ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕಾಗಿ 2 ಶ್ರೇಷ್ಠತಾ ಕೇಂದ್ರಗಳ ಅನಾವರಣ; ಆರ್ಟ್ ಆಫ್ ಲಿವಿಂಗ್ ಪಾಲುದಾರಿಕೆ


ಬುಡಕಟ್ಟು ಪ್ರದೇಶಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಬಲವರ್ಧನೆ, ನೀತಿ ನಿರ್ಧಾರ ತಳೆಯುವ ವಿಷಯಗಳ ಸಬಲೀಕರಣ ಮತ್ತು ಸಮುದಾಯದ ಅಭಿವೃದ್ಧಿ: ಶ್ರೀ ಅರ್ಜುನ್ ಮುಂಡಾ

Posted On: 27 OCT 2020 4:49PM by PIB Bengaluru

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕಾಗಿ 2 ಶ್ರೇಷ್ಠತಾ ಕೇಂದ್ರಗಳನ್ನು ದೆಹಲಿಯಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಿದರು. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಬೆಂಗಳೂರು ಮೂಲದ ಆರ್ಟ್ ಆಫ್ ಲಿವಿಂಗ್ ಸಹಭಾಗಿತ್ವದಲ್ಲಿ 2 ಶ್ರೇಷ್ಠತಾ ಕೇಂದ್ರಗಳು ತಲೆಎತ್ತಿವೆ. ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕೇಂದ್ರ ಬುಡಕಟ್ಟು ವ್ಯವಹಾರಗಳ ಖಾತೆ ಸಹಾಯಕ ಸಚಿವೆ ಶ್ರೀಮತಿ ರೇಣುಕಾ ಸಿಂಗ್ ಸರೂತ, ಸಚಿವಾಲಯದ ಕಾರ್ಯದರ್ಶಿ ಶ್ರೀ ದೀಪಕ್ ಖಂಡೇಕರ್ ಮತ್ತು ಜಂಟಿ ಕಾರ್ಯದರ್ಶಿ ಶ್ರೀ ನವಲ್ ಜಿತ್ ಕಪೂರ್ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶ್ರೀ ಅರ್ಜುನ್ ಮುಂಡಾ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸಹಭಾಗಿತ್ವದಲ್ಲಿ ಆರ್ಟ್ ಆಫ್ ಲಿವಿಂಗ್ 2 ಶ್ರೇಷ್ಠತಾ ಕೇಂದ್ರಗಳನ್ನು ತೆರೆಯುತ್ತಿರುವುದು ನಿಜಕ್ಕೂ ಪ್ರಶಂಸನೀಯ ಉಪಕ್ರಮವಾಗಿದೆ. ಬುಡಕಟ್ಟು ಸಮುದಾಯದ ರೈತ ಬಂಧುಗಳಿಗೆ ತರಬೇತಿ ನೀಡಲು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಮೊದಲ ಶ್ರೇಷ್ಠತಾ ಕೇಂದ್ರ ತೆರೆಯಲಾಗಿದೆ. ಅಲ್ಲಿ ಗೋ-ಆಧರಿತ್ ಕೃಷಿ ತಾಂತ್ರಿಕತೆ ಆಧಾರಿತ ಸುಸ್ಥಿರ ನೈಸರ್ಗಿಕ ಕೃಷಿಗೆ ಸಂಬಂಧಿಸಿದ ರೈತ ತರಬೇತಿ ನೀಡಲಾಗುತ್ತದೆ. ಅಲ್ಲದೆ, ಜಾರ್ಖಂಡ್ 30 ಗ್ರಾಮ ಪಂಚಾಯಿತಿಗಳು ಮತ್ತು 150 ಗ್ರಾಮಗಳು ಒಳಗೊಂಡ 5 ಜಿಲ್ಲೆಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳನ್ನು (ಪಿಆರ್ಐ) ಬಲಪಡಿಸಲು 2ನೇ ಶ್ರೇಷ್ಠತಾ ಕೇಂದ್ರ ತೆರೆಯಲಾಗಿದೆ. ನಮ್ಮ ದೇಶದ ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕೆ ಕೇಂದ್ರ ಸರಕಾರ, ಸಂಪುರ್ಣ ಬದ್ಧವಾಗಿದೆ. ದೇಶಾದ್ಯಂತ ನೆಲೆಸಿರುವ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ವಿಶೇಷವಾಗಿ ಸರಕಾರ, 2 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ಹಂಚಿಕೆ ಮಾಡಿದೆ ಎಂದು ತಿಳಿಸಿದರು.

ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರು ಉಪಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದರಿಂದ, ಬುಡಕಟ್ಟು ಸಮುದಾಯಗಳ ಕಲ್ಯಾಣ ಉದ್ದೇಶ ಸಾಕಾರಗೊಳ್ಳಲಿದೆ. ಪ್ರಧಾನ ಮಂತ್ರಿ ಅವರ ಆತ್ಮನಿರ್ಭರ್ ಕನಸನ್ನು ನನಸುಗೊಳಿಸುವ ದಿಕ್ಕಿನಲ್ಲಿ ಇದೊಂದು ದಿಟ್ಟ ಹೆಜ್ಜೆಯಾಗಿದೆ, ಕೆಲಸವು ಆದಷ್ಟು ಶೀಘ್ರವೇ ಪೂರ್ಣಗೊಳ್ಳಲಿದೆ ಹಾಗೂ ಹೆಚ್ಚೆಚ್ಚು ಜನರು ಮತ್ತು ಸಂಘ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಆಶಾವಾದ ತಮಗಿದೆ. ಬುಡಕಟ್ಟು ಜನರು ಪ್ರಕೃತಿ ಸಂರಕ್ಷಿಸಲು ಮತ್ತು ಪರಿಸರ ಉಳಿಸಲು ಸಂಪೂರ್ಣ ಶ್ರದ್ಧೆ ಹೊಂದಿದ್ದಾರೆ ಎಂದು ಸಚಿವರು ತಿಳಿಸಿದರು.

ಬುಡಕಟ್ಟು ಪ್ರದೇಶಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸುವುದರಿಂದ, ಸಾಂವಿಧಾನಿಕ ಹಕ್ಕುಗಳ ಬಗ್ಗೆ ಸಮುದಾಯದ ಜನರನ್ನು ಶಿಕ್ಷಿತರಾಗಿಸಲು ಸಹಾಯಕವಾಗಲಿದೆ. ಕೇಂದ್ರ ಸರಕಾರ ಮತ್ತು ಆರ್ಟ್ ಆಫ್ ಲಿವಿಂಗ್ ಸಹಭಾಗಿತ್ವದ ಉಪಕ್ರಮದಿಂದ ನೀತಿ ನಿರ್ಧಾರ ತಳೆಯುವ ವಿಷಯಗಳಿಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲೀಕರಿಸಲು ಮತ್ತು ಸಮುದಾಯವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂಬ ಆಶಾವಾದ ತಮ್ಮದಾಗಿದೆ ಎಂದರು.

ಶ್ರೀಮತಿ ರೇಣುಕಾ ಸಿಂಗ್ ಸರೂತ ಮಾತನಾಡಿ, ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಸಚಿವಾಲಯವು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸಚಿವಾಲಯವು ಹಲವು ಎನ್ ಜಿಒಗಳು ಮತ್ತು ಸಾಮಾಜಿಕ ಸಂಘಟನೆಗಳ ಜತೆ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿದೆ. ಸರಕಾರೇತರ ಸಂಘ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘಟನೆಗಳು ಕ್ಷೇತ್ರದಲ್ಲಿ ಪ್ರಶಂಸನೀಯ ಕೆಲಸ ಮಾಡುತ್ತಾ ಬಂದಿವೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸ್ವಯಂಸೇವಕರ ಬೃಹತ್ ಜಾಲವನ್ನೇ ಹೊಂದಿದ್ದು, ಅವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಾರೆ ಎಂದರು.

ಶ್ರೀ ಶ್ರೀ ರವಿಶಂಕರ್ ಗುರೂಜಿ ಮಾತನಾಡಿ, ಬುಡಕಟ್ಟು ಸಮುದಾಯದ ಜನರಿಂದ ನಾವೆಲ್ಲಾ ಕಲಿಯಬೇಕಾದ್ದು ಬಹಳಷ್ಟಿದೆ. ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯಲ್ಲಿ ಅವರು ಬಹಳ ಜವಾಬ್ದಾರಿಯುತ ಜನರಾಗಿದ್ದಾರೆ ಎಂದು  ಜಾರ್ಖಂಡ್ ಘಟಶಿಲಾದಲ್ಲಿ ಆರ್ಟ್ ಆಫ್ ಲಿವಿಂಗ್(ಎಒಎಲ್) ಸ್ಕೂಲ್ ನಡೆಸುವಾಗ ಅದ ಅನುಭವವನ್ನು ಮೆಲುಕು ಹಾಕಿದರು. ಘಟಶಿಲಾ ಸ್ಕೂಲ್ ನಲ್ಲಿ ಶೈಕ್ಷಣಿಕ ಪಠ್ಯಕ್ಕೆ ಕೌಶಲ್ಯಾಭಿವೃದ್ಧಿ ವಿಷಯ ಅಳವಡಿಸಲಾಗಿದೆ ಎಂದರು. ಎಒಎಲ್ ದೇಶಾದ್ಯಂತ 750 ಶಾಲೆಗಳನ್ನು ನಡೆಸುತ್ತಿದೆ. ನಮ್ಮ ಗ್ರಾಮಗಳಲ್ಲಿ ಹಲ್ಲುಗಳ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಅತಿ ಅಗತ್ಯ ಎಂದು ಅವರು ಒತ್ತಿ ಹೇಳಿದರು. ಎಒಎಲ್ ಸ್ವಯಂಸೇವಕರು ತುಂಬು ಹೃದಯದಿಂದ, ಪೂರ್ಣ ಶ್ರದ್ಧೆಯಿಂದ ಬುಡಕಟ್ಟು ಜನರ ಕಲ್ಯಾಣ ಯೋಜನೆಗಳನ್ನು ಯಶಸ್ವಿಗೊಳಿಸಲಿದ್ದಾರೆ ಎಂದು ಅವರು ಭರವಸೆ ನೀಡಿದರು.

ಬುಡಕಟ್ಟು ವ್ಯವಹಾರಗಳ ಸಚಿವಾಲಯ ಕಾರ್ಯದರ್ಶಿ ಶ್ರೀ ದೀಪಕ್ ಖಂಡೇಕರ್ ಮಾತನಾಡಿ, ಬುಡಕಟ್ಟು ಪ್ರದೇಶಗಳಲ್ಲಿ ಎಒಎಲ್ ಈಗಾಗಲೇ ನಡೆಸುತ್ತಿರುವ ಪ್ರಯತ್ನಗಳು ಮೆಚ್ಚುವಂತದ್ದು. ನಿಟ್ಟಿನಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಎಒಎಲ್ ಪಾಲುದಾರಿಕೆಯು ಕಲ್ಯಾಣ ಕಾರ್ಯಕ್ರಮಗಳ ಮತ್ತಷ್ಟು ವಿಸ್ತರಣೆಗೆ ಸಹಾಯಕವಾಗಲಿದೆ ಎಂದರು.

ಬುಡಕಟ್ಟು ಪ್ರದೇಶಗಳ ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸುವ ಮೊದಲ ಉಪಕ್ರಮವನ್ನು ಜಾರ್ಖಂಡ್ 150 ಗ್ರಾಮ ಪಂಚಾಯಿತಿಗಳು ಮತ್ತು 150 ಗ್ರಾಮಗಳನ್ನು ಒಳಗೊಂಡ 5 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ವಿವಿಧ ಬುಡಕಟ್ಟು ಕಾಯಿದೆಗಳು ಮತ್ತು ನಿಯಮಾವಳಿಗಳು, ಸರಕಾರದ ನಾನಾ ಕಲ್ಯಾಣ ಕಾರ್ಯಕ್ರಮಗಳನ್ನು ಪಡೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಬುಡಕಟ್ಟು ಯುವಕರನ್ನು ಸ್ವಯಂಸೇವಕರನ್ನಾಗಿ ಸೃಷ್ಟಿಸಿ, ಅವರಿಗೆ ವ್ಯಕ್ತಿತ್ವ ವಿಕಸನ ತರಬೇತಿ, ಸಾಮಾಜಿಕ ಜವಾಬ್ದಾರಿಗಳ ಅರಿವು ಮೂಡಿಸುವ ಮೂಲಕ ಅವರನ್ನು ಬುಡಕಟ್ಟು ನಾಯಕರನ್ನಾಗಿ ರೂಪಿಸಲಾಗುವುದು. ಆನಂತರ ಅವರೇ ತಮ್ಮ ಸಮುದಾಯದ ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡುವಂತೆ ಮಾಡಲಾಗುತ್ತದೆ.

ಎರಡನೆಯದಾಗಿ, ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ 10 ಸಾವಿರ ಬುಡಕಟ್ಟು ರೈತರಿಗೆ ಸುಸ್ಥಿರ ನೈಸರ್ಗಿಕ ಕೃಷಿಯ ತರಬೇತಿ ನೀಡಲಾಗುತ್ತದೆ. ಗೋ-ಆಧಾರಿತ್ ಕೃಷಿ ತಾಂತ್ರಿಕತೆ ಆಧರಿತ ತರಬೇತಿ ಇದಾಗಿದೆ. ರೈತರಿಗೆ ಸಾವಯವ ಕೃಷಿಯ ಪ್ರಮಾಣಪತ್ರ ನೀಡಲು ಸಹಾಯ ಮಾಡಲಾಗುತ್ತದೆ. ಜತೆಗೆ, ಅವರಿಗೆ ಮಾರುಕಟ್ಟೆ ಅವಕಾಶಗಳು ಸಿಗುವಂತೆ ಮಾಡಿ, ಪ್ರತಿಯೊಬ್ಬರನ್ನೂ ಆತ್ಮನಿರ್ಭರ್ ಬುಡಕಟ್ಟು ರೈತರನ್ನಾಗಿ ರೂಪಿಸಲಾಗುತ್ತದೆ.

 

***



(Release ID: 1668056) Visitor Counter : 224