ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್-19 ಕಣ್ಗಾವಲು, ನಿಯಂತ್ರಣ ಮತ್ತು ಮುನ್ನೆಚ್ಚರಿಕೆಯ ಬಗ್ಗೆ ಗೃಹ ಸಚಿವಾಲಯದ ಮಾರ್ಗಸೂಚಿಗಳು


ವಿವಿಧ ಚಟುವಟಿಕೆಗಳ ಎಸ್‌ಒಪಿಗಳು, ಕೋವಿಡ್- ನಡವಳಿಕೆ ಮತ್ತು ಜನಸಂದಣಿ ನಿಯಂತ್ರಣ ಕ್ರಮಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕಡ್ಡಾಯವಾಗಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು

Posted On: 25 NOV 2020 4:03PM by PIB Bengaluru

ಕೇಂದ್ರ ಗೃಹ ಸಚಿವಾಲಯವು ಇಂದು ಕೋವಿಡ್-19 ಕುರಿತ ಕಣ್ಗಾವಲು, ನಿಯಂತ್ರಣ ಮತ್ತು ಮುನ್ನೆಚ್ಚರಿಕೆಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮಾರ್ಗಸೂಚಿಗಳು ಡಿಸೆಂಬರ್ 1, 2020 ರಿಂದ 31.12.2020 ರವರೆಗೆ ಜಾರಿಯಲ್ಲಿರುತ್ತವೆ.

  • ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಕುಸಿತಕ್ಕೆ ಕಾರಣವಾಗಿರುವ ಸಾಂಕ್ರಾಮಿಕದ ಹರಡುವಿಕೆಯ ನಿಯಂತ್ರಣದ ಗಣನೀಯ ಲಾಭವನ್ನು ಮುಂದುವರೆಸುವುದು ಮಾರ್ಗಸೂಚಿಗಳ ಮುಖ್ಯ ಗಮನವಾಗಿದೆ. ಇದಲ್ಲದೆ, ಕೆಲವು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಹೊಸ ಪ್ರಕರಣಗಳು, ಹಬ್ಬದ ಸಮಯ ಮತ್ತು ಚಳಿಗಾಲದ ಆರಂಭವನ್ನು ಗಮನದಲ್ಲಿಟ್ಟುಕೊಂಡು, ಸಾಂಕ್ರಾಮಿಕ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕಲು, ಸಾಕಷ್ಟು ಎಚ್ಚರಿಕೆ ವಹಿಸಬೇಕು ಮತ್ತು ನಿಗದಿತ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಒತ್ತಿಹೇಳಲಾಗಿದೆ. ಗೃಹ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ಹೊರಡಿಸಿರುವ ಮಾರ್ಗಸೂಚಿಗಳು/ ಎಸ್ಒಪಿಗಳ ಕಣ್ಗಾವಲು, ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಗದಿತ ನಿಯಂತ್ರಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂಬುದನ್ನು ಸ್ಥಳೀಯ ಜಿಲ್ಲೆ, ಪೊಲೀಸ್ ಮತ್ತು ಪುರಸಭೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.  ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ಸ್ಥಳೀಯವಾಗಿ ನಿರ್ಬಂಧಗಳನ್ನು ವಿಧಿಸಬಹುದು.

ನಿಗಾ ಮತ್ತು ನಿಯಂತ್ರಣ

  • ವಿಷಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ  ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಂಡು ಸೂಕ್ಷ್ಮ ಮಟ್ಟದಲ್ಲಿ ಜಿಲ್ಲಾ ಅಧಿಕಾರಿಗಳು ಕಂಟೈನ್ಮೆಂಟ್ ವಲಯಗಳನ್ನು ಎಚ್ಚರಿಕೆಯಿಂದ ಗುರುತಿಸುವುದನ್ನು ರಾಜ್ಯಗಳು/ ಯುಟಿಗಳು ಖಚಿತಪಡಿಸಿಕೊಳ್ಳಬೇಕು. ಕಂಟೈನ್ಮೆಂಟ್ ವಲಯಗಳ ಪಟ್ಟಿಯನ್ನು ಆಯಾ ಜಿಲ್ಲಾಧಿಕಾರಿಗಳು ಮತ್ತು ರಾಜ್ಯಗಳು/ ಯುಟಿಗಳು ವೆಬ್ಸೈಟ್ಗಳಲ್ಲಿ ಪ್ರಕಟಿಸುತ್ತವೆ.   ಪಟ್ಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೂ  ಹಂಚಿಕೊಳ್ಳಲಾಗುವುದು.
  • ಕಂಟೈನ್ಮೆಂಟ್ ವಲಯಗಳಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು  ಸೂಚಿಸಿರುವ ನಿಯಂತ್ರಣ ಕ್ರಮಗಳನ್ನು ಸೂಕ್ಷ್ಮವಾಗಿ ಅನುಸರಿಸಬೇಕು, ಇದರಲ್ಲಿ ಇವು ಸೇರಿವೆ:
  • ಕಂಟೈನ್ಮೆಂಟ್ ವಲಯಗಳಲ್ಲಿ ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅನುಮತಿ.
  • ವೈದ್ಯಕೀಯ ತುರ್ತುಸ್ಥಿತಿಗಳು ಮತ್ತು ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಹೊರತುಪಡಿಸಿ ವಲಯಗಳ ಒಳಗೆ ಅಥವಾ ಹೊರಗೆ ಜನರ ಸಂಚಾರ ತಡೆಯಲು ಕಟ್ಟುನಿಟ್ಟಾದ ನಿಯಂತ್ರಣ ಇರಬೇಕು.
  • ಉದ್ದೇಶಕ್ಕಾಗಿ ರಚಿಸಲಾದ ಕಣ್ಗಾವಲು ತಂಡಗಳಿಂದ ಮನೆ-ಮನೆ ಕಣ್ಗಾವಲು ತೀವ್ರಗೊಳಿಸಬೇಕು.
  • ನಿಗದಿತ ಶಿಷ್ಟಾಚಾರದ ಪ್ರಕಾರ ಪರೀಕ್ಷೆಯನ್ನು ನಡೆಸಬೇಕು.
  • ಪಾಸಿಟಿವ್ ವ್ಯಕ್ತಿಗಳ ಸಂಪರ್ಕಕ್ಕೆ ಬಂದವರ ಟ್ರ್ಯಾಕಿಂಗ್, ಗುರುತಿಸುವಿಕೆ, ಕ್ವಾರಂಟೈನ್ ಕುರಿತು ಪಟ್ಟಿ ಸಿದ್ಧಪಡಿಸಬೇಕು ಮತ್ತು 14 ದಿನಗಳವರೆಗೆ ಅವರ ಟ್ರ್ಯಾಕಿಂಗ್ ಮಾಡಬೇಕು (ಶೇ.80 ರಷ್ಟು ಸಂಪರ್ಕಗಳನ್ನು 72 ಗಂಟೆಗಳಲ್ಲಿ ಕಂಡುಹಿಡಿಯಬಹುದು).
  • ಕೋವಿಡ್-19 ರೋಗಿಗಳನ್ನು ತ್ವರಿತವಾಗಿ ಚಿಕಿತ್ಸಾ ಸೌಲಭ್ಯಗಳು/ ಮನೆಯಲ್ಲಿ ಪ್ರತ್ಯೇಕವಾಸಕ್ಕೆ ಒಳಪಡಿಸಬೇಕು (ಮನೆಯ ಪ್ರತ್ಯೇಕವಾಸಚು ಮಾರ್ಗಸೂಚಿಗಳಿಗನುಗುಣವಾಗಿರುತ್ತದೆ).
  • ಕ್ಲಿನಿಕಲ್ ಚಿಕಿತ್ಸೆಯನ್ನು ಸೂಚಿಸಿದಂತೆ ನಿರ್ವಹಿಸಬೇಕು.
  • ಐಎಲ್ಐ/ ಸಾರಿ ಪ್ರಕರಣಗಳ ಕಣ್ಗಾವಲನ್ನು ಆರೋಗ್ಯ ಸೌಲಭ್ಯಗಳಲ್ಲಿ ಅಥವಾ ಮೊಬೈಲ್ ಘಟಕಗಳಲ್ಲಿ ಅಥವಾ ಬಫರ್ ವಲಯಗಳಲ್ಲಿನ ಜ್ವರ ಚಿಕಿತ್ಸಾಲಯಗಳ ಮೂಲಕ ನಡೆಸಲಾಗುತ್ತದೆ.
  • ಕೋವಿಡ್-19 ನಡವಳಿಕೆಯ ಕುರಿತು ಸಮುದಾಯಗಳಲ್ಲಿ ಜಾಗೃತಿ ಮೂಡಿಸಬೇಕು.
  • ನಿಗದಿತ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಸ್ಥಳೀಯ ಜಿಲ್ಲೆ, ಪೊಲೀಸ್ ಮತ್ತು ಪುರಸಭೆ ಅಧಿಕಾರಿಗಳದಾಗಿರುತ್ತದೆ. ರಾಜ್ಯ/ ಯುಟಿ ಸರ್ಕಾರಗಳು ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು.

ಕೋವಿಡ್ ನಡವಳಿಕೆ

  • ಕೋವಿಡ್-19 ನಡವಳಿಕೆಯನ್ನು ಉತ್ತೇಜಿಸಲು ಮತ್ತು ಮುಖಗವಸುಗಳನ್ನು ಧರಿಸುವುದು, ಕೈಗಳ ಸ್ವಚ್ಛತೆ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ/ ಯುಟಿ ಸರ್ಕಾರಗಳು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
  • ಮುಖಗವಸುಗಳನ್ನು ಧರಿಸುವ ಪ್ರಮುಖ ಅವಶ್ಯಕತೆಯನ್ನು ಜಾರಿಗೊಳಿಸಲು, ರಾಜ್ಯಗಳು ಮತ್ತು ಯುಟಿಗಳು ಸಾರ್ವಜನಿಕ ಮತ್ತು ಕೆಲಸದ ಸ್ಥಳಗಳಲ್ಲಿ ಮುಖಗವಸುಗಳನ್ನು ಧರಿಸದ ವ್ಯಕ್ತಿಗಳಿಗೆ ಸೂಕ್ತ ದಂಡ ವಿಧಿಸುವುದು ಸೇರಿದಂತೆ ಆಡಳಿತಾತ್ಮಕ ಕ್ರಮಗಳನ್ನು ಪರಿಗಣಿಸಬಹುದು.
  • ಜನದಟ್ಟಣೆ ಇರುವ ಸ್ಥಳಗಳಲ್ಲಿ, ವಿಶೇಷವಾಗಿ ಮಾರುಕಟ್ಟೆಗಳು, ವಾರದ ಸಂತೆಗಳು ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಸಾಮಾಜಿಕ ಅಂತರವನ್ನು ಗಮನಿಸಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಸ್ಒಪಿ ಹೊರಡಿಸುತ್ತದೆ, ಇದನ್ನು ರಾಜ್ಯಗಳು ಮತ್ತು ಯುಟಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
  • ಕೋವಿಡ್-19 ನಡವಳಿಕೆಯನ್ನು ಜಾರಿಗೊಳಿಸಲು ಕೋವಿಡ್-19 ನಿರ್ವಹಣೆಯ ರಾಷ್ಟ್ರೀಯ ನಿರ್ದೇಶನಗಳನ್ನು ದೇಶಾದ್ಯಂತ ಅನುಸರಿಸಬೇಕು.

ನಿಗದಿತ ಎಸ್ಒಪಿಗಳ ಕಟ್ಟುನಿಟ್ಟಿನ ಪಾಲನೆ

  • ಕೆಳಗಿನವುಗಳನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳನ್ನು ಕಂಟೈನ್ಮೆಂಟ್ ವಲಯಗಳ ಹೊರಗೆ ಅನುಮತಿಸಲಾಗಿದೆ, ಕೆಲವು ಚಟುವಟಿಕೆಗಳನ್ನು ನಿರ್ಬಂಧಗಳೊಂದಿಗೆ ಅನುಮತಿಸಲಾಗಿದೆ:
  1. ಗೃಹ ಸಚಿವಾಲಯ ಅನುಮತಿ ನೀಡಿದ ಪ್ರಯಾಣಿಕರ ಅಂತರರಾಷ್ಟ್ರೀಯ ವಿಮಾನ ಪ್ರಯಾಣ.
  2. 50 ರಷ್ಟು ಸಾಮರ್ಥ್ಯದಲ್ಲಿ ಸಿನೆಮಾ ಹಾಲ್ಗಳು ಮತ್ತು ಚಿತ್ರಮಂದಿರಗಳು.
  3. ಕ್ರೀಡಾಪಟುಗಳ ತರಬೇತಿಗಾಗಿ ಮಾತ್ರ ಈಜುಕೊಳಗಳು.
  4. ವಸ್ತು ಪ್ರದರ್ಶನ ಸಭಾಂಗಣಗಳು, ವ್ಯವಹಾರದಿಂದ ವ್ಯವಹಾರಕ್ಕೆ (ಬಿ 2 ಬಿ) ಉದ್ದೇಶಗಳಿಗಾಗಿ ಮಾತ್ರ.
  5. ಸಾಮಾಜಿಕ/ ಧಾರ್ಮಿಕ/ ಕ್ರೀಡೆ/ ಮನರಂಜನೆ/ ಶೈಕ್ಷಣಿಕ/ ಸಾಂಸ್ಕೃತಿಕ/ ಧಾರ್ಮಿಕ ಕೂಟಗಳು, ಸಭಾಂಗಣದ ಸಾಮರ್ಥ್ಯದ ಗರಿಷ್ಠ 50 ಪ್ರತಿಶತದವರೆಗೆ, ಮುಚ್ಚಿದ ಸ್ಥಳಗಳಲ್ಲಿ 200 ಜನರ ಮಿತಿಯೊಂದಿಗೆ ಮತ್ತು ತೆರೆದ ಸ್ಥಳಗಳಲ್ಲಿ ನೆಲದ/ ಜಾಗದ ವಿಸ್ತೀರ್ಣಕ್ಕೆ ಅನುಗುಣವಾಗಿರಬೇಕು.

ಆದಾಗ್ಯೂ, ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ, ರಾಜ್ಯ/ ಯುಟಿ ಸರ್ಕಾರಗಳು ಮುಚ್ಚಿದ ಸ್ಥಳಗಳಲ್ಲಿ ಮಿತಿಯನ್ನು 100 ಅಥವಾ ಅದಕ್ಕಿಂತ ಕಡಿಮೆ ವ್ಯಕ್ತಿಗಳಿಗೆ ಇಳಿಸಬಹುದು.

  • ಎಲ್ಲರ ಮಾಹಿತಿಗಾಗಿ, ಅನುಮತಿಸಲಾದ ಚಟುವಟಿಕೆಗಳ ಬಗ್ಗೆ ಆಗಿಂದಾಗ್ಗೆ ನೀಡಲಾದ 19 ಎಸ್ಒಪಿಗಳ ಪಟ್ಟಿಯನ್ನು ಮಾರ್ಗಸೂಚಿಗಳೊಂದಿಗೆ ನೀಡಲಾಗಿದೆ. ಎಸ್ಒಪಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಕಟ್ಟುನಿಟ್ಟಾಗಿ ಪಾಲನೆಯಾಗಿರುವ ಬಗ್ಗೆ ಅವರು ಜವಾಬ್ದಾರರಾಗಿರುತ್ತಾರೆ.

ಸ್ಥಳೀಯ ನಿರ್ಬಂಧಗಳು

  • ರಾಜ್ಯಗಳು ಮತ್ತು ಯುಟಿಗಳು, ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ರಾತ್ರಿ ಕರ್ಫ್ಯೂನಂತಹ ಸ್ಥಳೀಯ ನಿರ್ಬಂಧಗಳನ್ನು ವಿಧಿಸಬಹುದು. ಆದಾಗ್ಯೂ, ರಾಜ್ಯ/ ಯುಟಿ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಪೂರ್ವ ಸಮಾಲೋಚನೆ ಮಾಡದೆ, ಕಂಟೈನ್ಮೆಂಟ್ ವಲಯಗಳ ಹೊರಗೆ ಯಾವುದೇ ಸ್ಥಳೀಯ ಲಾಕ್ಡೌನ್ (ರಾಜ್ಯ/ ಜಿಲ್ಲೆ/ ಉಪ-ವಿಭಾಗ/ ನಗರ ಮಟ್ಟ) ವಿಧಿಸಬಾರದು.
  • ರಾಜ್ಯಗಳು ಮತ್ತು ಯುಟಿಗಳು ಕಚೇರಿಗಳಲ್ಲಿ ಸಾಮಾಜಿಕ ಅಂತರವನ್ನು ಜಾರಿಗೊಳಿಸಬೇಕು. ನಗರಗಳಲ್ಲಿ, ಸಾಪ್ತಾಹಿಕ ಸಕಾರಾತ್ಮಕ ಪ್ರಕರಣ ದರವು ಶೇಕಡಾ 10 ಕ್ಕಿಂತ ಹೆಚ್ಚಿದ್ದರೆ, ಸಂಬಂಧಪಟ್ಟ ರಾಜ್ಯಗಳು ಮತ್ತು ಯುಟಿಗಳು ಒಂದೇ ಸಮಯದಲ್ಲಿ ಕಚೇರಿಗೆ ಹಾಜರಾಗುವ ನೌಕರರ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಂತ ಹಂತಗಳಲ್ಲಿ ಕಚೇರಿ ಸಮಯ ಮತ್ತು ಇತರ ಸೂಕ್ತ ಕ್ರಮಗಳನ್ನು ಜಾರಿಗೆ ತರಲು ಪರಿಗಣಿಸಬೇಕು.

ಅಂತರ-ರಾಜ್ಯ ಮತ್ತು ಅಂತರ್-ರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ

  • ನೆರೆಯ ರಾಷ್ಟ್ರಗಳೊಂದಿಗಿನ ಒಪ್ಪಂದಗಳ ಅಡಿಯಲ್ಲಿ ಭೂ-ಗಡಿ ವ್ಯಾಪಾರವನ್ನು ಒಳಗೊಂಡಂತೆ ವ್ಯಕ್ತಿಗಳು ಮತ್ತು ಸರಕುಗಳ ಅಂತರ-ರಾಜ್ಯ ಮತ್ತು ಅಂತರ್-ರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಅಂತಹ ಸಂಚಾರಕ್ಕೆ ಪ್ರತ್ಯೇಕ ಅನುಮತಿ / ಅನುಮೋದನೆ / -ಪರ್ಮಿಟ್ ಅಗತ್ಯವಿರುವುದಿಲ್ಲ.

ಹೆಚ್ಚು ಅಪಾಯದ ವ್ಯಕ್ತಿಗಳಿಗೆ ರಕ್ಷಣೆ

  • ಹೆಚ್ಚು ಅಪಾಯದ ವ್ಯಕ್ತಿಗಳು, ಅಂದರೆ, 65 ವರ್ಷಕ್ಕಿಂತ ಮೇಲ್ಪಟ್ಟವರು, ಸಹ-ಅಸ್ವಸ್ಥತೆ ಹೊಂದಿರುವವರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಅಗತ್ಯ ಅವಶ್ಯಕತೆಗಳು ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ ಉಳಿದಂತೆ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ.

ಆರೋಗ್ಯ ಸೇತು ಬಳಕೆ

  • ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಬಳಕೆಯನ್ನು ಪ್ರೋತ್ಸಾಹಿಸಲಾಗುವುದು.

***



(Release ID: 1675890) Visitor Counter : 289