ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ದೇಶೀಯ ಸಗಟು ಔಷಧ ಉತ್ಪಾದನೆ ಮತ್ತು ವೈದ್ಯಕೀಯ ಸಾಧನಗಳ ತಯಾರಿಕೆ ಉತ್ತೇಜಿಸಲು ಪಿಎಲ್ಐ ಯೋಜನೆಯ ಮಾರ್ಗಸೂಚಿ ‘ಪರಿಷ್ಕರಣೆ’
‘ಬದ್ಧತೆಯ ಹೂಡಿಕೆ’ ಯಿಂದ ‘ಕನಿಷ್ಠ ಮಿತಿ’ ಹೂಡಿಕೆಯ ಅಗತ್ಯದ ಬದಲಾವಣೆ
ಉತ್ಪನ್ನದಿಂದ ಉತ್ಪನ್ನಕ್ಕೆ ಬದಲಾಗುವ ತಂತ್ರಜ್ಞಾನ ಆಯ್ಕೆಗಳ ಲಭ್ಯತೆಯನ್ನು ಇದು ಗಣನೆಗೆ ತೆಗೆದುಕೊಳ್ಳುತ್ತದೆ
ದಕ್ಷ ಹೂಡಿಕೆದಾರರಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಒಂದು ವಾರ 30.11.2020ರವರೆಗೆ ವಿಸ್ತರಣೆ
Posted On:
29 OCT 2020 12:48PM by PIB Bengaluru
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧ ಇಲಾಖೆ, ಕೈಗಾರಿಕೆಯಿಂದ ಸ್ವೀಕರಿಸಲಾದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ದೇಶೀಯ ಔಷಧಗಳ ಸಗಟು ಉತ್ಪಾದನೆ ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಯ ಉತ್ತೇಜನಕ್ಕಾಗಿ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯನ್ನು ಪರಿಷ್ಕರಿಸಿದೆ. ಆ ಪ್ರಕಾರವಾಗಿ ಉತ್ಪನ್ನದಿಂದ ಉತ್ಪನ್ನಕ್ಕೆ ಬದಲಾಗುವ ತಂತ್ರಜ್ಞಾನ ಆಯ್ಕೆಗಳ ಲಭ್ಯತೆಯನ್ನು ಗಣನೆಗೆ ತೆಗೆದುಕೊಂಡು ‘ಬದ್ಧತೆಯ ಹೂಡಿಕೆ’ ಯಿಂದ ‘ಕನಿಷ್ಠ ಮಿತಿ’ ಹೂಡಿಕೆಯ ಅಗತ್ಯದ ಬದಲಾವಣೆ ಮಾಡಲಾಗಿದೆ.
ಔಷಧ ಇಲಾಖೆ ಈ ಮುನ್ನ ಈ ಕೆಳಕಂಡ ಎರಡು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆಯನ್ನು ತಂದಿತ್ತು -
- ಭಾರತದಲ್ಲಿ ನಿರ್ಣಾಯಕ ಆರಂಭಿಕ ವಸ್ತುಗಳು, ಔಷಧ ಮಧ್ಯಸ್ಥಿಕೆಗಳು ಮತ್ತು ಸಕ್ರಿಯ ಔಷಧೀಯ ಪದಾರ್ಥಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆ.
- ವೈದ್ಯಕೀಯ ಸಾಧನಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆ.
ಈ ಎರಡೂ ಯೋಜನೆಗಳಿಗೆ 20.03.2020ರಂದು ನಡೆದ ಸಚಿವ ಸಂಪುಟ ಅನುಮೋದನೆ ನೀಡಿತ್ತು ಮತ್ತು ಇಲಾಖೆ 27.07.2020ರಂದು ಯೋಜನೆಯ ಜಾರಿಗೆ ಸವಿವರವಾದ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು.
ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದ ತರುವಾಯ, ಎರಡೂ ಯೋಜನೆಗಳಲ್ಲಿ ಉದ್ಯಮದ ಪರಿಣಾಮಕಾರಿ ಪಾಲ್ಗೊಳ್ಳುವಿಕೆಯನ್ನು ಸಕ್ರಿಯಗೊಳಿಸಲು ಯೋಜನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಕೋರಿ ಇಲಾಖೆಯು ಔಷಧೀಯ ಮತ್ತು ವೈದ್ಯಕೀಯ ಸಲಕರಣೆ ಉದ್ಯಮದಿಂದ ಹಲವಾರು ಸಲಹೆಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಯೋಜನೆಗಳ ಅಡಿಯಲ್ಲಿ ರಚಿಸಲಾದ ಆಯಾ ತಾಂತ್ರಿಕ ಸಮಿತಿಗಳು ಈ ಸಲಹೆಗಳನ್ನು ಪರಿಶೀಲಿಸಿದವು. ತಾಂತ್ರಿಕ ಸಮಿತಿಗಳ ಶಿಫಾರಸುಗಳನ್ನು ನೀತಿ ಆಯೋಗದ ಸಿಇಓ ಅಧ್ಯಕ್ಷತೆಯ ಯೋಜನೆಗಳ ಅಧಿಕಾರಯುತ ಸಮಿತಿಗಳ ಮುಂದೆ ಇಡಲಾಯಿತು. ತಾಂತ್ರಿಕ ಸಮಿತಿಗಳ ಶಿಫಾರಸುಗಳನ್ನು ಪರಿಗಣಿಸಿದ ನಂತರ, ಅಧಿಕಾರಯುತ ಸಮಿತಿ ಎರಡೂ ಯೋಜನೆಗಳಿಗೆ ಮಾರ್ಗಸೂಚಿಗಳ ಪರಿಷ್ಕರಣೆಗೆ ಅನುಮೋದನೆ ನೀಡಿತು. ಅದರಂತೆ, ಪರಿಷ್ಕೃತ ಮಾರ್ಗಸೂಚಿಗಳನ್ನು ಇಂದು ಅಂದರೆ 29.10.2020ರಂದು ಹೊರಡಿಸಲಾಗಿದೆ ಮತ್ತು ಔಷಧ ಇಲಾಖೆಯ ಅಂತರ್ಜಾಲ ತಾಣದ “ಯೋಜನೆಗಳು” ಶೀರ್ಷಿಕೆ ಅಡಿಯಲ್ಲಿ ಇದು ಲಭ್ಯವಿದೆ.
ನಿರ್ಣಾಯಕ ಆರಂಭಿಕ ವಸ್ತುಗಳು, ಔಷಧ ಮಧ್ಯಸ್ಥಿಕೆಗಳು ಮತ್ತು ಭಾರತದಲ್ಲಿ ಸಕ್ರಿಯ ಔಷಧ ಪದಾರ್ಥಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕ (ಪಿಎಲ್.ಐ) ಯೋಜನೆಗೆ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಪರಿಣಾಮ ಬೀರುವ ಮುಖ್ಯ ಬದಲಾವಣೆಗಳು ಹೀಗಿವೆ:
ಆಯ್ದ ಅರ್ಜಿದಾರರಿಂದ ‘ಕನಿಷ್ಠ ಮಿತಿ’ ಹೂಡಿಕೆಯ ಮಾನದಂಡಗಳನ್ನು ‘ಬದ್ಧ’ ಹೂಡಿಕೆಯೊಂದಿಗೆ ಬದಲಾಯಿಸುವುದು. ಉತ್ಪಾದಕ ಬಂಡವಾಳದ ಸಮರ್ಥ ಬಳಕೆಯನ್ನು ಉತ್ತೇಜಿಸಲು ಈ ಬದಲಾವಣೆಯನ್ನು ಮಾಡಲಾಗಿದೆ ಏಕೆಂದರೆ ಒಂದು ನಿರ್ದಿಷ್ಟ ಮಟ್ಟದ ಉತ್ಪಾದನೆಯನ್ನು ಸಾಧಿಸಲು ಬೇಕಾದ ಹೂಡಿಕೆಯ ಪ್ರಮಾಣವು ತಂತ್ರಜ್ಞಾನದ ಆಯ್ಕೆಯ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಅದು ಉತ್ಪನ್ನದಿಂದ ಉತ್ಪನ್ನಕ್ಕೆ ಬದಲಾಗುತ್ತದೆ. ಯೋಜನೆಯಡಿ ಪ್ರೋತ್ಸಾಹಕ ನೀಡುವ ಉದ್ದೇಶದಿಂದ ಆಯ್ದ ಅರ್ಜಿದಾರರು ಮಾಡಿದ ನೈಜವಾದ ಹೂಡಿಕೆಯ ಪರಿಶೀಲನೆಗಾಗಿ ಅವಕಾಶ ಮುಂದುವರೆದಿದೆ.
ಪ್ರೋತ್ಸಾಹಕಗಳನ್ನು ಪಡೆಯುವ ಅರ್ಹತೆ, ಇತರ ಪಿಎಲ್.ಐ ಯೋಜನೆಗಳಿಗೆ ಅನುಗುಣವಾಗಿ ಯೋಜನೆಯನ್ನು ತರುವುದು ಮತ್ತು ಮಾರುಕಟ್ಟೆ ವೈವಿಧ್ಯೀಕರಣವನ್ನು ಉತ್ತೇಜಿಸುವ ಉದ್ದೇಶಕ್ಕಾಗಿ ಅರ್ಹ ಉತ್ಪನ್ನಗಳ ಮಾರಾಟವನ್ನು ದೇಶೀಯ ಮಾರಾಟಕ್ಕೆ ಮಾತ್ರ ನಿರ್ಬಂಧಿಸುವ ನಿಬಂಧನೆಯನ್ನು ತೆಗೆದುಹಾಕುವುದು.
ಟೆಟ್ರಾಸೈಕ್ಲಿನ್, ನಿಯೋಮೈಸಿನ್, ಪ್ಯಾರಾ ಅಮೈನೊ ಫೆನಾಲ್ (ಪಿಎಪಿ), ಮೆರೊಪೆನೆಮ್, ಆರ್ಟೆಸುನೇಟ್, ಲೊಸಾರ್ಟನ್, ಟೆಲ್ಮಿಸಾರ್ಟನ್, ಅಸಿಕ್ಲೋವಿರ್, ಸಿಪ್ರೊಫ್ಲೋಕ್ಸಾಸಿನ್ ಮತ್ತು ಆಸ್ಪಿರಿನ್ ಎಂಬ 10 ಉತ್ಪನ್ನಗಳಿಗೆ ಕನಿಷ್ಠ ವಾರ್ಷಿಕ ಉತ್ಪಾದನಾ ಸಾಮರ್ಥ್ಯದಲ್ಲಿ ಬದಲಾವಣೆ. ಕನಿಷ್ಠ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು ಯೋಜನೆಯಡಿ ಅರ್ಹತಾ ಮಾನದಂಡಗಳ ಒಂದು ಭಾಗವಾಗಿದೆ.
ಯೋಜನೆಯಡಿ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವನ್ನು ಈಗ 30.11.2020 (ಆ ದಿನವೂ ಸೇರಿದಂತೆ) ಒಂದು ವಾರ ವಿಸ್ತರಿಸಲಾಗಿದೆ.
ಅಂತೆಯೇ, ವೈದ್ಯಕೀಯ ಸಾಧನಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕ ಯೋಜನೆಗಾಗಿ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಪರಿಣಾಮ ಬೀರುವ ಮುಖ್ಯ ಬದಲಾವಣೆಗಳು ಈ ಕೆಳಗಿನಂತಿವೆ-
ಆಯ್ದ ಅರ್ಜಿದಾರರಿಂದ ‘ಕನಿಷ್ಠ ಮಿತಿ’ ಹೂಡಿಕೆಯ ಮಾನದಂಡಗಳನ್ನು ‘ಬದ್ಧ’ ಹೂಡಿಕೆಯೊಂದಿಗೆ ಬದಲಾಯಿಸುವುದು. ಉತ್ಪಾದಕ ಬಂಡವಾಳದ ಸಮರ್ಥ ಬಳಕೆಯನ್ನು ಉತ್ತೇಜಿಸಲು ಈ ಬದಲಾವಣೆಯನ್ನು ಮಾಡಲಾಗಿದೆ, ಏಕೆಂದರೆ ಒಂದು ನಿರ್ದಿಷ್ಟ ಮಟ್ಟದ ಉತ್ಪಾದನೆಯನ್ನು ಸಾಧಿಸಲು ಬೇಕಾದ ಹೂಡಿಕೆಯ ಪ್ರಮಾಣವು ಬಳಸುವ ತಂತ್ರಜ್ಞಾನವನ್ನು ಅವಲಂಬಿಸಿರುತ್ತದೆ ಮತ್ತು ಅದು ಉತ್ಪನ್ನದಿಂದ ಉತ್ಪನ್ನಕ್ಕೆ ಬದಲಾಗುತ್ತದೆ. ಯೋಜನೆಯಡಿ ಪ್ರೋತ್ಸಾಹಕ ನೀಡುವ ಉದ್ದೇಶದಿಂದ ಆಯ್ದ ಅರ್ಜಿದಾರರು ಮಾಡಿದ ನೈಜವಾದ ಹೂಡಿಕೆಯ ಪರಿಶೀಲನೆಗಾಗಿ ಅವಕಾಶ ಮುಂದುವರೆದಿದೆ.
ಯೋಜನೆಯಡಿ ಪ್ರೋತ್ಸಾಹಕವನ್ನು ಪಡೆಯುವ ಉದ್ದೇಶದಿಂದ ಯೋಜಿತ ಬೇಡಿಕೆ, ತಂತ್ರಜ್ಞಾನದ ಪ್ರವೃತ್ತಿ ಮತ್ತು ಮಾರುಕಟ್ಟೆ ಅಭಿವೃದ್ಧಿಗೆ ಅನುಗುಣವಾಗಿ ಕನಿಷ್ಠ ಮಾರಾಟ ಮಿತಿಯ ಅರ್ಹತಾ ಮಾನದಂಡಗಳಲ್ಲಿ ಬದಲಾವಣೆ ಮಾಡಲಾಗಿದೆ.
ಆಯ್ದ ಅರ್ಜಿದಾರರು 2021-22ರ ಹಣಕಾಸು ವರ್ಷದಲ್ಲಿ ಮಾಡುವ ನಿರೀಕ್ಷಿತ ಬಂಡವಾಳ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಯೋಜನೆಯ ಅವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಲಾಗಿದೆ. ಆ ಪ್ರಕಾರವಾಗಿ ಪ್ರೋತ್ಸಾಹಕ ಪಡೆಯುವ ಉದ್ದೇಶದಿಂದ ಮಾರಾಟವನ್ನು 2021-2022ರ ಬದಲು 2022-2023 ರಿಂದ ಪ್ರಾರಂಭವಾಗುವ 5 ವರ್ಷಗಳವರೆಗೆ ಲೆಕ್ಕಹಾಕಲಾಗುತ್ತದೆ.
ಯೋಜನೆಯಡಿ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವನ್ನು ಒಂದು ವಾರಗಳ ಕಾಲ 30.11.2020ರವರೆಗೆ ( ಆ ದಿನವೂ ಸೇರಿದಂತೆ) ವಿಸ್ತರಿಸಲಾಗಿದೆ.
ಭಾರತೀಯ ಔಷಧ ಕೈಗಾರಿಕೆ ಗಾತ್ರದಲ್ಲಿ ಜಾಗತಿಕವಾಗಿ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದ್ದು, ಭಾರತದ ಆರ್ಥಿಕತೆಗೆ ಮತ್ತು ರಫ್ತು ಗಳಿಕೆಗೆ ಗಣನೀಯವಾದ ಕೊಡುಗೆ ನೀಡುತ್ತಿದೆ. ವೈದ್ಯಕೀಯ ಸಾಧನಗಳ ಉದ್ಯಮವನ್ನು ಸೂರ್ಯೋದಯ (ವೃದ್ಧಿ) ವಲಯವೆಂದು ಗುರುತಿಸಲಾಗಿದೆ, ಇದು ವೈವಿಧ್ಯೀಕರಣ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಮುಂಬರುವ ವರ್ಷಗಳಲ್ಲಿ ತಮ್ಮ ಸಾಮರ್ಥ್ಯವನ್ನು ತಲುಪಲು ಔಷಧ ಮತ್ತು ವೈದ್ಯಕೀಯ ಸಾಧನಗಳ ಉದ್ಯಮವನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.
***
(Release ID: 1668417)
Visitor Counter : 315