ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಐರೋಪ್ಯ ಆಯೋಗದ ಅಧ್ಯಕ್ಷೆ ಘನತೆವೆತ್ತ ಉರ್ಸುಲಾ ವೋನ್ ಡೆರ್ ಲೆಯೇನ್ ನಡುವೆ ದೂರವಾಣಿ ಸಂಭಾಷಣೆ

Posted On: 03 MAY 2021 2:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐರೋಪ್ಯ ಆಯೋಗದ ಅಧ್ಯಕ್ಷೆ ಘನತೆವೆತ್ತ ಉರ್ಸುಲಾ ವೋನ್ ಡೆರ್ ಲೆಯೇನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಇಬ್ಬರೂ ನಾಯಕರು, ಭಾರತದಲ್ಲಿ ಕೋವಿಡ್ -19 ಎರಡನೇ ಅಲೆಯ ನಿಗ್ರಹದ ಪ್ರಯತ್ನಗಳೂ ಸೇರಿದಂತೆ ಭಾರತ ಮತ್ತು ಐರೋಪ್ಯ ಒಕ್ಕೂಟದಲ್ಲಿನ ಕೋವಿಡ್ -19 ಪರಿಸ್ಥಿತಿಯ ಬಗ್ಗೆ ವಿಚಾರ ವಿನಿಮಯ ನಡೆಸಿದರು.

ಭಾರತದಲ್ಲಿ ಕೋವಿಡ್ -19 ಎರಡನೇ ಅಲೆಯ ವಿರುದ್ಧ ಹೋರಾಟಕ್ಕೆ ತಕ್ಷಣ ನೆರವಿನ ಬೆಂಬಲ ಸಂಘಟಿಸಿದ ಐರೋಪ್ಯ ಒಕ್ಕೂಟ ಮತ್ತು ಅದರ ಸದಸ್ಯ ರಾಷ್ಟ್ರಗಳ ಬಗ್ಗೆ ಪ್ರಧಾನಮಂತ್ರಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ ಜುಲೈ ಶೃಂಗಸಭೆಯ ಬಳಿಕ ಭಾರತ ಮತ್ತು ಐರೋಪ್ಯ ಒಕ್ಕೂಟದ ವ್ಯೂಹಾತ್ಮಕ ಪಾಲುದಾರಿಕೆಯು ನವೀಕೃತ ವೇಗವನ್ನು ಪಡೆದುಕೊಂಡಿದೆ ಎಂದು ಅವರುಗಳು ಉಲ್ಲೇಖಿಸಿದರು. ವರ್ಚುವಲ್ ವಿಧಾನದಲ್ಲಿ 2021 ಮೇ 8ರಂದು ನಡೆಯಲಿರುವ ಭಾರತ ಐರೋಪ್ಯ ಒಕ್ಕೂಟಗಳ ನಾಯಕರ ಸಭೆ, ಹಾಲಿ ಇರುವ ಭಾರತ ಐರೋಪ್ಯ ಒಕ್ಕೂಟದ ಬಹುಮುಖಿ ಬಾಂಧವ್ಯಕ್ಕೆ ನವೀಕೃತ ವೇಗವನ್ನು ನೀಡಲು ಮಹತ್ವದ ಅವಕಾಶವಾಗಿದೆ ಎಂಬುದಕ್ಕೆ ಇಬ್ಬರೂ ನಾಯಕರು ಸಮ್ಮತಿ ಸೂಚಿಸಿದರು.

ಭಾರತ ಐರೋಪ್ಯ ಒಕ್ಕೂಟದ ನಾಯಕರುಗಳ ಸಭೆಯು ಇಯು +27 ಸ್ವರೂಪದಲ್ಲಿ ನಡೆಯುತ್ತಿರುವ ಪ್ರಥಮ ಸಭೆಯಾಗಿದೆ ಮತ್ತು ಭಾರತ- ಐರೋಪ್ಯ ಒಕ್ಕೂಟದ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಎರಡೂ ಕಡೆಯವರ ಹಂಚಿಕೆಯ ಆಶಯಗಳನ್ನು ಬಿಂಬಿಸುತ್ತದೆ.

***(Release ID: 1715739) Visitor Counter : 1