ಸಂಪುಟ

ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಎರಡು ಜಿಲ್ಲೆಗಳಲ್ಲಿ ಈಶಾನ್ಯ ವಲಯ ಸಮಗ್ರ ದೂರಸಂಪರ್ಕ ಅಭಿವೃದ್ಧಿ ಯೋಜನೆಯಡಿ ಮೊಬೈಲ್ ವ್ಯಾಪ್ತಿ ಒದಗಿಸಲು ಸಾರ್ವತ್ರಿಕ ಸೇವಾ ಬಾಧ್ಯತಾ ನಿಧಿ ಯೋಜನೆಗೆ ಸಂಪುಟದ ಅನುಮೋದನೆ

Posted On: 09 DEC 2020 3:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಎರಡು ಜಿಲ್ಲೆಗಳಾದ ಕಾರ್ಬಿ ಅಂಗ್ಲಾಂಗ್ ಮತ್ತು ದಿಮಾ ಹಸಾವೋಗಳಲ್ಲಿ  ಈಶಾನ್ಯ ವಲಯಕ್ಕಾಗಿರುವ (ಎನ್.ಇ.ಆರ್.)  ಸಮಗ್ರ ದೂರಸಂಪರ್ಕ ಅಭಿವೃದ್ಧಿ ಯೋಜನೆ (ಸಿ.ಟಿ.ಡಿ.ಪಿ.)ಅಡಿಯಲ್ಲಿ ಮೊಬೈಲ್ ವ್ಯಾಪ್ತಿಯನ್ನು ಒದಗಿಸಲು ಸಾರ್ವತ್ರಿಕ ಸೇವಾ ಬಾಧ್ಯತಾ ನಿಧಿ (ಯು.ಎಸ್.ಒ.ಎಫ್.)  ಯೋಜನೆಗೆ  ಸಂಪುಟ ಅನುಮೋದನೆ ನೀಡಿತು.

 ಯೋಜನೆಯು ಮೊಬೈಲ್ ವ್ಯಾಪ್ತಿ ಇಲ್ಲದ 2374 ಗ್ರಾಮಗಳಲ್ಲಿ ಮೊಬೈಲ್ ವ್ಯಾಪ್ತಿಯನ್ನು (ಅರುಣಾಚಲದ 1683 ಮತ್ತು ಅಸ್ಸಾಂನ ಎರಡು ಜಿಲ್ಲೆಗಳ 691 ಗ್ರಾಮಗಳಲ್ಲಿ ) ಐದು ವರ್ಷಗಳ ಕಾರ್ಯಾಚರಣ ವೆಚ್ಚವೂ ಸೇರಿದಂತೆ ಸುಮಾರು 2,029 ಕೋ.ರೂ. ಅಂದಾಜು ವೆಚ್ಚದಲ್ಲಿ ಒದಗಿಸುವ ಉದ್ದೇಶವನ್ನು ಹೊಂದಿದೆ.

ಯೋಜನಾ ವೆಚ್ಚವನ್ನು ಸಾರ್ವತ್ರಿಕ ಸೇವಾ ಬಾಧ್ಯತಾ ನಿಧಿಯಡಿ ಭರಿಸಲಾಗುವುದು. ಯೋಜನೆಯನ್ನು  2022ರ ಡಿಸೆಂಬರ್ ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಮೊಬೈಲ್ ವ್ಯಾಪ್ತಿ ಇಲ್ಲದ ಗುರುತಿಸಲಾದ ಗ್ರಾಮಗಳಲ್ಲಿ 4ಜಿ ಮೊಬೈಲ್ ಸೇವೆಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದ  ಕಾಮಗಾರಿಯನ್ನು ಯು.ಎಸ್.ಒ.ಎಫ್. ಪ್ರಕ್ರಿಯೆಯನ್ವಯ ಮುಕ್ತ ಸ್ಪರ್ಧಾತ್ಮಕ ಬಿಡ್ ನಲ್ಲಿ ಹರಾಜು ಮೂಲಕ ನೀಡಲಾಗುವುದು.

ಮೊಬೈಲ್ ವ್ಯಾಪ್ತಿ ಇಲ್ಲದ ಅರುಣಾಚಲ ಪ್ರದೇಶದ ಮತ್ತು ಅಸ್ಸಾಂನ ಎರಡು ಜಿಲ್ಲೆಗಳ ಅತ್ಯಂತ ದುರ್ಗಮ ಮತ್ತು ಕಠಿಣ ಭೂಪ್ರದೇಶಗಳಲ್ಲಿ ಮೊಬೈಲ್ ಸೇವೆಗಳನ್ನು ಒದಗಿಸುವ ಈ ಕ್ರಮ ಸ್ವಾವಲಂಬನೆಗೆ, ಕಲಿಕೆಗೆ, ಮಾಹಿತಿ ಪ್ರಸಾರಕ್ಕೆ ಮತ್ತು ಜ್ಞಾನ ಪ್ರಸರಣಕ್ಕೆ, ಕೌಶಲ್ಯ ಅಭಿವೃದ್ಧಿಗೆ ಹಾಗು ಅಭಿವೃದ್ಧಿಗೆ  ಅವಶ್ಯವಾದ ಡಿಜಿಟಲ್ ಸಂಪರ್ಕವನ್ನು ಇನ್ನಷ್ಟು ಸುಧಾರಿಸಲಿದೆ. ವಿಪತ್ತು ನಿರ್ವಹಣೆ, ಇ-ಆಡಳಿತ ಉಪಕ್ರಮಗಳು, ಉದ್ಯಮಗಳ ಸ್ಥಾಪನೆ ಮತ್ತು ಇ-ವಾಣಿಜ್ಯ ಸೌಲಭ್ಯಗಳು, ಜ್ಞಾನ ಹಂಚಿಕೊಳ್ಳುವಿಕೆಗೆ ಸಂಬಂಧಿಸಿ ಶಿಕ್ಷಣ ಸಂಸ್ಥೆಗಳಿಗೆ ಸಾಕಷ್ಟು ಬೆಂಬಲ ಒದಗಿಸಲು ಮತ್ತು ಉದ್ಯೋಗಾವಕಾಶಗಳ ಲಭ್ಯತೆ ಮತ್ತು ಡಿಜಿಟಲ್ ಇಂಡಿಯಾದ ಕನಸು ಈಡೇರಿಸಲು,  ದೇಶೀಯ ಉತ್ಪಾದನೆ ಉತ್ತೇಜಿಸಲು ಮತ್ತು ಆತ್ಮನಿರ್ಭರ ಭಾರತದ ಉದ್ದೇಶ ಈಡೇರಿಕೆಗೂ ಇದು ನೆರವಾಗಲಿದೆ.

***


(Release ID: 1679498) Visitor Counter : 296