ಪ್ರಧಾನ ಮಂತ್ರಿಯವರ ಕಛೇರಿ

ಶ್ರೀಮದ್ ಭಗವದ್ಗೀತೆಯ ಶ್ಲೋಕಗಳಿಗೆ 21 ವಿದ್ವಾಂಸರ ವಿವರಣೆ ಸಹಿತವಾದ ಹಸ್ತಪ್ರತಿಯನ್ನು ಬಿಡುಗಡೆ ಮಾಡಿದ ಪ್ರಧಾನಮಂತ್ರಿ

Posted On: 09 MAR 2021 6:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕುರಿತಂತೆ 21 ವಿದ್ವಾಂಸರುಗಳ ವ್ಯಾಖ್ಯಾನ ಸಹಿತವಾದ ಹಸ್ತಪ್ರತಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ, ಜಮ್ಮು ಮತ್ತು ಕಾಶ್ಮೀರ ಧರ್ಮಾರ್ಥ ಟ್ರಸ್ಟ್‌ ನ ಅಧ್ಯಕ್ಷ ಟ್ರಸ್ಟಿ ಡಾ.ಕರಣ್ ಸಿಂಗ್ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಡಾ. ಕರಣ್ ಸಿಂಗ್ ಅವರು ಭಾರತೀಯ ತತ್ವಶಾಸ್ತ್ರಕ್ಕೆ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದರು. ಅವರ ಪ್ರಯತ್ನವು ಜಮ್ಮು ಮತ್ತು ಕಾಶ್ಮೀರದ ಅಸ್ಮಿತೆಯನ್ನು ಪುನರುಜ್ಜೀವಗೊಳಿಸಿದೆ, ಇದು ಇಡೀ ಭಾರತದ ಶತಮಾನಗಳ ಚಿಂತನಾ ಸಂಪ್ರದಾಯವನ್ನು ಮುಂದುವರಿಸಿದೆ ಎಂದರು. ಗೀತೆಯ ಆಳವಾದ ಅಧ್ಯಯನಕ್ಕಾಗಿ ಸಾವಿರಾರು ವಿದ್ವಾಂಸರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಅವರು ಹೇಳಿದರು, ಒಂದೇ ಗ್ರಂಥದ ಪ್ರತಿಯೊಂದು ಶ್ಲೋಕದಲ್ಲೂ ವಿಭಿನ್ನ ವ್ಯಾಖ್ಯಾನಗಳ ವಿಶ್ಲೇಷಣೆಯಿದ್ದು, ಅನೇಕ ಅತೀಂದ್ರಿಯ ಅಭಿವ್ಯಕ್ತಿಯಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದರು. ಇದು ಭಾರತದ ಸೈದ್ಧಾಂತಿಕ ಅಭಿವ್ಯಕ್ತಿಯ ಸ್ವಾತಂತ್ರ್ಯ ಮತ್ತು ಸಹನೆಯ ಸಂಕೇತವಾಗಿದೆ, ಇದು ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ದೃಷ್ಟಿಕೋನವನ್ನು ಹೊಂದಲು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.

ಭಾರತವನ್ನು ಒಗ್ಗೂಡಿಸಿದ ಆದಿ ಶಂಕರಾಚಾರ್ಯರು ಗೀತೆಯನ್ನು ಆಧ್ಯಾತ್ಮಿಕ ಪ್ರಜ್ಞೆಯಾಗಿ ನೋಡಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಮಾನುಜಾಚಾರ್ಯರಂತಹ ಸಂತರು ಆಧ್ಯಾತ್ಮಿಕ ಜ್ಞಾನದ ಅಭಿವ್ಯಕ್ತಿಯಾಗಿ ಗೀತೆಯನ್ನು ಅನಾವರಣ ಮಾಡಿದ್ದರು. ಸ್ವಾಮಿ ವಿವೇಕಾನಂದರಿಗೆ, ಗೀತಾ ಅಚಲವಾದ ಶ್ರದ್ಧೆ ಮತ್ತು ಅದಮ್ಯ ಆತ್ಮವಿಶ್ವಾಸದ ಮೂಲವಾಗಿತ್ತು ಎಂದರು. ಶ್ರೀ ಅರಬಿಂದೋ ಅವರಿಗೆ, ಗೀತೆ ಜ್ಞಾನ ಮತ್ತು ಮಾನವೀಯತೆಯ ನಿಜವಾದ ಸಾಕಾರವಾಗಿತ್ತು. ಗೀತೆ ಮಹಾತ್ಮ ಗಾಂಧಿಯವರಿಗೆ ಅತ್ಯಂತ ಸಂಕಷ್ಟದ ಕಾಲದಲ್ಲಿ ದಾರಿದೀಪವಾಗಿತ್ತು. ಗೀತೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಶಭಕ್ತಿ ಮತ್ತು ಶೌರ್ಯಕ್ಕೆ ಸ್ಫೂರ್ತಿಯಾಗಿತ್ತು. ಇದೇ ಗೀತೆ, ಇದನ್ನು ಬಾಲ ಗಂಗಾಧರ ತಿಲಕ್ ಅವರೂ ವಿವರಿಸಿದ್ದು, ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಶಕ್ತಿಯನ್ನು ನೀಡಿದರು ಎಂದು ಹೇಳಿದರು.

ನಮ್ಮ ಪ್ರಜಾಪ್ರಭುತ್ವ ನಮ್ಮ ಚಿಂತನೆಗಳಿಗೆ ಸ್ವಾತಂತ್ರ್ಯ ನೀಡುತ್ತದೆ, ಕಾರ್ಯಕ್ಕೆ ಸ್ವಾತಂತ್ರ್ಯ ನೀಡುತ್ತದೆ, ಜೀವನದ ಪ್ರತಿಯೊಂದು ಘಟ್ಟದಲ್ಲೂ ಸಮಾನ ಸ್ವಾತಂತ್ರ್ಯ ನೀಡುತ್ತದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಈ ಸ್ವಾತಂತ್ರ್ಯ ನಮ್ಮ ಸಂವಿಧಾನದ ಸಂರಕ್ಷಕರಾದ ಪ್ರಜಾಸತ್ತಾತ್ಮಕ ಸಂಸ್ಥೆಗಳಿಂದ ದೊರೆತಿದೆ. ಹೀಗಾಗಿ ನಾವು ಯಾವಾಗ ನಮ್ಮ ಹಕ್ಕಿನ ಬಗ್ಗೆ ಮಾತನಾಡುತ್ತೇವೋ, ಆಗ ನಾವು ನಮ್ಮ ಪ್ರಜಾಸತ್ತಾತ್ಮಕ ಜವಾಬ್ದಾರಿಗಳನ್ನೂ ಮರೆಯಬಾರದು ಎಂದರು.  

ಗೀತೆ ಇಡೀ ವಿಶ್ವಕ್ಕೆ ಮತ್ತು ಸಂಸ್ಕೃತಿಗೆ ಒಂದು ಕೃತಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಇದನ್ನು ಹಲವು ಭಾರತೀಯ ಭಾಷೆ ಮತ್ತು ಅಂತಾರಾಷ್ಟ್ರೀಯ ಭಾಷೆಗಳಿಗೆ ತರ್ಜುಮೆ ಮಾಡಲಾಗಿದ್ದು, ಹಲವಾರು ದೇಶಗಳಲ್ಲಿ ಹಲವು ಅಂತಾರಾಷ್ಟ್ರೀಯ ವಿದ್ವಾಂಸರುಗಳಿಂದ ಇದರ ಬಗ್ಗೆ ಸಂಶೋಧನೆಗಳು ನಡೆದಿವೆ ಎಂದರು.

ತನ್ನ ಜ್ಞಾನವನ್ನು ಹಂಚಿಕೊಳ್ಳುವುದು ಭಾರತದ ಸಂಸ್ಕೃತಿಯಲ್ಲಿಯೇ ಇದೆ ಎಂದು ಪ್ರಧಾನಮಂತ್ರಿ ಹೇಳಿದರು. ಗಣಿತ, ಜವಳಿ, ಲೋಹಶಾಸ್ತ್ರ ಅಥವಾ ಆಯುರ್ವೇದದಲ್ಲಿನ ನಮ್ಮ ಜ್ಞಾನವನ್ನು ಯಾವಾಗಲೂ ಮಾನವತೆಯ ಸಂಪತ್ತು ಎಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದರು. ಇಂದು, ಮತ್ತೊಮ್ಮೆ, ಇಡೀ ಪ್ರಪಂಚದ ಪ್ರಗತಿಗೆ ಕೊಡುಗೆ ನೀಡುವ ಮತ್ತು ಮಾನವತೆಯ ಸೇವೆ ಮಾಡುವ ಸಾಮರ್ಥ್ಯವನ್ನು ಭಾರತ ನಿರ್ಮಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಕೊಡುಗೆಯನ್ನು ಜಗತ್ತು ಕಂಡಿದೆ ಎಂದು ಅವರು ಉಲ್ಲೇಖಿಸಿದರು. ಆತ್ಮನಿರ್ಭರ ಭಾರತದ ಪ್ರಯತ್ನದಲ್ಲಿ ಈ ಕೊಡುಗೆ ಜಗತ್ತಿಗೆ ಹೆಚ್ಚು ವಿಶಾಲವಾಗಿ ನೆರವಾಗುತ್ತದೆ ಎಂದು ಅವರು ತಮ್ಮ ಮಾತು ಮುಗಿಸಿದರು.

 


 

*****


(Release ID: 1703779) Visitor Counter : 253