ಪ್ರಧಾನ ಮಂತ್ರಿಯವರ ಕಛೇರಿ

ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ ಅಡಿಯಲ್ಲಿ ಲೈಟ್ ಹೌಸ್ ಯೋಜನೆಗಳಿಗೆ ಜನವರಿ 1 ರಂದು ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಿ


ಪಿಎಂಎವೈ (ನಗರ) ಮತ್ತು ಆಶಾ-ಭಾರತ ಪ್ರಶಸ್ತಿಗಳನ್ನು ವಿತರಿಸಲಿರುವ ಪ್ರಧಾನಿ

Posted On: 30 DEC 2020 7:42PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ (ಜಿಎಚ್ಟಿಸಿ-ಇಂಡಿಯಾ) ಅಡಿಯಲ್ಲಿ ಲೈಟ್ ಹೌಸ್ ಯೋಜನೆಗಳ (ಎಲ್ಎಚ್ಪಿ) ಶಿಲಾನ್ಯಾಸವನ್ನು 2021 ಜನವರಿ 1 ರಂದು ನೆರವೇರಿಸಲಿದ್ದಾರೆ. ಪ್ರಧಾನಿಯವರು ಅಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆರು ರಾಜ್ಯಗಳ ಆರು ಸ್ಥಳಗಳಲ್ಲಿ ಶಿಲಾನ್ಯಾಸ ಮಾಡಲಿದ್ದಾರೆ. ಪ್ರಧಾನ ಮಂತ್ರಿಯವರು ಇದೇ ಸಂದರ್ಭದಲ್ಲಿ ಕೈಗೆಟುಕುವ ಸುಸ್ಥಿರ ವಸತಿ ವೇಗವರ್ಧಕಗಳು - ಭಾರತ (ಆಶಾ-ಇಂಡಿಯಾ) ವಿಜೇತರನ್ನು ಘೋಷಿಸಲಿದ್ದಾರೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ - ನಗರ (ಪಿಎಂಎವೈ-ಯು) ಮಿಷನ್ ನ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಸಂದರ್ಭದಲ್ಲಿ, ನವಾರಿತಿಹ್ (ಹೊಸ, ಕೈಗೆಟುಕುವ, ಮೌಲ್ಯೀಕರಿಸಿದ, ಭಾರತೀಯ ವಸತಿಗಾಗಿ ಸಂಶೋಧನಾ ನಾವೀನ್ಯತೆ ತಂತ್ರಜ್ಞಾನಗಳು) ಹೆಸರಿನ ನವೀನ ನಿರ್ಮಾಣ ತಂತ್ರಜ್ಞಾನಗಳ ಪ್ರಮಾಣಪತ್ರ ಕೋರ್ಸ್ ಮತ್ತು ಜಿಎಚ್ಟಿಸಿ-ಇಂಡಿಯಾ ಮೂಲಕ ಗುರುತಿಸಲಾದ 54 ನವೀನ ವಸತಿ ನಿರ್ಮಾಣ ತಂತ್ರಜ್ಞಾನಗಳ ಸಂಗ್ರಹವನ್ನು ಪ್ರಧಾನಿಯವರು ಬಿಡುಗಡೆ ಮಾಡಲಿದ್ದಾರೆ. ತ್ರಿಪುರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ತಮಿಳುನಾಡು ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವರು ಉಪಸ್ಥಿತರಿರುತ್ತಾರೆ.

ಲೈಟ್ ಹೌಸ್ ಯೋಜನೆಗಳು

ಲೈಟ್ ಹೌಸ್ ಯೋಜನೆಗಳು (ಎಲ್ಎಚ್ಪಿಗಳು) ದೇಶದಲ್ಲಿ ಮೊದಲ ಬಾರಿಗೆ ನಿರ್ಮಾಣ ಕ್ಷೇತ್ರದಲ್ಲಿ ಹೊಸ-ಯುಗದ ಪರ್ಯಾಯ ಜಾಗತಿಕ ತಂತ್ರಜ್ಞಾನಗಳು, ವಸ್ತುಗಳು ಮತ್ತು ಪ್ರಕ್ರಿಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಒಳಗೊಂಡಿವೆ. ಅವುಗಳನ್ನು ಜಿಎಚ್ಟಿಸಿ-ಇಂಡಿಯಾ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ವಸತಿ ನಿರ್ಮಾಣ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನಗಳನ್ನು ಸಮಗ್ರ ರೀತಿಯಲ್ಲಿ ಅಳವಡಿಸಿಕೊಳ್ಳಲು ಪರಿಸರ ವ್ಯವಸ್ಥೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಇಂದೋರ್ (ಮಧ್ಯಪ್ರದೇಶ), ರಾಜ್ಕೋಟ್ (ಗುಜರಾತ್), ಚೆನ್ನೈ (ತಮಿಳುನಾಡು), ರಾಂಚಿ (ಜಾರ್ಖಂಡ್), ಅಗರ್ತಲಾ (ತ್ರಿಪುರ) ಮತ್ತು ಲಕ್ನೋ (ಉತ್ತರ ಪ್ರದೇಶ) ಗಳಲ್ಲಿ ಎಲ್ಎಚ್ಪಿಗಳನ್ನು ನಿರ್ಮಿಸಲಾಗುತ್ತಿದೆ. ಸಂಬಂಧಿತ ಮೂಲಸೌಕರ್ಯ ಸೌಲಭ್ಯಗಳೊಂದಿಗೆ ಪ್ರತಿ ಸ್ಥಳದಲ್ಲಿ ಸುಮಾರು 1000 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಸಾಂಪ್ರದಾಯಿಕ ಇಟ್ಟಿಗೆ ಮತ್ತು ಗಾರೆ ನಿರ್ಮಾಣಕ್ಕೆ ಹೋಲಿಸಿದರೆ ಯೋಜನೆಗಳು ಹನ್ನೆರಡು ತಿಂಗಳಲ್ಲಿಯೇ ವಾಸಿಸಲು ಸಿದ್ಧವಾದ ಮನೆಗಳನ್ನು ನಿರ್ಮಿಸುತ್ತವೆ. ಇವು ಉತ್ತಮ ಗುಣಮಟ್ಟದ, ಬಾಳಿಕೆ ಬರುವ, ಕಡಿಮೆ ವೆಚ್ಚದ, ಸುಸ್ಥಿರ ಮನೆಗಳಾಗಿರುತ್ತವೆ.

ಎಲ್ಎಚ್ಪಿಗಳು ತಂತ್ರಜ್ಞಾನಗಳ ವೈವಿಧ್ಯತೆಯನ್ನು ಪ್ರದರ್ಶಿಸಲಿವೆ. ಇಂದೋರ್ ಎಲ್ಎಚ್ಪಿಯಲ್ಲಿ ಪ್ರಿಫ್ಯಾಬ್ರಿಕೇಟೆಡ್ ಸ್ಯಾಂಡ್ವಿಚ್ ಪ್ಯಾನಲ್ ಸಿಸ್ಟಮ್, ರಾಜ್ಕೋಟ್ನಲ್ಲಿ ಮೊನೊಲಿಥಿಕ್ ಕಾಂಕ್ರೀಟ್ ನಿರ್ಮಾಣ, ಚೆನ್ನೈ ಎಲ್ಎಚ್ಪಿಯಲ್ಲಿ ಪ್ರಿಕಾಸ್ಟ್ ಕಾಂಕ್ರೀಟ್ ನಿರ್ಮಾಣ ವ್ಯವಸ್ಥೆ, ರಾಂಚಿಯ ಎಲ್ಎಚ್ಪಿಯಲ್ಲಿ 3 ಡಿ ವಾಲ್ಯೂಮೆಟ್ರಿಕ್ ಪ್ರಿಕಾಸ್ಟ್ ಕಾಂಕ್ರೀಟ್ ನಿರ್ಮಾಣ ವ್ಯವಸ್ಥೆ, ಅಗರ್ತಲಾದಲ್ಲಿ  ಲೈಟ್ ಗೇಜ್ ಸ್ಟೀಲ್ ಇನ್ಫಿಲ್ ಪ್ಯಾನೆಲ್ಗಳೊಂದಿಗೆ ಸ್ಟೀಲ್ ಫ್ರೇಮ್ ಮತ್ತು ಲಕ್ನೋ ಎಲ್ಎಚ್ಪಿಯಲ್ಲಿ ಪಿವಿಸಿ ಸ್ಟೇ ಇನ್ ಪ್ಲೇಸ್ ಫಾರ್ಮ್ವರ್ಕ್ ಸಿಸ್ಟಮ್ ತಂತ್ರಜ್ಞಾನಗಳನ್ನು ಬಳಸಲಾಗುವುದು. ವಸತಿ ಕ್ಷೇತ್ರಕ್ಕೆ ತಂತ್ರಜ್ಞಾನವನ್ನು ವರ್ಗಾಯಿಸಲು ಮತ್ತು ತಂತ್ರಜ್ಞಾನದ ಪುನರಾವರ್ತನೆಗೆ ಅನುಕೂಲವಾಗುವಂತೆ ಎಲ್ಎಚ್ಪಿಗಳು ನೇರ ಪ್ರಯೋಗಾಲಯಗಳಾಗಿ ಕಾರ್ಯನಿರ್ವಹಿಸುತ್ತವೆ. ಐಐಟಿಗಳು, ಎನ್ಐಟಿಗಳು, ಇತರ ಎಂಜಿನಿಯರಿಂಗ್ ಕಾಲೇಜುಗಳು, ಯೋಜನೆ ಮತ್ತು ವಾಸ್ತುಶಿಲ್ಪ ಕಾಲೇಜುಗಳು, ಬಿಲ್ಡರ್ ಗಳು, ಖಾಸಗಿ ಮತ್ತು ಸಾರ್ವಜನಿಕ ವಲಯದ ವೃತ್ತಿಪರರು ಮತ್ತು ಇತರ ಸಂಸ್ಥೆಗಳ ಬೋಧಕವರ್ಗ ಮತ್ತು ವಿದ್ಯಾರ್ಥಿಗಳಿಗೆ ಯೋಜನೆ, ವಿನ್ಯಾಸ, ಉತ್ಪಾದನೆ, ನಿರ್ಮಾಣ ಕ್ರಮ ಮತ್ತು ಪರೀಕ್ಷೆಗಳು ಇದರಲ್ಲಿ ಸೇರಿವೆ.

ಆಶಾ-ಭಾರತ

ಕೈಗೆಟುಕುವ ಸುಸ್ಥಿರ ವಸತಿ ವೇಗವರ್ಧಕಗಳು - ಭಾರತ (ಆಶಾ-ಇಂಡಿಯಾ) ಭವಿಷ್ಯದ ಸಂಭಾವ್ಯ ತಂತ್ರಜ್ಞಾನಗಳಿಗೆ ಪ್ರೋತ್ಸಾಹ ಮತ್ತು ವೇಗವರ್ಧಕ ಬೆಂಬಲವನ್ನು ನೀಡುವ ಮೂಲಕ ದೇಶೀಯ ಸಂಶೋಧನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಆಶಾ-ಇಂಡಿಯಾ ಉಪಕ್ರಮದ ಅಡಿಯಲ್ಲಿ, ಪ್ರೋತ್ಸಾಹ ಮತ್ತು ವೇಗವರ್ಧಕ ಬೆಂಬಲವನ್ನು ಒದಗಿಸಲು ಐದು ಆಶಾ-ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವೇಗವರ್ಧನೆ ತಂತ್ರಜ್ಞಾನದ ವಿಜೇತರನ್ನು ಪ್ರಧಾನಿಯವರು ಘೋಷಿಸಲಿದ್ದಾರೆ. ಉಪಕ್ರಮದ ಮೂಲಕ ಗುರುತಿಸಲಾದ ತಂತ್ರಜ್ಞಾನಗಳು, ಪ್ರಕ್ರಿಯೆಗಳು ಮತ್ತು ವಸ್ತುಗಳು ಸೃಜನಶೀಲ ಯುವಕರು, ನವೋದ್ಯಮಗಳು, ಅನುಶೋಧನಾಗಾರರು  ಮತ್ತು ಉದ್ಯಮಿಗಳಿಗೆ ಪ್ರಮುಖವಾದ ಬೆಂಬಲ ಒದಗಿಸುತ್ತವೆ.

ಪಿಎಂಎವೈ-ಯು ಮಿಷನ್

"2022 ವೇಳೆಗೆ ಎಲ್ಲರಿಗೂ ವಸತಿ" ಎಂಬ ದೃಷ್ಟಿಕೋನದ ಸಾಧನೆಗಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ - ನಗರ (ಪಿಎಂಎವೈ-ಯು) ಮಿಷನ್ ಅನ್ನು ವಿನ್ಯಾಸಗೊಳಿಸಲಾಗಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಫಲಾನುಭವಿಗಳ ಅತ್ಯುತ್ತಮ ಕೊಡುಗೆಯನ್ನು ಗುರುತಿಸುವ ಸಲುವಾಗಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪಿಎಂಎವೈ-ನಗರ ಅನುಷ್ಠಾನದಲ್ಲಿನ ಶ್ರೇಷ್ಠತೆಗಾಗಿ ವಾರ್ಷಿಕ ಪ್ರಶಸ್ತಿಗಳನ್ನು ನೀಡುತ್ತಿದೆ. ಸಂದರ್ಭದಲ್ಲಿ ಪಿಎಂಎವೈ (ನಗರ)  2019 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

***


(Release ID: 1685042) Visitor Counter : 232