ಪ್ರಧಾನ ಮಂತ್ರಿಯವರ ಕಛೇರಿ

‘ಆರಂಭ್’ 2020ಯಲ್ಲಿ ನಾಗರಿಕ ಸೇವಾ ಪ್ರೊಬೆಷನರಿ ಅಧಿಕಾರಿಗಳೊಂದಿಗೆ ಪ್ರಧಾನಿ ನಡೆಸಿದ ಸಂವಾದದ ಪಠ್ಯ

Posted On: 31 OCT 2020 4:46PM by PIB Bengaluru

ನಮ್ಮ ಯುವ ಪೀಳಿಗೆ ಆಡಳಿತದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಅದು ಚೌಕಟ್ಟಿನಿಂದಾಚೆ ಯೋಚಿಸುವುದಕ್ಕೆ ಸಿದ್ಧವಿರುವುದೇ ಅಲ್ಲದೆ, ಏನಾದರೂ ಹೊಸತನ್ನು ಮಾಡುವ ಉದ್ದೇಶವನ್ನು ಹೊಂದಿದೆ. ಇದು ನನಗೆ ಹೊಸ ಭರವಸೆಯನ್ನು ಮೂಡಿಸಿದೆ, ಹಾಗಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ..!. ಕಳೆದ ವರ್ಷ ಇದೇ ದಿನ, ನಾನು ಕೆವಾಡಿಯಾದಲ್ಲಿ ಹಿಂದಿನ ಬ್ಯಾಚ್ ನ ಪ್ರೊಬೆಷನರಿ ಅಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದೆ ಮತ್ತು ನಾವು ಇಲ್ಲಿ ತಾಯಿ ನರ್ಮದಾ ನದಿಯ ದಂಡೆಯಲ್ಲಿರುವ ಸರ್ದಾರ್ ಪಟೇಲ್ ಪ್ರತಿಮೆಯ ಸ್ಥಳದಲ್ಲಿ ಭೇಟಿ ಮಾಡುತ್ತಿದ್ದೇವೆ ಮತ್ತು ನಾವೆಲ್ಲರೂ ಒಗ್ಗೂಡಿ ನಮ್ಮ ಚಿಂತನೆಗಳಿಗೆ ಹೊಸ ರೂಪ ಕೊಡಲು ಪ್ರಯತ್ನಿಸುತ್ತೇವೆ, ಹಾಗಾಗಿ ಪ್ರತಿ ವರ್ಷ ಈ ವಿಶೇಷ ಕಾರ್ಯಕ್ರಮಕ್ಕೆ ‘ಆರಂಭ’ ಎಂದು ಹೆಸರಿಡಲು ನಿರ್ಧರಿಸಲಾಗಿತ್ತು.  ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಅದು ಸಾಧ್ಯವಾಗಿಲ್ಲ. ಈ ಬಾರಿ ನೀವೆಲ್ಲಾ ಮಸ್ಸೂರಿಯಲ್ಲಿದ್ದೀರಿ, ನಾನು ನಿಮ್ಮನ್ನು ವರ್ಚುವಲ್ ರೂಪದಲ್ಲಿ ಸಂಪರ್ಕಿಸಿದ್ದೇನೆ. ಈ ವ್ಯವಸ್ಥೆಯ ಜೊತೆ ಸಂಬಂಧ ಹೊಂದಿರುವ ಎಲ್ಲ ಜನರು ಮತ್ತು ಅಧಿಕಾರಿಗಳಿಗೆ, ಕೊರೊನಾದ ಸೋಂಕಿನ ತೀವ್ರತೆಯ ಪರಿಣಾಮ ತಗ್ಗಿದ ಕೂಡಲೇ ಸುಂದರ ಸರ್ದಾರ್ ಪಟೇಲ್ ಪ್ರತಿಮೆಯ ಸನಿಹದಲ್ಲಿ ನೀವು ಸಣ್ಣ ಶಿಬಿರವನ್ನು ಆಯೋಜಿಸಬೇಕು. ಇಲ್ಲಿ ಕಾಲ ಕಳೆಯಬೇಕು ಮತ್ತು ಭಾರತದ ವಿಭಿನ್ನ ಪ್ರವಾಸಿ ತಾಣವಾಗಿ ಹೇಗೆ ಈ ಸ್ಥಳ ಅಭಿವೃದ್ಧಿಯಾಗುತ್ತಿದೆ ಎಂಬುದನ್ನು ನೀವೇ ಖುದ್ದು ಸವಿಯಬೇಕು. 

ಮಿತ್ರರೇ,

ವರ್ಷದ ಹಿಂದೆ ಇದ್ದ ಸ್ಥಿತಿಗತಿಗೂ, ಇಂದಿನ ಸದ್ಯ ಸ್ಥಿತಿಗತಿಗೂ ಭಾರೀ ವ್ಯತ್ಯಾಸವಿದೆ. ಇಂತಹ ಸಂಕಷ್ಟದ ಸಮಯದಲ್ಲಿ ದೇಶ ಹೇಗೆ ಕಾರ್ಯನಿರ್ವಹಿಸಿದೆ ಎಂಬುದನ್ನು ನೋಡಿ ನೀವು ಸಾಕಷ್ಟು ಕಲಿತಿದ್ದೀರಿ ಮತ್ತು ಹೇಗೆ ದೇಶದ ವ್ಯವಸ್ಥೆ ಕಾರ್ಯನಿರ್ವಹಿಸಿದೆ ಎಂಬುದನ್ನು ಕಣ್ಣಾರೆ ಕಂಡಿದ್ದೀರಿ ಎಂದು ನಾನು ನಂಬಿದ್ದೇನೆ. ನೀವು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದರೆ, ನಿಮಗೆ ಸಾಕಷ್ಟು ಭರವಸೆಯ ಅನುಭವವೂ ಸಹ ಆಗಿರುತ್ತದೆ. ಇದಕ್ಕೂ ಮುನ್ನ ಹಲವು ಸಂಗತಿಗಳಿಗೆ ಭಾರತ ಇತರೆ ದೇಶಗಳನ್ನು ಅವಲಂಬಿಸಿತ್ತು. ಆದರೆ ಕೊರೊನಾ ವಿರುದ್ಧದ ಹೋರಾಟದ ಜೊತೆ ಜೊತೆಗೆ ಇಂದು ಭಾರತ ಹಲವು ವಸ್ತುಗಳನ್ನು ರಫ್ತು ಮಾಡುವಂತಹ ಸ್ಥಿತಿಗೆ ತಲುಪಿದೆ. ಇದು ‘ಸಂಕಲ್ಪದಿಂದ ಸಿದ್ಧಿ’ ಎಂಬುದಕ್ಕೆ ಶ್ರೇಷ್ಠ ಉದಾಹರಣೆಯಾಗಿದೆ. 

 ಮಿತ್ರರೇ,

ಭಾರತದ ಅಭಿವೃದ್ಧಿಯ ಪಯಣದಲ್ಲಿ ಇದು ಅತ್ಯಂತ ಮಹತ್ವದ ಕಾಲಘಟ್ಟವಾಗಿದೆ. ನೀವು ನಾಗರಿಕ ಸೇವೆಯನ್ನು ಸೇರುತ್ತಿರುವ ಈ ಸಂದರ್ಭ ಅತ್ಯಂತ ವಿಶೇಷವಾದುದಾಗಿದೆ. ನಿಮ್ಮ ಬ್ಯಾಚ್ ನ ಅಧಿಕಾರಿಗಳು ಕಾರ್ಯನಿರ್ವಹಿಸಲಾರಂಭಿಸಿದಾಗ, ನೀವು ವಾಸ್ತವವಾಗಿ ಕ್ಷೇತ್ರ ಕಾರ್ಯಕ್ಕೆ ಇಳಿಯುವ ವೇಳೆಗೆ ಭಾರತ ತನ್ನ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುತ್ತದೆ, ಇದು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಆಗ ನೀವು ಈ ವ್ಯವಸ್ಥೆಯನ್ನು ಪ್ರವೇಶಿಸುತ್ತೀರಿ ಮತ್ತು ಭಾರತ ಕೂಡ 75ನೇ ವರ್ಷದ ಭಾರತೀಯ ಸ್ವಾತಂತ್ರ್ಯ ಹಬ್ಬವನ್ನು ಆಚರಿಸುತ್ತದೆ ಮತ್ತು ಗೆಳೆಯರೇ, ಇದು ನಿಮ್ಮ ದಿನಚರಿಯಲ್ಲಿ ಅತ್ಯಂತ ಪ್ರಮುಖವಾದುದಾಗಲಿದೆ. ನೀವು ಭಾರತಕ್ಕೆ ಅತ್ಯಂತ ಪ್ರಮುಖ ಕಾಲಘಟ್ಟದಲ್ಲಿ ಸೇವೆ ಸಲ್ಲಿಸುತ್ತೀರಿ ಮತ್ತು ಭಾರತ ಸ್ವಾತಂತ್ರ್ಯ ಸಂಗ್ರಾಮದ 100ನೇ ವರ್ಷದ ಆಚರಣೆಯನ್ನು ನೀವು ಕಾಣಲಿದ್ದೀರಿ ಎಂಬುದನ್ನು ಮರೆಯಬೇಡಿ, ಸ್ವಾತಂತ್ರ್ಯಾ ನಂತರದ 75ನೇ ವರ್ಷದಿಂದ 100 ವರ್ಷದೊಳಗಿನ 25 ವರ್ಷಗಳ ಅವಧಿ ಅತ್ಯಂತ ಪ್ರಮುಖವಾದುದಾಗಿದೆ. ನೀವು ------ ಪೀಳಿಗೆಯ ಅದೃಷ್ಟವಂತರು. ಈ 25 ವರ್ಷಗಳ ಅತ್ಯಂತ ಪ್ರಮುಖ ಆಡಳಿತ ವ್ಯವಸ್ಥೆಯ ಭಾಗವಾಗಿ ನೀವು ಕಾರ್ಯನಿರ್ವಹಿಸಲಿದ್ದೀರಿ. ಮುಂದಿನ 25 ವರ್ಷಗಳಲ್ಲಿ ನೀವು ದೇಶದ ಭದ್ರತೆ, ಬಡವರ ಸುರಕ್ಷತೆ, ರೈತರ ಕಲ್ಯಾಣ, ಮಹಿಳೆಯರು ಮತ್ತು ಯುವಜನರ ಹಿತರಕ್ಷಣೆಯ ಭಾರೀ ಜವಾಬ್ದಾರಿಯನ್ನು ಹೊರುವುದೇ ಅಲ್ಲದೆ, ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನಮಾನವನ್ನು ನೋಡಲಿದ್ದೀರಿ. ಆ ವೇಳೆಗೆ ಬಹುತೇಕ ನಾವೆಲ್ಲರೂ ನಿಮ್ಮೊಂದಿಗಿರುವುದಿಲ್ಲ. ಆದರೆ ನೀವು ಇರಿತ್ತೀರಿ, ನಿಮ್ಮ ಸಂಕಲ್ಪಗಳು ಇರುತ್ತವೆ ಮತ್ತು ನಿಮ್ಮ ಸಂಕಲ್ಪಗಳನ್ನು ಈಡೇರಿಸಿಕೊಳ್ಳಬೇಕು. ಹಾಗಾಗಿ  ಈ ಪವಿತ್ರ ದಿನದಂದು ನೀವು ನನಗಲ್ಲ, ನಿಮಗೆ ನೀವೆ ಸಾಕಷ್ಟು ಭರವಸೆಗಳನ್ನು ಕೊಟ್ಟುಕೊಳ್ಳಕೊಳ್ಳಬೇಕು. ಆಗ ಮಾತ್ರ ನೀವು ನಿಮ್ಮ ಭರವಸೆಗಳಿಗೆ ಸಾಕ್ಷಿಯಾಗಬಲ್ಲರಿ. ಇಂದು ರಾತ್ರಿ ನೀವು ನಿದ್ರೆಗೆ ಜಾರುವ ಮುನ್ನ ಅರ್ಧ ಗಂಟೆ ನಿಮಗಾಗಿ ಸಮಯವನ್ನು ಮೀಸಲಿಟ್ಟುಕೊಳ್ಳಿ ಎಂದು ಮನವಿ ಮಾಡುತ್ತೇನೆ. ನಿಮ್ಮ ಮನಸ್ಸಿನಲ್ಲಿ ನಿಮ್ಮ ಕರ್ತವ್ಯ, ಜವಾಬ್ದಾರಿ ಮತ್ತು ಸಂಕಲ್ಪಗಳ ಕುರಿತು ಏನೇನು ಆಲೋಚನೆಗಳು ಬರುತ್ತವೆಯೋ ಅವನ್ನೆಲ್ಲಾ ಬರೆದಿಟ್ಟುಕೊಳ್ಳಿ. 

ಮಿತ್ರರೇ,

ನೀವು ನಿಮ್ಮ ಸಂಕಲ್ಪಗಳನ್ನು ಬರೆದಿಟ್ಟುಕೊಳ್ಳುವ ಕಾಗದ, ನೀವು ನಿಮ್ಮ ಕನಸುಗಳಿಗೆ ಅಕ್ಷರಗಳ ರೂಪ ನೀಡುವುದು, ಆ ಕಾಗದದ ತುಣುಕು ಕೇವಲ ಕಾಗದದ ತುಣುಕಾಗಿರುವುದಿಲ್ಲ. ಅದು ನಿಮ್ಮ ಹೃದಯದ ಭಾಗವಾಗಿರುತ್ತದೆ, ಈ ಕಾಗದದ ತುಣುಕುಗಳು ನಿಮ್ಮ ಇಡೀ ಜೀವನದುದ್ದಕ್ಕೂ ನಿಮ್ಮ ಸಂಕಲ್ಪಗಳನ್ನು ಸಾಕಾರಗೊಳಿಸಲು ನಿಮ್ಮ ಹೃದಯದ ಬಡಿತಗಳಂತಿರುತ್ತವೆ. ನಿಮ್ಮ ಹೃದಯ ದೇಹಕ್ಕೆ ಹೇಗೆ ಸ್ಥಿರ ಚಲನೆಯನ್ನು ನೀಡುತ್ತದೋ, ಹಾಗೆಯೇ ನೀವು ಕಾಗದದ ಮೇಲೆ ಬರೆದಿಟ್ಟುಕೊಳ್ಳುವ ಪ್ರತಿಯೊಂದು ಶಬ್ದವೂ ನಿಮ್ಮ ಜೀವನದ ಸಂಕಲ್ಪಗಳಾಗಿ ಯಾವುದೇ ಅಡೆತಡೆ ಇಲ್ಲದೆ ಸಾಗುತ್ತಿರುತ್ತವೆ. ನಾವು, ನಿಮ್ಮ ಕನಸುಗಳನ್ನು ಬದ್ಧತೆಯಿಂದ ಮುಂದುವರಿಸಿಕೊಂಡು ಹೋಗುತ್ತೇವೆ ಮತ್ತು ‘ಸಂಕಲ್ಪದಿಂದ ಸಿದ್ಧಿ’ಯಾಗಿ ಅವು ಮುಂದುವರಿಯುತ್ತವೆ. ಆಗ ನೀವು ನಿಮಗೆ ಯಾವುದೇ ಸ್ಫೂರ್ತಿ ಬೇಕಾಗಿಲ್ಲ ಅಥವಾ ಯಾರಿಂದಲೂ ನೀವು ಪಾಠ ಕಲಿಯಬೇಕಾಗಿಲ್ಲ. ಈ ಕಾಗದದ ಮೇಲಿನ ಪದಗಳು ನಿಮ್ಮ ಹೃದಯದಿಂದ ಬಂದಿರುತ್ತವೆ ಮತ್ತು ಈ ದಿನ ಹಾಗೂ ನಿಮ್ಮ ನಿರ್ಣಯಗಳನ್ನು ಅವು ಸದಾ ನಿಮಗೆ ನೆನಪಿಸುತ್ತಿರುತ್ತವೆ. 

ಮಿತ್ರರೇ,

ಒಂದು ವಿಧದಲ್ಲಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ದೇಶದಲ್ಲಿ ಸಾರ್ವಜನಿಕ ಸೇವೆಗಳ ಪಿತಾಮಹ ಎನ್ನಬಹುದು. 1947ರ ಏಪ್ರಿಲ್ 21ರಂದು ಮೊದಲ ಬ್ಯಾಚ್ ನ ಆಡಳಿತ ಸೇವಾ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ್ದ ಸರ್ದಾರ್ ಪಟೇಲ್ ಅವರು, ನಾಗರಿಕ ಸೇವಾ ಅಧಿಕಾರಿಗಳನ್ನು ದೇಶದ ‘ಉಕ್ಕಿನ ಚೌಕಟ್ಟು’ ಎಂದು ಕರೆದಿದ್ದರು. ಸರ್ದಾರ್ ಸಾಹೇಬ್ ಅವರು, ದೇಶದ ನಾಗರಿಕರಿಗೆ ಸೇವೆ ಸಲ್ಲಿಸುವುದು ಅತ್ಯಂತ ಶ್ರೇಷ್ಠ ಕರ್ತವ್ಯ ಎಂದು ಸಲಹೆ ನೀಡಿದ್ದರು. ನಾಗರಿಕ ಸೇವಾ ಅಧಿಕಾರಿಯ ಪ್ರತಿಯೊಂದು ನಿರ್ಧಾರವೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಲವರ್ಧನೆಗೊಳಿಸುವಂತಿರಬೇಕು ಮತ್ತು ರಾಷ್ಟ್ರದ ನಿಟ್ಟಿನಲ್ಲಿ ಇರಬೇಕು ಎಂದು ನಾನು ಕೂಡ ಕರೆ ನೀಡುತ್ತೇನೆ. ಅದು ನಿಮ್ಮಲ್ಲಿ ಸಂವಿಧಾನದ ಸ್ಫೂರ್ತಿಯನ್ನು ಉಳಿಸಬೇಕು. ನೀವು ಕೆಲಸ ಮಾಡುವ ಪ್ರದೇಶ ಚಿಕ್ಕದಿದ್ದರೂ, ನೀವು ನಿರ್ವಹಿಸುವ ಇಲಾಖೆಯ ವ್ಯಾಪ್ತಿ ಸಣ್ಣದಿದ್ದರೂ, ನಿಮ್ಮ ನಿರ್ಧಾರಗಳು ಸದಾ ದೇಶ ಮತ್ತು ಜನರ ಹಿತಾಸಕ್ತಿಗೆ ಬದ್ಧವಾಗಿರಬೇಕು. ರಾಷ್ಟ್ರೀಯ ಚಿಂತನೆಯನ್ನು ಅವುಗಳು ಹೊಂದಿರಬೇಕು. 

ಮಿತ್ರರೇ,

ಉಕ್ಕಿನ ಚೌಕಟ್ಟಿನ ಕಾರ್ಯ ಕೇವಲ ರೂಪ ನೀಡುವುದಲ್ಲ ಅಥವಾ ಸದ್ಯದ ವ್ಯವಸ್ಥೆಯನ್ನು ನಿರ್ವಹಿಸುವುದಲ್ಲ, ಪ್ರಮುಖ ಬಿಕ್ಕಟ್ಟು ಅಥವಾ ಮುಖ್ಯ ಬದಲಾವಣೆಯ ನಡುವೆಯೇ ದೇಶದ ಕನಸುಗಳನ್ನು ಸಾಕಾರಗೊಳಿಸುವುದು, ನೀವು ಏಕೈಕ ಶಕ್ತಿಯಾಗಿ ದೇಶವನ್ನು ಮುನ್ನಡೆಸಿಕೊಂಡು ಹೋಗುವ ನಿಮ್ಮ ಹೊಣೆಗಾರಿಕೆಯನ್ನು ಈಡೇರಿಸುತ್ತೀರಿ. ನೀವು ನಿಮ್ಮ ಹೊಣೆಗಾರಿಕೆಗಳನ್ನು ಯಶಸ್ವಿಯಾಗಿ ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ನೀವು ನೆರವುದಾರರಾಗುತ್ತೀರಿ. ನೀವು ಒಮ್ಮೆ ಕ್ಷೇತ್ರ ಕಾರ್ಯಕ್ಕೆ ಇಳಿದರೆ, ಆಗ ನೀವು ಭಿನ್ನ ವ್ಯಕ್ತಿಗಳಾಗುತ್ತೀರಿ ಮತ್ತು ನೀವು ಸದಾ ಈ ಪಾತ್ರವನ್ನು ನೆನಪಿನಲ್ಲಿಟ್ಟುಕೊಂಡಿರುತ್ತೀರಿ. ಅವುಗಳನ್ನು ಮರೆಯುವಂತಹ ತಪ್ಪು ಎಂದಿಗೂ ಮಾಡುವುದಿಲ್ಲ. ಚೌಕಟ್ಟು ಯಾವುದೇ ಆಗಿದ್ದರೂ, ಕಾರು, ಕನ್ನಡಕ ಅಥವಾ ಚಿತ್ರ ಯಾವುದೇ ಆಗಿದ್ದರೂ ಅದಕ್ಕೆ ಸರಿಯಾಗಿ ಜೋಡಿಸಿದರೆ ಮಾತ್ರ ಅದು ಅರ್ಥಪೂರ್ಣವಾಗುತ್ತದೆ. ಉಕ್ಕಿನ ಚೌಕಟ್ಟನ್ನು ಪ್ರತಿನಿಧಿಸುವ ನೀವು ತಂಡದಲ್ಲಿ ಸೇರಿದಾಗ ಮಾತ್ರ ಮತ್ತು ತಂಡವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಹೆಚ್ಚಿನ ಪರಿಣಾಮಗಳಾಗುತ್ತವೆ. ಭವಿಷ್ಯದಲ್ಲಿ ನೀವು ಹಲವು ಜಿಲ್ಲೆಗಳನ್ನು ಮತ್ತು ನಾನಾ ಇಲಾಖೆಗಳನ್ನು ಮುನ್ನಡೆಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ನೀವು ಇಡೀ ರಾಜ್ಯ ಮತ್ತು ಇಡೀ ದೇಶದ ಮೇಲೆ ಪರಿಣಾಮಗಳಾಗುವಂತಹ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಅಂತಹ ಸಮಯದಲ್ಲಿ ನಿಮ್ಮಲ್ಲಿನ ತಂಡದ ಸ್ಫೂರ್ತಿ ಅಥವಾ ಮನೋಭಾವ, ನಿಮಗೆ ಅತ್ಯಂತ ಹೆಚ್ಚು ಉಪಯುಕ್ತವಾಗುತ್ತದೆ. ನೀವು ನಿಮ್ಮ ವೈಯಕ್ತಿಕ ಸಂಕಲ್ಪಗಳ ಮೂಲಕ ರಾಷ್ಟ್ರೀಯ ಹಿತಾಸಕ್ತಿಯ ದೊಡ್ಡ ಗುರಿಗಳನ್ನು ಸೇರಿಸಿಕೊಂಡರೆ ಯಾವುದೇ ಸೇವೆಯಲ್ಲಿದ್ದರೂ ನಿಮ್ಮೆಲ್ಲಾ ತಂಡದ ಶಕ್ತಿಯನ್ನು ಒಗ್ಗೂಡಿಸಿದರೆ ಆಗ ಮಾತ್ರ ನೀವು ಯಶಸ್ವಿಯಾಗಲು ಸಾಧ್ಯ ಮತ್ತು ಅಂತಹ ಸಂದರ್ಭದಲ್ಲಿ ದೇಶ ಎಂದಿಗೂ ವಿಫಲವಾಗುವುದಿಲ್ಲ ಎಂಬ ಭರವಸೆ ನನಗಿದೆ. 

ಮಿತ್ರರೇ,

ಸರ್ದಾರ್  ಪಟೇಲ್ ಅವರು ‘ಏಕ ಭಾರತ್ ಶ್ರೇಷ್ಠ ಭಾರತ್’ ಕನಸನ್ನು ಕಂಡಿದ್ದರು. ಅವರ ಕನಸು ‘ಸ್ವಾವಲಂಬಿ ಭಾರತ’ ಸಾಧಿಸುವ ಗುರಿಯಾಗಿತ್ತು. ಸಾಂಕ್ರಾಮಿಕದ ಸಮಯದಲ್ಲಿ ನಾವು ಕಲಿತ ಅತಿ ದೊಡ್ಡ ಪಾಠ ಎಂದರೆ ಅದು ಸ್ವಾವಲಂಬಿಯಾಗುವುದು. ‘ಏಕ ಭಾರತ್ ಶ್ರೇಷ್ಠ ಭಾರತ್’ ಮತ್ತು ಇಂದಿನ ‘ಸ್ವಾವಲಂಬಿ ಭಾರತ’ದ ಸ್ಫೂರ್ತಿಯೊಂದಿಗೆ ‘ನವಭಾರತ’ ನಿರ್ಮಾಣ ನಿಟ್ಟಿನಲ್ಲಿ ನಾವು ಸಾಕ್ಷಿಯಾಗುತ್ತಿದ್ದೇವೆ. ಹೊಸದಾಗಿ ನಾವು ಹಲವು ಅರ್ಥಗಳನ್ನು ಹಾಗೂ ಭಾವನೆಗಳನ್ನು ಕಾಣುತ್ತಿದ್ದೇವೆ. ಆದರೆ ನನಗೆ ಹೊಸತನ ಎಂದರೆ ಕೇವಲ ಹಳೆಯದನ್ನು ತೆಗೆದು ಹಾಕುವುದು ಮತ್ತು ಹೊಸತನ್ನು ತರುವುದು ಎಂದರ್ಥವಲ್ಲ. ‘ಹೊಸತು’ ಎಂದರೆ ಪುನರುಜ್ಜೀವನ, ಸಕ್ರಿಯ ತಾಜಾ ಮತ್ತು ನವಚೈತನ್ಯದಿಂದ ಇರುವುದು. ಹೊಸತನ ಎಂದರೆ ‘ಹಳೆಯ’ದನ್ನು ಅದು ಅಪ್ರಸ್ತುತ ಎಂದು ನಿರ್ಲಕ್ಷಿಸುವ ಬದಲು, ಹೆಚ್ಚು ಪ್ರಸ್ತುತಗೊಳಿಸುವುದು. ಇದು ನಮಗೆ ತ್ಯಜಿಸಲು ಧೈರ್ಯವನ್ನು ನೀಡುತ್ತದೆ ಮತ್ತು ಅದು ನಿರಂತರವಾಗಿ ಚಿಂತಿಸಲು, ಸಂವಾದ ನಡೆಸಲು ಮತ್ತು ಹೊಸ ಅತ್ಯಾಧುನಿಕ ಮತ್ತು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಅಗತ್ಯತೆಗಳನ್ನು ಹುಡುಕಲು ನೆರವಾಗುತ್ತದೆ. ಮಿತ್ರರೇ, ಸ್ವಾವಲಂಬಿ ಭಾರತ ನಿರ್ಮಾಣದ ಗುರಿ ಸಾಧನೆಗಾಗಿ ನಿಜವಾಗಿಯೂ ನಮಗೆ ವಿಜ್ಞಾನ ಮತ್ತು ತಂತ್ರಜ್ಞಾನ, ಸಂಪನ್ಮೂಲ ಮತ್ತು ಹಣಕಾಸು ಅಗತ್ಯವಿದೆ. ಅದರ ಜೊತೆಗೆ ಈ ಕನಸಿನ ಸಾಕಾರಕ್ಕೆ ಓರ್ವ ನಾಗರಿಕ ಸೇವಾ ಅಧಿಕಾರಿಯಾಗಿ ನಿಮ್ಮ ಪಾತ್ರ ಏನು ಎಂಬುದನ್ನು ತಿಳಿಯುವುದು ಕೂಡ ಅಷ್ಟೇ ಪ್ರಾಮುಖ್ಯತೆ ಹೊಂದಿದೆ. ಆಶೋತ್ತರಗಳನ್ನು ಈಡೇರಿಸುವ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ಈ ಗುರಿಗಳನ್ನು ಸಾಧಿಸಲು ದಿನವಿಡೀ ನೀವು ಚಿಂತನೆ ನಡೆಸಬೇಕು, ಅದಕ್ಕೆ ನೀವು ಮಾಡಲಿರುವ ಕೆಲಸದ ಗುಣಮಟ್ಟ ಹಾಗೂ ವೇಗ ಕೂಡ ಮುಖ್ಯವಾಗುತ್ತದೆ. 

 ಮಿತ್ರರೇ,

ದೇಶದಲ್ಲಿ ಹೊಸ ಗುರಿಗಳನ್ನು ಸಾಧಿಸಲು ಹೊಸ ಬದಲಾವಣೆಗಳನ್ನು, ಹೊಸತನವನ್ನು ಅಳವಡಿಸಿಕೊಳ್ಳಲು ಮತ್ತು ಹೊಸ ವಿಧಾನಗಳಿಗಾಗಿ ತರಬೇತಿ ಕೌಶಲ್ಯ ಅಭಿವೃದ್ಧಿ ನಿಟ್ಟಿನಲ್ಲಿ ತರಬೇತಿ ಅತ್ಯಂತ ಪ್ರಮುಖವಾದುದು. ಈ ಮೊದಲು ಅದಕ್ಕೆ ಅಷ್ಟೊಂದು ಒತ್ತು ನೀಡುತ್ತಿರಲಿಲ್ಲ. ತರಬೇತಿಯಲ್ಲಿ ಹೇಗೆ ಆಧುನಿಕ ಮನೋಭಾವಗಳನ್ನು ರೂಢಿಸಬಹುದು ಎಂಬುದಕ್ಕೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಆದರೆ ಈಗ ದೇಶದಲ್ಲಿ ಮಾನವ ಸಂಪನ್ಮೂಲಕ್ಕೆ ಆಧುನಿಕ ತರಬೇತಿ ಮತ್ತು ಮನೋಭಾವ ಬದಲಾವಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನೀವು ಕಣ್ಣಾರೆ ಅದನ್ನು ಕಂಡಿದ್ದೀರಾ ಕಳೆದ ಎರಡು-ಮೂರು ವರ್ಷಗಳಲ್ಲಿ ಹೇಗೆ ನಾಗರಿಕ ಸೇವಾ ಅಧಿಕಾರಿಗಳ ತರಬೇತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ ಎಂಬುದನ್ನು ಗಮನಿಸಿದ್ದೀರಾ. ತರಬೇತಿ ವಿಧಾನದಲ್ಲಿ ಸಂಪೂರ್ಣ ಬದಲಾವಣೆ ಮಾಡಲಾಗಿದೆ. ಈ ‘ಆರಂಭ’ ಕೇವಲ ಆರಂಭವಲ್ಲ ಇದು ಹೊಸ ಸಂಪ್ರದಾಯದ ಸಂಕೇತವಾಗಿದೆ. ಸರ್ಕಾರ ಕೆಲವು ದಿನಗಳ ಹಿಂದೆಯಷ್ಟೇ ಮಿಷನ್ ಕರ್ಮಯೋಗಿ ಎಂಬ ಮತ್ತೊಂದು ಅಭಿಯಾನವನ್ನು ಆರಂಭಿಸಿದೆ. ಮಿಷನ್ ಕರ್ಮಯೋಗಿ, ಸಾಮರ್ಥವೃದ್ಧಿ ನಿಟ್ಟಿನಲ್ಲಿ ಹೊಸ ಪ್ರಯೋಗದ ಒಂದು ವಿಧಾನವಾಗಿದೆ. ಈ ಮಿಷನ್ ಮೂಲಕ ಸರ್ಕಾರಿ ಅಧಿಕಾರಿಗಳು ತಮ್ಮ ಚಿಂತನೆ, ಮನೋಭಾವವನ್ನು ಆಧುನೀಕರಣಗೊಳಿಸಿಕೊಳ್ಳಬೇಕು ಮತ್ತು ತಮ್ಮ ಕೌಶಲ್ಯಗಳನ್ನು ವೃದ್ಧಿಗೊಳಿಸಿಕೊಳ್ಳಬೇಕು. ಇದು ಅವರಿಗೆ ಕರ್ಮಯೋಗಿಯಾಗಲು ಒಂದು ಅವಕಾಶವನ್ನು ಒದಗಿಸಿಕೊಡುತ್ತದೆ. 

ಮಿತ್ರರೇ,

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೀಗೆ ಹೇಳುತ್ತಾರೆ - यज्ञ अर्थात् कर्मणः अन्यत्र लोकः अयम् कर्म बंधनः’ಅಂದರೆ ಯಜ್ಞ ಅಂದರೆ ಸೇವೆ, ಸ್ವಾರ್ಥಕ್ಕಾಗಿ ಮಾಡಿಕೊಳ್ಳುವುದು ಕರ್ತವ್ಯವಲ್ಲ, ಇದು ನಮ್ಮೆಲ್ಲರನ್ನೂ ಬೆಸೆಯುವ ಕಾರ್ಯ. ಕರ್ತವ್ಯ ಎಂದರೆ ಮಹತ್ವದ ದೂರದೃಷ್ಟಿಯೊಂದಿಗೆ ಪ್ರಮುಖ ಗುರಿ ಇಟ್ಟುಕೊಂಡು ಕೆಲಸ ಮಾಡುವುದು. ನಾವೆಲ್ಲ ಕರ್ತವ್ಯದ ಕರ್ಮಯೋಗಿಗಳಾಗಿದ್ದೇವೆ; ನೀವು, ನಾನು ಮತ್ತು ಪ್ರತಿಯೊಬ್ಬರೂ ಕರ್ಮಯೋಗಿಗಳೇ. ಮಿತ್ರರೇ, ನೀವು ಸಾಗಲಿರುವ ಸುದೀರ್ಘ ಹಾದಿಯಲ್ಲಿ ನಿಯಮಗಳ ಬಹುದೊಡ್ಡ ಕೊಡುಗೆ ಇದೆ. ಇದೇ ವೇಳೆ, ನೀವು ನಿಮ್ಮ ಪಾತ್ರದ ಬಗ್ಗೆಯೂ ಹೆಚ್ಚಿನ ಗಮನಹರಿಸಬೇಕಿದೆ. ನಿಯಮ ಮತ್ತು ಪಾತ್ರದ ನಡುವೆ ನೀವು ನಿರಂತರ ಸಂಘರ್ಷ ನಡೆಸುತ್ತಿರುತ್ತೀರಿ. ಈವೆರಡರ ನಡುವೆ ಸತತ ಒತ್ತಡವನ್ನು ಅನುಭವಿಸುತ್ತಿರುತ್ತೀರಿ. ನಿಯಮಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಅಂತೆಯೇ ಪಾತ್ರಕ್ಕೂ ತನ್ನದೇ ಆದ ಜವಾಬ್ದಾರಿ ಅಥವಾ ಹೊಣೆಗಾರಿಕೆ ಇದೆ. ಇವೆರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಇದು ನಿಮಗೆ ಬಿಗಿಯಾದ ಹಗ್ಗದ ಮೇಲೆ ನಡೆಯುವ ಕ್ರೀಡೆ ಇದ್ದಂತೆ. ಕೆಲವು ವರ್ಷಗಳಿಂದೀಚೆಗೆ ಸರ್ಕಾರ ಕೂಡ ಪಾತ್ರ ಆಧಾರಿತ ಮನೋಭಾವಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಅದರ ಫಲಿತಾಂಶಗಳನ್ನು ನೀವು ಸ್ಪಷ್ಟವಾಗಿ ಕಾಣಬಹುದು. ಮೊದಲು ನಾಗರಿಕ ಸೇವೆಯಲ್ಲಿ ಸಾಮರ್ಥ್ಯ ಮತ್ತು ದಕ್ಷತೆ ಮುಖ್ಯ. ಅದಕ್ಕಾಗಿ ಹೊಸ ವಿನ್ಯಾಸವನ್ನು ನಿರ್ಮಾಣ ಮಾಡಲಾಗಿದೆ. ಎರಡನೆಯದಾಗಿ ಕಲಿಕೆಯ ವಿಧಾನಗಳು, ಪ್ರಜಾತಾಂತ್ರಿಕವಾಗಿರಬೇಕು ಮತ್ತು ಮೂರನೆಯದಾಗಿ ಪ್ರತಿಯೊಬ್ಬ ಅಧಿಕಾರಿಗಳ ಜವಾಬ್ದಾರಿ ಮತ್ತು ನಿರೀಕ್ಷೆಗಳನ್ನು ಆತ/ಆಕೆಯ ಸಾಮರ್ಥ್ಯಕ್ಕೆ ತಕ್ಕಂತೆ ಅಂದಾಜು ಮಾಡಲಾಗುವುದು. ಈ ಮನೋಭಾವದೊಂದಿಗೆ ಕಾರ್ಯನಿರ್ವಹಿಸಲು ನೀವು ಪ್ರತಿಯೊಂದು ಪಾತ್ರದ ಬಗ್ಗೆಯೂ ನಿಮಗೆ ಅರಿವಿರಬೇಕು. ನೀವು ನಿಮ್ಮ ಒಟ್ಟಾರೆ ಜೀವನದಲ್ಲಿ ಸಕಾರಾತ್ಮಕವಾಗಿರಬೇಕು. ಈ ಸಕಾರಾತ್ಮಕತೆ ನಿಮ್ಮ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ನೀವು ನಿಮ್ಮ ಜೀವನದಲ್ಲಿ ಕರ್ಮಯೋಗಿಯಾಗಿ ತೃಪ್ತಿ ಹೊಂದಬಹುದು.

ಮಿತ್ರರೇ,

ಜೀವನ ಅತ್ಯಂತ ಕ್ರಿಯಾಶೀಲ. ಆಡಳಿತ ಕೂಡ ಅತ್ಯಂತ ಕ್ರಿಯಾತ್ಮಕತೆಯುಳ್ಳದ್ದು, ಆದ್ದರಿಂದ ನಾವು ಪ್ರತಿಸ್ಪಂದನಾ ಸರ್ಕಾರದ ಬಗ್ಗೆ ಮಾತನಾಡುತ್ತೇವೆ. ಮೊದಲಿಗೆ ನಾಗರಿಕ ಸೇವಾ ಅಧಿಕಾರಿ ದೇಶದ ಸಾಮಾನ್ಯ ಜನರೊಂದಿಗೆ ಸದಾ ಸಂಪರ್ಕದಲ್ಲಿರಬೇಕಾದುದು ಅತ್ಯಗತ್ಯ. ನೀವು ಜನರೊಂದಿಗೆ ಬೆರೆತರೆ ಪ್ರಜಾಪ್ರಭುತ್ವದಲ್ಲಿ ಕೆಲಸ ಮಾಡುವುದು ನಿಮಗೆ ಸುಲಭವಾಗುತ್ತದೆ. ಮೂಲ ತರಬೇತಿ ಮತ್ತು ವೃತ್ತಿಪರ ತರಬೇತಿ ಪೂರ್ಣಗೊಳಿಸಿದ ನಂತರ ನೀವು ಕ್ಷೇತ್ರಮಟ್ಟದ ತರಬೇತಿಗೆ ತೆರಳುತ್ತೀರಿ. ನೀವು ಕ್ಷೇತ್ರ ಮಟ್ಟದಲ್ಲಿ ಜನರೊಂದಿಗೆ ಸಂಪರ್ಕ ಹೊಂದಬೇಕು ಎಂದು ನಾನು ಸಲಹೆ ನೀಡುತ್ತೇನೆ. ನೀವು ಜನರಿಂದ ದೂರ ಉಳಿಯಬಾರದು. ನಾನು ‘ಅಧಿಕಾರಷಾಹಿ’ ಎಂಬುದು ನಿಮ್ಮ ನೆತ್ತಿಗೇರಬಾರದು. ನೀವು ಯಾವ ಭೂಮಿಯಿಂದ ಬಂದಿದ್ದೀರೋ, ಯಾವ ಕುಟುಂಬ ಮತ್ತು ಯಾವ ಸಮಾಜದಿಂದ ಬಂದಿದ್ದೀರೋ ಅದನ್ನು ಮರೆಯಬಾರದು. ಸಾಧ್ಯವಾದಷ್ಟು ಸಮಾಜದೊಂದಿಗೆ ಬೆರೆಯಿರಿ. ಸದಾ ಸಮಾಜದ ಜೊತೆ ಇರಿ. ಸಾರ್ವಜನಿಕ ಜೀವನವನ್ನು ಮತ್ತು ಸಮಾಜದಲ್ಲಿ ವಿಲೀನಗೊಳ್ಳಿ. ಜನರು ನಿಮ್ಮ ಶಕ್ತಿಯ ಬೆಂಬಲಾಗಿ ನಿಲ್ಲುತ್ತಾರೆ. ನಿಮ್ಮ ಎರಡು ಕೈಗಳೇ ಸಾವಿರಾರು ಕೈಗಳಾಗಿ ಪರಿವರ್ತನೆಗೊಳ್ಳುತ್ತದೆ. ಈ ಸಾವಿರಾರು ಕೈಗಳು ಜನರ ಶಕ್ತಿಯಾಗುತ್ತವೆ. ನೀವು ಅವರನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನೀವು ಅವರಿಂದ ಕಲಿಯಬೇಕು. ನಾನು ಸದಾ ಹೇಳುತ್ತಿರುತ್ತೇನೆ. ಸರ್ಕಾರ ಅಧಿಕಾರ ಶ್ರೇಣಿಯಲ್ಲಿ ಮೇಲಿನಿಂದ ನಡೆಯುವುದಿಲ್ಲ, ನೀತಿಗಳನ್ನು ರೂಪಿಸುವಾಗ ಜನರನ್ನು ಪ್ರಮುಖವಾಗಿ ಸೇರಿಸಿಕೊಳ್ಳಬೇಕು ಎಂದು ಹೇಳುತ್ತಿರುತ್ತೇನೆ. ಜನರು ಸರ್ಕಾರದ ನೀತಿ ಅಥವಾ ಕಾರ್ಯಕ್ರಮಗಳನ್ನು ಕೇವಲ ಸ್ವೀಕರಿಸುವವರಾಗಬಾರದು; ಜನತಾದರ್ಶನ ಅಥವಾ ಜನರೇ ನಿಜವಾದ ಚಾಲನಾಶಕ್ತಿ. ಹಾಗಾಗಿ ನಾವು ಸರ್ಕಾರದಿಂದ ಆಡಳಿತದತ್ತ ಸಾಗಬೇಕು. 

ಮಿತ್ರರೇ,

ಈ ಅಕಾಡೆಮಿಯಿಂದ ಪದವಿ ಪಡೆದ ನಂತರ ನೀವು ಮುಂದೆ ಸಾಗುವಾಗ ನಿಮ್ಮ ಮುಂದೆ ಎರಡು ದಾರಿಗಳು ಕಾಣಿಸುತ್ತವೆ. ಒಂದು ಹಾದಿ ಸರಳ, ಸುಲಭ, ಸೌಕರ್ಯಗಳು, ಹೆಸರು ಮತ್ತು ಘನತೆ ತಂದುಕೊಡುವ ಮಾರ್ಗ. ಮತ್ತೊಂದು ಸವಾಲುಗಳ, ಕಷ್ಟಗಳ, ಹೋರಾಟಗಳ ಮತ್ತು ಸಮಸ್ಯೆಗಳ ಮಾರ್ಗವಾಗಿದೆ. ನಾನು ನನ್ನ ಅನುಭವದಿಂದ ಇಂದು ನಿಮಗೆ ತಿಳಿಸುವ ಒಂದು ಸಂಗತಿ ಎಂದರೆ ನೀವು ಸುಲಭದ ಮಾರ್ಗ ಆಯ್ದುಕೊಂಡಾಗ ಮಾತ್ರ ನಿಮಗೆ ನೈಜ ಸವಾಲುಗಳು ಎದುರಾಗುತ್ತವೆ. ನೀವು ಯಾವುದೇ ತಿರುವುಗಳಲ್ಲಿದ ನೇರ ರಸ್ತೆಯನ್ನು ನೀವು ಗಮನಿಸಬಹುದು, ಅದು ಅತ್ಯಂತ ಅಪಾಯಕಾರಿಯಾಗಿರುತ್ತದೆ. ಯಾವ ರಸ್ತೆಯಲ್ಲಿ ಹೆಚ್ಚಿನ ತಿರುವುಗಳಿರುತ್ತವೆಯೋ ಆ ರಸ್ತೆಗಳಲ್ಲಿ ಚಾಲಕ ಅತ್ಯಂತ ಹೆಚ್ಚು ಜಾಗರೂಕನಾಗಿರಬೇಕು. ಆದ್ದರಿಂದ ಕಡಿಮೆ ಅಪಘಾತಗಳು ಸಂಭವಿಸುತ್ತವೆ. ಹಾಗಾಗಿ ನೇರ ರಸ್ತೆಯಲ್ಲಿ ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಕಷ್ಟಗಳು ಎದುರಾಗುತ್ತವೆ. ರಾಷ್ಟ್ರ ನಿರ್ಮಾಣ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದ ಮಹತ್ವಾಕಾಂಕ್ಷೆಯ ಗುರಿ ಇರುವ ರಸ್ತೆಯಲ್ಲಿ ನಡೆಯುವುದು ಅತ್ಯಂತ ಸುಲಭದ್ದೇನು ಆಗಿರುತ್ತದೆ ಎಂಬ ಅಗತ್ಯವಿಲ್ಲ, ಅದು ಸುಲಭದ್ದಾಗಿರುತ್ತದೆ ಎಂಬುದನ್ನು ಊಹಿಸುವುದು ಕೂಡ ಒಳ್ಳೆಯದಲ್ಲ. ನೀವು ಸತತವಾಗಿ ಜನರ ಜೀವನವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರೆ ಕೇವಲ ನಿಮಗೆ ಮಾತ್ರವಲ್ಲ, ಇಡೀ ದೇಶಕ್ಕೆ ಅದರ ಲಾಭ ದೊರಕುತ್ತದೆ ಮತ್ತು ನೀವು ಸ್ವಾತಂತ್ರ್ಯಗಳಿಸಿದ ನಂತರ 75 ವರ್ಷಗಳಿಂದ 100 ವರ್ಷಗಳ ಅವಧಿಗೆ ಭಾರತ ಸಾಗಲಿರುವ ಹಾದಿಗೆ ನೀವು ಸಾಕ್ಷಿಯಾಗಲಿದ್ದೀರಿ. ಇಂದು ದೇಶದ ಎಲ್ಲ ಅಧಿಕಾರಿಗಳು ಕೆಲಸ ಮಾಡುವ ಮನಸುಳ್ಳವರಾಗಿದ್ದಾರೆ. ಅವರೆಲ್ಲಾ ‘ಕನಿಷ್ಠ ಸರ್ಕಾರ-ಗರಿಷ್ಠ ಆಡಳಿತ’ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನೀವು ಪ್ರಜೆಗಳ ಜೀವನದಲ್ಲಿ ನಿಮ್ಮ ಹಸ್ತಕ್ಷೇಪವನ್ನು ತಗ್ಗಿಸಬೇಕು ಮತ್ತು ಜನಸಾಮಾನ್ಯರನ್ನು ಸಬಲೀಕರಣಗೊಳಿಸಬೇಕು.  

ನಮ್ಮ ಉಪನಿಷತ್ ನಲ್ಲಿ ಹೀಗೆ ಹೇಳಲಾಗುತ್ತದೆ. - ‘न तत् द्वतीयम् अस्ति’ ಅಂದರೆ ನನಗಿಂತ ಯಾರೂ ಭಿನ್ನರಲ್ಲ. ನೀವು ಯಾವ ಕೆಲಸ ಮಾಡುತ್ತೀರಿ, ಯಾರಿಗಾಗಿ ಮಾಡುತ್ತೀರಿ ಎಂಬುದನ್ನು ನೀವು ಅರ್ಥಮಾಡಿಕೊಂಡು ಮಾಡಬೇಕು. ನಾನು ನನ್ನ ಸ್ವಂತ ಅನುಭವದ ಮೇಲೆ ನಿಮಗೆ ಹೇಳುವುದೆಂದರೆ, ನೀವು ನಿಮ್ಮ ಇಲಾಖೆಯನ್ನು ಪರಿಗಣಿಸಿದರೆ, ಜನರನ್ನು ನಿಮ್ಮ ಕುಟುಂಬ ಮತ್ತು ಕೆಲಸ ಎಂದು ಭಾವಿಸಿ, ಆಗಿದ್ದಾಗ ನೀವು ಬೇಸರ ಅಥವಾ ಸುಸ್ತಾಗುವುದಿಲ್ಲ, ಸದಾ ನಿಮಗೆ ಹೊಸ ಶಕ್ತಿ ದೊರಕುತ್ತದೆ. ಮಿತ್ರರೇ ಕ್ಷೇತ್ರ ಕಾರ್ಯಕ್ಕೆ ನೀವು ತೆರಳಿದಾಗ ವಿಭಿನ್ನವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಗುರುತಿಸಲಾಗುತ್ತದೆ. ಮೊದಲಿರುವ ಸ್ಥಿತಿಯಲ್ಲಿ ಏನೇನು ಬದಲಾವಣೆಗಳನ್ನು ಮಾಡುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ. ಕ್ಷೇತ್ರದಲ್ಲಿ ನೀವು ಕಡತಗಳಿಂದ ದೂರುವಿರುತ್ತೀರಿ, ದೈನಂದಿನ ಒತ್ತಡಗಳಿಂದ ದೂರವಿರುತ್ತೀರಿ ಮತ್ತು ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೀರಿ. ನೀವು ಜನರಿಗಾಗಿ ಭಿನ್ನವಾಗಿ ಕೆಲಸ ಮಾಡಿದರೆ ಅದರ ಫಲಿತಾಂಶಗಳೂ ಕೂಡ ಭಿನ್ನವಾಗಿರುತ್ತವೆ ಎಂಬುದರ ಪರಿಣಾಮಗಳನ್ನು ಕಾಣಬಹುದಾಗಿದೆ. ಉದಾಹರಣೆಗೆ ನೀವು ಕೆಲಸ ಮಾಡುತ್ತಿರುವ ಜಿಲ್ಲೆಗಳಲ್ಲಿ ಮತ್ತು ವಲಯಗಳಲ್ಲಿ ಅಂತಹ ಹಲವು ಸಂಗತಿಗಳಿರುತ್ತವೆ. ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಂತಹ ಹಲವು ಸಾಮರ್ಥ್ಯವಿರುವ ಹಲವು ಉತ್ಪನ್ನಗಳನ್ನು ನೀವು ಗಮನಿಸಬಹುದು. ಅಂತಹ ವಸ್ತುಗಳು, ಅಂತಹ ಕರಕುಶಲ ಕಲೆ, ಅಂತಹ ಕಲಾವಿದರು, ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸುವಂತಾಗಲು ಸ್ಥಳೀಯ ಬೆಂಬಲ ಬೇಕಾಗಿರುತ್ತದೆ. ನೀವು ಅವರಿಗೆ ಬೆಂಬಲ ನೀಡಬೇಕಾಗುತ್ತದೆ. ಆ ಕನಸು ನಿಮ್ಮಲ್ಲಿ ಸೃಷ್ಟಿಯಾಗಬೇಕು. ಅಂತೆಯೇ ಈ ಕಾರ್ಯದಲ್ಲಿ ನೀವು ಓರ್ವ ಸ್ಥಳೀಯ ಅನುಶೋಧಕನನ್ನು ತಲುಪಿ, ಆತನೊಂದಿಗೆ ಪಾಲುದಾರಿಕೆ ಮಾಡಿಕೊಂಡು ಕೈಜೋಡಿಸಿ. ಬಹುಶಃ ನಿಮ್ಮ ಸಹಕಾರದಿಂದಾಗಿ ಆ ಆವಿಷ್ಕಾರದಿಂದ ಸಮಾಜಕ್ಕೆ ಭಾರೀ ದೊಡ್ಡ ಕೊಡುಗೆ ಲಭಿಸಬಹುದು. ನೀವು ಈ ಎಲ್ಲ ಕೆಲಸಗಳನ್ನು ಮಾಡಬಹುದು ಎಂದು ಯೋಚಿಸುತ್ತಿರಬಹುದು. ಹಾಗೆಯೇ ನಿಮಗೆ ವರ್ಗಾವಣೆಯಾದರೆ ಮುಂದೆ ಏನಾಗಬಹುದು ಎಂಬ ಆಲೋಚನೆ ಸಹ ಬಂದಿರಲೂ ಬಹುದು. ಹಾಗಾಗಿಯೇ ನಾನು ಆರಂಭದಲ್ಲಿ ತಂಡದ ಸ್ಫೂರ್ತಿಯ ಬಗ್ಗೆ ಮಾತನಾಡಿದ್ದು, ಅದೇ ಕಾರಣಕ್ಕೆ ನಾನು ಆ ಅಂಶವನ್ನು ಆರಂಭದಲ್ಲಿಯೇ ಉಲ್ಲೇಖಿಸಿದ್ದು. ಇಂದು ನೀವು ಒಂದು ಸ್ಥಳದಲ್ಲಿ ಇದ್ದರೆ ನಾಳೆ ಮತ್ತೊಂದು ಸ್ಥಳಕ್ಕೆ ಹೋಗಬಹುದು. ಆದರೆ ಆ ಪ್ರದೇಶದಲ್ಲಿ ನೀವು ಕೈಗೊಂಡಿರುವ ಪ್ರಯತ್ನಗಳನ್ನು ಎಂದಿಗೂ ಕೈಬಿಡಬೇಡಿ, ನಿಮ್ಮ ಗುರಿಗಳನ್ನು ಎಂದಿಗೂ ಮರೆಯಬೇಡಿ, ನೀವು ನಿಮ್ಮ ಉತ್ತರಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ಅವರಿಗೆ ವಿಶ್ವಾಸ ತುಂಬಿ, ಉತ್ತೇಜನ ನೀಡಿ. ನೀವು ಎಲ್ಲಿರುತ್ತೀರೋ, ಅಲ್ಲಿಂದಲೇ ಅವರಿಗೆ ಸಹಾಯ ಮಾಡಿ. ನಿಮ್ಮ ಕನಸುಗಳನ್ನು ಮುಂದಿನ ಪೀಳಿಗೆ ಸಾಕಾರಗೊಳಿಸಬಹುದು. ನೀವು ನಿಮ್ಮ ಗುರಿಗಳಲ್ಲಿ ಹೊಸ ಅಧಿಕಾರಿಗಳನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಿ. 

ಮಿತ್ರರೇ,

ನೀವು ಎಲ್ಲೇ ಹೋದರು ಒಂದು ಸಂಗತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ನಿಮಗೆ ಆ ಕಚೇರಿಯಲ್ಲಿ ನಿಗದಿಪಡಿಸಿದ ಸೇವಾ ಅವಧಿಯಿಂದ ಮಾತ್ರ ನಿಮ್ಮನ್ನು ನೀವು ಗುರುತಿಸಿಕೊಳ್ಳಬೇಡಿ. ನೀವು ನಿಮ್ಮ ಕೆಲಸದ ಜೊತೆ ಗುರುತಿಸಿಕೊಳ್ಳಿರಿ. ಹೌದು ನಿಮ್ಮ ಜನಪ್ರಿಯತೆ ಹೆಚ್ಚುತ್ತಿದ್ದಂತೆ, ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಕೂಡ ನಿಮ್ಮತ್ತ ಆಕರ್ಷಿತವಾಗುತ್ತವೆ. ಈ ವಿಷಯಗಳನ್ನು ನೀವು ಮಾಧ್ಯಮದ ಜೊತೆಯೂ ಕೂಡ ಚರ್ಚಿಸಬೇಕಾಗುತ್ತದೆ. ಏಕೆಂದರೆ ನೀವು ಮಾಡುವ ಕೆಲಸ ಮಾಧ್ಯಮದಲ್ಲಿ ಒಂದು ವಿಷಯವಾಗಿ ಚರ್ಚೆಯಾಗಬಹುದು.  ನೀವು ಅದನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕಾಗುತ್ತದೆ. ನಾಗರಿಕ ಅಧಿಕಾರಿಗಳನ್ನು ಅನಾಮಧೇಯರಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಎಂಬುದಾಗಿ ಗುರುತಿಸುತ್ತಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಸ್ವಾತಂತ್ರ್ಯಾನಂತರ ಕೆಲವು ಅವಧಿಯನ್ನು ನೋಡಿದರೆ ಕೆಲವು ಪ್ರಭಾವಿ ವ್ಯಕ್ತಿಗಳು ತಮ್ಮ ಸೇವಾ ಅವಧಿಯುದ್ದಕ್ಕೂ ಅನಾಮಧೇಯರಾಗಿಯೇ ಉಳಿದಿರುವ ಬಗ್ಗೆ ನೀವು ಕೇಳಿರಬಹುದು. ಅವರ ಹೆಸರುಗಳನ್ನು ಯಾರೊಬ್ಬರೂ ಕೇಳಿರುವುದಿಲ್ಲ. ಆದರೆ ನಿವೃತ್ತಿಯ ನಂತರ ಕೆಲವೊಬ್ಬ ವ್ಯಕ್ತಿಗಳು ಕೆಲವೊಂದು ವಿಷಯಗಳನ್ನು ಬರೆದಾಗ ಆಗ ಮಾತ್ರ ಆ ಅಧಿಕಾರಿ ದೇಶಕ್ಕಾಗಿ ಇಷ್ಟೆಲ್ಲಾ ಕೊಡುಗೆ ನೀಡಿದ್ದಾರೆಯೇ ಎಂಬುದನ್ನು ತಿಳಿಯಬಹುದಾಗಿದೆ. ಅದೇ ನಿಮಗೆ ಹೆಚ್ಚು ಸೂಕ್ತವಾದುದು. ಕಳೆದ ನಾಲ್ಕೈದು ದಶಕಗಳಿಂದ ಸೇವೆ ಸಲ್ಲಿಸಿರುವ ಹಿರಿಯರು ಅದನ್ನೇ ಶ್ರೇಷ್ಠ ಶಿಸ್ತಿನೊಂದಿಗೆ ಪಾಲಿಸಿದ್ದಾರೆ. ನೀವು ಅದನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು.  

ಮಿತ್ರರೇ,

ನಾನು ನಮ್ಮ ಯುವ ರಾಜಕೀಯ ಸಹೋದ್ಯೋಗಿಗಳಾದ ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಿದಾಗ, ನಾನು ಅವರನ್ನು ಎರಡು -----------------ಗಳಿಂದ ಅಂದರೆ ‘ದಿಖಾಸ್’ ಮತ್ತು ‘ಛಾಪಾಸ್’ ನಿಂದ ದೂರವಿರಿ ಎಂದು ಖಂಡಿತ ಹೇಳುತ್ತೇನೆ. ನಾನು ನಿಮಗೆ ಮತ್ತೊಂದು ಸಂಗತಿಯನ್ನು ಹೇಳ ಬಯಸುತ್ತೇನೆ. ದಿಖಾಸ್ ಎಂದರೆ ಟಿವಿಗಳಲ್ಲಿ ಕಾಣಿಸಿಕೊಳ್ಳುವುದು ಎಂದರ್ಥ ಮತ್ತು ಛಾಪಾಸ್ ಎಂದರೆ ದಿನಪತ್ರಿಕೆಗಳಲ್ಲಿ ಹೆಸರು ಮಾಡುವುದು ಎಂದು. ಈ ಎರಡು ರೋಗಗಳನ್ನು ನೀವು ಅಂಟಿಸಿಕೊಂಡರೆ ನೀವು ಯಾವ ಉದ್ದೇಶದಿಂದ ನಾಗರಿಕ ಸೇವೆಗಳನ್ನು ಸೇರಿದ್ದೀರೋ ಆ ಗುರಿಯನ್ನು ಸಾಧಿಸಲಾಗುವುದಿಲ್ಲ.

ಮಿತ್ರರೇ,

ನಿಮ್ಮ ಸೇವಾ ಮನೋಭಾವ ಮತ್ತು ಬದ್ಧತೆಯಿಂದಾಗಿ ದೇಶದ ಅಭಿವೃದ್ಧಿ ಪಯಣದಲ್ಲಿ ಮತ್ತು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ನೀವು ಬಹುದೊಡ್ಡ ಕೊಡುಗೆಯನ್ನು ನೀಡಲಿದ್ದೀರಿ ಎಂಬ ವಿಶ್ವಾಸ ಖಂಡಿತಾ ನನಗಿದೆ. ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ನಾನು ನಿಮಗೊಂದು ಕೆಲಸವನ್ನು ನೀಡಲು ಬಯಸುತ್ತೇನೆ. ನೀವು ನಿಮ್ಮ ಕೈಗಳನ್ನು ಮೇಲೆತ್ತಿದರೆ, ನಾನು ನಿಮಗೆ ಕೆಲಸವನ್ನು ನೀಡುತ್ತೇನೆ. ನೀವೆಲ್ಲರೂ ಆತ ಅಥವಾ ಆಕೆ ಕೈ ಎತ್ತುತ್ತೀರಾ? ನೀವು ಕೆಲಸ ಮಾಡುತ್ತೀರಾ ? ಹಾಗಿದ್ದರೆ ಇಲ್ಲಿ ಕೇಳಿ, ನೀವು ‘ವೋಕಲ್ ಫಾರ್ ಲೋಕಲ್’ ಸ್ಥಳೀಯ ಉತ್ಪನ್ನಗಳಿಗೆ ಧನಿಯಾಗಿ ಎಂಬ ಕಲ್ಪನೆಯ ಬಗ್ಗೆ ಕೇಳಿರಬಹುದು ? ಕೇಳಿದ್ದೀರಾ? ಹಾಗಿದ್ದರೆ, ಮುಂದಿನ ಎರಡರಿಂದ ನಾಲ್ಕು ದಿನಗಳಲ್ಲಿ ದಿನನಿತ್ಯ ಜೀವನದಲ್ಲಿ ನೀವು ಬಳಕೆ ಮಾಡುವ ವಸ್ತುಗಳಲ್ಲಿ ಭಾರತದ ಕಾರ್ಮಿಕರು ಬೆವರು ಮತ್ತು ರಕ್ತ ಹರಿಸಿ ಯಾವ್ಯಾವ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದಾರೆ ? ಭಾರತೀಯರ ಪ್ರತಿಭೆ ಎಲ್ಲೆಲ್ಲಿ ಅಡಗಿದೆ ಮತ್ತು ಷೂಗಳಿಂದ ಹಿಡಿದು ನೀವು ಬಳಸುವ ಕೂದಲಿನ ವರೆಗೆ ಯಾವ್ಯಾವ ಉತ್ಪನ್ನಗಳು ಭಾರತದ ಹೊರಗೆ ಉತ್ಪಾದನೆಯಾಗುತ್ತವೆ ಎಂಬುದರ ಪಟ್ಟಿಯನ್ನು ಮಾಡಿ. ಆನಂತರ ಆ ಸಂಗತಿಗಳನ್ನೆಲ್ಲಾ ಒಮ್ಮೆ ಪರಿಶೀಲಿಸಿ, ನೀವು ಭಾರತದಲ್ಲಿ ಲಭ್ಯವಿರದೇ ಇದ್ದಂತಹ ವಸ್ತುಗಳು ಯಾವ್ಯಾವುದು ಇದೆ ಎಂಬುದನ್ನು ಅಥವಾ ಪ್ರಸ್ತುತ ಭಾರತದಲ್ಲಿ ಸ್ಥಳೀಯವಾಗಿ ಖರೀದಿಗೆ ಸಾಧ್ಯವಿಲ್ಲದಿರುವಂತಹ ವಸ್ತುಗಳನ್ನು ಗಮನಿಸಿ ? ಬಹುಶಃ 50 ವಸ್ತುಗಳಲ್ಲಿ 30 ವಸ್ತುಗಳು ಸ್ಥಳೀಯವಾಗಿಯೇ ಲಭ್ಯವಾಗುತ್ತವೆ. ನಿಮಗೆ ಆ ಉತ್ಪನ್ನಗಳ ಬಗ್ಗೆ ತಿಳಿದಿಲ್ಲದೇ ಇರಬಹುದು. ಆದರೂ ನೀವು ಅಂತಹ ಹೊರದೇಶದ ವಸ್ತುಗಳ ಬಳಕೆಯನ್ನು ಸಾಧ್ಯವಾದಷ್ಟು ತಗ್ಗಿಸಲು ಪ್ರಯತ್ನಿಸಿ. 

ಸ್ವಾವಲಂಬನೆ ಸ್ವತಃ ನಮ್ಮಿಂದಲೇ ಆರಂಭವಾಗಬೇಕು. ನೀವು ‘ವೋಕಲ್ ಫಾರ್ ಲೋಕಲ್’ ಆರಂಭಿಸುತ್ತೀರಾ ? ಎರಡನೆಯದಾಗಿ ನಿಮ್ಮ ಸಂಸ್ಥೆ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಹೆಸರಿನೊಂದಿಗೆ ಬೆಸೆದುಕೊಂಡಿದೆ. ನಿಮ್ಮ ಕ್ಯಾಂಪಸ್ ನಲ್ಲಿ ಲಭ್ಯವಿರುವ ವಸ್ತುಗಳು, ನಿಮ್ಮ ಸಭಾಂಗಣ, ನಿಮ್ಮ ತರಬೇತಿ ಕೋಣೆಗಳಲ್ಲಿ ಬಳಕೆಯಾಗುವ ಮತ್ತು ಭಾರತದ ಹೊರಗೆ ಉತ್ಪಾದಿಸಿರುವ ವಸ್ತುಗಳನ್ನು ಪಟ್ಟಿ ಮಾಡಿಕೊಳ್ಳಿ. ಇಡೀ ದೇಶದ ಮುಂದಿನ ಪೀಳಿಗೆಯನ್ನು ಮುನ್ನಡೆಸುವ ಬೀಜಗಳನ್ನು ಬಿತ್ತುವಂತಹ ಸಮಯದಲ್ಲಿ ನಾವಿದ್ದು, ಇದೀಗ ‘ವೋಕಲ್ ಫಾರ್ ಲೋಕಲ್’ ನಿಮ್ಮ ಜೀವನದ ಭಾಗವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ನೀವು ಇದನ್ನು ಆನಂದಿಸುತ್ತೀರಿ. ನಾನು ನಿಮ್ಮ ಸಹೋದ್ಯೋಗಿಗಳಿಗೂ ಈ ಮಾರ್ಗಗಳನ್ನು ತೆರೆಯಿರಿ ಎಂದು ಹೇಳಲು ಬಯಸುವುದಿಲ್ಲ. ಇದು ನಿಮ್ಮದೇ ಮಾರ್ಗಗಳು. ನಿಮ್ಮ ಜೀವನದಲ್ಲಿ ವಿದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಸಮನಾದ ವಸ್ತುಗಳನ್ನು ಭಾರತದಲ್ಲೇ ಉತ್ಪಾದನೆ ಮಾಡುವ ಬಗ್ಗೆ ಚಿಂತನೆಹರಿಸಿ, ಕೆಲವು ವಸ್ತುಗಳು ವಿದೇಶದಲ್ಲಿ ತಯಾರಾಗಿವೆ ಎಂಬುದೂ ನಿಮಗೂ ಕೂಡ ತಿಳಿದಿರುವುದಿಲ್ಲ. ಹಾಗಾಗಿ ಭಾರತವನ್ನು ನಾವೆಲ್ಲರೂ ಸ್ವಾವಲಂಬಿಯನ್ನಾಗಿ ಮಾಡಬೇಕಿದೆ. ನಾವೆಲ್ಲರೂ ಸೇರಿ ದೇಶವನ್ನು ಸ್ವಾವಲಂಬಿ ಮಾಡುವ ನಿಟ್ಟಿನಲ್ಲಿ ಕೆಲಸಗಳನ್ನು ಆರಂಭಿಸಬೇಕಿದೆ. 

ನನ್ನ ನೆಚ್ಚಿನ ಮಿತ್ರರೇ, ನನ್ನ ಯುವ ಮಿತ್ರರೇ !

ಸ್ವಾತಂತ್ರ್ಯಗಳಿಸಿದ ನೂರು ವರ್ಷಗಳ ಹಾಗೂ ಮುಂದಿನ ಪೀಳಿಗೆಯ ಕನಸುಗಳು ಮತ್ತು ಸಂಕಲ್ಪಗಳನ್ನು ಹಾಗೂ ಭವಿಷ್ಯದ ಪೀಳಿಗೆಯ ಕನಸುಗಳನ್ನು ರಾಷ್ಟ್ರ ನಿಮಗೆ ಹಸ್ತಾಂತರಿಸುತ್ತಿದ್ದೇವೆ. ದೇಶ ಮುಂದಿನ 25-35 ವರ್ಷಗಳ ಕಾಲ ನಿಮಗೆ ಒಪ್ಪಿಸುತ್ತಿದ್ದೇವೆ. ನೀವು ಅತ್ಯದ್ಭುತ ಉಡುಗೊರೆಯನ್ನು ಸ್ವೀಕರಿಸುತ್ತಿದ್ದೀರಿ. ನೀವು ಜೀವನದ ಅತ್ಯುತ್ತಮ ಅದೃಷ್ಟ ಎಂದು ನಿಮ್ಮ ಕೈಯಾರೆ ಸ್ವೀಕರಿಸಿ. ಕರ್ಮಯೋಗಿಯ ಮನೋಭಾವವನ್ನು ರೂಢಿಸಿಕೊಳ್ಳಿ. ನೀವು ಸದಾ ಕರ್ಮಯೋಗಿಯ ಹಾದಿಯಲ್ಲಿ ಮುನ್ನಡೆಯುತ್ತೀರಿ ಮತ್ತು ಪ್ರಗತಿ ಸಾಧಿಸುತ್ತೀರಿ ಎಂಬ ಭರವಸೆ ನನಗಿದೆ. ಮತ್ತೊಮ್ಮೆ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು ಮತ್ತು ನಾನು ನಿಮಗೆ ಭರವಸೆ ನೀಡುವುದೆಂದರೆ ಪ್ರತಿಯೊಂದು ಸಂದರ್ಭದಲ್ಲೂ ನಾನು ನಿಮ್ಮೊಂದಿಗಿರುತ್ತೇನೆ ಎಂದು. ಪ್ರತಿಯೊಂದು ಕ್ಷಣವೂ ನಾನು ನಿಮ್ಮೊಂದಿಗೆ ಇರುತ್ತೇನೆ. ನಾನು ಎಲ್ಲಿಯವರೆಗೆ ಇರುತ್ತೇನೋ, ಅಲ್ಲಿಯವರೆಗೆ ಎಲ್ಲೇ ಇದ್ದರೂ ನಾನು ನಿಮ್ಮ ಮಿತ್ರನಾಗಿರುತ್ತೇನೆ ಮತ್ತು ಪಾಲುದಾರನಾಗಿರುತ್ತೇನೆ. ಈ ಕ್ಷಣದಿಂದಲೇ ನಾವೆಲ್ಲಾ ಸ್ವಾತಂತ್ರ್ಯದ 100 ವರ್ಷಗಳ ಕನಸಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸೋಣ. ಆ ನಿಟ್ಟಿನಲ್ಲಿ ಮುಂದಡಿ ಇಡುವ ಸಂಕಲ್ಪ ಮಾಡೋಣ. 

ತುಂಬಾ ಧನ್ಯವಾದಗಳು

 

****



(Release ID: 1670038) Visitor Counter : 308