ಉಪರಾಷ್ಟ್ರಪತಿಗಳ ಕಾರ್ಯಾಲಯ

ವಿಶಿಷ್ಟ್ಯಪೂರ್ಣ ಸಾಹಿತ್ಯ ಉತ್ಸವ ‘ಅಂತಾರಾಷ್ಟ್ರೀಯ ಶತಾವದಾನಂ’ ಉದ್ಘಾಟಿಸಿದ ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ದು


ಭಾಷೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅಂತರ್ಗತವಾಗಿದೆ, ಸಾಹಿತ್ಯ ನಮ್ಮ ಸಂಪತ್ತು

ಸಾಹಿತ್ಯ ರಕ್ಷಣೆ ನಮ್ಮ ಆದ್ಯ ಕರ್ತವ್ಯ

ಭಾಷೆಯ ಸಂರಕ್ಷಣೆ ಮತ್ತು ನಶಿಸುತ್ತಿರುವ ಸಂಪ್ರದಾಯಗಳಿಗೆ ಪುನರುಜ್ಜೀವನ ನೀಡುತ್ತಿರುವ ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ಉಪ ರಾಷ್ಟ್ರಪತಿಗಳ ಮೆಚ್ಚುಗೆ

Posted On: 05 NOV 2020 5:08PM by PIB Bengaluru

ಸಾಹಿತ್ಯಕ ಪ್ರಕಾರಾವಾಗಿ ಅದ್ಭುತ ಸಾಧನೆ ಮಾಡಿರುವ ‘ಅವಧಾನಂ’ ತೆಲುಗು ಭಾಷೆಯ ವೈಭವಯುತ ಪರಂಪರೆಗೆ ಶ್ರೇಷ್ಠ ಕೊಡುಗೆ ನೀಡಿದೆ ಎಂದು ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ದು ಹೇಳಿದ್ದಾರೆ. ‘ಅವಧಾನಂ’ ಎನ್ನುವುದು ಕವಿ ಪರೀಕ್ಷೆಯ ಸಾಹಿತ್ಯ ಜಾಣ್ಮೆ ಮತ್ತು ನೈಪುಣ್ಯತೆಯಾಗಿದೆ. ಈ ಅದ್ಭುತ ಪ್ರಾಕಾರ, ಐತಿಹಾಸಿಕವಾದುದು ಮತ್ತು ಕೆಲವೇ ಕೆಲವು ಭಾಷೆಗಳಲ್ಲಿರುವ ಅಪರೂಪದ ಅಂಶವಾಗಿದ್ದು, ಅದನ್ನು ಮತ್ತಷ್ಟು ಉತ್ತೇಜಿಸಬೇಕಿದೆ ಎಂದು ಉಪರಾಷ್ಟ್ರಪತಿಗಳು ಸಲಹೆ ನೀಡಿದರು.

ತಿರುಪತಿಯ ಶ್ರೀ ಕೃಷ್ಣದೇವರಾಯ ಸತ್ಸಂಗದ ಆಶ್ರಯದಲ್ಲಿ ಡಾ.ಮೆದಾಸನಿ ಮೋಹನ್ ಅವರು ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಶತಾವಧಾನಂ’ ಕಾರ್ಯಕ್ರಮವನ್ನು ವರ್ಚುವಲ್ ರೂಪದಲ್ಲಿ ಉಪರಾಷ್ಟ್ರಪತಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಅವಧಾನಂ’ ಒಂದು ಅದ್ಭುತ ಸಾಹಿತ್ಯದ ಕಲೆ, ಅದರಲ್ಲಿ ಕ್ಲಿಷ್ಟವಾದ ಸಾಹಿತ್ಯದ ಅಂಶಗಳನ್ನು ಬಿಡಿಸುವುದು, ಕವನಗಳನ್ನು ಉತ್ತಮಗೊಳಿಸುವುದು ಮತ್ತು ಏಕಕಾಲದಲ್ಲಿ ಬಹುವಿಧದ ಕೆಲಸಗಳನ್ನು ಮಾಡುವ ವ್ಯಕ್ತಿಯ ಸಾಮರ್ಥ್ಯಗಳನ್ನು ಪರೀಕ್ಷಿಸುವುದಾಗಿದೆ.

 ನಮ್ಮ ಮಾತೃಭಾಷೆ ನಮ್ಮ ಸಂಪತ್ತು. ಬರಹಗಾರರು, ಕವಿಗಳು, ಭಾಷಾತಜ್ಞರು ಮತ್ತು ಇತರರು ನಮ್ಮ ಪರಂಪರೆಯನ್ನು ಸಂರಕ್ಷಿಸಲು ಮತ್ತು ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಕಷ್ಟು ಶ್ರಮವಹಿಸುತ್ತಿದ್ದಾರೆ ಎಂದು ಶ್ರೀ ವೆಂಕಯ್ಯನಾಯ್ಡು ಹೇಳಿದರು. ಭಾರತೀಯ ಭಾಷೆಗಳು ಮತ್ತು ಅದರ ಪರಂಪರೆಯನ್ನು ಸಂರಕ್ಷಿಸಲು ಹಾಗೂ ಉತ್ತೇಜಿಸಲು ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹೆಮ್ಮೆಯ ಸಂಗತಿ ಎಂದರು. ವಿದೇಶಿ ಭಾಷೆಗಳನ್ನು ಕಲಿಯುವ ವೇಳೆ, ಮೂಲ ಬೇರು ತಾಯಿ ಭಾಷೆಯನ್ನು ಮರೆಯಬಾರದು ಎಂದು ಅವರು ಕರೆ ನೀಡಿದರು.

ಭಾಷೆ ಎನ್ನುವುದು ಕೇವಲ ಭಾವನೆಗಳನ್ನು ಅಭಿವ್ಯಕ್ತಪಡಿಸುವುದಲ್ಲ ಎಂದ ಉಪರಾಷ್ಟ್ರಪತಿ, ಭಾಷೆ ವ್ಯಕ್ತಿಯ ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತದೆ ಎಂದರು. ನಮ್ಮ ಮಾತೃ ಭಾಷೆಗಳನ್ನು ಪೋಷಿಸುವ ಮತ್ತು ಸಂರಕ್ಷಿಸುವ ಅಗತ್ಯತೆ ಇದೆ ಎಂದು ಬಲವಾಗಿ ಪ್ರತಿಪಾದಿಸಿದ ಅವರು, ಎಲ್ಲಾ ಭಾಷೆಗಳಿಗೂ ಸಮಾನ ಗೌರವ ನೀಡಬೇಕಾಗಿದೆ ಎಂದರು. ಒಂದು ನಾಗರಿಕತೆಯಾಗಿ ನಾವು ಪ್ರಗತಿ ಸಾಧಿಸಲು ನಾವು ನಮ್ಮ ಮಾತೃ ಭಾಷೆ, ಭಾರತೀಯ ಸಂಸ್ಕೃತಿ, ಪ್ರಕೃತಿ ಮತ್ತು ಪರಿಸರವನ್ನು ಸಂರಕ್ಷಿಸುವುದರಿಂದ ಮಾತ್ರ ಸಾಧ್ಯ ಎಂದರು.

ತೆಲುಗು ಭಾಷಾ ಪರಂಪರೆ ಉತ್ತೇಜನ ಮತ್ತು ಸಂರಕ್ಷಣೆಗೆ ಶ್ರಮಿಸುತ್ತಿರುವ ಶ್ರೀ ಮೇದಸಾನಿ ಮೋಹನ್ ಮತ್ತು ಇತರರ ಪ್ರಯತ್ನಗಳ ಬಗ್ಗೆ ಉಪರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

 ‘ಅವಧಾನಂ’ ಸಾಹಿತ್ಯಿಕ ಉತ್ಸವದಲ್ಲಿ ವಿಶ್ವದ ಸುಮಾರು 20 ರಾಷ್ಟ್ರಗಳ ವಿದ್ವಾಂಸರು ಮತ್ತು ಪಂಡಿತರು ಭಾಗವಹಿಸಿರುವುದು ಶ್ಲಾಘನೀಯ ಎಂದರು. ಸಾಂಕ್ರಾಮಿಕ ಸಂದರ್ಭಗಳಲ್ಲಿ ಇಂತಹ ವರ್ಚುವಲ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಪ್ರತಿಕೂಲ ಪರಿಸ್ಥಿತಿಗಳನ್ನು ಅವಕಾಶಗಳನ್ನಾಗಿ ಬಳಸಿಕೊಂಡರೆ ನಾವು ಮುನ್ನಡೆ ಸಾಧಿಸಲು ಸಾಧ್ಯ ಎಂದರು.

ಈ ಕಾರ್ಯಕ್ರಮ ಮತ್ತಷ್ಟು ‘ಅವಧಾನಂ’ ಕಾರ್ಯಕ್ರಮಗಳಿಗೆ ದಾರಿ ಮಾಡಿಕೊಡುತ್ತದೆ ಎಂದ ಅವರು, ಭಾರತೀಯ ಸಾಹಿತ್ಯ ಮತ್ತು ಭಾಷೆಗಳ ಕಾರ್ಯಕ್ರಮ ಇನ್ನೂ ಹೆಚ್ಚು ಜಾಗತಿಕವಾಗಲು ಉತ್ತೇಜನ ನೀಡಬೇಕಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ದು ಹೇಳಿದರು.

 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರಲ್ಲಿ ಅಧಿಕಾರಿಗಳು, ನಾನಾ ದೇಶಗಳ ಕಾರ್ಪೊರೇಟ್ ನಾಯಕರು, ಸಿನಿಮಾ ಕ್ಷೇತ್ರದ ದಿಗ್ಗಜರು, ಬರಹಗಾರರು, ವಿದ್ವಾಂಸರು ಹಾಗೂ ಉತ್ಸಾಹಿ ಜನರು ಭಾಗವಹಿಸಿದ್ದರು.

****


(Release ID: 1670428) Visitor Counter : 309