ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್ ಮತ್ತು ಲಸಿಕೆ ಸಂಬಂಧಿತ ಪರಿಸ್ಥಿತಿ ಕುರಿತ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಮಂತ್ರಿ

ಮಾರ್ಚ್ ಆದಿಯಲ್ಲಿ ವಾರಕ್ಕೆ ಸುಮಾರು 50 ಲಕ್ಷ ಇದ್ದ ಪರೀಕ್ಷೆ ಈಗ ಹೆಚ್ಚಳವಾಗಿದ್ದು, ವಾರಕ್ಕೆ ಸುಮಾರು 1.3 ಕೋಟಿ ಪರೀಕ್ಷೆಗೆ ತಲುಪಿದೆ

ಸ್ಥಳೀಯ ಕಂಟೈನ್ಮೆಂಟ್ ಕಾರ್ಯತಂತ್ರ ಈಹೊತ್ತಿನ ಅಗತ್ಯವಾಗಿದೆ: ಪ್ರಧಾನಮಂತ್ರಿ

ಹೆಚ್ಚಿನ ಸೋಂಕು ದರ ಇರುವ ಪ್ರದೇಶಗಳಲ್ಲಿ ಪರೀಕ್ಷೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಸೂಚನೆ

ಮನೆ ಮನೆ ಪರೀಕ್ಷೆ ಮತ್ತು ನಿಗಾದ ಮೇಲೆ ಗಮನ ಹರಿಸಲು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಆರೈಕೆ ಸಂಪನ್ಮೂಲವನ್ನು ಹೆಚ್ಚಿಸುವಂತೆ ತಿಳಿಸಿದ ಪ್ರಧಾನಮಂತ್ರಿ

ಗ್ರಾಮೀಣ ಪ್ರದೇಶಗಳಲ್ಲಿ ಹೋರಾಟಕ್ಕೆ ಬಲ ನೀಡಲು ಎಲ್ಲ ಅಗತ್ಯ ಸಾಧನಗಳೊಂದಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಸಬಲೀಕರಿಸಿ: ಪ್ರಧಾನಮಂತ್ರಿ

ಗ್ರಾಮೀಣ ಪ್ರದೇಶಗಳಲ್ಲಿ ಆಮ್ಲಜನಕ ಪೂರೈಕೆ ಸೂಕ್ತವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಮುಖ್ಯ: ಪ್ರಧಾನಮಂತ್ರಿ

ವೆಂಟಿಲೇಟರ್ ಮತ್ತು ಇತರ ಸಾಧನಗಳ ಕಾರ್ಯಾಚರಣೆಗೆ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ತರಬೇತಿ ಒದಗಿಸಬೇಕು: ಪ್ರಧಾನಮಂತ್ರಿ

Posted On: 15 MAY 2021 2:28PM by PIB Bengaluru

ದೇಶದಲ್ಲಿ ಕೋವಿಡ್ ಮತ್ತು ಲಸಿಕೆ ಸಂಬಂಧಿತ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ವಹಿಸಿದ್ದರು.ಅಧಿಕಾರಿಗಳು ಪ್ರಧಾನಮಂತ್ರಿಯವರಿಗೆ ದೇಶದಲ್ಲಿ ಕೋವಿಡ್ ಸಂಬಂಧಿತ ಪರಿಸ್ಥಿತಿಯ ಬಗ್ಗೆ ವಿವರ ನೀಡಿದರು ದೇಶದಲ್ಲಿ ಪರೀಕ್ಷೆಯನ್ನು ತ್ವರಿತವಾಗಿ ಹೆಚ್ಚಿಸಲಾಗಿದ್ದು, ಮಾರ್ಚ್ ಆದಿಯಲ್ಲಿ ವಾರಕ್ಕೆ 50 ಲಕ್ಷ ಇದ್ದ ಪರೀಕ್ಷೆಯ ಸಂಖ್ಯೆ ಈಗ ವಾರಕ್ಕೆ 1.3 ಕೋಟಿ ಪರೀಕ್ಷೆಗೆ ತಲುಪಿದೆ ಎಂದು ಅಧಿಕಾರಿಗಳು ಪ್ರಧಾನಮಂತ್ರಿಯವರಿಗೆ ತಿಳಿಸಿದರು, ಕ್ರಮೇಣ ಇಳಿಮುಖವಾಗುತ್ತಿರುವ ಪರೀಕ್ಷೆಯಲ್ಲಿನ ಸೋಂಕಿನ ದರ ಮತ್ತು ಹೆಚ್ಚಳವಾಗುತ್ತಿರುವ ಚೇತರಿಕೆ ದರದ ಬಗ್ಗೆ ಪ್ರಧಾನಮಂತ್ರಿಯವರಿಗೆ ಅವರು ಮಾಹಿತಿ ನೀಡಿದರು. ಪ್ರತಿನಿತ್ಯ 4 ಲಕ್ಷಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದ್ದದ್ದು, ಈಗ ಕೇಂದ್ರಸರ್ಕಾರ, ರಾಜ್ಯ ಸರ್ಕಾರ, ಆರೋಗ್ಯ ಕಾರ್ಯಕರ್ತರ ಪ್ರಯತ್ನದ ಫಲವಾಗಿ ಇಳಿಮುಖವಾಗಿದೆ ಎಂಬ ಕುರಿತು ಚರ್ಚಿಸಲಾಯಿತು.

ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕೋವಿಡ್, ಪರೀಕ್ಷೆ, ಆಮ್ಲಜನಕ ಲಭ್ಯತೆ, ಆರೋಗ್ಯ ಆರೈಕೆ ಮೂಲಸೌಕರ್ಯ, ಲಸಿಕೆ ಮಾರ್ಗಸೂಚಿಯ ಪರಿಸ್ಥಿತಿ ಕುರಿತಂತೆ ಅಧಿಕಾರಿಗಳು ಸವಿವರವಾದ ಪ್ರಾತ್ಯಕ್ಷಿಕೆ ನೀಡಿದರು. ಪ್ರಧಾನಮಂತ್ರಿಯವರು ಸ್ಥಳೀಯ ಕಂಟೈನ್ಮೆಂಟ್ ಕಾರ್ಯತಂತ್ರಗಳು ಅದರಲ್ಲೂ ಜಿಲ್ಲೆಗಳಲ್ಲಿ ಟಿಪಿಆರ್ ಹೆಚ್ಚಿರುವ ರಾಜ್ಯಗಳಲ್ಲಿ ಈ ಹೊತ್ತಿನ ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ಆರ್.ಟಿ.ಪಿ.ಸಿ.ಆರ್. ಮತ್ತು ರಾಪಿಡ್ ಟೆಸ್ಟ್ ಎರಡನ್ನೂ ಬಳಸಿಕೊಂಡು ಪರೀಕ್ಷೆಯನ್ನು ಇನ್ನೂ ಹೆಚ್ಚಿಸುವ ಅಗತ್ಯವಿದೆ, ವಿಶೇಷವಾಗಿ ಸೋಂಕಿನ ದರ ಹೆಚ್ಚಿರುವ ಪ್ರದೇಶಗಳಲ್ಲಿ ಪರೀಕ್ಷೆ ಹೆಚ್ಚಿಸಬೇಕು ಎಂದು ಪ್ರಧಾನಮಂತ್ರಿ ಸೂಚಿಸಿದರು. ತಮ್ಮ ಪ್ರಯತ್ನಗಳ ನಡುವೆಯೂ ಹೆಚ್ಚಿನ ಸಂಖ್ಯೆ ಬರುತ್ತಿರುವ ಬಗ್ಗೆ ಯಾವುದೇ ಒತ್ತಡ ಇಲ್ಲದೆ ರಾಜ್ಯಗಳು ಪಾರದರ್ಶಕವಾಗಿ ಸಂಖ್ಯೆಯನ್ನು ವರದಿ ಮಾಡಲು ಉತ್ತೇಜಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಮನೆ ಮನೆ ಬಾಗಿಲಲ್ಲೇ ಪರೀಕ್ಷೆ ನಡೆಸಲು ಮತ್ತು ನಿಗಾ ಇಡುವತ್ತ ಗಮನಹರಿಸಲು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸಂಪನ್ಮೂಲಗಳನ್ನು ಹೆಚ್ಚಿಸಲು ಪ್ರಧಾನಮಂತ್ರಿ ಸೂಚಿಸಿದರು. ಆಶಾ ಮತ್ತು ಅಂಗನವಾಡಿ ಕಾರ್ಮಿಕರನ್ನು ಅಗತ್ಯವಿರುವ ಎಲ್ಲ ಸಾಧನಗಳೊಂದಿಗೆ ಸಬಲೀಕರಣಗೊಳಿಸುವ ಬಗ್ಗೆಯೂ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಗೃಹದಲ್ಲೇ ಪ್ರತ್ಯೇಕವಾಗಿರುವ ಮತ್ತು ಚಿಕಿತ್ಸೆಗೆ ಸಚಿತ್ರ ಮಾರ್ಗಸೂಚಿಗಳನ್ನು ಸರಳ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡಲು ಪ್ರಧಾನಮಂತ್ರಿ ತಿಳಿಸಿದರು.

ಆಮ್ಲಜನಕ ಸಾಂಧ್ರಕಗಳ ಅವಕಾಶವೂ ಸೇಹಿತಂತೆ ಗ್ರಾಮೀಣ ಪ್ರದೇಶಗಳಲ್ಲಿ ಆಮ್ಲಜನಕದ ಪೂರೈಕೆ, ವಿತರಣೆಯನ್ನು ಖಾತ್ರಿಪಡಿಸುವ ಯೋಜನೆಯ ಬಗ್ಗೆ ಪ್ರಧಾನಮಂತ್ರಿಯವರು ನಿರ್ದೇಶನ ನೀಡಿದರು. ವೈದ್ಯಕೀಯ ಸಲಕರಣೆಗಳ ಕಾರ್ಯಾಚರಣೆಯ ಬಗ್ಗೆ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ತರಬೇತಿ ನೀಡುವ ಮತ್ತು ಅಂತಹ ವೈದ್ಯಕೀಯ ಸಲಕರಣೆಗಳು ಸುಗಮವಾಗಿ ಕಾರ್ಯನಿರ್ವಹಿಸಲು ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸುವಂತೆಯೂ ಪ್ರಧಾನಮಂತ್ರಿ ತಿಳಿಸಿದರು.

ಕೆಲವು ರಾಜ್ಯಗಳಲ್ಲಿ ವೆಂಟಿಲೇಟರ್ ಗಳು ಬಳಕೆಯಾಗದೆ ಗೋದಾಮಿನಲ್ಲಿ ಬಿದ್ದಿವೆ ಎಂದು ಬಂದಿರುವ ಕೆಲವು ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಮಂತ್ರಿಯವರು, ಕೇಂದ್ರ ಸರ್ಕಾರವು ಒದಗಿಸಿರುವ ವೆಂಟಿಲೇಟರ್‌ ಗಳ ಸ್ಥಾಪನೆ ಮತ್ತು ಕಾರ್ಯಾಚರಣೆಯ ಕುರಿತು ತಕ್ಷಣವೇ ಲೆಕ್ಕಪರಿಶೋಧನೆ ನಡೆಸಬೇಕು ಎಂದು ನಿರ್ದೇಶಿಸಿದರು. ವೆಂಟಿಲೇಟರ್‌ ಗಳು ಸರಿಯಾಗಿ ಕಾರ್ಯನಿರ್ವಹಿಸಲು ಆರೋಗ್ಯ ಕಾರ್ಯಕರ್ತರಿಗೆ ಪುನರ್ ತರಬೇತಿ ಅಗತ್ಯವಿದ್ದರೆ ನೀಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

ಕೋವಿಡ್ ವಿರುದ್ಧ ಭಾರತದ ಹೋರಾಟಕ್ಕೆ ಆದ್ಯಂತವಾಗಿ ವಿಜ್ಞಾನಿಗಳು ಮತ್ತು ವಿಷಯ ತಜ್ಞರು ಮಾರ್ಗದರ್ಶನ ನೀಡಿದ್ದಾರೆ ಮತ್ತು ಮುಂದೆಯೂ ಅವರ ಮಾರ್ಗದರ್ಶನದಲ್ಲಿ ಸಿಗಲಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.

ಪ್ರಧಾನಮಂತ್ರಿಯವರಿಗೆ ಲಸಿಕೆಯ ಪ್ರಕ್ರಿಯೆ ಮತ್ತು 45+ ವಯೋಮಾನದವರಿಗೆ ರಾಜ್ಯವಾರು ನೀಡಿರುವ ಲಸಿಕೆ ಬಗ್ಗೆ ವಿವರಿಸಲಾಯಿತು. ಮುಂದಿನ ದಿನಗಳಲ್ಲಿ ಲಭ್ಯವಾಗುವ ಲಸಿಕೆಯ ಮಾರ್ಗಸೂಚಿಯ ಬಗ್ಗೆಯೂ ಚರ್ಚಿಸಲಾಯಿತು. ಲಸಿಕೆಯನ್ನು ತ್ವರಿತಗೊಳಿಸಲು ರಾಜ್ಯಗಳೊಂದಿಗೆ ಆಪ್ತವಾಗಿ ಶ್ರಮಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.

***(Release ID: 1718851) Visitor Counter : 37