ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
2021ರ ಜೂ.1ರಿಂದ ಅನ್ವಯವಾಗುವಂತೆ ಯುಡಿಐಡಿ ಪೋರ್ಟಲ್ ಮೂಲಕ ದಿವ್ಯಾಂಗರಿಗೆ ಆನ್ ಲೈನ್ ಮೂಲಕ ಪ್ರಮಾಣಪತ್ರ ವಿತರಣೆ ಕಡ್ಡಾಯ
Posted On:
06 MAY 2021 2:50PM by PIB Bengaluru
ಭಾರತ ಸರ್ಕಾರದ ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆ (ಡಿಇಪಿಡಬ್ಲ್ಯೂಡಿ) ದಿನಾಂಕ 05.05.2021ರಂದು ಗೆಜೆಟ್ ಅಧಿಸೂಚನೆ ಸಂಖ್ಯೆ ಎಸ್ಒ 1736(ಇ) ಹೊರಡಿಸಿ, 2021ರ ಜೂನ್ 1 ರಿಂದ ಅನ್ವಯವಾಗುವಂತೆ ಕೇವಲ ಯುಡಿಐಡಿ ಪೋರ್ಟಲ್ ಮಾತ್ರ ಬಳಸಿ, ಆನ್ ಲೈನ್ ಮೂಲಕವೇ ವಿಶೇಷಚೇತನರಿಗೆ ಪ್ರಮಾಣಪತ್ರಗಳನ್ನು ವಿತರಿಸುವುದನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಡ್ಡಾಯಗೊಳಿಸಿದೆ.
ಆರ್ ಪಿಡಬ್ಲ್ಯೂಡಿ ಕಾಯಿದೆ 2016ರ ಅನ್ವಯ ಕೇಂದ್ರ ಸರ್ಕಾರ, ವಿಶೇಷ ಚೇತನ ವ್ಯಕ್ತಿಗಳ ಹಕ್ಕು ನಿಯಮ 2017ಅನ್ನು 15.06.2017ರಂದು ಅಧಿಸೂಚನೆ ಹೊರಡಿಸಿತು. ನಿಯಮ 18(5)ರ ಅನ್ವಯ ಆನ್ ಲೈನ್ ವಿಧಾನದ ಮೂಲಕ ವಿಶೇಷಚೇತನರಿಗೆ ಪ್ರಮಾಣಪತ್ರಗಳನ್ನು ವಿತರಿಸುವುದನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ದಿನಾಂಕವನ್ನು ನಿಗದಿಪಡಿಸಬೇಕಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರ ನೇತೃತ್ವದ ವಿಶೇಷಚೇತನರ ಕೇಂದ್ರೀಯ ಸಲಹಾ ಮಂಡಳಿ ಕಳೆದ 26.11.2020ರಂದು ನಡೆದ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಿತ್ತು ಮತ್ತು ವಿಶೇಷಚೇತನರಿಗೆ ಆನ್ ಲೈನ್ ಪ್ರಮಾಣಪತ್ರಗಳನ್ನು 01.04.2021ರಿಂದ ಕಡ್ಡಾಯಗೊಳಿಸುವಂತೆ ಶಿಫಾರಸ್ಸು ಮಾಡಿತ್ತು. ಆದರೆ 2021ರ ಮಾರ್ಚ್ – ಏಪ್ರಿಲ್ ತಿಂಗಳಲ್ಲಿ ಕೆಲವು ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಆನ್ ಲೈನ್ ಪ್ರಮಾಣಪತ್ರಗಳ ವಿತರಣೆಯನ್ನು 01.06.2021ರಿಂದ ಕಡ್ಡಾಯಗೊಳಿಸಲಾಗಿತ್ತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆ ಹಾಗೂ ಈ ವಿಶೇಷಚೇತನರ ವಿಷಯಗಳನ್ನು ನೋಡಿಕೊಳ್ಳುವl ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ಈ ಅಧಿಸೂಚನೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಯುಡಿಐಡಿ ಯೋಜನೆ 2016ರಿಂದ ಜಾರಿಯಲ್ಲಿದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಬಂಧಿಸಿದ ಅಧಿಕಾರಿಗಳಿಗೆ ಯುಡಿಐಡಿ ಪೋರ್ಟಲ್ (www.swavlambancard.gov.in) ಕಾರ್ಯದ ಬಗ್ಗೆ ಡಿಇಪಿಡಬ್ಲ್ಯೂಡಿಯಿಂದ ಅಗತ್ಯ ತರಬೇತಿಯನ್ನು ನೀಡಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆನ್ ಲೈನ್ ಪದ್ಧತಿಗೆ ವರ್ಗಾವಣೆಗೊಳ್ಳಲು ಅಗತ್ಯ ಸಮಯವನ್ನು ನೀಡಲಾಗಿತ್ತು. 01.06.2021ರಿಂದ ಸಂಪೂರ್ಣವಾಗಿ ಡಿಜಿಟಲ್ ವಿಧಾನದಲ್ಲೇ ವಿಶೇಷಚೇತನರ ಪ್ರಮಾಣಪತ್ರವನ್ನು ನೀಡಬೇಕು ಎಂದು ಸೂಚಿಸಲಾಗಿದೆ. ಇದರಿಂದ ಭಾರತದಾದ್ಯಂತ ಎಲ್ಲೆಡೆ ಮಾನ್ಯವಾಗುವ ಪ್ರಮಾಣಪತ್ರಗಳ ನೈಜತೆ ಬಗ್ಗೆ ಪರಿಶೀಲನೆಗೆ ಸೂಕ್ತ ಕಾರ್ಯತಂತ್ರ ಲಭ್ಯವಾಗಲಿದೆ ಹಾಗೂ ದಿವ್ಯಾಂಗ ಜನರ ಅನುಕೂಲಕ್ಕಾಗಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಲಾಗಿದೆ.
****
(Release ID: 1716506)
Visitor Counter : 322