ರಕ್ಷಣಾ ಸಚಿವಾಲಯ

14 ಜನವರಿ 2021, ಹಿರಿಯ ಯೋಧರ ದಿನ

Posted On: 13 JAN 2021 4:41PM by PIB Bengaluru

ಭಾರತೀಯ ಸಶಸ್ತ್ರ ಪಡೆಗಳು 14 ಜನವರಿ 2021 ರಂದು ಹಿರಿಯ ಯೋಧರ ದಿನ ಆಚರಿಸಲಿವೆ. 1953 ದಿನದಂದು ನಿವೃತ್ತರಾದ ಭಾರತೀಯ ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಸೇವೆಗಳನ್ನು ಗುರುತಿಸಿ ದಿನವನ್ನು ಹಿರಿಯ ಯೋಧರ ದಿನವಾಗಿ ಆಚರಿಸಲಾಗುತ್ತಿದೆ. ದಿಟ್ಟ ಸೈನಿಕರ ಕುಟುಂಬಗಳಿಗೆ ನಮ್ಮ ಬೆಂಬಲವನ್ನು ತೋರಿಸಲು ವಿವಿಧ ಮಿಲಿಟರಿ ಕೇಂದ್ರಗಳಲ್ಲಿ 'ಪುಷ್ಪಮಾಲೆ ಇರಿಸುವ ಸಮಾರಂಭಗಳು ಮತ್ತು ಹಿರಿಯ ಸೈನಿಕರ ಸಭೆಗಳು' ನಡೆಯಲಿವೆ.

ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಬೆಂಗಳೂರಿನ ವಾಯುಪಡೆಯ ಕೇಂದ್ರದಲ್ಲಿ ನಡೆಯುವ ಹಿರಿಯ ಯೋಧರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಯೋಧರ ಕುಟುಂಬಗಳು, ಹಿರಿಯ ಯೋಧರು ಮತ್ತು ವಿವಿಧ ಮಾಜಿ ಸೈನಿಕರ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿರುತ್ತಾರೆ.

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಮಾಲಾರ್ಪಣೆ ಸಮಾರಂಭದೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಆಚರಣೆಗಳು ಬೆಳಿಗ್ಗೆ ಪ್ರಾರಂಭವಾಗಲಿವೆ. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹಿರಿಯ ಮಿಲಿಟರಿ ಗಣ್ಯರು, ಆಯ್ದ ಸೇವಾ ನಿರತ ಸಿಬ್ಬಂದಿ ಮತ್ತು ಅನೇಕ ಹಿರಿಯ ಯೋಧರು ಗೌರವ ಸಲ್ಲಿಸಲಿದ್ದಾರೆ. ಕಾರ್ಯಕ್ರಮದ ನಂತರ ಎಪಿಎಸ್ ಧೌಲಕುವಾನ್‌ನ ರೈನಾ ಸಭಾಂಗಣದಲ್ಲಿ ಹಿರಿಯ ಯೋಧರ ಸಭೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಮೂರೂ ಪಡೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದಾರೆ. ಹಿರಿಯ ಯೋಧರು, ಮಾಜಿ ಸೈನಿಕರ ಸಂಘಟನೆಗಳ ಪ್ರತಿನಿಧಿಗಳು, ರಕ್ಷಣಾ ಸಚಿವಾಲಯ ಮತ್ತು ಹಿರಿಯ ಯೋಧರ ಕಲ್ಯಾಣ ಕಾರ್ಯದಲ್ಲಿ ತೊಡಗಿರುವ ಮೂರು ಪಡೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಆಹ್ವಾನಿತರಿಗೆ ಮಾತ್ರ ಪ್ರವೇಶವಿರುತ್ತದೆ.

***



(Release ID: 1688801) Visitor Counter : 232