ವಾರ್ತಾ ಮತ್ತು ಪ್ರಸಾರ ಸಚಿವಾಲಯ

25 ವರ್ಷಗಳಲ್ಲಿ ನಾವು ಏನನ್ನು ಸಾಧಿಸಬೇಕೆಂಬುದನ್ನು ನಿರ್ಣಯಿಸುವ ಸಮಯ, ಕೇಂದ್ರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹೇಳಿಕೆ; ದೆಹಲಿ ಸೇರಿದಂತೆ ಏಳು ಸ್ಥಳಗಳಲ್ಲಿ ಚಿತ್ರ ಪ್ರದರ್ಶನಗಳ ಉದ್ಘಾಟನೆ

Posted On: 13 MAR 2021 3:56PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರಿಂದು, ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆಜಾದಿ ಕ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಬೃಹತ್ ಜಾಗೃತಿ ಅಭಿಯಾನದ ಭಾಗವಾಗಿ ಜನ ಸಂಪರ್ಕ ಮತ್ತು ಸಂವಹನ ಕಾರ್ಯಾಲಯ ಈ ಚಿತ್ರ ಪ್ರದರ್ಶನಗಳನ್ನು ಆಯೋಜಿಸಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಾವು ಸ್ವಾತಂತ್ರ್ಯ ಬಂದ ದಿನದಿಂದ ಎಷ್ಟು ದೂರ ಬಂದಿದ್ದೇವೆ, ಮುಂದಿನ 25 ವರ್ಷಗಳಲ್ಲಿ ನಾವು ಏನೆಲ್ಲಾ ಸಾಧಿಸಲು ನಿರ್ಣಯಿಸುತ್ತೇವೆ ಎಂಬುದನ್ನು ಪ್ರದರ್ಶಿಸಲು ಇದು ದೇಶಕ್ಕೆ ಅತ್ಯಂತ ಮಹತ್ವದ ಕ್ಷಣವಾಗಿದೆ ಎಂದು ಹೇಳಿದರು. ಈ ಪ್ರದರ್ಶನ ಇವುಗಳನ್ನು ತಿಳಿಸುತ್ತದೆ ಎಂಬುದು ಪ್ರಮುಖ ವಿಶ್ವಾಸವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತ್ಯಾಗ ಬಲಿದಾನದಿಂದ ಬಂದಿದೆ., ಈ ತ್ಯಾಗಗಳ ಹಿಂದಿನ ಕಥೆಯನ್ನು ನಿರೂಪಿಸಲು ಈ ಪ್ರದರ್ಶನವು ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದರು. ಪ್ರದರ್ಶನಗಳನ್ನು ಏರ್ಪಡಿಸಿರುವುದಕ್ಕಾಗಿ ಶ್ರೀ ಜಾವಡೇಕರ್ ಬಿ.ಓ.ಸಿ.ಯನ್ನು ಅಭಿನಂದಿಸಿದರು.

 

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊಡುಗೆ ನೀಡಿದವರ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಗಿದ್ದು, ಪ್ರತಿಯೊಂದು ಸಚಿವಾಲಯಕ್ಕೂ ನಿರ್ದಿಷ್ಟ ಹೊಣೆ ವಹಿಸಲಾಗಿದೆ ಎಂದರು. ಈ ಪ್ರದರ್ಶನಗಳ ಡಿಜಿಟಲ್ ಆವೃತ್ತಿ ರೂಪಿಸಲಾಗುತ್ತಿದ್ದು, ಆಗಸ್ಟ್ 15ರಂದು ಅನಾವರಣಗೊಳ್ಳುವ ನಿರೀಕ್ಷೆ ಇದೆ ಎಂದರು.

 

ಶ್ರೀ ಪ್ರಕಾಶ್ ಜಾವಡೇಕರ್ ಅವರು ವರ್ಚುವಲ್ ಮಾಧ್ಯಮದ ಮೂಲಕ ಈ ಕೆಳಕಂಡ ಆರು ಕಡೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು.

 

1.     ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆ

 

2.     ಕರ್ನಾಟಕದ ಬೆಂಗಳೂರು

 

3.     ಮಹಾರಾಷ್ಟ್ರದ ಪುಣೆ

 

4.     ಒಡಿಶಾದ ಭುವನೇಶ್ವರ

 

5.     ಮಣಿಪುರದ,ಮೊಯ್ ರಾಂಗ್ ಜಿಲ್ಲೆಯ ಬಿಷ್ಣುಪುರ,

 

6.     ಬಿಹಾರದ ಪಾಟ್ನಾ

 

ಕಾಶ್ಮೀರದ ಸಂರಕ್ಷಕ ಎಂದೇ ಹೆಸರಾದ ಮತ್ತು 1947ಅಕ್ಟೋಬರ್ ನಲ್ಲಿ ಕಾಶ್ಮೀರದ ಮೇಲಿನ ದಾಳಿಯ ವೇಳೆ ಪಾಕಿಸ್ತಾನ ಬೆಂಬಲಿತ ಬುಡಕಟ್ಟು ಜನರೊಂದಿಗೆ ಏಕಾಂಗಿಯಾಗಿ ಹೋರಾಡಿ, ಮಡಿದ ಬ್ರಿಗೇಡಿಯರ್ ರಾಜೇಂದ್ರ ಸಿಂಗ್ ಅವರ ಜನ್ಮ ಸ್ಥಳವಾದ ಜಮ್ಮುವಿನ ಸಾಂಬಾದ ಬ್ರಿಗೇಡಿಯರ್ ರಾಜೇಂದ್ರ ಸಿಂಗ್ ಪುರ ಬಗೂನಾದಲ್ಲಿ ಚಿತ್ರ ಪ್ರದರ್ಶನವನ್ನು  ಆಯೋಜಿಸಲಾಗಿತ್ತು. ಬ್ರಿಗೇಡಿಯರ್ ರಾಜೇಂದ್ರ ಸಿಂಗ್ ಮತ್ತು ಅವರ ಜೊತೆಗಾರರು ಭಾರತೀಯ ಸೇನೆ ಬರುವತನಕ, ಪಾಕಿಸ್ತಾನದ ಬುಡಕಟ್ಟು ದಾಳಿಕೋರರು ಶ್ರೀನಗರದ ಕಡೆಗೆ ಬರುವುದನ್ನು ವಿಳಂಬ ಮಾಡುವಲ್ಲಿ ಯಶಸ್ವಿಯಾದ್ದರು. 1949ರ ಡಿಸೆಂಬರ್ 30ರಂದು, ಮಹಾವೀರ ಚಕ್ರ ಪಡೆದ ಸ್ವತಂತ್ರ ಭಾರತದ ಪ್ರಥಮ ಸೇನಾಧಿಕಾರಿ ಅವರೆನಿಸಿದರು.

 

ಬೆಂಗಳೂರಿನ ಪ್ರಾದೇಶಿಕ ಜನ ಸಂಪರ್ಕ ಕಾರ್ಯಾಲಯ, ಬೆಂಗಳೂರಿನ ಕೋರಮಂಗಲದ ಕೇಂದ್ರೀಯ ಸದನದಲ್ಲಿ  ಛಾಯಾಚಿತ್ರ ಪ್ರದರ್ಶನ ಆಯೋಜಿಸಿದೆ. ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ನಂಟು ಹೊಂದಿರುವ ನ್ಯಾಷನಲ್ ಪ್ರೌಢಶಾಲೆಯ ಮೈದಾನ, ಗಾಂಧಿ ಭವನ, ಬನ್ನಪ್ಪ ಉದ್ಯಾನ, ಸ್ವಾತಂತ್ರ್ಯ ಉದ್ಯಾನ ಮತ್ತು ಯಶವಂತಪುರ ರೈಲು ನಿಲ್ದಾಣ ಮೊದಲಾದ ತಾಣಗಳಿವೆ. ಈ ಚಿತ್ರ ಪ್ರದರ್ಶನ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಸ್ಥಳೀಯ ಸ್ವಾತಂತ್ರ್ಯ ಯೋಧರ ಕೊಡುಗೆಯನ್ನೂ ತಿಳಿಯಪಡಿಸುತ್ತಿದೆ.    

 

ಪುಣೆಯಲ್ಲಿ ಚಿತ್ರ ಪ್ರದರ್ಶನವನ್ನು, ಭಾರತದ ಸ್ವಾತಂತ್ರ್ಯ ಚಳವಳಿಯೊಂದಿಗೆ ನಿಕಟ ನಂಟು ಹೊಂದಿರುವ ಭವ್ಯವಾದ ಆಗಾ ಖಾನ್ ಅರಮನೆಯಲ್ಲಿ ಆಯೋಜಿಸಲಾಗಿತ್ತು. ಈ ಸ್ಥಳವನ್ನು ಮಹಾತ್ಮಾ ಗಾಂಧೀ ಮತ್ತು ಅವರ ಪತ್ನಿ ಕಸ್ತೂರಬಾ ಗಾಂಧೀ, ಅವರ ಕಾರ್ಯದರ್ಶಿ ಮಹಾದೇವ್ ದೇಸಾಯಿ ಮತ್ತು ಸರೋಜಿನಿ ನಾಯ್ಡು ಅವರನ್ನು ಬಂಧಿಸಿಟ್ಟಿದ್ದ ಸೆರೆಮನೆಯೂ ಆಗಿತ್ತು. ಭಾರತ ಬಿಟ್ಟು ತೊಲಗಿ ಆಂದೋಲನ ಆರಂಭಿಸಿದ ತರುವಾಯ, ಮಹಾತ್ಮಾ  ಗಾಂಧಿ ಮತ್ತು ಇತರರನ್ನು ಈ ಅರಮನೆಯಲ್ಲಿ 21 ತಿಂಗಳುಗಳ ಕಾಲ ಅಂದರೆ 1942ರ ಆಗಸ್ಟ್ 9ರಿಂದ 1944ರ ಮೇ 6ರವರೆಗೆ ಬಂಧಿಸಿಡಲಾಗಿತ್ತು. ಕಸ್ತೂರ ಬಾ ಗಾಂಧಿ ಮತ್ತು ಮಹಾದೇವ್ ದೇಸಾಯಿ ಅವರು ಅರಮನೆಯಲ್ಲಿ ಈ ಬಂಧನದ ಅವಧಿಯಲ್ಲೇ ಮೃತಪಟ್ಟಿದ್ದು, ಅವರುಗಳ ಸಮಾಧಿ ಇಲ್ಲಿಯೇ ಇದೆ. ಮಹಾತ್ಮಾ ಗಾಂಧಿ ಮತ್ತು ಕಸ್ತೂರಬಾ ಗಾಂಧೀ ಅವರ ಸ್ಮಾರಕಗಳೂ ಮೂಲ ನದಿಯ ಸಮೀಪದ ಇದೇ ಸಮುಚ್ಚಯದಲ್ಲಿದೆ.

 

ಪ್ರಾದೇಶಿಕ ಜನ ಸಂಪರ್ಕ ಕಾರ್ಯಾಲಯ, ಭುವನೇಶ್ವರದಲ್ಲಿ ಆಯೋಜಿಸಿರುವ ಪ್ರದರ್ಶನ  ಖೋರ್ಡಾ ಜಿಲ್ಲೆಯಲ್ಲಿ ಮಾರ್ಚ್ 12ರಿಂದ 16ರವರೆಗೆ ನಡೆಯಲಿದೆ. ಈ ಜಿಲ್ಲೆಯಲ್ಲಿ ಹಲವಾರು ಸ್ವಾತಂತ್ರ್ಯ ಯೋಧರು ಜನಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಐತಿಹಾಸಿಕ ಮಹತ್ವವಿದೆ. ಈ ಐದು ದಿನಗಳ ಚಿತ್ರ ಪ್ರದರ್ಶನದ ವೇಳೆ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಇತರ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ಫಲಕಗಳು ಒಡಿಶಾದ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನೂ ಪ್ರದರ್ಶಿಸುತ್ತಿದೆ. 

 

ಮೊಯ್ ರಾಂಗ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಮತ್ತು ಆಜಾದಿ ಕ ಅಮೃತ ಮಹೋತ್ಸವದ ವೇಳೆ ಇಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಿರುವುದು ಅತ್ಯಂತ ಮಹತ್ವದ್ದಾಗಿದೆ. 1944ರ ಏಪ್ರಿಲ್ 14ರಂದು

 ಬಾರಿಗೆ ಐ.ಎನ್.ಎ.ಯ ಧ್ವಜವನ್ನು ಮೊಯ್ ರಾಂಗ್ ನಲ್ಲಿ ಹಾರಿಸಲಾಗಿತ್ತು.

ಮಣಿಪುರದ ಬಿಷ್ಣುಪುರ ಜಿಲ್ಲೆಯ ಮೊಯ್ ರಾಂಗ್‌ ನಲ್ಲಿರುವ ಐ.ಎನ್‌.ಎ. ಸ್ಮಾರಕ ಸಭಾಂಗಣದಲ್ಲಿ ಆಜಾದಿ ಕ ಅಮೃತ ಮಹೋತ್ಸವದ 5 ದಿನಗಳ ಚಿತ್ರ ಪ್ರದರ್ಶನದ ವರ್ಚುವಲ್  ಉದ್ಘಾಟನೆಯಲ್ಲಿ ಸಂಸದ (ಲೋಕಸಭಾ) ಡಾ.ಆರ್.ಕೆ.ರಂಜನ್ ಸಿಂಗ್, ರಾಜ್ಯದ ಕಲೆ ಮತ್ತು ಸಂಸ್ಕೃತಿ ಇಲಾಖೆಯ ಮತ್ತು ಬಿಷ್ಣುಪುರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಚಿತ್ರ ಪ್ರದರ್ಶನದ ಮುಖ್ಯ ಉದ್ದೇಶ, ದಂಡಿ ಯಾತ್ರೆ ಮತ್ತು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾತ್ಮಾಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್ ರಂತಹ ನಾಯಕರುಗಳ ಮೇಲೆ ವಿಶೇಷ ಗಮನದೊಂದಿಗೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಹೆಗ್ಗುರುತುಗಳಾದ ಅಸಹಕಾರ ಚಳವಳಿ, ಕಾನೂನು ಭಂಗ ಚಳವಳಿ, ಭಾರತ ಬಿಟ್ಟು ತೊಲಗಿ ಇತ್ಯಾದಿಯನ್ನು ಪ್ರದರ್ಶಿಸುವುದಾಗಿದೆ. ರಾಷ್ಟ್ರೀಯತೆ ಕುರಿತ ಸಾಂಸ್ಕೃತಿಕ ಕಾರ್ಯಕ್ರಮಗಳಾದ, ಸ್ಥಳೀಯ ಡ್ರಮ್ ನೃತ್ಯಗಳು, ಭಾರತದ ನೃತ್ಯಗಳು ಮತ್ತು ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯದ ಸಿಬ್ಬಂದಿ ಮತ್ತು ಆಯ್ದ ಪಟ್ಟಿಯಲ್ಲಿರುವ ಕಲಾವಿದರು ಪ್ರದರ್ಶಿಸಿದ ಆತ್ಮರಕ್ಷಣೆ ಕಲೆಗಳು, ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮತ್ತು ಆಶುಭಾಷಣ ಸ್ಪರ್ಧೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿವೆ.

ಪಾಟ್ನಾದಲ್ಲಿನ ಚಿತ್ರ ಪ್ರದರ್ಶನವನ್ನು ಅನುಗ್ರಹ ನಾರಾಯಣ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹದ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನುಗ್ರಹ ನಾರಾಯಣ್ ಸಿಂಗ್ ಅವರ ಹೆಸರನ್ನು ಈ ಕಾಲೇಜಿಗೆ ಇಡಲಾಗಿದೆ.

ಪ್ರದರ್ಶನವು ಬಿಹಾರದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ತೋರಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಅಪರೂಪದ ಚಿತ್ರತುಣುಕುಗಳನ್ನು ಎಲ್.ಇ.ಡಿ ಟಿವಿಯಲ್ಲಿ ಪ್ರದರ್ಶಿಸಲಾಗುತ್ತಿದೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತಿದೆ.

ಚಿತ್ರ ಪ್ರದರ್ಶನದ ಮೂಲಕ ಬಿ.ಓ.ಸಿ. ನಮ್ಮ ಸ್ವಾತಂತ್ರ್ಯ ಹೋರಾಟದ ಅವಿಸ್ಮರಣೀಯ ಕ್ಷಣಗಳನ್ನು ಮತ್ತು ಅದರಲ್ಲಿ ಭಾಗಿಯಾಗಿದ್ದವರ ಕೊಡುಗೆ ಹಿಡಿದಿಡುವ ಪ್ರಯತ್ನವನ್ನು ಮಾಡಿದೆ. ಈ ಪ್ರದರ್ಶನಗಳಲ್ಲಿ ಮಹಾತ್ಮಾ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಬಾಯಿ ಪಟೇಲ್, ಪಂಡಿತ್ ಜವಾಹರಲಾಲ್ ನೆಹರು, ಶ್ರೀಮತಿ ಸರೋಜಿನಿ ನಾಯ್ಡು, ಚಕ್ರವರ್ತಿ ರಾಜಗೋಪಾಲಾಚಾರಿ, ಬಾಲ ಗಂಗಾಧರ ತಿಲಕ್, ಬಿಪಿನ್ ಚಂದ್ರ ಪಾಲ್, ಲಾಲಾ ಲಜಪತ್ ರಾಯ್ ಮತ್ತು ಕ್ರಾಂತಿಕಾರಿಗಳಾದ ಶಹೀದ್ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಇನ್ನೂ ಅನೇಕ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಮತ್ತು ಹೋರಾಟಗಳನ್ನು ಪ್ರದರ್ಶಿಸುತ್ತದೆ.

******



(Release ID: 1704665) Visitor Counter : 528