ಪ್ರಧಾನ ಮಂತ್ರಿಯವರ ಕಛೇರಿ

ಇಂಡಿಯಾ ಮೊಬೈಲ್ ಕಾಂಗ್ರೆಸ್ 2020: ಪ್ರಧಾನಿ ನರೇಂದ್ರ ಮೋದಿ ಭಾಷಣ

ಭಾರತವನ್ನು ಟೆಲಿಕಾಂ ಸಲಕರಣೆ, ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯ ಜಾಗತಿಕ ತಾಣವನ್ನಾಗಿಸಲು ಒಗ್ಗೂಡಿ ಶ್ರಮಿಸೋಣ

ಭವಿಷ್ಯದಲ್ಲಿ ದಾಪುಗಾಲಿಡಲು 5 ಜಿ ಸಕಾಲ ಅನುಷ್ಠಾನ ಖಾತ್ರಿಪಡಿಸಬೇಕು

ಉತ್ತಮ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆ ಮತ್ತು ಮಾಲಿನ್ಯ ತಗ್ಗಿಸುವ ಆರ್ಥಿಕತೆ ಸೃಷ್ಟಿಗೆ ಕರೆ: ಪ್ರಧಾನಿ ನರೇಂದ್ರ ಮೋದಿ

Posted On: 08 DEC 2020 11:45AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವರ್ಚುವಲ್ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) 2020ಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಿದರು. ಐಎಂಸಿ 2020ರ ಧ್ಯೆಯವಾಕ್ಯ "ಸಮಗ್ರ ನಾವಿನ್ಯತೆ  -ಸ್ಮಾರ್ಟ್,  ಸುಭದ್ರ, ಸುಸ್ಥಿರ" ಎಂಬುದಾಗಿದೆ. ಇದು ಪ್ರಧಾನಮಂತ್ರಿಯವರ ದೃಷ್ಟಿಕೋನವಾದ ‘ಆತ್ಮನಿರ್ಭರ ಭಾರತ’, ‘ಡಿಜಿಟಲ್ ಒಳಗೊಳ್ಳುವಿಕೆ’, ಮತ್ತು ‘ಸುಸ್ಥಿರ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ನಾವೀನ್ಯತೆ’ಯನ್ನು ಒಗ್ಗೂಡಿಸುವ ಗುರಿ ಹೊಂದಿದೆ. ಇದು ವಿದೇಶಿ ಮತ್ತು ಸ್ಥಳೀಯ ಹೂಡಿಕೆಗಳನ್ನು ಹೆಚ್ಚಿಸಲು, ಟೆಲಿಕಾಂ ಮತ್ತು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತವನ್ನು ಟೆಲಿಕಾಂ ಸಲಕರಣೆ, ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನಾ ಜಾಗತಿಕ ತಾಣವಾಗಿ ಮಾಡಲು ಒಗ್ಗೂಡಿ ಶ್ರಮಿಸುವಂತೆ ಕರೆ ನೀಡಿದರು. ತಾಂತ್ರಿಕ ಉನ್ನತೀಕರಣದ ಕಾರಣಕ್ಕೆ ಹ್ಯಾಂಡ್‌ ಸೆಟ್‌ ಗಳು ಮತ್ತು ಗ್ಯಾಜೆಟ್‌ ಗಳನ್ನು ಆಗಾಗ್ಗೆ ಬದಲಾಯಿಸುವ ಸಂಸ್ಕೃತಿಯ ವಿರುದ್ಧ ಅವರು ಎಚ್ಚರಿಕೆ ನೀಡಿದರು.  ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ನಿಭಾಯಿಸುವ ಮತ್ತು ತ್ಯಾಜ್ಯ ಮತ್ತು ಮಾಲಿನ್ಯ ತಗ್ಗಿಸಿ, ಅದರಿಂದ ಮರು ಉತ್ಪಾದನೆ ಮಾಡುವ (ಸರ್ಕ್ಯುಲರ್) ಆರ್ಥಿಕತೆಯನ್ನು ಸೃಷ್ಟಿಸುವ ಉತ್ತಮ ಮಾರ್ಗದ ಬಗ್ಗೆ ಚಿಂತಿಸಲು ಉದ್ಯಮವು ಕಾರ್ಯಪಡೆ ರೂಪಿಸಬಹುದೇ ಎಂದು ಆಲೋಚಿಸಲು ಅವರು ಪ್ರತಿನಿಧಿಗಳನ್ನು ಕೇಳಿದರು. ಭವಿಷ್ಯಕ್ಕೆ ದಾಪುಗಾಲಿಡಲು ಮತ್ತು ಲಕ್ಷಾಂತರ ಭಾರತೀಯರನ್ನು ಸಬಲೀಕರಿಸಲು 5 ಜಿ ಯನ್ನು ಸಕಾಲದಲ್ಲಿ ಅನುಷ್ಠಾನ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಒಗ್ಗೂಡಿ ಶ್ರಮಿಸಲು ಅವರು ಆಗ್ರಹಿಸಿದರು.

ಮುಂಬರುವ ತಂತ್ರಜ್ಞಾನ ಕ್ರಾಂತಿಯೊಂದಿಗೆ ಜೀವನವನ್ನು ಹೇಗೆ ಸುಧಾರಿಸಬಹುದು ಎಂದು ಚಿಂತಿಸುವುದು ಮತ್ತು ಯೋಜನೆ ರೂಪಿಸುವುದು ಮುಖ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತಮ ಆರೋಗ್ಯ ಆರೈಕೆ, ಉತ್ತಮ ಶಿಕ್ಷಣ, ನಮ್ಮ ರೈತರಿಗೆ ಉತ್ತಮ ಮಾಹಿತಿ ಮತ್ತು ಅವಕಾಶಗಳು, ಸಣ್ಣ ಉದ್ಯಮಗಳಿಗೆ ಉತ್ತಮ ಮಾರುಕಟ್ಟೆ ಪ್ರವೇಶ ಇದು ನಾವು ಸಾಧಿಸಬೇಕಾದ ಕೆಲವು ಗುರಿಗಳಾಗಿವೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು, ಟೆಲಿಕಾಂ ಕ್ಷೇತ್ರದ ಆವಿಷ್ಕಾರ ಮತ್ತು ಪ್ರಯತ್ನಗಳಿಂದಾಗಿ ಸಾಂಕ್ರಾಮಿಕ ರೋಗದ ನಡುವೆಯೂ ಜಗತ್ತು ಕ್ರಿಯಾತ್ಮಕವಾಗಿತ್ತು ಎಂದು ಟೆಲಿಕಾಂ ವಲಯದ ಪ್ರತಿನಿಧಿಗಳಿಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ದೂರದ ನಗರದಲ್ಲಿರುವ ಮಗ ತನ್ನ ತಾಯಿಯೊಂದಿಗೆ ಸಂಪರ್ಕ ಹೊಂದಿದ್ದಾನೆ, ಒಬ್ಬ ವಿದ್ಯಾರ್ಥಿಯು ತರಗತಿಯ ಕೋಣೆಗೆ ಹೋಗದೆ ತನ್ನ ಶಿಕ್ಷಕರಿಂದ ಕಲಿಯುತ್ತಿದ್ದಾನೆ, ಒಬ್ಬ ರೋಗಿಯು ತನ್ನ ಮನೆಯಿಂದಲೇ ವೈದ್ಯರನ್ನು ಸಂಪರ್ಕಿಸುತ್ತಿದ್ದಾನೆ ಮತ್ತು ಗ್ರಾಹಕನೊಂದಿಗೆ ವ್ಯಾಪಾರಿ ವಿಭಿನ್ನ ಭೌಗೋಳಿಕ ಪ್ರದೇಶದಿಂದ ಸಂಪರ್ಕಿತನಾಗಿದ್ದಾನೆ ಎಂದರು.

ಬಹಳಷ್ಟು ಯುವ ಟೆಕ್ಕಿಗಳಿಗೆ ಇದು ಸಂಹಿತೆಯಾಗಿದ್ದು, ಉತ್ಪನ್ನವನ್ನು ವಿಶೇಷವಾಗಿಸುತ್ತಿದೆ, ಕೆಲವು ಉದ್ಯಮಿಗಳಿಗೆ ಇದು ಹೆಚ್ಚು ಮುಖ್ಯವಾದ ಪರಿಕಲ್ಪನೆಯಾಗಿದೆ, ಉತ್ಪನ್ನವನ್ನು ಹೆಚ್ಚಿಸಲು ಬಂಡವಾಳವು ಮುಖ್ಯವಾಗಿದೆ ಎಂದು ಹೂಡಿಕೆದಾರರು ಸಲಹೆ ನೀಡುತ್ತಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಹೆಚ್ಚು ಮುಖ್ಯವಾದ ಅಂಶವೆಂದರೆ ಯುವಜನರು ತಮ್ಮ ಉತ್ಪನ್ನದ ಮೇಲೆ ಹೊಂದಿರುವ ದೃಢ ವಿಶ್ವಾಸವಾಗಿದೆ ಎಂದು ಅವರು ಒತ್ತಿ ಹೇಳಿದರು. ಕೆಲವೊಮ್ಮೆ ಈ ನಿಶ್ಚಯ ಎನ್ನುವುದು ಕೇವಲ ಲಾಭದಾಯಕ ನಿರ್ಗಮನ ಮತ್ತು ಯುನಿಕಾರ್ನ್ ತಯಾರಿಕೆಯ ನಡುವೆ ಇರುತ್ತದೆ ಎಂದರು.

ಮೊಬೈಲ್ ತಂತ್ರಜ್ಞಾನದಿಂದಾಗಿ ನಾವು ಲಕ್ಷಾಂತರ ಭಾರತೀಯರಿಗೆ ಶತಕೋಟಿ ಡಾಲರ್ ಮೌಲ್ಯದ ಸವಲತ್ತುಗಳನ್ನು ನೀಡಲು ಸಮರ್ಥರಾಗಿದ್ದೇವೆ, ಸಾಂಕ್ರಾಮಿಕದ ಸಮಯದಲ್ಲಿ ನಾವು ಬಡವರಿಗೆ ಮತ್ತು ದುರ್ಬಲರಿಗೆ ತ್ವರಿತವಾಗಿ ಸಹಾಯ ಮಾಡಲು ಇದರಿಂದ ಸಾಧ್ಯವಾಯಿತು ಮತ್ತು ಶತಕೋಟಿ ನಗದು ರಹಿತ ವಹಿವಾಟುಗಳನ್ನು ನಾವು ನೋಡುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು, ಔಪಚಾರಿಕೀಕರಣ ಮತ್ತು ಪಾರದರ್ಶಕತೆ ಮತ್ತು ಟೋಲ್ ಬೂತ್‌ ಗಳಲ್ಲಿ ನಾವು ಮುಖಾಮುಖಿ ಇಲ್ಲದೆ ಸುಗಮ ಸಂಚಾರವನ್ನು ಸಹ ಸಕ್ರಿಯಗೊಳಿಸಿದ್ದೇವೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಭಾರತದಲ್ಲಿ ಮೊಬೈಲ್ ಉತ್ಪಾದನೆಯಲ್ಲಿ ಯಶಸ್ಸು ಸಾಧಿಸಿದ ಬಗ್ಗೆ ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. ಮೊಬೈಲ್ ಉತ್ಪಾದನೆಗೆ ಭಾರತ ಹೆಚ್ಚು ವೆಚ್ಚಿನ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಟೆಲಿಕಾಂ ಉಪಕರಣಗಳ ತಯಾರಿಕೆಯನ್ನು ಉತ್ತೇಜಿಸಲು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ಅವರು ಹೇಳಿದರು. ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಹಳ್ಳಿಯಲ್ಲಿ ಫೈಬರ್-ಆಪ್ಟಿಕ್ ಕೇಬಲ್ ಸಂಪರ್ಕದೊಂದಿಗೆ ಹೈಸ್ಪೀಡ್ ಇಂಟರ್ ನೆಟ್ ತರಲು ಸರ್ಕಾರ ಉದ್ದೇಶಿಸಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ, ಅಂತಹ ಸಂಪರ್ಕದಿಂದ ಉತ್ತಮವಾಗಬಲ್ಲ - ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಎಡಪಂಥೀಯ ಉಗ್ರವಾದದಿಂದ ಬಾಧಿತ ಜಿಲ್ಲೆಗಳು, ಈಶಾನ್ಯ ರಾಜ್ಯಗಳು, ಲಕ್ಷದ್ವೀಪದ ನಡುಗಡ್ಡೆಗಳು ಇತ್ಯಾದಿ ಸ್ಥಳಗಳ ಮೇಲೆ ಗಮನ ಹರಿಸಲಾಗಿದೆ ಎಂದರು. ಸ್ಥಿರ ರೇಖೆಯ ಬ್ರಾಡ್‌ ಬ್ಯಾಂಡ್ ಸಂಪರ್ಕದ ಹೆಚ್ಚಿನ ಹರಡುವಿಕೆ ಮತ್ತು ಸಾರ್ವಜನಿಕ ವೈ-ಫೈ ಹಾಟ್‌ ಸ್ಪಾಟ್‌ ಗಳನ್ನು ಖಚಿತಪಡಿಸಲಾಗುತ್ತದೆ ಎಂದೂ ಅವರು ತಿಳಿಸಿದರು.

***(Release ID: 1679079) Visitor Counter : 46