ಜಲ ಶಕ್ತಿ ಸಚಿವಾಲಯ
ಸ್ಮಾರ್ಟ್ ನೀರು ಪೂರೈಕೆ ಅಳತೆ ಮತ್ತು ನಿಗಾ ವ್ಯವಸ್ಥೆ’ ಅಭಿವೃದ್ಧಿಯ ಗ್ರ್ಯಾಂಡ್ ಚಾಲೆಂಜ್; ಅರ್ಜಿಗಳ ಮೌಲ್ಯಮಾಪನ ಪ್ರಗತಿಯಲ್ಲಿ
ಸದ್ಯದ ಸಮಸ್ಯೆಗಳ ನಿವಾರಣೆ ಮತ್ತು ಭವಿಷ್ಯದ ಸವಾಲು ಎದುರಿಸಲು ನೀರು ಪೂರೈಕೆ ಮೂಲಸೌಕರ್ಯದಲ್ಲಿ ಡಿಜಿಟಲೀಕರಣಕ್ಕೆ ಒತ್ತು
Posted On:
05 NOV 2020 2:41PM by PIB Bengaluru
ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ 2024ರೊಳಗೆ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಗುರಿಯನ್ನು ಹೊಂದಿದ್ದು, ವಿಶೇಷವಾಗಿ ‘ಸೇವಾ ವಿತರಣೆ’ಗೆ ಆದ್ಯತೆ ನೀಡಿ ಅಂದರೆ ದೀರ್ಘಾವಧಿಯವರೆಗೆ ನಿಗದಿತ ಪ್ರಮಾಣದ ಮತ್ತು ಗುಣಮಟ್ಟದ ನೀರನ್ನು ಪೂರೈಕೆ ಮಾಡುವ ಉದ್ದೇಶವಿದೆ. ಇದರಿಂದಾಗಿ ಕಾರ್ಯಕ್ರಮದ ಮೇಲೆ ನಿಗಾವಹಿಸಲು ಆಧುನಿಕ ತಂತ್ರಜ್ಞಾನದ ಬಳಕೆ ಅತ್ಯಗತ್ಯವಾಗಿದ್ದು, ಗುಣಮಟ್ಟದ ಸೇವೆಗಳನ್ನು ಖಾತ್ರಿಪಡಿಸಲು ಸೇವಾ ವಿತರಣಾ ದತ್ತಾಂಶ ಸ್ವಯಂಚಾಲಿತವಾಗಿ ಪಡೆದುಕೊಳ್ಳಬೇಕಾಗಿದೆ. ನೀರು ಪೂರೈಕೆ ಮೂಲಸೌಕರ್ಯವನ್ನು ಡಿಜಿಟಲೀಕರಣಗೊಳಿಸುವುದರಿಂದ ಸದ್ಯದ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ ಮುಂಬರುವ ಸಂಭಾವ್ಯ ಹಾಗೂ ಭವಿಷ್ಯದ ಸವಾಲುಗಳನ್ನು ಪರಿಹರಿಸಲೂ ಸಹ ಸಹಕಾರಿಯಾಗಲಿದೆ.
ಜಲ ನಿರ್ವಹಣೆಯಲ್ಲಿ ತಂತ್ರಜ್ಞಾನದ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಇದು ಸಕಾಲವಾಗಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ರಾಷ್ಟ್ರೀಯ ಜಲ ಜೀವನ್ ಮಿಷನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ ಮತ್ತು ಜಲಶಕ್ತಿ ಸಚಿವಾಲಯದ ಸಹಯೋಗದಲ್ಲಿ ‘ಸ್ಮಾರ್ಟ್ ಜಲ ಪೂರೈಕೆ ಅಳತೆ ಮತ್ತು ನಿಗಾ ವ್ಯವಸ್ಥೆ’ ಅಭಿವೃದ್ಧಿಗೆ ಐಸಿಟಿ ಗ್ರ್ಯಾಂಡ್ ಚಾಲೆಂಜ್ ಅನ್ನು ಪ್ರಕಟಿಸಿತ್ತು. ಈ ಗ್ರ್ಯಾಂಡ್ ಚಾಲೆಂಜ್ ಗೆ ಜಲಜೀವನ್ ಮಿಷನ್ ಬಳಕೆದಾರರ ಎಜೆಂಟ್ ಆಗಿದ್ದು, ಸಿ-ಡಾಕ್ ಬೆಂಗಳೂರು ಅದರ ಜಾರಿ ಸಂಸ್ಥೆಯಾಗಿದೆ ಮತ್ತು ಅದು ಸ್ಪರ್ಧೆಗೆ ತಾಂತ್ರಿಕ ನೆರವನ್ನು ನೀಡಲಿದೆ. ಅಲ್ಲದೆ, ಸಿ-ಡಾಕ್, ಅಂತಿಮ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಮ್ಮ ಚಿಂತನೆಗಳನ್ನು ಸಾಬೀತುಪಡಿಸಲು (ಪ್ರೂಫ್ ಆಫ್ ಕಾನ್ಸೆಪ್ಟ್) (ಪಿಒಸಿ)ಗೆ ತಾಂತ್ರಿಕ ನೆರವನ್ನು ಒದಗಿಸಲಿದೆ. ಜೊತೆಗೆ ಅದು ಮಾರ್ಗದರ್ಶನ, ಬೆಂಬಲ ಮತ್ತು ತಾಂತ್ರಿಕ ಮಾರ್ಗದರ್ಶನ ಕೂಡ ನೀಡಲಿದೆ.
ಈ ಸ್ಪರ್ಧೆಗೆ ಭಾರತದಾದ್ಯಂತ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಒಟ್ಟು 218 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಅರ್ಜಿಗಳನ್ನು ಎಲ್ ಎಲ್ ಪಿ ಕಂಪನಿಗಳು, ಭಾರತೀಯ ತಂತ್ರಜ್ಞಾನ ನವೋದ್ಯಮಗಳು ಮತ್ತಿತರ ವಲಯಗಳಿಂದ ಸ್ವೀಕರಿಸಲಾಗಿದೆ. 46 ಸಾರ್ವಜನಿಕರು, 33 ಕಂಪನಿಗಳು, 76 ಭಾರತೀಯ ತಂತ್ರಜ್ಞಾನ ನವೋದ್ಯಮಗಳು, 15 ಎಲ್ ಎಲ್ ಪಿ ಕಂಪನಿಗಳು ಮತ್ತು 43 ಎಂಎಸ್ ಎಂಇಗಳಿಂದ ಅರ್ಜಿಗಳು ಬಂದಿವೆ.
ಪ್ರಸ್ತುತ ಈ ಅರ್ಜಿಗಳ ಮೌಲ್ಯಮಾಪನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಂತಿಮ ಹಂತಕ್ಕೆ ಆಯ್ಕೆಯಾಗುವ ಅರ್ಜಿದಾರರು ಆಯ್ಕೆ ಸಮಿತಿ ಮುಂದೆ ತಮ್ಮ ಚಿಂತನೆಗಳ ಪ್ರಾತ್ಯಕ್ಷಿಕೆಗಳನ್ನು ಮಂಡಿಸಲು ಆಹ್ವಾನಿಸಲಾಗುವುದು, ಅವರು ಆನ್ ಲೈನ್ ಮೂಲಕ ತಮ್ಮ ಪ್ರಾತ್ಯಕ್ಷಿಕೆಗಳನ್ನು ನೀಡಲು ಅವಕಾಶವಿದೆ ಮತ್ತು ಆನಂತರ ಪರಿಶೀಲನೆ ನಡೆಸಿ ಪ್ರೊಟೋಟೈಪ್ (ಮಾದರಿ) ಅಭಿವೃದ್ಧಿಗೆ ಮುಂದಿನ ಹಂತಕ್ಕೆ ಅಗ್ರ 10 ಮಂದಿಯನ್ನು ಆಯ್ಕೆ ಮಾಡಲಾಗುವುದು.
ಗ್ರ್ಯಾಂಡ್ ಚಾಲೆಂಜ್ ನ ಮುಂದಿನ ಹಂತದಲ್ಲಿ ಪ್ರೊಟೋಟೈಪ್ ಹಂತ (ಮಾದರಿ ಅಭಿವೃದ್ಧಿ), ಪ್ರೊಟೋಟೈಪ್ ಪ್ರಾಡಕ್ಟ್ ಸ್ಟೇಜ್ (ಮಾದರಿ ಉತ್ಪನ್ನ ಹಂತ), ಉತ್ಪನ್ನಅಭಿವೃದ್ಧಿ ಹಂತ ಮತ್ತು ಮೂರು ವಿಜೇತರ ಘೋಷಣೆ ಇವುಗಳು ಸೇರಿವೆ. ಎಂಇಐಟಿವೈ ಮತ್ತು ರಾಷ್ಟ್ರೀಯ ಜಲ ಜೀವನ್ ಮಿಷನ್ ಆರ್ಥಿಕ ನೆರವಿನಿಂದ ಈ ಎಲ್ಲ ಹಂತಗಳನ್ನು ನಡೆಸಲಾಗುವುದು. ಈ ಹಂತಗಳ ಮೌಲ್ಯಮಾಪನ ಆಧರಿಸಿ, ಒರ್ವ ವಿಜೇತರು ಮತ್ತು ಇಬ್ಬರು ರನ್ನರ್ ಅಪ್ ಗಳನ್ನು ಆಯ್ಕೆ ಮಾಡಲಾಗುವುದು ಮತ್ತು ವಿಜೇತರಿಗೆ 50 ಲಕ್ಷ ಹಾಗೂ ಇಬ್ಬರು ರನ್ನರ್ ಅಪ್ ಗಳಿಗೆ ತಲಾ 20ಲಕ್ಷ ರೂ. ಬಹುಮಾನ ನೀಡಲಾಗುವುದು.
ಈ ಗ್ರ್ಯಾಂಡ್ ಚಾಲೆಂಜ್, ಭಾರತದಲ್ಲಿನ ಕ್ರಿಯಾಶೀಲ ಮಾಹಿತಿ ತಂತ್ರಜ್ಞಾನ ಪೂರಕ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡು, ಗ್ರಾಮೀಣ ಪ್ರದೇಶದಲ್ಲಿ ನೀರು ಪೂರೈಕೆ ವಿತರಣಾ ಸೇವೆಯ ಮೇಲೆ ನಿಗಾ ಮತ್ತು ಅಳತೆಯ ಪೂರಕ ವ್ಯವಸ್ಥೆಗೆ ಸ್ಮಾರ್ಟ್ ಗ್ರಾಮೀಣ ನೀರು ಪೂರೈಕೆ ವ್ಯವಸ್ಥೆಯನ್ನು ಸೃಷ್ಟಿಸಲಿದೆ. ಈ ಸ್ಪರ್ಧೆ, ಜಲ ಜೀವನ್ ಮಿಷನ್ ಅಡಿಯಲ್ಲಿ ಕೆಲಸ ಮಾಡಲು ಅವಕಾಶ ಒದಗಸಲಿದೆ ಮತ್ತು ದೇಶದ ಗ್ರಾಮೀಣ ಪ್ರದೇಶದ ಪ್ರತಿಯೊಂದು ಕುಟುಂಬಕ್ಕೂ ನೀರಿನ ಸಂಪರ್ಕ ನೀಡಿ, ಶುದ್ಧ ಕುಡಿಯುವ ನೀರು ಒದಗಿಸುವ ಭರವಸೆಯನ್ನು ನೀಡುತ್ತದೆ.
*****
(Release ID: 1670344)
Visitor Counter : 185