ಪ್ರಧಾನ ಮಂತ್ರಿಯವರ ಕಛೇರಿ

ಆಕ್ಸಿಜನ್ ಲಭ್ಯತೆ ಮತ್ತು ಪೂರೈಕೆ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಮಂತ್ರಿ

Posted On: 22 APR 2021 3:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ದೇಶಾದ್ಯಂತ ಆಕ್ಸಿಜನ್ ಪೂರೈಕೆ ಪರಿಶೀಲನೆ ಮತ್ತು ಅದರ ಲಭ್ಯತೆಯನ್ನು ಹೆಚ್ಚಿಸುವ ಮಾರ್ಗೋಪಾಯಗಳ ಕುರಿತಂತೆ ಉನ್ನತ ಮಟ್ಟದ ಸಭೆ ನಡೆಯಿತು. ಕಳೆದ ಕೆಲವು ವಾರಗಳಿಂದೀಚೆಗೆ ಆಕ್ಸಿಜನ್ ಪೂರೈಕೆ ಸುಧಾರಣೆಗೆ ಕೈಗೊಂಡಿರುವ ಕ್ರಮಗಳನ್ನು ಅಧಿಕಾರಿಗಳು ಪ್ರಧಾನಿ ಅವರಿಗೆ ವಿವರಿಸಿದರು.

ಪ್ರಧಾನಮಂತ್ರಿ ಅವರು, ಆಕ್ಸಿಜನ್ ಉತ್ಪಾದನೆ ಹೆಚ್ಚಳ; ಹಂಚಿಕೆ ವೇಗ ಹೆಚ್ಚಳ ಮತ್ತು ಆರೋಗ್ಯ ಸೌಕರ್ಯಗಳಿಗೆ ಆಕ್ಸಿಜನ್ ಪೂರೈಕೆಗೆ ನವೀನ ಮಾರ್ಗಗಳನ್ನು ಅನುಸರಿಸುವುದು ಸೇರಿದಂತೆ ಕ್ಷಿಪ್ರವಾಗಿ ಕೈಗೊಳ್ಳಬೇಕಾಗಿರುವ ಬಹು ಆಯಾಮದ ಕಾರ್ಯಗಳ ಅಗತ್ಯತೆ ಬಗ್ಗೆ ಮಾತನಾಡಿದರು.

ಆಕ್ಸಿಜನ್ ಬೇಡಿಕೆ ಗುರುತಿಸಲು ಮತ್ತು ಅದಕ್ಕೆ ತಕ್ಕಂತೆ ಸಮರ್ಪಕ ಪೂರೈಕೆ ಖಾತ್ರಿಪಡಿಸಲು ರಾಜ್ಯಗಳ ಸಮನ್ವಯದೊಂದಿಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಜ್ಯಗಳಲ್ಲಿ ಹೇಗೆ ಸ್ಥಿರವಾಗಿ ಆಕ್ಸಿಜನ್ ಪೂರೈಕೆ ಹೆಚ್ಚಳವಾಗುತ್ತಿದೆ ಎಂಬ ಕುರಿತು ಪ್ರಧಾನಮಂತ್ರಿಗಳಿಗೆ ತಿಳಿಸಲಾಯಿತು. ಪ್ರಸ್ತುತ 20 ರಾಜ್ಯಗಳಲ್ಲಿ ಪ್ರತಿ ದಿನ 6,785 ಎಂಟಿ ದ್ರವೀಕೃತ ವೈದ್ಯಕೀಯ ಆಕ್ಸಿಜನ್ ಬೇಡಿಕೆ ಇದ್ದು, ಭಾರತ ಸರ್ಕಾರ ಈ ರಾಜ್ಯಗಳಿಗೆ ಏಪ್ರಿಲ್ 21ರಂದು ಪ್ರತಿ ದಿನ 6,822 ಎಂಟಿ ಆಕ್ಸಿಜನ್ ಹಂಚಿಕೆ ಮಾಡಿದೆ.

ಸಾರ್ವಜನಿಕ ಮತ್ತು ಖಾಸಗಿ ಉಕ್ಕು ಘಟಕಗಳು, ಕೈಗಾರಿಕೆಗಳು, ಆಕ್ಸಿಜನ್ ಉತ್ಪಾದಕರು ಅಗತ್ಯೇತರ ಉದ್ದಿಮೆಗಳಿಗೆ ಆಕ್ಸಿಜನ್ ಪೂರೈಕೆಯನ್ನು ನಿಷೇಧಿಸುವ ಮೂಲಕ ನೆರವು ನೀಡುತ್ತಿರುವುದರಿಂದ ಕಳೆದ ಕೆಲವು ದಿನಗಳಿಂದೀಚೆಗೆ ದ್ರವೀಕೃತ ಆಕ್ಸಿಜನ್ ಲಭ್ಯತೆ ಪ್ರಮಾಣ ಪ್ರತಿ ದಿನ 3,300 ಎಂಟಿಗೆ ಏರಿಕೆಯಾಗಿದೆ.

ಆದಷ್ಟು ಶೀಘ್ರ ರಾಜ್ಯಗಳಿಗೆ ಅನುಮೋದಿಸಿರುವ ಪಿಎಸ್ಎ ಆಕ್ಸಿಜನ್ ಘಟಕಗಳು ಕಾರ್ಯಾಚರಣೆ ಮಾಡಲಿವೆ ಎಂದು ಅಧಿಕಾರಿಗಳು ಪ್ರಧಾನಮಂತ್ರಿ ಅವರಿಗೆ ತಿಳಿಸಿದರು.

ಹಲವು ರಾಜ್ಯಗಳಿಗೆ ಸುಗಮ ಮತ್ತು ಯಾವುದೇ ಅಡೆತಡೆ ಇಲ್ಲದೆ ಆಕ್ಸಿಜನ್ ಪೂರೈಕೆ ಖಾತ್ರಿಪಡಿಸುವಂತೆ ಪ್ರಧಾನಮಂತ್ರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಒಂದು ವೇಳೆ ಯಾವುದೇ ಅಡೆತಡೆ ಉಂಟಾದರೆ ಸ್ಥಳೀಯ ಆಡಳಿತವನ್ನೇ ಹೊಣೆಯನ್ನಾಗಿ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು. ಆಕ್ಸಿಜನ್ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ನವೀನ ಮಾರ್ಗಗಳನ್ನು ಅನ್ವೇಷಿಸುವಂತೆ ಪ್ರಧಾನಮಂತ್ರಿ ಅವರು ಸಚಿವಾಲಯಗಳಿಗೆ ಸೂಚಿಸಿದರು.

ನೈಟ್ರೋಜನ್ ಮತ್ತು ಆರ್ಗೋನ್ ಟ್ಯಾಂಕರ್ ಗಳನ್ನು ಕ್ರಯೋಜನಿಕ್ ಟ್ಯಾಂಕರ್ ಗಳನ್ನಾಗಿ ಪರಿವರ್ತನೆ ಮಾಡುವುದು, ಆಮದು ಮಾಡಿಕೊಳ್ಳುವುದು, ಟ್ಯಾಂಕರ್ ಗಳನ್ನು ವಿಮಾನದ ಮೂಲಕ ಸಾಗಿಸುವುದು ಹಾಗೂ ಅವುಗಳ ಉತ್ಪಾದನೆಗೆ ಒತ್ತು ನೀಡಿರುವುದು ಸೇರಿ ಒಟ್ಟಾರೆ ಲಭ್ಯತೆ ಹೆಚ್ಚಳಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ರಾಜ್ಯಗಳಿಗೆ ತ್ವರಿತವಾಗಿ ಆಕ್ಸಿಜನ್ ಸಾಗಣೆ ಖಾತ್ರಿಪಡಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಅವರು ಬಲವಾಗಿ ಪ್ರತಿಪಾದಿಸಿದರು. ದೀರ್ಘ ದೂರದವರೆಗೆ ಟ್ಯಾಂಕರ್ ಗಳ ಮೂಲಕ ಯಾವುದೇ ನಿಲುಗಡೆ ಇಲ್ಲದೆ ಕ್ಷಿಪ್ರವಾಗಿ ಆಕ್ಸಿಜನ್ ಪೂರೈಕೆಗೆ ರೈಲ್ವೆಯನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. 105 ಎಂಟಿ ಎಲ್ಎಂಒ ಹೊತ್ತ ಮೊದಲನೇ ರೇಕ್ ಮುಂಬೈನಿಂದ ವೈಜಾಗ್ ತಲುಪಿದೆ. ಅದೇ ರೀತಿ ಖಾಲಿ ಆಕ್ಸಿಜನ್ ಟ್ಯಾಂಕರ್ ಗಳನ್ನು ವಿಮಾನದ ಮೂಲಕ ತಂದು ಆಕ್ಸಿಜನ್ ಪೂರೈಕೆಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಆಗುವ ಪಯಣದ ಸಮಯವನ್ನು ತಗ್ಗಿಸಲಾಗುತ್ತಿದೆ.

ವೈದ್ಯಕೀಯ ಸಮುದಾಯದ ಪ್ರತಿನಿಧಿಗಳು, ನ್ಯಾಯಯುತವಾಗಿ ಆಕ್ಸಿಜನ್ ಬಳಕೆ ಮತ್ತು ಕೆಲವು ರಾಜ್ಯಗಳಲ್ಲಿ ಹೇಗೆ ಆಕ್ಸಿಜನ್ ಆಡಿಟ್ ನಿಂದಾಗಿ ರೋಗಿಗಳಿಗೆ ಯಾವುದೇ ತೊಂದೆಯಾಗದೆ ಆಕ್ಸಿಜನ್ ಬೇಡಿಕೆ ತಗ್ಗಿದೆ ಎಂಬುದನ್ನು ವಿವರಿಸಿದರು.

ಅಲ್ಲದೆ ಪ್ರಧಾನಮಂತ್ರಿಗಳು, ಅಕ್ರಮ ದಾಸ್ತಾನಿನ ವಿರುದ್ಧ ರಾಜ್ಯಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.

ಸಭೆಯಲ್ಲಿ ಕೇಂದ್ರ ಸಂಪುಟ ಕಾರ್ಯದರ್ಶಿ, ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ರಸ್ತೆ ಸಾರಿಗೆ ಸಚಿವಾಲಯ, ಫಾರ್ಮಸಿಟಿಕಲ್, ನೀತಿ ಆಯೋಗದ ಅಧಿಕಾರಿಗಳು ಭಾಗವಹಿಸಿದ್ದರು.

***(Release ID: 1713454) Visitor Counter : 277