಲ್ಲಿ ಯಾಸ್ ಚಂಡಮಾರುತದಿಂದ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ತಾತ್ಕಾಲಿಕ ಪರಿಹಾರ ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ನೀಡಲಾಗುತ್ತದೆ
Posted On:
28 MAY 2021 3:53PM by PIB Bengaluru
2021 ರ ಮೇ 28 ರ ಶುಕ್ರವಾರದಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಿಗೆ ಭೇಟಿ ನೀಡಿ ಯಾಸ್ ಚಂಡಮಾರುತದಿಂದಾದ ಪರಿಸ್ಥಿತಿಯ ಅವಲೋಕನ ನಡೆಸಿದರು. ಅವರು ಒಡಿಶಾದ ಭದ್ರಾಕ್ ಮತ್ತು ಬಲೇಶ್ವರ ಜಿಲ್ಲೆಗಳ ಹಾಗು ಪಶ್ಚಿಮ ಬಂಗಾಳದ ಪುರ್ಬಾ ಮೆದಿನಿಪುರಗಳ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.
ಭುವನೇಶ್ವರದಲ್ಲಿ ಪ್ರಧಾನ ಮಂತ್ರಿ ಅವರು ಪರಿಹಾರ ಮತ್ತು ಪುನರ್ವಸತಿಗೆ ಸಂಬಂಧಿಸಿದ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಒಡಿಶಾದಲ್ಲಿ ಯಾಸ್ ಚಂಡಮಾರುತದಿಂದ ಗರಿಷ್ಠ ಹಾನಿಯಾಗಿದೆ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗ ಹಾಗು ಜಾರ್ಖಂಡದಲ್ಲಿ ಕೂಡಾ ಚಂಡಮಾರುತ ಹಾನಿ ಮಾಡಿದೆ ಎಂದು ಪ್ರಧಾನ ಮಂತ್ರಿ ಅವರಿಗೆ ತಿಳಿಸಲಾಯಿತು.
ತಕ್ಷಣದ ಪರಿಹಾರ ಕಾರ್ಯಗಳಿಗೆ 1000 ಕೋ.ರೂ.ಗಳ ಹಣಕಾಸು ಸಹಾಯವನ್ನು ಶ್ರೀ ಮೋದಿ ಘೋಷಿಸಿದರು. ಒಡಿಶಾಕ್ಕೆ ತಕ್ಷಣವೇ 500 ಕೋ.ರೂ.ಗಳನ್ನು ಒದಗಿಸಲಾಗುವುದು. ಹಾಗು 500 ಕೋ.ರೂ.ಗಳ ನೆರವನ್ನು ಪಶ್ಚಿಮ ಬಂಗಾಳ ಮತು ಜಾರ್ಖಂಡಗಳಿಗೆ ಒದಗಿಸಲಾಗುವುದು, ಈ ಹಣಕಾಸನ್ನು ಹಾನಿಯ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು. ಕೇಂದ್ರ ಸರಕಾರವು ಹಾನಿಯ ಅಂದಾಜು ಮಾಡಲು ಅಂತರ ಸಚಿವಾಲಯ ತಂಡವನ್ನು ರಾಜ್ಯಗಳಿಗೆ ಕಳುಹಿಸಲಿದೆ. ಅದರ ಆಧಾರದ ಮೇಲೆ ಸಹಾಯವನ್ನು ನೀಡಲಾಗುವುದು.
ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಜೊತೆ ನಿಕಟವಾಗಿ ಕೆಲಸ ಮಾಡಲಿದೆ ಎಂದು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡಗಳ ಜನತೆಗೆ ಪ್ರಧಾನ ಮಂತ್ರಿ ಅವರು ಭರವಸೆ ನೀಡಿದರು. ಮಾತ್ರವಲ್ಲದೆ ಈ ಸಂಕಷ್ಟದ ಸಮಯದಲ್ಲಿ ಬಾಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಮರುನಿರ್ಮಾಣಕ್ಕೆ ಮತ್ತು ಮರುಸ್ಥಾಪನೆಗೆ ಅವಶ್ಯವಾದ ಎಲ್ಲಾ ನೆರವನ್ನು ನೀಡಲಾಗುತ್ತದೆ ಎಂದೂ ಹೇಳಿದರು.
ಚಂಡಮಾರುತದಿಂದ ತೊಂದರೆಗೀಡಾದವರಿಗೆ ತಮ್ಮ ಸಂಪೂರ್ಣ ಐಕ್ಯಮತ್ಯವನ್ನು ಪ್ರಕಟಿಸಿದ ಪ್ರಧಾನ ಮಂತ್ರಿ ಅವರು ಈ ಪ್ರಕೋಪದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸಿದರು.
ಚಂಡಮಾರುತದಲ್ಲಿ ಮೃತಪಟ್ಟವರ ಕುಟುಂಬದವರಿಗೆ 2 ಲಕ್ಷ ರೂ. ಗಳ ತಾತ್ಕಾಲಿಕ ಪರಿಹಾರವನ್ನು ಪ್ರಕಟಿಸಿದ ಅವರು ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ.ಗಳ ನೆರವನ್ನು ಘೋಷಿಸಿದರು.
ವಿಕೋಪಗಳ ವೈಜ್ಞಾನಿಕ ನಿರ್ವಹಣೆಗೆ ಹೆಚ್ಚು ಆದ್ಯತೆ ನೀಡುವುದನ್ನು ನಾವು ಮುಂದುವರಿಸಬೇಕು ಎಂದು ಪ್ರಧಾನ ಮಂತ್ರಿ ಹೇಳಿದರು. ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳ ಪರಿಣಾಮ ಮತ್ತು ಪುನರಾವರ್ತನೆ ಹೆಚ್ಚುತ್ತಿರುವುದರಿಂದ ಸಂಪರ್ಕ ವ್ಯವಸ್ಥೆ, ಶಮನ ಪ್ರಯತ್ನಗಳು, ಮತ್ತು ಸಿದ್ಧತಾ ಸ್ಥಿತಿಯ ಬಗ್ಗೆ ಅಮೂಲಾಗ್ರ ಬದಲಾವಣೆಗಳಾಗಬೇಕಿವೆ. ಪರಿಹಾರ ಕಾರ್ಯಗಳಲ್ಲಿ ಉತ್ತಮ ಸಹಕಾರಕ್ಕಾಗಿ ಜನತೆಯಲ್ಲಿ ನಂಬಿಕೆ, ವಿಶ್ವಾಸ ಬೆಳೆಸುವುದರ ಮಹತ್ವದ ಬಗ್ಗೆಯೂ ಅವರು ಮಾತನಾಡಿದರು.
ಒಡಿಶಾ ಸರಕಾರದ ವಿಕೋಪ ನಿರ್ವಹಣಾ ಕಾರ್ಯಚಟುವಟಿಕೆಗಳು ಮತ್ತು ಸಿದ್ಧತಾ ಸ್ಥಿತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಇದರಿಂದ ಜೀವಹಾನಿ ಅತ್ಯಂತ ಕನಿಷ್ಠ ಪ್ರಮಾಣದಲ್ಲಾಗಿದೆ ಎಂದರು. ಇಂತಹ ನೈಸರ್ಗಿಕ ಆಪತ್ತುಗಳನ್ನು ನಿಭಾಯಿಸಲು ರಾಜ್ಯವು ಧೀರ್ಘ ಕಾಲೀನ ವಿಕೋಪ ತಗ್ಗಿಸುವ ಪ್ರಯತ್ನಗಳಲ್ಲಿ ನಿರತವಾಗಿರುವುದನ್ನೂ ಪ್ರಧಾನ ಮಂತ್ರಿ ಅವರು ಗಮನಿಸಿದರು.
ವಿಕೋಪ ತಡೆಗೆ 30,000 ಕೋ.ರೂ.ಗಳವರೆಗೆ ವಿಕೋಪ ಶಮನ ನಿಧಿಯನ್ನು ಒದಗಿಸುವ ಮೂಲಕ ಹಣಕಾಸು ಆಯೋಗ ಕೂಡಾ ವಿಕೋಪ ಶಮನಕ್ಕೆ ಅದ್ಯತೆ ನೀಡಿರುವುದನ್ನು ಅವರು ಪ್ರಸ್ತಾಪಿಸಿದರು.
***
(Release ID: 1722545)
Visitor Counter : 230
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam