ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಸೌಮ್ಯ ರೀತಿಯ ಕೋವಿಡ್-19 ಸೋಂಕಿತ ರೋಗಿಗಳಿಗೆ ವೈದ್ಯೋಪಚಾರ ಮತ್ತು ಆರೈಕೆ ಕುರಿತಂತೆ ಎ.ಐ.ಐ.ಎಂ.ಎಸ್. ವೈದ್ಯರಿಂದ ಮಾರ್ಗದರ್ಶನ
Posted On:
15 MAY 2021 1:47PM by PIB Bengaluru
ಕೋವಿಡ್ -19 ರೋಗಿಗಳಲ್ಲಿ ಸಾಮಾನ್ಯವಾಗಿ ಕಾಣಬರುವ ರೋಗ ಲಕ್ಷಣಗಳೆಂದರೆ ಜ್ವರ, ಒಣ ಕೆಮ್ಮು, ಆಯಾಸ, ಮತ್ತು ಬಾಯಿ ರುಚಿ ಇಲ್ಲದಿರುವಿಕೆ ಅಥವಾ ವಾಸನಾಗ್ರಹಣ ಶಕ್ತಿಯ ನಷ್ಟ. ಗಂಟಲಿನಲ್ಲಿ ಕಿರಿಕಿರಿ, ತಲೆ ನೋವು, ದೇಹದಲ್ಲಿ ನೋವು, ಬೇಧಿ ಚರ್ಮದಲ್ಲಿ ಗಾಯಗಳು ಅಥವಾ ಗೆರೆಗಳು ಮತ್ತು ಕಣ್ಣುಗಳು ಕೆಂಪಾಗುವಿಕೆ ಕೂಡಾ ಅಪರೂಪವಾಗಿ ಕಂಡುಬರುತ್ತದೆ. ನಿಮ್ಮಲ್ಲಿ ಈ ಯಾವುದೇ ರೋಗಲಕ್ಷಣಗಳು ಕಂಡು ಬಂದರೆ, ನೀವು ತಕ್ಷಣವೇ ಇತರರಿಂದ ಪ್ರತ್ಯೇಕಗೊಳ್ಳಬೇಕು. ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆದ ರೋಗಿಗಳಿಗೆ “ವೈದ್ಯೋಪಚಾರ ಮತ್ತು ಮನೆಯಲ್ಲಿಯೇ ಐಸೋಲೇಶನ್ನಿನಲ್ಲಿದ್ದವರಿಗೆ ಆರೈಕೆ” ಕುರಿತ ವೆಬಿನಾರಿನಲ್ಲಿ ಎ.ಐ.ಐ.ಎಂ.ಎಸ್, ದಿಲ್ಲಿಯ ಡಾ. ನೀರಜ್ ನಿಶ್ಚಲ್ ಅವರು ಈ ವಿಷಯ ತಿಳಿಸಿದ್ದಾರೆ. ಈ ವೆಬಿನಾರನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಾವೀಣ್ಯತಾ ಕೇಂದ್ರವು ಆಯೋಜಿಸಿತ್ತು
ಸೋಂಕು ತಗಲಿದ ಶೇ.80 ರಷ್ಟು ರೋಗಿಗಳು ಬಹಳ ಸೌಮ್ಯವಾದ ರೋಗಲಕ್ಷಣಗಳನ್ನು ತೋರ್ಪಡಿಸುತ್ತಾರೆ. ಆರ್.ಟಿ-ಪಿ.ಸಿ.ಆರ್. ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದರೆ , ಆದರೆ ರೋಗಲಕ್ಷಣಗಳು ಇದ್ದರೆ ಆಗ ಇನ್ನೊಂದು ಪರೀಕ್ಷೆಗೆ ಶಿಫಾರಸು ಮಾಡಬೇಕಾಗುತ್ತದೆ. ಆದರೆ ಆಸ್ಪತ್ರೆ ಸೇರ್ಪಡೆ ಅವಶ್ಯವೇ ಎಂಬುದನ್ನು ರೋಗದ ತೀವ್ರತೆಯ ಮೇರೆಗೆ ನಿರ್ಧರಿಸಬೇಕಾಗುತ್ತದೆ.
ಔಷಧೋಪಚಾರಗಳನ್ನು ಸೂಕ್ತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅದನ್ನು ನಿರ್ದಿಷ್ಟ ಸಮಯದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಔಷಧಿ ಬಗ್ಗೆ ಮಾತ್ರವೇ ರೋಗಿಗಳು ತಿಳಿದಿದ್ದರೆ ಸಾಲದು; ಅವರು ಅದನ್ನು ಹೇಗೆ ಮತ್ತು ಯಾವಾಗ ತೆಗೆದುಕೊಳ್ಳಬೇಕು ಎಂಬುದನ್ನೂ ತಿಳಿದುಕೊಂಡಿರಬೇಕು. ಆಗ ಮಾತ್ರ ಅದು ಪ್ರಯೋಜನಕಾರಿಯಾಗುತ್ತದೆ ಎಂದೂ ಡಾ. ನೀರಜ್ ಹೇಳಿದರು.
60 ವರ್ಷಕ್ಕಿಂತ ಮೇಲಿನ ವಯಸ್ಸಿನ ಮತ್ತು ರಕ್ತದೊತ್ತಡ, ಸಿಹಿ ಮೂತ್ರ, ಹೃದ್ರೋಗ, ಮತ್ತು ಕಿಡ್ನಿ ಹಾಗು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘ ಕಾಲೀನ ರೋಗಗಳು ಇರುವ ರೋಗಿಗಳಿಗೆ ಮನೆಯಲ್ಲಿಯೇ ಐಸೋಲೇಶನ್ ಮಾಡುವ ಕುರಿತಂತೆ ನಿರ್ಧಾರವನ್ನು ವೈದ್ಯರ ಸಮಾಲೋಚನೆಯ ಬಳಿಕವೇ ಕೈಗೊಳ್ಳಬೇಕು.
ಸೋಂಕನ್ನು ನಿಭಾಯಿಸುವುದರ ಅಂಗವಾಗಿ ಕೋವಿಡ್ -೧೯ ಪಾಸಿಟಿವ್ ರೋಗಿಗಳು ಕೈಗೊಳ್ಳಬೇಕಾದ ಕೆಲವು ಕ್ರಮಗಳು ಇಲ್ಲಿವೆ
ನಿಯಮಿತವಾಗಿ ಔಷಧಿಯನ್ನು ತೆಗೆದುಕೊಳ್ಳಬೇಕು. ನೈರ್ಮಲ್ಯ ಮತ್ತು ಸ್ವಚ್ಛತೆಯ ಅಗತ್ಯಗಳನ್ನು ಪೂರೈಸತಕ್ಕದ್ದು. ವೈದ್ಯಕೀಯ ದರ್ಜೆಯ ಮುಖಗವಸುಗಳನ್ನು ಮುಂಚಿತವಾಗಿಯೇ ದಾಸ್ತಾನು ಮಾಡಿಕೊಳ್ಳತಕ್ಕದ್ದು. ದೈನಂದಿನ ಅಗತ್ಯಗಳ ಪಟ್ಟಿಯನ್ನು ಮಾಡಿಕೊಂಡು ಆರೋಗ್ಯ ಸಂಬಂಧಿತ ಮಾಹಿತಿಗಾಗಿ ಸಂಪರ್ಕ ಸಂಖ್ಯೆಗಳನ್ನು, ಆರೋಗ್ಯ ಕಾರ್ಯಕರ್ತರು, ಹಾಟ್ ಲೈನ್ ಇತ್ಯಾದಿ ಮಾಹಿತಿಯನ್ನು ಸಿದ್ದಪಡಿಸಿ ಇಟ್ಟುಕೊಳ್ಳಬೇಕು. ಇದರ ಜೊತೆಗೆ ಗೆಳೆಯರ ಸಂಪರ್ಕ ಸಂಖ್ಯೆಗಳು, ಕುಟುಂಬ ಸದಸ್ಯರು ಮತ್ತು ನೆರೆ ಹೊರೆಯವರ ಸಂಪರ್ಕ ಸಂಖ್ಯೆಗಳನ್ನು ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನೆರವಿಗೆ ಬರುವಂತೆ ಸಿದ್ಧ ಮಾಡಿಟ್ಟುಕೊಳ್ಳಬೇಕು. ಕುಟುಂಬದಲ್ಲಿಯ ಮಕ್ಕಳ ವಿಷಯದಲ್ಲಿಯೂ ಸೂಕ್ತ ಆರೈಕೆ ಮತ್ತು ಯೋಜನೆಯನ್ನು ತಯಾರು ಮಾಡಿಡಬೇಕು.
ಸೌಮ್ಯ ಮತ್ತು ರೋಗ ಲಕ್ಷಣಗಳಿಲ್ಲದ ರೋಗಿಗಳನ್ನು ಮನೆಯಲ್ಲಿಯೇ ಐಸೋಲೇಶನ್ನಿನಲ್ಲಿಡಬೇಕು. ಇಂತಹ ರೋಗಿಗಳು ಕುಟುಂಬದ ಇತರ ಸದಸ್ಯರಿಂದ ಅದರಲ್ಲೂ ವಿಶೇಷವಾಗಿ ಮಕ್ಕಳಿಂದ ಸಾಕಷ್ಟು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಗರಿಷ್ಠ ಜಾಗ್ರತೆವಹಿಸಬೇಕು. ಆಗಾಗ ಬೇಕಾಗುವ ಔಷಧಿಗಳನ್ನು ರೋಗಿಗೆ ಸುಲಭದಲ್ಲಿ ಲಭ್ಯವಾಗುವಂತೆ ಇಡಬೇಕು. ವೈದ್ಯರು ಮತ್ತು ಆರೈಕೆ ಮಾಡುವವರ ನಡುವೆ ನಿಯಮಿತವಾಗಿ ಸಂಪರ್ಕ ಇರಬೇಕಾಗುತ್ತದೆ. ಪಾಸಿಟಿವ್ ರೋಗಿಗಳು ಸದಾ ಮೂರು ಪದರದ ಮುಖಗವಸುಗಳನ್ನು ಧರಿಸಿರಬೇಕಾಗುತ್ತದೆ, ಮುಖಗವಸುಗಳನ್ನು ಪ್ರತೀ 8 ಗಂಟೆಗಳಿಗೊಮ್ಮೆ ಸೂಕ್ತ ನಿರ್ಮಲೀಕರಣದೊಂದಿಗೆ ವಿಲೇವಾರಿ ಮಾಡಬೇಕಾಗುತ್ತದೆ. ರೋಗಿ ಮತ್ತು ಆರೈಕೆ ಮಾಡುವವರು ಪರಸ್ಪರ ಮಾತನಾಡುವಾಗ ಎನ್-95 ಮುಖಗವಸುಗಳನ್ನು ಧರಿಸಬೇಕು.
ಪಲ್ಸ್ ಆಕ್ಸಿಮೀಟರ್ ನ್ನು ದೇಹದ ಆಮ್ಲಜನಕ ಮಟ್ಟದ ಮೇಲೆ ನಿಗಾ ವಹಿಸುವುದಕ್ಕಾಗಿ ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ಕೃತಕ ಉಗುರುಗಳು ಅಥವಾ ಉಗುರಿನ ಮೇಲಿನ ಬಣ್ಣವನ್ನು ಇದರ ಬಳಕೆಗೆ ಮೊದಲು ತೆಗೆದು ಹಾಕಬೇಕು ಮತ್ತು ರೋಗಿಯ ಕೈ ತಣ್ಣಗಿದ್ದರೆ ಅದನ್ನು ಬೆಚ್ಚಗೆ ಮಾಡಬೇಕು. ಪರೀಕ್ಷೆ ಮಾಡುವುದಕ್ಕೆ ಮೊದಲು ಕನಿಷ್ಠ ಐದು ನಿಮಿಷ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು. ಪರಿವೀಕ್ಷಣೆಯಲ್ಲಿ ಐದು ಸೆಕೆಂಡುಗಳ ಕಾಲ ಮಾಪನ ಸ್ಥಿರವಾಗಿದ್ದರೆ ಆ ಸಂಖ್ಯೆಯು ನಿಮ್ಮ ದೇಹದಲ್ಲಿಯ ಆಮ್ಲಜನಕ ಪ್ರಮಾಣವನ್ನು ಸೂಚಿಸುತ್ತದೆ. ಮನೆಯಲ್ಲಿರುವಾಗ ರೆಮಿಡಿಸಿವಿರ್ ತೆಗೆದುಕೊಳ್ಳಬಾರದು. ಧನಾತ್ಮಕ ಧೋರಣೆ ಮತ್ತು ನಿಯಮಿತ ವ್ಯಾಯಾಮಗಳು ಮನೆಯಲ್ಲಿ ಐಸೋಲೇಶನ್ನಿನಲ್ಲಿರುವ ರೋಗಿಗಳಿಗೆ ಅತ್ಯಂತ ಅವಶ್ಯ ಎಂದೂ ಡಾ. ನೀರಜ್ ಹೇಳಿದರು.
ಆಮ್ಲಜನಕ ಮಟ್ಟ 94 ಕ್ಕಿಂತ ಕೆಳಗಿಳಿದರೆ, ಆ ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕು ಎಂದೂ ದಿಲ್ಲಿ ಎ.ಐ.ಐ.ಎಂ.ಎಸ್. ನ ಡಾ. ಮನೀಷ್ ಹೇಳಿದರು. “ಸೌಮ್ಯ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆಯಲ್ಲಿ ಪರಿಷ್ಕೃತ ಮಾರ್ಗದರ್ಶಿಗಳು” ಕುರಿತ ಮಾತನಾಡಿದ ಅವರು ಆಮ್ಲಜನಕ ಮಟ್ಟವನ್ನು ತಪಾಸಣೆ ಮಾಡುವಾಗ ರೋಗಿಯ ವಯಸ್ಸು ಮತ್ತು ಇತರ ದೀರ್ಘ ಕಾಲೀನ ರೋಗಗಳ ಬಗ್ಗೆಯೂ ಗಮನವಿಟ್ಟಿರಬೇಕು ಎಂದರು.
ಇವರ್ಮೆಕ್ಟಿನ್ ಬಳಕೆ ಬಗ್ಗೆ ಮಾಹಿತಿ ನೀಡಿದ ಡಾ. ಮನೀಶ್, ಅದರ ಬಳಕೆ ರೋಗ ನಿರೋಧಕ ಶಕ್ತಿಯ ಮಟ್ಟವನ್ನು ಮತ್ತು ಇತರ ರೋಗಿ ನಿರ್ದಿಷ್ಟ ಸ್ಥಿತಿ-ಗತಿಗಳನ್ನು ಅವಲಂಬಿಸಿರುತ್ತದೆ ಎಂದರು. ಪ್ಯಾರಾಸಿಟಮೋಲ್ ಬಳಕೆಗೂ ಇದು ಅನ್ವಯಿಸುತ್ತದೆ. ಆದುದರಿಂದ ಔಷಧೋಪಚಾರವನ್ನು ವೈದ್ಯರು ಸೂಚಿಸಿದಂತೆ ಕೈಗೊಳ್ಳಬೇಕು ಎಂದವರು ಹೇಳಿದರು.
ಫ್ಯಾಬಿಫ್ಲೂ ಬಗ್ಗೆ ಮಾಹಿತಿ ನೀಡಿದ ಅವರು, ಕೋವಿಡ್ -19 ಚಿಕಿತ್ಸೆಗೆ ಸಂಬಂಧಿಸಿ ಮಹಾರಾಷ್ಟ್ರ ಸರಕಾರದ ಮಾರ್ಗದರ್ಶಿಗಳು ಫ್ಯಾಬಿಫ್ಲೂ ಬಳಕೆಯನ್ನು ಪ್ರಸ್ತಾಪಿಸಿವೆ. ಈ ಶಿಫಾರಸನ್ನು ಗ್ಲೆನ್ ಮಾರ್ಕ್ 150 ರೋಗಿಗಳ ಮೇಲೆ ನಡೆಸಿದ ಸಂಶೋಧನೆಯ ಆಧಾರದ ಮೇಲೆ ಮಾಡಲಾಗಿದೆ, ಆದರೆ ಇವರ್ಮೆಕ್ಟಿನ್ ಈ ಮಾರ್ಗದರ್ಶಿಗಳಲ್ಲಿ ಒಳಗೊಂಡಿಲ್ಲ ಎಂದರು.
ಹಲವು ರೋಗಿಗಳು ಅಜಿತ್ರೋಮೈಸಿನ್ ಬಳಕೆಗೆ ಒತ್ತಾಯಿಸುತ್ತಾರೆ, ಆದರೆ ಮಾರ್ಗದರ್ಶಿಗಳು ಈ ಮಾತ್ರೆಗಳ ಬಳಕೆಯನ್ನು ಉತ್ತೇಜಿಸುವುದಿಲ್ಲ. ರೆವಿಡಾಕ್ಸ್ ಬಗ್ಗೆಯೂ ಇಂತಹದೇ ಸೂಚನೆಗಳನ್ನು ನೀಡಲಾಗಿದೆ. ಮನೆಯಲ್ಲಿ ಐಸೋಲೇಶನ್ನಿನಲ್ಲಿರುವಾಗ ರೆವಿಡಾಕ್ಸ್ ಬಳಸುವುದನ್ನು ಶಿಫಾರಸು ಮಾಡುವಂತಿಲ್ಲ ಎಂದೂ ವೈದ್ಯರು ಹೇಳಿದರು.
ಚರ್ಚೆಯಲ್ಲಿ ಉಭಯ ತಜ್ಞರೂ, ಮನೆಯಲ್ಲಿ ಐಸೋಲೇಶನ್ನಿನಲ್ಲಿರುವಾಗ ವೈದ್ಯರ ಸಲಹೆ ಪಡೆಯದೆ ಯಾವುದೇ ಔಷಧಿ ಸೇವಿಸಬಾರದು ಎಂದು ಸ್ಪಷ್ಟವಾಗಿ ಹೇಳಿದರು.
***
(Release ID: 1718905)
Visitor Counter : 520