ಹಣಕಾಸು ಸಚಿವಾಲಯ
ಆದಾಯ ತೆರಿಗೆ ರಿಟರ್ನ್ಸ್ ಮತ್ತು ಲೆಕ್ಕ ಪರಿಶೋಧನಾ ವರದಿ ಸಲ್ಲಿಕೆಗೆ ಅವಧಿ ವಿಸ್ತರಣೆ
Posted On:
24 OCT 2020 2:27PM by PIB Bengaluru
ಕೋವಿಡ್-19 ಸೋಂಕು ಭೀತಿಯಿಂದಾಗಿ ತೆರಿಗೆ ಪಾವತಿದಾರರು ನಿಗದಿತವಾಗಿ ಮತ್ತು ನಿಯಮಗಳಂತೆ ತೆರಿಗೆ ಪಾವತಿ ಕ್ರಮಗಳ ಪಾಲನೆಗೆ ಹಲವು ಸವಾಲುಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತೆರಿಗೆ ಮತ್ತು ಇತರ ಕಾನೂನುಗಳು(ಕೆಲವು ನಿಯಮಗಳಿಗೆ ವಿನಾಯಿತಿ) ಸುಗ್ರೀವಾಜ್ಞೆ-2020 ಅಡಿಯಲ್ಲಿ 31 ಮಾರ್ಚ್ 2020ಕ್ಕೆ ಸಲ್ಲಿಸಬೇಕಾಗಿದ್ದ ಕೆಲವೊಂದು ರಿಟರ್ನ್ಸ್ ಗಳ ಅವಧಿಯನ್ನು ವಿಸ್ತರಿಸಿದೆ. ಸುಗ್ರೀವಾಜ್ಞೆ ಬದಲಿಗೆ ಇದೀಗ ತೆರಿಗೆ ಮತ್ತು ಇತರೆ ಕಾನೂನುಗಳು(ಕೆಲವು ಅಂಶಗಳಿಗೆ ತಿದ್ದುಪಡಿ ಮತ್ತು ವಿನಾಯಿತಿ) ಕಾಯ್ದೆ ಜಾರಿಗೆ ಬಂದಿದೆ.
ಸರ್ಕಾರ 2020ರ ಜೂನ್ 24ರಂದು ಅಧಿಸೂಚನೆ ಹೊರಡಿಸಿ, 2019-20ನೇ ಹಣಕಾಸು ವರ್ಷದ ಆದಾಯ ತೆರಿಗೆ ಪಾವತಿ ರಿಟರ್ನ್ಸ್ ಸಲ್ಲಿಕೆಗೆ ನೀಡಲಾಗಿದ್ದ ಗಡುವನ್ನು 2020ರ ನವೆಂಬರ್ 30ರವರೆಗೆ ವಿಸ್ತರಿಸಿತ್ತು. ಹಾಗಾಗಿ 2020ರ ಜುಲೈ 31ಕ್ಕೆ ಮತ್ತು 2020ರ ಅಕ್ಟೋಬರ್ 31ಕ್ಕೆ ಸಲ್ಲಿಸಬೇಕಿದ್ದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ 2020ರ ನವೆಂಬರ್ 30ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದರಂತೆ ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ತೆರಿಗೆ ಲೆಕ್ಕ ಪರಿಶೋಧನೆ ಸೇರಿದಂತೆ ನಾನಾ ಲೆಕ್ಕಪತ್ರ ಪರಿಶೋಧನಾ ವರದಿಗಳನ್ನು ಸಲ್ಲಿಸಲು ನೀಡಲಾಗಿದ್ದ ಗಡುವನ್ನು 2020ರ ಅಕ್ಟೋಬರ್ 31ರ ವರೆಗೆ ವಿಸ್ತರಿಸಲಾಗಿತ್ತು.
ಇದೀಗ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ತೆರಿಗೆ ಪಾವತಿದಾರರಿಗೆ ಮತ್ತಷ್ಟು ಸಮಯಾವಕಾಶವನ್ನು ನೀಡುವ ಉದ್ದೇಶದಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ನೀಡಿದ್ದ ಗಡುವನ್ನು ಮತ್ತೆ ವಿಸ್ತರಿಸಲು ನಿರ್ಧರಿಸಲಾಗಿದೆ. ಆ ವಿವರ ಕೆಳಗಿನಂತಿದೆ:
(ಎ) ತೆರಿಗೆ ಪಾವತಿದಾರರಿಗೆ(ತಮ್ಮ ಪಾಲುದಾರರು ಸೇರಿ) ಯಾರದು ಲೆಕ್ಕಪರಿಶೋಧನೆ ಆಗಿಲ್ಲವೋ ಅಂತಹವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ನೀಡಲಾಗಿದ್ದ ಕೊನೆಯ ದಿನಾಂಕ, ಈ ಹಿಂದೆ 2020ರ ಅಕ್ಟೋಬರ್ 31ರ ವರೆಗೆ ಇದ್ದ ಗಡುವನ್ನು 2021ರ ಜನವರಿ 31ರ ವರೆಗೆ ವಿಸ್ತರಣೆ ಮಾಡಲಾಗಿದೆ.
(ಬಿ) ಯಾವ ತೆರಿಗೆ ಪಾವತಿದಾರರು, ಅಂತಾರಾಷ್ಟ್ರೀಯ ಮತ್ತು ನಿರ್ದಿಷ್ಟ ದೇಶೀಯ ವಹಿವಾಟುಗಳಿಗೆ ಸಂಬಂಧಿಸಿದಂತೆ ವರದಿಗಳು ಹಾಗೂ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬೇಕಾಗಿದೆಯೋ ಅಂತಹವರಿಗೆ 2020ರ ನವೆಂಬರ್ 30ರ ವರೆಗೆ ಇದ್ದ ಗಡುವನ್ನು 2021ರ ಜನವರಿ 31ರ ವರೆಗೆ ವಿಸ್ತರಿಸಲಾಗಿದೆ.
(ಸಿ) ಇತರೆ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಸಲ್ಲಿಕೆಗೆ ಈ ಹಿಂದೆ ನೀಡಲಾಗಿದ್ದ 2020ರ ಜುಲೈ 31ರ ಗಡುವನ್ನು 2020ರ ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ.
ಅದರಂತೆ ಕಾಯ್ದೆಯ ಅನುಸಾರ ನಾನಾ ಲೆಕ್ಕ ಪರಿಶೋಧನಾ ವರದಿಗಳು, ತೆರಿಗೆ ಲೆಕ್ಕಪರಿಶೋಧನಾ ವರದಿಗಳು ಹಾಗೂ ಅಂತಾರಾಷ್ಟ್ರೀಯ ಹಾಗೂ ನಿರ್ದಿಷ್ಟ ದೇಶಿ ವಹಿವಾಟಿಗೆ ಸಂಬಂಧಿಸಿದ ವರದಿಗಳನ್ನು ಸಲ್ಲಿಸಲು ನೀಡಿದ್ದ ಗಡುವನ್ನು 2020ರ ಡಿಸೆಂಬರ್ 31ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಸಣ್ಣ ಮತ್ತು ಮಧ್ಯಮ ವರ್ಗದ ತೆರಿಗೆ ಪಾವತಿದಾರರಿಗೆ ಸ್ವಲ್ಪಮಟ್ಟಿನ ಪರಿಹಾರವನ್ನು ನೀಡುವ ಉದ್ದೇಶದಿಂದ 2020ರ ಜೂನ್ 24ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಸುಮಾರು ಒಂದು ಲಕ್ಷದವರೆಗೆ ತೆರಿಗೆ ಪಾವತಿಸುವ ತೆರಿಗೆದಾರರು ಸ್ವಯಂ ತೆರಿಗೆ ಮೌಲ್ಯಮಾಪನ ಪದ್ಧತಿಯಡಿ ತೆರಿಗೆ ಪಾವತಿಗೆ ನೀಡಲಾಗಿದ್ದ ಅವಧಿಯನ್ನೂ ಸಹ ವಿಸ್ತರಿಸಲಾಗಿದೆ. ಅದರಂತೆ ಸ್ವಯಂ ತೆರಿಗೆ ಮೌಲ್ಯಮಾಪನ ಪಾವತಿ ಅಡಿ 2020ರ ಜುಲೈ 31ರ ವರೆಗೆ ಇದ್ದ ಅವಧಿಯನ್ನು 2020ರ ನವೆಂಬರ್ 30ರ ವರೆಗೆ ವಿಸ್ತರಣೆ ಮಾಡಲಾಗಿದೆ ಮತ್ತು ಲೆಕ್ಕ ಪರಿಶೋಧನೆ ಆಗಬೇಕಾಗಿರುವ ಪ್ರಕರಣಗಳಲ್ಲಿ ಈ ಗಡುವು 2020ರ ಅಕ್ಟೋಬರ್ 31 ರಿಂದ 2020ರ ನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ.
ಸಣ್ಣ ಮತ್ತು ಮಧ್ಯಮ ವರ್ಗದ ತೆರಿಗೆ ಪಾವತಿದಾರರಿಗೆ ಎರಡನೇ ಬಾರಿ ಸಣ್ಣ ಪ್ರಮಾಣದ ಅವಕಾಶವನ್ನು ನೀಡುವ ಸಲುವಾಗಿ ಸ್ವಯಂ ತೆರಿಗೆ ಮೌಲ್ಯಮಾಪನ ಪದ್ದತಿಯಡಿ ತೆರಿಗೆ ಪಾವತಿ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಅದರಂತೆ ಸುಮಾರು ಒಂದು ಲಕ್ಷ ರೂಪಾಯಿಗಳ ವರೆಗೆ ಸ್ವಯಂ ತೆರಿಗೆ ಮೌಲ್ಯಮಾಪನ ಪದ್ದತಿಯಡಿ ತೆರಿಗೆಯನ್ನು ಪಾವತಿಸುವವರಿಗೆ 2020ರ ಜನವರಿ 31ರ ವರೆಗೆ ಗಡುವು ವಿಸ್ತರಿಸಲಾಗಿದ್ದು, ಇದು ಪ್ಯಾರಾ 3(ಎ) ಮತ್ತು ಪ್ಯಾರಾ 3(ಬಿ) ಅಡಿಯಲ್ಲಿ ಉಲ್ಲೇಖಿಸಿರುವ ತೆರಿಗೆ ಪಾವತಿದಾರರಿಗೆ ಮತ್ತು 2020ರ ಡಿಸೆಂಬರ್ 31ರ ಗಡುವು ಪ್ಯಾರಾ 3(ಸಿ)ನಲ್ಲಿ ಉಲ್ಲೇಖಿಸಿರುವ ತೆರಿಗೆ ಪಾವತಿದಾರರಿಗೆ ಅನ್ವಯವಾಗಲಿದೆ.
ಈ ಕುರಿತಂತೆ ಅಗತ್ಯ ಅಧಿಸೂಚನೆಯನ್ನು ಮುಂದಿನ ದಿನಗಳಲ್ಲಿ ಹೊರಡಿಸಲಾಗುವುದು.
***
(Release ID: 1667371)
Visitor Counter : 314
Read this release in:
Urdu
,
English
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam