ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಭಾರತದಲ್ಲಿ ರೆಮ್ಡೆಸಿವಿರ್ ಲಭ್ಯತೆಯನ್ನು ಹೆಚ್ಚಿಸಲು ಸರಕಾರ ಕೈಗೊಂಡ ತ್ವರಿತ ಕ್ರಮಗಳು

ರೆಮ್ಡೆಸಿವಿರ್ ಲಭ್ಯತೆ, ಉತ್ಪಾದನೆ ಮತ್ತು ಪೂರೈಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ

ರೆಮ್ಡೆಸಿವಿರ್ ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ 38 ಲಕ್ಷ ಸೀಸೆಗಳಿಂದ ತಿಂಗಳಿಗೆ ಸುಮಾರು 119 ಲಕ್ಷ ಸೀಸೆಗಳಿಗೆ ಹೆಚ್ಚಿಸಲಾಗಿದೆ

ರೆಮ್ಡೆಸಿವಿರ್ ಉತ್ಪಾದನಾ ಕೇಂದ್ರಗಳ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗಿದೆ

Posted On: 17 MAY 2021 2:58PM by PIB Bengaluru

ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಶರವೇಗದ ಏರಿಕೆ ಹಿನ್ನೆಲೆಯಲ್ಲಿ ಔಷಧ ಇಲಾಖೆಯು 2021ರ ಏಪ್ರಿಲ್ ಆರಂಭದಲ್ಲಿ ಕೋವಿಡ್‌-19 ಔಷಧಗಳ ಲಭ್ಯತೆ, ಉತ್ಪಾದನೆ ಮತ್ತು ಪೂರೈಕೆಯ ಮೇಲ್ವಿಚಾರಣೆಯನ್ನು ತೀವ್ರಗೊಳಿಸಿತು. ರೆಮ್‌ಡೆಸಿವಿರ್ ಪೇಟೆಂಟ್ ಪಡೆದ ಔಷಧವಾಗಿದ್ದು, ಪೇಟೆಂಟ್ ದಾರ ಸಂಸ್ಥೆಯಾದ ಅಮೆರಿಕದ ʻಗಿಲ್ಯಾಡ್‌ ಲೈಫ್ ಸೈನ್ಸಸ್ʼ ನೀಡಿರುವ ಸ್ವಯಂಪ್ರೇರಿತ ಪರವಾನಗಿ ಅಡಿಯಲ್ಲಿ 7 ಭಾರತೀಯ ಔಷಧ ಕಂಪನಿಗಳು (ಸಿಪ್ಲಾ, ಡಾ. ರೆಡ್ಡಿಸ್ ಲ್ಯಾಬ್., ಹೆಟೆರೊ, ಜುಬಿಲೆಂಟ್‌ ಫಾರ್ಮಾ, ಮೈಲಾನ್, ಸಿಂಜೀನ್ ಮತ್ತು ಜೈಡಸ್ ಕ್ಯಾಡಿಲಾ) ಭಾರತದಲ್ಲಿ ಇದನ್ನು ತಯಾರಿಸುತ್ತಿವೆ.

ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ರೆಮ್‌ಡೆಸಿವಿರ್‌ನ ಎಲ್ಲಾ ಏಳು ದೇಶೀಯ ಪರವಾನಗಿ ಪಡೆದ ತಯಾರಕರಿಗೆ ಉತ್ಪಾದನೆ ಪ್ರಮಾಣವನ್ನು ತ್ವರಿತ ಗತಿಯಲ್ಲಿ ಹೆಚ್ಚಿಸುವಂತೆ ಸೂಚಿಸಲಾಯಿತು. ಕೇಂದ್ರ ಸರಕಾರ ಮತ್ತು ಉತ್ಪಾದನಾ ಕಂಪನಿಗಳ ಸಂಯೋಜಿತ ಪ್ರಯತ್ನಳ ಫಲವಾಗಿ ಪರವಾನಗಿ ಪಡೆದ ತಯಾರಕರ ಉತ್ಪಾದನಾ ಸಾಮರ್ಥ್ಯವು ತಿಂಗಳಿಗೆ 38 ಲಕ್ಷ ಸೀಸೆಗಳಿಂದ ತಿಂಗಳಿಗೆ ಸುಮಾರು  119 ಲಕ್ಷ ಸೀಸೆಗಳಿಗೆ ಅಭೂತಪೂರ್ವವಾಗಿ ಹೆಚ್ಚಾಗಿದೆ. ಹೆಚ್ಚುವರಿ ಇನ್ನೂ 38 ಉತ್ಪಾದನಾ ಕೇಂದ್ರಗಳಿಗೆ ತ್ವರಿತ ಅನುಮೋದನೆ ನೀಡುವುದರೊಂದಿಗೆ,  ದೇಶದ ರೆಮ್‌ಡೆಸಿವಿರ್‌ ಅನುಮೋದಿತ ಉತ್ಪಾದನಾ ಕೇಂದ್ರಗಳ ಸಂಖ್ಯೆ 22ರಿಂದ 60ಕ್ಕೆ ಹೆಚ್ಚಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಾಯದಿಂದ, ರೆಮ್‌ಡೆಸಿವಿರ್‌ ತಯಾರಕರಿಗೆ ವಿದೇಶಗಳಿಂದ ಅಗತ್ಯ ಕಚ್ಚಾ ವಸ್ತುಗಳು ಮತ್ತು ಸಲಕರಣೆಗಳನ್ನು ಪಡೆಯಲು ಅನುಕೂಲ ಮಾಡಿಕೊಳ್ಳಲಾಗುತ್ತಿದೆ.

ಆಮದು ಮತ್ತು ದೇಶೀಯ ಉತ್ಪಾದನೆ ಹೆಚ್ಚಳ ಎರಡೂ ಬಗೆಯ ಮೂಲಕವೂ ಔಷಧದ ಲಭ್ಯತೆಯನ್ನು ವೃದ್ಧಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.  2021ರ ಏಪ್ರಿಲ್ 11ರಿಂದ ಭಾರತದಿಂದ ರೆಮ್‌ಡೆಸಿವಿರ್‌ ರಫ್ತು ನಿಷೇಧಿಸಲಾಗಿದೆ. 2021ರ ಏಪ್ರಿಲ್ 20ರಿಂದ ಜಾರಿಗೆ ಬರುವಂತೆ ರೆಮ್‌ಡೆಸಿವಿರ್‌ ಚುಚ್ಚುಮದ್ದು, ರೆಮ್‌ಡೆಸಿವಿರ್‌ ತಯಾರಿಕೆಯಲ್ಲಿ ಬಳಸಲಾಗುವ ರೆಮ್‌ಡೆಸಿವಿರ್‌ ʼಎಪಿಐʼ ಮತ್ತು ʻಬೀಟಾ ಸೈಕ್ಲೋಡೆಕ್ಸ್‌ಟ್ರೈನ್‌ʼ (ಎಸ್ ಬಿಇಬಿಸಿಡಿ) ಮೇಲೆ ಆಮದು ಸುಂಕಕ್ಕೆ ವಿನಾಯಿತಿ ನೀಡಲಾಗಿದೆ.

ದೇಶದಲ್ಲಿ ಈ ಔಷಧಕ್ಕೆ ಬೇಡಿಕೆ ದಿಢೀರನೆ ಹೆಚ್ಚಾದ ಹಿನ್ನೆಲೆಯಲ್ಲಿ, ದೇಶದ ವಿವಿಧ ಭಾಗಗಳಿಗೆ 

ರೆಮ್‌ಡೆಸಿವಿರ್‌ ಅನ್ನು ನ್ಯಾಯಯುತವಾಗಿ ವಿತರಿಸುವ ಸಲುವಾಗಿ ಕೇಂದ್ರ ಸರಕಾರವು ಏಪ್ರಿಲ್ ಮೂರನೇ ವಾರದಿಂದ ತಾನೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅದನ್ನು ಹಂಚಿಕೆ ಮಾಡುತ್ತಿದೆ.   ಅತ್ಯಧಿಕ ಬೇಡಿಕೆ ಇರುವಂತಹ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಏಪ್ರಿಲ್ 19ರಂದು, ಏಪ್ರಿಲ್‌ 30ರವರೆಗಿನ ಅವಧಿಗಾಗಿ 11 ಲಕ್ಷ ಸೀಸೆಗಳ ಮಧ್ಯಂತರ ಹಂಚಿಕೆಯನ್ನು ಮಾಡಲಾಗಿದೆ. ಈ ಮಧ್ಯೆ, ಪೂರೈಕೆ ಹೆಚ್ಚಳವಾದ ಕಾರಣ, ಈ ಹಂಚಿಕೆ ಪ್ರಮಾಣವನ್ನು ಏಪ್ರಿಲ್ 24ರಂದು 16 ಲಕ್ಷ ಸೀಸೆಗಳಿಗೆ ಹೆಚ್ಚಿಸಲಾಯಿತು ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಿಗೆ ಸೀಸೆಗಳನ್ನು ಹಂಚಿಕೆ ಮಾಡಲಾಯಿತು. ಆ ನಂತರ ಮಾಡಲಾದ ಹಂಚಿಕೆಗಳ ಸರಣಿಯಲ್ಲಿ, ಮೇ 16ರಂದು ಮಾಡಲಾದ ತೀರಾ ಇತ್ತೀಚಿನ ಹಂಚಿಕೆಯೂ ಸೇರಿದಂತೆ ವಿವಿಧ ರಾಜ್ಯಗಳಿಗೆ 2021ರ ಮೇ 23 ರವರೆಗೆ ಒಟ್ಟು 76 ಲಕ್ಷ ಸೀಸೆಗಳನ್ನು ಹಂಚಿಕೆ ಮಾಡಲಾಗಿದೆ.

 

ರೆಮ್‌ಡೆಸಿವಿರ್‌ ಹಂಚಿಕೆಯ ಸ್ಥೂಲನೋಟ

 

ಕ್ರ. ಸಂ.

ಹಂಚಿಕೆಯ ದಿನಾಂಕ

ಅವಧಿ

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾದ ಒಟ್ಟು ಸೀಸೆಗಳ ಸಂಖ್ಯೆ

1

ಏಪ್ರಿಲ್ 21, 2021

ಏಪ್ರಿಲ್ 21 ರಿಂದ ಏಪ್ರಿಲ್ 30ರವರೆಗೆ

11 ಲಕ್ಷ

2

ಏಪ್ರಿಲ್‌ 24, 2021

ಏಪ್ರಿಲ್ 21ರಿಂದ ಏಪ್ರಿಲ್ 30ರವರೆಗೆ

16 ಲಕ್ಷ

3

ಏಪ್ರಿಲ್‌ 29, 2021

ಏಪ್ರಿಲ್ 21ರಿಂದ  ಮೇ 2

17.80 ಲಕ್ಷ

4

ಮೇ 1,  2021

ಏಪ್ರಿಲ್ 21ರಿಂದ ಮೇ 9ರವರೆಗೆ

33.80 ಲಕ್ಷ

5

ಮೇ 7,  2021

ಏಪ್ರಿಲ್ 21 ರಿಂದ ಮೇ  16ರವರೆಗೆ

53 ಲಕ್ಷ

6

ಮೇ 16, 2021

ಏಪ್ರಿಲ್ 21ರಿಂದ ಮೇ  23ರವರೆಗೆ

76.00 ಲಕ್ಷ

ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಒಳಗೊಂಡಂತೆ ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ರೀತಿಯಲ್ಲಿ ಔಷಧದ ವಿತರಣೆಯನ್ನು ಕಾಯ್ದುಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಜೊತೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಮೇಲ್ವಿಚಾರಣಾ ಸಮಿತಿ ಹಾಗೂ ಏಮ್ಸ್/ಐಸಿಎಂಆರ್ ಕೋವಿಡ್-19 ರಾಷ್ಟ್ರೀಯ ಕಾರ್ಯಪಡೆಯು ಜಂಟಿಯಾಗಿ ಹೊರಡಿಸಿದ "ವಯಸ್ಕ ಕೋವಿಡ್-19 ರೋಗಿಗಳ ನಿರ್ವಹಣೆಗಾಗಿ ರಾಷ್ಟ್ರೀಯ ವೈದ್ಯಕೀಯ ಮಾರ್ಗದರ್ಶನ"ದಲ್ಲಿ ನೀಡಿದ ಸಲಹೆಯಂತೆ ನ್ಯಾಯೋಚಿತವಾಗಿ ರೆಮ್‌ಡೆಸಿವಿರ್‌ ಬಳಸಲು ಸೂಚಿಸಲಾಗಿದೆ. ಕೇಂದ್ರದ ಹಂಚಿಕೆಗಿಂತಲೂ ಹೆಚ್ಚುವರಿಯಾಗಿ ಅಗತ್ಯವಿರುವ ಪ್ರಮಾಣದ ಔಷಧಗಳಿಗಾಗಿ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೂಡಲೇ ಸಮಬಂಧಪಟ್ಟ ಕಂಪನಿಗಳಿಗೆ ಖರೀದಿ ಆದೇಶಗಳನ್ನು ನೀಡಬೇಕು ಮತ್ತು ಕಂಪನಿಗಳ ಸಂಪರ್ಕ ಅಧಿಕಾರಿಗಳ ಜೊತೆ ನಿಕಟ ಸಮನ್ವಯದ ಮೂಲಕ ಪೂರೈಕೆ ಯೋಜನೆ ರೂಪಿಸಬೇಕು ಎಂದು ಸೂಚಿಸಲಾಗಿದೆ. ರಾಜ್ಯದಲ್ಲಿ ಖಾಸಗಿ ವಿತರಣಾ ವ್ಯವಸ್ಥೆಗಳೊಂದಿಗೆ ಸಮನ್ವಯವನ್ನು ಸಹ ರಾಜ್ಯಗಳೇ ಮಾಡಬೇಕಾಗಿದೆ. ಅಗತ್ಯವಿರುವ ರೋಗಿಗಳಿಗೆ ಈ ಔಷಧವನ್ನು ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಮತ್ತು ಅದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಉತ್ತಮವಾಗಿ ಜಾಹೀರಾತು ನೀಡಲು ರಾಜ್ಯ ಸರಕಾರಗಳಿಗೆ ಸಲಹೆ ನೀಡಲಾಗಿದೆ.

ಎಲ್ಲಾ ಏಳು ಭಾರತೀಯ ರೆಮ್‌ಡೆಸಿವಿರ್‌ ತಯಾರಕ ಸಂಸ್ಥೆಗಳು ಸರಕಾರದ ಖರೀದಿ ಆದೇಶಕ್ಕೆ ಅನುಗುಣವಾಗಿ ಮತ್ತು ಆಯಾ ರಾಜ್ಯಗಳ ಖಾಸಗಿ ವಿತರಣಾ ವ್ಯವಸ್ಥೆಗಳ ಅಗತ್ಯಗಳಿಗೆ ಅನುಗುಣವಾಗಿ ಪೂರೈಕೆ ಮಾಡುತ್ತಿವೆ.  2021ರ ಮೇ  21ರಿಂದ ಮೇ 15ರ ನಡುವಿನ ಅವಧಿಯಲ್ಲಿ ಔಷಧ ಕಂಪನಿಗಳು ದೇಶಾದ್ಯಂತ ಒಟ್ಟು 54.15 ಲಕ್ಷ ರೆಮ್‌ಡೆಸಿವಿರ್‌ ಸೀಸೆಗಳನ್ನು ಪೂರೈಸಿವೆ. ವಿವಿಧ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ ರೆಮ್‌ಡೆಸಿವಿರ್‌ ಪೂರೈಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಪೂರೈಕೆಗೆ ಸಂಬಂಧಿಸಿದ ಯಾವುದೇ ದೂರು ಬಂದಲ್ಲಿ, ಅದನ್ನು ತಕ್ಷಣವೇ ಸಂಬಂಧಪಟ್ಟ ತಯಾರಕರ ಗಮನಕ್ಕೆ ತಂದು ಪರಿಹರಿಸಲಾಗುತ್ತಿದೆ. ಕೇಂದ್ರ ಔಷಧ ಇಲಾಖೆಯು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರದ (ಎನ್‌ಪಿಪಿಎ) ಮೂಲಕ ಎಲ್ಲಾ ರಾಜ್ಯಗಳ ನೋಡಲ್ ಅಧಿಕಾರಿಗಳು ಮತ್ತು ಉತ್ಪಾದನಾ ಕಂಪನಿಗಳ ಸಂಪರ್ಕಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಮೇಲೆ ಉಲ್ಲೇಖಿಸಲಾದ ಹಂಚಿಕೆಯ ಜೊತೆಗೆ, 16.05.2021ರಂದು ಇದ್ದಂತೆ, ಇತರ ದೇಶಗಳು/ಸಂಸ್ಥೆಗಳಿಂದ ದೇಣಿಗೆ ಮೂಲಕ ಸ್ವೀಕರಿಸಲಾದ ಒಟ್ಟು 5.26 ಲಕ್ಷ ರೆಮ್‌ಡೆಸಿವಿರ್‌ ಸೀಸೆಗಳು ಮತ್ತು ವಾಣಿಜ್ಯಮಾರ್ಗದ ಮೂಲಕ ಆಮದು ಮಾಡಿಕೊಳ್ಳಲಾದ 40000 ಸೀಸೆಗಳನ್ನೂ  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ

****(Release ID: 1719449) Visitor Counter : 28