ಪರಿಸರ ಮತ್ತು ಅರಣ್ಯ ಸಚಿವಾಲಯ
ಕೈಗಾರಿಕೆಗಳಲ್ಲಿ ಕಡಿಮೆ ಇಂಗಾಲ ಪರಿವರ್ತನೆಗೆ ಕೈಗಾರಿಕೆಗಳ ಸ್ವಯಂಪ್ರೇರಿತ ಪಾಲ್ಗೊಳ್ಳುವಿಕೆ ಅತ್ಯಂತ ನಿರ್ಣಾಯಕ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್
Posted On:
01 DEC 2020 5:46PM by PIB Bengaluru
ಹವಾಮಾನ ವೈಪರೀತ್ಯ ತಡೆ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿಗೆ ಜನರು ಮತ್ತು ಕೈಗಾರಿಕೆಗಳೇ ಪ್ರಮುಖ ಚಾಲನಾ ಶಕ್ತಿ ಎಂದು ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಉದ್ಯಮ ಪರಿವರ್ತನೆ ನಾಯಕತ್ವ ಶೃಂಗಸಭೆಯ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಜಾಗತಿಕವಾಗಿ ಹೊರಹಾಕುತ್ತಿರುವ ಇಂಗಾಲದಲ್ಲಿ ನೇರವಾಗಿ ಕೈಗಾರಿಕೆಗಳ ಪಾಲು ಶೇ.30ರಷ್ಟಿದೆ. ಹವಾಮಾನ ಬದಲಾವಣೆ ತಡೆಯಲು ಈ ಕೈಗಾರಿಕೆಗಳು ಕಡಿಮೆ ಇಂಗಾಲವನ್ನು ಹೊರ ಉಗುಳುವಂತೆ ಮಾಡುವುದು ಅತ್ಯಂತ ಪ್ರಮುಖವಾಗಿದೆ ಎಂದರು.
ಯಾವುದೇ ಆದೇಶವಿಲ್ಲದೆ, ದೇಶದ ಪ್ರಮುಖ ಕೈಗಾರಿಕೆಗಳು ಸ್ವಯಂಪ್ರೇರಿತವಾಗಿ ಇಂಗಾಲದ ಹೊರಹಾಕುವ ಪ್ರಮಾಣವನ್ನು ಗಣನೀಯವಾಗಿ ಕಡಿತಗೊಳಿಸಿವೆ ಮತ್ತು ಹಲವು ಕಂಪನಿಗಳು ದೇಶದಲ್ಲಿ ನವೀಕರಿಸಬಹುದಾದ ಇಂಧನ ಬಳಕೆ ವಿಧಾನಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತಿವೆ ಎಂದು ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದರು.
“ಇದೇ ಮಾರ್ಗದಲ್ಲಿ ನಾವು ಮುನ್ನಡೆಯಬೇಕಿದೆ. ಇಂಗಾಲದ ಹೊರಹಾಕುವ ಪ್ರಮಾಣವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕೈಗಾರಿಕೆಗಳ ಸ್ವಯಂ ಪಾಲ್ಗೊಳ್ಳುವಿಕೆಯನ್ನು ನಾವು ಉತ್ತೇಜಿಸಬೇಕಿದೆ” ಎಂದು ಪರಿಸರ ಸಚಿವರು ಹೇಳಿದರು.
ಹಣಕಾಸಿನ ವಿಷಯ ಕುರಿತಂತೆ ಮಾತನಾಡಿದ ಶ್ರೀ ಜಾವಡೇಕರ್, ದೊಡ್ಡ ಪ್ರಮಾಣದಲ್ಲಿ ನಿಧಿಗಳನ್ನು ಕ್ರೂಢೀಕರಿಸಬೇಕಿದೆ ಮತ್ತು ಹವಾಮಾನ ಬದಲಾವಣೆ ವಿಷಯದ ನಿರ್ವಹಣೆಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಿದೆ ಎಂದರು.
ಕೈಗೆಟಕುವಂತಹ ತಂತ್ರಜ್ಞಾನಗಳು ಮತ್ತು ಸಂಶೋಧನಾ ಅಧ್ಯಯನಗಳನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಬೇಕು. ಆ ಮೂಲಕ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಅವರು ಕೆಲಸ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಪ್ರತಿಯೊಂದು ದೇಶವೂ, ಪ್ರತಿಯೊಂದು ಹವಾಮಾನ ಕ್ರಿಯೆಗೂ ವೆಚ್ಚವಾಗುತ್ತದೆ ಎಂಬುದನ್ನು ಮರೆಯಬಾರದು, ನಾವು ಹವಾಮಾನ ವೈಪರೀತ್ಯವನ್ನು ವಿಪತ್ತು ಎಂದು ಪರಿಗಣಿಸಿದರೆ ಅಂತಹ ಸಂದರ್ಭದಲ್ಲಿ ಈ ವಿಪತ್ತುಗಳಿಂದ ಯಾರೊಬ್ಬರಿಗೂ ಲಾಭವಾಗುವುದಿಲ್ಲ ಎಂದು ಶ್ರೀ ಜಾವಡೇಕರ್ ಹೇಳಿದರು. ಇದರಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಡವರ ಮೇಲೆ ದುಪ್ಪಟ್ಟು ತೆರಿಗೆ ವಿಧಿಸಿದಂತಾಗುತ್ತದೆ, ಇದು ಹವಾಮಾನ ನ್ಯಾಯವಲ್ಲ ಎಂದು ಸಚಿವರು ಹೇಳಿದರು.
ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಸ್ವೀಡನ್ ನ ಉಪಪ್ರಧಾನಮಂತ್ರಿ ಇಸಾಬೆಲ್ಲೆ ಲೆವಿನ್ ಭಾರತ ಮತ್ತು ಸ್ವೀಡನ್ ಹವಾಮಾನ ವೈಪರೀತ್ಯ ವಿಚಾರವನ್ನು ಎದುರಿಸಲು ಜಂಟಿಯಾಗಿ ಕಾರ್ಯೋನ್ಮುಖವಾಗಬೇಕಿದೆ ಎಂದರು. ಅವರು ಇಂಗಾಲ ಹೊರ ಹಾಕುವ ಪ್ರಮಾಣವನ್ನು ತಗ್ಗಿಸಲು ಉತ್ತಮ ಪದ್ಧತಿಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಇಂಗಾಲದ ಮಾಲಿನ್ಯವನ್ನು ತಡೆಯಲು ಆರ್ಥಿಕ ಸಂಪನ್ಮೂಲವನ್ನು ಕ್ರೂಢೀಕರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಸ್ವೀಡನ್ ಉಪಪ್ರಧಾನಮಂತ್ರಿ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸ್ವೀಡನ್ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಉದ್ಯಮ ಪರಿವರ್ತನೆಯ ನಾಯಕತ್ವ ಗುಂಪು(ಲೀಡ್ ಐಟಿ) ಆಯೋಜಿಸಿತ್ತು. ಲೀಡ್ ಐಟಿ ಇದನ್ನು ಭಾರತ ಮತ್ತು ಸ್ವೀಡನ್ ವಿಶ್ವ ಆರ್ಥಿಕ ವೇದಿಕೆಯ ಸಹಯೋಗದೊಂದಿಗೆ 2019ರಲ್ಲಿ ಸ್ಟಾಕ್ ಹೋಮ್ ಪರಿಸರ ಸಂಸ್ಥೆಯ ಬೆಂಬಲದೊಂದಿಗೆ ವಿಶ್ವ ಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಗಳ ಹವಾಮಾನ ಕ್ರಿಯಾ ಶೃಂಗಸಭೆ ವೇಳೆ ಆರಂಭಿಸಲಾಗಿತ್ತು. ಸದ್ಯ ಈ ಗುಂಪಿನಲ್ಲಿ 13 ರಾಷ್ಟ್ರಗಳ ಸದಸ್ಯರಿದ್ದಾರೆ ಮತ್ತು ಭಾರತ ದಾಲ್ಮಿಯಾ ಸಿಮೆಂಟ್, ಮಹಿಂದ್ರಾ ಗ್ರೂಪ್ ಮತ್ತು ಸ್ಪೈಸ್ ಜೆಟ್ ಸೇರಿದಂತೆ 15 ಕಂಪನಿಗಳಿದ್ದು, ಅವುಗಳೆಲ್ಲಾ ಇಂಗಾಲದ ಪ್ರಮಾಣವನ್ನು ತಗ್ಗಿಸುವ ಕೈಗಾರಿಕೆಗಳ ಪರಿವರ್ತನೆಗೆ ಬದ್ಧತೆಯನ್ನು ಹೊಂದಿವೆ.
ಲೀಡ್ ಐಟಿ ಈ ವರ್ಚುವಲ್ ಕೈಗಾರಿಕಾ ನಾಯಕತ್ವ ಶೃಂಗಸಭೆಯನ್ನು ಪ್ಯಾರಿಸ್ ಒಪ್ಪಂದವಾಗಿ ಐದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೈಗಾರಿಕೆಗಳ ಪರಿವರ್ತನೆ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಉದ್ಯಮ ಪರಿವರ್ತನೆಗಾಗಿ ಬೇಡಿಕೆಯನ್ನು ವೃದ್ಧಿಸಲು ಮತ್ತು ಪ್ರಸರದ ವೇಗವರ್ಧನೆ ಮತ್ತು ಕೈಗಾರಿಕೆಗಳ ಪರಿವರ್ತನೆಗೆ ತಂತ್ರಜ್ಞಾನಗಳನ್ನು ವೃದ್ಧಿಸುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.
ಈ ವರ್ಚುವಲ್ ಕಾರ್ಯಕ್ರಮದಲ್ಲಿ ಜಾಗತಿಕ ಕಂಪನಿಗಳ ಮುಖ್ಯಸ್ಥರಾದ ಸ್ಕ್ಯಾನಿಯಾ, ಎಫ್ಎಲ್ಎಸ್ ಮಿಡ್ತ್, ಎಲ್ ಕೆಎಬಿ, ಲಾಫಾರ್ಜ್ ಹಾಲ್ಸಿಮ್ಸ್, ಎಸ್ಎಸ್ಎಬಿ, ವಾಟೇನ್ ಫಾಲ್ ಮತ್ತು ಭಾರತೀಯ ಕಂಪನಿಗಳಾದ ದಾಲ್ಮಿಯಾ ಮತ್ತು ಮಹಿಂದ್ರಾ ಗುಂಪುಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮದಲ್ಲಿ ಜಾಗತಿಕ ಚಿಂತನಾ ತಂಡಗಳು ಮತ್ತು ಯುಕೆ, ಲುಕ್ಸೆಂಬರ್ಗ್, ಐರೋಪ್ಯ ಒಕ್ಕೂಟ ಮತ್ತು ಜರ್ಮನಿ ಮತ್ತಿತರ ರಾಷ್ಟ್ರಗಳ ಸಚಿವರು/ಪ್ರತಿನಿಧಿಗಳು ಭಾಗವಹಿಸಿದ್ದರು.
***
(Release ID: 1677646)
Visitor Counter : 236