ಪ್ರಧಾನ ಮಂತ್ರಿಯವರ ಕಛೇರಿ

ಭಾರತ ಮತ್ತು ಬಾಂಗ್ಲಾದೇಶದ ನಡುವೆ ಮಾ.9ರಂದು 'ಮೈತ್ರಿ ಸೇತು' ಉದ್ಘಾಟನೆ ಮಾಡಲಿರುವ ಪ್ರಧಾನಿ


ತ್ರಿಪುರಾದಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ

Posted On: 07 MAR 2021 7:47PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2021 ಮಾರ್ಚ್ 9ರಂದು ಮಧ್ಯಾಹ್ನ 12 ಗಂಟೆಗೆ ಭಾರತ ಮತ್ತು ಬಾಂಗ್ಲಾದೇಶದ ನಡುವಿನ 'ಮೈತ್ರಿ ಸೇತು' ಸೇತುವೆಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ಸಂದರ್ಭದಲ್ಲಿ ತ್ರಿಪುರಾದಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನೂ ಪ್ರಧಾನಿ ನೆರವೇರಿಸಲಿದ್ದಾರೆ.

ತ್ರಿಪುರಾ ರಾಜ್ಯದಲ್ಲಿರುವ ಭಾರತದ ಗಡಿ ಮತ್ತು ಬಾಂಗ್ಲಾದೇಶದ ನಡುವೆ ಹರಿಯುವ ಫೆನಿ ನದಿಯ ಮೇಲೆ 'ಮೈತ್ರಿ ಸೇತು' ಎಂಬ ಸೇತುವೆಯನ್ನು ನಿರ್ಮಿಸಲಾಗಿದೆ. 'ಮೈತ್ರಿ ಸೇತು' ಎಂಬ ಹೆಸರು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬೆಳೆಯುತ್ತಿರುವ ದ್ವಿಪಕ್ಷೀಯ ಬಾಂಧವ್ಯ ಮತ್ತು ಸ್ನೇಹ ಸಂಬಂಧಗಳ ಸಂಕೇತವಾಗಿದೆ. ʻರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತʼ ಸಂಸ್ಥೆಯು 133 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. 1.9 ಕಿ.ಮೀ ಉದ್ದದ ಸೇತುವೆಯು ಭಾರತದ ಸಬ್ರೂಮ್ ಅನ್ನು ಬಾಂಗ್ಲಾದೇಶದ ರಾಮಗಢದೊಂದಿಗೆ ಬೆಸೆಯುತ್ತದೆ. ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ವ್ಯಾಪಾರ ಹಾಗೂ ಜನ ಸಂಚಾರಕ್ಕೆ ಹೊಸ ಅಧ್ಯಾಯವನ್ನು ಇದು ಬರೆಯಲಿದೆ. ಸೇತುವೆಯ ಉದ್ಘಾಟನೆಯೊಂದಿಗೆ, ಸಬ್ರೂಮ್‌ನಿಂದ ಕೇವಲ 80 ಕಿ.ಮೀ. ದೂರದ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿಗೆ ನೇರ ಸಂಪರ್ಕ ದೊರೆಯಲಿದ್ದು, “ಈಶಾನ್ಯದ ಮಹಾದ್ವಾರʼʼವಾಗಿ ತ್ರಿಪುರಾ ಪರಿವರ್ತನೆಯಾಗಲಿದೆ.

ಸಬ್ರೂಮ್‌ನಲ್ಲಿ ಸಂಯೋಜಿತ ತಪಾಸಣಾ ಕೇಂದ್ರದ ಸ್ಥಾಪನೆಗೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಎರಡೂ ದೇಶಗಳ ನಡುವಿನ ಸುಗಮ ಸರಕು ಸಾಗಣೆ ಮತ್ತು ಪ್ರಯಾಣಿಕರ ಸಂಚಾರಕ್ಕೆ, ಈಶಾನ್ಯ ರಾಜ್ಯಗಳ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಅವಕಾಶಗಳನ್ನು ಒದಗಿಸಲು ಸಹಾಯ ಮಾಡಲಿದೆ. ಭೂ ಬಂದರುಗಳ ಪ್ರಾಧಿಕಾರವು ಸುಮಾರು 232 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದೆ.

ಪ್ರಧಾನಿ ಅವರು ಕೈಲಾಷಹರ್‌ನಲ್ಲಿರುವ ಉನಕೋಟಿ ಜಿಲ್ಲಾ ಕೇಂದ್ರದಿಂದ ಖೊವಾಯ್‌ ಜಿಲ್ಲಾ ಕೇಂದ್ರದೊಂದಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 208 ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ರಾಷ್ಟ್ರೀಯ ಹೆದ್ದಾರಿ 44ಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಿದೆ. 80 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 208 ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ & ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತವು 1,078 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ.

ಪ್ರಧಾನಿ ಅವರು 63.75 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರಕಾರ ಅಭಿವೃದ್ಧಿ ಪಡಿಸಿದ ರಾಜ್ಯ ಹೆದ್ದಾರಿಗಳು ಮತ್ತು ಇತರ ಜಿಲ್ಲಾ ರಸ್ತೆಗಳನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ತ್ರಿಪುರಾದ ಜನತೆಗೆ ಎಲ್ಲ ಋತುಮಾನಗಳ ಸಂಪರ್ಕ ಸೌಲಭ್ಯ ಲಭ್ಯವಾಗಲಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ 813 ಕೋಟಿ ರೂ. ಆರ್ಥಿಕ ನೆರವಿನೊಂದಿಗೆ ನಿರ್ಮಿಸಲಾದ 40,978 ಮನೆಗಳನ್ನು ಹಾಗೂ ಅಗರ್ತಲಾ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ ಉದ್ಘಾಟನೆಯನ್ನೂ ಪ್ರಧಾನಿಯವರು ನೆರವೇರಿಸಲಿದ್ದಾರೆ.

ಇದಿಷ್ಟೇ ಅಲ್ಲದೆ, ಹಳೆಯ ಮೋಟಾರ್ ನಿಲ್ದಾಣದಲ್ಲಿ ಬಹು ಹಂತಗಳ ಕಾರ್ ಪಾರ್ಕಿಂಗ್ ಮತ್ತು ವಾಣಿಜ್ಯ ಸಂಕೀರ್ಣದ ನಿರ್ಮಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಲಿಚುಬಾಗನ್‌ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯನ್ನು ದ್ವಿಪಥದಿಂದ ಚತುಷ್ಪಥಕ್ಕೆ ವಿಸ್ತರಿಸುವ ಕಾಮಗಾರಿಗೂ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ. ಸುಮಾರು 96 ಕೋಟಿ ರೂ. ವೆಚ್ಚದಲ್ಲಿ ಅಗರ್ತಲಾ ಸ್ಮಾರ್ಟ್ ಸಿಟಿ ಮಿಷನ್‌ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

***(Release ID: 1703110) Visitor Counter : 183