ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸುವರ್ಣ ಮಹೋತ್ಸವ ಸ್ಮರಣಾರ್ಥ ಅಂಚೆ ಇಲಾಖೆ ವಿಶೇಷ ಲಕೋಟೆ ಬಿಡುಗಡೆ


ಪ್ರಧಾನ ಮಂತ್ರಿಗಳ “ವೈಜ್ಞಾನಿಕ ಸಾಮಾಜಿಕ ಹೊಣೆಗಾರಿಕೆ’’ ಕರೆಯ ಪ್ರಮುಖಾಂಶಗಳನ್ನು ಎತ್ತಿಹಿಡಿದ ಸಚಿವ ಹರ್ಷವರ್ಧನ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ವಿಜ್ಞಾನಿಗಳು ವಿಜ್ಞಾನದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ: ಡಾ. ಹರ್ಷವರ್ಧನ್


Posted On: 02 NOV 2020 5:07PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಪೃಥ್ವಿ ವಿಜ್ಞಾನಗಳ ಖಾತೆ ಸಚಿವ ಡಾ. ಹರ್ಷವರ್ಧನ್ ಮತ್ತು ಅಂಚೆ, ಶಿಕ್ಷಣ, ವಿದ್ಯುನ್ಮಾನ ಮತ್ತು ಐಟಿ ಖಾತೆ ಸಹಾಯಕ ಸಚಿವ ಶ್ರೀ ಸಂಜಯ್ ಧೋತ್ರೆ ಅವರು ಜಂಟಿಯಾಗಿ ಅಂಚೆ ಇಲಾಖೆಯ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ದೆಹಲಿಯಲ್ಲಿ ನಿನ್ನೆ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಉಭಯ ಸಚಿವರು ವಿಶೇಷ ಅಂಚೆ ಲಕೋಟೆಯನ್ನು ಅನಾವರಣಗೊಳಿಸಿದರು.


ನಂತರ ಕಾರ್ಯಕ್ರಮದಲ್ಲಿ ಸಚಿವ ಡಾ. ಹರ್ಷವರ್ಧನ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಾಧನೆಗಳನ್ನು ಅಭಿನಂದಿಸಿ ಮಾತನಾಡಿ, “ವಿಜ್ಞಾನದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ವಿಜ್ಞಾನಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವೇ ಇರಲಿ, ನ್ಯಾನೊ ತಂತ್ರಜ್ಞಾನವೇ ಇರಲಿ, ಡೇಟಾ ಅನಾಲಿಟಿಕ್ಸ್, ಆಸ್ಟ್ರೋ-ಫಿಸಿಕ್ಸ್, ಅಸ್ಟ್ರಾನಮಿ, ಆಟೊಮಿಕ್ ಕ್ಲಾಕ್ ಮತ್ತು ಇತರೆ ಹಲವು ಕ್ಷೇತ್ರಗಳಲ್ಲಿ ನಮ್ಮ ವಿಜ್ಞಾನಿಗಳು ಗಣನೀಯ ಸಾಧನೆ ಮಾಡಿದ್ದಾರೆ’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತ ಇದೀಗ 80ಕ್ಕಿಂತ ಅಧಿಕ ರಾಷ್ಟ್ರಗಳ ಜತೆ ವಿವಿಧ ವಿಜ್ಞಾನ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವ ಹೊಂದಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವನಾಗಿ ನಾನು ಕಳೆದ 6 ವರ್ಷಗಳಲ್ಲಿ ದೇಶದಲ್ಲಿರು ಎಲ್ಲಾ ಪ್ರಯೋಗಾಲಯಗಳಿಗೆ ಖುದ್ದು ಭೇಟಿ ನೀಡಿದ್ದೇನೆ ಮತ್ತು ನಮ್ಮ ವಿಜ್ಞಾನಿಗಳು ದಣಿವರಿಯದೆ ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ಕಣ್ಣಾರೆ ಕಂಡು ಮೆಚ್ಚಿದ್ದೇನೆ. ಕೋವಿಡ್-19ರಂತಹ ಪ್ರತೀಕೂಲ ಸನ್ನಿವೇಶದಲ್ಲೂ ಅವರು ಹೊಸ ಸಾಧನೆಗಳನ್ನು ಮಾಡಿರುವುದನ್ನು ನೋಡಿ ನಿಬ್ಬೆರಗಾಗಿದ್ದೇನೆ ಎಂದು ಶ್ಲಾಘಿಸಿದರು.
ವಿಜ್ಞಾನದ ಪ್ರತಿ ಕೆಲಸವು ದೇಶದ ಜನತೆಗೆ ಉತ್ತಮ ಜೀವನ ಕಲ್ಪಿಸುವಂತಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿರುವ “ವೈಜ್ಞಾನಿಕ ಸಾಮಾಜಿಕ ಹೊಣೆಗಾರಿಕೆ’’ ಎಲ್ಲರ ಜವಾಬ್ದಾರಿ ಆಗಬೇಕು ಎಂದು ಸಚಿವರು ಕರೆ ನೀಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸುವರ್ಣ ಮಹೋತ್ಸವ ಸ್ಮರಣಾರ್ಥ ಐತಿಹಾಸಿಕವಾದ ವಿಶೇಷ ಅಂಚೆ ಲಕೋಟೆಯನ್ನು ಹೊರತಂದಿರುವ ಅಂಚೆ, ಶಿಕ್ಷಣ, ವಿದ್ಯುನ್ಮಾನ ಮತ್ತು ಐಟಿ ಖಾತೆ ಸಹಾಯಕ ಸಚಿವ ಶ್ರೀ ಸಂಜಯ್ ಧೋತ್ರೆ ಅವರಿಗೆ ಡಾ, ಹರ್ಷವರ್ಧನ್ ಅವರು ಧನ್ಯವಾದ ಅರ್ಪಿಸಿದರು. ದೇಶದ ರಿಮೋಟ್ ಮತ್ತು ದೂರದ ಪ್ರದೇಶಗಳಲ್ಲಿ ನೆಲೆಸಿರುವ ಶ್ರೀಸಾಮಾನ್ಯರಿಗೆ ಅಲ್ಪಾವಧಿಯಲ್ಲಿ ಹೆಚ್ಚು ಕ್ರಿಯಾಶೀಲವಾಗಿ ನಾನಾ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅಂಚೆ ಇಲಾಖೆ ಜತೆ ನಿಕಟ ಸಹಭಾಗಿತ್ವ ಹೊಂದಬೇಕು. ಅಂಚೆ ಇಲಾಖೆಯು “ದೇಶದ ಜನತೆಯ ಅತ್ಯಂತ ವಿಶ್ವಾಸಾರ್ಹ ಸ್ನೇಹಿತ” ಎಂದು ಬಣ್ಣಿಸಿದ ಸಚಿವರು, “ನಮ್ಮ ಕುಟುಂಬ ಸದಸ್ಯರಿಗೆ ಪತ್ರಗಳನ್ನು (ಓಲೆ) ಬರೆಯಲು ನಾನು ಬಾಲ್ಯದಲ್ಲಿ ತುಂಬಾ ಇಷ್ಟಪಡುತ್ತಿದ್ದೆ ಮತ್ತು ಅವರ ಪತ್ರಗಳನ್ನು ಸ್ವೀಕರಿಸಲು ತೀರಾ ಕಾತರನಾಗಿರುತ್ತಿದ್ದೆ. ಈಗಲೂ ನಾನು ಅವಿಸ್ಮರಣೀಯ ನೆನಪುಗಳನ್ನು ತಂದುಕೊಡುವ ಆ ಪತ್ರಗಳನ್ನು ಟ್ರಂಕ್ ಗಳಲ್ಲಿ ಶೇಖರಿಸಿಟ್ಟಿದ್ದೇನೆ’’ ಎಂದು ಸಚಿವರು ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು.
ಸಚಿವ ಶ್ರೀ ಸಂಜಯ್ ಧೋತ್ರೆ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಾನಾ ಸಾಧನೆಗಳನ್ನು ಶ್ಲಾಘಿಸಿದರು. ಅದರ ಅಪಾರ ಸಾಧನೆಗಳನ್ನು ಎತ್ತಿ ತೋರಿಸುವ ವಿಶೇಷ ಅಂಚೆ ಲಕೋಟೆಯನ್ನು ಅಂಚೆ ಇಲಾಖೆ ಹೊರತಂದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಭಾರತದ ಅಭಿವೃದ್ಧಿಯಲ್ಲಿ ನಮ್ಮ ವಿಜ್ಞಾನಿಗಳು ಸಿಂಹಪಾಲಿನ ಕೊಡುಗೆ ನೀಡಿದ್ದಾರೆ. ಅಂಚೆ ಇಲಾಖೆಯ ಈ ವಿಶೇಷ ಲಕೋಟೆಯು ದೇಶದ ಎಲ್ಲ ಮೂಲೆಗಳಿಗೆ ತಲುಪಿ, ದೇಶದ ಅಭಿವೃದ್ಧಿ ಮತ್ತು ಬಡಜನರಿಗೆ ನಾನಾ ಸೇವೆಗಳನ್ನು ವಿತರಿಸುತ್ತಿರುವ ನಮ್ಮ ವಿಜ್ಞಾನಿಗಳ ಪಾತ್ರಗಳನ್ನು ಪ್ರತಿಯೊಬ್ಬರು ಶ್ಲಾಘಿಸುವಂತಾಗಲಿ ಎಂದು ಅವರು ಆಶಿಸಿದರು. ಎಲ್ಲ ವರ್ಗದ ಜನರನ್ನು ಸಂಪರ್ಕಿಸುವ ಭಾರತ ಸರಕಾರದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆ ಎಂಬ ಹಣೆಪಟ್ಟಿ(ಹೆಸರು)ಯನ್ನು ಅಂಚೆ ಇಲಾಖೆ ಆನಂದಿಸುತ್ತಿದೆ. ಈ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅಂಚೆ ಇಲಾಖೆ ಜತೆ ನಿಕಟವಾಗಿ ಕೆಲಸ ಮಾಡಿ, ಅತ್ಯಂತ ಹೆಚ್ಚಿನ ಜನಸ್ನೇಹಿಯಾಗಿ, ದೇಶದ ಜನತೆಗೆ ತ್ವರಿತವಾಗಿ ಸೇವೆಗಳನ್ನು ಒದಗಿಸಬೇಕು ಎಂದು ಅವರು ಮನವಿ ಮಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊಫೆಸರ್ ಅಶುತೋಶ್ ಶರ್ಮ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಭಾರತದ ವೈಜ್ಞಾನಿಕ ಸಂಸ್ಥೆಗಳ ಜಾಲಕ್ಕೆ ನಿರಂತರ ಬೆಂಬಲ ಮತ್ತು ನಾನಾ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಈ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸಾಧನೆಗಳನ್ನು ಮಾಡುತ್ತಾ ಬಂದಿದೆ. ವೈಜ್ಞಾನಿಕ ಪ್ರಕಟಣೆಗಳಲ್ಲಿ ಭಾರತ, ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ ಗಳಿಸಿದೆ. ಅನುಶೋಧನಾ ಸೂಚ್ಯಂಕದಲ್ಲೂ ಉನ್ನತ ಸ್ಥಾನ ಗಳಿಸಿದೆ. ನಮ್ಮ ವಿಜ್ಞಾನಿಗಳ ಮತ್ತು ವಿದ್ಯಾರ್ಥಿಗಳು ಕಳೆದ 50 ವರ್ಷಗಳಿಂದ ನೀಡುತ್ತಾ ಬಂದಿರುವ  ಗಣನೀಯ ಕೊಡುಗೆಗಳಿಂದ ಇವೆಲ್ಲಾ ಸಾಧ್ಯವಾಗಿವೆ. ಅಂಚೆ ಇಲಾಖೆ ಜತೆ ಕೆಲಸ ಮಾಡಿ, ದೇಶದ ಜನತೆಗೆ ತಂತ್ರಜ್ಞಾನ ಸೇವೆ ಮತ್ತು ಪರಿಹಾರಗಳನ್ನು ಒದಗಿಸಲು ತುಂಬಾ ಉತ್ಸುಕನಾಗಿದ್ದೇನೆ ಎಂದು ಅವರು ತಿಳಿಸಿದರು.
ಅಂಚೆ ಇಲಾಖೆಯ ಮಹಾನಿರ್ದೇಶಕ ಶ್ರೀ ವಿನೀತ್ ಪಾಂಡೆ, ಅಂಚೆ ಇಲಾಖೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಉನ್ನತಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು 2020 ಮೇ 3ರಿಂದ 2021 ಮೇ 3ರ ವರೆಗೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಇದರ ಅಂಗವ಻ಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ಕ್ಷೇತ್ರಗಳನ್ನು ಉತ್ತೇಜಿಸುವ ಉದ್ದೇಶದಿಂದ 1971ರಲ್ಲಿ ಆರಂಭವಾದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ದೇಶಾದ್ಯಂತ ವಿಜ್ಞಾನ ಮತ್ತು ತಂತ್ರಜ್ಞಾನ ಚಟುವಟಿಕೆಗಳನ್ನು ಆಯೋಜಿಸುವ, ಉತ್ತೇಜಿಸುವ ಮತ್ತು ಸಮನ್ವಯ ಸಾಧಿಸುವ ನೋಡಲ್ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸುವ ಗುರುತರ ಜವಾಬ್ದಾರಿಗಳನ್ನು ಈ ಸಂಸ್ಥೆ ಹೊಂದಿದೆ. ಕೇಂದ್ರ ಸಂಪುಟದ ವೈಜ್ಞಾನಿಕ ಸಲಹಾ ಸಮಿತಿಯ ವಿಷಯಗಳನ್ನು ವ್ಯವಹರಿಸುವ ಜತೆಗೆ, ದೇಶದ ಸಮಗ್ರ ಅಭಿವೃದ್ಧಿ ಮತ್ತು ಭದ್ರತೆಗೆ ಸಂಬಂಧಿಸಿದ ವೈಜ್ಞಾನಿಕ ಮತ್ತು ತಾಂತ್ರಿಕ ವಿಚಾರಗಳನ್ನು ಉತ್ತೇಜಿಸುವುದು ಇದರ ಜವಾಬ್ದಾರಿಯಾಗಿದೆ. ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು, ವೈಜ್ಞಾನಿಕ ಸಂಘಟನೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಧನಸಹಾಯದ ಬೆಂಬಲ ಮತ್ತು ವಿಜ್ಞಾನ ಚಟುವಟಿಕೆಗಳನ್ನು ನಡೆಸಲು ಉತ್ತೇಜನ ನೀಡುವುದು ಇದರ ಕರ್ತವ್ಯವಾಗಿದೆ. ಮೂಲ ಸಂಶೋಧನೆ ಮತ್ತು ಉನ್ನತ ಸಂಶೋಧನೆ ಉತ್ತೇಜನ, ತಂತ್ರಜ್ಞಾನ ಅಭಿವೃದ್ಧಿ ಮತ್ತಿತರ ಕಾರ್ಯಗಳು ಇದರ ವ್ಯಾಪ್ತಿಗೆ ಬರುತ್ತವೆ.

*****

 




(Release ID: 1669748) Visitor Counter : 943