ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಸಿನಿಮಾ ಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ: ಚಲನಚಿತ್ರ ಪ್ರದರ್ಶನ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದ ಶ್ರೀ ಪ್ರಕಾಶ್ ಜಾವ್ಡೇಕರ್

Posted On: 31 JAN 2021 12:55PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ  ಶ್ರೀ ಪ್ರಕಾಶ್ ಜಾವ್ಡೇಕರ್ ಅವರು ಇಂದು ಸಿನಿಮಾ ಮಂದಿರಗಳು ಮತ್ತು ಥಿಯೇಟರ್ ಗಳಿಗೆ ಸಂಬಂಧಿಸಿದಂತೆ ಕೋವಿಡ್ -19 ಹರಡುವುದನ್ನು ನಿಯಂತ್ರಿಸುವ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರು. ಈ ನಿರ್ಧಾರವನ್ನು ಪ್ರಕಟಿಸಿದ ಸಚಿವರು,ಇನ್ನು ಸಿನಿಮಾ ಮಂದಿರಗಳು ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು ಎಂದರು. ಕೋವಿಡ್ ಶಿಷ್ಟಾಚಾರಗಳು ಮತ್ತು ಸ್ಯಾನಿಟೈಜೇಷನ್ ಅನ್ನು ಕಡ್ಡಾಯವಾಗಿ ಪಾಲಿಸಬೇಕು, ಆದರೆ ಜನರು ಚಿತ್ರಮಂದಿರದೊಳಗಿನ ಮಳಿಗೆಗಳಲ್ಲಿ ಆಹಾರ ಉತ್ಪನ್ನಗಳನ್ನು ಖರೀದಿಸಬಹುದು. ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಅಂತ್ಯಗೊಳಿಸುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.

 


ಭಾರತ ಸರ್ಕಾರದ ಗೃಹ ಸಚಿವಾಲಯ ಸಿನಿಮಾ ಮಂದಿರಗಳು ಮತ್ತು ಥಿಯೇಟರ್ ಗಳ ಆರಂಭಕ್ಕೆ ಸಂಬಂಧಿಸಿದಂತೆ 2021ರ ಜನವರಿ 27ರಂದು ಆದೇಶ ಸಂಖ್ಯೆ  40-3/2020-DM-I(ಎ) ಹೊರಡಿಸಿದ್ದು, ಅದರ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಒಟ್ಟಾರೆ ಎಸ್ ಒಪಿಯಲ್ಲಿ, ನಿರ್ಬಂಧಿತ ವಲಯದಲ್ಲಿ ಸಿನಿಮಾ ಪ್ರದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸ್ಥಳೀಯ ಸ್ಥಿತಿಗತಿ ಆಧರಿಸಿ ಹೆಚ್ಚುವರಿ ಕ್ರಮಗಳನ್ನು ಪ್ರಸ್ತಾಪಿಸಬಹುದು. ಎಸ್ ಒಪಿ ಪ್ರಕಾರ ಸಿನಿಮಾ ಮಂದಿರದೊಳಗೆ ಶೇ.100ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಲಾಗಿದೆ.  

ಕೋವಿಡ್ ಗೆ ಸಂಬಂಧಿಸಿದ ಎಲ್ಲ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಎಸ್ ಒಪಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಉಳಿದಂತೆ ಸಾಮಾನ್ಯ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸೂಕ್ತ ಸಾಮಾಜಿಕ ಅಂತರ ಅಂದರೆ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳುವುದು. ಸಭಾಂಗಣದಲ್ಲಿ ಸಾಮಾನ್ಯ ಜಾಗಗಳಲ್ಲಿ ಮತ್ತು ಕಾಯ್ದಿರಿಸುವ ಪ್ರದೇಶದಲ್ಲಿ ನಿಯಮಗಳನ್ನು ಪಾಲಿಸಬೇಕು. ಉಗುಳುವುದು ನಿಷಿದ್ಧವಾಗಿದೆ ಮತ್ತು ಆರೋಗ್ಯ ಸೇತು ಆಪ್ ಬಳಕೆಯನ್ನು ಉತ್ತೇಜಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

 ಚಿತ್ರಮಂದಿರಗಳಿಗೆ ಭೇಟಿ ನೀಡುವವರಿಗೆ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು, ಜನದಟ್ಟಣೆ ತಪ್ಪಿಸಲು ಹಂತ ಹಂತವಾಗಿ ಜನರನ್ನು ಚಿತ್ರಮಂದಿರದಿಂದ ನಿರ್ಗಮಿಸಲು ಅವಕಾಶ ಮಾಡಿಕೊಡಬೇಕು. ಜೊತೆಗೆ ಏಕ ಪರದೆಯ ಮೇಲೆ ಚಿತ್ರಗಳನ್ನು ಪ್ರದರ್ಶಿಸುವಾಗ ಒಂದು ಪ್ರದರ್ಶನದಿಂದ ಮತ್ತೊಂದು ಪ್ರದರ್ಶನದ ನಡುವೆ ಸಾಕಷ್ಟು ಅಂತರ ಕಾಯ್ದುಕೊಳ್ಳಬೇಕು. ಮಲ್ಟಿಪ್ಲೆಕ್ಸ್ ಗಳಲ್ಲಿ ಹಲವು ಪರದೆಗಳಲ್ಲಿ ಚಿತ್ರ ವೀಕ್ಷಣೆಗೆ ಪ್ರೇಕ್ಷಕರ ಪ್ರವೇಶ ಮತ್ತು ನಿರ್ಗಮನದ ವೇಳೆ ಸರದಿ ಪ್ರಕಾರ ಅವಕಾಶ ಮಾಡಿಕೊಡಬೇಕು. ಮಲ್ಟಿಪ್ಲೆಕ್ಸ್ ಗಳಲ್ಲಿ ಜನದಟ್ಟಣೆ ತಪ್ಪಿಸಲು ಪ್ರದರ್ಶನದ ಸಮಯವನ್ನು ಹಂತ ಹಂತವಾಗಿ ನಿಗದಿಪಡಿಸಬೇಕು.

ಟಿಕೆಟ್, ಆಹಾರ ಮತ್ತು ಪಾನಿಯ ಮತ್ತಿತರ ಪಾವತಿಗಳಿಗೆ ಸಂಪರ್ಕರಹಿತ ಡಿಜಿಟಲ್ ವಹಿವಾಟು ಬಳಕೆಗೆ ಎಸ್ಒಪಿಯಲ್ಲಿ ಉತ್ತೇಜನ ನೀಡಲಾಗಿದೆ. ಚಿತ್ರಮಂದಿರದ ಬಾಕ್ಸ್ ಆಫೀಸ್ ಗಳಲ್ಲಿ ಟಿಕೆಟ್ ಖರೀದಿಗೆ ಸಾಕಷ್ಟು ಸಂಖ್ಯೆಯ ಕೌಂಟರ್ ಗಳನ್ನು ತೆರೆದಿರಬೇಕು ಮತ್ತು ಆ ಕೌಂಟರ್ ಗಳು ದಿನವಿಡೀ ಕಾರ್ಯನಿರ್ವಹಿಸಬೇಕು ಹಾಗೂ ಟಿಕೆಟ್ ಮಾರಾಟ ಕೌಂಟರ್ ಬಳಿ ಜನದಟ್ಟಣೆ ತಪ್ಪಿಸಲು ಮುಂಗಡ ಬುಕ್ಕಿಂಗ್ ಗೆ ಅವಕಾಶ ಮಾಡಿಕೊಡಬೇಕು.

ಇಡೀ ಚಿತ್ರಮಂದಿರದ ಆವರಣದಲ್ಲಿ ಸ್ಯಾನಿಟೈಸೇಷನ್ ಗೆ ಒತ್ತು ನೀಡಬೇಕು. ಇಡೀ ಆವರಣದಲ್ಲಿ ಸಾಮಾನ್ಯ ಸೌಕರ್ಯಗಳಲ್ಲಿ ಮತ್ತು ಮಾನವ ಸಂಪರ್ಕದ ಎಲ್ಲ ------ ಅಂದರೆ ಹಿಡಿಕೆಗಳು, ರೈಲಿಂಗ್ ಗಳು ಇತ್ಯಾದಿಗಳ ಮೇಲೆ ಆಗಾಗ್ಗೆ ಸ್ಯಾನಿಟೈಸ್ ಮಾಡುವುದನ್ನು ಖಾತ್ರಿಪಡಿಸಬೇಕು ಹಾಗೂ ಪ್ರತಿಯೊಂದು ಪ್ರದರ್ಶನದ ನಂತರವೂ ಸಭಾಂಗಣವನ್ನು ಸ್ಯಾನಿಟೈಸ್ ಮಾಡಬೇಕು.

   ಎಸ್ಒಪಿಯಲ್ಲಿ ಕೋವಿಡ್-19 ಕುರಿತಂತೆ ಸಾರ್ವಜನಿಕ ಜಾಗೃತಿ ಮೂಡಿಸಲು ನಿರ್ದಿಷ್ಟ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬ ಕುರಿತು ಪ್ರಕಟಣೆಗಳು, ಸ್ಟ್ಯಾಂಡಿಗಳು ಮತ್ತು ಪೋಸ್ಟರ್ ಇತ್ಯಾದಿಗಳನ್ನು ಪ್ರದರ್ಶಿಸಬೇಕು.

 ವಿವರವಾದ ಎಸ್ಒಪಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://mib.gov.in/sites/default/files/FINAL%20SOP%20for%20Exhibition%20of%20Films%20%281%29.pdf



(Release ID: 1693934) Visitor Counter : 203