ಪ್ರಧಾನ ಮಂತ್ರಿಯವರ ಕಛೇರಿ

“ಅಜಾದಿ ಕಾ ಅಮೃತ ಮಹೋತ್ಸವ” ಸ್ಮರಣಾರ್ಥ ರಾಷ್ಟ್ರೀಯ ಸಮಿತಿಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 08 MAR 2021 6:15PM by PIB Bengaluru

ನಮಸ್ಕಾರ!

ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಸಂದರ್ಭ ಬಹಳ ದೂರವೇನಿಲ್ಲ. ನಾವೆಲ್ಲರೂ ಅದನ್ನು ಸ್ವಾಗತಿಸಲು ಕಾಯುತ್ತಿದ್ದೇವೆ. ದೇಶವು ಆ ಚಾರಿತ್ರಿಕ, ಪ್ರಖ್ಯಾತ ಮತ್ತು ಬಹಳ ಮಹತ್ವದ  ದಿನವನ್ನು ಅದೇ ಸಂಭ್ರಮ ಮತ್ತು  ಉತ್ಸಾಹದಿಂದ ಆಚರಿಸಲಿದೆ.

ಕಾಲ ಮತ್ತು ದೇಶವು ಈ ಅಮೃತ ಮಹೋತ್ಸವವನ್ನು ವಾಸ್ತವವನ್ನಾಗಿಸುವ ಅವಕಾಶ ಮತ್ತು ಜವಾಬ್ದಾರಿಯನ್ನು ನಮಗೆ ನೀಡಿದೆ. ಈ ಸಮಿತಿಯು ಆಶೋತ್ತರಗಳನ್ನು ಅನುಷ್ಠಾನ ಮಾಡುವ ತನ್ನ ಕರ್ತವ್ಯದಲ್ಲಿ ಹಿಂದುಳಿಯಲಾರದು ಎಂಬುದು ನನಗೆ ಸಂತೋಷದ ಸಂಗತಿಯಾಗಿದೆ. ಈಗಾಗಲೇ ಬಂದಿರುವ ಸಲಹೆಗಳು ಮತ್ತು ಇನ್ನು ಬರಲಿರುವ ಸಲಹೆಗಳು ಮತ್ತು ಜನಸಮೂಹವನ್ನು ತಲುಪುವ ಪ್ರಯತ್ನಗಳಲ್ಲಿ ಯಾವುದೇ ಹಿನ್ನಡೆಯಾಗಲಾರದು. ಹೊಸ ಚಿಂತನೆಗಳು ಮತ್ತು ಸಲಹೆಗಳೊಂದಿಗೆ ದೇಶಕ್ಕಾಗಿ ಜನರು ಬದುಕುವಂತೆ ಮಾಡುವ ನಿಟ್ಟಿನಲ್ಲಿ ಅವರನ್ನು ಪ್ರೇರೇಪಿಸಲು ಮತ್ತು ಉತ್ತೇಜಿಸಲು ನಿಮ್ಮ ಮಾರ್ಗದರ್ಶನವನ್ನು ನಾವು ನಿರಂತರ ಪಡೆಯುತ್ತೇವೆ. ಕೆಲವು ಗೌರವಾನ್ವಿತ ಸದಸ್ಯರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ಇಂದಿನದು ಆರಂಭ. ನಾವು ಇದನ್ನು ಭವಿಷ್ಯದಲ್ಲಿ ವಿಸ್ತೃತವಾಗಿ ಚರ್ಚಿಸುತ್ತೇವೆ. ನಮಗೆ 75 ವಾರಗಳಿವೆ ಮತ್ತು ಆ ಬಳಿಕ ಮತ್ತೂ ಒಂದು ವರ್ಷವಿದೆ. ನಾವು ಮುಂದೆ ಸಾಗುತ್ತಾ ಹೋದಂತೆ ಈ ಸಲಹೆಗಳು ಬಹಳ ಮುಖ್ಯ.

ಈ ಸಲಹೆಗಳು ನಿಮ್ಮ ಅನುಭವವನ್ನು ಪ್ರತಿಬಿಂಬಿಸುತ್ತವೆ. ಮತ್ತು ದೇಶದ ವೈವಿಧ್ಯಮಯ ಚಿಂತನಾಕ್ರಮದ ಜೊತೆಗಿನ ನಿಮ್ಮ ಸಂಪರ್ಕವನ್ನು ಪ್ರತಿನಿಧಿಸುತ್ತವೆ. ಇಲ್ಲಿ ಸ್ವಾತಂತ್ರ್ಯದ 75 ವರ್ಷಗಳ ಆರಂಭಿಕ ನೀಲ ನಕಾಶೆಯನ್ನು ನಮ್ಮ ಮುಂದಿಡಲಾಗಿದೆ. ಇದು ಚಿಂತನಾಕ್ರಮಕ್ಕೆ ವೇಗವನ್ನು ನೀಡುವ ರೀತಿ. ಇದು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕಾದ ಪಟ್ಟಿಯಲ್ಲ. ಅಥವಾ ಅದಕ್ಕೆ ಅಂಟಿಕೊಂಡೇ ಸಾಗಬೇಕಾದಂತಹ  ಪಟ್ಟಿಯಲ್ಲ.  ಇವು ಬರೇ ಆರಂಭ ಮಾಡಲು ಬೇಕಾದ ಸಲಹೆಗಳು, ಆದರೆ ಚರ್ಚೆ ಪ್ರಗತಿ ಹೊಂದುತ್ತಿರುವಂತೆಯೇ, ಕಾರ್ಯಕ್ರಮಕ್ಕೆ ಒಂದು ಸ್ಪಷ್ಟವಾದ ರೂಪ ಬರುತ್ತದೆ ಮತ್ತು ವೇಳಾಪಟ್ಟಿಯೂ ತಯಾರಾಗುತ್ತದೆ. ನೀವು ಯಾವ ಜವಾಬ್ದಾರಿಗಳನ್ನು ನಿಭಾಯಿಸಬೇಕು ಮತ್ತು ಅದನ್ನು ಹೇಗೆ ಅನುಷ್ಠಾನ ಮಾಡಬೇಕು ಎಂಬುದನ್ನು ನಂತರ ಚರ್ಚಿಸಲಾಗುವುದು. ಈ ಕಾರ್ಯಕ್ರಮದಲ್ಲಿ ರೂಪುಗೊಂಡಿರುವ ಮೇಲ್ಮಟ್ಟದ ರೂಪುರೇಷೆಗಳು ಇತ್ತೀಚಿನ ದಿನಗಳಲ್ಲಿ ವಿವಿಧ ವೇದಿಕೆಗಳಲ್ಲಿ ಚರ್ಚೆಗೆ ಬಂದಿರುವ ಚಿಂತನೆಗಳ ಭಾಗ. ಈ ರೀತಿಯಲ್ಲಿ, ಇದೊಂದು ಸ್ವಾತಂತ್ರ್ಯದ 75 ನೇ ವರ್ಷವನ್ನು, ಅಮೃತ ಮಹೋತ್ಸವವನ್ನು  ಹೇಗೆ ಪ್ರತಿಯೊಬ್ಬ ವ್ಯಕ್ತಿಯ ಉತ್ಸವವನ್ನಾಗಿ ಆಚರಿಸಬಹುದು ಎಂಬ ನಿಟ್ಟಿನಲ್ಲಿಯ ಪ್ರಯತ್ನ.

ಸ್ನೇಹಿತರೇ,

75 ವರ್ಷಗಳ ಸ್ವಾತಂತ್ರ್ಯದ ಹಬ್ಬವು ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿ ಮತ್ತು ಅದರ ತ್ಯಾಗವನ್ನು ಅನುಭವಿಸುವ ರೀತಿಯಲ್ಲಿ, ದೇಶದ ಹುತಾತ್ಮರಿಗೆ ಗೌರವ ಸಲ್ಲಿಸುವ ರೀತಿಯಲ್ಲಿ ಮತ್ತು ಅವರ ಕನಸಿನ ಭಾರತ ರೂಪಿಸುವ ನಿರ್ಧಾರ, ಅದರೊಂದಿಗೆ ಅಂದಿನ ಸಾಂಪ್ರದಾಯಿಕ ಭಾರತದ ವೈಭವವನ್ನು ಒಳಗೊಂಡ ನೋಟಗಳು ಇರಬೇಕು ಹಾಗು ಅದರಲ್ಲಿ ಆಧುನಿಕ ಭಾರತದ ಹೊಳಪೂ ಇರಬೇಕು. ಸಂತರ ಆಧ್ಯಾತ್ಮದ ಬೆಳಕು, ನಮ್ಮ ವಿಜ್ಞಾನಿಗಳ ಪ್ರತಿಭೆ ಮತ್ತು ಶಕ್ತಿಯ ಅಂಶವನ್ನೂ ಅದು ಒಳಗೊಂಡಿರಬೇಕು. ಈ ಕಾರ್ಯಕ್ರಮ ನಮಗೆ ನಮ್ಮ 75 ವರ್ಷಗಳ ಸಾಧನೆಯನ್ನು ವಿಶ್ವದೆದುರು ಮಂಡಿಸಲು ಮತ್ತು ಮುಂದಿನ 25 ವರ್ಷಗಳ ಅವಧಿಗೆ  ನೀಲ ನಕಾಶೆಯನ್ನು ರೂಪಿಸಲು ಮತ್ತು ನಿರ್ಧಾರಗಳನ್ನು ಕೈಗೊಳ್ಳಲು ಒಂದು ಅವಕಾಶವಾಗಿದೆ. ನಾವು ಎಲ್ಲಿ ಇರಬೇಕು,ವಿಶ್ವದಲ್ಲಿ ನಮ್ಮ ಸ್ಥಾನ ಏನಾಗಿರಬೇಕು, 2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವಾಗ ನಾವು ಭಾರತವನ್ನು ಎಷ್ಟು ಮುಂದಕ್ಕೆ ಕೊಂಡೊಯ್ಯಬೇಕು ಎಂಬುದಕ್ಕೂ ಇದೊಂದು ಅವಕಾಶ. ಸ್ವಾತಂತ್ರ್ಯದ 75 ವರ್ಷಗಳು ಮತ್ತು ಸ್ವಾತಂತ್ರ್ಯ ಹೋರಾಟ ಅದಕ್ಕಾಗಿ ನಮಗೆ ಸ್ಫೂರ್ತಿಯೊದಗಿಸುತ್ತದೆ. ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಈ ಹಬ್ಬ ಭಾರತದ ಸ್ವಾತಂತ್ರ್ಯದ ಶತಮಾನೋತ್ಸವಕ್ಕಾಗಿ ನಮಗೆ ಮಾರ್ಗದರ್ಶನ, ಉತ್ತೇಜನ ಮತ್ತು ಸಾಧನೆಯ ಭಾವವನ್ನು ಮೂಡಿಸಲು ವೇದಿಕೆಯೊಂದನ್ನು ತಯಾರು ಮಾಡಲಿದೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ -'उत्सवेन बिना यस्मात् स्थापनम् निष्फलम् भवेत्' ಎಂದು ಹೇಳಲಾಗುತ್ತದೆ. ಅಂದರೆ ಆಚರಣೆ ಇಲ್ಲದೆ ಯಾವುದೇ ಪ್ರಯತ್ನ ಮತ್ತು ನಿರ್ಧಾರ ಯಶಸ್ವಿಯಾಗದು. ನಿರ್ಧಾರವೊಂದು ಹಬ್ಬದ, ಉತ್ಸವದ  ರೂಪ ಪಡೆದುಕೊಂಡಾಗ ಮಿಲಿಯಾಂತರ ಜನರ ನಿರ್ಧಾರಗಳು ಮತ್ತು ಶಕ್ತಿ ಅದಕ್ಕೆ ಜೋಡಣೆಗೊಳ್ಳುತ್ತದೆ. ಈ ಸ್ಪೂರ್ತಿಯೊಂದಿಗೆ, ನಾವು 130 ಕೋಟಿ ದೇಶವಾಸಿಗಳನ್ನು ಒಟ್ಟಿಗೆ ಕರೆದೊಯ್ಯುವ ಮೂಲಕ ಸ್ವಾತಂತ್ರ್ಯದ 75 ನೇ ವರ್ಷವನ್ನು ಹಬ್ಬದೋಪಾದಿಯಲ್ಲಿ ಆಚರಿಸಬೇಕಾಗಿದೆ. ಮತ್ತು ನಾವು ಸಾರ್ವಜನಿಕ ಸಹಭಾಗಿತ್ವದ ಬಗ್ಗೆ ಮಾತನಾಡುವಾಗ ಅದು 130 ಕೋಟಿ ದೇಶವಾಸಿಗಳ ಭಾವನೆಗಳು, ಅವರ ಚಿಂತನೆಗಳು , ಸಲಹೆಗಳು ಮತ್ತು ಅವರ ಕನಸುಗಳನ್ನು ಒಳಗೊಂಡಿರುತ್ತದೆ.

ಸ್ನೇಹಿತರೇ,

ನಿಮಗೆಲ್ಲ ತಿಳಿದಿರುವಂತೆ, ಸ್ವಾತಂತ್ರ್ಯದ 75 ನೇ ವರ್ಷಾಚರಣೆಗೆ ಸಂಬಂಧಿಸಿ ಬಂದಿರುವ ಸಲಹೆಗಳನ್ನು ಐದು ಉಪ ಶೀರ್ಷಿಕೆಗಳಲ್ಲಿ –ಸ್ವಾತಂತ್ರ್ಯ ಹೋರಾಟ, 75 ರ ಚಿಂತನೆಗಳು, 75 ರ ಸಾಧನೆಗಳು, 75 ರ ಕ್ರಮಗಳು ಮತ್ತು 75ರ ನಿರ್ಧಾರಗಳು ಎಂದು ವಿಂಗಡಿಸುವುದು ಅನುಕೂಲಕರ. ನಾವು ಈ ಐದು ಅಂಶಗಳೊಂದಿಗೆ ಮುನ್ನಡೆಯಬೇಕು. ಇವು ದೇಶದ 130 ಕೋಟಿ ಜನರ ಭಾವನೆಗಳು ಮತ್ತು ಚಿಂತನೆಗಳನ್ನು ಒಳಗೊಂಡಿರಬೇಕು. ನಾವು ನಮಗೆ ಗೊತ್ತಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕು.ಅದೇ ಸಂದರ್ಭದಲ್ಲಿ ಚರಿತ್ರೆಯಲ್ಲಿ ಅಂತಹ ಸ್ಥಾನ ಪಡೆಯದೇ ಇರುವ ಸ್ವಾತಂತ್ರ್ಯ ಹೋರಾಟಗಾರರನ್ನು, ಜನಮಾನಸದಲ್ಲಿ ಅಂತಹ ಗುರುತಿಸುವಿಕೆ ದೊರೆಯದ ಸ್ವಾತಂತ್ರ್ಯ ಹೋರಾಟಗಾರರ ಕಥನಗಳನ್ನು, ವೀರ ಚರಿತ್ರೆಯನ್ನು ಜನತೆಯೆಡೆಗೆ ಕೊಂಡೊಯ್ಯಬೇಕು. ಭಾರತ ಮಾತೆಯ ಪುತ್ರರು ಮತ್ತು ಪುತ್ರಿಯರು ದೇಶಕ್ಕಾಗಿ ಕೊಡುಗೆ ನೀಡದಿರುವ ಮತ್ತು ತ್ಯಾಗ ಮಾಡದೇ ಇರುವ ಯಾವ ಸ್ಥಳವೂ ಭಾರತದಲ್ಲಿರಲಾರದು. ಅವರ ತ್ಯಾಗದಪ್ರೇರಣಾದಾಯಕ ಕಥಾನಕಗಳು ಮತ್ತು ಕೊಡುಗೆಗಳನ್ನು ದೇಶದೆದುರು ಇಟ್ಟರೆ ಅದು ಬಹಳ ದೊಡ್ಡ ಪ್ರೇರಣೆಯ ಮೂಲವಾದೀತು. ಅದೇ ರೀತಿ ನಾವು ಪ್ರತೀ ಸಮಾಜೋ-ಆರ್ಥಿಕ ವರ್ಗದ ಕೊಡುಗೆಯನ್ನೂ ದೇಶದೆದುರು ತರಬೇಕು. ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ತಲೆತಲಾಂತರಗಳಿಂದ ಒಂದಷ್ಟು ಶ್ರೇಷ್ಟ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಹಲವಾರು ಜನರಿದ್ದಾರೆ. ನಾವು ಅವರ ಚಿಂತನೆಗಳನ್ನು ಮತ್ತು ಯೋಚನಾಕ್ರಮಗಳನ್ನು ಕೂಡಾ ದೇಶವನ್ನು ಅವರ ಪ್ರಯತ್ನಗಳ ಜೊತೆಗೆ ಬೆಸೆಯುವುದಕ್ಕಾಗಿ ಮುಂಚೂಣಿಗೆ ತರಬೇಕಾಗಿದೆ. ಇದೂ ಕೂಡಾ ಈ ಅಮೃತ್ ಉತ್ಸವದ ಸ್ಪೂರ್ತಿ.

ಸ್ನೇಹಿತರೇ,

ದೇಶ ಕೂಡಾ ಈ ಚಾರಿತ್ರಿಕ ಉತ್ಸವ ಆಚರಣೆಗೆ ರೂಪುರೇಖೆಗಳನ್ನು ಹಾಕಿಕೊಂಡಿದೆ ಮತ್ತು ಅದನ್ನು ಇನ್ನಷ್ಟು  ವ್ಯವಸ್ಥಿತಗೊಳಿಸಲು ಮೊದಲ ಹಂತದ ಕ್ರಮವನ್ನು ಇಂದು ಕೈಗೊಂಡಿದೆ. ಈ ಎಲ್ಲಾ ಯೋಜನೆಗಳೂ ಸಕಾಲದಲ್ಲಿ ಬಹಳ ನಿಖರಗೊಳ್ಳುತ್ತವೆ ಮತ್ತು ಸಮರ್ಪಕಗೊಳ್ಳುತ್ತವೆ. ಮತ್ತು ಅವು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡುವ ಅವಕಾಶ ದೊರೆಯದ, ಆದರೆ ದೇಶಕ್ಕಾಗಿ ಬದುಕುವ ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡುವ ಅವಕಾಶ ಲಭಿಸಿರುವ  ನಮ್ಮ ಈಗಿನ ತಲೆಮಾರಿನ ಜನರಿಗೆ  ಪ್ರೇರೇಪಣೆ ನೀಡಲಿವೆ.ಮತ್ತು 2047ರಲ್ಲಿ ದೇಶವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವಾಗ ನಮ್ಮ ದೇಶವನ್ನು  ಎಲ್ಲಿಗೆ ಕೊಂಡೊಯ್ಯಬೇಕು ಮತ್ತು ಯಾವೆಲ್ಲ ಕನಸುಗಳನ್ನು ನನಸು ಮಾಡಬೇಕು ಎಂಬ ಬಗ್ಗೆ ಇಂತಹದೇ ಭಾವನೆ ನಮ್ಮ ಭವಿಷ್ಯದ ತಲೆಮಾರಿನಲ್ಲಿ ಇರುವಂತಾಗಬೇಕು. ಹೊಸ ನಿರ್ಧಾರಗಳು, ಹೊಸ ಧೋರಣೆಗಳು, ಆತ್ಮನಿರ್ಭರ ಭಾರತದಂತಹ ನಿರ್ಧಾರಗಳು ಈ ಪ್ರಯತ್ನಗಳ ಸ್ಪಷ್ಟ ರೂಪಗಳು.  ಇದು ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಈಡೇರಿಸುವ ಪ್ರಯತ್ನ ಮತ್ತು ತಮ್ಮ ಬದುಕನ್ನು ಕತ್ತಲ ಕೋಣೆಯಲ್ಲಿ ಕಳೆದ ನಮ್ಮ ನಾಯಕರು ಕಂಡ ಕನಸಿನ ಮಟ್ಟಕ್ಕೆ  ಭಾರತವನ್ನು ಕೊಂಡೊಯ್ಯುವ ಪ್ರಯತ್ನ.

ಸ್ನೇಹಿತರೇ,

ಕೆಲವು ವರ್ಷಗಳ ಹಿಂದೆ ಕಲ್ಪಿಸಿಕೊಳ್ಳಲಾರದಂತಹ ಅನೇಕ ಕೆಲಸಗಳನ್ನು ಇಂದು ಭಾರತವು ಮಾಡುತ್ತಿದೆ. 75 ವರ್ಷಗಳ ಪ್ರಯಾಣದಲ್ಲಿ ಕೈಗೊಂಡಂತಹ ಪ್ರತಿಯೊಂದು ಕ್ರಮಗಳ ಫಲವಾಗಿ ದೇಶವಿಂದು ಇಲ್ಲಿಗೆ ಬಂದಿದೆ. 75 ವರ್ಷಗಳಲ್ಲಿ ಎಲ್ಲ ರೀತಿಯ ಜನರೂ ತಮ್ಮ ಕೊಡುಗೆ ನೀಡಿದ್ದಾರೆ ಮತ್ತು ದೇಶವು ಬೇರೊಬ್ಬರ ಕೊಡುಗೆಗಳನ್ನು ನಿರಾಕರಣೆ ಮಾಡುವ ಮೂಲಕ ಇಷ್ಟೊಂದು ದೊಡ್ಡದಾಗಿ ಬೆಳೆದುದಲ್ಲ. ದೇಶವು ಪ್ರತಿಯೊಬ್ಬರ ಕೊಡುಗೆಯನ್ನು ಸ್ವೀಕರಿಸಿದಾಗ, ಗೌರವಿಸಿದಾಗ ಮತ್ತು ಅಂಗೀಕರಿಸಿದಾಗ ಮಾತ್ರ ಅದು ಮುಂದುವರೆಯುತ್ತದೆ. ನಾವು ಇದೇ ಮಂತ್ರದೊಂದಿಗೆ ಬೆಳೆದಿದ್ದೇವೆ. ಮತ್ತು ಅದೇ ಮಂತ್ರದೊಂದಿಗೆ ಮುಂದುವರೆಯಲು ಇಚ್ಛಿಸುತ್ತೇವೆ. ನಾವು ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮವನ್ನು ಆಚರಿಸುವಾಗ ದೇಶವು ಒಂದು ಕಾಲದಲ್ಲಿ ಅಸಾಧ್ಯ ಎಂದು ಪರಿಗಣಿಸಲಾಗಿದ್ದ ಗುರಿಗಳನ್ನು ಸಾಧಿಸುವತ್ತ ಬಲಿಷ್ಟವಾದ ಕ್ರಮಗಳನ್ನು ಕೈಗೊಳ್ಳಲಿದೆ. ಈ ಕಾರ್ಯಕ್ರಮವು ಭಾರತದ ಚಾರಿತ್ರಿಕ ವೈಭವವನ್ನು ನಿಮ್ಮ ಸಹಕಾರದೊಂದಿಗೆ ಅನುಷ್ಠಾನಕ್ಕೆ ತರಲಿದೆ. ನೀವು ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಿದ್ದೀರಿ. ಮತ್ತು ನಿಮ್ಮ ಕೊಡುಗೆಯೊಂದಿಗೆ ಈ ಕಾರ್ಯಕ್ರಮವು ಇಡೀ ವಿಶ್ವದೆದುರು  ಭಾರತದ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಹಾರಿಸಲಿದೆ. ನಿಮ್ಮ ಕೊಡುಗೆ ಬಹಳ ಮೌಲ್ಯಯುತವಾದುದು, ಅದು ಹೊಸ ಶಕ್ತಿ, ಉತ್ತೇಜನ ಮತ್ತು ದಿಕ್ಕುದಿಸೆಗಳನ್ನು ಒದಗಿಸಲಿದೆ.

ಬರಲಿರುವ ದಿನಗಳಲ್ಲಿ ನಿಮ್ಮ ಕೊಡುಗೆ ಮತ್ತು ಸಕ್ರಿಯ ಪಾಲುದಾರಿಕೆಗಾಗಿ ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಶುಭ ಹಾರೈಕೆಗಳು

ಬಹಳ ಧನ್ಯವಾದಗಳು!

ಘೋಷಣೆ: ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ ಇದು. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***(Release ID: 1704779) Visitor Counter : 480