ಪ್ರಧಾನ ಮಂತ್ರಿಯವರ ಕಛೇರಿ

ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ಮುಂದಿನ ಕಂತಿನ ಆರ್ಥಿಕ ಸವಲತ್ತು ಬಿಡುಗಡೆ ಮಾಡಿದ ಪ್ರಧಾನಮಂತ್ರಿ


ಪಶ್ಚಿಮ ಬಂಗಾಳದ ರೈತರು ಈ ಸವಲತ್ತು ಪಡೆದುಕೊಳ್ಳಲು ಆಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಪ್ರಧಾನಮಂತ್ರಿ

ಡಿಬಿಟಿ ಮೂಲಕ ಜಮೆ ಮಾಡಲಾದ 18,000 ಕೋಟಿ ರೂ.ಗಳಿಂದ 9 ಕೋಟಿ ರೈತ ಕುಟುಂಬಗಳಿಗೆ ಪ್ರಯೋಜನ

ರೈತರ ಉತ್ಪಾದನಾ ವೆಚ್ಚ ತಗ್ಗಿಸಲು ಸರ್ಕಾರದ ಗುರಿ, ಅವರಿಗೆ ನ್ಯಾಯೋಚಿತ ದರ ದೊರಕಿಸುವ ಖಾತ್ರಿ: ಪ್ರಧಾನಮಂತ್ರಿ

ವಿಶ್ವದ ಕೃಷಿ ಮಾರುಕಟ್ಟೆಯಲ್ಲಿ ಭಾರತ ಸ್ವತಃ ತನ್ನ ಬ್ರಾಂಡ್ ಸ್ಥಾಪಿಸುವ ಕಾಲ ಬಂದಿದೆ: ಪ್ರಧಾನಮಂತ್ರಿ

Posted On: 25 DEC 2020 2:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿಯಡಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮುಂದಿನ ಕಂತಿನ ಹಣ ಬಿಡುಗಡೆ ಮಾಡಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಕೇವಲ ಒಂದು ಬಟನ್ ಒತ್ತುವ ಮೂಲಕ 18,000 ಕೋಟಿ ರೂ.ಗಳನ್ನು ದೇಶದ 9 ಕೋಟಿಗೂ ಹೆಚ್ಚು ರೈತ ಕುಟುಂಬಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು. ಈ ಯೋಜನೆ ಆರಂಭಿಸಿದ ದಿನದಂದಲೂ 1 ಲಕ್ಷ 10 ಸಾವಿರ ಕೋಟಿ ರೂ.ಗಳು ರೈತರ ಖಾತೆ ತಲುಪಿದೆ ಎಂದರು. 
ಪಶ್ಚಿಮ ಬಂಗಾಳದ 70 ಲಕ್ಷಕ್ಕೂ ಹೆಚ್ಚು ರೈತರು ಈ ಸೌಲಭ್ಯ ಪಡೆಯುವುದರಿಂದ ವಂಚಿತರಾಗಿದ್ದಾರೆ ಎಂದು ಪ್ರಧಾನಮಂತ್ರಿ ವಿಷಾದ ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳದ 23 ಲಕ್ಷ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ದೀರ್ಘಕಾಲದಿಂದ ಪರಿಶೀಲನಾ ಪ್ರಕ್ರಿಯೆಯನ್ನೇ ನಿಲ್ಲಿಸಿದೆ ಎಂದರು.  ಪಶ್ಚಿಮ ಬಂಗಾಳದ ರೈತರ ಹಿತದೃಷ್ಟಿಯಿಂದ ಮಾತನಾಡದ ಪಕ್ಷಗಳು, ದೆಹಲಿಗೆ ಬಂದು ರೈತರ ಬಗ್ಗೆ ಮಾತನಾಡುತ್ತವೆ ಎಂದರು. ಈ ಪಕ್ಷಗಳು ಇತ್ತೀಚಿನ ದಿನಗಳಲ್ಲಿ ಎಪಿಎಂಸಿ-ಮಂಡಿಗಳನ್ನು ದೂರಾಗಿದ್ದಾರೆ, ಆದರೆ ಈ ಪಕ್ಷಗಳು ಕೇರಳದಲ್ಲಿ ಎಪಿಎಂಸಿ-ಮಂಡಿಗಳೇ ಇಲ್ಲ ಎಂಬುದನ್ನು ಪದೇ ಪದೇ ಮರೆಯುತ್ತವೆ ಮತ್ತು ಈ ಜನರು ಕೇರಳದಲ್ಲಿ ಎಂದಿಗೂ ಆಂದೋಲನ ಮಾಡುವುದಿಲ್ಲ ಎಂದರು.
ಸರ್ಕಾರ ರೈತರ ಉತ್ಪಾದನಾ ವೆಚ್ಚ ತಗ್ಗಿಸಲು ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತ ಸರ್ಕಾರದ ಮಣ್ಣಿನ ಆರೋಗ್ಯ ಕಾರ್ಡ್, ಬೇವು ಲೇಪಿತ ಯೂರಿಯಾ, ಸೌರ ಪಂಪ್ ಗಳ ವಿತರಣೆಯಂಥ ಉಪಕ್ರಮಗಳ ಪಟ್ಟಿ ಮಾಡಿ, ಇವು ರೈತರ ಉತ್ಪಾದನಾ ವೆಚ್ಚ ತಗ್ಗಿಸಲು ನೆರವಾಗಿವೆ ಎಂದರು. ರೈತರಿಗೆ ಉತ್ತಮವಾದ ಬೆಳೆ ವಿಮೆ ವ್ಯಾಪ್ತಿ ಇರಬೇಕು ಎಂದು ಸರ್ಕಾರ ಖಾತ್ರಿ ಪಡಿಸುತ್ತಿದೆ. ಇಂದು ಕೋಟ್ಯಂತರ ರೈತರು ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು. 
ದೇಶದ ರೈತರು ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯುವುದನ್ನು ಖಾತ್ರಿ ಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಸ್ವಾಮಿನಾಥನ್ ಶಿಫಾರಸಿನ ರೀತ್ಯ ಸರ್ಕಾರ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ದರವನ್ನು ಎಂ.ಎಸ್.ಪಿ. ಅಡಿಯಲ್ಲಿ ನಿರ್ಧರಿಸಿದೆ ಎಂದರು. ಎಂ.ಎಸ್.ಪಿ. ವ್ಯಾಪ್ತಿಯ ಬೆಳೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಎಂದರು. 
ರೈತರಿಗೆ ತಮ್ಮ ಬೆಳೆ ಮಾರಾಟ ಮಾಡಲು ಹೊಸ ಮಂಡಿಯನ್ನು ತೆರೆಯಲು ಸರ್ಕಾರ ಉದ್ದೇಶಿಸಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಸರ್ಕಾರ ಸಾವಿರಾರು ಮಂಡಿಗಳನ್ನು ದೇಶದಾದ್ಯಂತ ಆನ್ ಲೈನ್ ಮೂಲಕ ಜೋಡಿಸಿದೆ. ಈ ಪೈಕಿ ಒಂದು ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ ಎಂದರು. ಸಣ್ಣ ರೈತರ ಗುಂಪುಗಳನ್ನು ರಚಿಸುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ, ಇದರಿಂದ ಅವರು ತಮ್ಮ ಪ್ರದೇಶದಲ್ಲಿ ಸಾಮೂಹಿಕ ಶಕ್ತಿಯಾಗಿ ಕೆಲಸ ಮಾಡಬಹುದು. ಇಂದು, ದೇಶದಲ್ಲಿ 10000 ಕ್ಕೂ ಹೆಚ್ಚು ರೈತ ಉತ್ಪಾದಕ ಸಂಘಟನೆಗಳು - ಎಫ್‌.ಪಿ.ಒ. ರಚಿಸಲು ಅಭಿಯಾನ ನಡೆಯುತ್ತಿದ್ದು, ಅವುಗಳಿಗೆ ಹಣಕಾಸು ನೆರವು ನೀಡಲಾಗುತ್ತಿದೆ ಎಂದರು. 
ಇಂದು ರೈತರು ಪಕ್ಕಾ ಮನೆ, ಶೌಚಾಲಯ ಮತ್ತು ಶುದ್ಧ ಕುಡಿಯುವ ಕೊಳವೆ ನೀರು  ಪಡೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು, ಅವರಿಗೆ ಉಚಿತ ವಿದ್ಯುತ್ ಸಂಪರ್ಕ, ಉಚಿತ ಅಡುಗೆ ಅನಿಲ ಸಂಪರ್ಕದಿಂದ ತುಂಬಾ ಅನುಕೂಲವಾಗಿದೆ. ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ರೈತರ ಬದುಕಿನ ಬಹುದೊಡ್ಡ ಕಾಳಜಿಯನ್ನು ತಗ್ಗಿಸಿದೆ ಎಂದರು.  
ಈ ಕೃಷಿ ಸುಧಾರಣೆಗಳ ಮೂಲಕ ರೈತರಿಗೆ ಉತ್ತಮ ಆಯ್ಕೆಗಳನ್ನು ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಕಾನೂನುಗಳು ಬಂದ ಬಳಿಕ ರೈತರಿಗೆ ತಾವು ಬಯಸಿದ ಕಡೆ ತಮ್ಮ ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವಂತಾಗಿದೆ. ಅವರು ತಮಗೆ ಎಲ್ಲಿ ಸೂಕ್ತ ಬೆಲೆ ಸಿಗುತ್ತದೋ ಅಲ್ಲಿ ಮಾರಾಟ ಮಾಡುತ್ತಾರೆ. ಹೊಸ ಕಾನೂನು ಬಳಿಕ, ರೈತರು ತಮ್ಮ ಫಸಲನ್ನು ಎಂ.ಎಸ್.ಪಿ.ಗೆ ಮಾರಾಟ ಮಾಡಬಹುದು ಅಥವಾ ಮಾರುಕಟ್ಟೆಯಲ್ಲಿ ಮಾರಬಹುದು ಅಥವಾ ರಫ್ತು ಮಾಡಬಹುದು ಅಥವಾ ವ್ಯಾಪಾರಿಗಳಿಗೆ ಮಾರಬಹುದು ಅಥವಾ ಮತ್ತೊಂದು ರಾಜ್ಯಕ್ಕೆ ಮಾರಾಟ ಮಾಡಬಹುದು ಅಥವಾ ಎಫ್.ಪಿ.ಓ.ಗಳ ಮೂಲಕ ಮಾರಾಟ ಮಾಡಬಹುದು ಅಥವಾ ಬಿಸ್ಕತ್ತು, ಚಿಪ್ಸ್, ಜಾಮ್, ಇತರ ಗ್ರಾಹಕ ಉತ್ಪನ್ನಗಳ ಪೂರೈಕೆ ಸರಣಿಯ ಭಾಗವೂ ಆಗಬಹುದು ಎಂದರು. 
ಹೂಡಿಕೆ ಮತ್ತು ನಾವಿನ್ಯತೆ ಇತರ ವಲಯಗಳಲ್ಲಿ ಸುಧಾರಣೆ ಮಾಡಿದೆ ಎಂದ ಪ್ರಧಾನಮಂತ್ರಿಯವರು, ಆದಾಯವು ಹೆಚ್ಚಿದ್ದು, ಬ್ರಾಂಡ್ ಇಂಡಿಯಾ ಆ ವಲಯದಲ್ಲಿ ಸ್ಥಾಪನೆಯಾಗುತ್ತಿದೆ. ವಿಶ್ವದ ಕೃಷಿ ಮಾರುಕಟ್ಟೆಯಲ್ಲಿಯೂ ಅದೇ ಸಮಾನ ಗೌರವದೊಂದಿಗೆ ಭಾರತೀಯ ಬ್ರಾಂಡ್ ಸ್ಥಾಪಿಸುವ ಕಾಲ ಈಗ ಬಂದಿದೆ ಎಂದು ತಿಳಿಸಿದರು. 
ಕೃಷಿ ಸುಧಾರಣೆಗಳನ್ನು ಸ್ವಾಗತಿಸಿದ ಮತ್ತು ಪೂರ್ಣ ಬೆಂಬಲಿಸಿದ ದೇಶಾದ್ಯಂತದ ಎಲ್ಲ ರೈತರಿಗೆ ಪ್ರಧಾನಮಂತ್ರಿ ಧನ್ಯವಾದ ಅರ್ಪಿಸಿದರು ಮತ್ತು ಅವರನ್ನು ನಿರಾಶೆ ಗೊಳಿಸುವುದಿಲ್ಲ ಎಂಬ ಭರವಸೆ ನೀಡಿದರು.  ಗ್ರಾಮೀಣ ಪ್ರದೇಶದ ಜನರು ಅದರಲ್ಲೂ ವಿಶೇಷವಾಗಿ ಅಸ್ಸಾಂ, ರಾಜಾಸ್ಥಾನ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ರೈತರನ್ನು ದಾರಿ ತಪ್ಪಿಸುವ ಪಕ್ಷಗಳನ್ನು ಜನರು ಒಂದು ರೀತಿ ತಿರಸ್ಕಿರಿಸಿದ್ದಾರೆ ಎಂದು ಅವರು ಹೇಳಿದರು. 

 

***

 



(Release ID: 1683706) Visitor Counter : 274