ಪ್ರಧಾನ ಮಂತ್ರಿಯವರ ಕಛೇರಿ
ಹೊಸ ಭೌಪುರ್-ಹೊಸ ಖುರ್ಜಾ ರೈಲ್ವೆ ವಿಭಾಗ ಮತ್ತು ಪ್ರತ್ಯೇಕ ಪೂರ್ವ ಸರಕು ಕಾರಿಡಾರ್ ಕಾರ್ಯಾಚರಣೆ ನಿಯಂತ್ರಣ ಕೇಂದ್ರ ಉದ್ಘಾಟಿಸಿದ ಪ್ರಧಾನಿ
ಮೂಲಸೌಕರ್ಯ ಅಭಿವೃದ್ಧಿಯನ್ನು ರಾಜಕೀಯದಿಂದ ಹೊರಗಿಡಬೇಕು: ಪ್ರಧಾನಮಂತ್ರಿ ನರೇಂದ್ರ ಮೋದಿ
Posted On:
29 DEC 2020 2:21PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೊಸ ಭೌಪುರ್- ಹೊಸ ಖುರ್ಜಾ ರೈಲ್ವೆ ವಿಭಾಗ ಮತ್ತು ಪ್ರತ್ಯೇಕ ಪೂರ್ವ ಸರಕು ಕಾರಿಡಾರ್ ಕಾರ್ಯಾಚರಣೆ ನಿಯಂತ್ರಣ ಕೇಂದ್ರವನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಆಧುನಿಕ ರೈಲು ಮೂಲಸೌಕರ್ಯ ಯೋಜನೆ ಅನುಷ್ಠಾನವಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಖುರ್ಜಾ ಭೌಪುರ್ ಸರಕು ಕಾರಿಡಾರ್ನಲ್ಲಿ ಮೊದಲ ಸರಕು ರೈಲು ಚಲಿಸುವಾಗ ನಾವು ಇಂದು ಸ್ವಾವಲಂಬಿ ಭಾರತದ ಘರ್ಜನೆಯನ್ನು ಕೇಳಬಹುದು ಎಂದು ಅವರು ಹೇಳಿದರು. ಪ್ರಯಾಗರಾಜ್ ಕಾರ್ಯಾಚರಣೆ ನಿಯಂತ್ರಣ ಕೇಂದ್ರವು ಆಧುನಿಕ ನಿಯಂತ್ರಣ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು ನವ ಭಾರತದ ಹೊಸ ಶಕ್ತಿಯ ಸಂಕೇತವಾಗಿದೆ ಎಂದು ಅವರು ಹೇಳಿದರು.
ಯಾವುದೇ ರಾಷ್ಟ್ರಕ್ಕೆ ಮೂಲಸೌಕರ್ಯವೇ ದೊಡ್ಡ ಶಕ್ತಿಯ ಮೂಲ ಎಂದು ಪ್ರಧಾನಿ ಹೇಳಿದರು. ಭಾರತವು ಬೃಹತ್ ಆರ್ಥಿಕ ಶಕ್ತಿಯಾಗುವತ್ತ ವೇಗವಾಗಿ ಸಾಗುತ್ತಿರುವಾಗ, ಉತ್ತಮ ಸಂಪರ್ಕವು ದೇಶದ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಇದನ್ನು ಗಮನದಲ್ಲಿಟ್ಟುಕೊಂಡು ಕಳೆದ ಆರು ವರ್ಷಗಳಿಂದ ಆಧುನಿಕ ಸಂಪರ್ಕದ ಪ್ರತಿಯೊಂದು ಅಂಶಗಳಲ್ಲೂ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಹೆದ್ದಾರಿಗಳು, ರೈಲ್ವೆ, ವಾಯುಮಾರ್ಗಗಳು, ಜಲಮಾರ್ಗಗಳು ಮತ್ತು ಐ-ವೇ- ಗಳೆಂಬ ಐದು ಚಕ್ರಗಳ ಮೇಲೆ ಸರ್ಕಾರ ಗಮನ ಹರಿಸುತ್ತಿದೆ ಎಂದರು. ಪೂರ್ವ ಸರಕು ಕಾರಿಡಾರ್ ನ ದೊಡ್ಡ ವಿಭಾಗದ ಇಂದಿನ ಉದ್ಘಾಟನೆಯು ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಮೀಸಲಾದ ಸರಕು ಕಾರಿಡಾರ್‌ಗಳ ಅಗತ್ಯದ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು. ಜನಸಂಖ್ಯೆಯು ಹೆಚ್ಚಾದಂತೆ, ಆರ್ಥಿಕತೆಯು ಬೆಳೆಯಿತು. ಸರಕುಗಳ ಮೇಲಿನ ಬೇಡಿಕೆ ಅನೇಕ ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಪ್ರಯಾಣಿಕ ರೈಲುಗಳು ಮತ್ತು ಸರಕು ರೈಲುಗಳು ಒಂದೇ ಹಾದಿಯಲ್ಲಿ ಚಲಿಸುತ್ತಿರುವುದರಿಂದ, ಸರಕುಗಳ ರೈಲಿನ ವೇಗ ನಿಧಾನವಾಗಿದೆ ಎಂದು ಅವರು ಹೇಳಿದರು. ಸರಕು ರೈಲಿನ ವೇಗ ನಿಧಾನವಾದಾಗ ಮತ್ತು ಅಡಚಣೆ ಉಂಟಾದಾಗ ಸಾರಿಗೆ ವೆಚ್ಚವು ಅಧಿಕವಾಗಿರುತ್ತದೆ ಎಂದು ಅವರು ಹೇಳಿದರು. ನಮ್ಮ ಉತ್ಪನ್ನಗಳು ದುಬಾರಿಯಾದಾಗ ದೇಶದ ಹಾಗೂ ಮತ್ತು ವಿದೇಶಗಳ ಮಾರುಕಟ್ಟೆಗಳಲ್ಲಿ ಸ್ಪರ್ಧೆಯನ್ನು ಕಳೆದುಕೊಳ್ಳುತ್ತವೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಮೀಸಲು ಸರಕು ಕಾರಿಡಾರ್ ಅನ್ನು ಯೋಜಿಸಲಾಗಿದೆ ಎಂದು ಅವರು ಹೇಳಿದರು. ಆರಂಭದಲ್ಲಿ 2 ಮೀಸಲು ಸರಕು ಕಾರಿಡಾರ್‌ಗಳನ್ನು ಯೋಜಿಸಲಾಗಿತ್ತು. ಪೂರ್ವ ಸರಕು ಕಾರಿಡಾರ್ ಲುಧಿಯಾನದಿಂದ ಡಾಂಕುನಿವರೆಗೆ ಇದೆ. ಈ ಮಾರ್ಗದಲ್ಲಿ ಕಲ್ಲಿದ್ದಲು ಗಣಿಗಳು, ಉಷ್ಣ ವಿದ್ಯುತ್ ಸ್ಥಾವರಗಳು ಮತ್ತು ಕೈಗಾರಿಕಾ ನಗರಗಳಿವೆ. ಇವುಗಳಿಗಾಗಿ ಫೀಡರ್ ಮಾರ್ಗಗಳನ್ನು ಸಹ ಮಾಡಲಾಗುತ್ತಿದೆ. ಪಶ್ಚಿಮ ಸರಕು ಕಾರಿಡಾರ್ ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್‌ನಿಂದ ದಾದ್ರಿವರೆಗೆ ಇದೆ. ಈ ಕಾರಿಡಾರ್‌ನಲ್ಲಿ ಮುಂಡ್ರಾ, ಕಾಂಡ್ಲಾ, ಪಿಪಾವವ್, ದಾವ್ರಿ ಮತ್ತು ಹಜೀರಾ ಮುಂತಾದ ಬಂದರುಗಳನ್ನು ಫೀಡರ್ ಮಾರ್ಗಗಳ ಮೂಲಕ ಸಂಪರ್ಕಿಸಲಾಗುವುದು. ದೆಹಲಿ-ಮುಂಬೈ ಮತ್ತು ಅಮೃತಸರ-ಕೋಲ್ಕತ್ತಾದ ಕೈಗಾರಿಕಾ ಕಾರಿಡಾರ್ ಅನ್ನು ಈ ಎರಡೂ ಸರಕು ಕಾರಿಡಾರ್ ಸುತ್ತಲೂ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಇದೇ ರೀತಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಕಾರಿಡಾರ್‌ಗಳನ್ನು ಸಹ ಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇಂತಹ ಮೀಸಲಾದ ಸರಕು ಕಾರಿಡಾರ್‌ಗಳಿಂದಾಗಿ ಪ್ರಯಾಣಿಕ ರೈಲುಗಳ ವಿಳಂಬ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಇದರಿಂದಾಗಿ ಸರಕು ಸಾಗಣೆ ರೈಲಿನ ವೇಗವು 3 ಪಟ್ಟು ಹೆಚ್ಚಾಗುತ್ತದೆ ಮತ್ತು ಸರಕುಗಳ ದುಪ್ಪಟ್ಟು ಪ್ರಮಾಣವನ್ನು ಸಾಗಿಸಲು ಸಾಧ್ಯವಾಗುತ್ತದೆ. ಸರಕು ರೈಲುಗಳು ಸಮಯಕ್ಕೆ ಸರಿಯಾಗಿ ತಲುಪಿದಾಗ ನಮ್ಮ ಲಾಜಿಸ್ಟಿಕ್ಸ್ ನೆಟ್‌ವರ್ಕ್‌ನ ವೆಚ್ಚವು ಅಗ್ಗವಾಗಿರುತ್ತದೆ ಎಂದು ಅವರು ಹೇಳಿದರು. ನಮ್ಮ ಸರಕುಗಳು ಅಗ್ಗವಾದಾರೆ, ಅದು ನಮ್ಮ ರಫ್ತಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಉತ್ತಮ ವಾತಾವರಣವನ್ನು ಸೃಷ್ಟಿಸುತ್ತದೆ, ಸುಲಭ ವ್ಯವಹಾರವು ಹೆಚ್ಚಾಗುತ್ತದೆ ಮತ್ತು ಭಾರತವು ಹೂಡಿಕೆಗೆ ಆಕರ್ಷಕ ಸ್ಥಳವಾಗಲಿದೆ. ಸ್ವಯಂ ಉದ್ಯೋಗಕ್ಕಾಗಿ ಅನೇಕ ಹೊಸ ಅವಕಾಶಗಳೂ ಸಹ ಸೃಷ್ಟಿಯಾಗುತ್ತವೆ ಎಂದು ಅವರು ಹೇಳಿದರು.
ಕೈಗಾರಿಕೆಗಳು, ಉದ್ಯಮಿಗಳು, ರೈತರು ಅಥವಾ ಗ್ರಾಹಕರು ಹೀಗೆ ಪ್ರತಿಯೊಬ್ಬರೂ ಈ ಪ್ರತ್ಯೇಕ ಸರಕು ಕಾರಿಡಾರ್‌ನಿಂದ ಪ್ರಯೋಜನ ಪಡೆಯಲಿದ್ದಾರೆ ಎಂದು ಪ್ರಧಾನಿ ಹೇಳಿದರು. ಸರಕು ಕಾರಿಡಾರ್ ಕೈಗಾರಿಕೆಯಲ್ಲಿ ಹಿಂದುಳಿದಿರುವ ಪೂರ್ವ ಭಾರತವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು. ಸುಮಾರು 60 ಪ್ರತಿಶತದಷ್ಟು ಕಾರಿಡಾರ್ ಉತ್ತರ ಪ್ರದೇಶದಲ್ಲಿ ಬರುತ್ತದೆ ಎಂದು ಅವರು ಹೇಳಿದರು. ಇದು ಉತ್ತರ ಪ್ರದೇಶಕ್ಕೆ ಸಾಕಷ್ಟು ಕೈಗಾರಿಕೆಗಳನ್ನು ಆಕರ್ಷಿಸುತ್ತದೆ. ಈ ಮೀಸಲಾದ ಸರಕು ಕಾರಿಡಾರ್‌ನಿಂದಾಗಿ ಕಿಸಾನ್ ರೈಲುಗಳಿಗೂಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ರೈತರು ತಮ್ಮ ಉತ್ಪನ್ನಗಳನ್ನು ರೈಲುಗಳ ಮೂಲಕ ದೇಶದ ಯಾವುದೇ ದೊಡ್ಡ ಮಾರುಕಟ್ಟೆಗಳಿಗೆ ಸುರಕ್ಷಿತವಾಗಿ ಮತ್ತು ಕಡಿಮೆ ಬೆಲೆಯಲ್ಲಿ ಕಳುಹಿಸಬಹುದು. ಈಗ ಈ ಸರಕು ಕಾರಿಡಾರ್ ಮೂಲಕ ರೈತರ ಉತ್ಪನ್ನಗಳು ಇನ್ನೂ ವೇಗವಾಗಿ ತಲುಪುತ್ತವೆ. ಕಿಸಾನ್ ರೈಲಿನಿಂದಾಗಿ ಉತ್ತರ ಪ್ರದೇಶದಲ್ಲಿ ಸಾಕಷ್ಟು ಸಂಗ್ರಹಣೆ ಮತ್ತು ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು ಬಂದಿವೆ ಎಂದರು.
ಪ್ರತ್ಯೇಕ ಸರಕು ಫ್ರೈಟ್ ಕಾರಿಡಾರ್ ಅನುಷ್ಠಾನದಲ್ಲಿ ಈ ಹಿಂದೆ ಭಾರಿ ವಿಳಂಬವಾಗಿದೆ ಎಂದು ಪ್ರಧಾನಿ ವಿಷಾದಿಸಿದರು. 2014 ರ ತನಕ, ಒಂದು ಕಿಲೋಮೀಟರ್ ಟ್ರ್ಯಾಕ್ ಕೂಡ ಹಾಕಿರಲಿಲ್ಲ ಎಂದು ಅವರು ಹೇಳಿದರು. 2014 ರಲ್ಲಿ ಸರ್ಕಾರ ರಚನೆಯಾದ ನಂತರ, ನಿರಂತರ ಮೇಲ್ವಿಚಾರಣೆ ಮತ್ತು ಪಾಲುದಾರರೊಂದಿಗೆ ಸಭೆ ನಡೆಸಿದ ಪರಿಣಾಮವಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ ಸುಮಾರು 1100 ಕಿ.ಮೀ. ಕೆಲಸ ಪೂರ್ಣವಾಗುತ್ತದೆ ಎಂದರು. ರೈಲು ಓಡಬೇಕಾದ ಹಳಿಗಳಿಗಿಂತ ರೈಲುಗಳ ಸಂಖ್ಯೆಯನ್ನು ಮಾತ್ರ ಹೆಚ್ಚಿಸುವತ್ತ ಗಮನಹರಿಸಿದ ಹಿಂದಿನ ಆಡಳಿತಗಳ ಮನಸ್ಥಿತಿಯನ್ನು ಅವರು ಟೀಕಿಸಿದರು. ರೈಲು ಜಾಲದ ಆಧುನೀಕರಣಕ್ಕೆ ಹೆಚ್ಚಿನ ಹೂಡಿಕೆ ಮಾಡಲಿಲ್ಲ ಎಂದರು. ಪ್ರತ್ಯೇಕ ರೈಲು ಬಜೆಟ್ ತೆಗೆದುಹಾಕುವುದರೊಂದಿಗೆ, ರೈಲು ಹಳಿಯ ಮೇಲೆ ಹೂಡಿಕೆ ಮಾಡುವುದರೊಂದಿಗೆ ಇದನ್ನು ಬದಲಾಯಿಸಲಾಗಿದೆ ಎಂದರು. ರೈಲು ಜಾಲದ ವಿಸ್ತರಣೆ ಮತ್ತು ವಿದ್ಯುದ್ದೀಕರಣ ಮತ್ತು ಮಾನವರಹಿತ ರೈಲು ಕ್ರಾಸಿಂಗ್‌ಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರ ಗಮನಹರಿಸಿದೆ ಎಂದರು.
ರೈಲ್ವೆಯಲ್ಲಿ ಸ್ವಚ್ಛತೆ, ಸುಧಾರಿತ ಆಹಾರ ಹಾಗೂ ಪಾನೀಯ ಮತ್ತಿತರ ಸೌಲಭ್ಯಗಳಲ್ಲಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. ರೈಲ್ವೆ ಸಂಬಂಧಿತ ಉತ್ಪಾದನೆಯಲ್ಲೂ ಸಹ ಇದೇ ರೀತಿ ಸ್ವಾವಲಂಬಿ ಸಾಧನೆ ಮಾಡಲಾಗಿದೆ ಎಂದು ಅವರು ಹೇಳಿದರು. ಭಾರತವು ಈಗ ಆಧುನಿಕ ರೈಲುಗಳನ್ನು ನಿರ್ಮಿಸುತ್ತಿದೆ ಮತ್ತು ರಫ್ತು ಮಾಡುತ್ತಿದೆ, ವಾರಣಾಸಿಯು ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳ ಪ್ರಮುಖ ಕೇಂದ್ರವಾಗುತ್ತಿದೆ, ರಾಯ್ ಬರೇಲಿಯಲ್ಲಿ ತಯಾರಿಸಿದ ರೈಲು ಬೋಗಿಗಳನ್ನು ಈಗ ವಿದೇಶಕ್ಕೆ ರಫ್ತು ಮಾಡಲಾಗುತತಿದೆ ಎಂದರು.
ದೇಶದ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ರಾಜಕೀಯದಿಂದ ದೂರವಿಡಬೇಕೆಂದು ಪ್ರಧಾನಿ ಆಗ್ರಹಿಸಿದರು. ದೇಶದ ಮೂಲಸೌಕರ್ಯವು 5 ವರ್ಷಗಳ ರಾಜಕೀಯವನ್ನು ಬಿಟ್ಟು ಅನೇಕ ತಲೆಮಾರುಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿರಬೇಕು ಎಂದು ಅವರು ಹೇಳಿದರು. ರಾಜಕೀಯ ಪಕ್ಷಗಳಲ್ಲಿ ಮೂಲಸೌಕರ್ಯಗಳ ಗುಣಮಟ್ಟ, ವೇಗ ಮತ್ತು ಪ್ರಮಾಣದಲ್ಲಿ ಸ್ಪರ್ಧೆ ಇರಬೇಕು. ಪ್ರತಿಭಟನೆಗಳು ಮತ್ತು ಚಳುವಳಿಗಳ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡದಂತೆ ಅವರು ಸಲಹೆ ನೀಡಿದರು. ತಮ್ಮ ಪ್ರಜಾಪ್ರಭುತ್ವದತ್ತವಾದ ಹಕ್ಕನ್ನು ಮಂಡಿಸುವಾಗ ರಾಷ್ಟ್ರದ ಬಗ್ಗೆ ತಮಗಿರುವ ಹೊಣೆಗಾರಿಕೆಯನ್ನು ಸಹ ಯಾರೂ ಮರೆಯಬಾರದು ಎಂದು ಅವರು ಹೇಳಿದರು.
***
(Release ID: 1684405)
Visitor Counter : 256
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam