ಪ್ರಧಾನ ಮಂತ್ರಿಯವರ ಕಛೇರಿ
ಜಿ-20 ನಾಯಕರ 15ನೇ ಶೃಂಗಸಭೆ
Posted On:
21 NOV 2020 10:35PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸೌದಿ ಅರೆಬಿಯಾದಲ್ಲಿ 2020ರ ನವೆಂಬರ್ 21-22ರಂದು ನಡೆದ ಜಿ-20 ರಾಷ್ಟ್ರಗಳ ನಾಯಕರ 15ನೇ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವರ್ಚುವಲ್ ರೂಪದಲ್ಲಿ ನಡೆದ ಶೃಂಗಸಭೆಯಲ್ಲಿ 19 ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು/ಸರ್ಕಾರಗಳು, ಆಹ್ವಾನಿತ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
2. ಪ್ರಧಾನಮಂತ್ರಿ ಅವರು, ಈ ವರ್ಷದ ಜಿ-20ಯ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ನಾಯಕತ್ವಕ್ಕಾಗಿ ಹಾಗೂ ಕೋವಿಡ್-19 ಸಾಂಕ್ರಾಮಿಕ ಒಡ್ಡಿರುವ ಅಡೆತಡೆಗಳು ಮತ್ತು ಸವಾಲುಗಳ ನಡುವೆಯೇ 2020ರ 2ನೇ ಜಿ-20 ನಾಯಕರ ವರ್ಚುವಲ್ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಸೌದಿ ಅರೆಬಿಯಾದ ದೊರೆಯನ್ನು ಅಭಿನಂದಿಸಿದರು.
3. ಸೌದಿ ಅರೆಬಿಯಾದ ಅಧ್ಯಕ್ಷತೆಯಲ್ಲಿ ನಡೆದ ಈ ಶೃಂಗಸಭೆಯ ಘೋಷವಾಕ್ಯ “21ನೇ ಶತಮಾನದ ಅವಕಾಶಗಳನ್ನು ಎಲ್ಲರೂ ಅರಿತುಕೊಳ್ಳುವುದು’’ಎಂಬುದಾಗಿದೆ. ಪ್ರಸಕ್ತ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಎರಡು ದಿನಗಳ ಶೃಂಗಸಭೆಯಲ್ಲಿ ಎರಡು ಗೋಷ್ಠಿಗಳಲ್ಲಿ ಸಾಂಕ್ರಾಮಿಕದಿಂದ ಹೊರಬರುವುದು, ಆರ್ಥಿಕ ಪುನಶ್ಚೇತನ, ಉದ್ಯೋಗ ಪುನರ್ ಸ್ಥಾಪನೆ ಮತ್ತು ಸಮಗ್ರ, ಸುಸ್ಥಿರ ಮತ್ತು ಸ್ಥಿತಿ ಸ್ಥಾಪಕತ್ವ ಭವಿಷ್ಯ ನಿರ್ಮಾಣ ವಿಷಯಗಳಿಗೆ ಒತ್ತು ನೀಡಲಾಗಿದೆ. ಅಲ್ಲದೆ ಎರಡು ದಿನಗಳ ಶೃಂಗಸಭೆಯಲ್ಲಿ ಸಾಂಕ್ರಾಮಿಕ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಮತ್ತು ಭೂಮಿಯ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.
4. ಪ್ರಧಾನಮಂತ್ರಿ ಅವರು ಕೋವಿಡ್-19 ಸಾಂಕ್ರಾಮಿಕ ಮಾನವ ಇತಿಹಾಸಕ್ಕೆ ದೊಡ್ಡ ತಿರುವು ನೀಡುವಲ್ಲಿ ಅತ್ಯಂತ ಪ್ರಾಮುಖ್ಯತೆ ವಹಿಸಿದೆ ಎಂದು ಬಣ್ಣಿಸಿದರು ಹಾಗೂ ಎರಡನೇ ಜಾಗತಿಕ ಮಹಾಯುದ್ಧದ ನಂತರ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ಸವಾಲಾಗಿದೆ ಎಂದರು. ಕೇವಲ ಆರ್ಥಿಕ ಪುನಶ್ಚೇತನ, ಉದ್ಯೋಗ ಮತ್ತು ವ್ಯಾಪಾರಕ್ಕೆ ಮಾತ್ರವಲ್ಲ, ಭವಿಷ್ಯದ ಮನುಕುಲಕ್ಕೆ ನಾವೆಲ್ಲರೂ ಉತ್ತರದಾಯಿಗಳಾಗಿರುವುದರಿಂದ ಭೂಗ್ರಹದ ಸಂರಕ್ಷಣೆಗೆ ಒತ್ತು ನೀಡಿ ಜಿ-20 ನಾಯಕರು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.
5. ಕೊರೊನಾ ನಂತರದ ಜಗತ್ತಿನಲ್ಲಿ ಹೊಸ ಜಾಗತಿಕ ಸೂಚ್ಯಂಕ 4 ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಅವುಗಳೆಂದರೆ, ಭಾರೀ ಪ್ರಮಾಣದ ಪ್ರತಿಭಾವಂತ ಸಂಪನ್ಮೂಲ, ತಂತ್ರಜ್ಞಾನ ಸಮಾಜದ ಎಲ್ಲ ವರ್ಗಗಳಿಗೂ ತಲುಪುತ್ತದೆ ಎಂಬುದನ್ನು ಖಾತ್ರಿಪಡಿಸುವುದು, ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಮನೋಭಾವದೊಂದಿಗೆ ಭೂ ತಾಯಿಯನ್ನು ನಿರ್ವಹಣೆ ಮಾಡುವುದು ಎಂದು ಪ್ರಧಾನಮಂತ್ರಿ ಹೇಳಿದರು. ಇವುಗಳ ಆಧಾರದ ಮೇಲೆ ಜಿ-20, ನವ ಜಗತ್ತು ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಬೇಕು ಎಂದರು.
6. ಕಳೆದ ಕೆಲವು ದಶಕಗಳಿಂದೀಚೆಗೆ ಬಂಡವಾಳ ಮತ್ತು ಹಣಕಾಸಿಗೆ ಒತ್ತು ನೀಡಲಾಗುತ್ತಿದೆ ಎಂದು ಬಲವಾಗಿ ಪ್ರತಿಪಾದಿಸಿದ ಅವರು, ಭಾರೀ ಪ್ರಮಾಣದ ಪ್ರತಿಭಾವಂತ ಮಾನವ ಸಂಪನ್ಮೂಲ ಸೃಷ್ಟಿಗೆ ಬಹು ಬಗೆಯ ಕೌಶಲ್ಯ ಮತ್ತು ಮರುಕೌಶಲ್ಯಕ್ಕೆ ಒತ್ತು ನೀಡುವುದಕ್ಕೆ ಸಕಾಲ ಎಂದರು. ಇದು ಕೇವಲ ನಾಗರಿಕರ ಘನತೆಯನ್ನು ವೃದ್ಧಿಸುವುದಷ್ಟೇ ಅಲ್ಲ. ಹೆಚ್ಚು ಜನರಿಗೆ ಬಿಕ್ಕಟ್ಟುಗಳನ್ನು ಎದುರಿಸಲು ಸ್ಥಿತಿ ಸ್ಥಾಪಕತ್ವ ಮೂಡುವಂತೆ ಮಾಡುತ್ತದೆ. ಹೊಸ ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಾವುದೇ ಮೌಲ್ಯಮಾಪನ ಮಾಡುವಾಗ, ಅದು ಸುಲಭ ಜೀವನ ಮತ್ತು ಗುಣಮಟ್ಟ ಜೀವನದ ಪರಿಣಾಮಗಳನ್ನು ಆಧರಿಸಿರಬೇಕಾಗುತ್ತದೆ ಎಂದರು.
7. ಪ್ರಧಾನಮಂತ್ರಿ ಅವರು, ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕರೆ ನೀಡಿದರು. ಇದರಿಂದಾಗಿ ನಮ್ಮ ಪ್ರಜೆಗಳು ಹಂಚಿಕೆಯ ಸವಾಲುಗಳನ್ನು ಎದುರಿಸಲು ಮತ್ತು ಅವರ ವಿಶ್ವಾಸ ವೃದ್ಧಿಗೆ ಸ್ಫೂರ್ತಿ ದೊರಕುತ್ತದೆ ಎಂದು ಹೇಳಿದರು. ಪರಿಸರ ಮತ್ತು ಪ್ರಕೃತಿ ವಿಚಾರದಲ್ಲಿ ನಾವು ಮಾಲಿಕರಂತೆ ವರ್ತಿಸಬಾರದು. ಟ್ರಸ್ಟಿಗಳಂತೆ ವರ್ತಿಸಬೇಕು. ಇದರಿಂದ ಸಮಗ್ರ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ನೆರವಾಗಲಿದೆ. ಈ ತತ್ವ ಪ್ರತಿಯೊಬ್ಬರ ಮೇಲೆ ತಗುಲುವ ಕಾರ್ಬನ್ ಫುಟ್ ಪ್ರಿಂಟ್ ಮಾನದಂಡವಾಗಲಿದೆ.
8. ಕೋವಿಡ್ ನಂತರದ ಜಗತ್ತಿನಲ್ಲಿ ‘ಎಲ್ಲಿಂದ ಬೇಕಾದರು ಕೆಲಸ ಮಾಡುವುದು’(ವರ್ಕ್ ಫ್ರಮ್ ಎನಿವೇರ್) ಹೊಸ ಸಾಮಾನ್ಯ ಸಂಗತಿಯಾಗಿದೆ ಎಂದ ಪ್ರಧಾನಮಂತ್ರಿ ಅವರು, ಜಿ-20 ವರ್ಚುವಲ್ ಸಚಿವಾಲಯ ಈ ಸಂಗತಿಗಳ ಬಗ್ಗೆ ನಿಗಾವಹಿಸಬೇಕು ಮತ್ತು ಆ ಕುರಿತ ದಾಖಲೆಗಳನ್ನು ಭಂಡಾರದಲ್ಲಿಡಬೇಕು ಎಂದು ಹೇಳಿದರು.
9. ಜಿ-20 ನಾಯಕರ 15ನೇ ಶೃಂಗಸಭೆ 2020ರ ನವೆಂಬರ್ 22ರಂದು ಸಹ ಮುಂದುವರಿಯಲಿದೆ. ಅದು ನಾಯಕರ ಘೋಷಣೆ ಅಳವಡಿಕೆಯೊಂದಿಗೆ ಮತ್ತು ಅಧ್ಯಕ್ಷೀಯ ಸ್ಥಾನ ಸೌದಿ ಅರೆಬಿಯಾದಿಂದ ಇಟಲಿಗೆ ಹಸ್ತಾಂತರವಾಗುವುದರೊಂದಿಗೆ ಸಮಾಪನಗೊಳ್ಳಲಿದೆ.
***
(Release ID: 1674968)
Visitor Counter : 252
Read this release in:
English
,
Hindi
,
Punjabi
,
Assamese
,
Manipuri
,
Urdu
,
Marathi
,
Bengali
,
Gujarati
,
Odia
,
Tamil
,
Telugu
,
Malayalam