ಹಣಕಾಸು ಸಚಿವಾಲಯ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ 1,18,101 ಕೋಟಿ ರೂ. ಮೀಸಲು


1,08,230 ಕೋಟಿ ರೂ. ಒಟ್ಟಾರೆ ಅತ್ಯಧಿಕ ಬಂಡವಾಳ ನಿಗದಿ

ಬೆಂಗಳೂರು - ಚೆನ್ನೈ ಎಕ್ಸ್ ಪ್ರೆಸ್ ವೇ: ಪ್ರಸಕ್ತ ಹಣಕಾಸು ವರ್ಷದಲ್ಲಿ 278 ಕಿ.ಮೀ.ಅಭಿವೃದ್ಧಿ, ನಿರ್ಮಾಣ ಕಾರ್ಯ 2021-22ರಲ್ಲಿ ಆರಂಭ

ಮಾರ್ಚ್ 2022ರ ವೇಳೆಗೆ ಭಾರತಮಾಲಾ ಪರಿಯೋಜನಾ ಅಡಿಯಲ್ಲ್ಲಿ 8,500 ಕಿ.ಮೀ. ರಸ್ತೆ ಅಭಿವೃದ್ಧಿ ಗುರಿ

ಮಾರ್ಚ್ 2022ರ ವೇಳೆಗೆ ಹೆಚ್ಚುವರಿಯಾಗಿ  11,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಅಭಿವೃದ್ಧಿ

ಆರ್ಥಿಕ ಕಾರಿಡಾರ್ ಗಳ ಅಭಿವೃದ್ಧಿಗೆ ಯೋಜನೆ

Posted On: 01 FEB 2021 1:50PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಮಂಡಿಸಿದ 2021-22ನೇ ಸಾಲಿನ ಬಜೆಟ್ ನಲ್ಲಿ ರಸ್ತೆ ಮೂಲಸೌಕರ್ಯ ವೃದ್ಧಿಗೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಒಟ್ಟಾರೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ 1,18,101 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದ್ದು, ಆ ಪೈಕಿ 1,08,230 ಕೋಟಿ ರೂ. ಬಂಡವಾಳ ವೆಚ್ಚ ಮಾಡಲಾಗುವುದು ಇದು ಅತ್ಯಧಿಕ ಮೊತ್ತವಾಗಿದೆ.

3.3 ಲಕ್ಷ ಕೋಟಿ ರೂ. ವೆಚ್ಚದಲ್ಲಿ 13,000ಕ್ಕೂ ಅಧಿಕ ಕಿ.ಮೀ. ರಸ್ತೆಯ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ನೀಡಲಾಗಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ತಿಳಿಸಿದರು. 5.35 ಲಕ್ಷ ಕೋಟಿ ರೂ.ಗಳ ಭಾರತಮಾಲಾ ಪರಿಯೋಜನೆ ಅಡಿಯಲ್ಲಿ 3,800 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಮಾರ್ಚ್ 2022ರ ವೇಳೆಗೆ ಹೆಚ್ಚುವರಿಯಗಿ 8,500 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಹಾಗೂ ಹೆಚ್ಚುವರಿಯಾಗಿ 11,000 ಕಿ.ಮೀ ವ್ಯಾಪ್ತಿಯ ಹೆದ್ದಾರಿ ಕಾರಿಡಾರ್ ಅನ್ನು ಪೂರ್ಣಗೊಳಿಸಲಾಗುವುದು ಎಂದರು.

ರಸ್ತೆ ಮೂಲಸೌಕರ್ಯವನ್ನು ಮತ್ತಷ್ಟು ವೃದ್ಧಿಸಲು ಹೆಚ್ಚಿನ ಆರ್ಥಿಕ ಕಾರಿಡಾರ್ ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶ್ರೀಮತಿ ಸೀತಾರಾಮನ್ ಹೇಳಿದರು:

  1. ತಮಿಳುನಾಡಿನಲ್ಲಿ 1.03 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ 3,500 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ. ಇದರಲ್ಲಿ ಮಧುರೈ-ಕೊಲ್ಲಂ ಕಾರಿಡಾರ್, ಚಿತ್ತೂರ್-ಥಟ್ಚೂರ್ ಕಾರಿಡಾರ್ ಸೇರಿವೆ. ನಿರ್ಮಾಣ ಕಾರ್ಯ ಮುಂದಿನ ವರ್ಷ ಆರಂಭ.
  2. ಕೇರಳದ ಮುಂಬೈ-ಕನ್ಯಾಕುಮಾರಿ ಕಾರಿಡಾರ್ ನಲ್ಲಿ 600 ಕಿ.ಮೀ. ಅಭಿವೃದ್ಧಿ ಸೇರಿದಂತೆ 65,000 ಕೋಟಿ ರೂ. ವೆಚ್ಚದಲ್ಲಿ 1,100 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ.
  3. ಹಾಲಿ ಇರುವ ಕೋಲ್ಕತ್ತಾ-ಸಿಲಿಗುರಿ ರಸ್ತೆ ಉನ್ನತೀಕರಣ ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ 25,000 ಕೋಟಿ ರೂ. ವೆಚ್ಚದಲ್ಲಿ 675 ಕಿ.ಮೀ. ಹೆದ್ದಾರಿ ಅಭಿವೃದ್ಧಿ.
  4. ಅಸ್ಸಾಂ ಸದ್ಯ ಪ್ರಗತಿ ಪಥದತ್ತ ಸಾಗುತ್ತಿರುವುದರಿಂದ 19,000 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ. ಅಲ್ಲದೆ ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 34,000 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ 1300 ಕಿ.ಮೀ. ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿ.

ROADS AND HIGHWAY INFRASTRUCTURE.jpg

ಮಹತ್ವಾಕಾಂಕ್ಷಿ ಯೋಜನೆಗಳು: ರಸ್ತೆ ಮತ್ತು ಹೆದ್ದಾರಿ

2021-22ನೇ ಸಾಲಿನಲ್ಲಿ ಕೆಲವು ಮಹತ್ವಾಕಾಂಕ್ಷಿ ಕಾರಿಡಾರ್ ಗಳು ಮತ್ತು ಇತರೆ ಪ್ರಮುಖ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದ್ದು, ಅವುಗಳ ವಿವರ ಹೀಗಿದೆ:

  • ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ ಉಳಿದ 260 ಕಿ.ಮೀ. ಅಭಿವೃದ್ಧಿಗೆ 31.3.2021ರೊಳಗೆ ಟೆಂಡರ್ ಗುತ್ತಿಗೆ ನೀಡಲಾಗುವುದು.
  • ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ: ಪ್ರಸಕ್ತ ಹಣಕಾಸು ವರ್ಷದಲ್ಲಿ 278 ಕಿ.ಮೀ. ಅಭಿವೃದ್ಧಿಗೊಳಿಸಲಾಗುವುದು, ನಿರ್ಮಾಣ ಕಾರ್ಯ 2021-22ರಲ್ಲಿ ಆರಂಭವಾಗಲಿದೆ.
  • ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್: ಪ್ರಸಕ್ತ ಹಣಕಾಸು ವರ್ಷದಲ್ಲಿ 210 ಕಿ.ಮೀ. ಕಾರಿಡಾರ್ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು. ನಿರ್ಮಾಣ ಕಾರ್ಯ 2021-22ರಲ್ಲಿ ಆರಂಭವಾಗುವದು.
  • ಕಾನ್ಪುರ-ಲಖನೌ ಎಕ್ಸ್ ಪ್ರೆಸ್ ವೇ:  ಎನ್ಎಚ್ 27ಗೆ ಪರ್ಯಾಯ ಮಾರ್ಗವಾಗಿ 63 ಕಿ.ಮೀ. ಎಕ್ಸ್ ಪ್ರೆಸ್ ವೇ ಅಭಿವೃದ್ಧಿ ಕಾರ್ಯಕ್ಕೆ 2021-22ರಲ್ಲಿ ಆರಂಭಿಸಲಾಗುವುದು.
  • ಚೆನ್ನೈ-ಸೇಲಂ ಕಾರಿಡಾರ್: 277 ಕಿ.ಮೀ. ಉದ್ದದ ಎಕ್ಸ್ ಪ್ರೆಸ್ ವೇ ಟೆಂಡರ್ ನೀಡಲಾಗಿದೆ ಮತ್ತು ನಿರ್ಮಾಣ ಕಾರ್ಯ 2021-22ರಲ್ಲಿ ಆರಂಭವಾಗಲಿದೆ.
  • ರಾಯ್‌ ಪುರ್-ವಿಶಾಖಪಟ್ಟಣಂ: 464 ಕಿ.ಮೀ. ಉದ್ದದ ಮಾರ್ಗ ಛತ್ತೀಸ್ ಗಢ, ಒಡಿಶಾ ಮತ್ತು ಉತ್ತರ ಆಂಧ್ರಪ್ರದೇಶದ ಮೂಲಕ ಹಾದು ಹೋಗಲಿದ್ದು, ಪ್ರಸಕ್ತ ವರ್ಷ ಟೆಂಡರ್ ನೀಡಲಾಗುವುದು. ನಿರ್ಮಾಣ ಕಾಮಾಗಿ 2021-22ರಲ್ಲಿ ಆರಂಭವಾಗಲಿದೆ.
  • ಅಮೃತಸರ್-ಜಾಮ್ ನಗರ: ನಿರ್ಮಾಣ ಕಾರ್ಯ 2021-22ರಲ್ಲಿ ಆರಂಭ.
  • ದೆಹಲಿ-ಕತ್ರಾ: ನಿರ್ಮಾಣ ಕಾರ್ಯ 2021-22ರಲ್ಲಿ ಆರಂಭ.

ROADS AND HIGHWAY INFRASTRUCTURE 1.jpg

ಎಲ್ಲಾ ಹೊಸ ನಾಲ್ಕು ಮತ್ತು ಆರು ಪಥದ ಹೆದ್ದಾರಿಗಳಲ್ಲಿ ಸ್ಪೀಡ್ ರೆಡಾರ್, ವೇರಿಯಬಲ್ ಸಂದೇಶ ಸೂಚನಾ ಫಲಕಗಳು, ಜಿಪಿಎಸ್ ಆಧಾರಿತ ರಿಕವರಿ ವ್ಯಾನ್ ಒಳಗೊಂಡಂತೆ ಆಧುನಿಕ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು.

***



(Release ID: 1694043) Visitor Counter : 304