ಪ್ರಧಾನ ಮಂತ್ರಿಯವರ ಕಛೇರಿ

ವಾರಾಣಸಿಯಲ್ಲಿ ನಾನಾ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಪಠ್ಯ

Posted On: 09 NOV 2020 2:00PM by PIB Bengaluru

ನಿಮ್ಮೆಲ್ಲರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿರುವುದು ನನ್ನ ಆಶೀರ್ವಾದ ಎಂದು ಭಾವಿಸುತ್ತೇನೆ. ನಗರದ ಅಭಿವೃದ್ಧಿ ಕೆಲಸ ಕಾರ್ಯಗಳು ಮತ್ತು ಸರ್ಕಾರದ ನೀತಿ ನಿರ್ಧಾರಗಳಿಂದಲೂ ವಾರಾಣಸಿ ನಗರದಲ್ಲಿ  ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ. ಇದು ಸಾಧ್ಯವಾಗಿರುವುದು ಬಾಬಾ ವಿಶ್ವನಾಥನ ಆಶೀರ್ವಾದದಿಂದ, ಆದ್ದರಿಂದ ನಾನು ವರ್ಚುವಲ್ ಮೂಲಕ ಅಲ್ಲಿ ಭಾಗವಹಿಸಿದ್ದರೂ ಕಾಶಿಯ ಸಂಪ್ರದಾಯವನ್ನು ನೆನಪಿಸಿಕೊಳ್ಳದೆ ಮುಂದೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಈ ಕಾರ್ಯಕ್ರಮದ ಜೊತೆ ಸಂಬಂಧಿಸಿದವರು ಯಾರೇ ಆಗಿರಬಹುದು. ನಾವೆಲ್ಲರೂ ಸೇರಿ ಒಟ್ಟಾರೆ ‘ಹರ ಹರ ಮಹದೇವ’ ಎಂದು ಹೇಳೋಣ. ಎಲ್ಲರಿಗೂ ಧಂತೇರಸ್, ದೀಪಾವಳಿ, ಅನ್ನಕೂಟ್, ಗೋವರ್ಧನ ಪೂಜಾ ಮತ್ತು ಛಾತ್ ಪೂಜಾದ ಶುಭಾಶಯಗಳು. ತಾಯಿ ಅನ್ನಪೂರ್ಣೆ ನಿಮ್ಮೆಲ್ಲರಿಗೂ ಸಮೃದ್ಧಿಯನ್ನುಂಟುಮಾಡಲಿ. ಮಾರುಕಟ್ಟೆಯಲ್ಲಿ ಉತ್ತಮ ವ್ಯಾಪಾರಗಳಾಗಲಿ. ಕಾಶಿಯ ಬೀದಿ ಬೀದಿಗಳಲ್ಲಿ ಸಂಭ್ರಮದ ವಾತಾವರಣ ನೆಲೆಸಲಿ. ವಾರಾಣಸಿಯ ಸೀರೆಗಳ ವ್ಯಾಪಾರವು ಪ್ರಕಾಶಮಾನವಾಗಿ ಹೊಳೆಯಲಿ.

ನಾವು ಕೊರೊನಾ ವಿರುದ್ಧ ಹೋರಾಡುತ್ತಿದ್ದರೂ ನಮ್ಮ ರೈತರು ಕೃಷಿ ಕಾರ್ಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಹಾಗಾಗಿ ಈ ಬಾರಿ ವಾರಾಣಸಿ ಸೇರಿದಂತೆ ಇಡೀ ಪೂರ್ವಾಂಚಲ ಪ್ರದೇಶದಲ್ಲಿ ಉತ್ತಮ ಇಳುವರಿ ಬಂದಿದೆ. ರೈತರ ಪರಿಶ್ರಮ, ಅದು ಅವರಿಗಾಗಿ ಮಾತ್ರವಲ್ಲ, ಅದರಿಂದ ಇಡೀ ದೇಶಕ್ಕೆ ಒಳಿತಾಗಿದೆ. ಅನ್ನದಾತನ ಕಠಿಣ ಪರಿಶ್ರಮ ಅತ್ಯಂತ ಶ್ಲಾಘನೀಯ. ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಜಿ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಶ್ರೀ ಕೇಶವ್ ಪ್ರಸಾದ್ ಮೌರ್ಯ ಜಿ. ಉತ್ತರ ಪ್ರದೇಶ ಸರ್ಕಾರದ ಸಚಿವರುಗಳೇ, ಶಾಸಕರೇ ಮತ್ತು ವಾರಾಣಸಿಯ ಎಲ್ಲಾ ಚುನಾಯಿತ ಸಾರ್ವಜನಿಕ ಪ್ರತಿನಿಧಿಗಳೇ, ಈ ಕಾರ್ಯಕ್ರಮದಲ್ಲಿ ನನ್ನೊಂದಿಗಿರುವ ಎಲ್ಲ ವಾರಾಣಸಿಯ ಎಲ್ಲಾ ನೆಚ್ಚಿನ ಸಹೋದರ ಸಹೋದರಿಯರೆ,

ಮಹದೇವನ ಆಶೀರ್ವಾದದಿಂದ ಕಾಶಿ ಎಂದಿಗೂ ನಿಲ್ಲುವುದಿಲ್ಲ. ಅದು ಗಂಗಾ ಮಾತೆಯಂತೆ ನಿರಂತರವಾಗಿ ಹರಿಯುತ್ತಿರುತ್ತದೆ. ಕೊರೋನಾದ ಸಂಕಷ್ಟದ ಸಮಯದಲ್ಲೂ ಕಾಶಿಯ ಬೆಳವಣಿಗೆ ಈ ರೀತಿಯಲ್ಲಿ ಮುಂದುವರಿದಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ವಾರಾಣಸಿ ತೋರಿದ ಉತ್ಸಾಹ ಮತ್ತು ಸಂಕಷ್ಟದ ಸಮಯದಲ್ಲಿ ಅದು ಪ್ರದರ್ಶಿಸಿದ ಸಾಮಾಜಿಕ ಸಂಘಟನಾ ಸ್ವಭಾವ ನಿಜಕ್ಕೂ ಶ್ಲಾಘನೀಯ. ಇಂದು ವಾರಾಣಸಿ ಅಭಿವೃದ್ಧಿಗೆ ಸಂಬಂಧಿಸಿದ ಕೋಟ್ಯಾಂತರ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗುತ್ತಿದೆ ಮತ್ತು ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಇದು ಕೂಡ ಮಹದೇವನ ಆಶೀರ್ವಾದದಿಂದಾಗಿ ಆಗುತ್ತಿದೆ. ಕಾಶಿಯಲ್ಲಿ ಯಾವುದೇ ಹೊಸ ಯೋಜನೆ ಆರಂಭವಾದರೂ, ಆ ವೇಳೆಗೆ ಹಲವು ಹಳೆಯ ಯೋಜನೆಗಳು ಪೂರ್ಣಗೊಂಡಿರುತ್ತವೆ. ಅಂದರೆ ಒಂದೆಡೆ ಹೊಸ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಗುವುದು. ಮತ್ತೊಂದೆಡೆ ಹೊಸ ಅಭಿವೃದ್ಧಿ ಯೋಜನೆಗಳನ್ನೂ ಸಹ ಉದ್ಘಾಟಿಸಲಾಗುವುದು. ಇಂದೂ ಕೂಡ ಸುಮಾರು 220 ಕೋಟಿ ರೂ. ಮೌಲ್ಯದ 16 ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಸುಮಾರು 400 ಕೋಟಿ ರೂ. ಮೌಲ್ಯದ 14 ಯೋಜನೆಗಳ ಕಾಮಗಾರಿಗಳು ಆರಂಭವಾಗಿವೆ. ಎಲ್ಲಾ ಅಭಿವೃದ್ಧಿ ಯೋಜನೆಗಳಿಗಾಗಿ ವಾರಾಣಸಿಯ ಜನರನ್ನು ಅಭಿನಂದಿಸುತ್ತೇನೆ. ಉತ್ತರ ಪ್ರದೇಶದ ಕಾಶಿಯ ಈ ಎಲ್ಲ ಅಭಿವೃದ್ಧಿ ಯೋಜನೆಗಳ ಶ್ರೇಯಸ್ಸು ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜಿ ಮತ್ತು ಅವರ ತಂಡ, ನನ್ನ ಸಂಪುಟ ಸಹೋದ್ಯೋಗಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಇದಕ್ಕೆ ಸಂಬಂಧಿಸಿದ ಸರ್ಕಾರದ ಆಡಳಿತ ಯಂತ್ರದಲ್ಲಿರುವ ಎಲ್ಲ ಅಧಿಕಾರಿಗಳಿಗೆ ಸಲ್ಲಬೇಕು. ಸಾರ್ವಜನಿಕ ಸೇವೆಗೆ ಈ ಬದ್ಧತೆಯ ಪ್ರಯತ್ನಕ್ಕಾಗಿ ನಾನು ಯೋಗಿ ಜಿ ಮತ್ತು  ಅವರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಕೋರುತ್ತೇನೆ.


ಮಿತ್ರರೇ,

ವಾರಾಣಸಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಯೋಜನೆಯಲ್ಲಿ ಪ್ರವಾಸೋದ್ಯಮ ಸಂಸ್ಕೃತಿ, ರಸ್ತೆಗಳು, ವಿದ್ಯುತ್ ಮತ್ತು ನೀರಿಗೆ ಸಂಬಂಧಿಸಿದ ಯೋಜನೆಗಳೂ ಸಹ ಸೇರಿವೆ. ಕಾಶಿಯ ಪ್ರತಿಯೊಬ್ಬ ಪ್ರಜೆಯ ಇಚ್ಛೆಗೆ ಅನುಗುಣವಾಗಿ ಅಭಿವೃದ್ಧಿಯ ಚಕ್ರ ಸಾಗುವುದನ್ನು ಖಾತ್ರಿಪಡಿಸಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಈ ಅಭಿವೃದ್ಧಿಯೇ ಹೇಗೆ ವಾರಾಣಸಿ ಪ್ರತಿಯೊಂದು ವಲಯದಲ್ಲೂ ಮತ್ತು ಪ್ರತಿಯೊಂದು ದಿಕ್ಕಿನಲ್ಲಿ ಹೇಗೆ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಗಂಗಾಮಾತೆಯ ಶುದ್ಧೀಕರಣದಿಂದ ಹಿಡಿದು ಆರೋಗ್ಯ ಸೇವೆಗಳವರೆಗೆ, ರಸ್ತೆಯಿಂದ ಹಿಡಿದು ಪ್ರವಾಸೋದ್ಯಮಕ್ಕೆ ಮೂಲಸೌಕರ್ಯದವರೆಗೆ, ವಿದ್ಯುತ್ ನಿಂದ ಹಿಡಿದು, ಯುವಜನರಿಗೆ ಕ್ರೀಡೆಗಳವರೆಗೆ ಮತ್ತು ರೈತರಿಂದ ಹಿಡಿದು ಹಳ್ಳಿಯ ಬಡವರವರೆಗೆ ವಾರಾಣಸಿ ಅಭಿವೃದ್ಧಿಯಲ್ಲಿ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಇಂದು ಗಂಗಾ ಕ್ರಿಯಾಯೋಜನೆ ಅಡಿ ತ್ಯಾಜ್ಯ ಸಂಸ್ಕರಣಾ ಘಟಕ ಪುನರುಜ್ಜೀವನ ಕಾರ್ಯ ಪೂರ್ಣಗೊಂಡಿದೆ. ಷಾಹಿ ನಾಲೆಯಿಂದ ಹೆಚ್ಚುವರಿ ತ್ಯಾಜ್ಯ ನೀರು ಗಂಗಾ ನದಿಗೆ ಹರಿಯುವುದನ್ನು ತಡೆಯಲು ತ್ಯಾಜ್ಯ ನೀರನ್ನು ಬೇರೆಡೆಗೆ ತಿರುಗಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. 35 ಕೋಟಿಗೂ ಅಧಿಕ ವೆಚ್ಚದಲ್ಲಿ ಖಿರ್ಕಿಯಾ ಘಾಟ್ ನವೀಕರಣ ಕೈಗೊಳ್ಳಲಾಗಿದೆ. ಇಲ್ಲಿ ದೋಣಿಗಳು ಸಿಎನ್ ಜಿಯಿಂದ ಓಡುತ್ತವೆ. ಇದರಿಂದ ಗಂಗಾ ನದಿಯಲ್ಲಿ ಮಾಲಿನ್ಯ ಪ್ರಮಾಣ ತಗ್ಗುತ್ತದೆ. ಅಂತೆಯೇ ದಶಾಶ್ವಮೇಧ ಘಾಟ್ ನ ಪ್ರವಾಸೋದ್ಯಮ ಪ್ಲಾಜಾದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿದ್ದು, ಅದು ಮುಂದಿನ ದಿನಗಳಲ್ಲಿ ಸೂಕ್ತ ತಾಣವಾಗಲಿದೆ. ಅಲ್ಲದೆ ಇದು ಘಾಟ್ ನ ಸೌಂದರ್ಯವನ್ನು ಮತ್ತಷ್ಟು ವೃದ್ಧಿಸುವುದಲ್ಲದೆ, ಅಲ್ಲಿನ ಸೌಕರ್ಯಗಳು ವೃದ್ಧಿಯಾಗಲಿವೆ. ಈ ಪ್ಲಾಜಾಗಳಿಂದಾಗಿ ಸ್ಥಳೀಯ ಸಣ್ಣ ವ್ಯಾಪಾರಿಗಳು ತಮ್ಮ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಮತ್ತು ಸುಗಮ ರೀತಿಯಲ್ಲಿ ವಹಿವಾಟು ನಡೆಸಲು ಸಹಾಯಕವಾಗಲಿದೆ.

ಮಿತ್ರರೇ,

ಗಂಗಾ ಮಾತೆ ಬಗೆಗಿನ ಈ ಪ್ರಯತ್ನ ಮತ್ತು ಬದ್ಧತೆ ಕಾಶಿಯ ಕುರಿತು ಕೇವಲ ಸಂಕಲ್ಪವಲ್ಲ, ಕಾಶಿಗೆ ಹೊಸ ಸಾಧ್ಯತೆಗಳ ಮಾರ್ಗೋಪಾಯಗಳನ್ನು ಹುಡುಕುವುದಾಗಿದೆ. ಕ್ರಮೇಣ ಘಾಟ್ ನ ಸ್ವರೂಪ ಬದಲಾಗಲಿದೆ. ಕೊರೊನಾ ಪರಿಣಾಮದ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ, ಅವರು ವಾರಾಣಸಿ ಬಗೆಗೆ ಅತ್ಯಂತ ಸುಂದರ ಭಾವನೆಯೊಂದಿಗೆ ತೆರಳುತ್ತಾರೆ. ಗಂಗಾ ಘಾಟ್ ನ ಸುಂದರೀಕರಣ ಮತ್ತು ಸ್ವಚ್ಛತೆ ಮಾತ್ರವಲ್ಲದೆ, ಸಾರಾನಾಥಕ್ಕೂ ಹೊಸ ನೋಟ ನೀಡುತ್ತಿದ್ದೇವೆ. ಅಲ್ಲಿ ಬೆಳಕು ಮತ್ತು ಶಬ್ಧದ ಕಾರ್ಯಕ್ರಮವನ್ನು ಇಂದು ಆರಂಭಿಸಲಾಗಿದ್ದು, ಇದು ಸಾರಾನಾಥಕ್ಕೆ ಮತ್ತಷ್ಟು ಮೆರುಗು ತಂದುಕೊಡಲಿದೆ.  


ಸಹೋದರ ಮತ್ತು ಸಹೋದರಿಯರೇ,

ಕಾಶಿಯ ಅತ್ಯಂತ ಪ್ರಮುಖ ಸಮಸ್ಯೆ ಎಂದರೆ ಎಲ್ಲೆಂದರಲ್ಲಿ ನೇತಾಡುವ ವಿದ್ಯುತ್ ತಂತಿಗಳು. ಇಂದು ಕಾಶಿಯ ಬಹುತೇಕ ಪ್ರದೇಶವನ್ನು ನೇತಾಡುವ ವಿದ್ಯುತ್ ತಂತಿಗಳ ಜಾಲದಿಂದ ಮುಕ್ತಗೊಳಿಸಲಾಗಿದೆ. ನೆಲದಾಳದಲ್ಲಿ ವಿದ್ಯುತ್ ತಂತಿಗಳನ್ನು ಅಳವಡಿಸುವ ಮತ್ತೊಂದು ಹಂತದ ಕಾರ್ಯ ಇಂದು ಪೂರ್ಣಗೊಂಡಿದೆ. ಕಂಟೋನ್ಮೆಂಟ್ ನಿಂದ ಲಹೂರಾಬಿರ್, ಭೋಜುಬಿರ್ ನಿಂದ ಮಹಾಬಿರ್ ದೇವಾಲಯ, ಕಚಹರಿ ಚೌರಾಹದಿಂದ ಭೋಜುಬಿರ್ ತಿರಾಹ ವರೆಗೆ ಏಳು ಮಾರ್ಗಗಳಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಅಲ್ಲದೆ. ಸ್ಮಾರ್ಟ್ ಎಲ್ಇಡಿ ಬಲ್ಬ್ ದೀಪಗಳಿಂದ ಬೀದಿಗಳು ಇನ್ನಷ್ಟು ಸುಂದರ ಮತ್ತು ಪ್ರಕಾಶಮಾನವಾಗಿ ಹೊಳೆಯುತ್ತಿವೆ.

ಮಿತ್ರರೇ,

ವಾರಾಣಸಿಯಲ್ಲಿ ಸಂಪರ್ಕ ಅಭಿವೃದ್ಧಿಗೊಳಿಸುವುದು ಸದಾ ನಮ್ಮ ಸರ್ಕಾರದ ಅಗ್ರ ಆದ್ಯತೆಯಾಗಿದೆ. ಕಾಶಿ ನಿವಾಸಿಗಳಿಗಾಗಿ ಮತ್ತು ಕಾಶಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರಿಗಾಗಿ ಹೊಸ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಯಾವೊಬ್ಬ ಭಕ್ತಾದಿಗಳ ಸಮಯವೂ ವಾಹನ ದಟ್ಟಣೆಯಿಂದ ವ್ಯರ್ಥವಾಗುವುದಿಲ್ಲ. ವಾರಾಣಸಿಯ ವಿಮಾನ ನಿಲ್ದಾಣದಲ್ಲಿಂದು ಆಧುನಿಕ ಮೂಲಸೌಕರ್ಯಗಳನ್ನು ವೃದ್ಧಿಸಲಾಗುತ್ತಿದೆ. ಬಬತ್ಪುರ್ ನಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ವಾರಾಣಸಿಯ ಹೊಸ ಹೆಗ್ಗುರುತಾಗಿ ಬದಲಾಗಿದೆ. ಇಂದು ವಿಮಾನ ನಿಲ್ದಾಣದಲ್ಲಿ ಎರಡು ಪ್ರಯಾಣಿಕರ ಬೋರ್ಡಿಂಗ್ ಬ್ರಿಡ್ಜ್ ಗಳನ್ನು ಉದ್ಘಾಟಿಸುವುದರೊಂದಿಗೆ ಅಲ್ಲಿನ ಸೌಕರ್ಯಗಳನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಈ ವಿಸ್ತರಣೆಯೂ ಕೂಡ ಅತ್ಯಂತ ಅಗತ್ಯವಾಗಿತ್ತು. ಏಕೆಂದರೆ ಆರು ವರ್ಷಗಳ ಹಿಂದೆ ಅಂದರೆ ನೀವು ನನಗೆ ನಿಮ್ಮ ಸೇವೆಯನ್ನು ಮಾಡಲು ಅವಕಾಶ ನೀಡುವ ಮುನ್ನ ವಾರಾಣಸಿಯಲ್ಲಿ ಪ್ರತಿ ದಿನ 12 ವಿಮಾನಗಳು ಸಂಚರಿಸುತ್ತಿದ್ದವು. ಇಂದು ಆ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದ್ದು, 48 ವಿಮಾನಗಳು ಸಂಚರಿಸುತ್ತಿವೆ. ಇದು ವಾರಾಣಸಿಯಲ್ಲಿ ಸೌಕರ್ಯಗಳ ವಿಸ್ತರಣೆಯಾಗಿರುವುದನ್ನು ಕಾಣಬಹುದು ಮತ್ತು ವಾರಾಣಸಿಗೆ ಬರುವ ಜನರ ಸಂಖ್ಯೆ ಹೆಚ್ಚಾಗಿರುವುದನ್ನೂ ಸಹ ಕಾಣಬಹುದಾಗಿದೆ.


ಸಹೋದರ ಮತ್ತು ಸಹೋದರಿಯರೇ,

ವಾರಾಣಸಿಯಲ್ಲಿರುವ ಜನರೂ ಮತ್ತು ಅಲ್ಲಿಗೆ ಬರುವ ಜನರ ಜೀವನ ಸುಗಮಗೊಳಿಸಲು ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವಾರಾಣಸಿ ಇಂದು ರಸ್ತೆ ಮೂಲಸೌಕರ್ಯ ಪುನರುಜ್ಜೀವನಗೊಳಿಸುವುದನ್ನು ಎದುರು ನೋಡುತ್ತಿದೆ. ಅದು ವಿಮಾನ ನಿಲ್ದಾಣ, ರಿಂಗ್ ರಸ್ತೆ, ಮಹಮೂರ್ ಗಂಜ್-ಮನದುದ್ದೀಹ್ ಮೇಲ್ಸೇತುವೆ ಅಥವಾ ಎನ್ಎಚ್-56 ವಿಸ್ತರಣೆ ಆಗಿರಬಹುದು. ನಗರದ ರಸ್ತೆಗಳು ಮತ್ತು ಸುತ್ತಮುತ್ತಲ ಪ್ರದೇಶಗಳೂ ಕೂಡ ಬದಲಾಗಿವೆ.  ಇಂದೂ ಕೂಡ ವಾರಾಣಸಿಯ ನಾನಾ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಪುಲ್ವಾರಿಯಾ-ಲಹರ್ತಾರಾ ರಸ್ತೆ, ವರುಣಾ ನದಿಗೆ ಮೂರು ಸೇತುವೆಗಳ ನಿರ್ಮಾಣ ಮತ್ತು ಹಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇವೆಲ್ಲಾ ಮುಂದಿನ ದಿನಗಳಲ್ಲಿ ಸದ್ಯದಲ್ಲೇ ಪೂರ್ಣಗೊಳ್ಳಲಿವೆ. ಈ ರಸ್ತೆ ಮಾರ್ಗದ ಜಾಲ ಮಾತ್ರವಲ್ಲದೆ, ಜಲಮಾರ್ಗದ ಸಂಪರ್ಕದಲ್ಲೂ ವಾರಾಣಸಿ ಮಾದರಿಯಾಗುತ್ತಿದೆ. ದೇಶದ ಮೊದಲ ಒಳನಾಡು ಜಲ ಬಂದರನ್ನು ವಾರಾಣಸಿಯಲ್ಲಿ ನಿರ್ಮಿಸಲಾಗಿದೆ.


ಸಹೋದರ ಮತ್ತು ಸಹೋದರಿಯರೇ,

        ಕಳೆದ ಆರು ವರ್ಷಗಳಲ್ಲಿ ವಾರಾಣಸಿಯಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಹಿಂದೆಂದೂ ಕಾಣದಷ್ಟು ಕೆಲಸಗಳನ್ನು ಮಾಡಲಾಗಿದೆ. ಇಂದು ಕಾಶಿ ಉತ್ತರ ಪ್ರದೇಶಕ್ಕೆ ಮಾತ್ರವಲ್ಲ, ಇಡೀ ಪೂರ್ವಾಂಚಲಕ್ಕೆ ಆರೋಗ್ಯ ರಕ್ಷಣಾ ಸೌಕರ್ಯಗಳ ತಾಣವಾಗಿದೆ. ಇಂದು ರಾಮ್ ನಗರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆ ಆಧುನೀಕರಣಕ್ಕೆ ಸಂಬಂಧಿಸಿದ ಯೋಜನೆ ಉದ್ಘಾಟನೆಯೊಂದಿಗೆ ಕಾಶಿಯ ಪಾತ್ರ ಇನ್ನಷ್ಟು ವಿಸ್ತರಣೆಗೊಂಡಿದೆ. ಯಾಂತ್ರೀಕೃತ ಲಾಂಡ್ರಿ(ಇಸ್ತ್ರಿ), ವ್ಯವಸ್ಥಿತ ನೋಂದಣಿ ಕೌಂಟರ್ ಮತ್ತು ನೌಕರರಿಗೆ ವಸತಿ ಸಮುಚ್ಛಯ ಸೌಕರ್ಯಗಳು ರಾಮ್ ನಗರದ ಆಸ್ಪತ್ರೆಯಲ್ಲಿ ಇದೀಗ ಲಭ್ಯವಿವೆ. ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಪಂಡಿತ್ ಮಹಾಮಾನ ಮಾಲವೀಯ ಕ್ಯಾನ್ಸರ್ ಆಸ್ಪತ್ರೆಗಳಂತಹ ಪ್ರತಿಷ್ಠಿತ ಕ್ಯಾನ್ಸರ್ ಕೇಂದ್ರಗಳು ಈಗಾಗಲೇ ಸೇವೆಗಳನ್ನು ನೀಡುತ್ತಿವೆ. ಅದೇ ರೀತಿ ಇಎಸ್ಐಸಿ ಆಸ್ಪತ್ರೆ ಮತ್ತು ಬಿಎಚ್ ಯು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಡ ಬಡವರಲ್ಲಿ ಅತಿ ಕಡುಬಡವರು ಮತ್ತು ಗರ್ಭಿಣಿಯರಿಗೆ ಉತ್ತಮ ಆರೋಗ್ಯ ರಕ್ಷಣಾ ಸೌಕರ್ಯಗಳನ್ನು ಒದಗಿಸುತ್ತಿವೆ.

ಮಿತ್ರರೇ,

ಇಂದು ವಾರಾಣಸಿಯಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಮತ್ತು ಪ್ರತಿಯೊಂದು ವಲಯದ ಅಭಿವೃದ್ಧಿಯೂ ಆಗುತ್ತಿದೆ. ಇಡೀ ಪೂರ್ವಾಂಚಲ ಸೇರಿದಂತೆ ಇಡೀ ಪೂರ್ವ ಭಾರತಕ್ಕೆ ಅದರಿಂದ ಹೆಚ್ಚಿನ ಲಾಭವಾಗುತ್ತಿದೆ. ಈಗ ಪೂರ್ವಾಂಚಲದ ಜನರು ಸಣ್ಣ ಸಣ್ಣ ಅಗತ್ಯತೆಗಳಿಗಾಗಿ ದೆಹಲಿ ಮತ್ತು ಮುಂಬೈಗಳಿಗೆ ಪ್ರಯಾಣ ಬೆಳೆಸಬೇಕಾಗಿಲ್ಲ. ದಾಸ್ತಾನಿನಿಂದ ಸಾಗಾಣೆವರೆಗೆ ಹಲವು ಬಗೆಯ ಸೌಕರ್ಯಗಳನ್ನು ವಾರಾಣಸಿ ಮತ್ತು ಪೂರ್ವಾಂಚಲದ ರೈತರಿಗಾಗಿ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಂತಾರಾಷ್ಟ್ರೀಯ ಅಕ್ಕಿ ಕೇಂದ್ರ, ಹಾಲು ಸಂಸ್ಕರಣಾ ಘಟಕ ಮತ್ತು ಹಾಳಾಗಬಹುದಾದ ಸರಕುಗಳಿಗಾಗಿ ಶೈತ್ಯಾಗಾರ ಕೇಂದ್ರ ನಿರ್ಮಾಣ ಮತ್ತಿತರ ಯೋಜನೆಗಳಿಂದಾಗಿ ರೈತರಿಗೆ ಸಾಕಷ್ಟು ಪ್ರಯೋಜನವಾಗಿದೆ. ಈ ವರ್ಷ ಇದೇ ಮೊದಲ ಬಾರಿಗೆ ವಾರಾಣಸಿ ಪ್ರದೇಶದ ಹಣ್ಣುಗಳು, ತರಕಾರಿ ಮತ್ತು ಭತ್ತವನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. ರೈತರಿಗೆ ಮೀಸಲಾಗಿರುವ ದಾಸ್ತಾನು ಸೌಕರ್ಯಗಳನ್ನು ವಿಸ್ತರಿಸಲು ಇಂದು ಕಪ್ಸೇತಿಯಲ್ಲಿ 100 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ಉದ್ಘಾಟಿಸಲಾಗಿದೆ. ಅದಲ್ಲದೆ ಬಹು ಉದ್ದೇಶದ ಬೀಜ ಗೋದಾಮು ಮತ್ತು ವಿತರಣಾ ಕೇಂದ್ರವನ್ನು ಜಾನ್ಸಾದಲ್ಲಿ ನಿರ್ಮಿಸಲಾಗಿದೆ.


ಸಹೋದರ ಮತ್ತು ಸಹೋದರಿಯರೇ,

ಗ್ರಾಮೀಣ ಪ್ರದೇಶದ ಬಡಜನರು ಮತ್ತು ರೈತರು ಅತಿ ದೊಡ್ಡ ಆಧಾರಸ್ಥಂಭಗಳಾಗಿದ್ದಾರೆ ಮತ್ತು ಆತ್ಮನಿರ್ಭರ ಭಾರತ ಅಭಿಯಾನದ ಅತಿ ದೊಡ್ಡ ಫಲಾನುಭವಿಗಳಾಗಿದ್ದಾರೆ. ಇತ್ತೀಚೆಗೆ ಕೈಗೊಂಡ ಕೃಷಿ ಸುಧಾರಣಾ ಕ್ರಮಗಳು ರೈತರಿಗೆ ನೇರವಾಗಿ ಅನುಕೂಲ ಕಲ್ಪಿಸುತ್ತವೆ ಮತ್ತು ಅವರು ನೇರವಾಗಿ ಮಾರುಕಟ್ಟೆ ಜೊತೆ ಸಂಪರ್ಕವನ್ನು ಖಾತ್ರಿಪಡಿಸುತ್ತಿದೆ. ರೈತರು ಕಷ್ಟಪಟ್ಟು ದುಡಿಯುತ್ತಿದ್ದುದನ್ನು ಕಸಿದುಕೊಳ್ಳುತ್ತಿದ್ದ ಮಧ್ಯವರ್ತಿಗಳು ಮತ್ತು ದಲ್ಲಾಳಿಗಳನ್ನು ವ್ಯವಸ್ಥೆಯಿಂದ ಹೊರ ಹಾಕಲಾಗಿದೆ. ಉತ್ತರ ಪ್ರದೇಶ, ಪೂರ್ವಾಂಚಲ ಮತ್ತು ವಾರಾಣಸಿಯ ಪ್ರತಿಯೊಬ್ಬ ರೈತರು ಇದರಿಂದ ನೇರ ಲಾಭವನ್ನು ಪಡೆಯುತ್ತಿದ್ದಾರೆ.


ಮಿತ್ರರೇ,

ರೈತರಂತೆಯೇ ಬೀದಿ ಬದಿ ವ್ಯಾಪಾರಿಗಳಿಗಾಗಿ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯನ್ನು ಆರಂಭಿಸಲಾಗಿದೆ. ಇಂದು ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಅಡಿ ಬೀದಿ ವ್ಯಾಪಾರಿಗಳಿಗೆ ಸುಲಭದ ಸಾಲ ನೀಡಲಾಗುತ್ತಿದೆ. ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಅವರು, ತಮ್ಮ ಕೆಲಸವನ್ನು ಪುನರಾರಂಭಿಸಬಹುದು. ಅದಕ್ಕಾಗಿ ಅವರಿಗೆ ಹತ್ತು ಸಾವಿರ ರೂಪಾಯಿಗಳ ವರೆಗೆ ಸಾಲದ ಸೌಲಭ್ಯ ನೀಡಲಾಗುವುದು. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ  ಜನರಿಗೆ ಅವರ ಮನೆ ಹಾಗೂ ಆಸ್ತಿಯ ಕಾನೂನುಬದ್ಧ ಹಕ್ಕುಪತ್ರಗಳನ್ನು ವಿತರಿಸುವ ಸ್ವಮಿತ್ವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಗ್ರಾಮಗಳಲ್ಲಿ ಮನೆ ಮತ್ತು ಭೂಮಿಗೆ ಸಂಬಂಧಿಸಿದಂತೆ ವ್ಯಾಜ್ಯಗಳು ಇರುತ್ತಿದ್ದವು. ಕೆಲವೊಮ್ಮೆ ಜನರು ಕೊಲೆಯಾಗುತ್ತಿದ್ದರು. ಕೆಲವೊಮ್ಮೆ ಮದುವೆಗಾಗಿ ವ್ಯಕ್ತಿ ಹೊರಗಡೆ ಹೋಗಿದ್ದಾಗ ಆತ ವಾಪಸ್ ಬರುವುದರೊಳಗೆ ಆತನ ಮನೆಯನ್ನು ಬೇರೊಬ್ಬರು ಆಕ್ರಮಿಸಿಕೊಳ್ಳುತ್ತಿದ್ದರು. ಇದೀಗ ಸ್ವಮಿತ್ವ ಯೋಜನೆಯಿಂದ ಆಸ್ತಿ ಕಾರ್ಡ್ ಗಳನ್ನು ನೀಡುವುದರಿಂದ ಅಂತಹ ಸಮಸ್ಯೆಗಳಿಗೆ ಅವಕಾಶವಿರುವುದಿಲ್ಲ. ಅಲ್ಲದೆ ನಿಮ್ಮ ಮನೆ ಅಥವಾ ಭೂಮಿಯ ಆಸ್ತಿ ಕಾರ್ಡ್ ನಿಂದಾಗಿ ನೀವು ಬ್ಯಾಂಕ್ ನಿಂದ ಸುಲಭವಾಗಿ ಸಾಲ ಪಡೆಯಬಹುದಾಗಿದೆ. ಇದೇ ವೇಳೆ ಅಕ್ರಮ ಭೂಸ್ವಾಧೀನ ಅಥವಾ ಒತ್ತುವರಿ ಆಟಗಳು ಕೊನೆಯಾಗಲಿವೆ. ಈ ಯೋಜನೆಗಳಿಂದ ಪೂರ್ವಾಂಚಲ ಮತ್ತು ವಾರಾಣಸಿಗೆ ಹೆಚ್ಚಿನ ಅನುಕೂಲವಾಗಲಿದೆ.


ಮಿತ್ರರೇ,

ನಮ್ಮ ಧರ್ಮ ಗ್ರಂಥಗಳಲ್ಲಿ ಹೀಗೆ 'काश्याम् हि काशते काशी, काशी सर्व प्रकाशिका' ಹೇಳಲಾಗಿದೆ. ಕಾಶಿಯಲ್ಲಿ ಜ್ಯೋತಿ ಬೆಳಗಿದರೆ ಕಾಶಿಯಿಂದ ಎಲ್ಲೆಡೆ ಬೆಳಕು ಪ್ರಜ್ವಲಿಸುತ್ತದೆ. ಆದ್ದರಿಂದ ಇಂದು ಹರಡಿರುವ ಈ ಬೆಳಕು ಮತ್ತು ಇಲ್ಲಿ ನಡೆಯುತ್ತಿರುವ ಬದಲಾವಣೆಗಳು ಎಲ್ಲವೂ ಕಾಶಿಯ ನಿವಾಸಿಗಳ ಆಶೀರ್ವಾದದ ಫಲವಾಗಿದೆ. ಮಹದೇವನ ಆಶೀರ್ವಾದ ಮತ್ತು ಕಾಶಿಯ ಆಶೀರ್ವಾದ ಕಾರಣವಾಗಿದೆ ಮತ್ತು ಮಹದೇವನ ಆಶೀರ್ವಾದದಿಂದಾಗಿ ಕಠಿಣವಾದ ಕೆಲಸವೂ ಸಹ ಸುಲಭವಾಗಲಿದೆ. ಕಾಶಿಯ ಆಶೀರ್ವಾದದಿಂದಾಗಿ ಅಭಿವೃದ್ಧಿಯ ನದಿ ಹೀಗೆಯೇ ಸದಾ ಹರಿಯುತ್ತಿರುತ್ತದೆ ಎಂದು ನಾನು ನಂಬಿದ್ದೇನೆ. ಇದರೊಂದಿಗೆ ಮತ್ತೆ ನಾನು ದೀಪಾವಳಿ, ಗೋವರ್ಧನ ಪೂಜಾ ಮತ್ತು ಭಯ್ಯಾ ದೂಜ್ ಸಂದರ್ಭದಲ್ಲಿ ನಾನು ಎಲ್ಲರಿಗೂ ಮತ್ತೊಮ್ಮೆ ಹೃದಯಪೂರ್ವಕ ಶುಭಾಶಯಗಳನ್ನು ಹೇಳುತ್ತೇನೆ.

          ಮತ್ತೆ ನಿಮ್ಮಲ್ಲಿ ನನ್ನ ಒಂದು ಮನವಿ ಇದೆ. ಇತ್ತೀಚಿನ ದಿನಗಳಲ್ಲಿ ‘ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ’ (ವೋಕಲ್ ಫಾರ್ ಲೋಕಲ್) ಬಗ್ಗೆ ಕೇಳಿರಬಹುದು. ಇದೀಗ “ದೀಪಾವಳಿಗೆ ಸ್ಥಳೀಯ ಉತ್ಪನ್ನಗಳು ಎಂಬ ಮಂತ್ರ” ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ನಾನು ವಾರಾಣಸಿಯ ಜನರಿಗೆ ಹಾಗೂ ದೇಶವಾಸಿಗಳಿಗೆ ಈ ‘ಲೋಕಲ್ ಫಾರ್ ದೀಪಾವಳಿ’ ಅಭಿಯಾನವನ್ನು ಸಾಧ್ಯವಾದಷ್ಟು ಉತ್ತೇಜನ ನೀಡಬೇಕೆಂದು ಕೋರುತ್ತೇನೆ. ಆ ಉತ್ಪನ್ನಗಳು ಎಷ್ಟು ಅದ್ಭುತವಾಗಿದೆ ಮತ್ತು ಅವು ಹೇಗೆ ನಮ್ಮ ಅಸ್ಮಿತೆಗಳಾಗಿವೆ ಎಂಬುದನ್ನು ಜನರು ಅರಿತರೆ ಆಗ ಇನ್ನೂ ಹೆಚ್ಚು ವ್ಯಾಪಕ ಬೇಡಿಕೆ ಎದುರಾಗಲಿದೆ. ಇದು ಸ್ಥಳೀಯ ಅಸ್ಮಿತೆಯನ್ನು ಬಲವರ್ಧನೆಗೊಳಿಸುವುದೇ ಅಲ್ಲದೆ, ಈ ಉತ್ಪನ್ನಗಳನ್ನು ಸಿದ್ಧಪಡಿಸುವ ಜನರ ಜೀವನವನ್ನೂ ಪ್ರಕಾಶಮಾನಗೊಳಿಸುತ್ತದೆ. ಹಾಗಾಗಿ ದೀಪಾವಳಿಗೂ ಮುನ್ನ ದೇಶದ ಜನತೆಯನ್ನು ನಾನು ಮತ್ತೊಮ್ಮೆ ಆಗ್ರಹಿಸುವುದೆಂದರೆ ‘ಸ್ಥಳೀಯ’ ಉತ್ಪನ್ನಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ ಎಂದು ಇಡೀ ಆರ್ಥಿಕತೆಯಲ್ಲಿ ಹೊಸ ಶಕ್ತಿಯನ್ನು ಸೇರ್ಪಡೆ ಮಾಡಿರುವುದನ್ನು ನೀವು ಕಾಣಬಹುದು. ಈ ಉತ್ಪನ್ನಗಳು ನಮ್ಮ ದೇಶವಾಸಿಗಳ ಬೆವರಿನ ಫಲ ಮತ್ತು ಯುವಶಕ್ತಿಯ ವಿವೇಕವನ್ನು ಪ್ರತಿಬಿಂಬಿಸಲಿದ್ದು, ನಮ್ಮ ದೇಶದ ಉತ್ಪನ್ನಗಳು ಹಲವು ಕುಟುಂಬಗಳಿಗೆ ತಮ್ಮ ಕಾರ್ಯವನ್ನು ವಿಸ್ತರಿಸಲು ಮತ್ತು ಹೊಸ ಧೈರ್ಯ ಮತ್ತು ಉತ್ಸಾಹದಿಂದ ಹೊಸ ಸಂಕಲ್ಪಗಳನ್ನು ಕೈಗೊಳ್ಳಲು ನೆರವಾಗಲಿದೆ. ನಾನು ನಮ್ಮ ದೇಶದ ಪ್ರತಿಯೊಂದು ಉತ್ಪನ್ನಗಳಿಗೂ ಬದ್ಧವಾಗಿದ್ದೇನೆ. ಬನ್ನಿ ಎಲ್ಲರೂ ಸ್ಥಳೀಯ ಉತ್ಪನ್ನಗಳಿಗೆ ದನಿಯಾಗೋಣ. ಈ ದೀಪಾವಳಿಯನ್ನು ಕೇವಲ ದೀಪಗಳು ಮಾತ್ರವಲ್ಲ, ಇತರೆ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದರೊಂದಿಗೆ ಆಚರಿಸೋಣ. ಕೆಲವು ಜನರು ತಿಳಿದುಕೊಂಡಿರಬಹುದು. ಸ್ಥಳೀಯ ಉತ್ಪನ್ನಗಳು ಎಂದರೆ ಕೇವಲ ದೀಪಗಳು ಅಥವಾ ಹಣತೆಗಳು ಎಂದು. ಅಲ್ಲ ಅದರ ಅರ್ಥ ಎಲ್ಲವೂ ಮತ್ತು ಪ್ರತಿಯೊಂದು ಇತರ ಉತ್ಪನ್ನಗಳು.   ನಮ್ಮ ದೇಶದಲ್ಲಿ ಯಾವ ಉತ್ಪನ್ನಗಳು ಉತ್ಪಾದನೆಯಾಗಿರುವುದಿಲ್ಲೋ ಅಂತಹವುಗಳಿಗೆ ಮಾತ್ರ ನಾವು ವಿದೇಶಿ ವಸ್ತುಗಳನ್ನು ಖರೀದಿಸಬೇಕು. ಅಲ್ಲದೆ ನಾನು  ಈಗಾಗಲೇ ಖರೀದಿಸಿರುವ ವಿದೇಶಿ ಉತ್ಪನ್ನಗಳನ್ನು ಬಿಸಾಡಿ ಎಂದು ಹೇಳುತ್ತಿಲ್ಲ. ಅಲ್ಲದೆ ನಮ್ಮ ದೇಶದ ಶ್ರಮಜೀವಿಗಳು ಸಿದ್ಧಪಡಿಸಿರುವ ಉತ್ಪನ್ನಗಳನ್ನು ಬೆಂಬಲಿಸುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದು ನಾನು ಹೇಳುತ್ತಿದ್ದೇನೆ. ನಮ್ಮ ದೇಶದ ಯುವಜನತೆ ತಮ್ಮ ಬುದ್ಧಿಶಕ್ತಿ, ಸಾಮರ್ಥ್ಯ ಮತ್ತು ಬಲದಿಂದ ಕೆಲವು ಹೊಸ ವಸ್ತುಗಳನ್ನು ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ. ಅಂತಹವರನ್ನು ಪ್ರೋತ್ಸಾಹಿಸಬೇಕಿದೆ. ಅದು ನಮ್ಮೆಲ್ಲರ ಹೊಣೆಗಾರಿಕೆಯೂ ಆಗಿದೆ. ಅವರ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವರ ಧೈರ್ಯವನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಇದರಿಂದ ಸಂಪೂರ್ಣ ವಿಶ್ವಾಸವಿರುವ ಹೊಸ ವರ್ಗವನ್ನು ಸೃಷ್ಟಿಸಿದಂತಾಗುತ್ತದೆ ಮತ್ತು ಅದು ಭಾರತವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ. ಹಾಗಾಗಿಯೇ ನಾನು ಇಂದು ನನ್ನ ಕಾಶಿವಾಸಿಗಳೊಂದಿಗೆ ಮತ್ತೊಮ್ಮೆ ಮಾತನಾಡುತ್ತಿದ್ದೇನೆ. ಯಾವಾಗ ನಾನು ಕಾಶಿಯಲ್ಲಿ ಕೆಲವೊಂದನ್ನು ಕೇಳುತ್ತೇನೆಯೋ, ಯಾವಾಗ ನಾನು ಕಾಶಿ ಜನರಿಂದ ಬೇಡುತ್ತೇನೆಯೋ ಅವುಗಳನ್ನು ಜನರು ಹೃದಯಪೂರ್ವಕವಾಗಿ ನೀಡಿದ್ದಾರೆ. ಆದರೆ ಎಂದಿಗೂ ನಾನು ನನಗಾಗಿ ಏನನ್ನೂ ಕೇಳಿಲ್ಲ. ಮತ್ತೆ ನನಗೆ ಏನು ಬೇಕಾಗಿಲ್ಲ. ಆದರೂ ನೀವು ನನ್ನನ್ನು ಹಾಗೆ ಬಿಟ್ಟಿಲ್ಲ. ಕಾಶಿಯ ಪ್ರತಿಯೊಂದು ಅಗತ್ಯತೆಗಳಿಗೆ ದನಿಯಾಗಿದ್ದೇನೆ ಮತ್ತು ಕಾಶಿಯಲ್ಲಿ ಅಗತ್ಯವಿರುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ನನಗೆ ಹೆಮ್ಮೆ ಇದೆ. ಮತ್ತು ಅದನ್ನು ನಾನು ಪ್ರತಿಯೊಂದು ಮನೆಗೂ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ. ನನ್ನ ಮನವಿ ಏನೆಂದರೆ ನಮ್ಮ ದೇಶದಲ್ಲಿ ಪ್ರತಿಯೊಂದಕ್ಕೆ ಅವಕಾಶ ಲಭ್ಯವಾಗಬೇಕು ಎಂಬುದು, ಮತ್ತೊಮ್ಮೆ ಕಾಶಿ ವಿಶ್ವನಾಥನ ಪಾದ, ಕಾಲಭೈರವ ಮತ್ತು ಮಾತೆ ಅನ್ನಪೂರ್ಣೆಗೆ ಶಿರಬಾಗಿ ನಮಿಸುತ್ತೇನೆ ಮತ್ತು ನಾನು ಕಾಶಿಯ ಜನರಿಗೆ ಗೌರವ ಸಲ್ಲಿಸುತ್ತೇನೆ. ಮುಂಬರುವ ಹಬ್ಬಕ್ಕಾಗಿ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಬಯಸುತ್ತೇನೆ.

ತುಂಬಾ ಧನ್ಯವಾದಗಳು

 

*******


(Release ID: 1671854) Visitor Counter : 225