ಪ್ರಧಾನ ಮಂತ್ರಿಯವರ ಕಛೇರಿ

ಜಿ-20ರಾಷ್ಟ್ರಗಳ ನಾಯಕರ 15ನೇ ಶೃಂಗಸಭೆ

Posted On: 22 NOV 2020 11:26PM by PIB Bengaluru
  1. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ನವೆಂಬರ್ 21-22ರಂದು ಸೌದಿ ಅರೇಬಿಯಾದಲ್ಲಿ ವರ್ಚುವಲ್ ರೂಪದಲ್ಲಿ ನಡೆದ ಜಿ-20ರಾಷ್ಟ್ರಗಳ 15ನೇ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಜಿ-20 ಶೃಂಗಸಭೆಯ 2ನೇ ದಿನದ ಕಾರ್ಯಸೂಚಿ, ಸಮಗ್ರ, ಸುಸ್ಥಿರ ಮತ್ತು ಮರುಸ್ಥಿತಿಸ್ಥಾಪಕತ್ವ ಭವಿಷ್ಯ ನಿರ್ಮಾಣದ ಕುರಿತು ಗೋಷ್ಠಿ ಮತ್ತು ಶೃಂಗಸಭೆಗೆ ಹೊಂದಿಕೊಂಡ ಕಾರ್ಯಕ್ರಮದಲ್ಲಿ ಭೂ ಗ್ರಹದ ಸಂರಕ್ಷಣೆ ಕುರಿತಂತೆ ಚರ್ಚೆ ನಡೆಯಿತು.
  2. ಪ್ರಧಾನಮಂತ್ರಿಗಳು ತಮ್ಮ ಭಾಷಣದಲ್ಲಿ ಕೋವಿಡ್ ನಂತರದ ಜಗತ್ತಿನಲ್ಲಿ ಸಮಗ್ರ, ಮರು ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಪುನಃಶ್ಚೇತನಕ್ಕೆ ಒತ್ತು ನೀಡಬೇಕು, ಪರಿಣಾಮಕಾರಿ ಆಡಳಿತ ನೀಡುವ ಅಗತ್ಯವಿದೆ ಹಾಗೂ ಸ್ವಭಾವ ಮತ್ತು ಆಡಳಿತದಲ್ಲಿ ಸುಧಾರಣೆಗಳ ಮೂಲಕ ಬಹುಪಕ್ಷೀಯತೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಮತ್ತು ಬಹುಪಯೋಗಿ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಇದು ಸಕಾಲ ಎಂದು ಪ್ರತಿಪಾದಿಸಿದರು.
  3. ‘ಯಾರನ್ನೂ ಹಿಂದೆ ಬಿಡುವುದಿಲ್ಲ’ ಎಂಬ ಗುರಿಯೊಂದಿಗೆ 2030ರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಪ್ರಾಮುಖ್ಯತೆ ಕುರಿತು ಪ್ರಧಾನಮಂತ್ರಿ ಮಾತನಾಡಿದರು. ಅವರು, ಭಾರತ ಕೂಡ ಅದೇ ತತ್ವವನ್ನು “ಸುಧಾರಣೆ-ಸಾಧನೆ-ಪರಿವರ್ತನೆ’’ ಕಾರ್ಯತಂತ್ರದ ಮೂಲಕ ಪಾಲನೆ ಮಾಡುತ್ತಾ ಮುನ್ನಡೆಯುತ್ತಿದೆ ಮತ್ತು ಜೊತೆಗೆ ಸಮಗ್ರ ಅಭಿವೃದ್ಧಿ ಪ್ರಯತ್ನಗಳು ಸಾಗಿವೆ ಎಂದು ಹೇಳಿದರು.
  4. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪರಿಸ್ಥಿತಿಗಳು ಬದಲಾಗುತ್ತಿವೆ ಎಂದ ಅವರು, ಭಾರತ ‘ಸ್ವಾವಲಂಬಿ ಭಾರತ’ ಅಭಿಯಾನವನ್ನು ಕೈಗೊಂಡಿದೆ ಎಂದು ಹೇಳಿದರು. ಆ ದೂರದೃಷ್ಟಿಯೊಂದಿಗೆ, ದಕ್ಷತೆ ಮತ್ತು ಅವಲಂಬನೆ ಆಧರಿಸಿ ಭಾರತ ಜಾಗತಿಕ ಆರ್ಥಿಕತೆ ಮತ್ತು ಜಾಗತಿಕ ಪೂರೈಕೆ ಸರಣಿಯ ಪ್ರಮುಖ ಆಧಾರ ಸ್ಥಂಬ ಮತ್ತು ವಿಶ್ವಾಸಾರ್ಹ ರಾಷ್ಟ್ರವಾಗಿದೆ ಎಂದು ಪ್ರಧಾನಿ ಹೇಳಿದರು. ಜಾಗತಿಕ ಮಟ್ಟದಲ್ಲೂ ಸಹ ಭಾರತ, ಅಂತಾರಾಷ್ಟ್ರೀಯ ಸೌರ ಮೈತ್ರಿ ಮತ್ತು ವಿಪತ್ತು ನಿರ್ವಹಣಾ ಮೂಲಸೌಕರ್ಯ ಸ್ಥಿತಿಸ್ಥಾಪಕತ್ವ ಮೈತ್ರಿಕೂಟ ಸ್ಥಾಪನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
  5. ಶೃಂಗಸಭೆಗೆ ಹೊಂದಿಕೊಂಡಂತೆ ನಡೆದ ‘ಭೂಮಿಯ ಸಂರಕ್ಷಣೆ’ ಕುರಿತಂತೆ ಮುದ್ರಿತ ಸಂದೇಶದ ಮೂಲಕ ಮಾತನಾಡಿದ ಪ್ರಧಾನಮಂತ್ರಿ ಅವರು, ಹವಾಮಾನ ವೈಪರೀತ್ಯದ ವಿರುದ್ಧ ಸಮಗ್ರ, ಸಂಘಟಿತ ಮತ್ತು ಸಮನ್ವಯದಿಂದ ಹೋರಾಡುವ ಅಗತ್ಯವಿದೆ ಎಂದು ಹೇಳಿದರು. ಭಾರತ ಕೇವಲ ಪ್ಯಾರೀಸ್ ಒಪ್ಪಂದಗಳನ್ನು ಪಾಲನೆ ಮಾಡುತ್ತಿಲ್ಲ, ಅದನ್ನೂ ಮೀರಿ ಕೆಲಸ ಮಾಡುತ್ತಿದೆ ಎಂದರು. ಪರಿಸರದೊಂದಿಗೆ ಸೌಹಾರ್ದತೆಯಿಂದ ಬಾಳ್ವೆ ನಡೆಸುವ ನಮ್ಮ ಸಾಂಪ್ರದಾಯಿಕ ಪುರಾಣ ಕತೆಗಳಿಂದ ಸ್ಪೂರ್ತಿ ಪಡೆದಿದ್ದೇವೆ ಮತ್ತು ಭಾರತ, ಕಡಿಮೆ ಇಂಗಾಲ ಮತ್ತು ಹವಾಮಾನ ಸ್ಥಿತಿ ಸ್ಥಾಪಕ ಅಭಿವೃದ್ಧಿಯ ಪದ್ಧತಿಗಳು ನಮ್ಮ ಸರ್ಕಾರ ಬದ್ಧತೆಯನ್ನು ಹೊಂದಿದೆ. ಮನುಕುಲದ ಅಭ್ಯುದಯವಾಗಬೇಕಾದರೆ, ಪ್ರತಿಯೊಬ್ಬ ವ್ಯಕ್ತಿಯೂ ಸಹ ಏಳಿಗೆ ಹೊಂದಬೇಕು. ಕಾರ್ಮಿಕರನ್ನು ಕೇವಲ ಉತ್ಪಾದನೆಗೆ ಮಾತ್ರ ಸೀಮಿತಗೊಳಿಸದೆ, ಪ್ರತಿಯೊಬ್ಬ ಕಾರ್ಮಿಕರ ಮನುಷ್ಯತ್ವದ ಘನತೆಗೆ ಒತ್ತು ನೀಡಬೇಕು. ನಮ್ಮ ಭೂ ಗ್ರಹವನ್ನು ಸಂರಕ್ಷಿಸಲು ನಾವು ಅಂತಹ ಮನೋಭಾವವನ್ನು ಹೊಂದುವುದು ಅತ್ಯಂತ ಹೆಚ್ಚು ಅವಶ್ಯಕತೆಯಿದೆ ಎಂದರು.
  6. ರಿಯಾದ್ ಶೃಂಗಸಭೆಯನ್ನು ಯಶಸ್ವಿಯಾಗಿ ಸಂಘಟಿಸಿದ್ದಕ್ಕಾಗಿ ಸೌದಿ ಅರೇಬಿಯಾಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ ಪ್ರಧಾನಮಂತ್ರಿ ಅವರು, 2021ರ ಅಧ್ಯಕ್ಷೀಯ ಸ್ಥಾನವನ್ನು ಇಟಲಿ ವಹಿಸಿಕೊಂಡಿದ್ದನ್ನು ಸ್ವಾಗತಿಸಿದರು. 2022ರಲ್ಲಿ ಇಂಡೋನೇಷ್ಯಾ, 2023ರಲ್ಲಿ ಭಾರತ ಮತ್ತು 2024ರಲ್ಲಿ ಬ್ರೆಜಿಲ್ ಜಿ-20ರಾಷ್ಟ್ರಗಳ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ತೀರ್ಮಾನಿಸಲಾಯಿತು.
  7. ಶೃಂಗಸಭೆ ಕೊನೆಯಲ್ಲಿ, ಜಿ-20 ರಾಷ್ಟ್ರಗಳ ನಾಯಕರ ಘೋಷಣೆ ಹೊರಡಿಸಲಾಯಿತು, ಅದರಲ್ಲಿ ಸದ್ಯದ ಸವಾಲುಗಳಿಂದ ಹೊರಬರಲು ಸಮನ್ವಯದ ಜಾಗತಿಕ ಕ್ರಿಯೆ, ಐಕ್ಯತೆ ಮತ್ತು ಬಹುಪಕ್ಷೀಯ ಸಹಕಾರ ಅಗತ್ಯತೆಗೆ ಮತ್ತು 21ನೇ ಶತಮಾನದ ಅವಕಾಶಗಳನ್ನು ಅರ್ಥೈಸಿಕೊಂಡು ಜನರ ಸಬಲಕರಣಕ್ಕೆ, ಭೂ ಗ್ರಹದ ಸಂರಕ್ಷಣೆಗೆ ಮತ್ತು ಹೊಸ ಆಯಾಮಗಳನ್ನು ರೂಪಿಸಲು ಒತ್ತು ನೀಡಲು ಕರೆ ನೀಡಲಾಯಿತು.

***


(Release ID: 1675040) Visitor Counter : 205