ರಾಷ್ಟ್ರಪತಿಗಳ ಕಾರ್ಯಾಲಯ

72ನೇ ಗಣರಾಜ್ಯೋತ್ಸವದ ಮುನ್ನಾ ದಿನದಂದು ದೇಶವನ್ನುದ್ದೇಶಿಸಿ, ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರ ಭಾಷಣ

Posted On: 25 JAN 2021 7:31PM by PIB Bengaluru

ಪ್ರಿಯ ದೇಶಬಾಂಧವರೇ,

ನಮಸ್ಕಾರ.

1.         ಜಗತ್ತಿನ ಬೃಹತ್ತಾದ ಮತ್ತು ಅತ್ಯಂತ ಸ್ಪಂದನಾಶೀಲ ಲೋಕ ತಂತ್ರ ದೇಶದ ನಿಮ್ಮೆಲ್ಲರಿಗೂ 72ನೇ ಗಣರಾಜ್ಯೋತ್ಸವದ ಮುನ್ನಾ ದಿನದಂದು ಹಾರ್ದಿಕ ಶುಭಾಶಯಗಳು. ಹಲವಾರು ಹಬ್ಬ ಹರಿದಿನಗಳು, ವೈವಿಧ್ಯತೆಗಳಿಂದ ಶ್ರೀಮಂತವಾಗಿರುವ ನಮ್ಮ ಭೂಮಿಯಲ್ಲಿ ನಮ್ಮ ರಾಷ್ಟ್ರೀಯ ಉತ್ಸವಗಳನ್ನು ಪ್ರತಿಯೊಬ್ಬರೂ ಅತ್ಯಂತ ಶ್ರದ್ಧೆ, ರಾಷ್ಟ್ರ ಪ್ರೇಮದೊಂದಿಗೆ ಆಚರಿಸುತ್ತಾರೆ. ರಾಷ್ಟ್ರೀಯ ಉತ್ಸವ - ಗಣರಾಜ್ಯೋತ್ಸವವನ್ನು ನಾವು ಹುರುಪಿನಿಂದ ಆಚರಿಸುತ್ತೇವೆ ಹಾಗೂ ರಾಷ್ಟ್ರಧ್ವಜಕ್ಕೆ ನಮ್ಮ ಗೌರವವನ್ನು ಸಮರ್ಪಿಸುತ್ತೇವೆ ಮತ್ತು ಸಂವಿಧಾನದ ಬಗ್ಗೆ ನಮಗಿರುವ ನಂಬುಗೆಯನ್ನ ಸಾದರಪಡಿಸುತ್ತೇವೆ.

2.         ದೇಶ-ವಿದೇಶಗಳಲ್ಲಿ ನೆಲೆಸಿರುವ ಎಲ್ಲ ಭಾರತೀಯರಿಗೆ ಇಂದಿನ ದಿನ ಬಹಳ ಮಹತ್ವದ ದಿನ. ಭಾರತೀಯರಾದ ನಾವು 71 ವರ್ಷಗಳ ಹಿಂದೆ ಇದೇ ದಿನ ವೈಶಿಷ್ಟ್ಯ ಪೂರ್ಣವಾದ ಸಂವಿಧಾನವನ್ನು  ಅಂಗೀಕರಿಸಿದೆವು, ಅಧಿನಿಯಮಗೊಳಿಸಿದೆವು ಮತ್ತು ಆತ್ಮ ಸ್ವೀಕಾರ ಮಾಡಿಕೊಂಡೆವು. ಅಂತೆಯೇ ದಿನ ಸಂವಿಧಾನ ಪ್ರತಿಪಾದಿಸುವ ಮಹತ್ತರ ಮೌಲ್ಯಗಳ ಬಗ್ಗೆ, ಆಳವಾದ ವಿಚಾರ ಮಂಥನ ನಡೆಸುವ ಸಂದರ್ಭವಾಗಿದೆ. ಸಂವಿಧಾನದ ಮುನ್ನುಡಿಯಲ್ಲಿ ನಿರೂಪಿಸಿರುವ-ನ್ಯಾಯ, ಸ್ವಾತಂತ್ರ್ಯ, ಸಮತೆ ಮತ್ತು ಭ್ರಾತೃತ್ವದ ಜೀವನ ಮೌಲ್ಯಗಳು ನಮ್ಮೆಲ್ಲರಿಗೂ ಪವಿತ್ರವಾದವು. ಕೇವಲ ಆಡಳಿತ ನಡೆಸಲು ಆಯ್ಕೆಯಾದವರಷ್ಟೇ ಇದನ್ನು ಪರಿಪಾಲಿಸಬೇಕು ಎಂಬುದಲ್ಲ, ಎಲ್ಲ ಜನತೆಯೂ ಇದಕ್ಕೆ ಕಟಿಬದ್ಧರಾಗಿರಬೇಕು.

3.         ನಮ್ಮ ಪ್ರಜಾಸತ್ತೆಯ ಮಂದಿರ, ಭದ್ರ ಬುನಾದಿಯ ಮೇಲೆ ವಿರಾಜಿಸುವಂತೆ ಮಾಡಲು, ನಮ್ಮ ಜ್ಞಾನನೇತ್ತ ಮಹನೀಯರು, ಮಹಿಳೆಯರು, ಮುನ್ನುಡಿಯಲ್ಲೇ ನಾಲ್ಕು ಮೌಲ್ಯಗಳನ್ನು ಅಳವಡಿಸಿರುವುದು ಅರ್ಥಪೂರ್ಣ. ವಾಸ್ತವವಾಗಿ ಇವು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಮಾರ್ಗ ಸೂಚಿಗಳು. ಬಾಲಗಂಗಾಧರ ತಿಲಕ್, ಲಾಲ ಲಜಪತ್ ರಾಯ್, ಮಹಾತ್ಮ ಗಾಂಧಿ ಮತ್ತು ಸುಭಾಶ್ ಚಂದ್ರ ಬೋಸ್ ಅವರಂತಹ ಮೇರು ನಾಯಕರು ಮತ್ತು ಚಿಂತಕರ ತೇಜೋಗಣ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಪ್ರೇರಣಾ ಪ್ರಣೀತರು. ಮಾತೃಭೂಮಿಯ ಭವ್ಯ ಭವಿಷ್ಯದ ಅಪಾರ ಕನಸುಗಳನ್ನು ಕಂಡವರು ಅವರು. ಆದರೆ ಇವರೆಲ್ಲರ ಆಶೋತ್ತರಗಳ ಏಕ ಮಾತ್ರ ಸೂತ್ರ ನ್ಯಾಯ, ಸ್ವಾತಂತ್ರ್ಯ, ಸಮತೆ ಮತ್ತು ಭ್ರಾತೃತ್ವದ ಮೌಲ್ಯಗಳು.

4.         ನಮ್ಮ ರಾಷ್ಟ್ರ ನಿರ್ಮಾತೃಗಳಿಗೆ ಮೌಲ್ಯಗಳು ಏಕೆ ಸದೃಶ ದಾರಿ ದೀಪವಾದವು ಎಂಬುದನ್ನು ಅರಿಯಲು ನಾವು ನಮ್ಮ ಚರಿತ್ರೆಯತ್ತ ಮತ್ತಷ್ಟು ಹಿಂದಿರುಗಿ ನೋಡಬೇಕು ಎಂದು ನಾನು ಬಯಸುತ್ತೇನೆ ಹಾಗೂ ಇದಕ್ಕೆ ಉತ್ತರ ಸುಸ್ಪಷ್ಟ. ಭೂಮಿ ಹಾಗೂ ಇಲ್ಲಿನ ನಿವಾಸಿಗಳು ತತ್ವಗಳನ್ನು ಅನಾದಿಕಾಲದಿಂದ ಪರಿಪಾಲಿಸಿದವರು. ನ್ಯಾಯ, ಸ್ವಾತಂತ್ರ್ಯ, ಸಮತೆ ಮತ್ತು ಭ್ರಾತೃತ್ವ ನಮ್ಮ ಜೀವನ ದರ್ಶನದ ಆಜೀವ ಸಿದ್ಧಾಂತಗಳು. ನಾಗರಿಕತೆಯ ಉದಯ ಕಾಲದಿಂದಲೂ ಇವು ನಮಗೆ ಅವ್ಯಾಹತವಾಗಿ ಹರಿದು ಬಂದಿವೆ. ಆದಾಗ್ಯೂ ಪ್ರತಿಯೊಂದು ಪೀಳಿಗೆಗೂ ತನ್ನ ಕಾಲಮಾನಕ್ಕೆ ಅನುಗುಣವಾಗಿ ಇವುಗಳನ್ನು ಅರ್ಥೈಸಿಕೊಳ್ಳಬೇಕಾದ ಹೊಣೆ ಇದೆ. ಸ್ವಾತಂತ್ರ್ಯ ಹೋರಾಟಗಾರರು ಅವರ ದಿನಗಳಲ್ಲಿ ಮಾಡಿದ ರೀತಿಯೇ, ನಾವು ನಮ್ಮ ಕಾಲದಲ್ಲಿ ನಡೆದುಕೊಳ್ಳಬೇಕು. ಮಹತ್ವಪೂರ್ಣ ತತ್ವಗಳು ನಮ್ಮ ಪ್ರಗತಿಯ ಪಥವನ್ನು ಬೆಳಗಬೇಕು.

ಪ್ರಿಯ ದೇಶವಾಸಿಗಳೇ,

5.         ನಮ್ಮ ವಿಶಾಲವಾದ, ಜನಭರಿತ ದೇಶವನ್ನು ಆಹಾರ ಧಾನ್ಯ ಮತ್ತು ಹೈನು ಉತ್ಪನ್ನಗಳ ವಿಷಯದಲ್ಲಿ ಸ್ವಾವಲಂಬಿಯಾಗಿಸಿದ ನಮ್ಮ ರೈತ ಸಮುದಾಯವನ್ನು ಪ್ರತಿಯೊಬ್ಬ ಭಾರತೀಯನೂ ಅಭಿನಂದಿಸಬೇಕು. ಪ್ರತಿಕೂಲ ಪ್ರಕೃತಿ ಮತ್ತಿತರ ಅಸಂಖ್ಯ ಸವಾಲುಗಳು ಹಾಗೂ ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ನಮ್ಮ ರೈತರು ಕೃಷಿ ಉತ್ಪಾದನೆಯನ್ನು ಸುಸ್ಥಿರವಾಗಿ ಕಾಯ್ದುಕೊಂಡಿದ್ದಾರೆ. ಕೃತಜ್ಞತಾಪೂರ್ವ ದೇಶ, ನಮ್ಮ ರೈತರ ಅಭ್ಯುದಯಕ್ಕೆ ಸಂಪೂರ್ಣ ಕಟಿಬದ್ಧವಾಗಿದೆ.

6.         ದೇಶದ ಆಹಾರ ಭದ್ರತೆಯನ್ನು ನಮ್ಮ ಶ್ರಮ ಜೀವಿ ರೈತರು ಖಚಿತ ಪಡಿಸಿರುವಂತೆಯೇ, ಸಶಸ್ತ್ರ ಪಡೆಗಳ ಕೆಚ್ಚೆದೆಯ ಯೋಧರು ಅತ್ಯಂತ ಕಠಿಣ ವಾತಾವರಣಗಳಲ್ಲೂ ದೇಶದ ಗಡಿಗಳ ಸುರಕ್ಷತೆಯನ್ನು ಖಾತರಿಪಡಿಸಿದ್ದಾರೆ. ಮೈನಸ್ 50 ರಿಂದ 60 ಡಿಗ್ರಿ ಸೆಲ್ಸಿಯಸ್ನಷ್ಟು ಅತ್ಯಂತ ಕಡಿಮೆ ಉಷ್ಣಾಂಶದ ಸಿಯಾಚಿನ್ ಮತ್ತು ಲಡಾಖ್ ಗಲ್ವಾನ್ ಕಣಿವೆಯ ಕೊರೆಯುವ ಚಳಿಯಿಂದ ಹಿಡಿದು, 50 ಡಿಗ್ರಿಯಷ್ಟು ಅತ್ಯಧಿಕ ಉಷ್ಣಾಂಶದ ಜೈಸಲ್ಮೇರ್ವರೆಗೆ ಭೂಮಿ, ಆಕಾಶ ಮತ್ತು ವಿಶಾಲ ಕರಾವಳಿ ಪ್ರದೇಶಗಳಲ್ಲಿ ನಮ್ಮ ಸೇನಾನಿಗಳು ಪ್ರತಿಕ್ಷಣವೂ ಕಟ್ಟೆಚ್ಚರ ವಹಿಸಿದ್ದಾರೆ. ನಮ್ಮ ಯೋಧರ ಶೌರ್ಯ, ದೇಶಭಕ್ತಿ ಮತ್ತು ಸಮರ್ಪಣಾ ಮನೋಭಾವದ ಬಗ್ಗೆ ಪ್ರತಿ ಪ್ರಜೆಗೂ ಅಭಿಮಾನವಿದೆ.

7.         ಆಹಾರ ಭದ್ರತೆ, ರಾಷ್ಟ್ರೀಯ ಸುರಕ್ಷತೆ, ರೋಗರುಜಿನ-ವಿಕೋಪಗಳ ವಿರುದ್ಧ ಸಂರಕ್ಷಣೆ ಹಾಗೂ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ತಮ್ಮ ಕೊಡುಗೆಯ ಮೂಲಕ ವಿಜ್ಞಾನಿಗಳೂ ನಮ್ಮ ರಾಷ್ಟ್ರೀಯ ಕಾರ್ಯ ಯೋಜನೆಗಳಿಗೆ ಪುಷ್ಟಿ ತುಂಬಿದ್ದಾರೆ. ಬಾಹ್ಯಾಕಾಶದಿಂದ ಕೃಷಿ ಭೂಮಿಯವರೆಗೆ, ಶೈಕ್ಷಣಿಕ ಸಂಸ್ಥೆಗಳಿಂದ ಆಸ್ಪತ್ರೆಗಳವರೆಗೆ ನಮ್ಮ ಬದುಕು ಮತ್ತು ಕೆಲಸ ಕಾರ್ಯವನ್ನು ವಿಜ್ಞಾನಿ ಸಮುದಾಯ ಶ್ರೀಮಂತಗೊಳಿಸಿದೆ. ಕೊರೋನಾ ವೈರಾಣುವನ್ನು ಮಣಿಸಲು ನಮ್ಮ ವಿಜ್ಞಾನಿಗಳು ಹಗಲಿರುಳೂ ಶ್ರಮಿಸುತ್ತಿದ್ದು, ದಾಖಲೆಯ ಸಮಯದಲ್ಲಿ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯ ಸಾಧನೆಯೊಂದಿಗೆ ನಮ್ಮ ವಿಜ್ಞಾನಿಗಳು ಮನುಕುಲದ ಕಲ್ಯಾಣಕ್ಕೆ ಕೊಡುಗೆಯ ಮಹತ್ತರ ಅಧ್ಯಾಯವನ್ನು ಕೊಡಮಾಡಿದ್ದಾರೆ. ವೈದ್ಯರು, ಆಡಳಿತಗಾರರು ಹಾಗೂ ಸಮಾಜದ ವಿವಿಧ ವರ್ಗಗಳ ಜನತೆಯೊಂದಿಗೆ ನಮ್ಮ ವಿಜ್ಞಾನಿಗಳು ಒಗ್ಗೂಡಿ ವೈರಾಣುವನ್ನು ಹತ್ತಿಕ್ಕಿ, ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶದಲ್ಲಿ ಮರಣ ದರವನ್ನು ಕಡಿಮೆ ಮಟ್ಟದಲ್ಲಿ ಇರಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.

ಅಂತೆಯೇ ನಮ್ಮೆಲ್ಲ ರೈತರು, ಯೋಧರು ಮತ್ತು ವಿಜ್ಞಾನಿಗಳು ವಿಶೇಷ ಪ್ರಶಂಸೆಗೆ ಭಾಜನರಾಗಿದ್ದಾರೆ ಹಾಗೂ ಗಣರಾಜ್ಯೋತ್ಸವದ ಪವಿತ್ರ ಸಂದರ್ಭದಲ್ಲಿ ದೇಶ ಇವರಿಗೆ ಧನ್ಯತಾಭಾವದೊಂದಿಗೆ ಶುಭ ಹಾರೈಸುತ್ತದೆ.

ಪ್ರಿಯ ದೇಶ ಬಾಂಧವರೇ,

8.         ಕಳೆದ ವರ್ಷ ದೈತ್ಯ ಪರಿಮಾಣದ ನೈಸರ್ಗಿಕ ಅನಿಷ್ಟದ ಹಿನ್ನೆಲೆಯಲ್ಲಿ ಮನುಕುಲದ ಜೀವನ ಬಹುತೇಕ ಸ್ಥಗಿತಗೊಂಡಿತ್ತು. ಆಗ ಕೆಲವೊಮ್ಮೆ ನಾನು, ಸಂವಿಧಾನದ ಮೂಲಮಂತ್ರದ ಚಿಂತನೆಯಲ್ಲಿ ಮಗ್ನನಾಗಿಬಿಡುತ್ತಿದ್ದೆ. ಭ್ರಾತೃತ್ವದ ನಮ್ಮ ಸಾಂವಿಧಾನಿಕ ಮೌಲ್ಯದ ಹೊರತಾಗಿ, ಸಾಂಕ್ರಾಮಿಕಕ್ಕೆ ನಮ್ಮ ಪರಿಣಾಮಕಾರಿ ಪ್ರತ್ಯುತ್ತರ ಸಾಧ್ಯವಾಗುತ್ತಿರಲಿಲ್ಲ. ಭಾರತೀಯರು ನಿಕಟವಾಗಿ ಹೆಣೆದ ಕುಟುಂಬದಂತಿದ್ದು, ಸಮಾನಶತ್ರು ಕೊರೋನಾ ವೈರಾಣು ಹಿನ್ನೆಲೆಯಲ್ಲಿ ಒಬ್ಬರನ್ನೊಬ್ಬರು ರಕ್ಷಿಸುವ ಅನನ್ಯ ತ್ಯಾಗ ತೋರಿದ್ದಾರೆ. ಕೋವಿಡ್-19 ಸೋಂಕಿತರ ರಕ್ಷಣೆಗಾಗಿ, ತಮ್ಮ ಜೀವದ ಹಂಗು ತೊರೆದು ಶ್ರಮಿಸುವ ವೈದ್ಯರು, ನರ್ಸ್ಗಳು, ಅರೆವೈದ್ಯಕೀಯ ಸಿಬ್ಬಂದಿ, ಆರೋಗ್ಯ ರಕ್ಷಣಾ ಆಡಳಿತಗಾರರು ಮತ್ತು ನೈರ್ಮಲ್ಯ ಕಾರ್ಮಿಕರ ಬಗ್ಗೆ ವೇಳೆ ಚಿಂತನೆ ಮಾಡುತ್ತಿದ್ದೇನೆ. ಕೆಲವರು ತಮ್ಮ ಜೀವವನ್ನೂ ಸಹ ತೆತ್ತರು, ಇವರ ಜೊತೆಗೆ ಸುಮಾರು ಒಂದೂವರೆ ಲಕ್ಷ ಜನ ಸಾಂಕ್ರಾಮಿಕದಿಂದ ಅಸುನೀಗಿದ್ದಾರೆ. ಮೃತರ ಕುಟುಂಬದವರಿಗೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ನಮ್ಮ ಮುಂಚೂಣಿ ಕೊರೋನಾ ಯೋಧರು-ಅಸಾಮಾನ್ಯರಾಗಿ ಪರಿವರ್ತನೆಯಾದ ಸಾಮಾನ್ಯ ನಾಗರಿಕರು. ಇನ್ನೂ ಮುಗಿಯದ ದುರಂತ ಅಧ್ಯಾಯದ ಇತಿಹಾಸ ಬರೆಯುವಾಗ, ಬಿಕ್ಕಟ್ಟಿಗೆ ಯಾರೊಬ್ಬರೂ ಸನ್ನದ್ಧರಾಗಿರದ ವೇಳೆ, ನೀವು ಒಡ್ಡಿದ ಧೀರೋದಾತ್ತ ಪ್ರತಿರೋಧವನ್ನು, ಭವಿಷ್ಯದ ಪೀಳಿಗೆಗಳು ಗಮನಿಸುತ್ತವೆ ಎಂಬುದು ನನ್ನ ವಿಶ್ವಾಸ.

9.         ನಮ್ಮ ದೇಶದ ಜನಸಂಖ್ಯಾ ಸಾಂದ್ರತೆ, ಸಾಂಸ್ಕøತಿಕ ಪರಂಪರೆಯ ವಿಭಿನ್ನತೆ, ಪ್ರಾಕೃತಿಕ ಮತ್ತು ಭೌಗೋಳಿಕ ಸವಾಲುಗಳ ಹಿನ್ನೆಲೆಯಲ್ಲಿ ಕೋವಿಡ್-19 ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ನಮಗೆ ತುಂಬಾ ಕಷ್ಟದ ಕೆಲಸವಾಗಿತ್ತು. ಆದರೂ ವೈರಾಣು ವ್ಯಾಪಕವಾಗಿ ಹರಡುವುದನ್ನು ನಾವು ತಡೆದಿದ್ದೇವೆ.

10.       ಗಂಭೀರವಾದ ನೈಸರ್ಗಿಕ ವಿಕೋಪದ ನಡುವೆಯೂ, ಅನೇಕ ಕ್ಷೇತ್ರಗಳಲ್ಲಿ ನಾವು ನಮ್ಮ ಚಟುವಟಿಕೆಗಳನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದೇವೆ. ಸಾಂಕ್ರಾಮಿಕ, ಯುವ ಜನಾಂಗದ ಕಲಿಕಾ ಪ್ರಕ್ರಿಯೆಯನ್ನು ಹಳಿತಪ್ಪಿಸುವ ಬೆದರಿಕೆಯೊಡ್ಡಿತು. ಆದರೆ ಸಂಸ್ಥೆಗಳು ಮತ್ತು ಬೋಧಕರು, ಹೊಸ ತಂತ್ರಜ್ಞಾನವನ್ನು ತ್ವರಿತವಾಗಿ ಅಳವಡಿಸಿಕೊಂಡು ಶಿಕ್ಷಣದಲ್ಲಿ ತೊಡಕಾಗದಂತೆ ನೋಡಿಕೊಂಡರು. ಹೆಚ್ಚಿನ ಜನಸಾಂದ್ರತೆ ಹೊಂದಿರುವ ಬಿಹಾರ ಹಾಗೂ ದುರ್ಗಮವಾದ ಅಲ್ಲದೆ ಇನ್ನಿತರ ಸವಾಲುಗಳು ಇರುವ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ಗಳಲ್ಲಿ ಮುಕ್ತ, ನ್ಯಾಯ ಸಮ್ಮತವಷ್ಟೇ ಅಲ್ಲದೆ, ಸುಭದ್ರ ರೀತಿಯಲ್ಲಿ ಚುನಾವಣೆಗಳನ್ನು ನಡೆಸಿ, ನಮ್ಮ ಪ್ರಜಾಸತ್ತೆ ಹಾಗೂ ಚುನಾವಣಾ ಆಯೋಗ ಗಮನಾರ್ಹ ಸಾಧನೆ ತೋರಿವೆ. ನ್ಯಾಯಾಂಗ, ತಂತ್ರಜ್ಞಾನದ ನೆರವು ಪಡೆದುಕೊಂಡು, ಕಾರ್ಯ ಮುಂದುವರಿಸಿ ನ್ಯಾಯದಾನ ಮಾಡುತ್ತಿದೆ. ಪಟ್ಟಿ ಉದ್ದವಾಗಿದೆ.

11.       ಜನರ ಜೀವವನ್ನು ಅಪಾಯಕ್ಕೆ ಒಡ್ಡದೆ, ಆರ್ಥಿಕತೆಯನ್ನು ಮುಕ್ತಗೊಳಿಸಲು, ಅನ್ಲಾಕ್ ಪ್ರಕ್ರಿಯೆಯನ್ನು ಜಾಗರೂಕತೆಯಿಂದ ನಿರ್ಣಯಿಸಲಾಯಿತು. ಇದು ಪರಿಣಾಮಕಾರಿ ಎಂಬುದಾಗಿ ಸಾಬೀತಾಗಿದ್ದು, ಆರ್ಥಿಕತೆ ನಿರೀಕ್ಷಿಸಿದ್ದಕ್ಕಿಂತಲೂ ವೇಗವಾಗಿ ಪುನಶ್ಚೇತನಗೊಳ್ಳುವ ಸೂಚನೆಗಳನ್ನು ನೀಡಲಾರಂಭಿಸಿತು. ಹಿಂದೆಂದೂ ಇಲ್ಲದಂತಹ ಇತ್ತೀಚಿನ ಜಿಎಸ್ಟಿ ಸಂಗ್ರಹ ಹಾಗೂ ವಿದೇಶಿ ಹೂಡಿಕೆಗೆ ಅತ್ಯಂತ ಪ್ರಶಸ್ತ ತಾಣವಾಗಿ ಭಾರತ ಹೊರಹೊಮ್ಮಿರುವುದು, ನಮ್ಮ ತ್ವರಿತ ಆರ್ಥಿಕ ಪುನಶ್ಚೇತನದ ಸಂಕೇತವಾಗಿದೆ. ಸುಲಭ ಸಾಲಗಳನ್ನು ನೀಡುವ ಮೂಲಕ ಉದ್ಯಮ ಶೀಲತಾ ಮನೋಭಾವವನ್ನು ಉತ್ತೇಜಿಸಲು ಸರ್ಕಾರ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಪ್ರೋತ್ಸಾಹಿಸುತ್ತಿದೆ. ಹಾಗೂ ವಿನೂತನ ವ್ಯವಹಾರ ತಂತ್ರಗಳನ್ನು ರೂಢಿಸಿಕೊಳ್ಳಲು ಅವುಗಳಿಗೆ ನೆರವಾಗುತ್ತಿದೆ.

ಪ್ರಿಯ ದೇಶವಾಸಿಗಳೇ,

12.       ಹಿಂದಿನ ವರ್ಷದ ಪ್ರತಿಕೂಲ ಸಂದರ್ಭಗಳು, ಸಹಸ್ರಾರು ವರ್ಷಗಳಿಂದ ನಮ್ಮನ್ನು ಒಂದಾಗಿ ಇಟ್ಟಿರುವ, ನಮ್ಮ ಹೃದಯಾಂತರಾಳದಲ್ಲಿ ಹುದುಗಿರುವ ಆರೈಕೆ, ಮನುಕುಲದ ಕಾಳಜಿ, ಹಾಗೂ ಭ್ರಾತೃತ್ವ ಮನೋಭಾವವನ್ನು ನೆನಪು ಮಾಡಿಕೊಟ್ಟಿವೆಯಷ್ಟೇ. ಪ್ರತಿಯೊಂದು ರಂಗದಲ್ಲೂ ಭಾರತೀಯರು ಸಂದರ್ಭಕ್ಕೆ ಸರಿದೂಗುತ್ತಾರೆ. ಹಾಗೂ ಇತರರ ಹಿತಕ್ಕೆ ಮನ್ನಣೆ ನೀಡುತ್ತಾರೆ. ಭಾರತೀಯರಾದ ನಾವು ಮನುಕುಲಕ್ಕಾಗಿ ಬದುಕುತ್ತೇವೆ-ಮಡಿಯುತ್ತೇವೆ. ಭಾರತೀಯ ತತ್ವಾದರ್ಶವನ್ನು ಮಹಾನ್ ಕವಿ ಮೈಥಿಲಿ ಶರಣ್ ಗುಪ್ತ್ ಹೀಗೆ ವರ್ಣಿಸಿದ್ದಾರೆ.

ಉಸೀ ಉದಾರ್ ಕೀ ಸದಾ, ಸಜೀವ್ ಕೀರ್ತಿ ಕೂಜತೀ

                        ತಥಾ ಉಸೀ ಉದಾರ್ ಕೋ, ಸಮಸ್ತ್ ಸೃಷ್ಟಿ ಪೂಜತೀ

                        ಅಖಂಡ್ ಆತ್ಮಭಾವ್ ಜೋ, ಅಸೀಮ್ ವಿಶ್ವ್ಮೇ ಭರೇ

                        ವಹಿ ಮನುಷ್ಯ್ ಹೇ ಕಿ ಜೋ, ಮನುಷ್ಯ್ ಕೇ ಲಿಯೇ ಮರೇ

ಅಂದರೆ :            ಅಮರಗೀತೆಗಳಲ್ಲಿ ಘನತೆವೆತ್ತ ದಯಾಳು

                        ಜಗದ ಧನ್ಯತೆಗೆ ಪಾತ್ರ ಕರುಣಾಳು

                        ಪರಿಧಿಯರಿಯದ ಬ್ರಹ್ಮಾಂಡಕೆ ಹಚ್ಚಿದ ಏಕತೆಯ ಕಿಚ್ಚು

                        ಒಡನಾಡಿಗಳಿಗಾಗಿ ಮಡಿವ ಅವನೆ ಮನುಜರಲಿ ಹೆಚ್ಚು.

ಮಾನವೀಯ ಪ್ರೇಮ ಹಾಗೂ ತ್ಯಾಗದ ಸ್ಪೂರ್ತಿ, ನಮ್ಮನ್ನು ಶಿಖರದೆತ್ತರಕ್ಕೆ ಕೊಂಡೊಯ್ಯುವುದೆಂಬುದು ನನ್ನ ಅಚಲ ವಿಶ್ವಾಸ.

13.       ನಾವು, 2020ನ್ನು ಒಂದು ಕಲಿಕಾ ವರ್ಷವಾಗಿ ನೋಡೋಣ, ಪ್ರಕೃತಿ ಮಾತೆಯ ಪುನರುಜ್ಜೀವನದ ಪವಾಡಗಳು ಅಲ್ಲಿ ಘಟಿಸಿವೆ. ಸಣ್ಣದು ನಗಣ್ಯವಲ್ಲ ಆದರೆ ಅದು ದೊಡ್ಡದಕ್ಕೆ ಪೂರಕ ಎಂಬ ಕಠಿಣ ಪಾಠಗಳನ್ನು ಮನುಕುಲಕ್ಕೆ ಅವು ಹೇಳಿಕೊಟ್ಟಿವೆ.

ಇಂತಹ ಸಾಂಕ್ರಾಮಿಕಗಳ ಅಪಾಯವನ್ನು ತಗ್ಗಿಸುವ ದೃಷ್ಟಿಯಿಂದ, ಹವಾಮಾನ ಬದಲಾವಣೆಯಂತಹ ವಿಚಾರಕ್ಕೆ ಜಾಗತಿಕ ಮಟ್ಟದಲ್ಲಿ ಅಗ್ರ ಆದ್ಯತೆ ಲಭಿಸುವುದೆಂಬ ನಂಬಿಕೆ ನನ್ನದು.

ಪ್ರಿಯ ದೇಶ ಬಾಂಧವರೇ,

14.       ಪ್ರಧಾನಮಂತ್ರಿಯವರು, ಬಿಕ್ಕಟ್ಟನ್ನು ಒಂದು ಅವಕಾಶವಾಗಿ ಪರಿವರ್ತಿಸಿ, ‘ಆತ್ಮ ನಿರ್ಭರ್ ಭಾರತ್ ಅಭಿಯಾನ್ಅಥವಾ ಸ್ವಾವಲಂಬಿ ಭಾರತ್ ಮಿಷನ್ಗೆ ಕರೆ ನೀಡಿದ್ದಾರೆ.

ನಮ್ಮ ಸ್ಪಂದನಾಶೀಲ ಪ್ರಜಾತಂತ್ರ, ಉದ್ಯಮಶೀಲ ಮತ್ತು ಪ್ರತಿಭಾವಂತ ಸಹನಾಗರಿಕರು, ವಿಶೇಷವಾಗಿ ಯುವಜನತೆ, ಸ್ವಾವಲಂಬಿ ಭಾರತವನ್ನು ರೂಪಿಸುವ ನಮ್ಮ ಪ್ರಯತ್ನಗಳಿಗೆ ಚೈತನ್ಯ ತುಂಬುತ್ತಾರೆ. ದೇಶದಲ್ಲಿ ಸರಕು ಮತ್ತು ಸೇವೆಗಳಿಗೆ ಇರುವ ಬೇಡಿಕೆ, ಇವುಗಳ ಈಡೇರಿಕೆಗೆ ದೇಶೀಯ ಪ್ರಯತ್ನಗಳು, ಹಾಗೂ ಇಂತಹ ಪ್ರಯತ್ನಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ, ಆತ್ಮ ನಿರ್ಭರ್ ಭಾರತ್ ಅಭಿಯಾನವನ್ನು ಸದೃಢಗೊಳಿಸುತ್ತಿವೆ. ಮಿಷನ್ನಡಿ ಆರ್ಥಿಕ ಬೆಳವಣಿಗೆ ಹಾಗೆಯೇ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ಹಾಗೂ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೆಚ್ಚು ಬಲಿಷ್ಠಗೊಳಿಸುವುದರೊಂದಿಗೆ, ಉದ್ಯೋಗ ಸೃಷ್ಟಿಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಜನತೆ ತಾವಾಗಿಯೇ ಮುನ್ನಡೆಸುತ್ತಿರುವ ಆಂದೋಲನವಾಗಿಬಿಟ್ಟಿದೆ.

15.       ನಮ್ಮ ದೇಶ, 75 ವರ್ಷಗಳನ್ನು ಪೂರೈಸುವ 2022ನೇ ವರ್ಷದ ವೇಳೆಗೆ, ನವಭಾರತವನ್ನು ರೂಪಿಸುವ ಆಶೋತ್ತರಗಳಿಗೆ ಅನುಗುಣವಾಗಿಯೇ ಆತ್ಮ ನಿರ್ಭರ್ ಭಾರತ್ ಅಭಿಯಾನ ಸಾಗಿದೆ. ಪ್ರತಿಯೊಂದು ಕುಟುಂಬಕ್ಕೂ ಮೂಲ ಸೌಕರ್ಯಗಳಿಂದ ಕೂಡಿದ ಪಕ್ಕಾ ಮನೆಗಳನ್ನು ಒದಗಿಸುವುದರಿಂದ ಹಿಡಿದು ರೈತರ ವರಮಾನವನ್ನು ದ್ವಿಗುಣಗೊಳಿಸುವವರೆಗೆ, ಮಹತ್ವಪೂರ್ಣ ಗುರಿಗಳನ್ನು ಸಾಧಿಸುವಲ್ಲಿ ನಾವು ಕಂಕಣಬದ್ಧರಾಗಿದ್ದು, ದೇಶದ ಪಯಣದಲ್ಲಿ ಇದೊಂದು ಗಮನಾರ್ಹ ಮೈಲುಗಲ್ಲಾಗಿರುತ್ತದೆ. ನವಭಾರತದ, ಸೇರ್ಪಡಿತ ಸಮಾಜ ನಿರ್ಮಾಣದ ಹಿನ್ನೆಲೆಯಲ್ಲಿ ಶಿಕ್ಷಣ, ಆರೋಗ್ಯ, ಪೌಷ್ಠಿಕಾಹಾರ, ಅವಕಾಶ ವಂಚಿತರ ಅಭ್ಯುದಯ ಮತ್ತು ಮಹಿಳೆಯರ ಕಲ್ಯಾಣಕ್ಕೆ ನಾವು ವಿಶೇಷ ಒತ್ತು ನೀಡಿದ್ದೇವೆ.

16.       ಪ್ರತಿಕೂಲತೆ, ಕೆಲವೊಮ್ಮೆ ಮಹಾನ್ ಶಿಕ್ಷಕನ ಪಾತ್ರ ನಿರ್ವಹಿಸುತ್ತದೆ. ಇದು ನಮ್ಮನ್ನು ಬಲಿಷ್ಠಗೊಳಿಸುತ್ತದೆ. ಹೆಚ್ಚಿನ ವಿಶ್ವಾಸ ತುಂಬುತ್ತದೆ. ವಿಶ್ವಾಸದೊಂದಿಗೆಯೇ ಭಾರತ ಹಲವಾರು ಕ್ಷೇತ್ರಗಳಲ್ಲಿ ಬೃಹತ್ ದಾಪುಗಾಲಿರಿಸಿದೆ. ಆರ್ಥಿಕ ಸುಧಾರಣೆಗಳು ತ್ವರಿತಗತಿಯಲ್ಲಿ ಮುಂದುವರಿದಿವೆ ಹಾಗೂ ಕಾರ್ಮಿಕ ಮತ್ತು ಕೃಷಿ ಕ್ಷೇತ್ರಗಳಲ್ಲಿ ಶಾಸನ ಮೂಲಕ, ಬಹು ದಿನಗಳಿಂದ ಎದುರು ನೋಡುತ್ತಿದ್ದ ಸುಧಾರಣೆಗಳಿಂದ ಉತ್ತೇಜಿತವಾಗಿವೆ. ಸುಧಾರಣೆಯ ಹಾದಿ ಆರಂಭಿಕ ಹಂತಗಳಲ್ಲಿ ತಪ್ಪುಗ್ರಹಿಕೆಗಳಿಗೆ ಎಡೆಮಾಡಿಕೊಡಬಹುದು. ಆದಾಗ್ಯೂ ರೈತರ ಕಲ್ಯಾಣಕ್ಕೆ ಸರ್ಕಾರ ಏಕಚಿತ್ತದಿಂದ ಸಮರ್ಪಿಸಿಕೊಂಡಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

17.       ಇಷ್ಟೇ ಪ್ರಮುಖವಾದದ್ದು ಹಾಗೂ ಹೆಚ್ಚು ಜೀವಗಳನ್ನು ನೇರವಾಗಿ ತಾಟ್ಟುವಂತದ್ದು, ದೀರ್ಘ ಕಾಲದಿಂದ ಬಾಕಿ ಇದ್ದ, ಶಿಕ್ಷಣ ಕ್ಷೇತ್ರದಲ್ಲಿನ ಸಮಗ್ರ ಸುಧಾರಣೆಯ-ರಾಷ್ಟ್ರೀಯ ಶಿಕ್ಷಣ ನೀತಿ – 2020. ಸಾಂಪ್ರದಾಯಿಕತೆ, ಜೊತೆಗೆ ತಾಂತ್ರಿಕತೆಗೆ ಒತ್ತು ನೀಡಿರುವ ಇದು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಜ್ಞಾನತಾಣವಾಗಿ ಹೊರಹೊಮ್ಮುವ ಆಶಯದ ನವಭಾರತಕ್ಕೆ ಅಡಿಗಲ್ಲಾಗಲಿದೆ. ವಿದ್ಯಾರ್ಥಿಗಳಲ್ಲಿನ ಅಂತರ್ಗತ ಪ್ರತಿಭೆಯನ್ನು ಪೋಷಿಸುವ ಹಾಗೂ ಬದುಕಿನ ಸವಾಲುಗಳನ್ನು ಎದುರಿಸುವಲ್ಲಿ ಅವರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ, ಸುಧಾರಣೆಗಳು ಭರವಸೆ ಮೂಡಿಸುತ್ತವೆ.

18.       ಎಲ್ಲ ಪ್ರಯತ್ನಗಳ ಒಟ್ಟಾರೆ ಫಲಿತಾಂಶ ನಮ್ಮ ಮುಂದಿದೆ. ಅನಿರೀಕ್ಷಿತ ಸಂಕಷ್ಟದ ಸುಮಾರು ಒಂದು ವರ್ಷದ ತರುವಾಯ, ಭಾರತ ಇಂದು ಧೃತಿ ಗೆಟ್ಟಿಲ್ಲ, ಬದಲಿಗೆ ಆತ್ಮ ವಿಶ್ವಾಸದಿಂದ ದೃಢವಾಗಿ ನಿಂತಿದೆ. ಆರ್ಥಿಕ ಹಿಂಜರಿಕೆ ಮರುಸ್ಥಾಪನೆಯಾಗಿದೆ.

ಸ್ವಾವಲಂಬಿ ಭಾರತ, ಕೋವಿಡ್-19ಕ್ಕೆ ತನ್ನದೇ ಆದ ಲಸಿಕೆಯನ್ನು ತಯಾರಿಸಿದೆ ಅಲ್ಲದೆ, ಸಾಮೂಹಿಕ ಲಸಿಕಾ ಅಭಿಯಾನಕ್ಕೆ ಇದೀಗ ಮುಂದಾಗಿದೆ. ಇದು ಇತಿಹಾಸದಲ್ಲಿ ತನ್ನ ರೀತಿಯಲ್ಲಿ ಬೃಹತ್ ಅಭಿಯಾನ ಎನಿಸಿದೆ. ಅಭಿಯಾನದ ಯಶಸ್ವಿಗೆ ಆಡಳಿತ ಮತ್ತು ಆರೋಗ್ಯ ಸೇವೆಗಳು ಟೊಂಕಕಟ್ಟಿ ಕಾರ್ಯಮಗ್ನವಾಗಿವೆ. ಜೀವಸೆಲೆಯನ್ನು ಉಪಯೋಗಿಸಿಕೊಳ್ಳಬೇಕು ಹಾಗೂ ಮಾರ್ಗಸೂಚಿ ಅನುಸಾರ ಲಸಿಕೆ ಪಡೆದುಕೊಳ್ಳಬೇಕು ಎಂದು ದೇಶವಾಸಿಗಳನ್ನು ನಾನು ಆಗ್ರಹ ಪಡಿಸುತ್ತೇನೆ. ನಿಮ್ಮ ಆರೋಗ್ಯ, ನಿಮ್ಮ ಪ್ರಗತಿಯ ಹಾದಿಯನ್ನು ಮುಕ್ತಗೊಳಿಸುವುದು.

19.       ಜಾಗತಿಕವಾಗಿ ಜನರ ಸಂಕಷ್ಟವನ್ನು ದೂರ ಮಾಡಲು ಹಾಗೂ ಸಾಂಕ್ರಾಮಿಕವನ್ನು ನಿಗ್ರಹಿಸಲು ಹಲವಾರು ದೇಶಗಳಿಗೆ ನಾವೀಗ ಔಷಧ ಮತ್ತು ಆರೋಗ್ಯ ರಕ್ಷಣೆಯ ಸಾಮಗ್ರಿಗಳನ್ನು ಪೂರೈಸುತ್ತಿದ್ದೇವೆ. ಹಾಗಾಗಿ ಇಂದು ಭಾರತವನ್ನು ಜಗತ್ತಿನ ಔಷಧಾಲಯಎಂದು ಸರಿ ಅರ್ಥದಲ್ಲೇ ಕರೆಯಲಾಗುತ್ತಿದೆ. ನಾವೀಗ ಇತರೆ ದೇಶಗಳಿಗೂ ಲಸಿಕೆ ಪೂರೈಸುತ್ತಿದ್ದೇವೆ.

ಪ್ರಿಯ ದೇಶವಾಸಿಗಳೇ

20.       ಕಳೆದ ವರ್ಷ ಪ್ರತಿಕೂಲ ಸನ್ನಿವೇಶವಾಗಿತ್ತು. ಹಲವು ನೆಲೆಗಳಿಂದ ಇದು ತಲೆದೋರಿತ್ತು. ನಾವು ನಮ್ಮ ಗಡಿಯಲ್ಲಿ ವಿಸ್ತರಣಾ ವಾದವನ್ನು ಎದುರಿಸಬೇಕಾಯಿತು. ಆದರೆ ನಮ್ಮ ವೀರ ಯೋಧರು ಇದನ್ನು ಭಂಗಗೊಳಿಸಿದರು. ಗುರಿ ಸಾಧನೆಯಲ್ಲಿ 20 ಯೋಧರು ಪ್ರಾಣಾರ್ಪಣೆ ಮಾಡಿದರು. ಧೀರ ಯೋಧರಿಗೆ ದೇಶ ಸದಾ ಕೃತಜ್ಞವಾಗಿರುತ್ತದೆ. ಶಾಂತಿಗೆ ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆಯಾದರೂ, ನಮ್ಮ ಭದ್ರತೆಯನ್ನು ಉಪೇಕ್ಷಿಸುವ ಯಾವುದೇ ಯತ್ನವನ್ನು ಮಣಿಸಲು ನಮ್ಮ ರಕ್ಷಣಾ ಪಡೆಗಳಾದ ಸೇನೆ, ವಾಯುಪಡೆ ಮತ್ತು ನಾಕಾಪಡೆಗಳು 

ಸು-ಸಹಯೋಗದಲ್ಲಿ ಸಮರ್ಪಕವಾಗಿ ಸಂಘಟಿತವಾಗಿವೆ. ಯಾವುದೇ ಬೆಲೆ ತೆತ್ತಾದರೂ ಸರಿ, ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲಾಗುವುದು. ಭಾರತದ ದೃಢ ಮತ್ತು ಸೈದ್ಧಾಂತಿಕ ನಿಲುವಿನ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಂಪೂರ್ಣ ಮನದಟ್ಟಾಗುವಂತೆ ನೋಡಿಕೊಂಡಿದ್ದೇವೆ.

21.       ಭಾರತ ಮುಂದೆ ಸಾಗುತ್ತಿದ್ದು, ಜಗತ್ತಿನಲ್ಲಿ ತನ್ನ ನ್ಯಾಯಯುತ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ತನ್ನ ಪ್ರಭಾವದ ಛಾಪು ವಿಸ್ತರಣೆಯಾಗುತ್ತಿದ್ದು, ಜಗತ್ತಿನ ಬಹುಭಾಗವನ್ನು ಆವರಿಸುತ್ತಿದೆ. ವರ್ಷ ಭದ್ರತಾ ಸಮಿತಿಯಲ್ಲಿ ಖಾಯಂಯೇತರ ಸದಸ್ಯ ರಾಷ್ಟ್ರವಾಗಿ ಭಾರತ, ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಪಡೆದ ರೀತಿ, ಪ್ರಭಾವಕ್ಕೆ ಒಂದು ನಿದರ್ಶನವಾಗಿದೆ. ಜಗತ್ತಿನೆಲ್ಲೆಡೆಯ ನಾಯಕರೊಂದಿಗಿನ ನಮ್ಮ ಒಡನಾಟದ ರೀತಿ ನಡವಳಿಕೆ, ಹಲವು ಪಟ್ಟು ವರ್ಧಿಸಿದೆ. ಭಾರತ ತನ್ನ ಸ್ಪಂದನಾಶೀಲ ಪ್ರಜಾತಂತ್ರದೊಂದಿಗೆ, ಇದೊಂದು ಜವಾಬ್ದಾರಿಯುತ ಮತ್ತು ನಂಬಿಕಸ್ತ ದೇಶವೆಂಬ ಘನತೆಯನ್ನು ನ್ಯಾಯಯುತವಾಗಿಯೇ ಸಂಪಾದಿಸಿದೆ.

22.       ನಮ್ಮ ಸಾಂವಿಧಾನಿಕ ಮಂತ್ರಗಳನ್ನು ನಾವು ಸದಾ ನೆನಪು ಮಾಡಿಕೊಳ್ಳುತ್ತಲೇ ಇರುತ್ತೇವೆ. ರಾಷ್ಟ್ರಪಿತನ ಜೀವನ ಮತ್ತು ಚಿಂತನೆಗಳ ಮಂಥನವನ್ನು ನಮ್ಮ ದಿನನಿತ್ಯದ ಒಂದು ಭಾಗವಾಗಿ ಮಾಡಿಕೊಳ್ಳಬೇಕು ಎಂದು ನಾನು ಮುಂಚೆಯೇ ಹೇಳಿದ್ದೆ. ಈಗ ಅದನ್ನು ಪುನರುಚ್ಚರಿಸುತ್ತಿದ್ದೇನೆ. ಪ್ರತಿಯೊಬ್ಬರ ಕಣ್ಣೀರನ್ನು ಒರೆಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಸಮತೆ ಎನ್ನುವುದು ನಮ್ಮ ಗಣತಂತ್ರ ಮಹಾಯಜ್ಞದ ಬೀಜಮಂತ್ರವಾಗಿದೆ. ಸಾಮಾಜಿಕ ಸಮಾನತೆ ಪ್ರತಿಯೊಬ್ಬರಿಗೂ-ಗ್ರಾಮೀಣರು, ಮಹಿಳೆಯರು, ಸಮಾಜದ ದುರ್ಬಲ ವರ್ಗದವರು ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ದಿವ್ಯಾಂಗ ಜನರು ಮತ್ತು ವಯೋವೃದ್ಧರಿಗೆ ಘನತೆ ಗೌರವ ನೀಡಬೇಕೆಂಬುದನ್ನು ಅಪೇಕ್ಷಿಸುತ್ತದೆ. ಆರ್ಥಿಕ ಸಮಾನತೆ, ಎಲ್ಲರಿಗೂ ಸಮಾನ ಅವಕಾಶ, ದುರ್ಬಲರನ್ನು ಕೈಹಿಡಿದು ನಡೆಸುವ ಅಂಶವನ್ನು ಒಳಗೊಂಡಿರುತ್ತದೆ. ಮಾನವ ಸೇವೆಯ ಕಾರ್ಯಗಳು ನಮ್ಮ ಭಾವ ಸ್ಪಂದನೆಯ ಸಾಮಥ್ರ್ಯವನ್ನು ವೃದ್ಧಿಸುತ್ತವೆ. ನಮ್ಮ ಮುಂದಿನ ಸಂಘಟಿತ ಹಾದಿಯಲ್ಲಿ ಭ್ರಾತೃತ್ವ, ನೈತಿಕ ದಿಕ್ಚೂಚಿ. ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು 1948 ನವೆಂಬರ್ 4 ರಂದು, ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನದ ಕರಡು ಪ್ರತಿ ಮಂಡಿಸುವ ವೇಳೆ ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದಂತೆ, ಸಾಂವಿಧಾನಿಕ ನೈತಿಕತೆಯ ಪಥದಲ್ಲಿ ನಾವು ಮುಂದುವರಿಯೋಣ. ಸಾಂವಿಧಾನಿಕ ನೈತಿಕತೆ ಎಂದರೆ, ಸಂವಿಧಾನದಲ್ಲಿ ಅಡಕವಾಗಿರುವ ಮೌಲ್ಯಗಳ ಪಾರಮ್ಯ ಎಂಬುದನ್ನು ಅವರು ವಿಶದಪಡಿಸಿದ್ದಾರೆ.

ಪ್ರಿಯ ದೇಶ ಬಾಂಧವರೇ,

23. ನಾವು ನಮ್ಮ ಗಣತಂತ್ರದ ವಾರ್ಷಿಕೋತ್ಸವದ ವಿಜೃಂಬಣೆಯಲ್ಲಿರುವ ಸಂದರ್ಭದಲ್ಲಿ, ವಿದೇಶಗಳಲ್ಲಿ ನೆಲೆಸಿರುವ ನಮ್ಮ ಸೋದರ-ಸೋದರಿಯರ ಬಗ್ಗೆ ನಾನು ಆಲೋಚಿಸುತ್ತಿದ್ದೇನೆ. ನಮ್ಮ ಸಮುದಾಯ - ನಮ್ಮ ಹೆಮ್ಮೆ. ವಿದೇಶಗಳಲ್ಲಿರುವ ಭಾರತೀಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಕೆಲವರು ರಾಜಕೀಯ ನಾಯಕತ್ವದಲ್ಲಿ ಉನ್ನತ ಸ್ಥರÀಕ್ಕೆ ಏರಿದವರು, ಕೆಲವರು ವಿಜ್ಞಾನ, ಕಲೆ, ಶಿಕ್ಷಣ, ನಾಗರಿಕ ಸಮಾಜ ಮತ್ತು ವಾಣಿಜ್ಯ ರಂಗದಲ್ಲಿ ಕೊಡುಗೆ ನೀಡಿದವರು, ಪ್ರತಿಯೊಬ್ಬರು, ತಾವು ನೆಲೆಸಿರುವ ದೇಶಗಳು ಹಾಗೂ ಭಾರತಕ್ಕೆ ಸಹ ಘನತೆ-ಗೌರವಗಳನ್ನು ತಂದಿತ್ತಿದ್ದಾರೆ. ನಿಮ್ಮ ಪೂರ್ವಜರ ಭೂಮಿಯಿಂದ ನಿಮಗೆ ಗಣರಾಜ್ಯೋತ್ಸವದ ಶುಭಕಾಮನೆಗಳು. ಸಾಮಾನ್ಯವಾಗಿ ತಮ್ಮ ಕುಟುಂಬದಿಂದ ದೂರವಿದ್ದೇ ಹಬ್ಬ ಹರಿದಿನಗಳನ್ನು ಆಚರಿಸುವ ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು ಮತ್ತು ಪೊಲೀಸರಿಗೆ ನನ್ನ ಶುಭ ಕಾಮನೆಗಳು. ಎಲ್ಲ ಯೋಧರಿಗೆ ನನ್ನ ವಿಶೇಷ ಅಭಿನಂದನೆಗಳು.

24. ಗಣರಾಜ್ಯೋತ್ಸವ ನಿಮಿತ್ತ ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು.

ಧನ್ಯವಾದಗಳು

ಜೈಹಿಂದ್ !

***



(Release ID: 1692441) Visitor Counter : 364