ಪ್ರಧಾನ ಮಂತ್ರಿಯವರ ಕಛೇರಿ
ಮಧ್ಯಪ್ರದೇಶ ರೈತ ಸಮ್ಮೇಳನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ
ಕನಿಷ್ಠ ಬೆಂಬಲ ಬೆಲೆ, ಗುತ್ತಿಗೆ ಕೃಷಿಯ ಕಾಳಜಿ ಕುರಿತು ವಿವರಣೆ, ಅಪಪ್ರಚಾರದ ಬಗ್ಗೆ ಎಚ್ಚರದಿಂದಿರರಲು ಕರೆ
Posted On:
18 DEC 2020 5:26PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ಆಯೋಜಿಸಿದ್ದ ರೈತ ಸಮ್ಮೇಳನ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು. ಅವರು ಶೀಥಲೀಕರಣ ಘಟಕ ಮೂಲಸೌಕರ್ಯ ಮತ್ತು ಇತರ ಸೌಲಭ್ಯಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ರೈತ ಎಷ್ಟೇ ಶ್ರಮವಹಿಸಿದರೂ, ಹಣ್ಣು-ತರಕಾರಿಗಳು-ಧಾನ್ಯಗಳಿಗೆ ಸೂಕ್ತವಾದ ಗೋದಾಮಿಲ್ಲದಿದ್ದರೆ, ರೈತನು ಅಪಾರ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆಧುನಿಕ ಶೇಖರಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು, ಶೀಥಲೀಕರಣ ಘಟಕ ನಿರ್ಮಿಸಲು ಮತ್ತು ನೂತನ ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸಲು ಸಹಕರಿಸುವಂತೆ ವ್ಯಾಪಾರ ಜಗತ್ತಿಗೆ ಅವರು ಆಗ್ರಹಿಸಿದರು. ಇದು ರೈತರಿಗೆ ಸೇವೆ ಸಲ್ಲಿಸಲಿದೆ ಮತ್ತು ನಿಜ ಅರ್ಥದಲ್ಲಿ ದೇಶಕ್ಕೆ ಸೇವೆ ಸಲ್ಲಿಸಲಿದೆ ಎಂದರು.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ರೈತರಿಗೆ ಲಭ್ಯವಿರುವ ಆಧುನಿಕ ಸೌಲಭ್ಯಗಳನ್ನು ಭಾರತೀಯ ರೈತರೂ ಹೊಂದಿರಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು, ಇದನ್ನು ಇನ್ನು ಮುಂದೆ ವಿಳಂಬ ಮಾಡಲಾಗುವುದಿಲ್ಲ ಎಂದರು. ವೇಗವಾಗಿ ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ, ಸೌಲಭ್ಯಗಳ ಕೊರತೆ ಮತ್ತು ಆಧುನಿಕ ವಿಧಾನಗಳಿಂದಾಗಿ ರೈತ ಅಸಹಾಯಕರಾಗುವಂತಹ ಭಾರತದ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲ, ಇದು ಈಗಾಗಲೇ ತಡವಾಗಿದೆ ಎಂದು ಅವರು ಹೇಳಿದರು..
ಕೃಷಿ ಕಾಯಿದೆಗಳ ಬಗ್ಗೆ ಇತ್ತೀಚಿನ ಚರ್ಚೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಕೃಷಿ ಸುಧಾರಣೆಗಳ ಬಗ್ಗೆ ಚರ್ಚೆಗಳು ಕಳೆದ 20-22 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಮತ್ತು ಈ ಕಾಯಿದೆಗಳನ್ನು ರಾತ್ರಿ ಬೆಳಗಾಗುವುದರಲ್ಲಿ ತಂದಿದ್ದಲ್ಲ ಎಂದು ಸ್ಪಷ್ಟಪಡಿಸಿದರು. ದೇಶದ ಕೃಷಿಕರು, ರೈತ ಸಂಘಟನೆಗಳು, ಕೃಷಿ ತಜ್ಞರು, ಕೃಷಿ ಅರ್ಥಶಾಸ್ತ್ರಜ್ಞರು, ಕೃಷಿ ವಿಜ್ಞಾನಿಗಳು, ದೇಶದ ಪ್ರಗತಿಪರ ರೈತರು ನಿರಂತರವಾಗಿ ದೇಶದ ಕೃಷಿ ವಲಯದ ಸುಧಾರಣೆಗಾಗಿ ಬೇಡಿಕೆ ಇಡುತ್ತಿದ್ದರು ಎಂದು ತಿಳಿಸಿದರು. ಪಕ್ಷದ ಪ್ರಣಾಳಿಕೆಗಳಲ್ಲಿ ಪ್ರಕಟಿಸಿದ್ದರೂ, ಈ ಸುಧಾರಣೆಗಳನ್ನು ನಿಜ ಶ್ರದ್ಧೆಯಿಂದ ತೆಗೆದುಕೊಳ್ಳಲಾಗುವುದಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಈಗ ನಡೆದಿರುವ ಕೃಷಿ ಸುಧಾರಣೆಗಳು ಈ ಹಿಂದೆ ಚರ್ಚೆಯಲ್ಲಿದ್ದಕ್ಕಿಂತ ಭಿನ್ನವಾಗಿಲ್ಲ ಎಂದು ಅವರು ಹೇಳಿದರು.
ಹಿಂದಿನ ಸರ್ಕಾರಗಳು 8 ವರ್ಷಗಳ ಕಾಲ ಸ್ವಾಮಿನಾಥನ್ ಸಮಿತಿ ವರದಿಯನ್ನು ಜಾರಿ ಮಾಡಲೇ ಇಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ರೈತರ ಆಂದೋಲನ ಕೂಡ ಈ ಜನರ ಪ್ರಜ್ಞೆಯನ್ನು ಬದಲಿಸಲಿಲ್ಲ. ಆ ಜನರು ತಮ್ಮ ಸರ್ಕಾರ ರೈತನಿಗೆ ಹೆಚ್ಚು ಖರ್ಚು ಮಾಡಬೇಕಾಗಿಲ್ಲ ಎಂಬುದನ್ನು ಖಚಿತಪಡಿಸಿದರು.. ರೈತರನ್ನು ಪ್ರತಿಪಕ್ಷಗಳು ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ ಎಂದು ದೂರಿದರು, ಆದರೆ ತಮ್ಮ ಸರ್ಕಾರವು ರೈತರಿಗೆ ಸಮರ್ಪಿತವಾಗಿದ್ದು ರೈತರನ್ನು ಅನ್ನದಾತಾ ಎಂದು ಪರಿಗಣಿಸುತ್ತದೆ ಎಂದು ಅವರು ತಿಳಿಸಿದರು. ಸ್ವಾಮಿನಾಥನ್ ಸಮಿತಿಯ ವರದಿಯ ಶಿಫಾರಸುಗಳನ್ನು ಈ ಸರ್ಕಾರವು ಜಾರಿಗೆ ತಂದಿದ್ದು, ಎಂ.ಎಸ್.ಪಿ. ರೈತರಿಗಾಗುವ ವೆಚ್ಚದ ಒಂದೂವರೆ ಪಟ್ಟು ನೀಡುತ್ತದೆ ಎಂದು ಶ್ರೀ ಮೋದಿ ಹೇಳಿದರು.
ಸಾಲ ಮನ್ನಾ ಕುರಿತಂತೆ ಮಾತನಾಡಿದ ಅವರು, ಬ್ಯಾಂಕಿಗೆ ಹೋಗದ ರೈತರು, ಸಾಲವನ್ನು ತೆಗೆದುಕೊಳ್ಳದ ಸಣ್ಣ ರೈತನಿಗೆ ಅದು ತಲುಪುತ್ತಲೇ ಇರಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರತಿ ವರ್ಷ ಪಿಎಂ- ಕಿಸಾನ್ ಯೋಜನೆಯಲ್ಲಿ ರೈತರು ಸುಮಾರು 75 ಸಾವಿರ ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪಡೆಯುತ್ತಾರೆ ಎಂದು ಅವರು ಹೇಳಿದರು. ಇದರಲ್ಲಿ ಸೋರಿಕೆ ಇಲ್ಲ, ಯಾರಿಗೂ ಕಮಿಷನ್ ಇಲ್ಲ ಎಂದು ಸ್ಪಷ್ಟಪಡಿಸಿದರು. ಬೇವಿನ ಲೇಪನದಿಂದಾಗಿ ಯೂರಿಯಾದ ಲಭ್ಯತೆ ಹೇಗೆ ಸುಧಾರಿಸಿದೆ ಮತ್ತು ಭ್ರಷ್ಟಾಚಾರವನ್ನು ಹೇಗೆ ನಿಯಂತ್ರಿಸುತ್ತದೆ ಎಂದು ಅವರು ವಿವರಿಸಿದರು.
ಹಿಂದಿನ ಸರ್ಕಾರಗಳು ರೈತರ ಬಗ್ಗೆ ಕಾಳಜಿ ಹೊಂದಿದ್ದರೆ, ಆಗ ದೇಶದ ಸುಮಾರು 100 ದೊಡ್ಡ ನೀರಾವರಿ ಯೋಜನೆಗಳು ದಶಕಗಳ ಕಾಲ ನನೆಗುದಿಗೆ ಬಿದ್ದಿರುತ್ತಿರಲಿಲ್ಲ ಎಂದರು. ತಮ್ಮ ಸರ್ಕಾರ ಈ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಯಂತ್ರೋಪಾದಿಯಲ್ಲಿ ಶ್ರಮಿಸುತ್ತಿದ್ದು ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ತಿಳಿಸಿದರು. ಪ್ರತಿಯೊಂದು ಜಮೀನಿಗೂ ನೀರು ಖಾತ್ರಿ ಪಡಿಸಲು ತಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು. ಸರ್ಕಾರ ದವಸ ಧಾನ್ಯ ಬೆಳೆಯುವ ರೈತರಿಗೆ ಇದರ ಜೊತೆಗೆ ಜೇನು ಸಾಕಣೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆಯನ್ನು ಉತ್ತೇಜಿಸುತ್ತಿದೆ ಎಂದರು.
ಮೀನುಗಾರಿಕೆ ಉತ್ತೇಜಿಸಲು ನೀಲಿ ಕ್ರಾಂತಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಕೆಲ ಸಮಯದ ಹಿಂದೆ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೂ ಚಾಲನೆ ನೀಡಲಾಗಿದೆ ಎಂದರು. ಈ ಪ್ರಯತ್ನಗಳ ಫಲವಾಗಿ ದೇಶದ ಮೀನು ಉತ್ಪಾದನೆಯಲ್ಲಿ ಎಲ್ಲ ಹಿಂದಿನ ದಾಖಲೆಗಳನ್ನೂ ಮುರಿಯಲಾಗಿದೆ ಎಂದರು.
ಸರ್ಕಾರ ಇತ್ತೀಚೆಗೆ ಮಾಡಿದ ಕೃಷಿ ಸುಧಾರಣೆಗಳಲ್ಲಿ ಅಪನಂಬಿಕೆಗೆ ಯಾವುದೇ ಕಾರಣವಿಲ್ಲ ಮತ್ತು ಸುಳ್ಳುಗಳಿಗೆ ಸ್ಥಳವಿಲ್ಲ ಎಂದು ಅವರು ಒತ್ತಿ ಹೇಳಿದರು. ಎಂ.ಎಸ್.ಪಿ.ಯನ್ನು ತೆಗೆದುಹಾಕಲು ಸರ್ಕಾರ ಉದ್ದೇಶಿಸಿದ್ದರೆ ಸ್ವಾಮಿನಾಥನ್ ಸಮಿತಿ ವರದಿಯನ್ನು ಏಕೆ ಜಾರಿಗೆ ತರಲಾಗುತ್ತಿತ್ತು ಎಂದು ಅವರು ಪ್ರಶ್ನಿಸಿದರು.
ಎಂ.ಎಸ್.ಪಿ.ಯನ್ನು ಬಿತ್ತನೆಗೆ ಮೊದಲೇ ಘೋಷಿಸಲಾಗುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೊರೊನಾ ವಿರುದ್ಧದ ಹೋರಾಟದ ಸಮಯದಲ್ಲೂ ಮಾಮೂಲಿನಂತೆ ಎಂ.ಎಸ್.ಪಿ.ಯಡಿ ಖರೀದಿ ನಡೆಯುತ್ತಿದೆ ಎಂದು ತಿಳಿಸಿದರು. ಹಿಂದಿನಂತೆಯೇ ಎಂ.ಎಸ್.ಪಿ. ಮುಂದುವರಿಯಲಿದೆ ಎಂಬ ಭರವಸೆಯನ್ನು ಅವರು ರೈತರಿಗೆ ನೀಡಿದರು. ತಮ್ಮ ಸರ್ಕಾರ ಎಂ.ಎಸ್.ಪಿ.ಯನ್ನು ಹೆಚ್ಚಿಸಿದ್ದು ಮಾತ್ರವೇ ಅಲ್ಲ, ಎಂ.ಎಸ್.ಪಿ. ದರದಲ್ಲಿ ಹೆಚ್ಚು ಹೆಚ್ಚು ಖರೀದಿ ಮಾಡುತ್ತಿದೆ ಎಂದೂ ತಿಳಿಸಿದರು.
ದೇಶ ಬೇಳೆಕಾಳುಗಳ ಬಿಕ್ಕಟ್ಟು ಎದುರಿಸುತ್ತಿದ್ದ ಸಮಯವನ್ನು ಪ್ರಧಾನಮಂತ್ರಿ ಸ್ಮರಿಸಿದರು. ದೇಶದಲ್ಲಿನ ಆಕ್ರೋಶದ ನಡುವೆಯೂ ವಿದೇಶಗಳಿಂದ ಬೇಳೆ ಕಾಳು ತರಿಸಿಕೊಳ್ಳಲಾಗುತ್ತಿತ್ತು ಎಂದು ಅವರು ಹೇಳಿದರು. ತಮ್ಮ ಸರ್ಕಾರ 2014ರಲ್ಲಿ ಈ ನೀತಿ ಬದಲಾವಣೆ ಮಾಡಿತು ಮತ್ತು 2014ರ ಹಿಂದಿನ ಐದು ವರ್ಷಗಳಲ್ಲಿ ಆಗುತ್ತಿದ್ದ 1.4 ಲಕ್ಷ ಮೆಟ್ರಿಕ್ ಟನ್ ಗೆ ಪ್ರತಿಯಾಗಿ 112 ಲಕ್ಷ, ಮೆಟ್ರಿಕ್ ಟನ್ ಬೇಳೆ ಕಾಳುಗಳನ್ನು ಖರೀದಿಸಿತು ಎಂದು ತಿಳಿಸಿದರು. ಇಂದು ಬೇಳೆ ಕಾಳು ಬೆಳೆಯುವ ರೈತರು ಹೆಚ್ಚು ಹಣ ಪಡೆಯುತ್ತಿದ್ದಾರೆ, ಬೇಳೆ ಕಾಳು ದರ ಕೂಡ ಕಡಿಮೆಯಾಗಿದೆ ಮತ್ತು ಇದರಿಂದ ಬಡವರಿಗೂ ಪ್ರಯೋಜನವಾಗಿದೆ ಎಂದರು.
ಹೊಸ ಕಾಯಿದೆ ರೈತರಿಗೆ ತಮ್ಮ ಉತ್ಪನ್ನವನ್ನು ಮಂಡಿಯಲ್ಲಿ ಅಥವಾ ಅದರ ಹೊರಗೆ ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ನೀಡಿದೆ ಎಂದು ಪ್ರಧಾನಮಂತ್ರಿ ಸ್ಪಷ್ಟಪಡಿಸಿದರು. ರೈತರು ಈಗ ತಮಗೆ ಎಲ್ಲಿ ಹೆಚ್ಚಿನ ದರ ಸಿಗುತ್ತದೋ ಅಲ್ಲಿ ಮಾರಾಟ ಮಾಡಬಹುದು ಎಂದರು. ನೂತನ ಕಾಯಿದೆಗಳು ಅಂಗೀಕಾರವಾದ ಬಳಿಕ ಒಂದೇ ಒಂದು ಮಂಡಿಯನ್ನೂ ಮುಚ್ಚಲಾಗಿಲ್ಲ ಎಂದು ತಿಳಿಸಿದರು. ಎ.ಪಿ.ಎಂ.ಸಿ.ಗಳನ್ನು ಆಧುನೀಕರಿಸಲು ಸರ್ಕಾರ 500 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದೂ ಅವರು ತಿಳಿಸಿದರು.
ಗುತ್ತಿಗೆ ಕೃಷಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಇದು ತಮ್ಮ ದೇಶದಲ್ಲಿ ಹಲವಾರು ವರ್ಷಗಳಿಂದ ಇದೆ ಎಂದು ಸ್ಪಷ್ಟಪಡಿಸಿದರು. ಗುತ್ತಿಗೆ ಕೃಷಿಯಲ್ಲಿ ಬೆಳೆ ಮತ್ತು ಉತ್ಪನ್ನಗಳು ಮಾತ್ರವೇ ವ್ಯವಹಾರದಲ್ಲಿರುತ್ತವೆಯೇ ಹೊರತು ರೈತರ ಭೂಮಿಯಲ್ಲ, ರೈತರ ಜಮೀನು ಅವರ ಬಳಿಯೇ ಇರುತ್ತದೆ ಎಂದು ತಿಳಿಸಿದರು. ಈ ಒಪ್ಪಂದಗಳಿಗೂ ರೈತರ ಭೂಮಿಗೂ ಸಂಬಂಧವಿಲ್ಲ ಎಂದರು. ಒಂದೊಮ್ಮೆ ನೈಸರ್ಗಿಕ ವಿಪತ್ತು ಬಂದರೂ ರೈತರು ಪೂರ್ಣ ಹಣ ಪಡೆಯುತ್ತಾರೆ ಎಂದರು. ಹೊಸ ಕಾಯಿದೆ ಹೆಚ್ಚಿನ ಲಾಭ ಬಂದರೆ ರೈತರಿಗೆ ಒಂದು ಲಾಭದ ಅಂಶವನ್ನು ಖಾತ್ರಿ ಪಡಿಸುತ್ತದೆ ಎಂದು ತಿಳಿಸಿದರು.
ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ರೈತರಲ್ಲಿ ಯಾವುದೇ ಶಂಕೆ ಇದ್ದಲ್ಲಿ, ಅವರ ಕಾಳವಳ ನಿವಾರಿಸಲು ಸಿದ್ಧ ಎಂದು ಭರವಸೆ ನೀಡಿದರು. ಸರ್ಕಾರ ಪ್ರತಿಯೊಂದು ವಿಷಯದ ಬಗ್ಗೆಯೂ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ತಿಳಿಸಿದರು. ಅಟಲ್ ಜಿ ಅವರ ಜನ್ಮ ದಿನವಾದ ಡಿಸೆಂಬರ್ 25ರಂದು ತಾವು ಈ ವಿಷಯದ ಬಗ್ಗೆ ಮತ್ತೆ ಮಾತನಾಡುವುದಾಗಿ ಪ್ರಧಾನಮಂತ್ರಿ ತಿಳಿಸಿದರು. ಆ ದಿನ ಪಿಎಂ ಕಿಸಾನ್ ಸಮ್ಮಾನ ನಿಧಿಯ ಮತ್ತೊಂದು ಕಂತನ್ನು ಕೋಟ್ಯಂತರ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂದು ತಿಳಿಸಿದರು.
***
(Release ID: 1682300)
Visitor Counter : 315
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam