ಪ್ರಧಾನ ಮಂತ್ರಿಯವರ ಕಛೇರಿ

ಅಸೋಚೆಮ್ ಸಂಸ್ಥಾಪನಾ ಸಪ್ತಾಹ: ಪ್ರಧಾನಿ ನರೇಂದ್ರ ಮೋದಿ ಭಾಷಣ


ದೇಶ ಉದ್ದಿಮೆದಾರರು ಮತ್ತು ಸಂಪತ್ತು ಸೃಷ್ಟಿಕಾರರಿಂದ ಕೂಡಿದೆ: ಪ್ರಧಾನಿ

‘ಏಕೆ ಭಾರತ’ ಮನೋಭಾವದಿಂದ ‘ಭಾರತ ಏಕಾಗಬಾರದು’ ಮನೋಭಾವಕ್ಕೆ ಪರಿವರ್ತನೆ

ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆಗೆ ಕರೆ

Posted On: 19 DEC 2020 1:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಅಸೋಚೆಮ್  ಸಂಸ್ಥಾಪನಾ ಸಪ್ತಾಹ-2020 ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಪ್ರಧಾನಮಂತ್ರಿ ಅವರು ಇದೇ ವೇಳೆ ಟಾಟಾ ಬಳಗದ ಪರವಾಗಿ ಶ್ರೀ ರತನ್ ಟಾಟಾ ಅವರಿಗೆ ಅಸೋಚೆಮ್ ನ ಶತಮಾನದ ಉದ್ಯಮಿಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ರಾಷ್ಟ್ರ ನಿರ್ಮಾಣಕ್ಕೆ ವಾಣಿಜ್ಯ ಸಮುದಾಯದ ಕೊಡುಗೆಯನ್ನು ಶ್ಲಾಘಿಸಿದರು. ಅವರು ಉದ್ಯಮಕ್ಕೆ ಆಗಸ ಮುಟ್ಟುವಷ್ಟು ಸ್ವಾತಂತ್ರ್ಯವನ್ನು ನೀಡಲಾಗಿದೆ ಮತ್ತು ಉದ್ಯಮ ಅದರ ಸಂಪೂರ್ಣ ಸದ್ಭಳಕೆ ಮಾಡಿಕೊಳ್ಳಬೇಕು. ಮುಂಬರುವ ವರ್ಷಗಳಲ್ಲಿ ಸ್ವಾವಲಂಬಿ ಭಾರತ ಕನಸು ಸಾಕಾರಕ್ಕೆ ಎಲ್ಲರೂ ಸಂಪೂರ್ಣ ಶ್ರಮವಹಿಸಬೇಕು’’ ಎಂದು ಕರೆ ನೀಡಿದರು.

ಇಂದು ಉದ್ಯಮಿಗಳು ಮತ್ತು ಸಂಪತ್ತು ಸೃಷ್ಟಿಕರ್ತರು ಕೋಟ್ಯಾಂತರ ಯುವಕರಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಸರ್ಕಾರ ಪರಿಣಾಮಕಾರಿ ಮತ್ತು ಪೂರಕ ಸ್ನೇಹಿ ವಾತಾವರಣವನ್ನು ನಿರ್ಮಿಸಲು ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ಪ್ರತಿಭಾವಂತ ಮಹಿಳೆಯರು ಮತ್ತು ಯುವಕರನ್ನು ಸೇರ್ಪಡೆ ಮಾಡಿಕೊಳ್ಳುವುದು, ವಿಶ್ವದ ಅತ್ಯುತ್ತಮ ಪದ್ಧತಿಗಳನ್ನು ಆದಷ್ಟು ಶೀಘ್ರ ಅಳವಡಿಸಿಕೊಳ್ಳುವುದು, ಕಾರ್ಪೊರೇಟ್ ಆಡಳಿತ ಮತ್ತು ಲಾಭ ಹಂಚಿಕೆ ಸೇರಿದಂತೆ ಹಲವು ಸುಧಾರಣೆಗಳನ್ನು ತರುವ ಮೂಲಕ ಉದ್ಯಮ ತನ್ನ ಪ್ರಯೋಜನಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು.

ಸಾಂಕ್ರಾಮಿಕದ ಸಮಯದಲ್ಲಿ ಇಡೀ ವಿಶ್ವ ಬಂಡವಾಳ ಹೂಡಿಕೆಯ ಸಮಸ್ಯೆಯನ್ನು ಎದುರಿಸಿತು. ಆದರೆ ಭಾರತ ಎಫ್ ಡಿಐ ಹಾಗೂ ಪಿಎಫ್ಐನಲ್ಲಿ ದಾಖಲೆ ಮಾಡಿದೆ. ಇದು ಭಾರತೀಯ ಆರ್ಥಿಕತೆಯ ಮೇಲೆ ವಿಶ್ವ ಇಟ್ಟಿರುವ ವಿಶ್ವಾಸವನ್ನು ತೋರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಜಗತ್ತಿನ ವಿಶ್ವಾಸವನ್ನು ವೃದ್ಧಿಸುವುದಕ್ಕೆ ಪೂರಕವಾಗಿ ಉದ್ಯಮಿಗಳು ದೇಶೀಯ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಳ ಮಾಡಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು.

ಅಮೆರಿಕಕ್ಕೆ ಹೋಲಿಸಿದರೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತೀಯ ಉದ್ಯಮದ ಹೂಡಿಕೆ ಅತಿ ಕಡಿಮೆ ಇದೆ. ಅಮೆರಿಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಶೇ.70ರಷ್ಟು ಹೂಡಿಕೆ ಖಾಸಗಿ ವಲಯದ್ದಾಗಿದೆ ಎಂದು ಅವರು ಹೇಳಿದರು. ಭಾರತೀಯ ಉದ್ಯಮ ಸಂಶೋಧನಾ ಮತ್ತು ಅಭಿವೃದ್ಧಿಯಲ್ಲಿ ಅದರಲ್ಲೂ ವಿಶೇಷವಾಗಿ ಕೃಷಿ, ರಕ್ಷಣೆ, ಬಾಹ್ಯಾಕಾಶ, ನಿರ್ಮಾಣ ವಲಯ, ಫಾರ್ಮಾ ಮತ್ತು ಸಾರಿಗೆ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಳ ಮಾಡಬೇಕು ಎಂದು ಅವರು ಕರೆ ನೀಡಿದರು. ಪ್ರತಿಯೊಂದು ವಲಯದಲ್ಲೂ ಎಲ್ಲ ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿಗೆ ನಿರ್ದಿಷ್ಟ ಮೊತ್ತವನ್ನು ಕಾಯ್ದಿರಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

ಇಡೀ ವಿಶ್ವ ನಾಲ್ಕನೇ ಕೈಗಾರಿಕಾ ಕ್ರಾಂತಿಯತ್ತ ಅತ್ಯಂತ ಕ್ಷಿಪ್ರವಾಗಿ ಸಾಗುತ್ತಿದೆ ಎಂದ ಪ್ರಧಾನಮಂತ್ರಿ ಅವರು, ಹೊಸ ತಂತ್ರಜ್ಞಾನ, ಹೊಸ ಪರಿಹಾರಗಳ ರೂಪದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ ಎಂದರು. ಅದಕ್ಕಾಗಿ ಯೋಜನೆಗಳನ್ನು ರೂಪಿಸಿ ಕಾರ್ಯೋನ್ಮುಖವಾಗಲು ಇದು ಸಕಾಲ ಎಂದು ಅವರು ಹೇಳಿದರು. ವಾಣಿಜ್ಯ ನಾಯಕರು ಎಲ್ಲರೂ ಒಂದಾಗಿ ಪ್ರತಿ ವರ್ಷ ಸೇರಬೇಕು ಮತ್ತು ಪ್ರತಿಯೊಬ್ಬರೂ ಗುರಿ ಮುಟ್ಟಲು ರಾಷ್ಟ್ರ ನಿರ್ಮಾಣದ ದೊಡ್ಡ ಗುರಿ ತಲುಪಲು ಸಂಪರ್ಕ ಹೊಂದಬೇಕು ಎಂದರು. ಮುಂದಿನ 27 ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯಗಳಿಸಿ ಶತಮಾನೋತ್ಸವವನ್ನು ಆಚರಿಸಲಿದೆ. ಈಗ ಭಾರತದ ಜಾಗತಿಕ ಪಾತ್ರ ಅಷ್ಟೇ ನಿರ್ಧಾರವಾಗುವುದಿಲ್ಲ. ಅಲ್ಲದೆ ಭಾರತೀಯರ ಬದ್ಧತೆ ಮತ್ತು ಕನಸುಗಳೆರಡೂ ಪರೀಕ್ಷೆಗೊಳಪಡುತ್ತವೆ ಎಂದರು. ಇದು ವಿಶ್ವಕ್ಕೆ ಭಾರತೀಯ ಉದ್ಯಮ ತನ್ನ ಸಾಮರ್ಥ್ಯ ಬದ್ಧತೆ ಮತ್ತು ಧೈರ್ಯವನ್ನು ತೋರಿಸುವ ಕಾಲವಾಗಿದೆ ಎಂದು ಅವರು ಹೇಳಿದರು. ಕೇವಲ ಸ್ವಾವಲಂಬಿ ಭಾರತ ಸಾಧಿಸುವುದಕ್ಕೆ ಒತ್ತು ನೀಡುವುದಲ್ಲದೆ, ಗುರಿಯನ್ನು ಎಷ್ಟು ಬೇಗ ಮುಟ್ಟತ್ತೇವೆ ಎಂಬುದು ಕೂಡ ಅಷ್ಟೇ ಪ್ರಮುಖವಾದುದು ಎಂದು ಪ್ರಧಾನಮಂತ್ರಿ ಹೇಳಿದರು.

ಹಿಂದೆ ಎಂದೂ ಜಗತ್ತಿನಲ್ಲಿ ಭಾರತದ ಯಶಸ್ಸಿನ ಬಗ್ಗೆ ಇಷ್ಟೊಂದು ಸಕಾರಾತ್ಮಕತೆ ಕಂಡುಬಂದಿರಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಸಕಾರಾತ್ಮಕ ಭಾವನೆ ಮೂಡಲು ಸುಮಾರು 130 ಕೋಟಿ ಭಾರತೀಯರ ಅಪರಿಮಿತ ವಿಶ್ವಾಸ ಕಾರಣವಾಗಿದೆ ಎಂದರು. ಇದೀಗ ಭಾರತ ಮುನ್ನಡೆಯಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಮತ್ತು ಹೊಸ ಶಕ್ತಿಯೊಂದಿಗೆ ಮುನ್ನಡೆಯಬೇಕಿದೆ. ದೇಶದಲ್ಲಿ ಕೈಗೊಂಡಿರುವ ಸುಧಾರಣೆಗಳ ಪರಿಣಾಮ ಉದ್ಯಮದಲ್ಲಿನ ಭಾವನೆಗಳ ಮೇಲೆ ಪ್ರಭಾವಗೊಂಡು ಹೂಡಿಕೆಯಲ್ಲಿ ಏಕೆ ಭಾರತದಿಂದ ಭಾರತ ಏಕಾಗಬಾರದುಎಂದು ಕೇಳುವಂತಾಗಿದೆ.

ನವಭಾರತ ತನ್ನ ಸಾಮರ್ಥ್ಯವನ್ನು ಅವಲಂಬಿಸಿದೆ ಮತ್ತು ತನ್ನದೇ ಸಂಪನ್ಮೂಲಗಳನ್ನು ಅವಲಂಬಿಸಿದೆ. ಅದರ ಮೂಲಕ ಆತ್ಮನಿರ್ಭರ ಭಾರತ ಸಾಧನೆಗೆ ಮುನ್ನಡೆಯಲಾಗುತ್ತಿದೆ ಮತ್ತು ಗುರಿ ಸಾಧನೆಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವನ್ನು ಉತ್ಪಾದನಾ ತಾಣವನ್ನಾಗಿ ಉತ್ತೇಜಿಸಲು ನಿರಂತರ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಇಂದು ನಾವು ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟಕ್ಕೇರಲು ಸಮರೋಪಾದಿಯಲ್ಲಿ ಮುನ್ನಡೆಯುತ್ತಿದ್ದೇವೆ, ಪ್ರತಿಯೊಂದು ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಗೆ ನಾವು ಕ್ಷಿಪ್ರವಾಗಿ ಪ್ರತಿ ಸ್ಪಂದಿಸಬೇಕಿದೆ ಎಂದರು. ಭಾರತ ಯಾವುದೇ ರೀತಿಯ ಜಾಗತಿಕ ಪೂರೈಕೆ ಸರಣಿಯಲ್ಲಿ ದಿಢೀರ್ ಎದುರಾಗುವ ಬೇಡಿಕೆಗಳನ್ನು ಪೂರೈಸಲು ಹೇಗೆ ಪರಿಣಾಮಕಾರಿ ಕಾರ್ಯತಂತ್ರವನ್ನು ರೂಪಿಸುತ್ತವೆ ಎಂಬುದಕ್ಕೆ ಒತ್ತು ನೀಡಲಾಗಿದೆ ಎಂದರು. ಗುರಿ ಸಾಧನೆಗೆ ಅಸೋಚೆಮ್  ನಂತಹ ಕೈಗಾರಿಕಾ ಸಂಸ್ಥೆಗಳ ಜೊತೆ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಜೊತೆ ಉತ್ತಮ ಸಮನ್ವಯತೆ ಸಾಧಿಸಲು ಇದು ಸಕಾಲ ಎಂದು ಹೇಳಿದರು. ಜಾಗತಿಕ ಬದಲಾವಣೆಗಳಿಗೆ ಹೇಗೆ ಕ್ಷಿಪ್ರವಾಗಿ ಸ್ಪಂದಿಸಬೇಕು ಎಂಬ ಕುರಿತು ಉದ್ಯಮದ ಸಲಹೆಗಳು ಮತ್ತು ಸೂಚನೆಗಳನ್ನು ನೀಡಬೇಕು ಹಾಗೂ ತ್ವರಿತ ಸ್ಪಂದನೆಗಾಗಿ ಉತ್ತಮ ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದರು.

ವಿಶ್ವಕ್ಕೆ ಅಗತ್ಯ ಬಿದ್ದಾಗ ನೆರವು ನೀಡುವ ಎಲ್ಲ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಅವರು ಹೇಳಿದರು. ಕೊರೊನಾ ಸಮಯದಲ್ಲೂ ಸಹ ಭಾರತ ಜಗತ್ತಿನ ಫಾರ್ಮರ್ಸಿಯ ಹೊಣೆಗಾರಿಕೆಯನ್ನು ತಾನೇ ವಹಿಸಿಕೊಂಡಿತ್ತು ಮತ್ತು ವಿಶ್ವಕ್ಕೆ ಅಗತ್ಯ ಔಷಧಗಳನ್ನು ಪೂರೈಸಿತು. ಇದೀಗ ಲಸಿಕೆಗಳ ವಿಚಾರದಲ್ಲಿಯೂ ಭಾರತ ತನ್ನ ಆಶೋತ್ತರಗಳನ್ನು ಈಡೇರಿಸಿಕೊಳ್ಳಲಿದೆ ಮತ್ತು ಇತರೆ ಹಲವು ರಾಷ್ಟ್ರಗಳ ನಿರೀಕ್ಷೆಗಳನ್ನು ಪೂರೈಸಲು ಕ್ರಮ ಕೈಗೊಳ್ಳುತ್ತಿದೆ ಎಂದರು. ಗ್ರಾಮೀಣ ಕರಕುಶಲಕರ್ಮಿಗಳ ಉತ್ಪನ್ನಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ಅಸೋಚೆಮ್  ಸದಸ್ಯರು ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ಇದು ಗ್ರಾಮೀಣ ಮತ್ತು ನಗರದ ನಡುವಿನ ಅಂತರವನ್ನು ನಿವಾರಿಸಲು ಸಹಾಯಕವಾಗಲಿದೆ ಎಂದು ಹೇಳಿದರು. ಭಾರತ ಸರ್ಕಾರ, ರಾಜ್ಯ ಸರ್ಕಾರಗಳು, ಕೃಷಿ ಸಂಸ್ಥೆಗಳು ಮತ್ತು ಉದ್ಯಮ ಒಕ್ಕೂಟಗಳ ಜೊತೆ ಸೇರಿ ನಮ್ಮ ಸಾವಯವ ಉತ್ಪನ್ನಗಳ ಉತ್ತೇಜನಕ್ಕೆ, ಉತ್ತಮ ಮೂಲಸೌಕರ್ಯ ಹಾಗೂ ಉತ್ತಮ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು. ಇದರಿಂದ ನಮ್ಮ ಇಡೀ ಗ್ರಾಮೀಣ ಆರ್ಥಿಕತೆ ಹೊಸ ಎತ್ತರಕ್ಕೆ ಏರಲು ಸಹಕಾರಿಯಾಗಲಿದೆ ಎಂದರು.

21ನೇ ಶತಮಾನದ ಆರಂಭದಲ್ಲಿ ಅಟಲ್ ಜಿ ಭಾರತದೊಂದಿಗೆ ಹೆದ್ದಾರಿಗಳನ್ನು ಬೆಸೆಯುವ ಗುರಿ ಹೊಂದಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ದೇಶದಲ್ಲಿ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ದೇಶದ ಪ್ರತಿಯೊಂದು ಗ್ರಾಮಕ್ಕೂ ಬ್ರಾಡ್ ಬ್ಯಾಂಡ್ ಸಂಪರ್ಕ ಒದಗಿಸುವ ಕಾರ್ಯದಲ್ಲಿ ನಾವು ತೊಡಗಿದ್ದು, ಇದರಿಂದಾಗಿ ಗ್ರಾಮಗಳ ರೈತರು ಡಿಜಿಟಲ್ ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಸಾಧ್ಯವಾಗಲಿದೆ ಎಂದರು. ಉತ್ತಮ ಮೂಲಸೌಕರ್ಯ ನಿರ್ಮಾಣಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಬಲವರ್ಧನೆ, ಷೇರು ಮಾರುಕಟ್ಟೆಯ ಸಂಭವನೀಯತೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಲಭ್ಯವಿರುವ ಪ್ರತಿಯೊಂದು ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಅಂತೆಯೇ ಸಾವರಿನ್ ಸಂಪತ್ತು ನಿಧಿ ಮತ್ತು ಪಿಂಚಣಿ ನಿಧಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ, ಆರ್ ಐಟಿಎಸ್ ಮತ್ತು ಐಎನ್ ವಿಐಟಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಮೂಲಸೌಕರ್ಯ ಸಂಬಂಧಿ ಆಸ್ತಿಗಳನ್ನು ನಗದೀಕರಣಗೊಳಿಸಲಾಗುತ್ತಿದೆ ಎಂದು ಹೇಳಿದರು.

ಸರ್ಕಾರ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದಲ್ಲದೆ, ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತಿದೆ. ಹಲವು ಪ್ರೋತ್ಸಾಹಕರ ಯೋಜನೆಗಳನ್ನು ಮತ್ತು ನೀತಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ಜಾರಿಗೊಳಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಉದ್ಯಮದ ಪಾಲುದಾರರು ಬೆಂಬಲವನ್ನು ಯಶಸ್ಸನ್ನಾಗಿ ಪರಿವರ್ತಿಸಬೇಕಿದೆ ಎಂದರು. ಸ್ವಾವಲಂಬಿ ಭಾರತದ ಕನಸನ್ನು ನನಸು ಮಾಡಲು, ದೇಶ ಅಗತ್ಯ ನೀತಿ ಮತ್ತು ನಿಯಮಗಳನ್ನು ಬದಲಾವಣೆ ಮಾಡಲು ಬಯಸಿದ್ದು, ದೇಶ ಅದಕ್ಕೆ ಬದ್ಧವಾಗಿದೆ ಎಂದರು.

***



(Release ID: 1682299) Visitor Counter : 176