ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಂದ 484 ಕೋಟಿ ರೂಪಾಯಿ ದಾಖಲೆ ವಹಿವಾಟು : ಕೇಂದ್ರ ಸಚಿವ ಶ್ರೀ ಡಿ.ವಿ. ಸದಾನಂದಗೌಡ

Posted On: 14 JAN 2021 3:27PM by PIB Bengaluru

ಬೆಂಗಳೂರು, ಜನವರಿ 14; ಪ್ರಸಕ್ತ ಹಣಕಾಸು ವರ್ಷ [2020-2021] ದಲ್ಲಿ ದೇಶದ 7064 ಪ್ರಧಾನಮಂತ್ರಿ ಜನೌಷಧಿ ಮಳಿಗೆಗಳಲ್ಲಿ 484 ಕೋಟಿ ರೂಪಾಯಿ ಮೊತ್ತದ ದಾಖಲೆ ಪ್ರಮಾಣದ ವಹಿವಾಟು ನಡೆದಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದಗೌಡ ಹೇಳಿದ್ದಾರೆ. 
ರಾಜ್ಯದಲ್ಲಿಂದು ಈ ಕುರಿತು ಮಾಹಿತಿ ನೀಡಿರುವ ಅವರು, ಭಾರತೀಯ ಜನೌಷಧಿ ಮಳಿಗೆಗಳಿಂದ ದೇಶದ  ಎಲ್ಲಾ ಜಿಲ್ಲೆಗಳಲ್ಲಿ ಗುಣಮಟ್ಟದ ಜೆನರಿಕ್ ಔಷಧಿಗಳನ್ನು ಮಾರಾಟ ಮಾಡುತ್ತಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 60 ರಷ್ಟು ಹೆಚ್ಚು ವಹಿವಾಟು ನಡೆದಿದೆ ಎಂದಿದ್ದಾರೆ. 
ಜನೌಷಧಿ ಮಳಿಗೆಗಳಲ್ಲಿ ಔಷಧಿ ಖರೀದಿ ಮಾಡಿದ ಪರಿಣಾಮ ದೇಶದ ಜನರಿಗೆ 3000 ಕೋಟಿ ರೂಪಾಯಿ ಉಳಿತಾಯವಾಗಿದ್ದು, ಜನರಿಗೆ ಹೆಚ್ಚಿನ ರೀತಿಯಲ್ಲಿ ಉಪಯೋಗವಾಗಿದೆ ಎಂದಿದ್ದಾರೆ. 
ಕಳೆದ 2019 – 2020 ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಜನೌಷಧಿ ವಲಯಕ್ಕೆ 35.51 ಕೋಟಿ ರೂಪಾಯಿ ಅನುದಾನ ನೀಡಿದ್ದು, ದೇಶವಾಸಿಗಳಿಗೆ 2,600 ಕೋಟಿ ರೂಪಾಯಿ ಉಳಿತಾಯವಾಗಿದೆ. ಸರ್ಕಾರ ಪ್ರತಿಯೊಬ್ಬರಿಗೆ ವೆಚ್ಚ ಮಾಡುವ ಒಂದು ರೂಪಾಯಿಯಿಂದ ಜನರಿಗೆ ಸರಾಸರಿ 74 ರೂಪಾಯಿ ಉಳಿತಾಯವಾಗಲಿದ್ದು, ಗುಣಕಾರದ ಲೆಕ್ಕಾಚಾರದಂತೆ ಉಳಿತಾಯ ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದಗೌಡ ಮಾಹಿತಿ ನೀಡಿದ್ದಾರೆ. 
ಸರ್ಕಾರ ದೇಶದಲ್ಲಿ ಎಲ್ಲಾ ರೀತಿಯಲ್ಲೂ ಮಹಿಳಾ ಸಬಲೀಕರಣ ಮಾಡುವ ಗುರಿ ಹೊಂದಿದ್ದು, ಈ ಉದ್ದೇಶದಿಂದ ಈವರೆಗೆ ಹತ್ತು ಕೋಟಿ ಜನೌಷಧಿ ಸುವಿಧ ಸ್ಯಾನಿಟರಿ ಪ್ಯಾಡ್ ಗಳನ್ನು ಒಂದು ರೂಪಾಯಿ ದರದಲ್ಲಿ ಮಾರಾಟ ಮಾಡಲಾಗಿದೆ. ಕಳೆದ 2020ರ ಡಿಸೆಂಬರ್ ನಲ್ಲಿ 3.6 ಕೋಟಿ “ಸುವಿಧ” ಜನೌಷಧಿ ಸ್ಯಾನಿಟರಿ ಪ್ಯಾಡ್ ಗಳಿಗೆ ಬೇಡಿಕೆಗಳು ಬಂದಿದೆ. ಮುಂದುವರೆದಂತೆ ಒಟ್ಟು 30 ಕೋಟಿ ಜನೌಷಧಿ ಸ್ಯಾನಿಟರಿ ಪ್ಯಾಡ್ ಗಳ ಟೆಂಡರ್ ಅನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಿದ್ದಾರೆ. 
ಕರ್ನಾಟಕದಲ್ಲಿ ಜನೌಷಧಿ ಮಳಿಗೆಗಳ ಪ್ರಗತಿ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದಗೌಡ, ರಾಜ್ಯದಲ್ಲಿ ಒಟ್ಟು 788 ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಿದ್ದು, ಕೈಗೆಟುಕುವ ದರದಲ್ಲಿ ಗುಣಮಟ್ಟದ ಜೆನರಿಕ್ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. 2021 ರ ಮಾರ್ಚ್ ಅಂತ್ಯದ ವೇಳೆಗೆ  ಪಿ.ಎಂ.ಬಿ.ಜೆ.ಕೆ ಮಳಿಗಳ ಸಂಖ್ಯೆಯನ್ನು 800 ಕ್ಕೆ ಹೆಚ್ದಿಸುವ ಗುರಿ ಹೊಂದಲಾಗಿದೆ. ಆರೋಗ್ಯ ವಲಯದಲ್ಲಿ ವ್ಯಾಪಕ ಶ್ರೇಣಿಯ ಔಷಧಿಗಳೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ವಿಶಿಷ್ಟ ಪ್ರಗತಿ ಸಾಧಿಸಿದ್ದು, 2021 ರ ಮಾರ್ಚ್ ವೇಳೆಗೆ ಪಿಎಂಬಿಜಿಪಿ ಕೇಂದ್ರಗಳ ಮೂಲಕ 125 ಕೋಟಿ ರೂಪಾಯಿ ಮೊತ್ತದ ಔಷಧಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು. 


*****

 (Release ID: 1688569) Visitor Counter : 262