ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ಹಾಜಿರಾದಲ್ಲಿ ರೋ-ಪಾಕ್ಸ್ ಟರ್ಮಿನಲ್ ಉದ್ಘಾಟನೆ ಮತ್ತು ಹಾಜೀರಾ-ಘೋಗಾ ನಡುವೆ ರೋ-ಪಾಕ್ಸ್ ದೋಣಿ ಸೇವೆಗೆ ನವಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಸಿರು ನಿಶಾನೆ



ರೋ-ಪಾಕ್ಸ್ ದೋಣಿ ಸೇವೆಯಿಂದ ಪ್ರಯಾಣದ ಅವಧಿ - ಸಾರಿಗೆ ವೆಚ್ಚ - ಪರಿಸರ ಮಾಲಿನ್ಯ ಇಳಿಕೆ - ಪ್ರವಾಸೋದ್ಯಮಕ್ಕೆ ಉತ್ತೇಜನ ; ಉದ್ಯೋಗ ಮತ್ತು ಉದ್ದಿಮೆಗಳಿಗೆ ಹೊಸ ಅವಕಾಶಗಳ ಸೃಷ್ಟಿ

ಜಲಮಾರ್ಗಗಳ ಸಮರ್ಪಕ ಬಳಕೆ ಮತ್ತು ದೇಶದ ಆರ್ಥಿಕಾಭಿವೃದ್ಧಿಯ ಜೊತೆ ಜೋಡಿಸಬೇಕೆಂಬ ಪ್ರಧಾನಿ ಕನಸು ನನಸಾಗುವ ನಿಟ್ಟಿನಲ್ಲಿ ಮಹತ್ವದ ಹಜ್ಜೆ

Posted On: 06 NOV 2020 2:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ನವೆಂಬರ್ 8,2020ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್ ನ ಹಾಜೀರಾದಲ್ಲಿ ರೋ-ಪಾಕ್ಸ್ ಟರ್ಮಿನಲ್ ಉದ್ಘಾಟಿಸುವರು ಮತ್ತು ಹಾಜೀರಾ ಮತ್ತು ಘೋಗಾ ನಡುವೆ ರೋ-ಪಾಕ್ಸ್ ದೋಣಿ ಸೇವೆಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ದೇಶದ ಜಲಮಾರ್ಗಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಮತ್ತು ಅವುಗಳನ್ನು ದೇಶದ ಆರ್ಥಿಕಾಭಿವೃದ್ಧಿಯ ಜೊತೆ ಜೋಡಿಸಬೇಕು ಎಂಬ ಪ್ರಧಾನಿ ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ. ಈ ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು ಸೇವೆಗಳ ಸ್ಥಳೀಯ ಬಳಕೆದಾರರ ಜೊತೆ ಸಂವಾದ ನಡೆಸಲಿದ್ದಾರೆ. ಕೇಂದ್ರ ಬಂದರು ಖಾತೆ ರಾಜ್ಯ ಸಚಿವ ಮತ್ತು ಗುಜರಾತ್ ಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಹಾಜೀರಾದಲ್ಲಿ ಉದ್ಘಾಟನೆಗೊಳ್ಳಲಿರುವ ರೋ-ಪಾಕ್ಸ್ ಟರ್ಮಿನಲ್ 100 ಮೀಟರ್ ಉದ್ದ ಹಾಗೂ 40 ಮೀಟರ್ ಅಗಲವಿದ್ದು, ಅದನ್ನು ಸುಮಾರು 25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಟರ್ಮಿನಲ್ ನಲ್ಲಿ ಆಡಳಿತ ಕಚೇರಿ ಕಟ್ಟಡ, ವಾಹನ ನಿಲುಗಡೆ ತಾಣ, ಉಪ ಕೇಂದ್ರ ಮತ್ತು ಜಲಗೋಪುರ ಮತ್ತಿತರ ಹಲವು ರೀತಿಯ ಸೌಕರ್ಯಗಳಿವೆ.

ರೋ-ಪಾಕ್ಸ್ ದೋಣಿ ಸೇವೆ “ವಾಯೇಜ್ ಸಿಂಪೋನಿ’ ಮೂರು ಡೆಕ್  ಒಳಗೊಂಡ ದೋಣಿಯಾಗಿದ್ದು, 2500ರಿಂದ 2700 ಎಂ.ಟಿ. ಡಿಡಬ್ಲೂ ಟಿ  ಹೊಂದಿದ್ದು, 12,000 ದಿಂದ 15,000 ಡಿಸ್ಪ್ಲೇಸ್ ಮೆಂಟ್      ಒಳಗೊಂಡಿದೆ. ಇದರ ಮುಖ್ಯ ಡೆಕ್ ನಲ್ಲಿ 30 ಟ್ರಕ್ ಗಳ (ತಲಾ 50 ಎಂಟಿ) ಸಾಮರ್ಥ್ಯ ಹೊಂದಿದೆ, ಮೇಲಿನ ಡೆಕ್ ನಲ್ಲಿ 100 ಪ್ರಯಾಣಿಕ ಕಾರುಗಳು ಮತ್ತು ಪ್ರಯಾಣಿಕ ಡೆಕ್ ನಲ್ಲಿ 500 ಪ್ರಯಾಣಿಕರು, 34 ಸಿಬ್ಬಂದಿ ಮತ್ತು ಆತಿಥ್ಯ ಸಿಬ್ಬಂದಿ ಕುಳಿತುಕೊಳ್ಳಲು ಅವಕಾಶವಿದೆ.

ಹಾಜೀರಾ-ಘೋಗಾ ರೋ-ಪಾಕ್ಸ್ ದೋಣಿ ಸೇವೆಗಳಿಂದ ಹಲವು ರೀತಿಯ ಅನುಕೂಲಗಳಿವೆ. ಇದು ಸೌರಾಷ್ಟ್ರ ಪ್ರಾಂತ್ಯ ಮತ್ತು ದಕ್ಷಿಣ ಗುಜರಾತ್ ನಡುವೆ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಘೋಗಾ ಮತ್ತು ಹಾಜೀರಾ ನಡುವಿನ ದೂರ 370 ಕಿಲೋಮೀಟರ್ ನಿಂದ 90 ಕಿಲೋಮೀಟರ್ ಗೆ ಇಳಿಕೆಯಾಗಲಿದೆ. ಸರಕು ಹಡಗುಗಳ ಸಾಗಾಣೆ ಸಮಯ 10 ರಿಂದ 12 ಗಂಟೆಗಳಿಂದ 4 ಗಂಟೆಗೆ ಇಳಿಕೆಯಾಗಲಿದ್ದು, ಭಾರಿ ಪ್ರಮಾಣದ ಇಂಧನ (ದಿನಕ್ಕೆ ಕನಿಷ್ಠ 9000 ಲೀಟರ್ ) ಉಳಿತಾಯವಾಗಲಿದೆ ಮತ್ತು ವಾಹನಗಳ ನಿರ್ವಹಣಾ ವೆಚ್ಚ ಗಣನೀಯವಾಗಿ ಇಳಿಕೆಯಾಗಲಿದೆ.

ಈ ದೋಣಿ ಸೇವೆ ಹಾಜೀರಾ-ಘೋಗಾನಡುವಿನ ಮಾರ್ಗದಲ್ಲಿ ಪ್ರತಿದಿನ 3 ಟ್ರಿಪ್ (ಹೋಗುವುದು, ಬರುವುದು) ಸಂಚರಿಸಲಿದ್ದು, ವಾರ್ಷಿಕ ಸುಮಾರು 5 ಲಕ್ಷ ಪ್ರಯಾಣಿಕರು, 80 ಸಾವಿರ ಪ್ರಯಾಣಿಕರ ವಾಹನಗಳು ಮತ್ತು 50ಸಾವಿರ ದ್ವಿಚಕ್ರವಾಹನ ಮತ್ತು 30ಸಾವಿರ ಟ್ರಕ್ ಗಳನ್ನು ಹೊತ್ತೊಯ್ಯಲಿದೆ. ಇದು ಟ್ರಕ್ ಚಾಲಕರ ಕಷ್ಟವನ್ನು ತಗ್ಗಿಸಲಿದೆ ಮತ್ತು ಅವರು ಹೆಚ್ಚುವರಿ ಟ್ರಿಪ್ ಗಳನ್ನು ಮಾಡುವ ಮೂಲಕ ಹೆಚ್ಚಿನ ಆದಾಯಗಳಿಸಲು ಅವಕಾಶ ಮಾಡಿಕೊಡಲಿದೆ. ಈ ದೋಣಿ ಸೇವೆಯಿಂದ ಪ್ರತಿದಿನ ಸುಮಾರು 24 ಎಂಟಿ ಇಂಗಾಲ ಡೈ ಆಕ್ಸೈಡ್  ಮಾಲಿನ್ಯ ತಗ್ಗಿಸಲಿದೆ ಮತ್ತು ಒಟ್ಟಾರೆ ವಾರ್ಷಿಕ ಸುಮಾರು 8653 ಟನ್ ಉಳಿತಾಯವಾಗುತ್ತದೆ.

 

ಈ ಸೇವೆಯಿಂದ ಸೌರಾಷ್ಟ್ರ ಪ್ರಾಂತ್ಯದಲ್ಲಿ ಸಂಚಾರ ಸುಗಮವಾಗುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಸಿಗಲಿದೆ ಮತ್ತು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ದೋಣಿ ಸೇವೆ ಆರಂಭದಿಂದಾಗಿ ಸೌರಾಷ್ಟ್ರ ಮತ್ತು ಕಛ್ ವಲಯದಲ್ಲಿರುವ ಬಂದರು ವಲಯ, ಪೀಠೋಪಕರಣ ಮತ್ತು ರಾಸಾಯನಿಕ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ದೊರಕಲಿದೆ.  ಗುಜರಾತ್ ನಲ್ಲಿ ಜೈವಿಕ ಪ್ರವಾಸೋಧ್ಯಮ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕೆ ವಿಶೇಷವಾಗಿ ಪೋರಬಂದರ್, ಸೋಮನಾಥ, ದ್ವಾರಕ ಮತ್ತು ಪಾಟಲೀಪುತ್ರಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ನೆರವಾಗಲಿದೆ. ಈ ದೋಣಿ ಸೇವೆಯಿಂದ ಸಂಪರ್ಕ ವ್ಯವಸ್ಥೆಯ ಪ್ರಯೋಜನಗಳು ವೃದ್ಧಿಯಾಗುವುದಲ್ಲದೆ, ಗಿರ್ ಪ್ರದೇಶದಲ್ಲಿನ ಹೆಸರಾಂತ ಏಷ್ಯಾ ಸಿಂಹ ವನ್ಯಜೀವಿ ಧಾಮಕ್ಕೆ ಪ್ರವಾಸಿಗರ ಒಳಹರಿವು ಗಣನೀಯವಾಗಿ ಹೆಚ್ಚಾಗಲಿದೆ.

*****



(Release ID: 1670727) Visitor Counter : 185