ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

ಪಿಎಂಕೆವಿವೈ 3.0 ದೇಶದ ದೂರದ ಹಳ್ಳಿಗಳು ಮತ್ತು ಪಟ್ಟಣಗಳಿಗೂ ಕೌಶಲ್ಯವನ್ನು ಕೊಂಡೊಯ್ಯತ್ತದೆ; ರಾಜ್ಯಗಳು ಮತ್ತು ಜಿಲ್ಲೆಗಳಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ: ಕೇಂದ್ರ ಸಚಿವ ಡಾ.ಮಹೇಂದ್ರ ನಾಥ್ ಪಾಂಡೆ


ಯೋಜನೆಯಡಿ ಸುಮಾರು 600 ಕೇಂದ್ರಗಳಲ್ಲಿ 300 ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ

ಬೇಡಿಕೆ-ಆಧಾರಿತ ಕೌಶಲ್ಯ ತರಬೇತಿಗಾಗಿ ಜಿಲ್ಲಾ ಕೌಶಲ್ಯ ಸಮಿತಿಗಳನ್ನು (ಡಿಎಸ್‌ಸಿ) ಬಲಪಡಿಸಲು ಕ್ರಮ

ಪಿಎಂಕೆವಿವೈ 3.0 ಎಂಟು ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಿದೆ

ಪಿಎಂಕೆವಿವೈ 1.0 ಮತ್ತು 2.0 ರ ಅಡಿಯಲ್ಲಿ ದೇಶದಲ್ಲಿ ಸುಧಾರಿತ ಗುಣಮಟ್ಟದ ಕೌಶಲ್ಯ ಪರಿಸರ ವ್ಯವಸ್ಥೆಯ ಮೂಲಕ 1.2 ಕೋಟಿಗೂ ಹೆಚ್ಚು ಯುವಕರಿಗೆ ತರಬೇತಿ ನೀಡಲಾಗಿದೆ

Posted On: 15 JAN 2021 6:10PM by PIB Bengaluru

ಉದ್ಯೋಗ ಪಡೆಯುವ ಕೌಶಲ್ಯದೊಂದಿಗೆ ದೇಶದ ಯುವಕರನ್ನು ಸಬಲೀಕರಣಗೊಳಿಸುವ ಕ್ರಮವಾಗಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಇಂದು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) ಯ ಮೂರನೇ ಹಂತವನ್ನು ಪ್ರಾರಂಭಿಸಿದೆ. ಸುಮಾರು 600 ಜಿಲ್ಲೆಗಳಲ್ಲಿ 300ಕ್ಕೂ ಕೌಶಲ್ಯ ಕೋರ್ಸ್‌ಗಳನ್ನು ಯುವಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಕೌಶಲ್ಯಾಭಿವೃದ್ಧಿಯನ್ನು ಹೆಚ್ಚು ಬೇಡಿಕೆ-ಆಧಾರಿತ ಮತ್ತು ವಿಕೇಂದ್ರೀಕೃತಗೊಳಿಸಲಾಗಿದೆ.
ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಮಹೇಂದ್ರ ನಾಥ್ ಪಾಂಡೆ ಅವರು ಪಿಎಂಕೆವಿವೈ ಮೂರನೇ ಆವೃತ್ತಿಗೆ ರಾಜ್ಯ ಸಚಿವ ಶ್ರೀ ಆರ್.ಕೆ.ಸಿಂಗ್ ಅವರೊಂದಿಗೆ ವರ್ಚುವಲ್ ಸಮಾರಂಭದಲ್ಲಿ ಚಾಲನೆ ನೀಡಿದರು. ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಪಿಎಂಕೆವಿವೈ 3.0 ಅನ್ನು ಜಾಗತಿಕ ಮತ್ತು ಸ್ಥಳೀಯ ಮಟ್ಟದಲ್ಲಿ ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳ 717 ಜಿಲ್ಲೆಗಳಲ್ಲಿ ಪ್ರಾರಂಭವಾಗಿರುವ ಪಿಎಂಕೆವಿವೈ 3.0 ‘ಆತ್ಮನಿರ್ಭರ ಭಾರತ’ ದೆಡೆಗೆ ಮತ್ತೊಂದು ಹೆಜ್ಜೆಯಾಗಿದೆ. ರಾಜ್ಯಗಳು / ಯುಟಿಗಳು ಮತ್ತು ಜಿಲ್ಲೆಗಳ ಹೆಚ್ಚಿನ ಬೆಂಬಲದೊಂದಿಗೆ ಪಿಎಂಕೆವಿವೈ 3.0 ಅನ್ನು ಹೆಚ್ಚು ವಿಕೇಂದ್ರೀಕೃತ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುವುದು. ರಾಜ್ಯ ಕೌಶಲ್ಯ ಅಭಿವೃದ್ಧಿ ಸಮಿತಿಗಳ (ಎಸ್‌ಎಸ್‌ಡಿಎಂ) ಮಾರ್ಗದರ್ಶನದಲ್ಲಿ ಜಿಲ್ಲಾ ಕೌಶಲ್ಯ ಸಮಿತಿಗಳು (ಡಿಎಸ್‌ಸಿ) ಕೌಶಲ್ಯ ಕೊರತೆಯನ್ನು ಪರಿಹರಿಸುವಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೊಸ ಯೋಜನೆಯು ಹೆಚ್ಚು ತರಬೇತಿ ಮತ್ತು ಕಲಿಕೆಯ ಕೇಂದ್ರಿತವಾಗಿದ್ದು, ಇದು ಮಹತ್ವಾಕಾಂಕ್ಷಿ ಭಾರತ ನಿರ್ಮಾಣಕ್ಕೆ ನೆರವಾಗುತ್ತದೆ.

ಪಿಎಂಕೆವಿವೈ 2.0 ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪಿಎಂಕೆವಿವೈ 3.0, ಕೌಶಲ್ಯ ಅಭಿವೃದ್ಧಿಯು ಬೇಡಿಕೆಯ-ಆಧಾರಿತ ಕೌಶಲ್ಯ ಅಭಿವೃದ್ಧಿ, ಡಿಜಿಟಲ್ ತಂತ್ರಜ್ಞಾನ ಮತ್ತು ಕೈಗಾರಿಕೆ 4.0 ಕೌಶಲ್ಯಗಳ ಬಗ್ಗೆ ಗಮನ ಕೇಂದ್ರೀಕರಿಸುವ ಮೂಲಕ ಹೊಸ ಮಾದರಿಯನ್ನು ರೂಪಿಸುತ್ತದೆ. ಸರ್ಕಾರದ ಪ್ರಗತಿಯ ಕಾರ್ಯಸೂಚಿಯು ‘ಆತ್ಮನಿರ್ಭರ ಭಾರತ’ ಮತ್ತು ‘ಸ್ಥಳೀಯತೆಗೆ ಆದ್ಯತೆ’ ದೃಷ್ಟಿಕೋನದಿಂದ ನಿರ್ದೇಶಿಸಲ್ಪಟ್ಟಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಪಿಎಂಕೆವಿವೈ 3.0 ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ಹೆಚ್ಚಿದ ಸಂಪರ್ಕವನ್ನು ಸ್ಥಾಪಿಸುವ ಮೂಲಕ ಗುರಿ ಸಾಧಿಸುವ ಪ್ರಗತಿಪರ ಹೆಜ್ಜೆಯಾಗಿದೆ. ಪಿಎಂಕೆವಿವೈ 2.0 ಪೂರ್ವ ಕಲಿಕೆಯ ಗುರುತಿಸುವಿಕೆ (ಆರ್‌ಪಿಎಲ್) ಯೊಂದಿಗೆ ಕೌಶಲ್ಯ ಅಭಿವೃದ್ಧಿಯನ್ನು ವಿಸ್ತರಿಸಿತು ಮತ್ತು ತರಬೇತಿಯತ್ತ ಗಮನ ಹರಿಸಿತು. ಪಿಎಂಕೆವಿವೈ 3.0, ನವ ಯುಗದ ಮತ್ತು ಕೈಗಾರಿಕೆ 4.0 ಉದ್ಯೋಗಗಳಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ಬೇಡಿಕೆ-ಪೂರೈಕೆ ನಡುವಿನ ಅಂತರವನ್ನು ಕಡಿಮೆ ಮಾಡಲು ಗಮನ ಹರಿಸಲಾಗಿದೆ.

ರಾಷ್ಟ್ರೀಯ ಶೈಕ್ಷಣಿಕ ನೀತಿಯು ಸಮಗ್ರ ಬೆಳವಣಿಗೆ ಮತ್ತು ಉದ್ಯೋಗಗಳಿಗೆ ವೃತ್ತಿಪರ ತರಬೇತಿಯತ್ತ ಗಮನ ಹರಿಸಿದರೆ, ಪಿಎಮ್‌ಕೆವಿವೈ 3.0, ಯುವಜನರಿಗೆ ಉದ್ಯಮ-ಸಂಬಂಧಿತ ಅವಕಾಶಗಳನ್ನು ಪಡೆದುಕೊಳ್ಳಲು ಆರಂಭಿಕ ಹಂತದಲ್ಲಿ ವೃತ್ತಿಪರ ಶಿಕ್ಷಣದ ಪ್ರೋತ್ಸಾಕವಾಗಲಿದೆ.

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವ ಡಾ.ಮಹೇಂದ್ರ ನಾಥ್ ಪಾಂಡೆ ಮಾತನಾಡಿ, “ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಜಿಲ್ಲಾ ಮಟ್ಟಕ್ಕೆ ಹೆಚ್ಚಿಸುವ ಮೂಲಕ ‘ಸ್ಥಳೀಯತೆಗೆ ಆದ್ಯತೆ ಮತ್ತು ಆತ್ಮನಿರ್ಭರ ಭಾರತ’ ಎಂಬ ಪ್ರಧಾನ ಮಂತ್ರಿಯ ದೃಷ್ಟಿಕೋನವನ್ನು ಸಾಧಿಸಬಹುದು. ಯುವ ರಾಷ್ಟ್ರವಾಗಿ, ಭಾರತವನ್ನು ವಿಶ್ವದ ಕೌಶಲ್ಯ ರಾಜಧಾನಿಯನ್ನಾಗಿ ಮಾಡುವ ಅವಕಾಶಗಳನ್ನು ನಾವು ಬಳಸಿಕೊಳ್ಳುತ್ತೇವೆ. ತರಬೇತಿಗೆ ಬಾಟಮ್-ಅಪ್ ವಿಧಾನವನ್ನು ತೆಗೆದುಕೊಳ್ಳುವ ಮೂಲಕ, ಪಿಎಂಕೆವಿವೈ 3.0 ಸ್ಥಳೀಯ ಮಟ್ಟದಲ್ಲಿ ಬೇಡಿಕೆಯನ್ನು ಹೊಂದಿರುವ ಉದ್ಯೋಗಗಳನ್ನು ಗುರುತಿಸುತ್ತದೆ ಮತ್ತು ಯುವಕರನ್ನು ಕೌಶಲ್ಯಗೊಳಿಸುತ್ತದೆ, ಈ ಅವಕಾಶಗಳೊಂದಿಗೆ ಅವರನ್ನು ಬೆಸೆಯುತ್ತದೆ. ” ಎಂದರು.

"ಯೋಜನೆಗಳ ಅಡಿಯಲ್ಲಿ ತರಬೇತಿ ಕಾರ್ಯಕ್ರಮಗಳ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಜಿಲ್ಲಾಡಳಿತ ಮತ್ತು ಸಂಸದರ ಪಾತ್ರವು ಹೆಚ್ಚಿನ ಸ್ಥಳೀಯ ಸಂಪರ್ಕವನ್ನು ತರುತ್ತದೆ. ಉತ್ತಮ ಪ್ರದರ್ಶನ ನೀಡುವ ರಾಜ್ಯಗಳಿಗೆ ಹೆಚ್ಚಿನ ಹಂಚಿಕೆ ಲಭ್ಯವಾಗುವಂತೆ ಮಾಡುವ ಮೂಲಕ ಪಿಎಂಕೆವಿವೈ 3.0 ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ, ”ಎಂದು ಅವರು ಹೇಳಿದರು.

ಕೇಂದ್ರ ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಎಂಎಸ್‌ಡಿಇ ರಾಜ್ಯ ಸಚಿವ ಶ್ರೀ ಆರ್ ಕೆ ಸಿಂಗ್ ಮಾತನಾಡಿ, “ಕೌಶಲ್ಯ ಒಂದು ಉದ್ದೇಶ ಮಾತ್ರವಲ್ಲ, ದೇಶದ ಆರ್ಥಿಕ ಬೆಳವಣಿಗೆಗೆ ಅಗತ್ಯವಾಗಿದೆ. ಭಾರತವನ್ನು ವಿಶ್ವದ ಕೌಶಲ್ಯ ರಾಜಧಾನಿಯನ್ನಾಗಿ ಮಾಡಲು ಮತ್ತು ಅಲ್ಲಿಂದ ವಿಶ್ವದ ಕೈಗಾರಿಕಾ ರಾಜಧಾನಿಯನ್ನಾಗಿ ಮಾಡಲು ನಾವು ವೇಗ ಮತ್ತು ಪ್ರಮಾಣದಲ್ಲಿ ಕೆಲಸ ಮಾಡಬೇಕಾಗಿದೆ ” ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಆರು ರಾಜ್ಯಗಳ ವಿವಿಧ ಸಂಸತ್ ಸದಸ್ಯರು ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರು ಭಾಗವಹಿಸಿದ್ದರು. ಉತ್ತರ ಪ್ರದೇಶದ ಮೀರತ್‌; ಮಧ್ಯಪ್ರದೇಶದ ಸತ್ನಾ;  ಒಡಿಶಾದ ಮೀಥಾಪುರ, ಬಾದರ್‌ಪುರ, ಕಟಕ್ ಮತ್ತು ದಕ್ಷಿಣ ದೆಹಲಿಯಲ್ಲಿರುವ ಪ್ರಧಾನ ಮಂತ್ರಿ ಕೌಶಲ ಕೇಂದ್ರಗಳ (ಪಿಎಂಕೆಕೆಎಸ್) ಅಭ್ಯರ್ಥಿಗಳು ಸಚಿವರೊಂದಿಗೆ ಸಂವಾದ ನಡೆಸಿದರು. ಕೌಶಲ್ಯ ತರಬೇತಿಯು ಅವರ ಜೀವನವನ್ನು ಹೇಗೆ ಬದಲಿಸಿದೆ ಮತ್ತು ಅವರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಹೇಗೆ ನೆರವಾಗಿದೆ ಎಂಬ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಂಡರು. ಆಯಾ ಕೇಂದ್ರಗಳಲ್ಲಿ ಹೆಚ್ಚುವರಿ ಕೋರ್ಸ್‌ಗಳ ತರಬೇತಿ ಪಡೆಯುವ ಅವಶ್ಯಕತೆ ಕುರಿತು ಅಭ್ಯರ್ಥಿಗಳು ಮಾತನಾಡಿದರು.

ಸ್ಥಳೀಯ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುವ ಹೆಚ್ಚುವರಿ ಕೋರ್ಸ್‌ಗಳನ್ನು ಅವರಿಗೆ ನೀಡಲಾಗುವುದು ಎಂದು ಇಬ್ಬರೂ ಸಚಿವರು ಅಭ್ಯರ್ಥಿಗಳು ಮತ್ತು ಪಿಎಂಕೆಕೆ ಕೇಂದ್ರಗಳ ಮುಖ್ಯಸ್ಥರಿಗೆ ಭರವಸೆ ನೀಡಿದರು. ಎಲ್ಲಾ ಸಂಸದರು ಮತ್ತು ಪಿಎಂಕೆಕೆ ಕೇಂದ್ರಗಳು ಪಿಎಮ್‌ಕೆವಿವೈ 1.0 ಮತ್ತು 2.0 ರ ಯಶಸ್ಸಿಗೆ ಸಚಿವಾಲಯವನ್ನು ಅಭಿನಂದಿಸಿದರು. ಉದ್ಯಮದ ಬೇಡಿಕೆಗಳನ್ನು ಪೂರೈಸಬಲ್ಲ ಸ್ಥಳೀಯ ಪ್ರತಿಭೆಗಳನ್ನು ಸೃಷ್ಟಿಸುವ ಅಗತ್ಯತೆಯ ಬಗ್ಗೆ ಅವರು ಮಾತನಾಡುತ್ತಿದ್ದಂತೆ, ‘ಸ್ಥಳೀಯತೆಗೆ ಆದ್ಯತೆ’ ವಿಷಯವು ಪುನರಾವರ್ತಿತವಾಯಿತು.  

ಕೇಂದ್ರ ಎಂಎಸ್‌ಡಿಇ ಸಚಿವ ಡಾ.ಮಹೇಂದ್ರ ನಾಥ್ ಪಾಂಡೆ,  ಕೇಂದ್ರ ಎಂಎಸ್‌ಡಿಇ, ಕೇಂದ್ರ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀ ಆರ್ ಕೆ ಸಿಂಗ್ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಎಂಎಸ್‌ಡಿಇ ಕಾರ್ಯದರ್ಶಿ ಪ್ರವೀಣ್ ಕುಮಾರ್, ಎಂಎಸ್‌ಡಿಇ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅತುಲ್ ಕುಮಾರ್ ತಿವಾರಿ ಮತ್ತು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ (ಎನ್‌ಎಸ್‌ಡಿಸಿ) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ.ಮನೀಶ್ ಕುಮಾರ್. ಎನ್‌ಎಸ್‌ಡಿಸಿ ಅಧ್ಯಕ್ಷ ಮತ್ತು ಎಲ್ ಆ್ಯಂಡ್ ಟಿ ಸಮೂಹದ ಅಧ್ಯಕ್ಷರಾದ ಶ್ರೀ ಎ.ಎಮ್ ನಾಯಕ್ ಅವರು ಈ ಕಾರ್ಯಕ್ರಮದಲ್ಲಿ ವರ್ಚುವಲ್  ಆಗಿ ಭಾಗವಹಿಸಿ ಮಾತನಾಡಿ, ಕೌಶಲ್ಯ ಪರಿಸರ ವ್ಯವಸ್ಥೆಯನ್ನು ವೇಗಗೊಳಿಸಲು ಎನ್‌ಎಸ್‌ಡಿಸಿ ಮಾಡಿದ ಪ್ರಯತ್ನಗಳ ಬಗ್ಗೆ ತಿಳಿಸಿದರು. ಮತ್ತು ಮುಂಬೈನಲ್ಲಿ ಎಲ್ & ಟಿ ಕೌಶಲ್ಯ ತರಬೇತುದಾರರ ಅಕಾಡೆಮಿ ಪ್ರಾರಂಭಿಸುವುದಾಗಿ ಘೋಷಿಸಿದರು.

ದೇಶದಾದ್ಯಂತದ ಎಂಟು ಕ್ಷೇತ್ರಗಳ ಸಂಸತ್ ಸದಸ್ಯರು ಡಾ.ಮಹೇಂದ್ರ ನಾಥ್ ಪಾಂಡೆ ಮತ್ತು ಶ್ರೀ ಆರ್.ಕೆ.ಸಿಂಗ್ ಅವರೊಂದಿಗೆ ತಮ್ಮ ರಾಜ್ಯಗಳಲ್ಲಿನ ಕೌಶಲ್ಯ ಅಭಿವೃದ್ಧಿ ಪ್ರಯತ್ನಗಳ ಕುರಿತು ಮಾತನಾಡಿದರು ಮತ್ತು ಪಿಎಂಕೆವಿವೈ ಮೂರನೇ ಹಂತದ ಆರಂಭವನ್ನು ಸ್ವಾಗತಿಸಿದರು. ಗುಜರಾತ್, ಒಡಿಶಾ, ಅಸ್ಸಾಂ, ಹರಿಯಾಣ, ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ಕೌಶಲ್ಯ ಸಚಿವರು ಕಾರ್ಯಕ್ರಮಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಕೌಶಲ್ಯ ಅಭಿವೃದ್ಧಿ ಕುರಿತು ಹೆಚ್ಚಿನ ಮಾಹಿತಿಗಾಗಿ, ಕೆಳಗಿನ ಲಿಂಕ್‌ಗಳನ್ನು ನೋಡಿ: 
ಪಿಎಂಕೆವಿವೈ ಫೇಸ್‌ಬುಕ್: www.facebook.com/PMKVYOfficial 
ಸ್ಕಿಲ್ ಇಂಡಿಯಾ ಫೇಸ್‌ಬುಕ್: www.facebook.com/SkillIndiaOfficial 
ಸ್ಕಿಲ್ ಇಂಡಿಯಾ ಟ್ವಿಟರ್: www.twitter.com/@MSDESkillindia 
ಸ್ಕಿಲ್ಇಂಡಿಯಾಯೂಟ್ಯೂಬ್: https://www.youtube.com/channel/UCzNfVNX5yLEUhIRNZJKniHg

***


(Release ID: 1689080) Visitor Counter : 303