ಪ್ರಧಾನ ಮಂತ್ರಿಯವರ ಕಛೇರಿ
ಉತ್ತರ ಪ್ರದೇಶ ಗ್ರಾಮೀಣ ನೀರು ಪೂರೈಕೆ ಯೋಜನೆಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
Posted On:
22 NOV 2020 2:54PM by PIB Bengaluru
ಜೀವನದಲ್ಲಿ ಪ್ರಮುಖ ಸಮಸ್ಯೆಯೊಂದು ಪರಿಹರಿಸಲ್ಪಟ್ಟಾಗ, ಅದು ಬೇರೆಯದೇ ವಿಶ್ವಾಸವನ್ನು, ಭರವಸೆಯನ್ನು ಪ್ರತಿಫಲಿಸಲು ಆರಂಭಿಸುತ್ತದೆ. ನಾನು ನಿಮ್ಮೊಂದಿಗೆ ಸಂವಾದ ಮಾಡುವಾಗ ಆ ವಿಶ್ವಾಸವನ್ನು , ಭರವಸೆಯನ್ನು ಕಾಣುತ್ತಿದ್ದೇನೆ. ತಾಂತ್ರಿಕ ಮಿತಿಯಿಂದಾಗಿ ನಾನು ಪ್ರತಿಯೊಬ್ಬರ ಜೊತೆಗೆ ಮಾತನಾಡಲು ಸಾಧ್ಯವಾಗದಿದ್ದರೂ , ನನಗೆ ನಿಮ್ಮನ್ನು ನೋಡಲು ಸಾಧ್ಯವಾಗುತ್ತಿದೆ. ಹಬ್ಬ ಆಚರಣೆಯಂತೆ ನೀವು ಬಟ್ಟೆ ಬರೆಗಳನ್ನು ಹಾಕಿಕೊಂಡಿರುವ ರೀತಿ ನನಗೆ ಗೋಚರಿಸುತ್ತಿದೆ !. ನಾನು ಎಲ್ಲಾ ರೀತಿಯ ಅಲಂಕಾರವನ್ನು ನೋಡುತ್ತಿದ್ದೇನೆ. ನಿಮ್ಮಲ್ಲಿರುವ ಉತ್ಸಾಹದ ಮಟ್ಟವೂ ನನಗೆ ಕಾಣುತ್ತಿದೆ. ಈ ಉತ್ಸಾಹ, ಈ ಹುರುಪು ಈ ಯೋಜನೆಯಲ್ಲಿರುವ ಅಪಾರವಾದ ಮೌಲ್ಯವನ್ನು ತೋರಿಸುತ್ತದೆ. ಇದು ನೀರಿಗೆ ಸಂಬಂಧಿಸಿ ನಿಮ್ಮ ಸೂಕ್ಷ್ಮತ್ವವನ್ನು ತೋರಿಸುತ್ತದೆ. ಮದುವೆಯಂತಹ ಪ್ರಮುಖ ಕಾರ್ಯಕ್ರಮ ಕುಟುಂಬದಲ್ಲಿ ನಡೆದಾಗ ಉಂಟಾಗುವಂತಹ ವಾತಾವರಣವನ್ನು ನೀವು ನಿರ್ಮಾಣ ಮಾಡಿದ್ದೀರಿ.
ಇದರರ್ಥ ಸರಕಾರ ನಿಮ್ಮ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿರುವುದು ಮಾತ್ರವಲ್ಲ, ಅದು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಮತ್ತು ನೀವು ಬಹಳ ಉತ್ಸಾಹದಿಂದಿರುವುದರಿಂದ , ನಾನು ಖಚಿತವಾಗಿ ಹೇಳುತ್ತೇನೆ ಈ ಯೋಜನೆಗಳ ಫಲಿತಾಂಶ ನಿರೀಕ್ಷೆಗಿಂತ ಬೇಗ ಲಭಿಸಲಿದೆ. ಬಹುಷಃ ನೀವು ಹಣವನ್ನು ಉಳಿಕೆ ಮಾಡುವಿರಿ. ಸಾರ್ವಜನಿಕ ಸಹಭಾಗಿತ್ವ ಇರುವಲ್ಲಿ , ಫಲಿತಾಂಶವೂ ಅಷ್ಟೇ ದೊಡ್ಡ ಪ್ರಮಾಣದಲ್ಲಿರುತ್ತದೆ.
ನಮ್ಮೆಲ್ಲರ ಮೇಲೆ ಇರುವ ವಿಂಧ್ಯಾವಾಸಿನಿ ತಾಯಿಯ ಆಶೀರ್ವಾದದಿಂದಾಗಿ, ಈ ವಲಯದ ಲಕ್ಷಾಂತರ ಕುಟುಂಬಗಳಿಗಾಗಿ ಇಂತಹ ದೊಡ್ಡ ಯೋಜನೆಯನ್ನು ಇಂದು ಆರಂಭಿಸಲಾಗಿದೆ . ಈ ಯೋಜನೆ ಅಡಿಯಲ್ಲಿ ಲಕ್ಷಾಂತರ ಕುಟುಂಬಗಳು ಅವರ ಮನೆಗಳಲ್ಲಿ ಕೊಳವೆ ಮೂಲಕ ಶುದ್ದ ಕುಡಿಯುವ ನೀರು ಪಡೆಯಲಿವೆ. ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಸೋನಾಭದ್ರಾದಲ್ಲಿ ಹಾಜರಿರುವ, ಉತ್ತರ ಪ್ರದೇಶದ ಯಶಸ್ವೀ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಗಜೇಂದ್ರ ಸಿಂಗ್ ಜೀ, ಉತ್ತರ ಪ್ರದೇಶದ ಮಂತ್ರಿಗಳಾದ ಭಾಯಿ ಮಹೇಂದ್ರ ಸಿಂಗ್ ಜೀ, ಇಂದಿನ ಕಾರ್ಯಕ್ರಮದಲ್ಲಿ ಸೇರಿಕೊಂಡಿರುವ ಇತರ ಸಚಿವರೇ, ಸಂಸತ್ ಸದಸ್ಯರೇ, ಮತ್ತು ಶಾಸಕರೇ . ಅಲ್ಲಿ ಹಾಜರಿರುವ ವಿಂಧ್ಯಾ ವಲಯದ ಎಲ್ಲಾ ಸಹೋದರ ಮತ್ತು ಸಹೋದರಿಯರನ್ನು ನಾನು ಅಭಿನಂದಿಸುತ್ತೇನೆ. !!
ಸ್ನೇಹಿತರೇ,
ವಿಂಧ್ಯಾ ಪರ್ವತಗಳ ಈ ಇಡೀ ಶ್ರೇಣಿ ಪ್ರಾಚೀನ ಕಾಲದಿಂದ ನಂಬಿಕೆಯ, ಶುದ್ದತೆಯ ಮತ್ತು ದೈವಿಕ ಶ್ರೇಣಿಯಾಗಿ ಪರಿಗಣಿಸಲ್ಪಟ್ಟಿದೆ. ಉತ್ತರ ಪ್ರದೇಶದ ಬಹತೇಕ ಮಂದಿ ರಹೀಮದಾಸ ಜೀ ಏನು ಹೇಳಿದ್ದಾರೆಂಬುದನ್ನು ಬಲ್ಲರು, ಅವರು ಹೇಳಿದ್ದಾರೆ-‘जापर विपदा परत है, सो आवत यही देश!’
ಸಹೋದರರೇ ಮತ್ತು ಸಹೋದರಿಯರೇ,
ರಹೀಮದಾಸ ಜೀ ಅವರ ಈ ವಿಶ್ವಾಸಕ್ಕೆ ಕಾರಣ,ಈ ವಲಯದ ಬೃಹತ್ ಸಂಪನ್ಮೂಲಗಳು ಮತ್ತು ಇಲ್ಲಿರುವ ಅಪರಿಮಿತ ಸಾಧ್ಯತೆಗಳು. ಶಿಪ್ರಾ, ವೈನ್ ಗಂಗಾ, ಸನ್, ಮಹಾನದಿ ಮತ್ತು ನರ್ಮದಾ ನದಿಗಳ ಉಗಮ ವಿಂಧ್ಯಾಚಲ. ಈ ವಲಯವು ಗಂಗಾ ತಾಯಿ, ಬೇಲನ್ ಮತ್ತು ಕರ್ಮನಶಾ ನದಿಗಳಿಂದ ಆಶೀರ್ವದಿಸಲ್ಪಟ್ಟಿದೆ. ಆದರೆ ಸ್ವಾತಂತ್ರ್ಯದ ಬಳಿಕ ದಶಕಗಳ ಕಾಲ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಪ್ರದೇಶ ಇದಾಗಿದೆ. ವಿಂಧ್ಯಾಚಲ ಇರಲಿ, ಬುಂದೇಲಖಂಡ ಇರಲಿ ಅಥವಾ ಇಡೀಯ ಪ್ರದೇಶ ಇರಲಿ ಭಾರೀ ಸಂಪನ್ಮೂಲಗಳನ್ನು ಹೊಂದಿದ್ದರೂ ಅದು ಅವಕಾಶವಂಚಿತವಾಗಿತ್ತು. ಈ ವಲಯದ ಮೂಲಕ ಹಲವಾರು ನದಿಗಳು ಹರಿಯುತ್ತಿದ್ದರೂ ಇದು ತೀವ್ರವಾದ ಬರ ಪೀಡಿತ ಪ್ರದೇಶ ಎಂದು ಗುರುತಿಸಲಾಗಿತ್ತು. ಇದರಿಂದಾಗಿ ಹಲವಾರು ಜನರು ಇಲ್ಲಿಂದ ವಲಸೆ ಹೋಗಬೇಕಾಯಿತು.
ಸ್ನೇಹಿತರೇ,
ಕಳೆದ ಹಲವು ವರ್ಷಗಳಿಂದ ವಿಂದ್ಯಾಚಲದ ಈ ಪ್ರಮುಖ ಸಮಸ್ಯೆಯನ್ನು ತೊಡೆದು ಹಾಕಲು ನಿರಂತರ ಕೆಲಸ ಮಾಡಲಾಗಿದೆ. ಪ್ರತೀ ಮನೆಗೂ ನೀರು ಒದಗಿಸುವ ಮತ್ತು ಇಲ್ಲಿ ನೀರಾವರಿ ಸೌಲಭ್ಯ ಒದಗಿಸುವ ಪ್ರಯತ್ನಗಳು ಬಹಳ ನಿರ್ಣಾಯಕ ಭಾಗಗಳು. ಕಳೆದ ವರ್ಷ, ಬುಂದೇಲಖಂಡದಲ್ಲಿ ಪ್ರಮುಖ ಜಲ ಸಂಬಂಧಿ ಯೋಜನೆಯ ಕಾಮಗಾರಿ ಆರಂಭಿಸಲಾಗಿದೆ. ಅದು ತ್ವರಿತಗತಿಯಿಂದ ನಡೆಯುತ್ತಿದೆ. ಇಂದು ವಿಂಧ್ಯಾ ಜಲಪೂರ್ತಿ ಯೋಜನಾಕ್ಕೆ ಶಿಲಾನ್ಯಾಸ ಮಾಡಲಾಗಿದೆ.
ಸೋನಾಭದ್ರ ಮತ್ತು ಮಿರ್ಝಾಪುರ ಜಿಲ್ಲೆಗಳ ಲಕ್ಷಾಂತರ ಜನರಿಗೆ ಮತ್ತು ವಿಶೇಷವಾಗಿ ತಾಯಂದಿರಿಗೆ, ಸಹೋದರಿಯರಿಗೆ ಮತ್ತು ಪುತ್ರಿಯರಿಗೆ , ಈ ಯೋಜನೆಗಾಗಿ ಅಭಿನಂದಿಸುವ ಅವಕಾಶ ಇದು ಮತ್ತು ಇಂದು ನಾನು ಈ ಭಾಗದ ಜನರ ಜೊತೆ ಮಾತನಾಡಿದಾಗ , ನನಗೆ ನನ್ನ ಹಳೆಯ ಗೆಳೆಯ ದಿವಂಗತ ಸೋನೆಲಾಲ್ ಪಟೇಲ್ ಅವರು ನೆನಪಾಗುವುದು ಸಹಜ. ಅವರು ಈ ಭಾಗದ ಜಲ ಸಂಬಂಧಿ ವಿಷಯಗಳಿಗೆ ಬಹಳ ಕಾಳಜಿ ಹೊಂದಿದ್ದರು. ಈ ಯೋಜನೆಗಳ ಆರಂಭ ನೋಡುವಾಗ , ಇಂದು ಸೋನೆ ಲಾಲ್ ಜೀ ಅವರ ಆತ್ಮ ಬಹಳ ಸಂತೃಪ್ತಿ ಅನುಭವಿಸುತ್ತಿರಬಹುದು ಮತ್ತು ಅವರು ನಮ್ಮೆಲ್ಲರನ್ನೂ ಹರಸುತ್ತಿರಬಹುದು.
ಸಹೋದರರೇ ಮತ್ತು ಸಹೋದರಿಯರೇ,
ಭವಿಷ್ಯದಲ್ಲಿ ಕೊಳವೆ ಮೂಲಕ ಇಲ್ಲಿಯ 3000 ಗ್ರಾಮಗಳಿಗೆ ನೀರು ಪೂರೈಕೆಯಾದಾಗ 40 ಲಕ್ಷಕ್ಕೂ ಅಧಿಕ ಗೆಳೆಯರ ಬದುಕು ಬದಲಾಗುತ್ತದೆ. ಉತ್ತರ ಪ್ರದೇಶ ಮತ್ತು ಇಡೀ ದೇಶದ ಪ್ರತೀ ಮನೆಗಳಿಗೆ ನೀರು ಪೂರೈಸುವ ನಿರ್ಧಾರಕ್ಕೆ ಇನ್ನಷ್ಟು ಬಲ ತರುತ್ತದೆ. ಕೊರೊನಾ ಜಾಗತಿಕ ಸಾಂಕ್ರಾಮಿಕದ ನಡುವೆಯೂ ಉತ್ತರ ಪ್ರದೇಶವು ಪ್ರಗತಿಯ ಪಥದಲ್ಲಿ ತ್ವರಿತಗತಿಯಿಂದ ಸಾಗುತ್ತಿರುವುದಕ್ಕೆ ಇದೊಂದು ಉದಾಹರಣೆ. ಉತ್ತರ ಪ್ರದೇಶದ ಸಿಬ್ಬಂದಿಗಳ ಪ್ರತಿಷ್ಟೆ, ಉತ್ತರ ಪ್ರದೇಶದ ಸ್ಥಾನ ಮಾನ ಮತ್ತು ಉತ್ತರ ಪ್ರದೇಶ ಸರಕಾರದ ಸ್ಥಾನಮಾನ ಈ ಮೊದಲಿನದಕ್ಕಿಂತ ಸಂಪೂರ್ಣ ಬದಲಾಗಲಿದೆ. ಒಂದರ ಬಳಿಕ ಒಂದರಂತೆ ಅನುಷ್ಟಾನಗೊಳ್ಳುತ್ತಿರುವ ಯೋಜನೆಗಳಿಂದಾಗಿ ಈ ಮೊದಲು ಮಾಡುತ್ತಿದ್ದ ಊಹೆಗಳಿಗಳಿಗಿಂತ ಈಗಿನ ಸ್ಥಿತಿ ಸಂಪೂರ್ಣ ಭಿನ್ನವಾಗುತ್ತಿದೆ.
ಈ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಕೊರೊನಾ ವಿರುದ್ದ ಸಾರಿದ ಸಮರ , ಹೊರಗಿನಿಂದ ತಮ್ಮ ಹಳ್ಳಿಗಳಿಗೆ ಮರಳಿದ ವಲಸೆ ಕಾರ್ಮಿಕರ ಬಗ್ಗೆ ತೋರಿದ ಕಾಳಜಿ, ಉದ್ಯೋಗಗಳ ಒದಗಿಸುವಿಕೆ ಸಾಮಾನ್ಯ ಸಂಗತಿಯೇನಲ್ಲ. ಇಂತಹ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಹಲವಾರು ರಂಗಗಳಲ್ಲಿ, ಮತ್ತು ಬಹಳ ನಿಕಟವಾಗಿ ಏಕಕಾಲದಲ್ಲಿ ಕೆಲಸ ಮಾಡುವುದು ಒಂದು ಅದ್ಭುತವೇ ಸರಿ. ನಾನು ಉತ್ತರ ಪ್ರದೇಶದ ಜನತೆಯನ್ನು, ಉತ್ತರ ಪ್ರದೇಶ ಸರಕಾರವನ್ನು ಮತ್ತು ಯೋಗೀಜೀ ಅವರ ಇಡೀಯ ತಂಡವನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ,
“ಹರ್ ಘರ್ ಜಲ್’ ಅಭಿಯಾನ”ಕ್ಕೆ ಈಗ ಒಂದು ವರ್ಷ ದಾಟಿದೆ. ಈ ಅವಧಿಯಲ್ಲಿ 2 ಕೋಟಿ 60 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಕೊಳವೆ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಅವುಗಳಲ್ಲಿ ಉತ್ತರ ಪ್ರದೇಶದ ಲಕ್ಷಾಂತರ ಕುಟುಂಬಗಳಿವೆ.
ನಗರಗಳಲ್ಲಿ ಇರುವಂತಹ ಸೌಲಭ್ಯಗಳನ್ನು ಗ್ರಾಮಗಳಲ್ಲಿ ವಾಸಿಸುವ ನಮ್ಮ ಸಹೋದರರು ಮತ್ತು ಸಹೋದರಿಯರಿಗೆ ಒದಗಿಸಲು ನಾವು ಅವಿಶ್ರಾಂತವಾಗಿ ಪ್ರಯತ್ನಿಸುತ್ತಿದ್ದೇವೆ. ಯೋಜನೆಗಳು ಈ ಆಂದೋಲನಕ್ಕೆ ಇನ್ನಷ್ಟು ವೇಗ ತಂದುಕೊಡುತ್ತಿವೆ. ಜೊತೆಗೆ ”ಅಟಲ್ ಭೂಜಲ್ ಯೋಜನಾ’ ಅಡಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಕಾರ್ಯಚಟುವಟಿಕೆಗಳು ನಡೆಯುತ್ತಿವೆ, ಇದು ಈ ವಲಯಕ್ಕೆ ಬಹಳ ಲಾಭಗಳನ್ನು ತರಲಿದೆ.
ಸಹೋದರರೇ ಮತ್ತು ಸಹೋದರಿಯರೇ,
“ಏಕ್ ಪಂಥ್, ದೋ ಖಾಜ್” ಎಂದು ಹೇಳಲಾಗುತ್ತದೆ. ಆದರೆ ಈ ಹೇಳಿಕೆಯನ್ನು ಇಂದು ಆರಂಭಿಸಲಾದ ವಿವಿಧ ಯೋಜನೆಗಳ ಹಿನ್ನೆಲೆಯಲ್ಲಿ “ಏಕ್ ಪಂಥ್, ಅನೇಕ್ ಖಾಜ್” ಎಂದು ಬದಲು ಮಾಡಬಹುದು ಮತ್ತು ಇಲ್ಲಿ ಹಲವು ಗುರಿಗಳನ್ನು ಸಾಧಿಸಲಾಗುತ್ತಿದೆ. ಜಲ್ ಜೀವನ್ ಆಂದೋಲನ ಅಡಿಯಲ್ಲಿ ಪ್ರತೀ ಮನೆಗೂ ಕೊಳವೆ ನೀರು ಪೂರೈಕೆಯಿಂದಾಗಿ ನಮ್ಮ ತಾಯಂದಿರು ಮತ್ತು ಸಹೋದರಿಯರ ಜೀವನ ಸುಲಭವಾಗುತ್ತಿದೆ. ಬಡ ಕುಟುಂಬಗಳ ಆರೋಗ್ಯದಲ್ಲಿಯೂ ಬಹಳ ಸುಧಾರಣೆಯಾಗಿದೆ. ಕಲುಷಿತ ನೀರಿನಿಂದ ಹರಡುವ ಕಾಲರಾ, ಟೈಫಾಯಿಡ್ ಮತ್ತು ಮೆದುಳುಜ್ವರದಂತಹ ಖಾಯಿಲೆಗಳ ಪ್ರಮಾಣ ಕಡಿಮೆಯಾಗಿದೆ.
ಎಲ್ಲಕ್ಕಿಂತ ಮಿಗಿಲಾಗಿ, ಈ ಯೋಜನೆಯ ಫಲ ಜನತೆಯ ಜೊತೆಗೆ ಇತರ ಜಾನುವಾರುಗಳಿಗೂ ಲಭಿಸುತ್ತದೆ. ಪ್ರಾಣಿಗಳಿಗೆ, ಜಾನುವಾರುಗಳಿಗೆ ಸ್ವಚ್ಚ ನೀರು ಲಭಿಸಿದಾಗ , ಅವು ಕೂಡಾ ಆರೋಗ್ಯವಂತವಾಗಿರುತ್ತವೆ. ರೈತರು ಮತ್ತು ಜಾನುವಾರು ಸಾಕಾಣಿಕೆದಾರರು ಯಾವುದೇ ಸಮಸ್ಯೆಗಳನ್ನು ಎದುರಿಸದಂತೆ ಮಾಡಲು ಜಾನುವಾರುಗಳನ್ನು ಆರೋಗ್ಯವಂತವಾಗಿಡುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ಇಲ್ಲಿ ಉತ್ತರ ಪ್ರದೇಶದಲ್ಲಿ ಯೋಗೀಜೀ ಸರಕಾರದ ಪ್ರಯತ್ನಗಳ ಫಲವಾಗಿ ಮೆದುಳುಜ್ವರದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಮತ್ತು ಜನರು ಈ ಬಗ್ಗೆ ಬಹಳ ವಿಸ್ತಾರವಾಗಿ ಮಾತನಾಡುತ್ತಿದ್ದಾರೆ. ತಜ್ಞರು ಕೂಡಾ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅಮಾಯಕ ಮಕ್ಕಳ ಜೀವವನ್ನುಳಿಸಿದುದಕ್ಕಾಗಿ, ಉತ್ತರ ಪ್ರದೇಶದ ಪ್ರತಿಯೊಬ್ಬ ನಿವಾಸಿಯೂ ಯೋಗೀಜೀ ಮತ್ತು ಅವರ ತಂಡದ ಮೇಲೆ ತನ್ನ ಆಶೀರ್ವಾದದ ಹೊಳೆಯನ್ನು ಹರಿಸುತ್ತಿರಬಹುದು ಎಂದು ನಾನು ಭಾವಿಸುತ್ತೇನೆ. ಕೊಳವೆ ಮೂಲಕ ನೀರು ವಿಂಧ್ಯಾಚಲದ ಸಾವಿರಾರು ಗ್ರಾಮಗಳಿಗೆ ತಲುಪಿದಾಗ , ಈ ವಲಯದ ಮುಗ್ಧ ಮಕ್ಕಳ ಆರೋಗ್ಯವೂ ಸುಧಾರಿಸುತ್ತದೆ. , ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕೂಡಾ ಉತ್ತಮವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಶುದ್ಧ ಕುಡಿಯುವ ನೀರು ಲಭಿಸುವಾಗ , ನ್ಯೂನಪೋಷಣೆ ವಿರುದ್ಧ ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳುತ್ತದೆ ಮತ್ತು ಪೋಷಕಾಂಶಯುಕ್ತ ಆಹಾರಕ್ಕೆ ಸಂಬಂಧಿಸಿದ ನಮ್ಮ ಕಠಿಣ ದುಡಿಮೆಗೂ ಧನಾತ್ಮಕ ಫಲಿತಾಂಶ ಸಿಗುತ್ತದೆ.
ಸ್ನೇಹಿತರೇ,
ಜಲ ಜೀವನ ಆಂದೋಲನ ಕೂಡಾ ಸರಕಾರದ ನಿರ್ಧಾರದ ಭಾಗ. ಇದರಡಿ ಸ್ವರಾಜ್ ಶಕ್ತಿಯನ್ನು ಗ್ರಾಮಗಳ ಅಭಿವೃದ್ಧಿಗೆ ಮಾಧ್ಯಮವನ್ನಾಗಿ ಮಾಡಲಾಗುತ್ತಿದೆ. ಈ ಚಿಂತನೆಯೊಂದಿಗೆ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚು, ಹೆಚ್ಚು ಅಧಿಕಾರವನ್ನು ಕೊಡಲಾಗುತ್ತಿದೆ. ಜಲ ನಿರ್ವಹಣೆ, ನೀರು ಪೂರೈಕೆ ಮತ್ತು ನಿರ್ವಹಣೆಗಳಿಗೆ ಜಲ ಜೀವನ್ ಆಂದೋಲನ ಅಡಿಯಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತದೆ; ಮತ್ತು ಇದರಲ್ಲಿ ಗ್ರಾಮಸ್ಥರ ಪಾತ್ರ ಬಹಳ ನಿರ್ಣಾಯಕವಾಗಿರುತ್ತದೆ. ಗ್ರಾಮಗಳಲ್ಲಿ ಜಲಮೂಲಗಳನ್ನು ಸಂರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಸರಕಾರವು ನಿಮ್ಮೊಂದಿಗೆ ಸಹಭಾಗಿಯಾಗಿ, ಸ್ನೇಹಿತನಾಗಿ, ಮತ್ತು ಬೆಂಬಲಿಗನಾಗಿ ನಿಮ್ಮ ಅಭಿವೃದ್ಧಿಯ ಪ್ರಯಾಣದಲ್ಲಿ ಜೊತೆಗಾರನಾಗಿರುತ್ತದೆ. ಜಲ ಜೀವನ ಆಂದೋಲನವಲ್ಲದೆ ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ನಿರ್ಮಿಸಲಾದ ಮನೆಗಳ ವಿಷಯದಲ್ಲಿಯೂ ಇದೇ ಮಾದರಿಯ ಚಿಂತನೆಯನ್ನು ಅಳವಡಿಸಿಕೊಳ್ಳಲಾಗಿದೆ. ದಿಲ್ಲಿಯಲ್ಲಿ ಅಧಿಕಾರಿಗಳು ಈಗ ಯಾವ ರೀತಿಯ ಮನೆ ಕಟ್ಟಬೇಕು ಎಂದಾಗಲೀ, ಅಥವಾ ಯಾವ ಪ್ರದೇಶದಲ್ಲಿ ಅದನ್ನು ಕಟ್ಟಬೇಕು ಎಂಬುದನ್ನಾಗಲೀ ನಿರ್ಧರಿಸುವುದಿಲ್ಲ. ಬುಡಕಟ್ಟು ಗ್ರಾಮಗಳಲ್ಲಿ ವಿಶೇಷ ಪರಂಪರೆಯನ್ನು ಅನುಸರಿಸಿ ಮನೆಗಳನ್ನು ಕಟ್ಟುವುದಿದ್ದರೆ , ಆಗ ದಿಲ್ಲಿಯಲ್ಲಿಯ ಅಧಿಕಾರಿಗಳು ಅದನ್ನು ನಿರ್ಧರಿಸುವುದಿಲ್ಲ. ಬುಡಕಟ್ಟು ಜನರು ಆಶಿಸಿದ ರೀತಿಯಲ್ಲಿಯೇ ಮನೆಗಳನ್ನು ಕಟ್ಟಲಾಗುತ್ತದೆ.
ಸಹೋದರರೇ ಮತ್ತು ಸಹೋದರಿಯರೇ,
ನಿಮ್ಮ ಗ್ರಾಮಗಳ ಅಭಿವೃದ್ಧಿಗಾಗಿ ನಿರ್ಧಾರಗಳನ್ನು ಕೈಗೊಳ್ಳುವ ಸ್ವಾತಂತ್ರ್ಯ ನಿಮಗೆ ಸಿಕ್ಕಿದಾಗ ಮತ್ತು ಆ ನಿರ್ಧಾರಗಳನ್ವಯ ಕೆಲಸ ಮಾಡಲು ಸಾಧ್ಯವಾದಾಗ , ಗ್ರಾಮಗಳಲ್ಲಿಯ ಪ್ರತಿಯೊಬ್ಬರ ವಿಶ್ವಾಸವೂ ವೃದ್ಧಿಯಾಗುತ್ತದೆ. ಇದನ್ನನುಸರಿಸಿ , ಸ್ವಾವಲಂಬಿ ಗ್ರಾಮಗಳು ಮತ್ತು ಸ್ವಾವಲಂಬಿ ಭಾರತ ಆಂದೋಲನಕ್ಕೂ ಬಹಳಷ್ಟು ವೇಗ ದೊರೆಯುತ್ತದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ತಯಾರಾದ ಸರಕುಗಳ ಬಳಕೆ ಹೆಚ್ಚುತ್ತದೆ. ಕೌಶಲ್ಯಯುಕ್ತ ಜನರಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ; ಅವರು ಗಾರೆ ಕೆಲಸದವರಿರಲಿ, ಫಿಟ್ಟರ್ ಇರಲಿ, ಪ್ಲಂಬರ್, ಇಲೆಕ್ಟ್ರೀಶಿಯನ್, ಸಹಿತ ಇಂತಹ ಹಲವಾರು ಸ್ನೇಹಿತರಿಗೆ ಅವರ ಗ್ರಾಮಗಳಲ್ಲಿ ಅಥವಾ ಅವರ ಗ್ರಾಮದ ಹತ್ತಿರದ ಗ್ರಾಮದಲ್ಲಿ ಉದ್ಯೋಗ ದೊರೆಯುತ್ತದೆ.
ಸ್ನೇಹಿತರೇ,
ನಮ್ಮ ಸರಕಾರವು ಕೊಡುತ್ತಿರುವ ಆದ್ಯತೆಯನ್ನು ಈ ಹಿಂದಿನ ಸರಕಾರಗಳು ಗ್ರಾಮಗಳಲ್ಲಿಯ ಬಡತನದ ಬದುಕಿನ ಬಗ್ಗೆಯಾಗಲೀ, ಬುಡಕಟ್ಟು ಜನರ ಬಗ್ಗೆಯಾಗಲೀ, ನಮ್ಮ ಗ್ರಾಮಗಳ ಬಗ್ಗೆಯಾಗಲೀ ನೀಡಿರಲಿಲ್ಲ. ಬಡವರಲ್ಲಿ ಬಡವರಿಗೆ ಎಲ್.ಪಿ.ಜಿ.ಸಿಲಿಂಡರ್ ಒದಗಿಸುವ ಯೋಜನೆ ಗ್ರಾಮಸ್ಥರಿಗೆ ಮತ್ತು ಅರಣ್ಯದ ಸಮೀಪ ಇರುವ ಪ್ರದೆಶಗಳಿಗೆ ಎರಡು ಪ್ರಯೋಜನಗಳನ್ನು ಕೊಡಮಾಡಿದೆ. ಒಂದನೇ ಪ್ರಯೋಜನ ಎಂದರೆ ನಮ್ಮ ಸಹೋದರಿಯರು ಹೊಗೆಯಿಂದ ಮುಕ್ತರಾಗಿದ್ದಾರೆ ಮತ್ತು ಅವರು ಉರುವಲನ್ನು ಹುಡುಕುತ್ತ ಸಮಯ ವ್ಯಯ ಮಾಡಬೇಕಾಗಿಲ್ಲ ಮತ್ತು ಆ ಶ್ರಮ ನಿವಾರಣೆಯಾಗಿದೆ. ಇಲ್ಲಿ ಬಹಳ ಸಂಖ್ಯೆಯಲ್ಲಿ ಕುಳಿತಿರುವ ತಾಯಂದಿರು ಮತ್ತು ಸಹೋದರಿಯರು ಉರುವಲಿನಲ್ಲಿ ಅಡುಗೆ ಮಾಡಿದರೆ , ಆಗ ಅದು ದಿನವೊಂದಕ್ಕೆ 400 ಸಿಗರೇಟು ಸೇದುವುದಕ್ಕೆ ಸಮನಾಗುತ್ತದೆ. ಮಕ್ಕಳು ಮನೆಯಲ್ಲಿ ಅಳುತ್ತಿರುತ್ತಾರೆ, ತಾಯಿ ಅಡುಗೆ ಮಾಡುತ್ತಿದ್ದರೆ , 400 ಸಿಗರೇಟುಗಳಿಗೆ ಸಮನಾದ ಹೊಗೆ ಅವರನ್ನು ಘಾಸಿಗೊಳಿಸುತ್ತಿರುತ್ತದೆ. ಅವರ ಆರೋಗ್ಯ ಹಾಳಾಗುತ್ತದೆ !. ಆದುದರಿಂದ , ನಾವು ಈ ಸಮಸ್ಯೆಯನ್ನು ನಿವಾರಿಸಲು ಬೃಹತ್ ಆಂದೋಲನ ಆಯೋಜಿಸಿದೆವು ಮತ್ತು ಪ್ರತೀ ಮನೆಗೂ ಅನಿಲ ಸ್ಟೌವ್ , ಅನಿಲ ಜಾಡಿಯನ್ನು ಒದಗಿಸಿದೆವು. ಇದರಿಂದ ಈ ತಾಯಂದಿರು ಮತ್ತು ಸಹೋದರಿಯರು 400 ಸಿಗರೇಟುಗಳಿಗೆ ಸಮನಾದ ಹೊಗೆಯನ್ನು ಉಸಿರಾಡಬೇಕಾದ ಅನಿವಾರ್ಯತೆ ನಿವಾರಣೆಯಾಯಿತು. ಇದೇ ವೇಳೆ ಉರುವಲಿಗಾಗಿ ಅರಣ್ಯವನ್ನು ಕಡಿಯುವ ಅನಿವಾರ್ಯತೆಯೂ ಕೊನೆಗೊಂಡಿತು.
ದೇಶದ ಇತರ ಗ್ರಾಮಗಳಂತೆ, ಇಲ್ಲಿಯೂ ವಿದ್ಯುತ್ತಿನ ಸಮಸ್ಯೆ ಬಹಳ ತೀವ್ರವಾಗಿತ್ತು. ಇಂದು ಈ ವಲಯವು ಸೌರ ವಿದ್ಯುತ್ತಿನಲ್ಲಿ ಮೊದಲ ಹೆಜ್ಜೆ ಇಟ್ಟ ಪ್ರದೇಶವಾಗಿದೆ ಮತ್ತು ಆ ನಿಟ್ಟಿನಲ್ಲಿ ದೇಶದ ಪ್ರಮುಖ ಕೇಂದ್ರವಾಗಿ ಬದಲಾಗುತ್ತಿದೆ. ಮಿರ್ಝಾಪುರದ ಸೌರ ವಿದ್ಯುತ್ ಘಟಕ ಇಲ್ಲಿಯ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ. ಅದೇ ರೀತಿ ನೀರಾವರಿ ಸೌಲಭ್ಯದ ಕೊರತೆಯಿಂದ ದೇಶದ ವಿಂಧ್ಯಾಚಲದಂತಹ ಅನೇಕ ಭಾಗಗಳು ಅಭಿವೃದ್ಧಿಯ ಓಟದಲ್ಲಿ ಹಿಂದೆ ಬಿದ್ದಿವೆ. ಆದರೆ ಈ ನಿರ್ದಿಷ್ಟ ವಲಯದಲ್ಲಿ ಹಲವಾರು ವರ್ಷಗಳಿಂದ ತೆವಳುತ್ತಾ ಸಾಗಿದ್ದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು ಇದೇ ವೇಳೆ ಖಾಲಿ ಭೂಮಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸುವ ನಿಟ್ಟಿನಲ್ಲಿ ರೈತರಿಗೆ ಬೆಂಬಲ ನೀಡಲಾಗುತ್ತಿದೆ. ನಮ್ಮ ಆಹಾರ ಉತ್ಪಾದಕರು ಇಂಧನ ಉತ್ಪಾದಕರಾಗಿ ಬದಲಾಗಬೇಕಾಗಿದೆ. ಅವರು ಆಹಾರ ಉತ್ಪಾದಿಸುತ್ತಾರೆ ಮತ್ತು ಜನರಿಗೆ ಉಣಬಡಿಸುತ್ತಾರೆ. ಈಗ ಅವರು ಅದರ ಜೊತೆ ಅವರದೇ ಭೂಮಿಯಲ್ಲಿ ವಿದ್ಯುತ್ ಉತ್ಪಾದಿಸುತ್ತಾರೆ ಮತ್ತು ವಿದ್ಯುತ್ ಒದಗಿಸಿ ಜನರಿಗೆ ಬೆಳಕು ಹಂಚುತ್ತಾರೆ.
ವಿಂಧ್ಯಾ ವಲಯವನ್ನು ಅಭಿವೃದ್ಧಿ ಮಾಡಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅದು ವೈದ್ಯಕೀಯ ಮೂಲಸೌಕರ್ಯ ಇರಲಿ, ಅಥವಾ ಈ ಪ್ರದೇಶದಲ್ಲಿ ರಸ್ತೆಗಳ ನಿರ್ಮಾಣ ಇರಲಿ ಎಲ್ಲಾ ಆಯಾಮಗಳಲ್ಲಿಯೂ ಕೆಲಸ ತ್ವರಿತಗತಿಯಿಂದ ನಡೆಯುತ್ತಿದೆ. ಈ ಮೊದಲು ವಿದ್ಯುತ್ ಪರಿಸ್ಥಿತಿ ಹೇಗಿತ್ತು ಮತ್ತು ಈಗ ಎಷ್ಟು ಉತ್ತಮವಾಗಿದೆ ಎಂಬುದರ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ!
ಸಹೋದರರೇ ಮತ್ತು ಸಹೋದರಿಯರೇ,
ಭೂಮಿ ಮತ್ತು ಮನೆಗಳಿಗೆ ಸಂಬಂಧಿಸಿದ ವಿವಾದಗಳು ಗ್ರಾಮಗಳಲ್ಲಿ, ಹಳ್ಳಿಗಳಲಿ ವಿಶ್ವಾಸ ಕೊರತೆಯನ್ನುಂಟು ಮಾಡುತ್ತಿವೆ ಮತ್ತು ಅಭಿವೃದ್ಧಿಗೆ ತೊಡಕಾಗಿವೆ.. ಉತ್ತರ ಪ್ರದೇಶದ ಈ ಭಾಗಗಳಲ್ಲಿ ವಾಸಿಸುವ ಜನರ ಹೊರತಾಗಿ ಬೇರೆ ಯಾರಾದರೂ ಈ ಸಮಸ್ಯೆಯನ್ನು ಇಷ್ಟು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ !. ಮನೆಗಳಲ್ಲಿ ತಲೆ ತಲಾಂತರಗಳಿಂದ ವಾಸಿಸುತ್ತಾ ಬಂದ ಬಳಿಕವೂ ಗ್ರಾಮದ ಆ ಮನೆಗೆ ಮತ್ತು ಭೂಮಿಗೆ ಸಂಬಂಧಿಸಿದ ಕಾನೂನು ಪತ್ರಗಳು ಇಲ್ಲ. ಮನೆಯ ಉದ್ದ, ಅಗಲ ಮತ್ತು ಎತ್ತರ ಇತ್ಯಾದಿಗಳನ್ನು ವಿವರಿಸುವ ಕಾಗದ ಪತ್ರಗಳು ಇಲ್ಲ. ಜನರು ಈ ರೀತಿ ದಶಕಗಳಿಂದ ವಾಸಿಸುತ್ತಾ ಬಂದಿದ್ದಾರೆ ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವೊಮ್ಮೆ ವಿವಾದಗಳು ತೀವ್ರಗೊಂಡು, ಹೊಡೆದಾಟಗಳಿಗೂ ಕಾರಣವಾಗುತ್ತವೆ. ಸಹೋದರರ ನಡುವೆ ಕಲಹಗಳಾಗುತ್ತವೆ. ತುಂಡು ಭೂಮಿಗಾಗಿ ನೆರೆ ಹೊರೆಯವರ ಜೊತೆ ಹೊಡೆದಾಟಗಳಾಗುತ್ತವೆ.
ಸ್ವಾಮಿತ್ವ ಯೋಜನೆ ಅಡಿಯಲ್ಲಿ , ಉತ್ತರ ಪ್ರದೇಶದಲ್ಲಿ ಮನೆ ಮತ್ತು ಭೂಮಿಯ ನಕ್ಷೆಗಳನ್ನು ತಯಾರಿಸಲಾಗುತ್ತಿದೆ, ಇದಕ್ಕೆ ಡ್ರೋನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ, ಆ ಮೂಲಕ ಈ ಸಮಸ್ಯೆಗೆ ಖಾಯಂ ಪರಿಹಾರವನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಈ ಮ್ಯಾಪ್/ ನಕ್ಷೆಗಳ ಆಧಾರದಲ್ಲಿ ಮನೆ ಮತ್ತು ಭೂಮಿಯ ಕಾನೂನು ಪತ್ರಗಳನ್ನು ಮನೆ ಮತ್ತು ಭೂಮಿಯ ಮಾಲಕರಿಗೆ ಹಸ್ತಾಂತರಿಸಲಾಗುತ್ತಿದೆ. ಇದರ ಪರಿಣಾಮವಾಗಿ ಬಡವರು, ಬುಡಕಟ್ಟು ಜನರು, ಮತ್ತು ಗ್ರಾಮಗಳಲ್ಲಿ ವಾಸಿಸುತ್ತಿರುವ ಅವಕಾಶವಂಚಿತರು ತಮ್ಮ ಮನೆಗಳು ಬಲವಂತವಾಗಿ ಅತಿಕ್ರಮಣ ಮಾಡಲ್ಪಡುವ ಭಯದಿಂದ ಮುಕ್ತರಾಗಿ ತಮ್ಮ ಜೀವನವನ್ನು ಸಾಗಿಸಲು ಸಮರ್ಥರಾಗುತ್ತಾರೆ. ನಿಮ್ಮ ವಲಯದ ಬಹಳಷ್ಟು ಜನರು ಗುಜರಾತಿನಲ್ಲಿ ಕೆಲಸ ಮಾಡುತ್ತಾರೆ ಎಂಬುದು ನನಗೆ ತಿಳಿದಿದೆ. ಕೆಲವೊಮ್ಮೆ ನಾನು ಅವರ ಜೊತೆ ಮಾತನಾಡಿದ್ದಿದೆ ಮತ್ತು ಅವರು ಅವರ ಪೂರ್ವಜರ ಸ್ಥಳವನ್ನು ಬಿಟ್ಟು ಬಂದುದೇಕೆ ಎಂದು ಕೇಳಿದ್ದಿದೆ?. ಆಗ ಅವರು ಹೇಳುತ್ತಿದ್ದರು-“ ನಮಗೆ ಅಲ್ಲಿ ಭೂಮಿಗೆ ಸಂಬಂಧಿಸಿದ ವಿವಾದವಿತ್ತು, ಯಾರೋ ಒಬ್ಬರು ಬಂದು ನಮ್ಮ ಮನೆಯನ್ನು ತಮ್ಮದಾಗಿ ಮಾಡಿಕೊಂಡಿದ್ದಾರೆ. ನಾನು ಇಲ್ಲಿ ಕೆಲಸ ಮಾಡುತ್ತಿರುವಾಗ ಹೊರಗಿನವರೊಬ್ಬರು ಬಂದು ಮನೆಯೊಳಗೆ ಕುಳಿತಿದ್ದಾರೆ” . ಈಗ ಈ ಕಾನೂನು ಪತ್ರಗಳನ್ನು ಪಡೆದ ಬಳಿಕ, ನೀವು ಈ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗುತೀರಿ. ಇದಕ್ಕಿಂತ ಮಿಗಿಲಾಗಿ ನೀವು ಬ್ಯಾಂಕುಗಳಿಂದ ಸಾಲ ಪಡೆಯಬೇಕಾಗಿ ಬಂದರೆ , ನೀವು ಈ ದಾಖಲೆಗಳನ್ನು ಬಳಸಿ ಸಾಲ ಪಡೆಯಬಹುದು. ನೀವು ಬ್ಯಾಂಕುಗಳಿಗೆ ಹೋಗಬಹುದು ಮತ್ತು ಈ ಪತ್ರಗಳನ್ನು ತೋರಿಸಿ ಸಾಲವನ್ನು ಪಡೆಯಬಹುದು.
ಸ್ನೇಹಿತರೇ,
ಇಂದು “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್” ಮಂತ್ರ ದೇಶದ ಪ್ರತೀ ಭಾಗದಲ್ಲಿಯೂ ಮತ್ತು ಪ್ರತೀ ನಾಗರಿಕರಿಗೆ ಭರವಸೆಯ ಮತ್ತು ವಿಶ್ವಾಸದ ಮಂತ್ರವಾಗಿದೆ. ಇಂದು ಪ್ರತಿಯೊಬ್ಬ ವ್ಯಕ್ತಿಯೂ, ದೇಶದ ಪ್ರತಿಯೊಂದು ಭಾಗವೂ ಸರಕಾರ ತಮ್ಮನ್ನು ತಲುಪುತ್ತಿದೆ ಎಂಬ ಭಾವವನ್ನು ಮತ್ತು ಅವರು ದೇಶದ ಅಭಿವೃದ್ಧಿಯ ಸಹಭಾಗಿಗಳೆಂಬ ಭಾವನೆಯನ್ನು ಮೂಡಿಸಿಕೊಂಡಿದ್ದಾರೆ. ಇಂದು ಈ ಭರವಸೆ, ವಿಶ್ವಾಸವು ನಮ್ಮ ಬುಡಕಟ್ಟು ಪ್ರದೇಶಗಳಲ್ಲೂ ತಲುಪಿದ್ದು, ಇದು ಹೊಸ ಚೈತನ್ಯವನ್ನು ಪ್ರತಿಫಲಿಸುತ್ತಿದೆ; ನಾನದನ್ನು ಕಾಣ ಬಲ್ಲೆ. ಇಂದು ಮೂಲಸೌಕರ್ಯಗಳು ಮಾತ್ರ ಬುಡಕಟ್ಟು ಪ್ರದೇಶಗಳನ್ನು ತಲುಪುತ್ತಿರುವುದಲ್ಲ, ಈ ಪ್ರದೇಶಗಳಲ್ಲಿ ವಿಶೇಷ ಯೋಜನೆಗಳಲ್ಲಿ ಕೆಲಸಗಳು ಸಾಗುತ್ತಿವೆ. ಬುಡಕಟ್ಟು ಯುವಕರ ವಿದ್ಯಾಭ್ಯಾಸಕ್ಕಾಗಿ ದೇಶಾದ್ಯಂತ ನೂರಾರು ಹೊಸ ಏಕಲವ್ಯ ಮಾದರಿ ಸನಿವಾಸಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಇದು ನಮ್ಮ ಬುಡಕಟ್ಟು ಪ್ರದೇಶದ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸಲಿದೆ. ಉತ್ತರ ಪ್ರದೇಶದಲ್ಲಿ ಇಂತಹ ಹಲವಾರು ಶಾಲೆಗಳನ್ನು ತೆರೆಯಲಾಗುತ್ತಿದೆ. ಈ ವ್ಯವಸ್ಥೆ ಪ್ರತೀ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ ಲಭ್ಯ ಇರಬೇಕು ಎಂಬ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ.
ಶಿಕ್ಷಣದ ಜೊತೆ ಆದಾಯ ಗಳಿಕೆಯ ಸಾಧ್ಯತೆಯ ಬಗ್ಗೆಯೂ ನಾವು ಪರ್ಯಾಲೋಚಿಸುತ್ತಿದ್ದೇವೆ. 1250 ವನ್ ಧನ್ ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸಲಾಗಿದ್ದು, ಇದು ಬುಡಕಟ್ಟು ಸ್ನೇಹಿತರಿಗೆ ಅವರ ಅರಣ್ಯೋತ್ಪನ್ನಗಳಿಗೆ ಹೆಚ್ಚಿನ ಬೆಲೆ ಪಡೆಯಲು ಸಹಾಯ ಮಾಡಲಿದೆ. ಇವುಗಳ ಮೂಲಕ ಕೋಟ್ಯಾಂತರ ರೂಪಾಯಿಯ ವಹಿವಾಟು ನಡೆದಿದೆ.
ಇದಕ್ಕಿಂತ ಹೆಚ್ಚಾಗಿ, ಆರಣ್ಯೋತ್ಪನ್ನ ಆಧಾರಿತ ಕೈಗಾರಿಕೆಗಳು ಬುಡಕಟ್ಟು ಪ್ರದೇಶಗಳಲ್ಲಿ ಸ್ಥಾಪನೆಯಾಗುವಂತಾಗಲು ಹಲವಾರು ಅವಶ್ಯ ಕ್ರಮಗಳನ್ನು ಆತ್ಮ ನಿರ್ಭರ ಭಾರತ ಅಭಿಯಾನದಡಿಯಲ್ಲಿ ಕೈಗೊಳ್ಳಲಾಗುತ್ತಿದೆ. ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಹಣಕಾಸು ಕೊರತೆ ಎದುರಾಗದಂತೆ ನೋಡಿಕೊಳ್ಳಲು ಜಿಲ್ಲಾ ಖನಿಜ ನಿಧಿಯನ್ನು ಸ್ಥಾಪಿಸಲಾಗಿದೆ. ಬುಡಕಟ್ಟು ಪ್ರದೇಶಗಳಿಂದ ಲಭಿಸುವ ಸಂಪತ್ತಿನಲ್ಲಿ ಒಂದಂಶವನ್ನು ಅದೇ ಪ್ರದೇಶದಲ್ಲಿ ಹೂಡಿಕೆ ಮಾಡಬೇಕು ಎಂಬ ಚಿಂತನೆಯಲ್ಲಿ ಇದನ್ನು ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಕೂಡಾ 800 ಕೋ.ರೂ. ಗಳನ್ನು ಈ ನಿಧಿಯಡಿ ಸಂಗ್ರಹಿಸಲಾಗಿದೆ. ಇದರಡಿ 6,500 ಕ್ಕೂ ಅಧಿಕ ಯೋಜನೆಗಳಿಗೆ ಅಂಗೀಕಾರ ನೀಡಲಾಗಿದೆ ಮತ್ತು ನೂರಾರು ಯೋಜನೆಗಳು ಪೂರ್ಣಗೊಂಡಿವೆ.
ಸ್ನೇಹಿತರೇ,
ಇಂತಹ ಯೋಜನೆಗಳು ಪ್ರತೀದಿನ ಭಾರತದ ವಿಶ್ವಾಸವನ್ನು ವೃದ್ಧಿಸುತ್ತಿವೆ. ನಾವೆಲ್ಲರೂ ಈ ವಿಶ್ವಾಸ, ಭರವಸೆಗಳೊಂದಿಗೆ ಸ್ವಾವಲಂಬಿ ಭಾರತವನ್ನು ನಿರ್ಮಾಣ ಮಾಡುವಲ್ಲಿ ತೊಡಗಿಕೊಂಡಿದ್ದೇವೆ. ವಿಂಧ್ಯಾ ಜಲ ಪೂರೈಕೆ ಯೋಜನೆಯು ಈ ವಿಶ್ವಾಸವನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬ ಬಗ್ಗೆ ನನಗೆ ಭರವಸೆ ಇದೆ.
ಹೌದು, ಇದೇ ವೇಳೆ ನೀವು ಕೊರೋನಾ ಸೋಂಕಿನ ಅಪಾಯ ಇನ್ನೂ ಇದೆ ಎಂಬುದನ್ನು ಮರೆಯಬಾರದು. ಸಾಮಾಜಿಕ ಅಂತರ ಅಥವಾ ’ದೋ ಗಜ್ ದೂರಿ’ , ಮುಖಗವಸು ಧರಿಸುವುದು ಮತ್ತು ಸಾಮೂನಿನಿಂದ ಆಗಾಗ ಕೈತೊಳೆಯುವಂತಹ ನಿಯಮಗಳನ್ನು ಯಾವುದೇ ಸಂದರ್ಭದಲ್ಲಿಯೂ ಮರೆಯಬಾರದು. ಇದರಲ್ಲಿ ಸ್ವಲ್ಪವೇ ಸ್ವಲ್ಪ ನಿರ್ಲಕ್ಷ್ಯವೂ ವ್ಯಕ್ತಿಗೆ, ಕುಟುಂಬಕ್ಕೆ, ಮತ್ತು ಗ್ರಾಮಕ್ಕೆ ಅಪಾಯ ತರಬಹುದು. ನಮ್ಮ ವಿಜ್ಞಾನಿಗಳು ಔಷಧಿ ಹುಡುಕಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಇಡೀ ವಿಶ್ವದ ವಿಜ್ಞಾನಿಗಳು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ, ಶ್ರೀಮಂತ ದೇಶಗಳ ಮತ್ತು ಬಡ ದೇಶಗಳ ಜನರೂ ಈ ಕೆಲಸದಲ್ಲಿ ಕೈಜೋಡಿಸಿದ್ದಾರೆ. ಔಷಧಿ ಲಭಿಸುವವರೆಗೆ ಅಲ್ಲಿ ಯಾವುದೇ ನಿರ್ಲಕ್ಷ್ಯ ಇರಬಾರದು.
ನೀವಿದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಿಮಗೆ ಬಹಳ ಧನ್ಯವಾದಗಳು ಮತ್ತು ನನ್ನ ಶುಭ ಹಾರೈಕೆಗಳು.
***
(Release ID: 1675273)
Visitor Counter : 230
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam