ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಹೆದ್ದಾರಿ -19 ರ ವಾರಣಾಸಿ-ಪ್ರಯಾಗರಾಜ್ ವಿಭಾಗದ ಆರು ಪಥಗಳ ಯೋಜನೆಯನ್ನು ಉದ್ಘಾಟಿಸಿದ ಪ್ರಧಾನಿ


ದಶಕಗಳಷ್ಟು ಕಾಲ ನಡೆದ ವಂಚನೆಯು ರೈತರನ್ನು ಭಯಭೀತರನ್ನಾಗಿಸಿದೆ, ಆದರೆ ಈಗ ಯಾವುದೇ ವಂಚನೆಯಿಲ್ಲ, ಗಂಗಾಜಲದಂತೆ ಪರಿಶುದ್ಧ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ

ಹೊಸ ಕೃಷಿ ಸುಧಾರಣೆಗಳು ರೈತರಿಗೆ ಹೊಸ ಆಯ್ಕೆ ಮತ್ತು ಕಾನೂನು ರಕ್ಷಣೆಯನ್ನು ಒದಗಿಸಿವೆ ಮತ್ತು ಹಳೆಯ ವ್ಯವಸ್ಥೆಯೊಂದಿಗೆ ಮುಂದುವರಿಯುವ ಅವಕಾಶವೂ ಇದೆ

ಸರ್ಕಾರವು ಎಂಎಸ್ ಪಿ ಮತ್ತು ಮಂಡಿ ಎರಡನ್ನೂ ಬಲಪಡಿಸಿದೆ: ಪ್ರಧಾನಿ ನರೇಂದ್ರ ಮೋದಿ

Posted On: 30 NOV 2020 4:24PM by PIB Bengaluru

ರಾಷ್ಟ್ರೀಯ ಹೆದ್ದಾರಿ -19 ರ ವಾರಣಾಸಿ - ಪ್ರಯಾಗರಾಜ್ ವಿಭಾಗದ ಆರು ಪಥಗಳ ಅಗಲೀಕರಣ ಯೋಜನೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ವಾರಣಾಸಿಯಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಹಿಂದೆ ಮಾಡಿದ ಕಾಶಿಯ ಸೌಂದರ್ಯೀಕರಣ ಕೆಲಸಗಳ ಜೊತೆಗೆ ಸಂಪರ್ಕದ ಕೆಲಸಗಳ ಫಲಿತಾಂಶವನ್ನೂ ನಾವು ಈಗ ನೋಡುತ್ತಿದ್ದೇವೆ. ಹೊಸ ಹೆದ್ದಾರಿಗಳು, ಮೇಲ್ಸೇತುವೆಗಳು, ವಾರಣಾಸಿ ಮತ್ತು ಸುತ್ತಮುತ್ತಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ರಸ್ತೆಗಳ ಅಗಲೀಕರಣದಂತಹ ಅಭೂತಪೂರ್ವ ಕೆಲಸಗಳು ಆಗಿವೆ ಎಂದು ಅವರು ಹೇಳಿದರು.

ಈ ಪ್ರದೇಶದಲ್ಲಿ ಆಧುನಿಕ ಸಂಪರ್ಕವು ವಿಸ್ತರಿಸಿದಾಗ ನಮ್ಮ ರೈತರಿಗೆ ಹೆಚ್ಚಿನ ಲಾಭವಾಗುತ್ತದೆ ಎಂದು ಪ್ರಧಾನಿ ತಿಳಿಸಿದರು. ಕೆಲವು ವರ್ಷಗಳಲ್ಲಿ, ಹಳ್ಳಿಗಳಲ್ಲಿ ಆಧುನಿಕ ರಸ್ತೆಗಳ ಜೊತೆಗೆ ಕೋಲ್ಡ್ ಸ್ಟೋರೇಜ್ ನಂತಹ ಮೂಲಸೌಕರ್ಯಗಳನ್ನು ಸೃಷ್ಟಿಸಲಾಗುವುದು. ಇದಕ್ಕಾಗಿ 1 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಸಹ ರಚಿಸಲಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಕೆಲಸಗಳು ಮತ್ತು ಆಧುನಿಕ ಮೂಲಸೌಕರ್ಯಗಳಿಂದ ರೈತರು ಪ್ರಯೋಜನ ಪಡೆಯುತ್ತಿರುವುದಕ್ಕೆ ಪ್ರಧಾನಿ ಉದಾಹರಣೆಯೊಂದನ್ನು ನೀಡಿದರು. ರೈತರ ಆದಾಯವನ್ನು ಹೆಚ್ಚಿಸಲು 2 ವರ್ಷಗಳ ಹಿಂದೆ ಚಾಂದೌಲಿಯಲ್ಲಿ ಕಪ್ಪು ಅಕ್ಕಿ ಪರಿಚಯಿಸಲಾಯಿತು. ಕಳೆದ ವರ್ಷ, ರೈತ ಸಮಿತಿಯೊಂದನ್ನು ರಚಿಸಲಾಯಿತು ಮತ್ತು ಖಾರಿಫ್ ಹಂಗಾಮಿನಲ್ಲಿ ಇದನ್ನು ಬೆಳೆಯಲು ಸುಮಾರು 400 ರೈತರಿಗೆ ಈ ಭತ್ತವನ್ನು ಒದಗಿಸಲಾಯಿತು. ಸಾಮಾನ್ಯ ಅಕ್ಕಿ ಕೆ.ಜಿ.ಗೆ 35-40 ರೂ.ಗೆ ಮಾರಾಟವಾದರೆ, ಈ ಕಪ್ಪು ಅಕ್ಕಿಯನ್ನು ಕೆ.ಜಿಗೆ 300 ರೂ.ನಂತೆ ಮಾರಾಟ ಮಾಡಲಾಯಿತು. ಮೊದಲ ಬಾರಿಗೆ, ಈ ಅಕ್ಕಿಯನ್ನು ಆಸ್ಟ್ರೇಲಿಯಾಕ್ಕೆ ರಫ್ತು ಮಾಡಲಾಗಿದೆ, ಅದೂ ಸಹ ಕೆ.ಜಿ.ಗೆ 800 ನಲ್ಲಿ ಎಂದು ಪ್ರಧಾನಿ ವಿವರಿಸಿದರು.

ಭಾರತದ ಕೃಷಿ ಉತ್ಪನ್ನಗಳು ವಿಶ್ವದಾದ್ಯಂತ ಹೆಸರು ಮಾಡಿವೆ ಎಂದು ಪ್ರಧಾನಿ ಹೇಳಿದರು. ಈ ದೊಡ್ಡ ಮಾರುಕಟ್ಟೆ ಮತ್ತು ಹೆಚ್ಚಿನ ಬೆಲೆಗಳು ರೈತರಿಗೆ ಏಕೆ ಲಭ್ಯವಿರಬಾರದು ಎಂದು ಅವರು ಕೇಳಿದರು. ಹೊಸ ಕೃಷಿ ಸುಧಾರಣೆಗಳು ರೈತರಿಗೆ ಹೊಸ ಆಯ್ಕೆಗಳನ್ನು ಮತ್ತು ಹೊಸ ಕಾನೂನು ರಕ್ಷಣೆಯನ್ನು ನೀಡಿವೆ ಮತ್ತು ಅದೇ ಸಮಯದಲ್ಲಿ ಹಳೆಯ ವ್ಯವಸ್ಥೆಯೊಂದಿಗೆ ಮುಂದುವರಿಯುವ ಅವಕಾಶವನ್ನೂ ನೀಡಿವೆ ಎಂದು ಅವರು ಹೇಳಿದರು. ಈ ಮೊದಲು ಮಂಡಿಯ ಹೊರಗಿನ ವಹಿವಾಟುಗಳು ಕಾನೂನುಬಾಹಿರವಾಗಿದ್ದವು. ಆದರೆ ಈಗ ಸಣ್ಣ ರೈತರು ಮಂಡಿಯ ಹೊರಗಿನ ವಹಿವಾಟಿನ ಬಗ್ಗೆ ಕಾನೂನು ಕ್ರಮ ಜರುಗಿಸಬಹುದು ಎಂದು ಅವರು ಹೇಳಿದರು.

ಸರ್ಕಾರಗಳು ನೀತಿ, ಕಾನೂನು ಮತ್ತು ನಿಬಂಧನೆಗಳನ್ನು ರೂಪಿಸುತ್ತವೆ ಎಂದು ಪ್ರಧಾನಿ ಹೇಳಿದರು. ಇತ್ತೀಚೆಗೆ ವ್ಯಕ್ತವಾಗುತ್ತಿರುವ ವಿರೋಧಗಳನ್ನು ಟೀಕಿಸಿದ ಅವರು, ಈ ಹಿಂದೆಯೂ ಸರ್ಕಾರದ ನಿರ್ಧಾರಗಳನ್ನು ವಿರೋಧಿಸಲಾಗಿದೆ. ಆದರೆ ಈಗಿನ ಟೀಕೆ ಕೇವಲ ಆತಂಕದ ಮೇಲೆ ಆಧಾರಿತವಾಗಿದೆ ಎಂದು ಹೇಳಿದರು. ಇದುವರೆಗೂ ಆಗಿಲ್ಲದ ಹಾಗೂ ಎಂದಿಗೂ ಸಂಭವಿಸಿದ ವಿಷಯಗಳ ಬಗ್ಗೆ ಸಮಾಜದಲ್ಲಿ ಗೊಂದಲ ಉಂಟಾಗಿದೆ ಎಂದರು. ದಶಕಗಳಿಂದ ಸತತವಾಗಿ ರೈತರಿಗೆ ಮೋಸ ಮಾಡಿದವರು ಇವರೇ ಎಂದು ಅವರು ಹೇಳಿದರು.

ಹಿಂದಿನವರ ಇಬ್ಬಂದಿತನದ ಬಗ್ಗೆ ಮುಂದುವರೆದು ಮಾತನಾಡಿದ ಅವರು, ಎಂಎಸ್ಪಿಯನ್ನು ಘೋಷಿಸಲಾಗುತ್ತಿತ್ತು, ಆದರೆ ಬಹಳ ಕಡಿಮೆ ಎಂಎಸ್ಪಿ ಖರೀದಿ ನಡೆಯುತ್ತಿತ್ತು ಎಂದರು. ಈ ವಂಚನೆ ಹಲವು ವರ್ಷಗಳ ಕಾಲ ನಡೆಯಿತು. ರೈತರ ಹೆಸರಿನಲ್ಲಿ ದೊಡ್ಡ ಸಾಲ ಮನ್ನಾ ಪ್ಯಾಕೇಜ್‌ಗಳನ್ನು ಘೋಷಿಸಿದರೂ ಅವು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ತಲುಪಲಿಲ್ಲ. ರೈತರ ಹೆಸರಿನಲ್ಲಿ ದೊಡ್ಡ ಯೋಜನೆಗಳನ್ನು ಘೋಷಿಸಲಾಯಿತು. ಆದರೆ 1 ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ರೈತನನ್ನು ತಲುಪುತ್ತದೆ ಸ್ವತಃ ಹಿಂದಿನ ಸರ್ಕಾರಗಳೇ ಎಂದು ನಂಬಿದ್ದವು, ಇದು ಯೋಜನೆಗಳ ಹೆಸರಿನಲ್ಲಿ ನಡೆದ ವಂಚನೆಯಾಗಿದೆ ಎಂದು ಪ್ರಧಾನಿ ಹೇಳಿದರು.

ಇತಿಹಾಸವು ಮೋಸದಿಂದ ಕೂಡಿರುವಾಗ, ಎರಡು ವಿಷಯಗಳು ಸಹಜವಾಗಿರುತ್ತವೆ. ಮೊದಲನೆಯದು, ಸರ್ಕಾರಗಳ ಭರವಸೆಗಳ ಬಗ್ಗೆ ರೈತರು ಭಯಭೀತರಾಗುವುದರ ಹಿಂದೆ ದಶಕಗಳ ಇತಿಹಾಸವಿದೆ. ಎರಡನೆಯದಾಗಿ, ವಾಗ್ದಾನಗಳನ್ನು ಮುರಿಯುವವರಿಗೆ, ಮೊದಲು ಆಗಿದ್ದು ಮುಂದೆಯೂ ಆಗಲಿದೆ ಎಂದು ಸುಳ್ಳನ್ನು ಹರಡುವುದು ಅವಶ್ಯವಾಗಿದೆ. ಈ ಸರ್ಕಾರದ ದಾಖಲೆಯನ್ನು ನೀವು ನೋಡಿದರೆ, ಸತ್ಯವು ತಂತಾನೇ ತಿಳಿಯುತ್ತದೆ ಎಂದು ಅವರು ಹೇಳಿದರು. ಯೂರಿಯಾದ ಕಾಳದಂಧೆಯನ್ನು ನಿಲ್ಲಿಸಿ ರೈತರಿಗೆ ಸಾಕಷ್ಟು ಯೂರಿಯಾವನ್ನು ನೀಡುವ ಭರವಸೆಯನ್ನು ಸರ್ಕಾರ ಈಡೇರಿಸಿತು ಎಂದು ಅವರು ಹೇಳಿದರು. ಸ್ವಾಮಿನಾಥನ್ ಆಯೋಗದ ಶಿಫಾರಸಿಗೆ ಅನುಗುಣವಾಗಿ ಎಂಎಸ್ಪಿಯನ್ನು 1.5 ಪಟ್ಟು ವೆಚ್ಚದಲ್ಲಿ ನಿಗದಿಪಡಿಸುವ ಭರವಸೆಯನ್ನು ಸರ್ಕಾರ ಈಡೆರಿಸಿದೆ ಎಂದು ಅವರು ಹೇಳಿದರು. ಈ ಭರವಸೆಗಳು ಕೇವಲ ಕಾಗದದ ಮೇಲೆ ಈಡೇರಿಸಿಲ್ಲ, ಬದಲಿಗೆ, ರೈತರ ಬ್ಯಾಂಕ್ ಖಾತೆಗೆ ತಲುಪಿಸಲಾಗಿದೆ ಎಂದು ಅವರು ತಿಳಿಸಿದರು.

2014 ರ ಹಿಂದಿನ ಐದು ವರ್ಷಗಳಲ್ಲಿ ರೈತರಿಂದ ಸುಮಾರು 6.5 ಕೋಟಿ ರೂ.ಗಳ ದ್ವಿದಳ ಧಾನ್ಯಗಳನ್ನು ಖರೀದಿಸಲಾಗಿದೆ. ಆದರೆ ನಂತರದ 5 ವರ್ಷಗಳಲ್ಲಿ ಸುಮಾರು 49,000 ಕೋಟಿ ರೂ.ಗಳ ಮೌಲ್ಯದ ದ್ವಿದಳ ಧಾನ್ಯಗಳನ್ನು ಖರೀದಿಸಲಾಗಿದೆ. ಅಂದರೆ ಸುಮಾರು 75 ಪಟ್ಟು ಹೆಚ್ಚು ಎಂದು ಪ್ರಧಾನಿ ಹೇಳಿದರು. 2014 ರ ಹಿಂದಿನ 5 ವರ್ಷಗಳಲ್ಲಿ 2 ಲಕ್ಷ ಕೋಟಿ ಮೌಲ್ಯದ ಭತ್ತವನ್ನು ಖರೀದಿಸಲಾಗಿದೆ. ಆದರೆ ನಂತರದ 5 ವರ್ಷಗಳಲ್ಲಿ ನಾವು 5 ಲಕ್ಷ ಕೋಟಿ ರೂಪಾಯಿಗಳನ್ನು ಭತ್ತದ ಎಂಎಸ್‌ಪಿ ಆಗಿ ರೈತರಿಗೆ ತಲುಪಿಸಿದ್ದೇವೆ. ಅಂದರೆ, ಸುಮಾರು ಎರಡೂವರೆ ಪಟ್ಟು ಹೆಚ್ಚು ಹಣ ರೈತನಿಗೆ ತಲುಪಿದೆ. 2014 ರ ಹಿಂದಿನ 5 ವರ್ಷಗಳಲ್ಲಿ ರೈತರ ಸುಮಾರು. 1.5 ಲಕ್ಷ ಕೋಟಿ ರೂ. ಗೋಧಿ ಖರೀದಿ ಮಾಡಿದರೆ, ನಂತರದ 5 ವರ್ಷಗಳಲ್ಲಿ, ಗೋಧಿ ರೈತರಿಗೆ 3 ಲಕ್ಷ ಕೋಟಿ ರೂ. ಅಂದರೆ ಸುಮಾರು 2 ಪಟ್ಟು ಹೆಚ್ಚು ಹಣ ಸಿಕ್ಕಿದೆ. ಮಂಡಿಗಳು ಮತ್ತು ಎಂಎಸ್ಪಿಯನ್ನು ನಿರ್ನಾಮಗೊಳಿಸುವುದಾದರೆ ಸರ್ಕಾರ ಏಕೆ ಇಷ್ಟು ಖರ್ಚು ಮಾಡುತ್ತದೆ ಎಂದು ಅವರು ಕೇಳಿದರು. ಮಂಡಿಗಳನ್ನು ಆಧುನೀಕರಿಸಲು ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಪ್ರತಿಪಕ್ಷಗಳನ್ನು ಟೀಕಿಸಿದ ಪ್ರಧಾನಿಯವರು, ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುವವರು, ಚುನಾವಣೆಯ ದೃಷ್ಟಿಯಿಂದ ಈ ಹಣವನ್ನು ನೀಡಲಾಗುತ್ತಿದೆ. ಚುನಾವಣೆಯ ನಂತರ ಅದೇ ಹಣವನ್ನು ಬಡ್ಡಿ ಸಮೇತ ವಾಪಾಸ್ ನೀಡಬೇಕಾಗುತ್ತದೆ ಎಂಬ ವದಂತಿಯನ್ನು ಹರಡಿದರು. ವಿರೋಧ ಪಕ್ಷವು ಇರುವ ರಾಜ್ಯದಲ್ಲಿ, ರಾಜಕೀಯ ಕಾರಣದಿಂದಾಗಿ, ರೈತರಿಗೆ ಈ ಯೋಜನೆಯ ಲಾಭ ಪಡೆಯಲು ಅವಕಾಶವಾಗುತ್ತಿಲ್ಲ ಎಂದು ಅವರು ಹೇಳಿದರು. ದೇಶದ 10 ಕೋಟಿಗೂ ಹೆಚ್ಚು ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನೆರವು ನೀಡಲಾಗುತ್ತಿದೆ. ಈವರೆಗೆ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ರೈತರಿಗೆ ತಲುಪಿಸಲಾಗಿದೆ ಎಂದರು.

ದಶಕಗಳಷ್ಟು ಕಾಲ ನಡೆದ ಮೋಸವು ರೈತರನ್ನು ಭಯಭೀತರನ್ನಾಗಿಸಿದೆ. ಆದರೆ ಈಗ ಯಾವುದೇ ಮೋಸವಿಲ್ಲ, ಗಂಗಾಜಲದಂತೆ ಪರಿಶುದ್ಧವಾದ ಉದ್ದೇಶಗಳೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಕೇವಲ ಆತಂಕಗಳ ಆಧಾರದ ಮೇಲೆ ಸುಳ್ಳು ಸೃಷ್ಟಿಸುತ್ತಿರುವವರ ಸತ್ಯವನ್ನು ದೇಶದ ಮುಂದೆ ನಿರಂತರವಾಗಿ ಬಹಿರಂಗಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಅವರ ಸುಳ್ಳನ್ನು ರೈತರು ಅರ್ಥಮಾಡಿಕೊಂಡಾಗ, ಅವರು ಇನ್ನೊಂದು ವಿಷಯದ ಬಗ್ಗೆ ಸುಳ್ಳನ್ನು ಹರಡಲು ಪ್ರಾರಂಭಿಸುತ್ತಾರೆ. ಇನ್ನೂ ಕೆಲವು ಕಳವಳಗಳನ್ನು ಹೊಂದಿರುವ ರೈತರಿಗೆ ಸರ್ಕಾರ ನಿರಂತರವಾಗಿ ಉತ್ತರಿಸುತ್ತಿದೆ ಎಂದು ಅವರು ಹೇಳಿದರು. ಇಂದು ಕೃಷಿ ಸುಧಾರಣೆಗಳ ಬಗ್ಗೆ ಕೆಲವು ಅನುಮಾನಗಳನ್ನು ಹೊಂದಿರುವ ರೈತರು, ಮುಂದೆ ಈ ಕೃಷಿ ಸುಧಾರಣೆಗಳ ಲಾಭವನ್ನು ಪಡೆಯುತ್ತಾರೆ ಮತ್ತು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

***



(Release ID: 1677228) Visitor Counter : 228