ಇಂಧನ ಸಚಿವಾಲಯ

210 ಮೆಗಾವ್ಯಾಟ್ ಸಾಮರ್ಥ್ಯದ ಲೂಹ್ರಿ ಜಲ ವಿದ್ಯುತ್ ಯೋಜನೆಯ ಮೊದಲ ಹಂತಕ್ಕೆ 1810 ಕೋಟಿ ರೂ.ಗಳ ಹೂಡಿಕೆ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ

Posted On: 04 NOV 2020 3:35PM by PIB Bengaluru

ಹಿಮಾಚಲ ಪ್ರದೇಶದ ಶಿಮ್ಲಾ ಮತ್ತು ಕುಲ್ಲು ಜಿಲ್ಲೆಗಳಲ್ಲಿರುವ ಸಟ್ಲೇಜ್ ನದಿಯಲ್ಲಿ 210 ಮೆಗಾವ್ಯಾಟ್ ಸಾಮರ್ಥ್ಯದ ಲೂಹ್ರಿ ಜಲ ವಿದ್ಯುತ್ ಯೋಜನೆಯ ಮೊದಲ ಹಂತಕ್ಕೆ .1810.56 ಕೋಟಿ ರೂ. ಹೂಡಿಕೆ ಮಾಡಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಅನುಮೋದನೆ ನೀಡಿದೆ. ಈ ಯೋಜನೆಯು ವಾರ್ಷಿಕ 758.20 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಲಿದೆ.

ಈ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ ಬಿಲ್ಡ್-ಓನ್-ಆಪರೇಟ್-ಮೆಂಟೈನ್ (ಬೂಮ್) ಆಧಾರದ ಮೇಲೆ ಸಟ್ಲೇಜ್ ಜಲ ವಿದ್ಯುತ್ ನಿಗಮ ಲಿಮಿಟೆಡ್ (ಎಸ್‌ಜೆವಿಎನ್‌ಎಲ್) ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯ ಒಪ್ಪಂದಕ್ಕೆ ಜಾಗತಿಕ ಹೂಡಿಕೆದಾರರ ಶೃಂಗಸಭೆಯಾದ ರೈಸಿಂಗ್ ಹಿಮಾಚಲದ ಸಂದರ್ಭದಲ್ಲಿ ಹಿಮಾಚಲ ಪ್ರದೇಶ ಸರ್ಕಾರದೊಂದಿಗೆ ಸಹಿ ಹಾಕಲಾಗಿದೆ. ಈ ಶೃಂಗಸಭೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 7 ನವೆಂಬರ್ 2019 ರಂದು ಉದ್ಘಾಟಿಸಿದರು. ಭಾರತ ಸರ್ಕಾರವು ಸಹ ಈ ಯೋಜನೆಗೆ 66.19 ಕೋಟಿ ರೂ.ಅನುದಾನ ಒದಗಿಸುತ್ತಿದೆ. ವಿದ್ಯುತ್ ದರಗಳನ್ನು ಕಡಿಮೆ ಮಾಡಲು ಇದರಿಂದ ನೆರವಾಗುತ್ತದೆ. 

ಮೊದಲ ಹಂತದ ಲೂಹ್ರಿ ಜಲ ವಿದ್ಯುತ್ ಯೋಜನೆಯನ್ನು 62 ತಿಂಗಳ ಅವಧಿಯಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಯೋಜನೆಯಿಂದ ಉತ್ಪಾದನೆಯಾಗುವ ವಿದ್ಯುತ್ ಗ್ರಿಡ್‌ಗೆ ಸ್ಥಿರತೆಯನ್ನು ಒದಗಿಸುತ್ತದೆ ಮತ್ತು ವಿದ್ಯುತ್ ಸರಬರಾಜು ಸುಧಾರಿಸುತ್ತದೆ. ಅಮೂಲ್ಯವಾದ ನವೀಕರಿಸಬಹುದಾದ ಇಂಧನವನ್ನು ಗ್ರಿಡ್‌ಗೆ ಸೇರಿಸುವುದರ ಜೊತೆಗೆ, ಈ ಯೋಜನೆಯು ವಾರ್ಷಿಕವಾಗಿ ಪರಿಸರದಿಂದ 6.1 ಲಕ್ಷ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಗಾಳಿಯ ಗುಣಮಟ್ಟವೂ ಸುಧಾರಣೆಯಾಗುತ್ತದೆ.

ಯೋಜನೆಯ ನಿರ್ಮಾಣ ಚಟುವಟಿಕೆಗಳಿಂದಾಗಿ ಸುಮಾರು 2000 ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ದೊರೆಯುತ್ತದೆ. ಇದು ರಾಜ್ಯದ ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಇದಲ್ಲದೆ, ಹಿಮಾಚಲ ಪ್ರದೇಶವು ಮೊದಲ ಹಂತದ ಲೂಹ್ರಿ ಜಲ ವಿದ್ಯುತ್ ಯೋಜನೆಯ 40 ವರ್ಷಗಳ ಯೋಜನಾ ಅವಧಿಯಲ್ಲಿ ಸುಮಾರು 1140 ಕೋಟಿ ರೂ. ಗಳ ಉಚಿತ ವಿದ್ಯುತ್ ಪಡೆಯಲಿದೆ. ಯೋಜನೆಯ ಸಂತ್ರಸ್ತ ಕುಟುಂಬಗಳಿಗೆ ಹತ್ತು ವರ್ಷಗಳವರೆಗೆ ತಿಂಗಳಿಗೆ 100 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು.
ಸಟ್ಲೇಜ್ ಜಲ ವಿದ್ಯುತ್ ನಿಗಮ ಲಿಮಿಟೆಡ್  ನವೀಕರಿಸಬಹುದಾದ ಇಂಧನ, ವಿದ್ಯುತ್ ಪ್ರಸರಣ ಮತ್ತು ಉಷ್ಣ ವಿದ್ಯುತ್ ಉತ್ಪಾದನೆ ಕ್ಷೇತ್ರಗಳಿಗೆ ಕಾಲಿಟ್ಟಿದೆ. ಇದು 2023 ರ ವೇಳೆಗೆ 5000 ಮೆಗಾವ್ಯಾಟ್, 2030 ರ ವೇಳೆಗೆ 12000 ಮೆಗಾವ್ಯಾಟ್ ಮತ್ತು 2040 ರ ವೇಳೆಗೆ 25000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಆಂತರಿಕ ಬೆಳವಣಿಗೆಯ ಗುರಿ ಹಾಕಿಕೊಂಡಿದೆ.

****


(Release ID: 1670169)