ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ

Posted On: 24 DEC 2020 2:06PM by PIB Bengaluru

“ಹೇ ಬಿ ಧಾತಾ, ದಾವೊ ದಾವೊ ಮೊದರ್ ಗೌರಬ್ ದಾವೊ”(ಓ ದೇವರೇ ! ನಿನ್ನ ಆಶೀರ್ವಾದ ನಮ್ಮ ಮೇಲಿರಲಿ) ಎಂದು ಗುರುದೇವ ಅವರು ಒಮ್ಮೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಿದ್ದರು. ಇಂದು ವಿಶ್ವ ಭಾರತಿ ವಿಶ್ವವಿದ್ಯಾಲಯದ 100ನೇ ವಾರ್ಷಿಕೋತ್ಸವದ ಈ ಸಂಭ್ರಮದ ಆಚರಣೆ ವೇಳೆ ಇಡೀ ವಿಶ್ವ ನನ್ನಂತೆ ಅದೇ ರೀತಿ ಪ್ರಾರ್ಥಿಸುತ್ತಿದೆ. ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಶ್ರೀ ಜಗದೀಪ್ ಧನಕರ್ ಜಿ, ಕೇಂದ್ರ ಶಿಕ್ಷಣ ಸಚಿವರಾದ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಜಿ, ಉಪಕುಲಪತಿಗಳಾದ ಪ್ರೊ|| ಬಿದ್ಯುತ್ ಚಕ್ರವರ್ತಿ ಜಿ, ಎಲ್ಲ ಪ್ರೊಫೆಸರ್ ಗಳೇ, ರಿಜಿಸ್ಟ್ರಾರ್ ಗಳೇ, ವಿಶ್ವ ಭಾರತಿಯ ಎಲ್ಲ ಶಿಕ್ಷಕರೇ, ವಿದ್ಯಾರ್ಥಿಗಳೇ, ಮಾಜಿ ವಿದ್ಯಾರ್ಥಿಗಳೇ, ಮಹಿಳೆಯರೇ ಮತ್ತು ಮಹನಿಯರೇ ! ವಿಶ್ವ ಭಾರತಿಯ ಈ 100ನೇ ವಾರ್ಷಿಕೋತ್ಸವ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮಯೆ ಕ್ಷಣವಾಗಿದೆ. ಈ ತಪೋ ಭೂಮಿಯ ಸದ್ಗುಣವನ್ನು ನೆನಪು ಮಾಡಿಕೊಳ್ಳುವ ಮತ್ತು ಸ್ಮರಿಸುವ ಅವಕಾಶ ದೊರೆತಿರುವುದಕ್ಕೆ ನನಗೆ ಅತೀವ ಹೆಮ್ಮೆಯಾಗುತ್ತಿದೆ.

ಮಿತ್ರರೇ,

        ವಿಶ್ವಭಾರತಿಯ 100 ವರ್ಷಗಳ ಈ ಪಯಣ ವಿಶೇಷವಾದುದು. ವಿಶ್ವ ಭಾರತಿ, ಗುರುದೇವರು ಭಾರತ ಮಾತೆಗಾಗಿ ಹೊಂದಿದ್ದ  ಆದರ್ಶಗಳು, ದೂರದೃಷ್ಟಿ ಮತ್ತು ಪರಿಶ್ರಮದ ನೈಜ ಪ್ರತೀಕವಾಗಿದೆ. ಭಾರತಕ್ಕೆ ಇದು ಪೂಜಾ ಸ್ಥಳವಿದ್ದಂತೆ. ಇದು ಗುರುದೇವರ ಕನಸುಗಳ ಸಾಕಾರಕ್ಕೆ ದೇಶಕ್ಕೆ ಸದಾ ಶಕ್ತಿಯನ್ನು ನೀಡುವ ಸ್ಥಳವಾಗಿದೆ. ವಿಶ್ವ ವಿಖ್ಯಾತ  ಗೀತ ರಚನಕಾರರು, ಸಂಗೀತಗಾರರು, ಕಲಾವಿದರು, ಸಾಹಿತಿಗಳು, ಆರ್ಥಿಕ ತಜ್ಞರು, ಸಮಾಜಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಹಣಕಾಸು ತಜ್ಞರನ್ನು ವಿಶ್ವ ಭಾರತಿ ಸೃಷ್ಟಿಸಿದ್ದು, ಅದು ಆ ಮೂಲಕ ನವಭಾರತ ನಿರ್ಮಾಣಕ್ಕೆ ಹೊಸ ಪ್ರಯತ್ನಗಳಿಗೆ ನೆರವಾಗುತ್ತಿದೆ. ಈ ಸಂಸ್ಥೆಯಿಂದ ಹೊಸ ಎತ್ತರಕ್ಕೆ ಏರಿರುವ ಪ್ರತಿಯೊಬ್ಬ ವ್ಯಕ್ತಿಗೂ ನನ್ನ ವಿನಮ್ರ ಪ್ರಣಾಮಗಳು ಮತ್ತು ನಾನು ಅವರನ್ನು ಅಭಿನಂದಿಸುತ್ತೇನೆ. ವಿಶ್ವ ಭಾರತಿ, ಶ್ರೀನಿಕೇತನ ಮತ್ತು ಶಾಂತಿನಿಕೇತನ ಇವುಗಳು ಗುರುದೇವ ಅವರು ನಿಗದಿಪಡಿಸಿದ್ದ ಗುರಿಗಳ ಸಾಧನೆ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ವಿಶ್ವ ಭಾರತಿ ಸದಾ ಗ್ರಾಮಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗಾಗಿ ಮೆಚ್ಚುಗೆಗಳಿಸುತ್ತಿದೆ. 2015ರಲ್ಲಿ ಇದು ಆರಂಭಿಸಿದ ಯೋಗ ವಿಭಾಗ, ಕ್ಷಿಪ್ರವಾಗಿ ಅತ್ಯಂತ ಜನಪ್ರಿಯತೆ ಗಳಿಸುತ್ತಿದೆ. ನಿಮ್ಮ ವಿಶ್ವವಿದ್ಯಾಲಯ ಪ್ರಕೃತಿಯ ಜೀವಂತ ಮತ್ತು ಅದರ ಜೊತೆ ಅಧ್ಯಯನ ಮಾಡುವುದಕ್ಕೆ ಉದಾಹರಣೆಯಾಗಿದೆ. ವಿಶ್ವ ಭಾರತಿಯ ಮೂಲಕ ಇಡೀ ವಿಶ್ವಕ್ಕೆ ನಮ್ಮ ದೇಶ ಸಂದೇಶವನ್ನು ನೀಡುತ್ತಿರುವುದಕ್ಕೆ ನೀವು ಸಂತೋಷಪಡುತ್ತಿದ್ದೀರಿ. ಭಾರತ ಇಂದು ಪರಿಸರ ಸಂರಕ್ಷಣೆಗಾಗಿ ಅಂತಾರಾಷ್ಟ್ರೀಯ ಸೌರ ಮೈತ್ರಿಯ ಮೂಲಕ ವಿಶ್ವ ಮಟ್ಟದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದೆ. ವಿಶ್ವದಲ್ಲಿ ಇಂದು ಭಾರತ ಪ್ಯಾರಿಸ್ ಒಪ್ಪಂದದ ಪ್ರಕಾರ ಪರಿಸರ ಗುರಿಗಳನ್ನು ಸಾಧಿಸುವ ಸೂಕ್ತ ಮಾರ್ಗದಲ್ಲಿ ತ್ವರಿತವಾಗಿ ಮುನ್ನಡೆಯುತ್ತಿರುವ ಏಕೈಕ ಪ್ರಮುಖ ರಾಷ್ಟ್ರವಾಗಿದೆ. 

ಮಿತ್ರರೇ,

        ನಾವು ಇಂದು ವಿಶ್ವ ಭಾರತಿ ವಿಶ್ವ ವಿದ್ಯಾಲಯದ 100ನೇ ವರ್ಷ ಆಚರಿಸುತ್ತಿದ್ದೇವೆ. ಈಗ ಅದರ ಸ್ಥಾಪನೆ ಯಾವ ಸನ್ನಿವೇಶದ ಆಧಾರದಲ್ಲಿ ಸ್ಥಾಪನೆಯಾಯಿತು ಎಂಬುದನ್ನು ನೆನಪು ಮಾಡಿಕೊಳ್ಳಬೇಕಿದೆ. ಇಂತಹ ಸಂದರ್ಭಗಳು ಬ್ರಿಟೀಷರ ವಸಾಹತುಶಾಹಿ ಸಂದರ್ಭದಲ್ಲಿ ಮಾತ್ರ ಎದುರಾಗಲಿಲ್ಲ. ಇದರ ಹಿಂದೆ ನೂರಾರು ವರ್ಷಗಳ ಅನುಭವವಿದೆ ಮತ್ತು ಅದರ ಹಿಂದೆ ನೂರಾರು ವರ್ಷಗಳ ಚಳವಳಿಗಳಿವೆ. ಇಂದು ವಿಶೇಷವಾಗಿ ನಾನು ನಿಮ್ಮಂತಹ ವಿದ್ವಾಂಸರ ಜೊತೆ ಚರ್ಚಿಸಲು ಬಯಸುತ್ತೇನೆ. ಏಕೆಂದರೆ ಈ ಬಗ್ಗೆ ಸಾಕಷ್ಟು ಮಾತನಾಡಿದರೂ ಕೇವಲ ಸ್ವಲ್ಪವಷ್ಟೇ ಗಮನ ಹರಿಸಲಾಗುತ್ತಿದೆ. ಈ ಬಗ್ಗೆ ಚರ್ಚಿಸುವುದು ತುಂಬಾ ಅತ್ಯಗತ್ಯ, ಏಕೆಂದರೆ ಇವು ನೇರವಾಗಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಮತ್ತು ವಿಶ್ವಭಾರತಿಯ ಗುರಿಗಳಿಗೆ ಸಂಬಂಧಿಸಿದ್ದಾಗಿದೆ.

ಮಿತ್ರರೇ,

        ನಾವು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡುವಾಗ 19 ಮತ್ತು 20ನೇ ಶತಮಾನದ ಚಿತ್ರಣ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಈ ಕ್ಷಣಗಳು ತುಂಬಾ ಹಿಂದೆಯೇ ಭದ್ರ ಬುನಾದಿ ಬಿದ್ದಿತ್ತು ಎಂಬುದು ಕೂಡ ಅಷ್ಟೇ ಸತ್ಯ. ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾನಾ ಚಳವಳಿಗಳು, ಶತಮಾನಗಳ ಹಿಂದೆಯೇ ನಡೆದು, ಶಕ್ತಿ ತುಂಬಿದ್ದವು. ಭಕ್ತಿ ಚಳವಳಿ ಆಧ್ಯಾತ್ಮಿಕತೆಯನ್ನು ಬಲವರ್ಧನೆಗೊಳಿಸಿ ಭಾರತದ ಸಾಂಸ್ಕೃತಿಕ ಒಗ್ಗಟ್ಟನ್ನು ಉಂಟು ಮಾಡಿತ್ತು. ಭಕ್ತಿ ಯುಗದಲ್ಲಿ ದೇಶದ ಪ್ರತಿಯೊಂದು ಪ್ರಾಂತ್ಯಗಳ ಪೂರ್ವದಿಂದ ಪಶ್ಚಿಮ – ಉತ್ತರದಿಂದ ದಕ್ಷಿಣದವರೆಗೆ ನಮ್ಮ ಎಲ್ಲಾ ಸಾಧುಗಳು, ಮಹಂತರು, ಆಚಾರ್ಯರು ನಿರಂತರವಾಗಿ, ಅವಿರತವಾಗಿ ರಾಷ್ಟ್ರೀಯ ಭಾವನೆಯನ್ನು ಜಾಗೃತಗೊಳಿಸಲು ಪ್ರಯತ್ನ ನಡೆಸಿದರು. ದಕ್ಷಿಣದಲ್ಲಿ ಸಂತರಾದ ಮಧ್ವಾಚಾರ್ಯ, ನಿಂಬರ್ಕಾಚಾರ್ಯ, ವಲ್ಲಭಾಚಾರ್ಯ, ರಾಮಾನುಜಾಚಾರ್ಯ ಅಥವಾ ಪಶ್ಚಿಮದಲ್ಲಿ ಮೀರಾಬಾಯಿ, ಏಕನಾಥ್, ತುಕಾರಾಂ, ರಾಮದಾಸ್, ನರ್ಸಿ ಮೆಹ್ತಾ ಅಥವಾ ಉತ್ತರದಲ್ಲಿ ಸಂತ ರಮಾನಂದ್, ಕಬೀರ್ ದಾಸ್, ಗೋಸ್ವಾಮಿ ತುಳಸೀದಾಸ್, ಸೂರದಾಸ್, ಗುರುನಾನಕ್ ದೇವ್, ಸಂತರೈ ದಾಸ್ ಮತ್ತು ಪೂರ್ವದಲ್ಲಿ ಚೈತನ್ಯ ಮಹಾಪ್ರಭು ಮತ್ತು ಶ್ರೀಮಂತ ಶಂಕರದೇವ ಸೇರಿದಂತೆ ಅಸಂಖ್ಯಾತ ಶ್ರೇಷ್ಠ ವ್ಯಕ್ತಿಗಳು ಸಮಾಜಕ್ಕೆ ಶಕ್ತಿ ತುಂಬಿದರು. ಇದೇ ಭಕ್ತಿಯುಗದಲ್ಲಿ ಶ್ರೇಷ್ಠ ವ್ಯಕ್ತಿಗಳಾದ ರಸಕ್ಷಣ್, ಸೂರದಾಸ್, ಮಲ್ಲಿಕ್ ಮೊಹಮ್ಮದ್ ಜಯಸಿ, ಕೇಶವದಾಸ್ ಮತ್ತು ವಿದ್ಯಾಪತಿ ಸೇರಿ ಹಲವರು ಸುಧಾರಣೆಗಳಿಗೆ ದಾರಿ ತೋರಿಸಿ ತಮ್ಮ ರಚನೆಗಳ ಮೂಲಕ ಸಮಾಜವನ್ನು ಅಭಿವೃದ್ಧಿಗೊಳಿಸಿದರು. ಇದೇ ಭಕ್ತಿ ಯುಗದಲ್ಲಿ ಈ ಸದ್ಗುಣ ಶೀಲ ಆತ್ಮಗಳು ಜನರಲ್ಲಿ ಏಕತೆಯ ಮನೋಭಾವವನ್ನು ತುಂಬಿದವು. ಅದರ ಪರಿಣಾಮ ಪ್ರತಿಯೊಂದು ಗಡಿಗಳನ್ನು ದಾಟಿ, ಭಾರತದ ಮೂಲೆ ಮೂಲೆಗೂ ಈ ಚಳವಳಿ ವ್ಯಾಪಿಸಿತು. ಪ್ರತಿಯೊಂದು ವರ್ಣ, ಪ್ರತಿಯೊಂದು ವರ್ಗ ಮತ್ತು ಪ್ರತಿಯೊಂದು ಜಾತಿಯ ಜನರು ಆತ್ಮ ಗೌರವ ಮತ್ತು ಸಾಂಸ್ಕೃತಿಕ ಪರಂಪರೆಗಾಗಿ ಭಕ್ತಿಯಿಂದ ಒಂದುಗೂಡಿದರು. ಭಕ್ತಿ ಚಳವಳಿ ಹೋರಾಟದ ಭಾರತವನ್ನು ಸಾಮೂಹಿಕ ಆತ್ಮವಿಶ್ವಾಸ ಮತ್ತು ಶತಮಾನಗಳ ವಿಶ್ವಾಸವನ್ನು ತುಂಬಿತು.  

ಮಿತ್ರರೇ,

        ಭಕ್ತಿಯ ಪಾಠ ಕಾಳಿ ದೇವಿಯ ಶ್ರೇಷ್ಠ ಭಕ್ತರಾದ ಶ್ರೀ ರಾಮಕೃಷ್ಣ ಪರಮಹಂಸರ ಬಗ್ಗೆ ಚರ್ಚಿಸದೆ ಮುಂದುವರಿಸಲಾಗದು. ಅವರು ಅತ್ಯಂತ ಶ್ರೇಷ್ಠರು. ಅವರಿಂದಾಗಿ ಭಾರತಕ್ಕೆ ಸ್ವಾಮಿ ವಿವೇಕಾನಂದರು ದೊರಕಿದರು. ಸ್ವಾಮಿ ವಿವೇಕಾನಂದ ಭಕ್ತಿ, ಜ್ಞಾನ ಮತ್ತು ಕರ್ಮದ ಪ್ರತೀಕ. ಅವರು ಪ್ರತಿಯೊಬ್ಬರಲ್ಲೂ ದೈವತ್ವವನ್ನು ಕಂಡರು ಹಾಗೂ ಭಕ್ತಿಯ ವ್ಯಾಪ್ತಿಯನ್ನು ವಿಸ್ತರಿಸಿದರು. ಅಲ್ಲದೆ ಅವರು ಕರ್ಮಕ್ಕೆ ಅಭಿವ್ಯಕ್ತಿಯನ್ನು ನೀಡಿ, ವ್ಯಕ್ತಿಗಳು ಮತ್ತು ಸಂಸ್ಥೆಗಳ ಅಭಿವೃದ್ಧಿಗೆ ಒತ್ತು ನೀಡಿದರು.  

ಮಿತ್ರರೇ,

        ನೂರಾರು ವರ್ಷಗಳ ಭಕ್ತಿ ಚಳವಳಿಯ ನಂತರ ಕರ್ಮ ಚಳವಳಿ ಕೂಡ ದೇಶದಲ್ಲಿ ನಡೆಯಿತು. ಶತಮಾನಗಳಿಂದ ಭಾರತದ ಜನರು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡುತ್ತಿದ್ದರು. ಅದು ಛತ್ರಪತಿ ಶಿವಾಜಿ ಮಹಾರಾಜ್, ಮಹಾರಾಣಾ ಪ್ರತಾಪ್, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮ ಅಥವಾ ಬಿರ್ಸಾ ಮುಂಡಾ ಅವರ ಶಸ್ತ್ರಾಸ್ತ್ರದ ಹೋರಾಟ, ಮತ್ತಿತರರ ಕಠಿಣ ಪ್ರಯತ್ನಗಳು, ತೀವ್ರತೆ ಮತ್ತು ಅನ್ಯಾಯ ಹಾಗೂ ಶೋಷಣೆ ತೀರಾ ಹೆಚ್ಚಾಗಿದ್ದಾಗ ಸಾಮಾನ್ಯ ಜನರು ಬಲಿದಾನ ನೀಡಿದರು. ನಂತರದ ಅವಧಿಯಲ್ಲಿ ಇದು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಅತ್ಯಂತ ಪ್ರಮುಖ ಸ್ಫೂರ್ತಿಯನ್ನು ತುಂಬಿತು.

ಮಿತ್ರರೇ,

        ಭಕ್ತಿಯ ಅಲೆಗಳು ಮತ್ತು ಪ್ರಯತ್ನಗಳು ಅತ್ಯಂತ ಕ್ಷಿಪ್ರ ವೇಗದಲ್ಲಿ ಹರಿಯುತ್ತಿದ್ದ ಸಂದರ್ಭದಲ್ಲಿ ಹೊಸ ತ್ರಿವೇಣಿ ಸಂಗಮದ ನದಿಯಂತೆ ಜ್ಞಾನ, ಸ್ವಾತಂತ್ರ್ಯ ಸಂಗ್ರಾಮದ ಜಾಗೃತಿಯನ್ನು ಮೂಡಿಸಿತು. ಸ್ವಾತಂತ್ರ್ಯದ ಬಯಕೆಯಲ್ಲಿ ಸಂಪೂರ್ಣ ಉತ್ತೇಜನ ಮತ್ತು ಭಕ್ತಿಯ ಸ್ಫೂರ್ತಿ ತುಂಬಿತು. ಜ್ಞಾನದ ಆಧಾರದ ಮೇಲೆ ಸ್ವಾತಂತ್ರ್ಯದ ಯುದ್ಧವನ್ನು ಜಯಿಸುವ ತಾತ್ವಿಕ ಚಳವಳಿ ಸೃಷ್ಟಿಯಾಗಲು ಅದು ಅತ್ಯಂತ ಸಕಾಲವಾಗಿತ್ತು. ಜೊತೆಗೆ ಭಾರತದ ಉಜ್ವಲ ಭವಿಷ್ಯಕ್ಕಾಗಿ ಹೊಸ ಪೀಳಿಗೆಯನ್ನು ಸಜ್ಜುಗೊಳಿಸಲಾಯಿತು. ಅಂತಹ ಸಂದರ್ಭದಲ್ಲಿ ಹಲವು ಸಂಸ್ಥೆಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾಲಯಗಳು ಅತ್ಯಂತ ಪ್ರಮುಖ ಪಾತ್ರವಹಿಸಿದವು. ಅವುಗಳೆಂದರೆ ವಿಶ್ವ ಭಾರತಿ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯ, ಇದೀಗ ಲಾಹೋರ್ ನಲ್ಲಿರುವ ನ್ಯಾಷನಲ್ ಕಾಲೇಜು, ಮೈಸೂರು ವಿಶ್ವವಿದ್ಯಾಲಯ, ತ್ರಿಚಿ ನ್ಯಾಷನಲ್ ಕಾಲೇಜು, ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠ, ಗುಜರಾತ್ ವಿದ್ಯಾಪೀಠ, ವಿಲ್ಲಿಂಗ್ ಡನ್ ಕಾಲೇಜು, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಲಖನೌ ವಿಶ್ವವಿದ್ಯಾಲಯ, ಪಾಟ್ನಾ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಆಂಧ್ರ ವಿಶ್ವ ವಿದ್ಯಾಲಯ ಅಥವಾ ಅಣ್ಣಾಮಲೈ ವಿಶ್ವವಿದ್ಯಾಲಯ. ಭಾರತದ ಈ ವಿಶ್ವ ವಿದ್ಯಾಲಯಗಳಲ್ಲಿ ಒಂದು ಸಂಪೂರ್ಣ ಹೊಸ ವಿದ್ವಾಂಸರ ಗುಂಪು ಸೃಷ್ಟಿಯಾಯಿತು. ಈ ಶಿಕ್ಷಣ ಸಂಸ್ಥೆಗಳು ಭಾರತದ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ತಾತ್ವಿಕ ಚಳವಳಿಗೆ ಹೊಸ ಶಕ್ತಿ, ಹೊಸ ದಿಕ್ಸೂಚಿ ಮತ್ತು ಹೊಸ ಎತ್ತರಕ್ಕೆ ಕೊಂಡೊಯ್ದವು. ಭಕ್ತಿ ಚಳವಳಿಯಿಂದ ಒಗ್ಗೂಡಿದ್ದ ನಾವು, ಜ್ಞಾನದ ಚಳವಳಿಯಿಂದ ಬೌದ್ಧಿಕ ಸಾಮರ್ಥ್ಯ ದೊರಕಿತು ಮತ್ತು ಕರ್ಮ ಚಳವಳಿ ನಮ್ಮ ಹಕ್ಕುಗಳಿಗಾಗಿ ಹೋರಾಡುವ ಧೈರ್ಯವನ್ನು ತಂದುಕೊಟ್ಟಿತು. ಈ ಚಳವಳಿಗಳು ನೂರಾರು ವರ್ಷಗಳ ಕಾಲ ನಡೆದವು ಮತ್ತು ಅವು ತ್ಯಾಗ, ತಪಸ್ಸು ಮತ್ತು ದೃಢನಿಶ್ಚಯ ವಿಶಿಷ್ಟ ಉದಾಹರಣೆಗಳಾದವು. ಈ ಚಳವಳಿಗಳಿಂದ ಪ್ರಭಾವಿತರಾದ ಸಾವಿರಾರು ಜನರು ಒಬ್ಬರಾದ ನಂತರ ಒಬ್ಬರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಜೀವಗಳನ್ನು ಬಲಿದಾನ ಮಾಡಲು ಮುಂದೆ ಬಂದರು.

ಮಿತ್ರರೇ,

        ಈ ಜ್ಞಾನದ ಚಳವಳಿ ಗುರುದೇವರಿಂದ ಸ್ಥಾಪಿತವಾದ ವಿಶ್ವ ಭಾರತಿ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಉತ್ತೇಜನ ನೀಡಿತು. ಗುರುದೇವರ ಮಾರ್ಗದಲ್ಲಿ ವಿಶ್ವ ಭಾರತಿಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಬೆಸೆಯುವುದಕ್ಕೆ ಒಂದು ಸ್ವರೂಪ ನೀಡಲಾಯಿತು. ಅವರು ದೇಶದ ಮುಂದೆ ಬಲಿಷ್ಠ ರಾಷ್ಟ್ರೀಯತೆಯ ಅಸ್ಮಿತೆಯನ್ನು ಮುಂದಿಟ್ಟರು. ಅದೇ ವೇಳೆ ಅವರು ಜಾಗತಿಕ ಸಹೋದರತ್ವ(ಭ್ರಾತೃತ್ವಕ್ಕೆ) ಸಮಾನ ಒತ್ತು ನೀಡಿದ್ದರು.

ಮಿತ್ರರೇ,

        ವೇದದಿಂದ ವಿವೇಕಾನಂದರ ವರೆಗಿನ ಭಾರತದ ತಾತ್ವಿಕ ಆಯಾಮ ಗುರುದೇವರ ರಾಷ್ಟ್ರೀಯತೆಯ ವಿಚಾರದೊಂದಿಗೆ ಸಮ್ಮಿಳಿತಗೊಂಡಿತು ಮತ್ತು ಈ ವಿಚಾರ ಅಂರ್ಗತವಾಗಿಒ ಬಂದಿರಲಿಲ್ಲ ಮತ್ತು ಅದು ಭಾರತವನ್ನು ಜಗತ್ತಿನ ಇತರೆ ರಾಷ್ಟ್ರಗಳಿಂದ ಪ್ರತ್ಯೇಕವಾಗಿಸಲಿಲ್ಲ. ಅವರ ದೂರದೃಷ್ಟಿಯಂತೆ ಭಾರತದಲ್ಲಿ ಅತ್ಯುತ್ತಮವಾದುದರಿಂದ ಇಡೀ ವಿಶ್ವಕ್ಕೆ ಪ್ರಯೋಜನವಾಗಬೇಕು. ಭಾರತ ಜಗತ್ತಿನ ಎಲ್ಲ ಒಳ್ಳೆಯ ಸಂಗತಿಗಳನ್ನು ಕಲಿಯುವಂತಾಗಬೇಕು ಎಂದು ಬಯಸಿದ್ದರು. ನಿಮ್ಮ ವಿಶ್ವವಿದ್ಯಾಲಯ ಅಂದರೆ ವಿಶ್ವಭಾರತಿಯ ಹೆಸರನ್ನೇ ಗಮನಿಸಿ. ಇದು ತಾಯಿ ಭಾರತ ಮಾತೆ ಮತ್ತು ವಿಶ್ವದ ನಡುವೆ ಸಂಬಂಧ ಹೊಂದಿದೆ. ಗುರುದೇವ , ಸರ್ವಂತರ್ಯಾಮಿ, ಸಹಬಾಳ್ವೆ ಮತ್ತು ಸಹಕಾರದ ಮೂಲಕ ಮಾನವರ ಕಲ್ಯಾಣದ ಶ್ರೇಷ್ಠ ಗುರಿಗಳ ನಿಟ್ಟಿನಲ್ಲಿ ಸಾಗಿದರು. ವಿಶ್ವ ಭಾರತಿಗೆ ಗುರುದೇವರು ಈ ದೂರದೃಷ್ಟಿಯನ್ನು ನೀಡಿದರು. ಇದು ಸ್ವಾವಲಂಬಿ ಭಾರತದ ಸಾರವೂ ಆಯಿತು. ಆತ್ಮ ನಿರ್ಭರ ಭಾರತ ಅಭಿಯಾನ ಇಡೀ ಜಗತ್ತಿನ ಕಲ್ಯಾಣಕ್ಕಾಗಿ ಭಾರತದ ಕಲ್ಯಾಣ ಮಾರ್ಗದತ್ತ ಸಾಗುವುದಾಗಿದೆ. ಈ ಅಭಿಯಾನ ಭಾರತವನ್ನು ಸಬಲೀಕರಣಗೊಳಿಸುವ ಅಭಿಯಾನವಾಗಿದೆ. ಈ ಅಭಿಯಾನ ಭಾರತದ ಅಭ್ಯುದಯದೊಂದಿಗೆ ಜಗತ್ತಿನ ಏಳಿಗೆಯನ್ನು ಕಾಣುವುದಾಗಿದೆ. ಬಲಿಷ್ಠ ಮತ್ತು ಸ್ವಾವಲಂಬಿ ಭಾರತದಿಂದ ಸದಾ ಇಡೀ ಜಾಗತಿಕ ಸಮುದಾಯಕ್ಕೆ ಒಳಿತಾಗಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಅಲ್ಲದೆ सर्वे भवंतु सुखिनः ಸರ್ವೇ ಜನೋ ಸುಖಿನೋ ಭವಂತು ನಮ್ಮ ರಕ್ತದಲ್ಲಿದೆ. ಭಾರತ ಮಾತೆ ಮತ್ತು ವಿಶ್ವದ ಜೊತೆಗಿನ ಸಂಬಂಧವನ್ನು ನಿಮಗಿಂತ ಯಾರು ಚೆನ್ನಾಗಿ ಬಲ್ಲರು. ಗುರುದೇವ ‘ಸ್ವದೇಶಿ ಸಮಾಜ’ದ ಸಂಕಲ್ಪವನ್ನು ನಮಗೆ ನೀಡಿದ್ದರು.  ಅವರು ನಮ್ಮ ಗ್ರಾಮಗಳು, ನಮ್ಮ ಕೃಷಿ ಸ್ವಾವಲಂಬಿಯಾಗಬೇಕು ಎಂದು ಬಯಸಿದ್ದರು. ಅವರು ವಾಣಿಜ್ಯ ಮತ್ತು ವ್ಯಾಪಾರ ಸ್ವಾವಲಂಬನೆಯಾಗಬೇಕು ಎಂದು ಬಯಸಿದ್ದರು. ಅವರು ಕಲೆ ಮತ್ತು ಸಾಹಿತ್ಯ ಸ್ವಾವಲಂಬಿಯಾಗಬೇಕು ಎಂದು ಆಶಿಸಿದ್ದರು. ಅವರು ಸ್ವಾವಲಂಬಿ ಗುರಿ ಸಾಧನೆಗಾಗಿ ‘ಸ್ವಯಂ ಶಕ್ತಿ’ ಕುರಿತು ಮಾತನಾಡಿದ್ದರು. ಅವರು ರಾಷ್ಟ್ರ ನಿರ್ಮಾಣಕ್ಕಾಗಿ ಯಾವ ಆತ್ಮಶಕ್ತಿಯ ಬಗ್ಗೆ ಮಾತನಾಡಿದ್ದರೋ ಅದು ಇಂದಿಗೂ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಅವರು ‘ರಾಷ್ಟ್ರದ ನಿರ್ಮಾಣ ಮೋಕ್ಷವನ್ನು ಸಾಧಿಸುವ ನಿಟ್ಟಿನಲ್ಲಿ ಮಾಡುವಂತಹ ವಿಸ್ತರಣೆಯಾಗಿದೆ. ನಿಮ್ಮ ಚಿಂತನೆಗಳ ಮೂಲಕ, ನಿಮ್ಮ ಕ್ರಿಯೆಗಳ ಮೂಲಕ ಮತ್ತು ನಿಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ನೀವು ರಾಷ್ಟ್ರ ನಿರ್ಮಾಣಕ್ಕೆ ಮುಂದಾದರೆ ಆಗ ನೀವು ದೇಶದ ಆತ್ಮದೊಂದಿಗೆ ನಿಮ್ಮ ಆತ್ಮವಿರುವುದನ್ನು ಕಾಣಲು ಆರಂಭಿಸುತ್ತೀರಿ’ ಎಂದು ಹೇಳಿದ್ದರು.   

ಮಿತ್ರರೇ,

          ಭಾರತದ ಆತ್ಮ, ಭಾರತದ ಸ್ವಾವಲಂಬನೆ ಮತ್ತು ಭಾರತದ ಆತ್ಮವಿಶ್ವಾಸ ಇವು ಒಂದಕ್ಕೊಂದು ಸಂಬಂಧ ಹೊಂದಿವೆ. ಭಾರತದ ಸ್ವಯಂ ಗೌರವವನ್ನು ರಕ್ಷಿಸಲು ಬಂಗಾಳದ ಹಲವು ಪೀಳಿಗೆಗಳ ಜನರು ತಮ್ಮ ಜೀವ ತ್ಯಾಗ ಮಾಡಿದ್ದಾರೆ. ಖುದಿರಾಮ್ ಬೋಸ್ ಅವರನ್ನು ಕೇವಲ 18 ವರ್ಷ ವಯಸ್ಸಿಗೆ ನೇಣಿಗೇರಿಸಲಾಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಿ. ಪ್ರಫುಲ್ಲಾ ಛಾಕಿ ಅವರು 19ನೇ ವರ್ಷದಲ್ಲೇ ಸಾವನ್ನಪ್ಪಿದ್ದರು. ಬಂಗಾಳದ ಅಗ್ನಿಕನ್ಯಾ ಎಂದು ಹೆಸರಾಗಿದ್ದ ಬಿನಾ ದಾಸ್ ಅವರನ್ನು 21ನೇ ವಯಸ್ಸಿಗೆ ಕಾರಾಗೃಹಕ್ಕೆ ದೂಡಲಾಗಿತ್ತು. ಪ್ರೀತಿ ಲತಾ ವಡ್ಡೇದಾರ್ ತನ್ನ 21ನೇ ವಯಸ್ಸಿಗೆ ಪ್ರಾಣ ತ್ಯಜಿಸಿದರು. ಇತಿಹಾಸದಲ್ಲಿ ದಾಖಲಾಗದಂತಹ ಅಸಂಖ್ಯಾತ ಜನರು ಸಾಕಷ್ಟು ಸಂಖ್ಯೆಯಲ್ಲಿ ಬಹುಶಃ ಇದ್ದಾರೆ. ಅವರೆಲ್ಲರೂ ದೇಶದ ಆತ್ಮವಿಶ್ವಾಸದ ರಕ್ಷಣೆಗಾಗಿ ನಗು ನಗುತ್ತಾ ಸಾವನ್ನು ಸ್ವೀಕರಿಸಿದ್ದಾರೆ. ಇಂದು ಅವರಿಂದ ನಾವು ಸ್ಫೂರ್ತಿ ಪಡೆಯಬೇಕು. ಆ ಸಂಕಲ್ಪವನ್ನು ಪೂರ್ಣಗೊಳಿಸಲು ನಾವು ಸ್ವಾವಲಂಬಿ ಭಾರತದೊಂದಿಗೆ ಜೀವನ ನಡೆಸಬೇಕಾಗಿದೆ.

ಮಿತ್ರರೇ,

          ಭಾರತವನ್ನು ಬಲಿಷ್ಠಗೊಳಿಸುವ ಮತ್ತು ಸ್ವಾವಲಂಬಿಗೊಳಿಸುವಲ್ಲಿ ನಿಮ್ಮ ಪ್ರತಿಯೊಂದು ಕೊಡುಗೆಯೂ ಅಗತ್ಯವಾಗಿದ್ದು, ಅದರಿಂದ ಇಡೀ ವಿಶ್ವವೇ ಉತ್ತಮ ತಾಣವಾಗಲಿದೆ. 2022ನೇ ವರ್ಷದಲ್ಲಿ ಭಾರತ ಸ್ವಾತಂತ್ರ್ಯಗಳಿಸಿ 75 ವರ್ಷಗಳು ಪೂರ್ಣಗೊಳ್ಳಲಿವೆ. ವಿಶ್ವಭಾರತಿ ಸ್ಥಾಪನೆಯಾದ 27 ವರ್ಷಗಳ ನಂತರ ಭಾರತ ಸ್ವಾತಂತ್ರ್ಯಗಳಿಸಿತು. ಈಗ ಇಲ್ಲಿಂದ 27 ವರ್ಷಗಳು ಕಳೆದ ನಂತರ ಭಾರತ ಸ್ವಾತಂತ್ರ್ಯ ಪಡೆದು 100 ವರ್ಷಗಳು ಪೂರ್ಣಗೊಳ್ಳಲಿದೆ. ನಾವು ಹೊಸ ಹಾದಿಯಲ್ಲಿ ಮುನ್ನಡೆಯಲು ಹೊಸ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕಿದೆ ಮತ್ತು ಹೊಸ ಶಕ್ತಿಯನ್ನು ಪಡೆದುಕೊಳ್ಳಬೇಕಿದೆ ಮತ್ತು ಈ ಪಯಣದಲ್ಲಿ ನಮ್ಮ ಮಾರ್ಗದರ್ಶಕರು ಬೇರೆ ಯಾರು ಅಲ್ಲ ಗುರುದೇವ ಮತ್ತು ಅವರ ಆದರ್ಶಗಳು.  ಹಾಗೂ ಪ್ರೇರಣೆ ಮತ್ತು ಬದ್ಧತೆ ಇದ್ದಾಗ ಗುರಿಗಳನ್ನು ತಲುಪಲು ಅತ್ಯಂತ ಸುಲಭವಾಗಲಿದೆ. ವಿಶ್ವ ಭಾರತಿಯ ಬಗ್ಗೆ ಮಾತನಾಡುವಾಗ ಈ ವರ್ಷ ಐತಿಹಾಸಿಕ ಪೌಶ್   ಮೇಳವನ್ನು ಆಯೋಜಿಸಿಲ್ಲ. 100 ವರ್ಷಗಳ ಈ ಪಯಣದಲ್ಲಿ ಇದು ಮೂರನೇ ಸಲ. ಸಾಂಕ್ರಾಮಿಕದ ಈ ಸಂದರ್ಭದಲ್ಲಿ ವೋಕಲ್ ಫಾರ್ ಲೋಕಲ್ ಎಂಬ ಅದೇ ಮಂತ್ರವನ್ನು ವಿವರಿಸಲಾಗುತ್ತಿದೆ. ಈ ಮಂತ್ರ ಸದಾ ಪೌಶ್ ಮೇಳದೊಂದಿಗೆ ಬೆಸೆದಿದೆ. ಸಾಂಕ್ರಾಮಿಕದಿಂದಾಗಿ ಈ ಮೇಳಕ್ಕೆ ಬರಬೇಕಾಗಿದ್ದ ಕಲಾವಿದರು ಯಾರು ತಮ್ಮ ಕರಕುಶಲ ಉತ್ಪನ್ನಗಳನ್ನು ಈ ಮೇಳಕ್ಕೆ ತರುತ್ತಿದ್ದರೋ ಅವರು ಬಂದಿಲ್ಲ. ನಾವು ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಬಗ್ಗೆ ಮಾತನಾಡುವಾಗ ನಾನು ಈ ಕಾರ್ಯಕ್ಕೆ ದಯವಿಟ್ಟು ಸಹಾಯ ಮಾಡಿ ಎಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ. ವಿಶ್ವ ಭಾರತಿಯ ವಿದ್ಯಾರ್ಥಿಗಳು ಮೇಳಕ್ಕೆ ಬರುತ್ತಿದ್ದ ಕರಕುಶಲ ಕರ್ಮಿಗಳನ್ನು ಸಂಪರ್ಕಿಸಿ ಮತ್ತು ಅವರ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಆನ್ ಲೈನ್ ಮೂಲಕ ಆ ಬಡ ಕರಕುಶಲ ಕರ್ಮಿಗಳ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಎಂಬ ಮಾರ್ಗಗಳನ್ನು ಹುಡುಕಿಕೊಡಿ. ಸಾಮಾಜಿಕ ಮಾಧ್ಯಮಗಳಿಂದ ಹೇಗೆ ಸಹಾಯ ಪಡೆದುಕೊಳ್ಳಬಹುದು ಎಂಬುದನ್ನು ಯೋಚಿಸಿ, ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಅಲ್ಲದೆ ಭವಿಷ್ಯದಲ್ಲೂ ಸಹ ಸ್ಥಳೀಯ ಕರಕುಶಲ ಕರ್ಮಿಗಳು, ಕಲಾಕಾರರಿಗೆ ಇಡೀ ಜಗತ್ತಿನ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ಕೊಂಡೊಯ್ಯಬಹುದು ಎಂಬುದನ್ನು ಅವರಿಗೆ ಕಲಿಸಿ ಕೊಡಿ, ಅವರಿಗೆ ದಾರಿ ತೋರಿಸಿ, ಅಂತಹ ಪ್ರಯತ್ನಗಳ ಮೂಲಕ ಮಾತ್ರ ದೇಶ ಸ್ವಾವಲಂಬಿಯಾಗುತ್ತದೆ ಮತ್ತು ನಾವು ಗುರುದೇವರ ಕನಸುಗಳನ್ನು ಸಾಕಾರಗೊಳಿಸಬಹುದಾಗಿದೆ. ನೀವೆಲ್ಲರೂ ಗುರುದೇವರ ಅತ್ಯಂತ ಸ್ಫೂರ್ತಿದಾಯಕ ವಾಕ್ಯ ‘ಜೋಡಿ ತೋರ್ ದಕ್ ಶುನೆ ಕಾವೊ ನಾ ಆಶೆ ತೊಬೆ ಇಕ್ಲಾ ಚೊಲೋ ರೆ’ ಅಂದರೆ ಯಾರೊಬ್ಬರು ಮುಂದೆ ಬರಲಿಲ್ಲ ಎಂದರೆ ನಿವೋಬ್ಬರೇ ಗುರಿ ಸಾಧನೆಯತ್ತ ಮುನ್ನಡೆಯಬೇಕು ಎಂದು.

ಮಿತ್ರರೇ,

          ಗುರುದೇವರು ಹೀಗೆ ಹೇಳುತ್ತಿದ್ದರು. “ಸಂಗೀತ ಮತ್ತು ಕಲೆ ಇಲ್ಲದೆ ರಾಷ್ಟ್ರ ತನ್ನ ಅಭಿವ್ಯಕ್ತಿಯ ನೈಜ ಶಕ್ತಿಯನ್ನು ಕಳೆದು ಕೊಳ್ಳುತ್ತದೆ. ಜನರಲ್ಲಿನ ಉತ್ಕೃಷ್ಟವಾದುದು ಹೊರಬರಲು ಸಾಧ್ಯವಿಲ್ಲ” ಎಂಬುದು. ಗುರುದೇವರು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಪಾಲನೆ ಮತ್ತು ವಿಸ್ತರಣೆ ತುಂಬಾ ಅತ್ಯಗತ್ಯ ಎಂದು ನಂಬಿದ್ದರು. ಆ ಕಾಲದಲ್ಲಿ ನಾವು ಬಂಗಾಳವನ್ನು ತೆಗೆದುಕೊಂಡರೆ ನಾವು ಒಂದು ಅದ್ಭುತ ಸಂಗತಿಯನ್ನು ಕಾಣಬಹುದಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ವೇಳೆಗೆ ಎಲ್ಲೆಡೆ ಬಿಕ್ಕಟ್ಟು ಉದ್ಭವಿಸಿದ್ದರೆ ಬಂಗಾಳ ಚಳವಳಿಗೆ ಒಂದು ದಿಕ್ಕು ನೀಡುವ ಜೊತೆಗೆ ಸಂಸ್ಕೃತಿಯ ಪೋಷಣೆಯಲ್ಲಿ ತೊಡಗಿತ್ತು ಎಂಬುದು. ಬಂಗಾಳದಲ್ಲಿನ ಸಂಸ್ಕೃತಿ, ಸಾಹಿತ್ಯ ಮತ್ತು ಸಂಗೀತ ಸ್ವಾತಂತ್ರ್ಯ ಚಳವಳಿಗೆ ಒಂದು ರೀತಿಯಲ್ಲಿ ಉತ್ತೇಜನ ನೀಡಿದವು.

ಮಿತ್ರರೇ,

            ಗುರುದೇವ ಅವರು, ದಶಕಗಳ ಹಿಂದೆಯೇ ಈ ವಾಖ್ಯಗಳನ್ನು ಹೇಳಿದ್ದರು. “ಓರೆ ನೋಟುನ್ ಜುಗರ್ ಭೋರ್, ಡೀಶ್ ನೆ ಶೋಮೊಯ್ ಕಟಿಯೆ ಬ್ರಿಟ್ಟಾ, ಶೋಮೋಯ್ ಬಿಚಾರ್ ಕೋರೆ, ಓರೆ ನೋಟುನ್ ಜುಗರ್ ಭೋರ್’’ ಎಂದು ಮತ್ತು
“… ಎಶೋ ಗಯಾನಿ ಎಶೋ ಕೊರ್ಮಿ ನಾಶೊ ಭಾರೋಟೊ-ಲಾಜೋ ಹೇ, ಬೀರೋ ಧೋರ್ಮ್ ಪುನ್ನೊಕಾರ್ಮ್ ಬಿಶ್ವೋ ಹ್ರೀಡೊಯ್ ರಾಜೋ ಹೇ…”. ಈ ಉಪದೇಶಗಳನ್ನು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ, ಗುರುದೇವ್ ಅವರ ಈ ಹೇಳಿಕೆಗಳು ನಿಜ.
ಮಿತ್ರರೇ,

ಗುರುದೇವರು ವಿಶ್ವ ಭಾರತಿಯನ್ನು ಕೇವಲ ಒಂದು ಕಲಿಕಾ ಕೇಂದ್ರವನ್ನಾಗಿ ಸ್ಥಾಪಿಸಲಿಲ್ಲ. ಅವರು ಇದನ್ನು ‘ಕಲಿಕೆಯ ಆಸನ’ವನ್ನಾಗಿ, ಕಲಿಕೆಯ ಪವಿತ್ರ ಸ್ಥಳವನ್ನಾಗಿ ನೋಡಿದರು. ಗುರುದೇವರ ಒಂದು ವಾಕ್ಯದಿಂದ ಅಧ್ಯಯನ ಮಾಡುವುದು ಮತ್ತು ಕಲಿಯುವುದರ ಭಿನ್ನ ಅರ್ಥವನ್ನು ಕಾಣಬಹುದು. ಅವರು ‘ನನಗೆ ಏನು ಕಲಿಸಿದರು ಎಂಬುದು ನನಗೆ ನೆನಪಿಲ್ಲ. ಆದರೆ ನನಗೆ ನಾನು ಕಲಿತಿದ್ದಷ್ಟೇ ನೆನಪಿನಲ್ಲಿದೆ’ ಎಂದು ಹೇಳಿದ್ದರು. ಅದನ್ನೇ ಮುಂದುವರಿಸುತ್ತಾ ಗುರುದೇ ಠ್ಯಾಗೂರ್ ಅವರು ಹೀಗೆ ಹೇಳಿದ್ದರು. ‘ಅತ್ಯುತ್ತಮ ಶಿಕ್ಷಣ ಎಂದರೆ ಕೇವಲ ಅದು ನಮಗೆ ಮಾಹಿತಿಯನ್ನು ನೀಡುವುದಷ್ಟೇ ಅಲ್ಲ, ಪ್ರತಿಯೊಬ್ಬರೊಂದಿಗೆ ಜೀವಿಸುವುದನ್ನು ಕಲಿಸುತ್ತದೆ’ ಎಂದು ಹೇಳಿದ್ದರು. ಇಡೀ ವಿಶ್ವಕ್ಕೆ ಅವರು ನೀಡಿದ್ದ ಸಂದೇಶವೆಂದರೆ ನಾವು ಕಟ್ಟಿಹಾಕಲು  ಪ್ರಯತ್ನಿಸಬಾರದು ಅಥವಾ ಕೆಲವೇ ವಿಷಯಕ್ಕೆ ಜ್ಞಾನವನ್ನು ಮಿತಿಗೊಳಿಸಿಕೊಳ್ಳಬಾರದು ಎಂಬುದು. ಅವರು ಯಜುರ್ವೇದದ ಈ ಮಂತ್ರವನ್ನು 'यत्र विश्वम भवत्येक नीड़म' ವಿಶ್ವ ಭಾರತಿಯ ಮಂತ್ರವನ್ನಾಗಿ ಮಾಡಿದರು. ಅಂದರೆ ‘ಇಡೀ ವಿಶ್ವ ಒಂದು ಗೂಡಿನಂತೆ’. ಯಾವ ಜಾಗದಲ್ಲಿ ಹೊಸ ಸಂಶೋಧನೆಗಳನ್ನು ನಡೆಸಲಾಗುತ್ತದೋ, ಯಾವ ಜಾಗದಲ್ಲಿ ಪ್ರತಿಯೊಬ್ಬರು ಒಟ್ಟಾಗಿ ಮುನ್ನಡೆಯುವರೋ,  ಇದೀಗ ನಮ್ಮ ಶಿಕ್ಷಣ ಸಚಿವರು ವಿಸ್ತೃತವಾಗಿ ಹೇಳಿದಂತೆ ಗುರುದೇವರು ‘ಚಿಟ್ಟೋ ಜಿತ ಬೋಯ್ ಶುನ್ನೋ, ಉಚ್ಚೋ ಜೀತಾ ಶಿರ್, ಗ್ಯಾನ್ ಜಿಥಾ ಮುಕ್ತೊ’ ಅಂದರೆ ನಾವು ನಮ್ಮ ಮನಸ್ಸಿನಲ್ಲಿ ಯಾವುದೇ ಭಯವಿಲ್ಲದಂತಹ ಜಾಗವನ್ನು ಸೃಷ್ಟಿಸಬೇಕು. ನಮ್ಮ ತಲೆ ಸದಾ ಎತ್ತಿ ನಡೆಯುವಂತಿರಬೇಕು ಮತ್ತು ಜ್ಞಾನಕ್ಕೆ ಯಾವುದೇ ಸಂಕೋಲೆಗಳಿರಬಾರದು ಎಂದು. ಇಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೇಶ ಕೂಡ ಆ ಧ್ಯೇಯವನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ವಿಶ್ವ ಭಾರತಿ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ. ನಿಮಗೆ 100 ವರ್ಷಗಳ ಅನುಭವ, ಪಾಂಡಿತ್ಯವಿದ್ದು, ಗುರುದೇವರ ಆಶೀರ್ವಾದ, ಮಾರ್ಗದರ್ಶನ ಇದೆ. ಈ ಬಗ್ಗೆ ವಿಶ್ವ ಭಾರತಿ ಇನ್ನೂ ಹೆಚ್ಚಿನ ಸಂವಾದಗಳನ್ನು ಶಿಕ್ಷಣ ಸಂಸ್ಥೆಗಳ ಜೊತೆ ನಡೆಸಲಿದೆ. ಆ ಸಂಸ್ಥೆಗಳಿಗೆ ಹೆಚ್ಚಿನ ರೀತಿಯಲ್ಲಿ ನೀತಿಯನ್ನು ಅರ್ಥ ಮಾಡಿಕೊಡಲಿದೆ.

ಮಿತ್ರರೇ,

          ನಾನು ಗುರುದೇವರ ಬಗ್ಗೆ ಮಾತನಾಡುವಾಗ ನಾನು ಒಂದು ವಿಷಯದ ಬಗ್ಗೆ ಮಾತನಾಡಲು ನನ್ನಿಂದ ಸಾಧ್ಯವಿಲ್ಲ. ಕಳೆದ ಬಾರಿ ನಾನು ಇಲ್ಲಿಗೆ ಆಗಮಿಸಿದ್ದಾಗ ಆ ಬಗ್ಗೆ ನಾನು ಸ್ವಲ್ಪ ಪ್ರಸ್ತಾಪಿಸಿದ್ದೆ. ನಾನು ಮತ್ತೊಮ್ಮೆ ಗುರುದೇವ ಮತ್ತು ಗುಜರಾತ್ ನ ಸಂಬಂಧದ ಬಗ್ಗೆ ಯೋಚಿಸುತ್ತಿದ್ದೇನೆ. ಆ ಬಗ್ಗೆ ಮತ್ತೆ ಮತ್ತೆ ಮಾತನಾಡುವುದು ಅತ್ಯಂತ ಪ್ರಮುಖವಾಗಿದೆ. ಏಕೆಂದರೆ ಅದು ‘ಏಕ ಭಾರತ್, ಶ್ರೇಷ್ಠ ಭಾರತ್’ ಪರಿಕಲ್ಪನೆಯನ್ನು ನಮ್ಮಲ್ಲಿ ಮೂಡಿಸುತ್ತದೆ. ಇದು ಭಿನ್ನ ಭಾಷೆಗಳು, ಉಪಭಾಷೆಗಳು, ಆಹಾರ ಮತ್ತು ಉಡುಗೆ ತೊಡುಗೆಗಳು ನಮ್ಮ ದೇಶದಲ್ಲಿ ಹೇಗೆ ಭಿನ್ನವಾಗಿದೆ ಎಂಬುದನ್ನು ತೋರಿಸುತ್ತದೆ. ಇದು ನಮ್ಮ ದೇಶ ವೈವಿಧ್ಯತೆಯನ್ನು ಹೊಂದಿರುವುದು, ಒಗ್ಗೂಡಿರುವುದು ಮತ್ತು ಪರಸ್ಪರರಿಂದ ಹೆಚ್ಚು ಕಲಿಯುವುದನ್ನು ತೋರಿಸುತ್ತದೆ.

ಮಿತ್ರರೇ,

          ಗುರುದೇವರ ಹಿರಿಯ ಸಹೋದರ ಸತ್ಯೇಂದ್ರ ನಾಥ ಠ್ಯಾಗೂರ್ ಅವರು ಐಸಿಎಸ್ ನಲ್ಲಿದ್ದಾಗ ಅವರು ಗುಜರಾತ್ ನ ಅಹಮದಾಬಾದ್ ನಲ್ಲಿ ನೇಮಕಗೊಂಡಿದ್ದರು. ರವೀಂದ್ರನಾಥ್ ಠ್ಯಾಗೂರ್ ಅವರು ಆಗಾಗ್ಗೆ ಗುಜರಾತ್ ಗೆ ಭೇಟಿ ನೀಡುತ್ತಿದ್ದರು. ಅವರು ಅಲ್ಲಿ ದೀರ್ಘಾವಧಿ ಸಮಯ ಕಳೆದಿದ್ದಾರೆ. ಅಹಮದಾಬಾದ್ ನಲ್ಲಿ ವಾಸಿಸುತ್ತಿದ್ದ ಅವರು ತಮ್ಮ ಎರಡು ಜನಪ್ರಿಯ ಬಂಗಾಳಿ ಕವಿತೆ ‘ಬಂದಿ ಒ ಅಮರ್’ ಮತ್ತು ‘ನಿರೋಬ್ ರಜನಿ ದೇಖೋ’ ಗಳನ್ನು ರಚಿಸಿದ್ದರು.  ಅವರು ಗುಜರಾತ್ ನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ತಮ್ಮ ಜನಪ್ರಿಯ ಕೃತಿ ‘ಖುದಿತ್ ಪಾಶನ್’ ನ ಕೆಲವು ಭಾಗವನ್ನು ರಚಿಸಿದ್ದರು. ಅಲ್ಲದೆ ಗುಜರಾತ್ ನ ಮಗಳು ಕೂಡ ಠ್ಯಾಗೂರ್ ಕುಟುಂಬದ ಸೊಸೆಯಾಗಿದ್ದರು. ಇದಲ್ಲದೆ ಮಹಿಳಾ ಸಬಲೀಕರಣದ ಜೊತೆ ಬಾಂಧವ್ಯ ಹೊಂದಿದ್ದ ಸಂಸ್ಥೆಗಳ ಬಗ್ಗೆ ಅಧ್ಯಯನ ಮಾಡಬಹುದಾಗಿದೆ. ಸತ್ಯೇಂದ್ರ ನಾಥ್ ಠ್ಯಾಗೂರ್ ಅವರ ಪತ್ನಿ ಗ್ಯಾನದಾನಂದಿನಿ ದೇವಿ ಜಿ ಅವರು ಅಹಮದಾಬಾದ್ ನಲ್ಲಿ ನೆಲೆಸಿದ್ದಾಗ ಸ್ಥಳೀಯ ಮಹಿಳೆಯರು ತಮ್ಮ ಸೀರೆಯ ಸೆರಗನ್ನು ಬಲಭುಜದ ಮೇಲೆ ಹಾಕಿಕೊಳ್ಳುತ್ತಿದ್ದುದನ್ನು ಗಮನಿಸುತ್ತಿದ್ದರು. ಇದೀಗ ಸೆರಗು ಬಲ ಭಾಗಕ್ಕೆ ಹಾಕಿಕೊಂಡರೆ ಮಹಿಳೆಯರು ಕಾರ್ಯನಿರ್ವಹಿಸುವುದು ಸ್ವಲ್ಪ ಕಷ್ಟಕರವಾಗುತ್ತಿತ್ತು. ಇದನ್ನು ಗಮನಿಸಿದ ಗ್ಯಾನದಾನಂದಿನಿ ದೇವಿ ಸೀರೆಯ ಸೆರಗನ್ನು ಏಕೆ ಎಡ ಭಾಗಕ್ಕೆ ಹಾಕಿಕೊಳ್ಳಬಾರದು ಎಂದು ಚಿಂತಿಸಿದರು. ಇದೀಗ ಅಲ್ಲಿನ ಸೀರೆಯ ಸೆರಗನ್ನು ಎಡ ಭಾಗಕ್ಕೆ ಹಾಕಿ ಕೊಳ್ಳಲಾಗುತ್ತಿದೆ, ಪರಸ್ಪರ ಕಲಿಕೆಯಿಂದ ಪರಸ್ಪರ ಸಂತೋಷದಿಂದ ಜೀವಿಸಬಹುದು. ಒಂದು ಕುಟುಂಬದಂತೆ ಜೀವಿಸಬಹುದು ಹಾಗೂ ನಮ್ಮ ದೇಶದ ಶ್ರೇಷ್ಠ ವ್ಯಕ್ತಿಗಳು ಕಂಡ ಕನಸುಗಳನ್ನು ಸಾಕಾರಗೊಳಿಸಬಹುದು. ಗುರುದೇವ ಅವರು ಅಂತಹದೇ ಮೌಲ್ಯಗಳನ್ನು ವಿಶ್ವ ಭಾರತಿಗೆ ನೀಡಿದ್ದಾರೆ. ನಾವೆಲ್ಲರೂ ಒಗ್ಗೂಡಿ ಆ ಮೌಲ್ಯಗಳನ್ನು ಬಲವರ್ಧನೆಗೊಳಿಸಬೇಕಿದೆ.

 ಮಿತ್ರರೇ,

          ನೀವು ಎಲ್ಲೇ ಹೋದರು. ಯಾವುದೇ ವಲಯದಲ್ಲಿದ್ದರೂ ನೀವು ಪಡುವ ಪರಿಶ್ರಮದಿಂದಾಗಿ ನವಭಾರತ ನಿರ್ಮಾಣವಾಗುತ್ತದೆ. ನಾನು ಗುರುದೇವ ಅವರ ವಾಕ್ಯಗಳೊಂದಿಗೆ ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ. ಗುರುದೇವ ಅವರು ಹೀಗೆ ಹೇಳಿದ್ದರು. ಓರೆ ಗ್ರಿಹೊ-ಬಶಿ ಖೋಲ್  ದ್ವಾರ್ ಖೋಲ್, ಲಾಗ್ಲೊ ಜೆ ದೋಲ್, ಸ್ಥೋಲೆ, ಜೋಲೆ, ಬೊನೊಟೋಲ್ಲೆ ಲಾಗಾಲೊ ಜೆ ದೋಲ್, ದ್ವಾರ್ ಖೋಲ್, ದ್ವಾರ್ ಖೋಲ್ ! ದೇಶದಲ್ಲಿ ನಿಮಗಾಗಿ ಹೊಸ ಅವಕಾಶಗಳ ದ್ವಾರಗಳು ಕಾಯುತ್ತಿವೆ. ನೀವೆಲ್ಲರೂ ಮುನ್ನಡೆಯಿರಿ. ಯಶಸ್ಸು ಗಳಿಸಿ ಮತ್ತು ದೇಶದ ಕನಸ್ಸುಗಳನ್ನು ಸಾಕಾರಗೊಳಿಸಿ ಈ ಶುಭಾಶಯಗಳೊಂದಿಗೆ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ ಮತ್ತು ಈ ಶತಮಾನೋತ್ಸವ ವರ್ಷ ಮುಂದಿನ ಪಯಣಕ್ಕೆ ಬಲಿಷ್ಠ ಮೈಲಿಗಲ್ಲಾಗಲಿ ಹಾಗೂ ನಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಆಶಿಸೋಣ. ಜಗತ್ತಿನ ಕಲ್ಯಾಣದ ಕನಸುಗಳ ಸಾಕಾರಕ್ಕೆ ಭಾರವನ್ನು ಕಲ್ಯಾಣ ಮಾರ್ಗದತ್ತ ಕೊಂಡೊಯ್ಯಲು ವಿಶ್ವ ವಿದ್ಯಾಲಯ ಬಲ ತುಂಬಲಿ ಎಂದು ನಾನು ಆಶಿಸುತ್ತೇನೆ ಮತ್ತು ಯಾವ ಕನಸುಗಳೊಂದಿಗೆ ವಿಶ್ವ ಭಾರತಿ ಜನ್ಮ ತಳೆಯಿತು, ಅವುಗಳು ಸಾಕಾರವಾಗಲಿ ಎಂದು ನಾನು ನಿಮ್ಮೆಲ್ಲರಿಗೂ ಶುಭ ಕೋರುತ್ತೇನೆ. ತುಂಬಾ ಧನ್ಯವಾದಗಳು.

ಘೋಷಣೆ: ಪ್ರಧಾನಮಂತ್ರಿ ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು, ಇದು ಅದರ ಅಂದಾಜು ಅನುವಾದ.

****


(Release ID: 1683971) Visitor Counter : 400