ಪ್ರಧಾನ ಮಂತ್ರಿಯವರ ಕಛೇರಿ
ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ 95ನೇ ವಾರ್ಷಿಕ ಸಭೆ ಮತ್ತು ಕುಲಪತಿಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ನಾಲ್ಕು ಕೃತಿಗಳು ಬಿಡುಗಡೆ
ಭಾರತೀಯ ಪ್ರಜಾಪ್ರಭುತ್ವ ಪರಂಪರೆ ಬಲವರ್ಧನೆ ಮತ್ತು ದೇಶವನ್ನು ಮುನ್ನಡೆಸಲು ಬಾಬಾ ಸಾಹೇಬ್ ಭದ್ರ ಬುನಾದಿ ಹಾಕಿದ್ದಾರೆ: ಪ್ರಧಾನಮಂತ್ರಿ
ಸರ್ಕಾರದ ಯೋಜನೆಗಳ ಮೂಲಕ ಬಾಬಾ ಸಾಹೇಬ್ ಅವರ ಸಮಾನ ಅವಕಾಶಗಳು ಮತ್ತು ಸಮಾನ ಹಕ್ಕುಗಳ ಕನಸುಗಳು ಸಾಕಾರ: ಪ್ರಧಾನಮಂತ್ರಿ
ಎಲ್ಲ ವಿಶ್ವವಿದ್ಯಾಲಯಗಳು ಬಹುಶಿಸ್ತೀಯವಾಗಬೇಕು ಮತ್ತು ವಿದ್ಯಾರ್ಥಿಗಳ ಅಗತ್ಯಗಳಿಗೆ ಹೊಂದಿಕೊಳ್ಳಬೇಕೆಂಬುದು ನಮ್ಮ ಬಯಕೆ: ಪ್ರಧಾನಮಂತ್ರಿ
Posted On:
14 APR 2021 12:41PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ 95ನೇ ವಾರ್ಷಿಕ ಸಭೆ ಮತ್ತು ಕುಲಪತಿಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದರು. ಅಲ್ಲದೆ ಪ್ರಧಾನಮಂತ್ರಿ ಅವರು ಶ್ರೀ ಕಿಶೋರ್ ಮಕ್ವಾನಾ ಅವರು ಸಂಪಾದಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ನಾಲ್ಕು ಕೃತಿಗಳನ್ನು ಬಿಡುಗಡೆ ಮಾಡಿದರು. ಗುಜರಾತ್ ನ ರಾಜ್ಯಪಾಲರು, ಮುಖ್ಯಮಂತ್ರಿ, ಶಿಕ್ಷಣ ಸಚಿವರು ಮತ್ತು ಕೇಂದ್ರ ಶಿಕ್ಷಣ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಹಮದಾಬಾದ್ ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಪ್ರಧಾನಮಂತ್ರಿ ಅವರು, ಭಾರತರತ್ನ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರಿಗೆ ರಾಷ್ಟ್ರದ ಪರವಾಗಿ ಗೌರವ ಸಲ್ಲಿಸಿದರು ಮತ್ತು ಆಜಾದಿ ಕ ಅಮೃತ ಮಹೋತ್ಸವವನ್ನು ದೇಶದೆಲ್ಲೆಡೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಇಂದು ಜಯಂತಿ ಆಚರಣೆ ನಮಗೆ ಹೊಸ ಶಕ್ತಿಯನ್ನು ನೀಡಿದೆ ಎಂದರು.
ಭಾರತ ಜಗತ್ತಿನ ಪ್ರಜಾಪ್ರಭುತ್ವದ ತಾಯಿ ಇದ್ದಂತೆ ಮತ್ತು ಪ್ರಜಾಪ್ರಭುತ್ವ ನಮ್ಮ ನಾಗರಿಕತೆಯ ಅವಿಭಾಜ್ಯ ಅಂಗ ಮತ್ತು ಅದು ನಮ್ಮ ಜೀವನ ಪದ್ಧತಿಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದರು. ಬಾಬಾ ಸಾಹೇಬ್ ಅವರು, ಭಾರತದ ಪ್ರಜಾಪ್ರಭುತ್ವ ಪರಂಪರೆ ಬಲವರ್ಧನೆಗೆ ಮತ್ತು ದೇಶ ಮುನ್ನಡೆ ಸಾಧಿಸಲು ಬಲಿಷ್ಠ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.
ಬಾಬಾ ಸಾಹೇಬ್ ಅವರ ಸಿದ್ಧಾಂತಗಳ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ ಅವರು, ಡಾ. ಅಂಬೇಡ್ಕರ್ ಅವರು ಜ್ಞಾನ, ಸ್ವಾಭಿಮಾನ ಮತ್ತು ಸಭ್ಯತೆ ಈ ಮೂರು ಪವಿತ್ರ ದೇವತೆಗಳೆಂದು ಪರಿಗಣಿಸಿದ್ದರು. ಸ್ವಾಭಿಮಾನದಿಂದ ಜ್ಞಾನ ಬರುತ್ತದೆ ಮತ್ತು ಅದು ವ್ಯಕ್ತಿಯನ್ನು ಆತ ಅಥವಾ ಆಕೆಯ ಹಕ್ಕುಗಳ ಬಗ್ಗೆ ತಿಳಿಸುತ್ತದೆ. ಸಮಾನ ಹಕ್ಕುಗಳ ಮೂಲಕ ಸಾಮಾಜಿಕ ಸೌಹಾರ್ದ ಹುಟ್ಟುತ್ತದೆ ಮತ್ತು ದೇಶ ಪ್ರಗತಿ ಹೊಂದುತ್ತದೆ. ಡಾ. ಬಾಬಾ ಸಾಹೇಬ್ ಅವರು ತೋರಿದ ಹಾದಿಯಲ್ಲಿ ದೇಶವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಶಿಕ್ಷಣ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳ ಮೇಲಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಪ್ರಧಾನಮಂತ್ರಿ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತನ್ನದೇ ಆದ ಸಾಮರ್ಥ್ಯಗಳಿರುತ್ತವೆ. ಈ ಸಾಮರ್ಥ್ಯಗಳು ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಶಿಕ್ಷಕರ ಮುಂದೆ ಮೂರು ಪ್ರಶ್ನೆಗಳನ್ನು ಮುಂದಿಡುತ್ತವೆ. ಮೊದಲನೆಯದಾಗಿ ಅವರು ಏನು ಮಾಡಬಲ್ಲರು ? ಎರಡನೆಯದಾಗಿ ಸೂಕ್ತ ರೀತಿಯಲ್ಲಿ ಬೋಧಿಸಿದರೆ ಅವರ ಸಾಮರ್ಥ್ಯವೇನು ? ಮತ್ತು ಮೂರನೆಯದು ಅವರು ಏನು ಮಾಡಬಯಸುವರು ? ಮೊದಲನೇ ಪ್ರಶ್ನೆಗೆ ಉತ್ತರ ವಿದ್ಯಾರ್ಥಿಯ ಒಳಗಿನ ಆಂತರಿಕ ಶಕ್ತಿಯಾಗಿದೆ. ಆದರೆ ಸಾಂಸ್ಥಿಕ ಬಲವನ್ನು ಆಂತರಿಕ ಶಕ್ತಿಯ ಜೊತೆ ತುಂಬಿದರೆ ಆಗ ಅವರ ಅಭಿವೃದ್ಧಿ ವಿಸ್ತರಣೆಯಾಗಲಿದೆ ಮತ್ತು ಅವರು ಏನನ್ನು ಮಾಡಲು ಬಯಸುತ್ತಾರೋ ಅದನ್ನು ಮಾಡಲು ಸಾಧ್ಯವಾಗುತ್ತದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮಾತನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಡಾ. ರಾಧಾಕೃಷ್ಣನ್ ಅವರು ಶಿಕ್ಷಣ, ವಿದ್ಯಾರ್ಥಿಗಳನ್ನು ಮುಕ್ತಗೊಳಿಸಿ ಅವರ ಬಲವರ್ಧನೆ ಮಾಡುವ ಜೊತೆಗೆ ಅವರು ರಾಷ್ಟ್ರದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತದೆ ಎಂಬ ಕನಸನ್ನು ಹೊಂದಿದ್ದರು. ಅದನ್ನು ನನಸು ಮಾಡುವ ಉದ್ದೇಶವನ್ನು ಎನ್ಇಪಿ ಹೊಂದಿದೆ. ಇಡೀ ವಿಶ್ವವನ್ನು ಒಂದು ಘಟಕವನ್ನಾಗಿ ಪರಿಗಣಿಸಿ, ಶಿಕ್ಷಣ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಭಾರತೀಯ ಸ್ವರೂಪದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಬೆಳೆಯುತ್ತಿರುವ ಆತ್ಮನಿರ್ಭರ ಭಾರತಕ್ಕೆ ಬೇಡಿಕೆ ಇರುವ ಕೌಶಲಗಳು ಹೆಚ್ಚುತ್ತಿರುವ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತವನ್ನು ಭವಿಷ್ಯದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕೇಂದ್ರ, ಇಂಟರ್ ನೆಟ್ ಆಫ್ ಥಿಂಗ್ಸ್, ಬಿಗ್ ಡಾಟಾ, ತ್ರಿಡಿ ಪ್ರಿಂಟಿಂಗ್, ವರ್ಚುವಲ್ ರಿಯಾಲಿಟಿ ಮತ್ತು ರೋಬೋಟಿಕ್ಸ್, ಮೊಬೈಲ್ ಟೆಕ್ನಾಲಜಿ, ಜಿಯೋ ಇನ್ ಫಾರ್ ಮ್ಯಾಟಿಕ್ಸ್, ಸ್ಮಾರ್ಟ್ ಆರೋಗ್ಯ ರಕ್ಷಣೆ ಮತ್ತು ರಕ್ಷಣಾ ವಲಯದ ತಾಣವನ್ನಾಗಿ ಪರಿಗಣಿಸಲಾಗುತ್ತಿದೆ. ಈ ಕೌಶಲಗಳ ಅಗತ್ಯವನ್ನು ಪೂರೈಸಲು ಭಾರತೀಯ ಸಂಸ್ಥೆಗಳು ದೇಶದಲ್ಲಿ ಮೂರು ಪ್ರಮುಖ ಮಹಾನಗರಗಳನ್ನು ಕೈಗೆತ್ತಿಕೊಂಡಿವೆ. ಮುಂಬೈನಲ್ಲಿ ಭಾರತೀಯ ಕೌಶಲ್ಯ ಸಂಸ್ಥೆಯ ಮೊದಲ ಬ್ಯಾಚ್ ತರಗತಿಗಳು ಆರಂಭವಾಗಿವೆ. 2018ರಲ್ಲಿ ನಾಸ್ಕಾಂ ಜೊತೆ ಸೇರಿ ಭವಿಷ್ಯದ ಕೌಶಲ್ಯಗಳ ಉಪಕ್ರಮವನ್ನು ಆರಂಭಿಸಲಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. ಎಲ್ಲ ವಿಶ್ವ ವಿದ್ಯಾಲಯಗಳು ಬಹುಶಿಸ್ತೀಯವಾಗಬೇಕು ಮತ್ತು ಅವು ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಗುರಿ ಸಾಧನೆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಅವರು ಕುಲಪತಿಗಳಿಗೆ ಕರೆ ನೀಡಿದರು.
ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಸಮಾನ ಅವಕಾಶಗಳನ್ನು ಒದಗಿಸುವ ಬಾಬಾ ಸಾಹೇಬ್ ಅವರ ಬದ್ಧತೆ ಕುರಿತಂತೆ ಶ್ರೀ ನರೇಂದ್ರ ಮೋದಿ ವಿಸ್ತೃತವಾಗಿ ತಿಳಿಸಿದರು. ಜನ್-ಧನ್ ಖಾತೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿಯನ್ನು ಹಣಕಾಸು ಸೇರ್ಪಡೆಗೆ ಒಳಪಡಿಸಲಾಯಿತು ಮತ್ತು ಡಿಬಿಟಿ ಹಣ ವರ್ಗಾವಣೆ ಮೂಲಕ ಅವರ ಖಾತೆಗಳಿಗೆ ನೇರ ಹಣ ವರ್ಗಾಯಿಸಲಾಗುತ್ತಿದೆ. ಇಂತಹ ಹಲವು ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಬಾಬಾ ಸಾಹೇಬ್ ಅವರ ಸಂದೇಶವನ್ನು ದೇಶದ ಪ್ರತಿಯೊಬ್ಬ ಜನರಿಗೂ ತಲುಪಿಸುವ ದೇಶದ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಬಾಬಾ ಸಾಹೇಬ್ ಅವರ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳ ಅಭಿವೃದ್ಧಿಯನ್ನು ಪಂಚತೀರ್ಥದ ಮಾದರಿಯಲ್ಲಿ ಕೈಗೊಂಡಿದ್ದು, ಆ ನಿಟ್ಟಿನಲ್ಲಿ ಕಾರ್ಯಗಳು ನಡೆದಿವೆ ಎಂದು ಅವರು ಹೇಳಿದರು. ಜಲಜೀವನ್ ಮಿಷನ್, ಎಲ್ಲರಿಗೂ ಉಚಿತ ವಸತಿ, ಉಚಿತ ವಿದ್ಯುತ್ ಮತ್ತು ಸಾಂಕ್ರಾಮಿಕದ ಸಮಯದಲ್ಲಿ ಬೆಂಬಲ, ಮಹಿಳೆಯರ ಸಬಲೀಕರಣ ಉಪಕ್ರಮಗಳು ಮತ್ತಿತರ ಯೋಜನೆಗಳ ಮೂಲಕ ಬಾಬಾ ಸಾಹೇಬ್ ಅವರ ಕನಸುಗಳನ್ನು ಸಾಕಾರಗೊಳಿಸುವುದನ್ನು ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಅವರು ಇದೇ ವೇಳೆ ಶ್ರೀ ಕಿಶೋರ್ ಮಕ್ವಾನಾ ಅವರು ಬಾಬಾ ಸಾಹೇಬ ಭೀಮರಾವ್ ಅಂಬೇಡ್ಕರ್ ಅವರ ಜೀವನವನ್ನು ಆಧರಿಸಿ ರಚಿಸಿರುವ ನಾಲ್ಕು ಕೃತಿಗಳನ್ನು ಬಿಡುಗಡೆ ಮಾಡಿದರು.
1. ಡಾ. ಅಂಬೇಡ್ಕರ್ ಜೀವನ ದರ್ಶನ
2. ಡಾ. ಅಂಬೇಡ್ಕರ್ ವ್ಯಕ್ತಿ ದರ್ಶನ
3. ಡಾ. ಅಂಬೇಡ್ಕರ್ ರಾಷ್ಟ್ರದರ್ಶನ ಮತ್ತು
4. ಡಾ. ಅಂಬೇಡ್ಕರ್ ಆಯಾಮ ದರ್ಶನ
ಈ ಕೃತಿಗಳು ಆಧುನಿಕ ಕ್ಲಾಸಿಕ್ ಪುಸ್ತಕಗಳಿಗಿಂತ ಕಡಿಮೆಯೇನಲ್ಲ ಮತ್ತು ಅವು ಬಾಬಾ ಸಾಹೇಬ್ ಅವರ ಸಾರ್ವತ್ರಿಕ ದೃಷ್ಟಿಯನ್ನು ತಿಳಿಸುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂತಹ ಕೃತಿಗಳನ್ನು ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ವ್ಯಾಪಕವಾಗಿ ಓದಬೇಕು ಎಂಬ ಆಶಯವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.
***
(Release ID: 1711799)
Visitor Counter : 213
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam