ಪ್ರಧಾನ ಮಂತ್ರಿಯವರ ಕಛೇರಿ

ಹವಾಮಾನ ಮಹತ್ವಾಕಾಂಕ್ಷೆ ಶೃಂಗಸಭೆ: ಪ್ರಧಾನಿ ಸಂದೇಶ

Posted On: 12 DEC 2020 9:21PM by PIB Bengaluru

ಗೌರವಾನ್ವಿತರೇ,

ಶೃಂಗಸಭೆಯನ್ನು ಪ್ಯಾರೀಸ್ ಒಪ್ಪಂದದ ಐದನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದು-ಇದು ಹವಾಮಾನ ವೈಪರೀತ್ಯದ ವಿರುದ್ಧದ ನಮ್ಮ ಹೋರಾಟದಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಇಂದು ನಾವು ಹಿಂದೆ ನಿಗದಿಪಡಿಸಿದ್ದಕ್ಕಿಂತ ಇನ್ನೂ ಎತ್ತರದ ಗುರಿಯನ್ನು ಹೊಂದಲು ಎದುರು ನೋಡುತ್ತಿದ್ದೇವೆ. ನಾವು ಕೇವಲ ನಮ್ಮ ಆಕಾಂಕ್ಷೆಗಳನ್ನು ನವೀಕರಿಸಬೇಕಾಗಿಲ್ಲ, ಈಗಾಗಲೇ ನಿಗದಿಪಡಿಸಿರುವ ನಮ್ಮ ಗುರಿಗಳ ಸಾಧನೆಗಳನ್ನೂ ನಾವು ಪರಾಮರ್ಶೆ ನಡೆಸಬೇಕಾಗಿದೆ. ಆಗ ಮಾತ್ರ ನಾವು ಭವಿಷ್ಯದ ಪೀಳಿಗೆಗೆ ನಮ್ಮ ಧ್ವನಿ ವಿಶ್ವಾಸದಿಂದ ಕೂಡಿರಲು ಸಾಧ್ಯ.

ಗೌರವಾನ್ವಿತರೇ,

ನಾನು ನಿಮ್ಮಲ್ಲಿ ವಿನಮ್ರವಾಗಿ ಹಂಚಿಕೊಳ್ಳುವುದೇನೆಂದರೆ, ಭಾರತ ಪ್ಯಾರೀಸ್ ಒಪ್ಪಂದದ ಗುರಿಗಳನ್ನು ಸಾಧಿಸುವ ಪಥದಲ್ಲಿರುವುದು ಮಾತ್ರವಲ್ಲ, ಅದನ್ನೂ ಮೀರಿ ಮುನ್ನಡೆದಿದೆ. ನಮ್ಮ ಮಾಲಿನ್ಯ ಪ್ರಮಾಣ 2005 ಮಟ್ಟಕ್ಕೆ ಹೋಲಿಸಿದರೆ ಶೇ.21ರಷ್ಟನ್ನು ಕಡಿತಗೊಳಿಸಿದ್ದೇವೆ. ನಮ್ಮ ಸೌರ ಸಾಮರ್ಥ್ಯ 2014ರಲ್ಲಿ 2.63 ಗಿಗಾವ್ಯಾಟ್ ಇತ್ತು, ಇದೀಗ 2020ರಲ್ಲಿ ಸಾಮರ್ಥ್ಯ 36 ಗಿಗಾವ್ಯಾಟ್ ಗೆ ಏರಿಕೆಯಾಗಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ನಾವು ವಿಶ್ವದಲ್ಲಿಯೇ ನಾಲ್ಕನೇ ಅತಿ ದೊಡ್ಡ ರಾಷ್ಟ್ರವಾಗಿದ್ದೇವೆ.

ಭಾರತ 2022ಕ್ಕೂ ಮುನ್ನ 175 ಗಿಗಾವ್ಯಾಟ್ ಸಾಮರ್ಥ್ಯವನ್ನು ತಲುಪಲಿದೆ. ಮತ್ತು ಇನ್ನೂ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, 2030ರವೇಳೆಗೆ ನಮ್ಮ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 450 ಗಿಗಾವ್ಯಾಟ್ ಸಾಮರ್ಥ್ಯಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ನಾವು ನಮ್ಮ ಅರಣ್ಯ ವ್ಯಾಪ್ತಿ ವಿಸ್ತರಣೆ ಮತ್ತು ನಮ್ಮ ಜೀವ ವೈವಿಧ್ಯತೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಜಾಗತಿಕ ಮಟ್ಟದಲ್ಲಿ, ಭಾರತ ಎರಡು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ.

  • ಅಂತಾರಾಷ್ಟ್ರೀಯ ಸೌರ ಮೈತ್ರಿ ಮತ್ತು
  • ಪ್ರಕೋಪ ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಮೈತ್ರಿ

ಗೌರವಾನ್ವಿತರೇ,

2047ಕ್ಕೆ ಭಾರತ ಆಧುನಿಕ ಮತ್ತು ಸ್ವತಂತ್ರ ಭಾರತವಾಗಿ 100 ವರ್ಷಗಳನ್ನಾಚರಿಸಲಿದೆ. ಗ್ರಹದ ಮೇಲಿರುವ ನನ್ನೆಲ್ಲಾ ದೇಶವಾಸಿಗಳೇ ಇಂದು ನಾವು ಪಣ ತೋಡಬೇಕಿದೆ. ಭಾರತದ ಸ್ವಾತಂತ್ರೋತ್ಸವದ ಶತಮಾನೋತ್ಸವದ ವೇಳೆಗೆ ಭಾರತ ಕೇವಲ ತನ್ನ ಗುರಿಗಳನ್ನು ಸಾಧಿಸುವುದು ಮಾತ್ರವಲ್ಲದೆ, ನಿಮ್ಮ ನಿರೀಕ್ಷೆಗಳನ್ನೂ ಮೀರಿ ಕಾರ್ಯನಿರ್ವಹಿಸಬೇಕಿದೆ.

ಧನ್ಯವಾದಗಳು.

***


(Release ID: 1680482) Visitor Counter : 263