ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ರಾಷ್ಟ್ರೀಯ ಶಿಕ್ಷಣ ನೀತಿ 2020, ಸಂವಿಧಾನದ ಮೀಸಲಾತಿ ನೀತಿಯನ್ನು ಎತ್ತಿಹಿಡಿಯುತ್ತದೆ - ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’

Posted On: 01 DEC 2020 3:45PM by PIB Bengaluru

2020ರ ರಾಷ್ಟ್ರೀಯ ಶಿಕ್ಷಣ ನೀತಿ, ಭಾರತ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೀಸಲಾತಿ ನೀತಿಯನ್ನು ಎತ್ತಿಹಿಡಿಯುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಇಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಅವರು ಸವಿವರವಾದ ಪತ್ರ ಬರೆದಿದ್ದಾರೆ. ಪತ್ರದ ಪಠ್ಯ ಇಲ್ಲಿದೆ:

"ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೀಸಲಾತಿ ನೀತಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿ-2020 ಎತ್ತಿ ಹಿಡಿಯುತ್ತದೆಯೇ ಎಂದು ಪ್ರಶ್ನಿಸಿ 2020ರ ನವೆಂಬರ್ 24ರ ಹೊತ್ತಿಗೆ ಪ್ರಕಟವಾದ ಪಿಟಿಐಗೆ ಸೇರಿದ ವರದಿಯು ಸಮಯೋಚಿತವಾಗಿದೆ. ಪ್ರಕಟವಾದ ಲೇಖನದ ಆಧಾರದಲ್ಲಿ, ನನ್ನ ಕೆಲವು ರಾಜಕೀಯ ಮಿತ್ರರು ರಾಷ್ಟ್ರೀಯ ಶಿಕ್ಷಣ ನೀತಿ- ಎನ್‌ಇಪಿ -2020 ದೇಶದ ಶೈಕ್ಷಣಿಕ ವಲಯಲ್ಲಿ ಮೀಸಲಾತಿ ಅವಕಾಶಗಳನ್ನು ದುರ್ಬಲಗೊಳಿಸಬಹುದು ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಎನ್ಇಪಿ -2020 ರಲ್ಲಿ, ಅಂತಹ ಯಾವುದೇ ಉದ್ದೇಶ ಇಲ್ಲ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಭಾರತ ಸಂವಿಧಾನದ 15 ಮತ್ತು 16 ನೇ ವಿಧಿಗಳಲ್ಲಿ ಪ್ರತಿಪಾದಿಸಲಾಗಿರುವ ಮೀಸಲಾತಿಯನ್ನು ಈ ನೀತಿಯು ಬಲವಾಗಿ ದೃಢಪಡಿಸುತ್ತದೆ. ಭಾರತ ಸಂವಿಧಾನದ ಚೌಕಟ್ಟಿನೊಳಗೇ ಇರುವ ಎನ್‌ಇಪಿ -2020 ರಲ್ಲಿ ಮೀಸಲಾತಿ ನಿಬಂಧನೆಗಳ ಬಗ್ಗೆ ಮತ್ತೆ ಹೇಳುವ ಅಗತ್ಯ ಇಲ್ಲ ಎಂದು ನಾನು ಭಾವಿಸುತ್ತೇನೆ.

ಎನ್ಇಪಿ -2020 ಘೋಷಣೆಯ ನಂತರ ಜೆಇಇ, ನೀಟ್, ಯುಜಿಸಿ-ನೆಟ್, ಇಗ್ನೌ ಮುಂತಾದ ವಿವಿಧ ಪ್ರವೇಶ ಪರೀಕ್ಷೆಗಳನ್ನು ಆಯೋಜಿಸಲಾಗಿದೆ ಮತ್ತು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ಸಹ ನಡೆದಿವೆ. ಆದರೆ ಇದುವರೆಗೆ ಮೀಸಲಾತಿ ಅವಕಾಶವನ್ನು ದುರ್ಬಲಗೊಳಿಸಿರುವ ಬಗ್ಗೆ ಒಂದೇ ಒಂದು ದೂರೂ ಬಂದಿಲ್ಲ. ಎನ್ಇಪಿಯನ್ನು ಘೋಷಿಸಿದ 4-5 ತಿಂಗಳ ನಂತರ ಯಾವುದೇ ಸತ್ಯಾಂಶವಿಲ್ಲದ ಆತಂಕಗಳನ್ನು ವ್ಯಕ್ತಪಡಿಸುತ್ತಿರುವುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಎಸ್‌ಸಿ, ಎಸ್‌ಟಿ, ಒಬಿಸಿ, ದಿವ್ಯಾಂಗ ಮತ್ತು ಇತರ ಸಾಮಾಜಿಕ-ಆರ್ಥಿಕ ಹಿಂದುಳಿದ ವರ್ಗಗಳ ಶೈಕ್ಷಣಿಕ ಸೇರ್ಪಡೆಯ ಹೊಸ ಪ್ರಯತ್ನಗಳೊಂದಿಗೆ ಈಗ ಯಶಸ್ವಿಯಾಗಿ ನಡೆಯುತ್ತಿರುವ ಕಾರ್ಯಕ್ರಮಗಳು ಮತ್ತು ನೀತಿಗಳು ಮುಂದುವರಿಯುತ್ತವೆ ಎಂದು ನಾನು ಪುನರುಚ್ಚರಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ನಮಗೆ ಯಾವುದೇ ದೂರು ಬಂದರೆ ನನ್ನ ಸಚಿವಾಲಯವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟ ಭರವಸೆ ನೀಡುತ್ತೇನೆ.

ಎನ್ಇಪಿ -2020, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಶೈಕ್ಷಣಿಕ ಆಡಳಿತಗಾರರು, ಶಿಕ್ಷಣ ತಜ್ಞರು, ಬೋಧಕೇತರ ಸಿಬ್ಬಂದಿಯಂತಹ ಸಮಾಜದ ಎಲ್ಲಾ ಪಾಲುದಾರರೊಂದಿಗೆ ನಡೆದ ತೀವ್ರ ಸಮಾಲೋಚನೆಗಳ ನಂತರ ಹೊರಹೊಮ್ಮಿದೆ ಮತ್ತು ವಿಕಸನಗೊಂಡಿದೆ. ತಳಮಟ್ಟದ ಸಮಾಲೋಚನೆಗಳಾದ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟ, ವಲಯ ಮಟ್ಟ ಮತ್ತು ರಾಷ್ಟ್ರಮಟ್ಟದವರೆಗೂ ಸಮಾಲೋಚನೆಗಳು ನಡೆದಿವೆ. ವಿಷಯ ತಜ್ಞರ ಸಮಾಲೋಚನೆಗಳು, ಎನ್‌ಇಪಿಯ ಮೌಲ್ಯಮಾಪನ ಸಮಿತಿ, ಎನ್‌ಇಪಿ ಕರಡು ಸಮಿತಿ, MyGov.in ಮೂಲಕ ಆನ್‌ಲೈನ್ ಸಮಾಲೋಚನೆ ಮುಂತಾದವು ನಡೆದಿವೆ. ಈ ದೃಷ್ಟಿಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ - ಸಬ್ಕಾ ಸಾಥ್, ಸಬ್ಕಾ ವಿಕಾಸ್ ತತ್ವಕ್ಕನುಗುಣವಾಗಿ ಇದು ಜನರ ದಾಖಲೆಯಾಗಿ ರೂಪುಗೊಂಡಿದೆ. ಅದಕ್ಕಾಗಿಯೇ ಈ ಎನ್ಇಪಿಯು ನಮ್ಮ ಸಮಾಜದ ಎಲ್ಲಾ ವರ್ಗಗಳ ಶೈಕ್ಷಣಿಕ ಸೇರ್ಪಡೆಗೆ ಬದ್ಧವಾಗಿ ಹೊರಹೊಮ್ಮಿದೆ.

ಎಸ್‌ಸಿಗಳು, ಎಸ್‌ಟಿಗಳು, ಒಬಿಸಿಗಳು, ದಿವ್ಯಾಂಗರು, ಹೆಣ್ಣು ಮಕ್ಕಳು, ಮಹಿಳೆಯರು, ತೃತೀಯ ಲಿಂಗಿಗಳು, ಅಲ್ಪಸಂಖ್ಯಾತರು, ಭೌಗೋಳಿಕವಾಗಿ ಹಿಂದುಳಿದ ಪ್ರದೇಶದವರು ಮತ್ತು ಇತರ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಸೇರ್ಪಡೆಗೆ ವಿಶೇಷ ಒತ್ತು ನೀಡಲು ಎನ್‌ಇಪಿಯು ಸಾಮಾಜಿಕ-ಆರ್ಥಿಕ ವಂಚಿತ ವರ್ಗಗಳ (ಎಸ್‌ಇಡಿಜಿ) ಕ್ಲಸ್ಟರ್ ರೂಪಿಸಿದೆ. ಎಸ್‌ಇಡಿಜಿ ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸಲು, ಶೈಕ್ಷಣಿಕವಾಗಿ ಹಿಂದುಳಿದ ಆಧಾರದ ಮೇಲೆ ಎಸ್‌ಸಿ, ಎಸ್‌ಟಿ, ಒಬಿಸಿ, ದಿವ್ಯಾಂಗ್ ಮತ್ತು ಇತರ ವಂಚಿತ ಸಮುದಾಯಗಳಿಗೆ ವಿವಿಧ ವಿಶೇಷ ಶೈಕ್ಷಣಿಕ ವಲಯಗಳನ್ನು ರೂಪಿಸುವ ನಿಬಂಧನೆಯನ್ನು ಎನ್‌ಇಪಿ -2020 ಹೊಂದಿದೆ. ಈ ಎಸ್‌ಇಜಡ್‌ಗಳಲ್ಲಿ ಹಿಂದುಳಿದ ಸಮುದಾಯಗಳಲ್ಲಿ ಕೆಲಸ ಮಾಡುವ ಶೈಕ್ಷಣಿಕ ನಾಯಕರನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದೊಂದು ಅನನ್ಯ ಕಾರ್ಯಕ್ರಮವಾಗಿದ್ದು, ಎಸ್‌ಡಿಜಿಗಳ ಗುಂಪಿನಿಂದ ವಂಚಿತ ವರ್ಗಗಳ ಶೈಕ್ಷಣಿಕ ಸೇರ್ಪಡೆಗೆ ಹೆಚ್ಚು ಸಂವೇದನಾಶೀಲವಾದ ಶೈಕ್ಷಣಿಕ ಕಾರ್ಯಪಡೆಯು ವಿಕಸನಗೊಳ್ಳಲು ಸಹಾಯ ಮಾಡುತ್ತದೆ. ಈ ಯೋಜನೆಯು ಎಸ್‌ಇಡಿಜಿ ಗುಂಪುಗಳಿಂದ ಹೊರಹೊಮ್ಮುವ ಶೈಕ್ಷಣಿಕ ಮುಖಂಡರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ವಿದ್ಯಾರ್ಥಿವೇತನ ಯೋಜನೆಗಳು, ಸೈಕಲ್ ವಿತರಣಾ ಯೋಜನೆಗಳು, ವಂಚಿತರ ಶೈಕ್ಷಣಿಕ ಸೇರ್ಪಡೆಗಾಗಿ ನೇರ ನಗದು ವರ್ಗಾವಣೆ ಮತ್ತು ಇತರ ಅನೇಕ ಸರ್ಕಾರದ ನೆರವಿನ ಯೋಜನೆಗಳು ಎಸ್‌ಇಡಿಜಿ ವರ್ಗಗಳ ಶೈಕ್ಷಣಿಕ ಸೇರ್ಪಡೆಗೆ ಸಹಾಯ ಮಾಡುತ್ತವೆ.

ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಶೈಕ್ಷಣಿಕ ಸೇರ್ಪಡೆಗಾಗಿ, ಲಿಂಗ ಆಧಾರಿತ ವಂಚಿತ ಸಾಮಾಜಿಕ ಮತ್ತು ಜೈವಿಕ ಗುಂಪುಗಳಿಗೆ ವಿವಿಧ ಬೆಂಬಲ ಯೋಜನೆಗಳನ್ನು ಪ್ರಾರಂಭಿಸಲು ‘ಲಿಂಗ-ಸೇರ್ಪಡೆ ನಿಧಿ’ರೂಪಿಸಲು ಎನ್‌ಇಪಿ ಅವಕಾಶ ನೀಡಿದೆ. ಎನ್‌ಇಪಿ-2020 ಅಲ್ಪಸಂಖ್ಯಾತರನ್ನು ಬೆಂಬಲಿಸಲು, ಅವರ ಶೈಕ್ಷಣಿಕ ಉಪಕ್ರಮಗಳು ಮತ್ತು ರಾಷ್ಟ್ರದ ಶೈಕ್ಷಣಿಕ ಕ್ಷೇತ್ರದಲ್ಲಿ ಅವರನ್ನು ಸೇರಿಸಲು ಅನೇಕ ಅವಕಾಶಗಳನ್ನು ಒದಗಿಸಿದೆ. ಈ ನೀತಿಯಲ್ಲಿ ಅಲ್ಪಸಂಖ್ಯಾತ ಶಾಲೆಗಳು ಮತ್ತು ಕಾಲೇಜುಗಳನ್ನು ತೆರೆಯಲು ಉತ್ತೇಜನ ನೀಡಲಾಗುವುದು. ಎನ್‌ಇಪಿ -2020 ರ ಅಡಿಯಲ್ಲಿ ಪರ್ಯಾಯ ಮಾದರಿಯ ಶಾಲೆಗಳನ್ನು ಸಹ ಬೆಂಬಲಿಸಲಾಗುತ್ತದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಭಾಗವಹಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ವಿಶೇಷ ವಿದ್ಯಾರ್ಥಿವೇತನವನ್ನು ಒದಗಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ನೀತಿಗಳು ಮತ್ತು ಯೋಜನೆಗಳನ್ನು ನಮ್ಮ ಶೈಕ್ಷಣಿಕ ನೀತಿ ನಿರೂಪಕರು ಎನ್‌ಇಪಿ ಚೌಕಟ್ಟಿನಲ್ಲಿ ಸೃಜನಾತ್ಮಕವಾಗಿ ರೂಪಿಸಿದ್ದಾರೆ. ಎಸ್‌ಸಿಗಳು, ಎಸ್‌ಟಿಗಳು, ಒಬಿಸಿಗಳು, ದಿವ್ಯಾಂಗರು ಮತ್ತು ಇತರ ವಂಚಿತ ವರ್ಗಗಳ ಶೈಕ್ಷಣಿಕ ಸೇರ್ಪಡೆಗಾಗಿ ಈ ಹೊಸ ನೀತಿಯು ಭಾರತದ ಶಿಕ್ಷಣದ ಇತಿಹಾಸದಲ್ಲಿಯೇ ಮಹತ್ವದ್ದಾಗಲಿದೆ ಎಂದು ನಾನು ಬಲವಾಗಿ ನಂಬಿದ್ದೇನೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 10 ವರ್ಷಗಳಿಗೆ ವಿಸ್ತರಿಸುವ ಸಂವಿಧಾನ ತಿದ್ದುಪಡಿಯನ್ನು ಅಂಗೀಕರಿಸುವ ಮೂಲಕ ಸರ್ಕಾರವು ತನ್ನ ಬದ್ಧತೆಯನ್ನು ತೋರಿದೆ ಎಂಬುದನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ.

ಈ ಐತಿಹಾಸಿಕ ಹೊಸ ನೀತಿಯ ಬಗ್ಗೆ ಇತರರು ಹೊಂದಿರಬಹುದಾದ ತಪ್ಪು ಅನಿಸಿಕೆಗಳನ್ನು ನನ್ನ ಈ ಅಭಿಪ್ರಾಯಗಳು ಸರಿಪಡಿಸಬಹುದು. ದೇಶದ ಜನರಿಗೆ ಸೂಕ್ತ ಮಾಹಿತಿಯನ್ನು ನೀಡುವ ಸಲುವಾಗಿ ಇದನ್ನು ಪ್ರಕಟಿಸಬಹುದೆಂದು ನಾನು ಭಾವಿಸಿದ್ದೇನೆ.”

- ರಮೇಶ್ ಪೋಖ್ರಿಯಾಲ್ 'ನಿಶಾಂಕ್'

***



(Release ID: 1677524) Visitor Counter : 664